Tuesday 28 October, 2008

ಮನುಭಾಷಿತ - 6

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಹಾರ" ಜೀವಸಂಕುಲದ ಆಧಾರ. ಆಹಾರದಿಂದಲೇ ಇರುವಿಕೆ ಸಾಧ್ಯವಾಗುವುದು. ಆಹಾರ ಸ್ವೀಕಾರವಿಲ್ಲವೆಂದರೆ ಜೀವಿ ಮರಣದೆಡೆಗೆ ಮುಖಮಾಡಿದೆ ಎಂದೇ ಅರ್ಥ. ಹಾಗಾಗಿಯೇ ಭೋಜನ ದಿನದ ಪ್ರಧಾನಕಾರ್ಯ.

'ಆಹಾರ'- ಹೊಟ್ಟೆ ಎನ್ನುವ ಚೀಲವನ್ನು ತುಂಬಿಸಿ, ದೇಹಕ್ಕೆ ಶಕ್ತಿಸಾಮರ್ಥ್ಯಗಳನ್ನು ತುಂಬುವ ಸಾಧನವೆನ್ನುವುದು ಹಲವರ ಅಂಬೋಣ. ಸರಿಯೆಂದೆ ಅನ್ನಿಸುತ್ತದೆ. ಯಾಕೆಂದರೆ ಹಸಿವಿನ ಬಾಧೆ ಇಲ್ಲದಿದ್ದವ ಮಾತ್ರ ಏನನ್ನಾದರೂ ಮಾಡಬಲ್ಲ. ಆದರೆ ಆಹಾರದ ಕಾರ್ಯ ಇಷ್ಟೇ ಅಲ್ಲವೆನ್ನುವುದು ಭಾರತೀಯ ಅನುಭವ.

ಮನುಭಾಷಿತ ದೇಹದ ಅವಶ್ಯಕತೆಗಿಂತ ಹೆಚ್ಚು ಆಹಾರ ಸ್ವೀಕರಿಸುವ 'ಅತಿಭೋಜನ'ವನ್ನು ತಪ್ಪೆನ್ನುತ್ತ ಆಹಾರದ ಉದ್ದೇಶಗಳನ್ನು ಹೀಗೆ ಗುರುತಿಸುತ್ತದೆ.

ಅನಾರೋಗ್ಯಮನಾಯುಷ್ಯಮಸ್ವರ್ಗ್ಯಂ ಚಾತಿಭೋಜನಮ್ |
ಅಪುಣ್ಯಂ ಲೋಕವಿದ್ವಿಷ್ಟಂ ತಸ್ಮಾತ್ತತ್ತ್ಪರಿವರ್ಜಯೇತ್ ||

ಅತಿಭೋಜನ ನಿಷಿದ್ಡ. ಕಾರಣ? ಆರೋಗ್ಯಕ್ಕೆ ತೊಂದರೆಯುಂಟಾಗುವುದರಿಂದ ; ಆಯುಷ್ಯಕ್ಕೆ ಹಾನಿಯುಂಟಾಗುವುದರಿಂದ ; ಸ್ವರ್ಗವೇ ಮುಂತಾದ ಉತ್ತಮ ಲೋಕಗಳು ದೊರೆಯದೇ ಇರುವುದರಿಂದ ; ಪುಣ್ಯಸಂಪಾದನೆಯಾಗದೇ ಇರುವುದರಿಂದ ಮತ್ತು ಸಮಾಜದ ಜನರಿಂದ ನಿಂದೆಗೊಳಗಾಗುವುದರಿಂದ.

ಪರ್ಯಾಯವಾಗಿ ಭೋಜನದ ಉದ್ದೇಶಗಳನ್ನು ಈ ಮನುಭಾಷಿತ ಸೂಚಿಸುತ್ತದೆ.

'ಆಹಾರ' ಆರೋಗ್ಯಕಾರಕ. ಅನಾರೋಗ್ಯಕಾರಕವಾದ ಆಹಾರವೂ ಇಲ್ಲದಿಲ್ಲ. ಅದಕ್ಕೆ ನಮ್ಮ ಅನುಭವವೇ ಸಾಕ್ಷಿ. ಆಹಾರದಿಂದಾಗಿಯೇ ರೋಗಗ್ರಸ್ತವಾಗುತ್ತಿಲ್ಲವೇ ನಮ್ಮ ದೇಹ?

'ಆಹಾರ' ಆಯುಷ್ಯಕರ. ನಮ್ಮ ಎಷ್ಟೋ ಆಹಾರಗಳು ಆಯುಷ್ಯದ ದಿನಗಳನ್ನು ಕಡಿಮೆಗೊಳಿಸುತ್ತಿವೆ. ನಿಜವಾದ ಆಹಾರ ಆಯುಷ್ಯವನ್ನು ವೃದ್ಧಿಗೊಳಿಸುವಂತಹದ್ದು.

'ಆಹಾರ' ಪುಣ್ಯಲೋಕಗಳಿಗೆ ತಲುಪಿಸುವಂತಹದ್ದು. ಸ್ವರ್ಗ ಮುಂತಾದ ಪುಣ್ಯಲೋಕಗಳು ಮರಣಾನಂತರ ಪುಣ್ಯವಂತರಿಗೆ ದೊರೆಯುತ್ತವೆ. ಇಂತಹ ಲೋಕಗಳಿಗೆ ತಲುಪಿಸುವ ಕಾರ್ಯದಲ್ಲಿ ಆಹಾರದ ಸಹಕಾರವಿದೆ.

'ಆಹಾರ' ಪುಣ್ಯಕರ. ಜೀವನವನ್ನು ಸುಖಮಯಗೊಳಿಸುವ ಪುಣ್ಯಾರ್ಜನೆಯಲ್ಲಿಯೂ ಆಹಾರ ಪಾತ್ರವಿದೆ.

'ಆಹಾರ' ಲೋಕದ ಪ್ರೀತಿಗೂ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.


(ಧರ್ಮಭಾರತಿಯ ಅಂಕಣ ಬರಹ)

2 comments:

Harisha - ಹರೀಶ said...

ಮನುಸ್ಮೃತಿಯ ವಿಚಾರಗಳನ್ನು ತಿಳಿಸುವ ಉಪಯುಕ್ತ ಹಾಗೂ ಉತ್ತಮ ಕೆಲಸ ಮಾಡುತ್ತಿದ್ದೀರಿ. ಅಂದ ಹಾಗೆ ನೀವು ರಾಮಚಂದ್ರಾಪುರ ಮಠದ ಗುರುಕುಲದ ಪ್ರಧಾನಾಚಾರ್ಯರಲ್ಲವೇ?

ಜಗದೀಶಶರ್ಮಾ said...

ಹೌದು ಹರೀಶ್....
ಪ್ರತಿಕ್ರಿಯೆಗೆ ಧನ್ಯವಾದಗಳು...
ಬರ್ತಾಯಿರಿ ಬ್ಲಾಗ್ ಗೆ..