Friday 1 October, 2010

ಕೆರೆ ಕಟ್ಟುವ ಕರುಣೆಯ ಕಾಯಕ

ಧರ್ಮವೇ ಹಾಗೆ. ಅದು ಬದುಕಿಗೆ ತಂಪೆರೆಯುವ ಎಲ್ಲವನ್ನೂ ತನ್ನ ತೆಕ್ಕೆಯೊಳಗೆ ಒಳಗೊಳ್ಳುತ್ತದೆ. ಹಾಗೆನ್ನುವುದಕ್ಕಿಂತ ತಂಪೆಲ್ಲ ಅದರದ್ದೇ ಎನ್ನುವುದೇ ಸರಿ. ಅದರ ಈ ಸ್ವಭಾವವನ್ನು ಕಂಡಾಗ ಧರ್ಮವೇ ತಂಪೆನ್ನಬೇಕಾಗುತ್ತದೆ.

ತನ್ನ ಬದುಕು ಸುಖಮಯವಾಗಬೇಕೆಂದು ಬಯಸುವ ಪ್ರತಿಯೊಬ್ಬನೂ ಜೀವಲೋಕಕ್ಕೆ ಸುಖ ನೀಡಬೇಕೆಂಬುದು ಅದರ ಪ್ರತಿಪಾದನೆ. ಇನ್ನೊಬ್ಬರದನ್ನು ಕಿತ್ತುಕೊಂಡಾಗಲಷ್ಟೆ ತಾನು ಸುಖಿಯಾಗಬಹುದೆನ್ನುವ ವಿಚಾರಧಾರೆಯಿಂದ ಅದು ವಿಭಿನ್ನ. ಎಷ್ಟೆಷ್ಟು ಸಂತೋಷ-ನೆಮ್ಮದಿಗಳನ್ನು ಸೃಷ್ಟಿಗೆ ಹಂಚುತ್ತೇವೆಯೋ ಅಷ್ಟಷ್ಟು ನಮ್ಮದಾಗುತ್ತದೆ.

ಇಂತಹ ಉದಾತ್ತ ಸಿದ್ಧಾಂತದ ಹಿನ್ನೆಲೆಯಲ್ಲಿ ಸೃಷ್ಟಿಸೇವೆಯನ್ನು ಧರ್ಮಾಚರಣೆಯ ಅಂಗವಾಗಿಸಿದೆ ನಮ್ಮ ಪರಂಪರೆ. ಭೀಷ್ಮ ಯುಧಿಷ್ಠಿರನಿಗೆ ಕೆರೆಗಳ ನಿರ್ಮಾಣದ ಕುರಿತು ಹೇಳುವ ಮಾತುಗಳು ಧರ್ಮದ ಈ ವೈಶಿಷ್ಟ್ಯವನ್ನು ಸ್ಪಷ್ಟಪಡಿಸುತ್ತವೆ.

ಭೀಷ್ಮ ನುಡಿಯುತ್ತಾನೆ:
"ಕೆರೆಗಳನ್ನು ಕಟ್ಟಿಸುವವನು ಮೂರುಲೋಕಗಳ ಗೌರವಕ್ಕೆ ಪಾತ್ರನಾಗುತ್ತಾನೆ. ಕೆರೆಗಳನ್ನು ನಿರ್ಮಿಸುವುದು ವಿಶ್ವಮೈತ್ರಿಯಂತೆ. ಏಕೆಂದರೆ ಅದು ಎಲ್ಲ ಪ್ರಾಣಿಗಳಿಗೂ ಬದುಕು ನೀಡುತ್ತವೆ. ಕಟ್ಟಿಸಿದ ಕೆರೆಯಲ್ಲಿ ವರ್ಷಕಾಲದಲ್ಲಿ ನೀರು ತುಂಬಿದ್ದರೆ ಸಾವಿರ ಗೋದಾನ ಮಾಡಿದ ಪುಣ್ಯ; ಹೇಮಂತ ಋತುವಿನಲ್ಲಿ ಜಲಸಮೃದ್ಧಿಯಿದ್ದರೆ ಬಂಗಾರವನ್ನೇ ದಕ್ಷಿಣೆಯಾಗಿ ನೀಡುವ ಯಜ್ಞವನ್ನು ಮಾಡಿದ ಪ್ರಯೋಜನ; ಶಿಶಿರ ಋತುವಿನಲ್ಲಿ ಕೆರೆ ತುಂಬಿದ್ದರೆ ಅಗ್ನಿಷ್ಟೋಮ ಯಜ್ಞ ಮಾಡಿದ ಲಾಭ; ವಸಂತ ಋತುವಿನಲ್ಲಿ ಜಲಭರಿತವಾಗಿದ್ದರೆ ಅತಿರಾತ್ರ ಯಾಗ ಮಾಡಿದ ಪುಣ್ಯ; ಬಿರು ಬೇಸಿಗೆಯಲ್ಲಿ ಕೆರೆ ದಾಹವನ್ನು ತಣಿಸಿದರೆ ಅಶ್ವಮೇಧ ಯಾಗ ಮಾಡಿದ ಮಹಾಫಲ. ಕೆರೆಯ ನೀರನ್ನು ಗೋವುಗಳು, ಮೃಗಗಳು, ಪಕ್ಷಿಗಳು ಮತ್ತು ಸಜ್ಜನರು ಕುಡಿದರೆ ಕಟ್ಟಿಸಿದವನ ಸಮಗ್ರ ವಂಶವೇ ಉದ್ಧಾರವಾಗುತ್ತದೆ."

ಇವು ಭೀಷ್ಮನ ಮಾತುಗಳು. ಸಾಮಾನ್ಯರ ಸಾಮರ್ಥ್ಯವನ್ನು ಮೀರಿದ ಮಹಾಯಾಗಗಳ ಪ್ರಯೋಜನ ಕೆರೆ ಕಟ್ಟಿಸುವುದರಿಲ್ಲಿದೆ ಎನ್ನುತ್ತಾ ಭೀಷ್ಮ ಅದರ ಹಿರಿತನವನ್ನು ಆಗಸದೆತ್ತರಕ್ಕೆ ಎರಿಸುತ್ತಾನೆ. ಎಂತಹ ಅದ್ಭುತವಲ್ಲವೇ?

ನಾವು ಕಟ್ಟಿಸಿದ ಕೆರೆಯಲ್ಲಿ, ಹಾರಿಹಾರಿ ಬಾಯಾರಿದ ಪುಟ್ಟಹಕ್ಕಿ ನೀರು ಕುಡಿದು ತಂಪಾದರೆ; ತಿರುತಿರುಗಿ ಬೆಂಡಾದ ಗೋವಿನ ಕರುವೊಂದು ನೀರು ಕುಡಿದು ದಣಿವಾರಿಸಿಕೊಂಡರೆ;
ನಡೆನಡೆದು ದಣಿದ ದಾರಿಹೋಕನೊಬ್ಬನ ಬಾಯಾರಿಕೆ ಇಂಗಿದರೆ; ಬಡರೈತನೊಬ್ಬ ತನ್ನ ಗದ್ದೆಗೆ ನೀರುಣಿಸಿ ಸಮೃದ್ಧ ಬೆಳೆಬೆಳೆದು ಕಣ್ಣಲ್ಲಿ ಜಿನುಗಿದ ನೆಮ್ಮದಿಯ ನೀರನ್ನು ಒರೆಸಿಕೊಂಡರೆ;........
ಅಹಾ, ಎಂಥ ಮಧುರ ಭಾವಗಳು!