Tuesday 28 October, 2008

ಮನುಭಾಷಿತ - 6

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಹಾರ" ಜೀವಸಂಕುಲದ ಆಧಾರ. ಆಹಾರದಿಂದಲೇ ಇರುವಿಕೆ ಸಾಧ್ಯವಾಗುವುದು. ಆಹಾರ ಸ್ವೀಕಾರವಿಲ್ಲವೆಂದರೆ ಜೀವಿ ಮರಣದೆಡೆಗೆ ಮುಖಮಾಡಿದೆ ಎಂದೇ ಅರ್ಥ. ಹಾಗಾಗಿಯೇ ಭೋಜನ ದಿನದ ಪ್ರಧಾನಕಾರ್ಯ.

'ಆಹಾರ'- ಹೊಟ್ಟೆ ಎನ್ನುವ ಚೀಲವನ್ನು ತುಂಬಿಸಿ, ದೇಹಕ್ಕೆ ಶಕ್ತಿಸಾಮರ್ಥ್ಯಗಳನ್ನು ತುಂಬುವ ಸಾಧನವೆನ್ನುವುದು ಹಲವರ ಅಂಬೋಣ. ಸರಿಯೆಂದೆ ಅನ್ನಿಸುತ್ತದೆ. ಯಾಕೆಂದರೆ ಹಸಿವಿನ ಬಾಧೆ ಇಲ್ಲದಿದ್ದವ ಮಾತ್ರ ಏನನ್ನಾದರೂ ಮಾಡಬಲ್ಲ. ಆದರೆ ಆಹಾರದ ಕಾರ್ಯ ಇಷ್ಟೇ ಅಲ್ಲವೆನ್ನುವುದು ಭಾರತೀಯ ಅನುಭವ.

ಮನುಭಾಷಿತ ದೇಹದ ಅವಶ್ಯಕತೆಗಿಂತ ಹೆಚ್ಚು ಆಹಾರ ಸ್ವೀಕರಿಸುವ 'ಅತಿಭೋಜನ'ವನ್ನು ತಪ್ಪೆನ್ನುತ್ತ ಆಹಾರದ ಉದ್ದೇಶಗಳನ್ನು ಹೀಗೆ ಗುರುತಿಸುತ್ತದೆ.

ಅನಾರೋಗ್ಯಮನಾಯುಷ್ಯಮಸ್ವರ್ಗ್ಯಂ ಚಾತಿಭೋಜನಮ್ |
ಅಪುಣ್ಯಂ ಲೋಕವಿದ್ವಿಷ್ಟಂ ತಸ್ಮಾತ್ತತ್ತ್ಪರಿವರ್ಜಯೇತ್ ||

ಅತಿಭೋಜನ ನಿಷಿದ್ಡ. ಕಾರಣ? ಆರೋಗ್ಯಕ್ಕೆ ತೊಂದರೆಯುಂಟಾಗುವುದರಿಂದ ; ಆಯುಷ್ಯಕ್ಕೆ ಹಾನಿಯುಂಟಾಗುವುದರಿಂದ ; ಸ್ವರ್ಗವೇ ಮುಂತಾದ ಉತ್ತಮ ಲೋಕಗಳು ದೊರೆಯದೇ ಇರುವುದರಿಂದ ; ಪುಣ್ಯಸಂಪಾದನೆಯಾಗದೇ ಇರುವುದರಿಂದ ಮತ್ತು ಸಮಾಜದ ಜನರಿಂದ ನಿಂದೆಗೊಳಗಾಗುವುದರಿಂದ.

ಪರ್ಯಾಯವಾಗಿ ಭೋಜನದ ಉದ್ದೇಶಗಳನ್ನು ಈ ಮನುಭಾಷಿತ ಸೂಚಿಸುತ್ತದೆ.

'ಆಹಾರ' ಆರೋಗ್ಯಕಾರಕ. ಅನಾರೋಗ್ಯಕಾರಕವಾದ ಆಹಾರವೂ ಇಲ್ಲದಿಲ್ಲ. ಅದಕ್ಕೆ ನಮ್ಮ ಅನುಭವವೇ ಸಾಕ್ಷಿ. ಆಹಾರದಿಂದಾಗಿಯೇ ರೋಗಗ್ರಸ್ತವಾಗುತ್ತಿಲ್ಲವೇ ನಮ್ಮ ದೇಹ?

'ಆಹಾರ' ಆಯುಷ್ಯಕರ. ನಮ್ಮ ಎಷ್ಟೋ ಆಹಾರಗಳು ಆಯುಷ್ಯದ ದಿನಗಳನ್ನು ಕಡಿಮೆಗೊಳಿಸುತ್ತಿವೆ. ನಿಜವಾದ ಆಹಾರ ಆಯುಷ್ಯವನ್ನು ವೃದ್ಧಿಗೊಳಿಸುವಂತಹದ್ದು.

'ಆಹಾರ' ಪುಣ್ಯಲೋಕಗಳಿಗೆ ತಲುಪಿಸುವಂತಹದ್ದು. ಸ್ವರ್ಗ ಮುಂತಾದ ಪುಣ್ಯಲೋಕಗಳು ಮರಣಾನಂತರ ಪುಣ್ಯವಂತರಿಗೆ ದೊರೆಯುತ್ತವೆ. ಇಂತಹ ಲೋಕಗಳಿಗೆ ತಲುಪಿಸುವ ಕಾರ್ಯದಲ್ಲಿ ಆಹಾರದ ಸಹಕಾರವಿದೆ.

'ಆಹಾರ' ಪುಣ್ಯಕರ. ಜೀವನವನ್ನು ಸುಖಮಯಗೊಳಿಸುವ ಪುಣ್ಯಾರ್ಜನೆಯಲ್ಲಿಯೂ ಆಹಾರ ಪಾತ್ರವಿದೆ.

'ಆಹಾರ' ಲೋಕದ ಪ್ರೀತಿಗೂ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.


(ಧರ್ಮಭಾರತಿಯ ಅಂಕಣ ಬರಹ)

Friday 24 October, 2008

ವಂದನೆಗಳಿದೋ ಸ್ತ್ರೀಯೆ ಸ್ವೀಕರಿಸು

ಪ್ರಕೃತಿ....
ನೀನು ಭಗವಂತನ ಸೃಷ್ಟಿಶೀಲ ಸ್ವರೂಪ. ಭಗವಂತನ ಮೊದಲ ಕಾಮನೆಯನ್ನು ಈಡೇರಿಸಿದ ಹಿರಿಮೆ ನಿನ್ನದು. ಭಗವಂತ ತುಂಬಾ ಹಿಂದೊಮ್ಮೆ ಒಬ್ಬನೇ ಇದ್ದನಂತೆ. ತುಂಬಾ ಹಿಂದೆ ಎಂದರೆ ನೀರು ಹರಿಯುವ ಮುನ್ನ, ಭೂಮಿ ನಿಲ್ಲುವ ಮುನ್ನ, ಆಕಾಶ ಹರಡುವ ಮುನ್ನ, ಗಾಳಿ ಚಲಿಸುವ ಮುನ್ನ, ಅಗ್ನಿ ಉರಿಯುವ ಮುನ್ನ. ಒಟ್ಟಿನಲ್ಲಿ ಪ್ರಕೃತಿ ಉದಯಿಸುವ ಮುನ್ನ ಭಗವಂತ ಒಬ್ಬನೇ ಇದ್ದ. ಅವನ ಮನದಲ್ಲಿ ಆಸೆಯೊಂದು ಉದಯಿಸಿತು. "ತಾನು ಬಹುವಾಗಿ ಹುಟ್ಟಿ ಬೆಳೆಯಬೇಕು". ಈ ಇಚ್ಚೆ ಕ್ರಿಯೆಯಾಗಬೇಕಲ್ಲ. ಕ್ರಿಯೆಯಾಗಿಸಬಲ್ಲ ಶಕ್ತಿ ಬೇಕಲ್ಲ. ಶಕ್ತಿ ವ್ಯಕ್ತಿಯಾಗಬೇಕಲ್ಲ.ಅದಕ್ಕಾಗಿ ತನ್ನನ್ನೇ ಇಬ್ಬಾಗವಾಗಿಸಿಕೊಂಡ. ಆ ಇಬ್ಬಾಗದ ಇನ್ನೊಂದು ಭಾಗವೇ ನೀನು. ಅಂದರೆ ನಾರೀ. ನೀನಿಲ್ಲದಿದ್ದರೆ ಸೃಷ್ಟಿ ಬೆಳೆಯದು. ಅದರಿಂದಾಗಿಯೇ ವಿಕಾಸದ - ಅರಳುವಿಕೆಯ ಶಕ್ತಿ ನೀನು. ಭಗವಂತನ ಭಾಗವೇ ಆದ ನಿನ್ನಿಂದ ಸೃಷ್ಟಿ ಬೆಳೆಯಿತು. ಸಂತಾನ ಸಾವಿರವಾಯಿತು. ನಿನ್ನ ಈ ಮಹಿಮೆಯನ್ನೇ ಶ್ರೀಶಂಕರಭಗವತ್ಪಾದರು ಗಾನಮಾಡಿದರು-

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್ |
(ಶಿವ ಶಕ್ತಿಯೊಂದಿಗೆ ಒಡಗೂಡಿದಾಗಲೇ ಪ್ರಭವಿಸಿಯಾನು - ಪ್ರಭುವಾದಾನು.)

ತಾಯೇ....
ಮಾತೆ ನೀನು. ಮಾತೇ ಹೊರಡದು ನಿನ್ನ ತಾಯ್ತನ ಮನದಲ್ಲಿ ಹಸಿರಾದಾಗ. ನವಮಾಸ ಹೊತ್ತೆ ನೀನು, ನಿನ್ನ ಗರ್ಭಗೃಹದ ಉದಾತ್ತತೆಯಲ್ಲಿ. ಬಿಂದುವನ್ನು ಸಿಂಧುವಾಗಿಸಿದೆ. ಮತ್ತೊಂದು ಜೀವದ ವಿಕಾಸಪ್ರಕ್ರಿಯೆಯಲ್ಲಿನ ನೋವನ್ನೆಲ್ಲ ನಲಿವಾಗಿ ಅಪ್ಪಿಕೊಂಡೆ. ನವಮಾಸ ತುಂಬಿದಾಗ ಹೆತ್ತೆ. ಪ್ರಸವದ ಅಸಹನೀಯ ವೇದನೆಯನ್ನು ಅನುಭವಿಸುವ ನಿನ್ನ ಸಹನೆ ನಿನಗೆ ಮಾತ್ರ ಸಾಧ್ಯ. ಮಗುವನ್ನು ನೀನು ಬೆಳೆಸಿದೆ. ಅದರ ಪರಿಯಿದೆಯಲ್ಲ ಅದು ಜೀವಲೋಕದ ಅದ್ಭುತ. ಒಡಲ ಕುಡಿಯನ್ನು ಮಾತ್ರವಲ್ಲ, ಮಗುವೆನಿಪ ಮಗುವನ್ನೆಲ್ಲ ಮಡಿಲಲ್ಲಿ ತುಂಬಿಕೊಳ್ಳುವ ನಿನ್ನ ಯಶೋದೆಯ ಭಾವವಿದೆಯಲ್ಲ ಅದು ನಿನ್ನನ್ನು ಲೋಕಮಾತೆಯನ್ನಾಗಿಸಿದೆ. ಅಧ್ಯಾತ್ಮದೀಪವನ್ನೇ ಮಗುವಾಗಿಸಿಕೊಳ್ಳಬಲ್ಲ ದೇವಕಿಯೂ ನೀನೆ. ಮಗನಿಂದಲೇ ಅಧ್ಯಾತ್ಮವನ್ನರಿಯುವ ದೇವಹೂತಿಯೂ ನೀನೆ. ನಿನ್ನ ಈ ಹಿರಿಮೆಯನ್ನು ಶ್ರೀಶಂಕರಭಗವತ್ಪಾದರು ಗಾನ ಮಾಡಿದ ಪರಿ ಹೀಗೆ-

ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ |
(ಕೆಟ್ಟ ಮಗ ಹುಟ್ಟಿಯಾನು ; ಆದರೆ ತಾಯಿ ಕೆಟ್ಟವಳಾಗಲು.)

ಗೃಹವೇ....
ಗೃಹವೆಂದರೆ ನೀನೆ. ಯಾಕೆಂದರೆ ನೀನು ಗೃಹಿಣಿ, ನೀನಿಲ್ಲದ ಮನೆ ಅಡವಿಯೇ ಸರಿ. ನೀನಿದ್ದಾಗ ಮಾತ್ರ ಅದು ಮನೆ. ಮನೆಗೆ ಬಂದು ಮನೆಯೇ ಆಗುವ, ಮನೆಯ ಅಂಶವನ್ನೆಲ್ಲ ತುಂಬುವ, ಮನೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸುವ, ಸಮಸ್ಯೆಗಳನ್ನೆಲ್ಲ ನಿಭಾಯಿಸುವ ನೀನಲ್ಲದೆ ಇನ್ನಾವುದು ಗೃಹವೆನಿಸೀತು? ಹಿರಿಯರ ಹಿರಿತನಕ್ಕೆ ಹೀನತೆ ಬಾರದಂತೆ, ಸಮಾನರ ಮಾನಕ್ಕೆ ಮುಪ್ಪು ಬಾರದಂತೆ, ಕಿರಿಯರ ಕಿರಿತನ ಹಿರಿದಾಗುವಂತೆ, ನಂದುವ ಮನೆಯನ್ನೂ ನಂದನವನವಾಗಿಸಬಲ್ಲದು ನಿನ್ನ ಸಾಮರ್ಥ್ಯ. ಪುರುಷ ದುಡಿದು ತಂದದ್ದನ್ನು ಸಂರಕ್ಷಿಸುವ, ಸಂರಕ್ಷಿಸಿದ್ದನ್ನು ಯೋಗ್ಯವಾಗಿ ವಿನಿಯೋಗಿಸುವ ನಿನ್ನ ಕುಶಲತೆಯನ್ನು ಕಂಡೇ ಮನು ನಿಯಮ ರೂಪಿಸುತ್ತಾನೆ -

ಅರ್ಥಸ್ಯ ಸಂಗ್ರಹೇ ಚೈನಾಂ ವ್ಯಯೇ ಚೈವ ನಿಯೋಜಯೇತ್ |
(ಅರ್ಥದ ಸಂಗ್ರಹ ಮತ್ತು ವ್ಯಯಕ್ಕೆ ಸ್ತ್ರೀಯು ಸಮರ್ಥಳು)

ಪಾಕಪ್ರವೀಣೆ....
ಜೀವ, ಜಗದೊಡೆಯನ ಅಂಶ. ಪೂರ್ಣನಾದ ಪರಮಾತ್ಮನೊಂದಿಗೆ ಸೇರಿ ಹೋಗುವುದು ಜೀವದ ಲಕ್ಷ್ಯ. ಲಕ್ಷ್ಯ ತಲುಪಲು, ಕಟ್ಟಿದ ಕಟ್ಟು ಬಿಟ್ಟು ಹೋಗಬೇಕು. ಕಟ್ಟು ಕಡಿಯುವುದು, ಪರಮಾತ್ಮನ ನೆನಪು ಚಿರಂತನವಾದಾಗ. ನೆನಪು ನಿರಂತರವಾಗುವುದು ಸತ್ತ್ವಶುದ್ಧವಾದಾಗ. ಸತ್ತ್ವ ಶುದ್ಧಿಗೆ ಆಹಾರದ ಕಾಣ್ಕೆ ದೊಡ್ಡದು. ಅಂತಹ ಆಹಾರದ ಸಿದ್ಧತೆ ನಿನ್ನ ಬದ್ಧತೆ. ಆರು ರಸಗಳ ಸವಿಯನ್ನು ಉಣಬಡಿಸುತ್ತ ರಸಮಯನಾದ ಭಗವಂತನ ನೆಲೆಯಲ್ಲಿ ಜೀವಜಗತ್ತನ್ನು ನಿಲ್ಲಿಸಬಲ್ಲೆ. ಆದ್ದರಿಂದಲೇ ಅರಿತವರು ಜಗನ್ಮಾತೆಯನ್ನು ಹೀಗೆ ಪ್ರಾರ್ಥಿಸಿದರು-

ಪತ್ನೀಂ ದೇಹಿ, ತಾರಿಣೀಂ ದುರ್ಗಸಂಸಾರಸಾಗರಸ್ಯ ಕುಲೋದ್ಭವಾಮ್ |
(ದಾಟಲು ಕಷ್ಟಸಾಧ್ಯವಾದ ಸಂಸಾರಸಾಗರವನ್ನು ದಾಟಿಸುವ, ಸತ್ಕುಲಪ್ರಸೂತೆಯಾದ ಪತ್ನಿಯನ್ನು ಅನುಗ್ರಹಿಸು.)

ಪ್ರಿಯ ಪುತ್ರಿ....
ಮಗುವಿನ ತಾಯಾಗಬಲ್ಲ ನೀನು ತಾಯ್ತಂದೆಯರಿಗೆ ಒಲುಮೆಯ ಮಗಳೂ ಆಗಬಲ್ಲೆ. ಮಗಳಾಗಿ ನೀನು ಬೆಳೆಯುವ ಸಿರಿ ಅನುಪಮ. ನೀನು ಬೆಳೆಯುತ್ತಲೇ ಮನೆ -ಮನವನ್ನೆಲ್ಲ ತುಂಬುತ್ತಾ ಹೋಗುವ ಕ್ರಮ ಅನನ್ಯ. ನೀನು ಹುಟ್ಟಿದೆ, ಮನೆ ಬೆಳಕಾಯಿತು. ನೀನು ಬೆಳೆದೆ, ಬೆಳಕು ಇಮ್ಮಡಿಯಾಯಿತು. ಒಂದು ದಿನ.........ಅದೇ ಆ ದಿನ.......ಬಂದೇ ಬಂದಿತು. ನಿನ್ನನ್ನು ಇನ್ನೊಂದು ಮನೆಯನ್ನು ಬೆಳಗಲು ಕಳುಹಿಸಿ ಕೊಡುವ ದಿನ. ಕಳುಹಿಸಿಕೊಟ್ಟ ಮೇಲೂ ನೀನು ತವರಿನ ಕುರಿತು ಯೋಚಿಸುವ ಪರಿಗೆ ಜಗತ್ತೇ ತಲೆಬಾಗಬೇಕು. ಕಳುಹಿಸಲಾರದೇ ನಿನ್ನನ್ನು ಕಳುಹಿಸುವ ಅನಿವಾರ್ಯತೆಯನ್ನು ಕಾಳಿದಾಸ ಹೀಗೆನ್ನುತ್ತಾನೆ-

ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ |
(ಮಗಳಿಂದ ದೂರವಾಗುವ ದುಃಖದಿಂದ ಎಲ್ಲ ಗೃಹಸ್ಥರೂ ಪೀಡನೆಗೊಳಗಾಗುತ್ತಾರೆ.)

ಕಲಾಸಾಮ್ರಾಜ್ಞಿ....
ನಿನ್ನ ಕೊರಳ ದನಿಯ ಅನುರಣನ, ಕಾಲ್ಗೆಜ್ಜೆಯ ತನನ ತನನ ಪ್ರಕೃತಿಯನ್ನು ಚೇತೋಹಾರಿಯಾನ್ನಾಗಿಸಿದೆ. ಜೀವಕುಸುಮವನ್ನು ಪರಮಪುರುಷ ಪರಮಾತ್ಮನ ಕಂಠಸಿರಿಯ ಮೆರೆಯುವ ಮಾಲಿಕೆಯಲ್ಲಿ ಜೋಡಿಸಿದೆ. ಸಂಗೀತ - ನರ್ತನಗಳ ಮೂಲಕ ಸಹಸ್ರ ಸಂವತ್ಸರಗಳಿಂದ ನೀನು ನೀಡುತ್ತಾ ಬಂದ ಸಂಸ್ಕಾರ ಸಮಾಜವನ್ನು ಇಂದಿಗೂ ರಕ್ಷಿಸುತ್ತಿದೆ. ಕಲೆ ಭಗವಂತನ ವಿಶಿಷ್ಟ ಉಪಾಸನೆ. ಅಂತಹ ಉಪಾಸನೆಯ ಪೌರೋಹಿತ್ಯ ನಿನ್ನ ಕ್ರಿಯಾಶೀಲತೆಯಲ್ಲಿ ನಳನಳಿಸುತ್ತಿದೆ. ಕಲೆ ನಿನ್ನ ಮೂಲರೂಪಗಳಲ್ಲೊಂದಾದ ಮಾತೆ ಸರಸ್ವತಿಯ ಅಂಗವೇ ಆಗಿದೆ ಎನ್ನುವುದು ಅನುಭವದ ಮಾತು.

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ |
(ಸಂಗೀತ ಮತ್ತು ಸಾಹಿತ್ಯಗಳು ಮಾತೆ ಸರಸ್ವತಿಯ ದಿವ್ಯಪಯೋಧರಗಳು)

ಪೂಜ್ಯಳೇ....
ನಿನ್ನ ಕುರಿತಾಗಿ ಹೇಳಹೊರಡುವುದೇ ಸರಿಯಲ್ಲ. ಯಾಕೆಂದರೆ ಅದು ಹೇಳಿ ಮುಗಿಯುವುದಿಲ್ಲ. ಸಂಗಾತಿಯಾಗಿ ನೀನು ಪುರುಷನ ಯಶಸ್ಸಿಗೆ ಕಾರಣಳಾಗಿದ್ದಿ. ಸಹೋದರಿಯಾಗಿ ಸಹೋದರರ ಬದುಕಿನ ಭೂಮಿಯನ್ನು ಹಸನಾಗಿಸಿದ್ದಿ. ಕವಯಿತ್ರಿಯಾಗಿ ಬದುಕನ್ನು ರಸಮಯ ಕಾವ್ಯವಾಗಿರಿಸಿದ್ದಿ. ದೇಶವನ್ನು ಆಳಿಯೂ, ಸೈ ಎನ್ನಿಸಿಕೊಂಡಿದ್ದಿ. ಹೀಗೆ ಸೃಷ್ಟಿಗೆ ನಿನ್ನ ಉಪಸ್ಥಿತಿ ಅನಿವಾರ್ಯ. ಸೃಷ್ಟಿಯನ್ನು ಕಾಪಿಡುವ ದೇವತೆಗಳು ಈ ಎಲ್ಲ ಕಾರಣಗಳಿಗಾಗಿಯೇ ನಿನ್ನನ್ನು ಗೌರವಿಸುತ್ತಾರೆ. ನಿನ್ನ ಪೂಜೆಯಲ್ಲಿ ತಾವೂ ಪೂಜೆಗೊಳ್ಳುತ್ತಾರೆ ; ಸಂತಸಪಡುತ್ತಾರೆ. ಮನು ಅದನ್ನೇ ನುಡಿಯುತ್ತಾನೆ-

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
(ಎಲ್ಲಿ ನಾರಿ ಪೂಜೆಗೊಳ್ಳುವಳೋ, ಅಲ್ಲಿ ದೇವತೆಗಳೇ ಸಂತೋಷಪಡುವರು.)

{'ಜನನಿ' ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ}

Thursday 23 October, 2008

ಮನುಭಾಷಿತ - 5

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಸೃಷ್ಟಿಯಲ್ಲೇಕೆ ತಾರತಮ್ಯ?
ಒಬ್ಬ ಸಿರಿವಂತ ; ಮತ್ತೊಬ್ಬ ಬಡವ.
ಪ್ರತಿಭಾಶಾಲಿಯೊಬ್ಬ ; ಅಪ್ರತಿಭನೊಬ್ಬ.
ಲೇಖಕನೊಂದು ಕಡೆ ; ಅಕ್ಷರವನ್ನೇ ಗುರುತಿಸದವ ಇನ್ನೊಂದು ಕಡೆ.
ಓರ್ವನಿಗೆ ಉದ್ಯಮದ ಸೌಭಾಗ್ಯ ; ಕೂಲಿಯ ದೌರ್ಭಾಗ್ಯಕ್ಕೆ ಹೆಗಲು ಇನ್ನೋರ್ವನದು.
ಸೌಂದರ್ಯದ ಅಧಿರಾಣಿಯ ವಿಲಾಸ ಒಂದು ಕಡೆ ; ಕುರೂಪಿಯ ಬವಣೆ ಇನ್ನೊಂದು ಕಡೆ.
ಆಲದ ಮರ ; ಕೊತ್ತುಂಬರಿ ಗಿಡ.
ಆನೆ ; ಇರುವೆ.
ಹುಲಿ ; ಕುರಿ.
....................ಹೀಗೆ ಸೃಷ್ಟಿ, ಮೇಲುಕೀಳಿನ ಸಂತೆ.

ಹೀಗೇಕೆ? ಎಲ್ಲವೂ ಸಮವಾಗಿಲ್ಲ ಏಕೆ? ಕೆಲವರು ಮಾತ್ರ ಹಾಡಬಲ್ಲರೇಕೆ? ಕೆಲವರು ಮಾತ್ರ ಅಭಿನಯಿಸಬಲ್ಲರೇಕೆ? ಕೆಲವರು ಮಾತ್ರ ವಾಗ್ಮಿಗಳಾಗುವುದು ಏಕೆ? ಸಮಾನತೆಯ ಕೂಗನ್ನು ಅಂಬರಕ್ಕೆ ತಲುಪುವಂತೆ ಮಾಡಿದರೂ ಈ ಅಸಮಾನತೆ ಬದಲಾಗದು.

ಇದಕ್ಕೆ ಉತ್ತರವಿರುವುದು ಭಾರತೀಯರ ಕರ್ಮಸಿದ್ಧಾಂತದಲ್ಲಿ. ಬದುಕಿನ ಎಲ್ಲದರ ಕಾರಣ ಮನದ ಯೋಚನೆ, ಭಾವಾಭಿವ್ಯಕ್ತಿಯ ಮಾತು, ನಮ್ಮೆಲ್ಲ ಕ್ರಿಯೆಗಳು.

ಸೃಷ್ಟಿಯ ಭಿನ್ನತೆಗೆ ಕಾರಣ ಇವುಗಳೇ. ಯೋಚನೆ - ಮಾತು - ಕ್ರಿಯೆಗಳಿಂದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು. ಒಳ್ಳೆಯದರಿಂದ ಒಳಿತು, ಕೆಟ್ಟದರಿಂದ ಕೆಡುಕು. ಇದನ್ನೇ ಮನು ಹೀಗೆನ್ನುತಾನೆ :

ಶುಭಾಶುಭಫಲಂ ಕರ್ಮ ಮನೋವಾಗ್ದೇಹ ಸಂಭವಮ್ |
ಕರ್ಮಜಾ ಗತಯೋ ನೄಣಾಮುತ್ತಮಾಧಮಮಧ್ಯಮಾಃ ||

ಮನಸ್ಸು - ಮಾತು - ದೇಹಗಳಿಂದ ಮಾಡುವ ಒಳ್ಳೆಯ ಕೆಟ್ಟ ಕರ್ಮಗಳಿಂದಾಗಿ ಜೀವಿಯ ಉತ್ತಮ - ಮಧ್ಯಮ - ಅಧಮ ಜೀವನ ನಿರ್ಣಯವಾಗುತ್ತದೆ.

ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

Wednesday 22 October, 2008

ಹಾರೈಕೆ

ಮಂಗಲದ ಹೊಂಗನಸು ನನಸ ಗೇಹದೊಳಿರಲಿ
ಯಶವಿರಲಿ ಜೀವನದಿ ರಸವು ತುಂಬಿರಲಿ |
ಸತ್ಯ ಶಿವ ಸುಂದರದ ಹಂದರದ ನೆರಳಿರಲಿ
ಪೂರ್ಣತೆಯ ಗಮ್ಯದೆಡೆ ಜೀವ ಹರಿಯುತಿರಲಿ ||

ನಯನ ಮಂದಿರ ಪರಮಗುರುವ ಹೊಂದಿರಲಿ
ದಿವ್ಯ ಗಂಧದ ಮರುತ ಜೀವದುಸಿರಾಗಿರಲಿ |
ಕಿವಿದೆರೆಯಳೋಂಕಾರ ದನಿಯ ಮಧುರತೆಯಿರಲಿ
ಪರಮರಸನಲಿ ಸೇರ್ವ ರಸವೆ ರುಚಿಯಾಗಿರಲಿ ||

ಕಾಯ ಕರ್ಮೇಂದ್ರಿಯವು ಸತ್ಕರ್ಮ ರತವಿರಲಿ
ಜ್ಞಾನದೀವಿಗೆ ಹಚ್ಚೆ ಅರಿವಿನಿಂದ್ರಿಯ ಗೆಲಲಿ |
ಕಾಯ ಸಂಪದ ಶಿವನ ಅಡಿಗೆ ಅರ್ಪಿತವಿರಲಿ
ದೇಹದೇಗುಲ ದೈವ ಸುವಿಲಾಸಮಯವಿರಲಿ ||

Sunday 19 October, 2008

ಮನುಭಾಷಿತ - 4

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)



ಜೀವನದ ಹಾದಿ ದುರ್ಗಮ. ಅದು ರಾಜವೀಥಿಯಲ್ಲ. ಅದರಲ್ಲಿ ಕಡಿದಾದ ಬೆಟ್ಟವಿದೆ ; ಆಳವಾದ ಪ್ರಪಾತವಿದೆ ; ಕೊರಕಲಿದೆ ; ಕಲ್ಲಿದೆ ; ಮುಳ್ಳಿದೆ ; ಎಲ್ಲಕ್ಕಿಂತ ಹೆಚ್ಚಾಗಿ ಗುರಿ ಮತ್ತು ಗುರಿ ತಲುಪುವ ವಿಷಯದಲ್ಲಿ ಕತ್ತಲೆಯಿದೆ.

ಇಂತಹ ಪಯಣ, ಮಾರ್ಗದರ್ಶಿ ಸಾಪೇಕ್ಷ. ಮಾರ್ಗದರ್ಶಿಯೇ 'ಗುರು'.

ಗುರು 'ಭಾರತ'ರ ಬದುಕಿನ ಪರಮೋಚ್ಚ ಸ್ಥಾನ. ಗುರುವಿಗೆ ಅಧೀನವಾಗದ ಯಾವೊಂದು ಕ್ಷಣವೂ ಬದುಕಿನಲ್ಲಿಲ್ಲ.

ಬದುಕಿನೆಲ್ಲ ಬೇಕುಗಳನ್ನು ಈಡೇರಿಸುವ ಗುರುವಿಗೆ ಸಲ್ಲಿಸಬೇಕಾದ ಕೃತಜ್ಞತೆಯೇ ಪರಮಾದರ ಸಮರ್ಪಣೆ.

ಆದರಣೀಯ ಗುರುವಿನ ನಿಂದೆ ಸಜ್ಜನಿಕೆಯಲ್ಲ. ಹಾಗೆಂದು ನಿಂದಿಸುವ ದುರ್ಜನರ ಅಸ್ತಿತ್ವವೂ ಇಲ್ಲದಿಲ್ಲ.

ಗುರುನಿಂದೆ ಮಹಾಪಾಪ. ನಿಂದಿಸುವ ಮಾತು ಹಾಗಿರಲಿ, ನಿಂದನೆಯನ್ನು ಕೇಳುವುದೂ ಪಾಪಕರ್ಮವೆನ್ನುವುದು ಮನುವಿನ ಅಭಿಮತ -

ಗುರೋರ್ಯತ್ರ ಪರೀವಾದಃ ನಿಂದಾವಾಪಿ ಪ್ರವರ್ತತೆ |
ಕರ್ಣೌ ತತ್ರ ಪಿಧಾತವ್ಯಂ ಗಂತವ್ಯಂ ವಾ ತತೋನ್ಯತಃ ||

ಎಲ್ಲಿ ಗುರುವಿಗೆ ಅವಮಾನ ನಡೆಯುತ್ತದೆಯೋ, ಎಲ್ಲಿ ಗುರುವಿನ ನಿಂದೆ ನಡೆಯುತ್ತದೆಯೋ ಅಲ್ಲಿ ಕಿವಿ ಮುಚ್ಚಿ ಕುಳಿತುಕೊಳ್ಳಬೇಕು ಅಥವಾ ಅಲ್ಲಿಂದ ಹೊರನಡೆಯಬೇಕು.

ಇದು ಮನುಭಾಷಿತ. ಈ ಮಾತಿನ ಅರ್ಥವ್ಯಾಪ್ತಿ ವಿಶಾಲ. ಗುರುನಿಂದೆಯ ಶ್ರವಣ ಮಾತ್ರದ ನಿಷೇಧ ಧ್ವನಿಸುವುದು ಅದರ ಭೀಕರತೆಯನ್ನು.

ನಿಂದ್ಯವಾದ ಅಂಶಗಳೇ ಇಲ್ಲದ ಗುರುವಿನ ನಿಂದೆ ಹೇಗೆ ಸಾಧ್ಯ? ಸಾಧ್ಯ, ಯಾಕೆಂದರೆ ನಿಂದಿಸುವ ನಾಲಿಗೆ ಅಂತಹದ್ದು. ಅದಕ್ಕೆ ಸರಿ - ತಪ್ಪುಗಳ ನಿರ್ಣಯವಿಲ್ಲ. ಆ ನಾಲಿಗೆಯ ಹಿಂದಿನ ಮನಸ್ಸು ಕಾಲುಷ್ಯಪೂರ್ಣ. ಸ್ವಯಂ ಕಲುಷಿತಗೊಂಡದ್ದು ಮಂಗಲವನ್ನು ಆಚರಿಸುವುದು ಹೇಗೆ? ಇಂತಹ ಮನಸ್ಸು ಆಡಿಸುವ ನಾಲಿಗೆಯನ್ನು ಕಂಡೇ ದಾಸರು -
ಅಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ........ಎಂದು ಹಾಡಿರುವುದು.

Saturday 18 October, 2008

ಮನುಭಾಷಿತ 3

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಕಾಲಕ್ಕೆ ರಾಜನೇ ಕಾರಣ - "ರಾಜಾ ಕಾಲಸ್ಯ ಕಾರಣಮ್" ಎನ್ನುವುದು ಭಾರತದ ಅನುಭವ. ಕಾಲದ ಪರಿಣಾಮದಿಂದ ರಾಜನ ಗುಣದಲ್ಲಿ ಪರಿವರ್ತನೆಯೋ, ರಾಜನಿಂದಾಗಿಯೇ ಕಾಲದಲ್ಲಿ ಬದಲಾವಣೆಯೋ ಎನ್ನುವ ಪ್ರಾಚೀನ ಜಿಜ್ಞಾಸೆಗೆ ಭಾರತ ಕಂಡ ಅಪ್ರತಿಮ ರಾಜನೀತಿಜ್ಞ ಭೀಷ್ಮನ ಅಭಿಮತವಿದು.

ಕಾಲವೆಂದರೆ ನಡೆದದ್ದು ; ಕಾಲವೆಂದರೆ ನಡೆಯುತ್ತಲಿರುವುದು ; ಕಾಲವೆಂದರೆ ನಡೆಯಲಿರುವುದು ; ಕಾಲವೆಂದರೆ ಈ ಮೂರರ ಕಲನ - ಕೂಡುವಿಕೆ. ಕಾಲವೆಂದರೆ "ಸೃಷ್ಟಿಯ ಎಲ್ಲವೂ" ಎಂದಂತೆಯೇ.

ಸೃಷ್ಟಿಯ ಎಲ್ಲದಕ್ಕೂ ಕಾರಣನಾಗುವವನು ರಾಜನೆಂದಾದರೆ, ರಾಜ ಹೇಗಿರಬೇಕು? ಎನ್ನುವುದು ಸೃಷ್ಟಿಯ ಬಹುದೊಡ್ಡ ವಿಚಾರವೇ ಸರಿ.

ರಾಜನ ಕುರಿತು ಸುದೀರ್ಘವಾಗಿ ವಿವರಿಸುವ ಮನು ರಾಜನಲ್ಲಿ ಇರಬಾರದ್ದನ್ನು ನೆನಪಿಸುವ ಪರಿ ಆಳುವವರಿಗೆ ಆದರ್ಶದ ನುಡಿ -

ದಶ ಕಾಮಸಮುತ್ಟಾನಿ ತಥಾಷ್ಟೌ ಕ್ರೋಧಜಾನಿ ಚ |
ವ್ಯಸನಾನಿ ದುರಂತಾನಿ ಪ್ರಯತ್ನೇನ ವಿವರ್ಜಯೇತ್ ||

ಆಸೆಯಿಂದ ಹುಟ್ಟಿಕೊಳ್ಳುವುದು ಹತ್ತು ; ಸಿಟ್ಟಿನಿಂದ ಹುಟ್ಟಿಕೊಳ್ಳುವುದು ಎಂಟು ; ಈ ವ್ಯಸನಗಳು ರಾಜನ ಬದುಕಿನ ದುರಂತಗಳು, ಬಿಡಲೇಬೇಕು ಅವನ್ನು. ಮೊದಲ ಹತ್ತು :-
೧. ಮೃಗಬೇಟೆ
೨. ಜೂಜು
೩. ಆಲಸ್ಯದ ಪ್ರತಿರೂಪವಾದ ಹಗಲ ನಿದ್ರೆ
೪. ಅನ್ಯರ ಟೀಕೆ
೫. ಸ್ತ್ರೀ ಚಪಲತೆ
೬. ಮದ್ಯಪಾನ
೭. ಕೇವಲ ಕಣ್ಣಿನ ಸಂತೋಷಕ್ಕೆ ನೃತ್ಯವೀಕ್ಷಣೆ
೮. ಮೂಲ ಮರೆತ ಕಿವಿಗಿಂಪು ಮಾತ್ರವಾದ ಹಾಡುವಿಕೆಯಲ್ಲಿ ಅಭಿರುಚಿ
೯. ಉದ್ದೇಶವಿರದ ವಾದ್ಯವಾದನದಲ್ಲಿ ಆಸಕ್ತಿ
೧೦. ಬರಿದೆ ತಿರುಗಾಟ

ಕೊನೆಯ ಎಂಟು :-
೧. ಇಲ್ಲದ ದೋಷವನ್ನು ಬೇರೆಯವರಲ್ಲಿ ಆರೋಪಿಸುವುದು
೨. ಸಜ್ಜನರ ಶೋಷಣೆ
೩. ಮೋಸ
೪. ಬೇರೆಯವರ ಗುಣದಲ್ಲಿ ಅಸಹನೆ
೫. ಬೇರೆಯವರ ಗುಣವನ್ನು ದೋಷವೆನ್ನುವುದು
೬. ಹಣದ ಅವ್ಯವಹಾರ
೭. ಕಠಿಣವಾದ ಮಾತು
೮. ದೈಹಿಕ ಹಿಂಸೆ
ಇವೆಲ್ಲ ರಾಜನಲ್ಲಿ ಇರಬಾರದವು.


ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

Tuesday 14 October, 2008

ಧರ್ಮ ಯಾವುದಯ್ಯಾ...

(೧೩.೧೦.೨೦೦೮ ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ )


ಧರ್ಮ ಭಯ ಹುಟ್ಟಿಸುತ್ತಿದೆ. ಇದು ಇಂದಿನ ವಾಸ್ತವ. ಅಂದಮೇಲೆ ಅದು ಭಯೋತ್ಪಾದಕ. ಭಯೋತ್ಪಾದನೆ ನಮಗೆ ಬೇಡ. ಅದು ಸುಖೀಜೀವನಕ್ಕೆ ಮಾರಕ. ಮಾರಕವಾದದ್ದು ಅಳಿಯಲೇ ಬೇಕು. ಪೂರಕವಾದದ್ದು ಮಾತ್ರ ಉಳಿಯಬೇಕು. ಉಳಿಸುವುದು ಉಳಿಯಲಿ ; ಅಳಿಸುವುದು ಅಳಿಯಲಿ. ಇದೇ ತಾನೇ ನಮ್ಮ ನಿಲುವು.

ನೈಜವಾಗಿ ಧರ್ಮ ಅಂತಹದ್ದೇ? ಚಿಂತನಾರ್ಹ ಸಂಗತಿ.

ಅಂತಹದ್ದೇನೋ ಎಂದು ಅನಿಸುತ್ತಿದೆ. ಅನಿಸಿಕೆಯೆಲ್ಲ ವಸ್ತುಸ್ಥಿತಿಯಾಗದು. ವಸ್ತುಸ್ಥಿತಿಯೂ ಒಮ್ಮೊಮ್ಮೆ ಅನಿಸಿಕೆಯಾಗಬಹುದು, ಅಷ್ಟೆ.

'ಧರ್ಮ' ಶಬ್ದ ಸಂಸ್ಕೃತದ್ದು. ಅಲ್ಲದಕ್ಕೆ ಎರಡು ಅರ್ಥಗಳು. ಧರಿಸುವುದು ಧರ್ಮ. ಇದು ಧರ್ಮದ ಮೊದಲ ಅರ್ಥ. ಧರಿಸುವುದೆಂದರೆ? ನಾವು ಬಟ್ಟೆ ಧರಿಸಿದಂತೆ. ಬಟ್ಟೆ ನಮ್ಮ ಮೇಲಿದೆಯಾದರೂ ಅದು ನಿಂತಿರುವುದು ನಮ್ಮಿಂದಾಗಿಯೇ. ನಮ್ಮ ದೇಹವಿಲ್ಲದಿದ್ದರೆ ಬಟ್ಟೆ ಬಿದ್ದುಹೋಗುತ್ತಿತ್ತು. ಹಾಗೆಯೇ ಬದುಕನ್ನು ಧರಿಸುವುದು 'ಧರ್ಮ'. ಧರ್ಮವಿಲ್ಲದಿದ್ದರೆ? ಬದುಕು ಬಿದ್ದು ಹೋಗುತ್ತಿತ್ತು. ಧರ್ಮವಿದೆ; ಅದರಿಂದಾಗಿಯೇ ಬದುಕು ಉಳಿದಿದೆ. ಎಂಬಲ್ಲಿಗೆ ಧರ್ಮ ಬದುಕಿಸುವುದು ಎಂದಾಯಿತು.

ಪೋಷಿಸುವುದು ಧರ್ಮ. ಇದು ಇದರ ಇನ್ನೊಂದು ಅರ್ಥ. ಪೋಷಣೆಯೆಂದರೆ? ಗಿಡಕ್ಕೆ ಮಣ್ಣು ಕೊಟ್ಟಂತೆ ; ಗೊಬ್ಬರವಿಟ್ಟಂತೆ ; ನೀರುಣಿಸಿದಂತೆ. ಬದುಕಿಗಿಂತಹ ಪೋಷಣೆ ಧರ್ಮದ್ದು.

ಹಾಗಾದರೆ ಇಂದು ಮಾರಕ ; ಶೋಷಕ ಎನಿಸಿಕೊಂಡಿರುವುದೇನು? ಅದು ಧರ್ಮದ ವೇಷ ; ಧರ್ಮವಲ್ಲ. ರಾವಣನ ಸಂನ್ಯಾಸದಂತೆ. ಸೀತೆಯ ಅಪಹರಣಕ್ಕೆ ಬಂದಾಗ ರಾವಣನೂ ಸಂನ್ಯಾಸಿಯೇ. ಹೊರನೋಟಕ್ಕೆ ಹಾಗೆಯೇ ಕಾಣಿಸಿಕೊಂಡಿದ್ದನಾತ. ಒಳಗೆ? ಸಂನ್ಯಾಸವಿರಲಿಲ್ಲ. ಅಲ್ಲೊಬ್ಬ ಕಾಮುಕನಿದ್ದ ; ಕ್ರೂರಿಯಿದ್ದ. ಒಳಗಿನ ಸ್ಥಿತಿಯನ್ನು ಅರಿಯುವುದು ಹೇಗೆ? ಅದಕ್ಕೆ ಒಳನೋಟ ಬೇಕು. ಹೊರನೋಟದಿಂದ ಅದು ಸಾಧ್ಯವಾಗದು.

ಧರ್ಮ ಕೇವಲ ಹೊರಗಿನಿಂದ ಅರ್ಥವಾಗುವುದಿಲ್ಲ ಎನ್ನುವುದು ಇಂದಿನ ಮಾತು ಮಾತ್ರವಲ್ಲ, ಅದು ಹಳೆಯ ಅನುಭವವೇ. ಗೊತ್ತು ಅಂದುಕೊಂಡವರಿಗೂ ಸಿಗದಿದ್ದು ಅದು. ಇವನಿಗೇನು ಗೊತ್ತಾದೀತು? ಎನಿಸಿಕೊಂಡವನಿಗೂ ಆಳವಿತ್ತದ್ದದು.

ಬಹು ಹಿಂದಿನದೊಂದು ಕಥೆ. ಹಿಂದೆ ಎಂದರೆ ದ್ವಾಪರ ಯುಗದಷ್ಟು ಹಿಂದೆ. ಅದೊಂದು ವನ. ವನದಲ್ಲೊಂದು ಆಶ್ರಮ. ಆಶ್ರಮದ ಮುಂದೊಂದು ವೃಕ್ಷ. ವೃಕ್ಷದ ಬುಡದಲ್ಲೊಬ್ಬ ಮುನಿ. ಕೌಶಿಕನೆಂದು ಮುನಿಯ ಹೆಸರು. ಮುನಿ ವೇದವನ್ನು ನುಡಿವವ ; ಶಾಸ್ತ್ರವನ್ನು ಅರಿತವ ; ಪುರಾಣ ಅವನಿಗೆ ಕರತಲಾಮಲಕ ; ಇತಿಹಾಸದಲ್ಲವ ನಿಷ್ಣಾತ. ಈ ಮುನಿ ಧ್ಯಾನಮಗ್ನನಾಗಿದ್ದ. ಮರದ ಮೇಲೊಂದು ಪಕ್ಷಿ. ಪಕ್ಷಿ ಹಿಕ್ಕೆ ಹಾಕಿತು. ಮುನಿಗೆ ಸಿಟ್ಟು ಬಂತು. ಪಕ್ಷಿಯನ್ನು ಸುಟ್ಟು ಬಿಡಬೇಕೆಂದು ಕೊಂಡ. ಏನಾಶ್ಚರ್ಯ? ಪಕ್ಷಿ ಸುಟ್ಟು ಕರಕಲಾಗಿ ಕೆಳಗೆ ಬಿದ್ದಿತ್ತು. ಮುನಿಗೆ ತನ್ನ ಹಿಂಸಾಪ್ರವೃತ್ತಿಯ ಬಗ್ಗೆ ತಪ್ಪೆನಿಸಿದರೂ, ತನ್ನ ತಪೋಬಲದ ಬಗ್ಗೆ ಹೆಮ್ಮೆ ಎನಿಸಿತು.

ಮುನಿ ಮಧ್ಯಾಹ್ನದ ಭಿಕ್ಷೆಗಾಗಿ ಸಮೀಪದ ಗ್ರಾಮಕ್ಕೆ ಬಂದ. ಮನೆಯೊಂದರ ನುಂದೆ ನಿಂತು 'ಭಿಕ್ಷಾಂ ದೇಹಿ' ಎಂದ. ಒಳಗಿದ್ದ ಗೃಹಿಣಿ 'ಬಂದೇ' ಎಂದಳು. ಅದೇ ಹೊತ್ತಿಗೆ ಅವಳ ಪತಿ ಹಸಿದು ಊಟಕ್ಕೆ ಬಂದ. ಗಂಡನಿಗೆ ಊಟ ಬಡಿಸುವ ಕಾರ್ಯಕ್ಕೆ ತೊಡಗಿದ ಗೃಹಿಣಿ ಮುನಿಯನ್ನು ಮರೆತಳು. ಸಹಜವಾಗಿಯೇ ಮುನಿ ಕುಪಿತನಾದ. ಕೆಲ ಹೊತ್ತಿನ ಅನಂತರ ಭಿಕ್ಷೆ ನೀಡಲು ಬಂದಳು. ಮುನಿ ದುರುಗುಟ್ಟಿ ನೋಡಿದ. " ನಿನ್ನ ನೋಟಕ್ಕೆ ಸುಟ್ಟು ಹೋಗಲು ನಾನು ಪಕ್ಷಿಯಲ್ಲ " ಎಂದಳು ಗೃಹಿಣಿ. ಮುನಿ ಬೆಚ್ಚಿದ. ಏಕಾಂತದ ಘಟನೆ ಗೃಹಿಣಿಯ ಅರಿವಿಗೆ ಬಂದದ್ದು ಹೇಗೆಂದು ಚಕಿತನಾದ. 'ಅದು ಧರ್ಮದ ಮಹಿಮೆ' ಎಂದಳವಳು. ಮುನಿಯ ತಪಸ್ಸನ್ನು ಪ್ರಶಂಸಿಸುತ್ತಾ ಧರ್ಮದ ನೈಜ ಅರಿವು ಮುನಿಗಿಲ್ಲವೆಂದಳು. ಅಚ್ಚರಿಗೊಂಡ ಮುನಿ ಧರ್ಮದ ಅರಿವಿನ ಮಾರ್ಗ ಕೇಳಿದ. 'ಮಿಥಿಲೆಯಲ್ಲಿ ಧರ್ಮವ್ಯಾಧನೆನ್ನುವ ಧರ್ಮಾತ್ಮನಿದ್ದಾನೆ. ಅವನ ಬಳಿ ತೆರಳು, ಅವನು ತಿಳಿಸಬಲ್ಲ' ಎಂದಳು.

ಮುನಿ ಮಿಥಿಲೆಗೆ ಬಂದ. ಧರ್ಮವ್ಯಾಧನ ಅಂಗಡಿಯ ಮುಂದೆ ನಿಂತ. ಮುನಿಗೆ ವಿಚಿತ್ರವೆನಿಸಿತು. ಅದೊಂದು ಮಾಂಸದಂಗಡಿ. ಮಾರಾಟಗಾರನೇ ಧರ್ಮವ್ಯಾಧ. ಧರ್ಮವ್ಯಾಧ ಇವನನ್ನೇ ನಿರೀಕ್ಷಿಸುತ್ತಿದ್ದವನಂತೆ 'ಗೃಹಿಣಿ ಕಳಿಸಿದಳೇ?' ಎಂದ. ಕೌಶಿಕ ಆಶ್ಚರ್ಯ ಸಾಗರದಲ್ಲಿ ಮುಳುಗಿ ಹೋದ.

ಮುನಿ ಜಿಜ್ಞಾಸುವಾದ ; ಧರ್ಮವ್ಯಾಧ ವ್ಯಾಖ್ಯಾನಕಾರನಾದ. ಧರ್ಮ ಚಿಂತನೆ ನಡೆಯಿತು. ಪರಿಣಾಮವಾಗಿ ಧರ್ಮವರಿತ ಕೌಶಿಕ ; ಧರ್ಮದ ಮರ್ಮವರಿತ.

ಧರ್ಮದ ನಡೆ ಸೂಕ್ಷ್ಮವಾದದ್ದು. ಅದರ ಅರಿವಿಗೆ ಒಳನೋಟ ಬೇಕು. ಆ ಒಳನೋಟ ಸಿಕ್ಕಾಗ ಧರ್ಮದ ಧರಿಸುವ - ಪೋಷಿಸುವ ಗುಣ ಮನದಟ್ಟಾಗುತ್ತದೆ. ಅದಾಗದಿದ್ದಾಗ ಧರ್ಮದ ಹೆಸರಿನಲ್ಲಿ ಧರ್ಮವಲ್ಲದ್ದು ಮೆರೆದಾಡುತ್ತದೆ. ಹಾಗಾಗದಂತಿರಲು ಧರ್ಮದ ನೈಜ ಅರಿವು ಬೇಕು. ಅದಕ್ಕೆ ಪ್ರಯತ್ನಶೀಲರಾಗಬೇಕು.