Wednesday 15 December, 2010

ವಿವೇಕ-ವಿಚಾರ : ಸೋಲು

ಇದನ್ನಂತೂ ಯಾರೂ ಬಯಸರು, ಯಾರಿಗೂ ಇಷ್ಟವಾಗದು ಸೋಲು.
ಗೆಲುವಿಗಾಗಿ ತಾನೇ ನಮ್ಮ ಹಂಬಲ.
ನಮೆಲ್ಲ ಕಾಯಕವೂ ಗೆಲುವಿಗಾಗೇ ಇರುವಾಗ ಸೋಲು ಯಾರಿಗೆ ಬೇಕು..?
ವಸ್ತು ಸ್ಥಿತಿ ಎಂದರೆ ಬದುಕಿಗೆ ಸಣ್ಣ ಸೋಲುಗಳು ಬೇಕು.
ಬೇಕೆಂಬುದಷ್ಟೇ ಅಲ್ಲ ; ಅವು ಜೀವನದ ಜೊತೆ ಜೊತೆಗೆಯೇ ಸಾಗಿಬರಬೇಕು..
ಏಕೆಂದರೆ ಸೋಲಿಲ್ಲದೇ ಗೆಲುವಿಲ್ಲ.
ವಾಸ್ತವವಾಗಿ ಸಣ್ಣಸೋಲುಗಳೇ ನಮ್ಮಲ್ಲಿ ಗೆಲುವಿನ ಆಕಾಂಕ್ಷೆಯನ್ನು ಗಟ್ಟಿಗೊಳಿಸುವಂಥವುಗಳು;
ಗೆಲ್ಲಲೇ ಬೇಕೆನ್ನುವ ಛಲವನ್ನು ತುಂಬಿಸುವಂಥವುಗಳು.
ಸೋಲಿನ ನೋವು ಮನವನ್ನು ಕಾಡದಿದ್ದರೆ ಗೆಲುವಿನ ಆಸೆಯೇ ಹುಟ್ಟಲಾರದು..!
ನಾವಾಗ ಎಲ್ಲದರಲ್ಲೂ ನಿರಾಸಕ್ತರಾಗಿ ಇದ್ದುಬಿಡುತ್ತೇವೆ.
ಹಾಗಾಗಿ ಆಗಾಗ ಸೋಲುತ್ತಿರಬೇಕು.
ಆ ಸೋಲು ಸಣ್ಣದಾದರೂ ಮನಸ್ಸು ಸ್ವಲ್ಪ ಕಾಲವಾದರೂ ನರಳುವಂತಿರಬೇಕು;
ನಮ್ಮ ಸಾಮಥ್ಯ೯ವನ್ನು ತಟ್ಟಿ ಹಂಗಿಸಬೇಕು; ಆಂತರ್ಯದ ಆತ್ಮವಿಶ್ವಾಸ ಕದಲಬೇಕು; ಸಮಾನರೊಂದು
ನಿರ್ಲಕ್ಷ್ಯದ ನಗುವನ್ನು ಎಸೆಯಬೇಕು. ಆಗ ಹುಟ್ಟುವ ಗೆಲುವಿನ ಬಯಕೆ ಗಾಳಿಯಾಗುತ್ತದೆ, ಬಿರುಗಾಳಿಯಾಗುತ್ತದೆ.
ಅದು ಅಂತಿಮ ಗೆಲುವಿನ ಅತ್ಯುಪಯುಕ್ತ ಸಾಧನವಾಗುತ್ತದೆ. ಆಗ ಸಹಜವಾಗಿಯೇ ಗೆಲುವು ನಮ್ಮದಾಗುತ್ತದೆ.

('ಬ್ರಹ್ಮ' ಪತ್ರಿಕೆಯ ಅಂಕಣಬರಹ.)

Wednesday 8 December, 2010

ಒಂದನೇ ತರಗತಿಯ ಮಕ್ಕಳೊಂದಿಗೊಂದು ದಿನ...

ತರಗತಿಯನ್ನು ಪ್ರವೇಶಿಸಿದೆ.

"ಅಭಿವಾದಯೇ" ಸಮೂಹದ ಧ್ವನಿ ಮೊಳಗಿತು.

ಏನೆನ್ನಬೇಕೆಂದೇ ತಿಳಿಯಲಿಲ್ಲ.

"ನಾನೇನು ಹೇಳಬೇಕು" ಎಂದೆ.

"ಶ್ರೇಯೋಸ್ತು" ಹೇಳಿ. ಮತ್ತೆ ಮೊಳಗಿತು ಸಮೂಹದ ಧ್ವನಿ.

ಅದು ಸಂಸ್ಕೃತಪಾಠಶಾಲೆಯಲ್ಲ, ಗುರುಕುಲವೂ ಅಲ್ಲ, ಅದಿರುವುದು ಗ್ರಾಮೀಣಭಾಗದಲ್ಲೂ ಅಲ್ಲ, ಅದು ಹಿರಿಯ ತರಗತಿಯೂ ಅಲ್ಲ.

ಬೆಂಗಳೂರು ಮಹಾನಗರಿಯ ಆಧುನಿಕ ಶಿಕ್ಷಣದ ಶಾಲೆಯೊಂದರ ಒಂದನೇ ತರಗತಿಯದು. ಅಚ್ಚರಿಯಲ್ಲಿ ಮುಳುಗಿಹೋದೆ.

ಬೇರೆ ಶಾಲೆಗಳಿಗಿಂತ ಶಾಲೆ ವಿಭಿನ್ನ ಅಂತ ಗೊತ್ತಿತ್ತು, ಸಂಸ್ಕೃತಿಗೆ ಇಲ್ಲಿ ಹೆಚ್ಚು ಒತ್ತು ಅಂತಲೂ ಗೊತ್ತಿತ್ತು. ಆದರೆ ಇಷ್ಟು ನಿರೀಕ್ಷೆಯಿರಲಿಲ್ಲ.

"ಸಂಸ್ಕೃತ ಬರತ್ತಾ?" ನನ್ನ ಪ್ರಶ್ನೆ. "ಆಮ್" ಸಂಸ್ಕೃತದಲ್ಲೇ ಪ್ರತ್ಯುತ್ತರ ಬಂತು. ಆದರೂ ಸಂಸ್ಕೃತದಲ್ಲಿ ಮಾತುಕತೆ ಮುಂದುವರಿಸುವ ಧೈರ್ಯವಾಗಲಿಲ್ಲ. ಎಷ್ಟೆಂದರೂ ಪುಟ್ಟ ಮಕ್ಕಳಲ್ವ. ಕನ್ನಡದಲ್ಲೇ "ಒಬ್ಬಬ್ಬರಾಗಿ ನಿಮ್ಮ ಹೆಸರು ಹೇಳಿ" ಎಂದೆ. "ಮಮ ನಾಮ ಸುರಭಿ ಇತಿ" ಉಲಿಯಿತೊಂದು ಪುಟ್ಟ ಕೋಗಿಲೆ.

............

"ನಾವೊಂದು ಶಾಲೆ ಮಾಡಿದ್ದೇವೆ, ಸೃಷ್ಟಿಶೀಲ ಕಲಿಕೆಗೆ ಒತ್ತು, ಸಂಸ್ಕೃತಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟಿಕೊಂಡಿದ್ದೇವೆ. ನೀವೊಮ್ಮೆ ಬಂದು ನಮ್ಮ ಮಕ್ಕಳಿಗೆ ಪಾಠ ಮಾಡಬೇಕು, ನಾವು ಶಿಕ್ಷಕರೂ ಕುಳಿತಿರುತ್ತೇವೆ" ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿರೇಖಾ ಮೇಡಮ್ ಹೀಗೆಂದಿದ್ದರು. ಕೊಟ್ಟ ಮೊದಲ ಡೇಟಿಗೆ ಹೋಗಲಾಗದೆ ಎರಡನೆಯ ಅವಕಾಶ ಬಳಸಿಕೊಂಡೆ. ಶಾಲೆಯ ಹೊರನೋಟವೇ ಆಕರ್ಷಕವಾಗಿತ್ತು. ಹಸೆಚಿತ್ರಗಳು ಶಾಲೆಯ ಹೆಸರನ್ನೂ ಮೀರಿ ನಿಂತಿದ್ದವು. ಶಾಲೆಯ ಸಂಸ್ಥಾಪಕರಾದ ಉತ್ಸಾಹಿ ಕ್ರಿಯಾಶೀಲ ಯುವಕರು ಶಶಿರೇಖಾರೊಂದಿಗೆ ಸ್ವಾಗತಿಸಿದರು. ಉಭಯ ಕುಶಲೋಪರಿ ಮುಗಿದ ಮೇಲೆ ತರಗತಿಯೆಡೆಗೆ ಸಾಗಿದೆವು. ನಮ್ಮನ್ನಲ್ಲಿ ಗುಬ್ಬಚ್ಚಿ ಮರಿಗಳ ಗುಂಪು ಕಾಯುತ್ತಿತ್ತು.

..........

'ವಿಷಯಗಳನ್ನು ಹೇರದೇ, ಅದು ಪಠ್ಯವೆಂದೆನಿಸದೇ, ಆಸಕ್ತಿಯಿಂದ, ಲವಲವಿಕೆಯಿಂದ ಮಕ್ಕಳು ಕಲಿಯುವಂತೆ ಕಲಿಸಬೇಕು' ಎನ್ನುವ ಹತ್ತು ವರ್ಷದ ಪ್ರಯೋಗ-ಪರಿಶ್ರಮದ ಹಿನ್ನೆಲೆಯಲ್ಲಿ ಒಂದಷ್ಟು ಯೋಜನೆ ಮಾಡಿಕೊಂಡಿದ್ದೆ. 'ದೇವರು ಮತ್ತು ರಾಕ್ಷಸರು' ಎನ್ನುವ ವಿಷಯ ಹೇಳಬೇಕು, 'ನಾವೇ ದೇವರು' ಅನ್ನುವುದನ್ನು ಅರ್ಥ ಮಾಡಿಸಬೇಕು ಎನ್ನುವುದು ನನ್ನ ಯೋಚನೆಯಾಗಿತ್ತು. ಹೀಗೆ ಮಾಡಬೇಕೆಂದಿದ್ದೇನೆ ಎಂದು ತಮ್ಮನಂತಿರುವ ಗೆಳೆಯ ಮಧು ದೊಡ್ಡೇರಿಗೆ ಹೇಳಿದ್ದೆ. ಮಧು ನಗುತ್ತಾ "ನಾವೇ ದೇವರು ಅನ್ನೋ ಕಾನ್ಸೆಪ್ಟ್ ನಮಗೇ ಅರ್ಥ ಆಗೋದಿಲ್ಲ, ಸಣ್ಣ ಮಕ್ಕಳಿಗೆ ಹೇಗೆ ಗೊತ್ತಾಗತ್ತೆ" ಎಂದಿದ್ದ. ಅವನ ಮಾತು ಸರಿಯೆನಿಸಿದ್ದರೂ ಒಳಗಿರುವ ಶಿಕ್ಷಕ ಪ್ರಯತ್ನಕ್ಕೆ ಮುಂದಾಗಿದ್ದ.

..........

"ಮಕ್ಕಳೇ, ನಿಮಗೆ ಇವತ್ತು ಬೇರೆ ಹೆಸರಿಡೋಣ್ವಾ?" ಕೇಳಿದೆ. "ಹೋ" ಎಂದವು ಖುಷಿಯಿಂದ. ವಿಷ್ಣುವಿನ ದಶಾವತಾರಗಳನ್ನು ಅದು ಅದೆಂದು ಹೇಳದೆ ಮಕ್ಕಳಿಗೆ ಹೆಸರಿಟ್ಟು ಕಲಿಸಬೇಕೆಂದು ಯೋಜನೆ ಹಾಕಿದ್ದೆ. ಹೆಸರಿಡಲು ಪ್ರಾರಂಭಿಸುತ್ತಿದ್ದಂತೆಯೇ ಯೋಜನೆ ಮುರಿದುಬಿತ್ತು. ಹತ್ತು ಅವತಾರಗಳ ಹೆಸರನ್ನು ಮಕ್ಕಳು ಹೇಳಿ ಮುಗಿಸಿದರು. ಸಾವರಿಸಿಕೊಂಡು ತಕ್ಷಣ ಅಲ್ಲೇ ಮತ್ತೊಂದು ಯೋಜನೆ ರೂಪಿಸಿಕೊಂಡೆ. ಮಕ್ಕಳಿಗೆ ಮಾಹೇಶ್ವರ ಸೂತ್ರಗಳನ್ನು ಹೆಸರಿಟ್ಟರೆ ಹೇಗೆ? ಎನಿಸಿತು. ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ವೈಜ್ಣಾನಿಕವಾದ ಸಂಸ್ಕೃತವ್ಯಾಕರಣದ ಬೇಸ್ ಅದು. ಹದಿನಾಲ್ಕು ಸೂತ್ರಗಳ ಅಡಿಪಾಯದ ಮೇಲೆಯೇ ಮಹರ್ಷಿ ಪಾಣಿನಿ ತಮ್ಮ ಅಷ್ಟಾಧ್ಯಾಯೀ ಗ್ರಂಥ ರಚಿಸಿದ್ದು. ಸಂಸ್ಕೃತವಿದ್ಯಾರ್ಥಿಗಳು ಮೊದಲು ಕಲಿಯಲು ತಿಣುಕಾಡುವುದು ಅದನ್ನೇ. ನಾಮಕರಣ ಆರಂಭವಾಯಿತು, "ಸುರಭಿಯ ಹೆಸರು ಅಇಉಣ್, ಶ್ರೀಲಕ್ಷ್ಮಿಯ ಹೆಸರು ಋಲೃಕ್, ವಾಸುಕಿಯ ಹೆಸರು ಏಓ, ಸುಶ್ರುತನ ಹೆಸರು ಐಔಚ್, ಗೋಪಾಲನ ಹೆಸರು ಹಯವರಟ್,.... ಲಣ್, ಝಭಯ್.... ಹೀಗೆ ಸಾಗಿತು. ವ್ಯರ್ಥಪ್ರಯತ್ನವೆಂದು ಅಂದುಕೊಂಡೇ ಸಾಗುತ್ತಿದ್ದೆ. ಆದರೆ ಮಕ್ಕಳು ಅದನ್ನು ವ್ಯರ್ಥಗೊಳಿಸಲೇ ಇಲ್ಲ. ಪಾಠ ಮುಗಿಯುವವರೆಗೂ ತಮ್ಮ ಹೆಸರನ್ನು ನೆನಪಿಸುತ್ತಲೇ ಇದ್ದರು. ನಾನು ಮಧ್ಯದಲ್ಲಿ "ಗೋಪಾಲ, ನೀನು ಹೇಳು" ಎಂದರೆ ಸಾಕು, "ಅವನ ಹೆಸರು ಹಯವರಟ್" ಎನ್ನುತ್ತಿದ್ದರು.

ಒಂದಷ್ಟು ಒಳ್ಳೆಯ ಗುಣಗಳನ್ನೂ ಕೆಟ್ಟಗುಣಗಳನ್ನೂ ಮಕ್ಕಳಿಂದಲೇ ಹೇಳಿಸಿದೆ. ಪಟ್ಟಿಯನ್ನೇ ಇಟ್ಟುಕೊಂಡು ಒಳ್ಳೆಯದೆಲ್ಲ ದೇವರಗುಣ, ಕೆಟ್ಟದ್ದೆಲ್ಲ ರಾಕ್ಷಸರ ಗುಣ ಎಂದು ಮನವರಿಕೆ ಮಾಡಿದೆ. "ದೇವರು ಕಷ್ಟದಲ್ಲಿದ್ದವರಿಗೆ ಹೆಲ್ಪ್ ಮಾಡ್ತಾನೆ, ನಾವೂ ಹಾಗೇ ಮಾಡಬೇಕು" ಎನ್ನುತ್ತಾ "ಕರಿ ಮಕರಿಗೆ ಸಿಕ್ಕಿ" ಕಥೆ ಹೇಳಲಾರಂಭಿಸಿದೆ. ಮತ್ತೆ ನನಗೇ ಸೋಲು. ಸುರಭಿ ಅಲಿಯಾಸ್ ಅಇಉಣ್ ಕಥೆ ಹೇಳಿ ಮುಗಿಸಿದಳು.

'ಗಲಾಟೆ ಇಲ್ಲದ ತರಗತಿ ನಿರ್ಜೀವ' ಅನ್ನುವುದು ನನ್ನ ಅಭಿಪ್ರಾಯ. ಪೂರ್ಣಪ್ರಮತಿಯ ಅಭಿಪ್ರಾಯವೂ ಅದೇ. ಹಾಗಾಗಿ ಮಕ್ಕಳು ಅವಧಿ ಪೂರ್ಣ ಮಾತನಾಡುತ್ತಲೇ ಇದ್ದರು. ಅದರಲ್ಲಿ ನಮ್ಮ ಅಇಉಣ್ ಹೆಚ್ಚು ಮಾತನಾಡುತ್ತಿದ್ದಳು. ಸ್ವಲ್ಪ ಸುಮ್ಮನಾಗಿಸಲು "ದೇವರು ಹೆಚ್ಚು ಮಾತನಾಡುವುದಿಲ್ಲ" ಎಂದೆ. ಬಾಣದಂತೆ ಪ್ರಶ್ನೆ ತೂರಿಬಂತು "ದೇವರು ಮಾತಾಡ್ತಾನಾ?" "ಹೌದು" ಎಂದೆ. "ನಮಗೆ ಕೇಳಲ್ವಲ್ಲಾ?" ಪಾಟೀಸವಾಲು. "ಧ್ಯಾನ ಮಾಡಿದ್ರೆ ಕೇಳ್ಸತ್ತೆ" ಎಂದೆ. ನನ್ನ ಮಾತಿನ್ನೂ ಪೂರ್ಣ ಆಗುವ ಮೊದಲೇ ಎಲ್ಲಮಕ್ಕಳೂ ಕೈಯನ್ನು ಚಿನ್ಮುದ್ರೆಯಾಗಿಸಿ, ಕಣ್ಮುಚ್ಚಿ, ಮಾತು ನಿಲ್ಲಿಸಿ ಧ್ಯಾನ ಆರಂಭಿಸಿಯೇ ಬಿಟ್ಟರು. ನಾನಂತೂ ತಬ್ಬಿಬ್ಬಾಗೋದೆ. ನನ್ನೊಂದಿಗೆ ಬಂದಿದ್ದ ಸುರೇಶ, ಲೋಹಿತರಂತೂ ಕಣ್ಣರಳಿಸಿ ನೋಡುತ್ತಿದ್ದರು.

ಅಂತೂ ಅಚ್ಚರಿಯ ಸಾಗರದಲ್ಲಿ ಮುಳುಗಿಹೋಗಿ ಅವಧಿ ಮುಗಿಸಿದೆ. ಹೊರಬರುವಾಗ "ಇನ್ನ್ಯಾವಾಗ ಬರ್ತೀರಾ?" ಎನ್ನುವ ಪ್ರಶ್ನೆ ಕಿವಿಯನ್ನು ತುಂಬಿತ್ತು.

........

'ಪೂರ್ಣಪ್ರಮತಿ' ಕೆಲವು ಯುವಮನಸ್ಸುಗಳ ಸೃಷ್ಟಿ. ಇಂದಿನ ಶಿಕ್ಷಣಕ್ಷೇತ್ರದ ಲೋಪಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರ ಕನಸು ದೊಡ್ಡದಿದೆ. ಸಮಾಜ ಸಹಕರಿಸಬೇಕಷ್ಟೆ.

ಸಂಸ್ಥೆಯ ಹೆಚ್ಚಿನ ಪರಿಚಯಕ್ಕೆ..

http://purnapramati.in/