Saturday 28 November 2009

ಸಿಟ್ಯಾಕೊ ಸಿಡುಕ್ಯಾಕೊ... ನನ ಜಾಣ!

{28.11.2009ರ ವಿಜಯ ಕರ್ನಾಟಕ-ಲವಲvkಯಲ್ಲಿ ಪ್ರಕಟಿತ ಬರಹ}

ದಿನ ಕಳೆದಂತೆ 'ಒರಟುತನ' ನಮ್ಮ ಹೊಸ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕಂಡಕಂಡವರ ಮೈಮೇಲೆ ಏರಿಹೋಗುವ, ಕಾಲು ಕೆದರಿ ಜಗಳಕ್ಕೆ ನಿಲ್ಲುವ ಸ್ವಭಾವ ನಮ್ಮದಾಗಿದೆ. ಯಾರನ್ನೂ ಸಹಿಸಿಕೊಳ್ಳುವ ಮನಸ್ಥಿತಿಯಲ್ಲಿಯೇ ನಾವಿಲ್ಲ. ಪಕ್ಕದವರ ಅತಿಸಣ್ಣ ತಪ್ಪನ್ನೂ ಮರಣ ದಂಡನೆಗೆ ಅರ್ಹವಾದ ಅಪರಾಧ ಅಂತ ಭಾವಿಸತೊಡಗಿದ್ದೇವೆ.

* ಪಕ್ಕದ ವಾಹನದವ ಓವರ್ ಟೇಕ್ ಮಾಡುವ ತವಕದಲ್ಲಿದ್ದಾನೆ. ಮುಂದೆ ಹೋಗುವ ಪ್ರಯತ್ನದಲ್ಲಿ ತಾಗಿದಂತಾಗಿದೆ, ತಾಗಿಲ್ಲ. ನಾವು ಬೈಯಲಾರಂಭಿಸುತ್ತೇವೆ. ಆತ ನುಗ್ಗಬಾರದಿತ್ತು, ಸರಿ. ಆದರೆ ಅವನಿಗೆ ತುರ್ತಾಗಿ ಹೋಗಬೇಕಾಗಿತ್ತೇನೋ, ನಾವೇ ದಾರಿ ಬಿಡಬಹುದುತ್ತು ಅಂತ ಯೋಚಿಸುವುದೇ ಇಲ್ಲ. ವಾಹನಕ್ಕೆ ತಾಗಿಸಿದರಂತೂ ಮುಗಿದೇ ಹೋಯಿತು. ಇಬ್ಬರೂ ರಸ್ತೆಗಿಳಿದು ಕೂಗಾಡಲಾರಂಭಿಸುತ್ತೇವೆ.ಎರಡೂ ಕಡೆ ಟ್ರಾಫಿಕಜಾಮ್.ಕೊನೆಗಾದ ಲಾಭ? ಏನೂ ಇಲ್ಲ. ಹತ್ತು ನಿಮಷ ಕೂಗಾಡಿ, ನಮ್ಮ ನಮ್ಮ ವಾಹನ ಹತ್ತಿ ಮುಂದುವರೆಯುತ್ತೇವೆ. ಇಷ್ಟೆಲ್ಲದರ ಬದಲು "ಹೋಗಲಿ ಬಿಡು, ದೊಡ್ಡ ನಷ್ಟವೇನಾಗಿಲ್ಲ" ಎಂದು ಅವನೆಡೆಗೆ ಕಿರುನಗೆ ಹಾರಿಸಿದ್ದರೆ ಅವನೂ ಪಶ್ಚಾತ್ತಾಪ ಭಾವದಲ್ಲಿ "ಸಾರಿ ಗುರೂ" ಎಂದಿರುತ್ತಿದ್ದ. ಸೀನ್ ಕ್ರಿಯೇಟ್ ಆಗುತ್ತಿರಲಿಲ್ಲ.


* ಬಸ್ಸು ತುಂಬಿ ತುಳುಕುತ್ತಿದೆ. ನಮಗಿಂತ ಹಿಂದಿರುವವನ ಸ್ಟಾಪ್ ಬಂದಿದೆ. ಇಳಿಯುವ ಗಡಿಬಿಡಿ ಅವನಿಗೆ. ನುಗ್ಗಿ ದಾಟು ಭರದಲ್ಲಿ ನಮ್ಮ ಕಾಲು ತುಳಿದು ಬಿಟ್ಟ. ಎಲ್ಲಿತ್ತೋ ಸಿಟ್ಟು "ಕಣ್ಣು ಕಾಣ್ಸಲ್ವೇನ್ರಿ? ದನ ನುಗ್ಗಿದಾಗೆ ನುಗ್ತೀರಲ್ಲ" ಎಂದಿದ್ದೇವೆ. ಅವನಿಗೂ ಇಳಿಯುವುದು ಮರೆತುಹೋಗಿದೆ. ತಿರುಗಿ ನಿಂತು ಅಬ್ಬರಿಸಿದ್ದಾನೆ "ನಿಮ್ಮಂತವರು ಕಾರಲ್ಲಿ ಓಡಾಡ್ಬೇಕ್ರಿ, ಬಸ್ಸಿಗ್ಯಾಕೆ ಬರ್ತೀರಾ?" ಸಹ ಪ್ರಯಾಣಿಕರಿಗೆ ಪುಕ್ಕಟೆ ಮನರಂಜನೆ.ಗಲಾಟೆ ಜೋರಾಯ್ತು. ನಮ್ಮ ಸ್ಟಾಪ್ ಕೂಡ ದಾಟಿ ಹೋಯಿತು. ಇದರ ಬದಲು - ಅವನು ಬೇಕಂತಲೇ ಮಾಡಿದ್ದಲ್ಲ ಎಂದುಕೊಂಡಿದ್ದರೆ? ಯಾಕೆಂದರೆ ಅಷ್ಟು ನೋವನ್ನು ಸಹಿಸಿಕೊಳ್ಳದಷ್ಟು ದುರ್ಬಲರೇನಲ್ಲ ನಾವು.

* ನಾವು ಹಣ ಕಟ್ಟಿದ್ದೇವೆ. ಆದರೂ ಆಪರೇಟರ್ ಮಾಡಿದ ಸಣ್ಣ ತಪ್ಪಿನಿಂದಾಗಿ ನಮ್ಮ ದೂರವಾಣಿಯ ಹೊರಹೋಗುವ ಕರೆಯನ್ನು ಸ್ಥಗಿತಗೊಳಿಸಲಾಗಿದೆ. ಕೋಪ ನೆತ್ತಿಗೇರಿದೆ. ನೇರ ಆಫೀಸ್ ಗೆ ಧಾಳಿ. ಸದರಿ ಆಪರೇಟರ್ ನನ್ನು ಹುಡುಕಿ ಆಗಿದೆ."ಏನಯ್ಯಾ, ಹೊಟ್ಟೆಗೆ ಅನ್ನ ತಿಂತೀಯಾ? ಮಣ್ಣು ತಿಂತೀಯಾ?" ತನ್ನದೇ ತಪ್ಪಿದ್ದರೂ ಎಲ್ಲರೆದುರಿಗೆ ಅವಮಾನ ಸಹಿಸಲಾರ ಆತ. ಸೇರಿಗೆ ಸವ್ವಾಸೇರು ಎನ್ನುವಂತೆ ಮಾತನಾಡಿದ್ದಾನೆ.ಪರಸ್ಪರ ಅತ್ಯುತ್ತಮ ಪದಪುಂಜಗಳ ಸುರಿಮಳೆ. ಗಲಾಟೆ ತಾರಕಕ್ಕೇರಿದಾಗ ಆಫೀಸರ್ ಹೊರಬಂದಿದ್ದಾರೆ. ನಮ್ಮನ್ನು ಕ್ಯಾಬಿನ್ ಒಳಗೆ ಕೂರಿಸಿದ್ದಾರೆ.ಎರಡೇ ನಿಮಿಷದಲ್ಲಿ ಸಮಸ್ಯೆ ಪರಿಹಾರವಾಗಿದೆ.ಇಷ್ಟೇ ಕೆಲಸವನ್ನು ಅದೇ ಆಪರೇಟರ್ ಮಾಡಿಕೊಡುತ್ತಿದ್ದ. ಮುಗುಳ್ನಗುತ್ತಾ "ಸ್ವಲ್ಪ ಏನಾಗಿದೆ ನೋಡಿ" ಎಂದಿದ್ದರೆ "ಸಾರಿ ಸರ್, ತಪ್ಪಾಗಿ ಬಿಟ್ಟಿದೆ" ಎಂದು ನಗೆ ಬೀರುತ್ತಿದ್ದ.

ನಾವೇಕೆ ಸ್ವಲ್ಪ ತಾಳ್ಮೆ ಕಲಿತುಕೊಳ್ಳಬಾರದು. ಅದರಿಂದ ನಮ್ಮ ಹಣ, ಶ್ರಮ, ಮರ್ಯಾದೆ ಎಲ್ಲವೂ ಉಳಿಯತ್ತದೆ. ಅಲ್ಲದೆ ಸಿಟ್ಟು, ಕೂಗಾಟ, ಜಗಳಗಳಿಂದ ನಾವೇನೂ ಪಡೆದುಕೊಳ್ಳುವುದಿಲ್ಲ. ಆತ ಮೊದಲು ತಪ್ಪು ಮಾಡಿದ್ದ, ಈಗ ನಾವು ತಪ್ಪಿತಸ್ಥರಾದೆವು ಅಷ್ಟೆ. ಮೃದುವಾಗಿ ವರ್ತಿಸಿದ್ದರೆ ಕೆಲಸವೂ ಆಗಿರುತ್ತಿತ್ತು, ತಪ್ಪು ಮಾಡಿದ ವ್ಯಕ್ತಿ; ಸುತ್ತಲಿನವರೆಲ್ಲರ ಮನಸ್ಸನ್ನೂ ಗೆದ್ದಿರುತ್ತಿದ್ದೆವು.

ಮಹಾಭಾರತ ಸುಂದರವಾಗಿ ಇದನ್ನು ನಿರೂಪಿಸುತ್ತದೆ-

ಮೃದುನಾ ದಾರುಣಂ ಹಂತಿ ಮೃದುನಾ ಹಂತ್ಯದಾರುಣಮ್/
ನಾಸಾಧ್ಯಂ ಮೃದುನಾ ಕಿಂಚಿತ್ ತಸ್ಮಾತ್ತೀವ್ರತರಂ ಮೃದು//

ಮೃದುತ್ವ ಕಠಿಣವನ್ನೂ ಗೆಲ್ಲುತ್ತದೆ; ಮೃದುವನ್ನೂ ಗೆಲ್ಲುತ್ತದೆ.
ಮೃದುತ್ವದಿಂದ ಸಾಧ್ಯವಾಗದಿರುವುದು ಯಾವುದೂ ಇಲ್ಲ.
ಮೃದುತ್ವವೇ ಶಕ್ತಿಶಾಲಿ.

Tuesday 6 October 2009

ಹೀಗಿರಲಿ ಮನಸು....

ಧರ್ಮದ ಕುರಿತು ನೋಡಹೊರಟಂತೆಲ್ಲ ಅದು ಅದ್ಭುತ ಚಿಂತನೆಗಳ ಆಗರವೆನ್ನುವುದು ಮನದಟ್ಟಾಗುತ್ತದೆ. ಮಹಾಭಾರತದ ಧರ್ಮವ್ಯಾದ-ಕೌಶಿಕ ಸಂವಾದ ಅದಕ್ಕೊಂದು ಉತ್ತಮ ಉದಾಹರಣೆ. ಧರ್ಮಮಯವಾದ ಬದುಕೆಂದರೇನೆಂದು ತನ್ನ ಬದುಕಿನ ಮೂಲಕವೇ ವಿವರಿಸಹೊರಡುವ ಧರ್ಮವ್ಯಾಧ ಸದಾ ಸಂತೋಷವಾಗಿರುವ ತಂತ್ರವೊಂದನ್ನು ಬಿಚ್ಚಿಡುತ್ತಾನೆ.

ಮನಸ್ಸೆಂಬುದು ಜಗತ್ತಿನ ವಿಚಿತ್ರ ವಸ್ತುಗಳಲ್ಲಿ ಮೊದಲನೆಯದು. ಅಷ್ಟೇ ಅಲ್ಲ, ಅತ್ಯಂತ ಬೇಗ ತನ್ನನ್ನೇ ಬದಲಾಯಿಸಿಕೊಳ್ಳುವ ಗೋಸುಂಬೆಯನ್ನೂ ಮೀರಿಸುವ ಚಾಂಚಲ್ಯ ಹೊಂದಿದ್ದು. ಹಾಗಾಗಿ ಸದಾಕಾಲ ಮನಸ್ಸನ್ನು ಏಕರೂಪವಾಗಿರಿಸಿಕೊಳ್ಳುವುದು ಕಷ್ಟವೇ ಆಗಿದೆ.ನಮ್ಮ ಮನಸ್ಸಿನ ಶಾಂತತೆಯನ್ನು ಕದಡುವ ಕಾರ್ಯ ಬೇರೆಯವರಿಂದ ನಡೆಯುತ್ತಲೇ ಇರುತ್ತದೆ. ಕೆಲವರು ನಮ್ಮನ್ನು ಹೊಗಳುತ್ತಾರೆ; ಮನಸ್ಸು ಆಗ ಸಂತೋಷ ಪಡುತ್ತದೆ. ಕೆಲವರು ನಮ್ಮನ್ನು ತೆಗಳುತ್ತಾರೆ; ಸಂತೋಷಗೊಂಡ ಅದೇ ಮನಸ್ಸು ಆಗ ಮುದುಡುತ್ತದೆ. ನಮ್ಮದೇ ಮನಸ್ಸು ಯಾರದೋ ಮಾತಿನಿಂದ ವಿಕಸಿತವೂ ಆಯಿತು, ಸಂಕುಚಿತವೂ ಆಯಿತು.ಈ ಎರಡೂ ಸಂದರ್ಭಗಳಲ್ಲಿ ಮನಸ್ಸನ್ನು ಸಮಾಧಾನವಾಗಿ ಇರಿಸಿಕೊಂಡಾಗ ಮಾತ್ರ ಬದುಕು ಸುಂದರ. ಹೆಚ್ಚು ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಈ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆಯ ಸ್ವರೂಪವನ್ನು ಬದಲಿಸಿಕೊಂಡಾಗ ನಾವು ಸುಖವಾಗಿರಲು ಸಾಧ್ಯ. ಮನಸ್ಸಿನ ಈ ಸ್ಥಿತಿಗೆ ಧರ್ಮವ್ಯಾಧ ನೀಡುವ ಪರಹಾರ ಹೀಗಿದೆ:
ಯೇ ಚೈವ ಮಾಂ ಪ್ರಶಂಸಂತಿ ಯೇ ಚ ನಿಂದಂತಿ ಮಾನವಾಃ |
ಸರ್ವಾನ್ಸುಪರಿಣೀತೇನ ಕರ್ಮಣಾ ತೋಷಯಾಮ್ಯಹಮ್ ||
" ಯಾರು ನನ್ನನ್ನು ಹೊಗಳುತ್ತಾರೋ, ಯಾರು ನನ್ನನ್ನು ತೆಗಳುತ್ತಾರೋ ಅವರೀರ್ವರನ್ನೂ ನಾನು ಸಮಾನವಾಗಿಯೇ ಕಾಣುತ್ತೇನೆ. ಉತ್ತಮ ಕಾರ್ಯದಿಂದ ಆ ಇಬ್ಬರನ್ನೂ ನಾನು ಸಂತೋಷಪಡಿಸುತ್ತೇನೆ".

ಬೈದಾಗ, ಭಂಗಿಸಿದಾಗ, ದ್ರೋಹವೆಸಗಿದಾಗ, ಅವಮಾನಿಸಿದಾಗ, ನಿರ್ಲಕ್ಷಿಸಿದಾಗ ಹೀಗೊಂದು ಮನಸ್ಸ್ಥಿತಿಯನ್ನು ಇಟ್ಟುಕೊಳ್ಳುವುದು ನಮಗೆ ಸಾಧ್ಯವಾದರೆ ನಾವು ಜಗತ್ತನ್ನೇ ಗೆದ್ದಂತೆ. ಹಾಗಾಗಲು ಮನಸ್ಸಿಗೊಂದು ಶಿಕ್ಷಣವನ್ನು ಕೊಟ್ಟುಕೊಳ್ಳಬೇಕು. ಅದು ಹೇಗೆ?
ನಿಂದೆಯ ಪ್ರತಿಕ್ರಿಯೆಯನ್ನು ಎರಡು ತರಹದಲ್ಲಿ ಇಟ್ಟುಕೊಳ್ಳಬೇಕು.

ಮೊದಲನೆಯದು - ನಿಂದೆಯ ಅಂಶಗಳು ನಮಗೆ ಹೊಂದಿಕೊಳ್ಳುತ್ತಿವೆಯೇ ಎನ್ನುವ ಪರಿಶೀಲನೆ. ಹೊಂದಿಕೊಳ್ಳುತ್ತಿದೆಯಾದರೆ ಅದು ನಿಂದೆಯೇ ಅಲ್ಲ.ಅದು ಜೀವನ ಮಾರ್ಗದರ್ಶನ.

ಎರಡನೆಯದು - ನಿಂದೆ ಹೊಂದಿಕೊಳ್ಳದಿದ್ದರೆ ಅದು ನಿಂದಿಸಿದವರ ತಪ್ಪು ಗ್ರಹಿಕೆ. ಆರಡಿಯ ವ್ಯಕ್ತಿಯನ್ನು ಮೂರಡಿ ಎಂದೊಬ್ಬ ಭಾವಿಸಿದರೆ ಅವನಿಗಿನ್ನೂ ಅಡಿಯ ಅಳತೆ ಸಿಕ್ಕಿಲ್ಲವೆಂದಷ್ಟೇ ಅರ್ಥ. ಸಾಧ್ಯವಾದರೆ ಅವನಿಗೆ ಅಡಿಯ ಲೆಕ್ಕ ಕಲಿಸೋಣ. ಸಾಧ್ಯವಾಗದಿದ್ದರೆ 'ಅಯ್ಯೋ ಪಾಪ' ಎಂದುಕೊಳ್ಳೋಣ.

ಈ ಎರಡು ಮಾರ್ಗಗಳನ್ನು ಅನುಸರಿಸಿದಾಗ ಮನಸ್ಸು ಕುಗ್ಗಲಾರದು. ಸದಾ ಹಿಗ್ಗಿದ ಆ ಮನಸ್ಸು ಜಗತ್ತಿನೆಲ್ಲ ಸಂತೋಷವನ್ನೂ ತನ್ನಲ್ಲಿ ತುಂಬಿಕೊಳ್ಳಬಲ್ಲದು. ಅಷ್ಟೇ ಏಕೆ? ಎಲ್ಲ ಸಂತೋಷದ ಮೂಲನಿಧಿಯಾದ ಆ ಆನಂದೋಬ್ರಹ್ಮವನ್ನೇ ತನ್ನೊಳಗೆ ತುಂಬಿಕೊಳ್ಳಬಹುದು ಅಥವಾ ಅದರಲ್ಲೇ ತಾನು ತುಂಬಿಹೋಗಬಹುದು.

{ ಬ್ರಹ್ಮ ಪತ್ರಿಕೆಯ ಅಂಕಣ ಬರಹ }

Friday 25 September 2009

ರಾಜ್ಯವೇ ಬೇಡವೆಂದವಗೆ "ಸಾಸಿವೆ ಕಳ್ಳ" ಎಂದಂತೆ

(ಅಕ್ಟೋಬರ್ ೨೦೦೯ರ ಧರ್ಮಭಾರತೀ ಸಂಪಾದಕೀಯ)

ಗಣೇಶ ಚತುರ್ಥಿ ಮೊನ್ನೆಯಷ್ಟೆ ಮುಗಿದಿದೆ. ಅಂದು ಆಗಸದಲ್ಲಿ ಎಂದಿನಂತೆ ಮಿನುಗುವ ಚಂದ್ರನನ್ನು ನೋಡಬಾರದಂತೆ. ಅಕಸ್ಮಾತ್ ನೋಡಿಬಿಟ್ಟರೆ? 'ಮಿಥ್ಯಾಪವಾದ' ಬರುತ್ತದಂತೆ. ಹಾಗೆಂದರೆ? ಮಾಡದ್ದನ್ನು ಮಾಡಿದ್ದಾನೆ ಎಂದು ಜಗವೆಲ್ಲ ತಿಳಿದುಕೊಳ್ಳುತ್ತದೆ. ಅದರ ಪರಿಹಾರಕ್ಕೆ ಶಮಂತಕೋಪಾಖ್ಯಾನವನ್ನು ಓದಬೇಕಂತೆ ಅಥವಾ ಕೇಳಬೇಕಂತೆ.

ಏನದು ಆ ಉಪಾಖ್ಯಾನ? ಅದೊಂದು ಕಥೆ. ಓರ್ವ ಚಾರಿತ್ರ್ಯವಂತನ ತೇಜೋವಧೆಯ ಪ್ರಯತ್ನದ ವ್ಯಥೆ. ಶ್ರೀಕೃಷ್ಣನ ಜೀವನದ ಘಟನೆಯೊಂದದು. ಯಾದವರ ಉತ್ಕರ್ಷಕ್ಕೆ ಶ್ರೀಕೃಷ್ಣನ ಕೊಡುಗೆ ದೊಡ್ಡದು ಅಥವಾ ಅದಕ್ಕೆ ಅವನೇ ಕಾರಣ. ಆದರೂ ಅವರು ಅವನನ್ನು ಅನುಮಾನಿಸುತ್ತಾರೆ. ಅನುಮಾನದಿಂದಲೇ ಅವಮಾನಿಸುತ್ತಾರೆ ಕೂಡ.

ಘಟನೆ ಪ್ರಾರಂಭವಾಗುವುದು ಸತ್ರಾಜಿತನ ಸೂರ್ಯಭಕ್ತಿಯಿಂದ. ಅದರ ಪರಿಣಾಮವಾಗಿ ಅವನಿಗೊಂದು ದಿವ್ಯಮಣಿ ದೊರೆಯುತ್ತದೆ. ಪ್ರತಿನಿತ್ಯ ಸಂಪತ್ತನ್ನು ಸ್ರವಿಸುವ ಬೆರಗಿನ ಮಣಿಯದು. ಸತ್ರಾಜಿತ ಅದನ್ನು ಧರಿಸಿ ದ್ವಾರಕೆಯೆಡೆಗೆ ಬರುತ್ತಾನೆ, ತನ್ನ ದೇವರ ಮನೆಯಲ್ಲಿ ಸ್ಥಾಪಿಸುತ್ತಾನೆ. ಆ ಮಣಿ ದಿನವೊಂದಕ್ಕೆ ೧೦೮ ಮಣ ಬಂಗಾರವನ್ನು ನೀಡುತ್ತಿತ್ತು. ಅಲ್ಲದೇ ಅದಿದ್ದಲ್ಲಿ ಬರ - ರೋಗಗಳೇ ಇದ್ದಿರಲಿಲ್ಲ. ಸಾವಿರಾರು ಜನರಿಗೆ ಉಪಯುಕ್ತವಾಗುವ ವಸ್ತು ರಾಜನ ಬಳಿ ಇರಬೇಕು ಎಂದೋ ಅಥವಾ ಮುಂದಾಗುವ ತೊಡಕುಗಳ ಅರಿವಿನಿಂದಲೋ ಕೃಷ್ಣ ಅದನ್ನು ದೊರೆ ಉಗ್ರಸೇನನಿಗಾಗಿ ಕೇಳುತ್ತಾನೆ. ಸತ್ರಾಜಿತ ಅರ್ಥಲೋಭಿಯಾಗಿ ನಿರಾಕರಿಸುತ್ತಾನೆ. ಇದೇ ಮಣಿಯ ಪ್ರಕರಣದಿಂದಾಗಿ ಮುಂದೆ ಸತ್ರಾಜಿತನ ತಮ್ಮ ಪ್ರಸೇನನೂ ಮತ್ತು ಸ್ವಯಂ ಸತ್ರಾಜಿತನೂ ಸಾಯುತ್ತಾರೆ. ಆದರೆ ಮುಂದಾಗುವುದು ಇಂದು ಹೇಗೆ ಅವನಿಗೆ ಅರಿವಾಗಬೇಕು? ಆಪತ್ತು ಆರಂಭವಾಗಿಯೇ ಬಿಡುತ್ತದೆ.

ಸತ್ರಾಜಿತನ ತಮ್ಮ ಪ್ರಸೇನ. ಅವನೊಂದು ದಿನ ಬೇಟೆಗೆ ತೆರಳುತ್ತಾನೆ. ಹೋಗುವಾಗ ಮಣಿಯನ್ನು ಧರಿಸಿರುತ್ತಾನೆ. ಕಾಡಿನಲ್ಲೊಂದು ಸಿಂಹ ಅವನನ್ನು ಕೊಲ್ಲುತ್ತದೆ, ಮಣಿಯನ್ನು ಕೊಂಡೊಯ್ಯುತ್ತದೆ. ರಾಮಾಯಣದ ಜಾಂಬವ ಆ ಸಿಂಹವನ್ನು ಕೊಲ್ಲುತ್ತಾನೆ. ಮಣಿಯನ್ನು ಗುಹೆಯಲ್ಲಿದ್ದ ಮಗುವಿಗೆ ಆಟಕ್ಕೆ ನೀಡುತ್ತಾನೆ. ಭೇಟೆಗೆ ಹೋದ ಪ್ರಸೇನ ಹಿಂದಿರುಗುವುದಿಲ್ಲ. ಸತ್ರಾಜಿತ ಏನಾಗಿರಬೇಕೆಂದು ಚಿಂತಿಸಿದವ ಕೂಡಲೇ ನಿರ್ಣಯಕ್ಕೆ ಬರುತ್ತಾನೆ " ಇದು ಕೃಷ್ಣನದೇ ಕೆಲಸ. ಯಾಕೆಂದರೆ ಹಿಂದೆ ಕೃಷ್ಣ ಮಣಿಯನ್ನು ಕೇಳಿದ್ದನಲ್ಲ. ಕೊಡದ ಸಿಟ್ಟಿಗೆ ಅವನನ್ನು ಕೊಂದ" ಎಂದು.

ಆಗ ಇಂದಿಗೂ ಅಂದಿಗೂ ಜನರ ಸಹಜವೋ ಎಂಬಂತಿರುವ ಸ್ವಭಾವವೊಂದು ಅನಾವರಣಗೊಂಡುಬಿಡುತ್ತದೆ. ಸತ್ರಾಜಿತ ನುಡಿದದ್ದನ್ನು ಜನರು ಒಪ್ಪಿಯೇ ಬಿಡುತ್ತಾರೆ ; ಪರಿಶೀಲನೆಯೇ ಇಲ್ಲದೆ. ಎಲ್ಲರೂ ಕಿವಿಯಿಂದ ಕಿವಿಗೆ ಪ್ರಸಾರ ಮಾಡಿದರಂತೆ. ಇದು ವಿಚಿತ್ರ ; ಆದರೂ ಸತ್ಯ. ಈ ಆರೋಪ ಬರುವವರೆಗೆ ಕೃಷ್ಣ ದ್ವಾರಕೆಯ ಜನಕ್ಕೆ ಆರಾಧ್ಯದೈವ. ಅವರ ರಕ್ಷಕ, ಪೋಷಕ ಎಲ್ಲವೂ. ಯಾದವರನ್ನು ಮೇಲೆತ್ತಿದವನೇ ಕೃಷ್ಣ. ಕೃಷ್ಣ ಬರುವವರೆಗೆ ಯಾದವರು ನಗಣ್ಯರು.ಅವರನ್ನು ಉಳಿಸಿ, ಬೆಳೆಸಿ ಗಣ್ಯರನ್ನಾಗಿಸಿದವ ಕೃಷ್ಣ. ಇಂತಹ ಕೃಷ್ಣನನ್ನೇ 'ಕೊಲೆಗಡುಕ, ಕಳ್ಳ' ಎಂದು ಬಿಡುತ್ತಾರೆ.

ಮುಂದಿನದೋ ಕೃಷ್ಣನ ಪರಿಪಾಟಲು. ತನಗಂಟಿದ ಅಪಖ್ಯಾತಿಯನ್ನು ತೊಳೆದುಕೊಳ್ಳಲು ಅವನೇ ಹೊರಡುತ್ತಾನೆ. ನಿರಪರಾಧಿಯನ್ನು 'ಅಪರಾಧಿ' ಎಂದರೆ ಅವನೇ 'ನಾನು ನಿರಪರಾಧಿ' ಎಂದು ನಿರೂಪಿಸಲು ಮುಂದಾಗಬೇಕು ತಾನೆ? ಆತ್ಮೀಯರೊಂದಿಗೆ ಪ್ರಸೇನನನ್ನು ಹುಡುಕುತ್ತಾ ಕೃಷ್ಣ ಕಾಡು ಸೇರುತ್ತಾನೆ. ಅಲ್ಲಿ ಜಾಂಬವಂತನೊಂದಿಗೆ ಯುದ್ಧವಾಗಿ ಮಣಿಯೂ, ಜಾಂಬವತಿಯೆನ್ನುವ ಕನ್ಯಾಮಣಿಯೂ ಅವನದಾಗುತ್ತಾರೆ. ಸತ್ಯವರಿತು ಪಶ್ಚಾತ್ತಾಪಗೊಂಡ ಸತ್ರಾಜಿತ ಮಣಿಯನ್ನೂ, ಸತ್ಯಭಾಮೆಯೆನ್ನುವ ಕನ್ಯಾಮಣಿಯನ್ನೂ ಅವನಿಗೆ ನೀಡುತ್ತಾನೆ. ಮುಂದೆ ಅಕ್ರೂರ - ಕೃತವರ್ಮರ ಪ್ರಲೋಭನೆಯಿಂದ ಶತಧನ್ವ ಸತ್ರಾಜಿತನನ್ನು ಕೊಂದು ಮಣಿಯನ್ನು ಅಪಹರಿಸುತ್ತಾನೆ. ಅವನ ಸಂಹಾರ, ಅಕ್ರೂರನಲ್ಲಿ ನ್ಯಾಸವಾಗಿದ್ದ ಮಣಿಯ ದರ್ಶನ, ಎಲ್ಲರಿಗೂ ನಂಬಿಕೆ ಉಂಟಾಗುವುದು ಹೀಗೆ ಕತೆ ಮುಗಿಯುತ್ತದೆ.

ಹೀಗೆ ಕತೆಯನ್ನು ವಿಸ್ತಾರವಾಗಿ ನಿರೂಪಿಸುವ ವ್ಯಾಸರು " ಆ ಆಖ್ಯಾನವನ್ನು ಓದುವವನ, ಕೇಳುವವನ, ನೆನಪಿಸಿಕೊಳ್ಳುವವನ ಮಿಥ್ಯಾರೋಪವುಇಲ್ಲವಾಗುತ್ತದೆ" ಎಂದು ನುಡಿಯುತ್ತಾರೆ. ಆದರೆ ಸುಳ್ಳು ಆರೋಪಗಳನ್ನು ಸೃಷ್ಟಿಸಿದ, ಪಸರಿಸಿದ, ದ್ವಾರಕೆಯ ಜನ ತಮ್ಮ ಪಾಪವನ್ನು ಹೇಗೆ ಪರಿಹರಿಸಿಕೊಂಡರೆನ್ನುವ ವಿಚಾರವನ್ನಾಗಲೀ, ಬೇರೆ ಯಾರಾದರೂ ಇಂತಹ ತಪ್ಪು ಮಾಡಿದರೆ ಅವರು ಹೇಗ ಶುದ್ಧರಾಗಬೇಕೆನ್ನುವ ವಿಷಯವನ್ನಾಗಲೀ ಈ ಪ್ರಕರಣದಲ್ಲಿ ವ್ಯಾಸರು ನಿರೂಪಿಸುವುದೇ ಇಲ್ಲ.

Sunday 1 March 2009

ರಾಮ ದೊಡ್ಡವನೇಕೆ?

* ರಾಮನೆನ್ನುವವನೊಬ್ಬನಿದ್ದ ;
ರಾಮ ಒಬ್ಬನೇ ಏನು? ಸೃಷ್ಟಿಯ ಇತಿಹಾಸದಲ್ಲಿ ಅಸಂಖ್ಯ ಜನರಿದ್ದರು.

* ಅವನು ರಾಜನಾಗಿದ್ದ ;
ರಾಜರ ಗಣನೆಯೂ ಅಗಣಿತ.

* ಅವನು ಚಕ್ರವರ್ತಿಯಾಗಿದ್ದ :
ಚಕ್ರವರ್ತಿಗಳೂ ಅಸಂಖ್ಯರಿದ್ದರು.

* ಜನಕನ ಮಗಳು ಸೀತೆಯನ್ನವನು ವಿವಾಹವಾದ ;
ಎಲ್ಲ ರಾಜಕುಮಾರರೂ ರಾಜಕುಮಾರಿಯರನ್ನೇ ವಿವಾಹವಾಗುತ್ತಿದ್ದರು.

* ಅವನು ರಾಕ್ಷಸರನ್ನು ಕೊಂದ ;
ರಾಕ್ಷಸರನ್ನು ಹಲವರು ಕೊಂದಿದ್ದಾರೆ.

* ಅವನಿಗೆ ಅಪರಿಮಿತ ಸಾಮರ್ಥ್ಯವಿತ್ತು ;
ಅವನೊಬ್ಬನಿಗೆ ಏನೂ ಅಲ್ಲ.

* ಅವನು ಯಜ್ಞಗಳನ್ನು ರಕ್ಷಿಸಿದ ;
ಆ ಕಾರ್ಯ ಮಾಡಿದವರೂ ಬಹುಜನರಿದ್ದಾರೆ.

* ಮಿತ್ರರಾದ ಸುಗ್ರೀವ - ವಿಭೀಷಣರಿಗೆ ಸಹಾಯ ಮಾಡಿದ ;
ಮಿತ್ರರಿಗೆ ಸಹಕರಿಸುವವರು ಈಗಲೂ ಇದ್ದಾರೆ.

* ತನ್ನ ಪತ್ನಿಯನ್ನವನು ಅಪವಾದ ಬಂದಾಗ ಬಿಟ್ಟುಬಿಟ್ಟ ;
ಅಪವಾದ ಬಂದ ಪತ್ನಿಯನ್ನು ಎಲ್ಲರೂ ಬಿಡುತ್ತಾರೆ.

* ಅವನಿಗೆ ಸಹೋದರರ ಮೇಲೆ ತುಂಬಾ ಪ್ರೀತಿಯಿತ್ತು ;
ಅದು ದುರ್ಯೋಧನನಿಗೂ ಇತ್ತು.

* ಅವನು ದಿವಿಯಿಂದ ಇಳಿದು ಬಂದ ;
ಭಾರತೀಯ ದರ್ಶನದಂತೆ ಎಲ್ಲರೂ ಅಲ್ಲಿಂದ ಬಂದವರೇ.

ಹಾಗಿದ್ದರೇನು ರಾಮನ ವೈಶಿಷ್ಟ್ಯ? ಅವನಿಗೇಕೆ ಅತ್ಯುನ್ನತಸ್ಥಾನ?

ಚಕ್ರವರ್ತಿಪುತ್ರನಾಗಿಯೂ ರಾಮ ಅದನ್ನು ಸ್ವಲ್ಪವೂ ಬೇಸರವಿಲ್ಲದೆ ತಮ್ಮ ಭರತನಿಗೆ ಬಿಟ್ಟುಕೊಡುತ್ತಾನೆ. ಚಕ್ರವರ್ತಿಸ್ಥಾನವೆಂದರೆ ಸಾಮಾನ್ಯದ್ದಲ್ಲ. ಅಂದಿನ ಸಮಸ್ತ ವಿಶ್ವದ ಆಳ್ವಿಕೆ ಚಕ್ರವರ್ತಿಯದ್ದು. ಪ್ರಪಂಚವನ್ನೇ ಆಳುವ ವ್ಯಕ್ತಿಯ ವೈಭವ ಎಷ್ಟಿರಬೇಕು? ಅದನ್ನವನು ತಂದೆಯ ಮಾತನ್ನು ಉಳಿಸಲಿಕ್ಕಾಗಿ ಬಿಟ್ಟ. ಬಿಡುವಾಗಲೂ, ಬಿಟ್ಟಮೇಲೂ ಸಹೋದರ ಪ್ರೇಮವನ್ನು ರಾಮ ತೋರಿದ ಪರಿ ಅನನ್ಯ. ವನವಾಸ ಮುಗಿಸಿದ ಮೇಲೂ ಭರತ ಬಯಸಿದ್ದರೆ ರಾಜ್ಯವನ್ನು ಬಿಟ್ಟುಕೊಡಲು ಸಿದ್ಧನಿದ್ದ ಶ್ರೀರಾಮ. ಇದು ಅವನ ಹಿರಿಮೆ.

ಸೀತೆಯ ಕುರಿತಾಗಿ ಜನತೆ ಅಪವಾದದ ಮಾತುಗಳನ್ನು ಆಡತೊಡಗಿದಾಗ ಅವಳನ್ನು ಶ್ರೀರಾಮ ಪರಿತ್ಯಾಗ ಮಾಡುತ್ತಾನೆ. ಬೇರೆ ಗಂಡಂದಿರಂತೆ ಹೆಂಡತಿಯ ಮೇಲೆ ಅನುಮಾನ ಮೂಡಿ ಅವಳನ್ನು ಬಿಡುವುದಿಲ್ಲ. ಸೀತೆಯ ಪಾವಿತ್ರ್ಯದ ಮೇಲೆ ಅವನಿಗೆ ಪೂರ್ಣ ವಿಶ್ವಾಸವಿದೆ. ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದದ್ದು ರಾಜನ ಕರ್ತವ್ಯ ಎನ್ನುವುದನ್ನು ಸಾರ್ವಕಾಲಿಕವಾಗಿ ಜಗತ್ತಿಗೆ ತಿಳಿಸಲು ಅತ್ಯಂತ ಪ್ರೀತಿಪಾತ್ರಳಾದ ತನ್ನ ಪತ್ನಿಯನ್ನು ಶ್ರೀರಾಮ ಬಿಡುತ್ತಾನೆ. ಇದು ಅವನ ಗರಿಮೆ.

ಸುಗ್ರೀವ - ವಿಭೀಷಣರಿಗೆ ಪಟ್ಟ ಕಟ್ಟಿದ್ದು ಮಿತ್ರರಿಗೆ ಸಹಾಯ ಮಾಡಬೇಕು ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ. ಜಗತ್ತಿನ ಯಾವ ಜೀವಿಗೆ ಅನ್ಯಾಯವಾದರೂ ಶ್ರೀರಾಮ ರಕ್ಷಣೆಗೆ ಮುಂದಾಗುತ್ತಿದ್ದ, ನ್ಯಾಯ ಒದಗಿಸಿ ಕೊಡುತ್ತಿದ್ದ. ಯಜ್ಞರಕ್ಷಣೆ ಮತ್ತು ರಾಕ್ಷಸ ಸಂಹಾರಗಳು ಅವನ ಸಾಮರ್ಥ್ಯವನ್ನು ಮಾತ್ರ ತೋರಿಸುತ್ತಿಲ್ಲ. ಅಲ್ಲಿಯೂ ಅವನ ನ್ಯಾಯಪರತೆ ಅನನ್ಯವಾಗಿ ಕಾರ್ಯಮಾಡಿದೆ. ಇದು ಅವನ ಮಹಿಮೆ.

ಎಲ್ಲ ಜೀವಿಗಳು ಬ್ರಹ್ಮದಿಂದಲೇ ಬಂದವರಾದರೂ ಒಂದು ವ್ಯತ್ಯಾಸವಿದೆ. ನಾವೆಲ್ಲ ಮೇಲಿನಿಂದ ಬಿದ್ದವರು. ಬಿದ್ದ ನಮ್ಮನ್ನು ಮೇಲೆತ್ತಲು ಶ್ರೀರಾಮ ಇಳಿದವನು ; ಅವತರಿಸಿದವನು.

ಇಂತಹ ರಾಮನ ಉಪಾಸನೆಗೆ ಸಮಯ ಬಂದಿದೆ.
ಅಣಿಯಾಗೋಣ.

(ಏಪ್ರಿಲ್ ೨೦೦೮ನೇ ಧರ್ಮಭಾರತೀ ಸಂಪಾದಕೀಯ)

Friday 6 February 2009

ವಿಷದೂಟಕಿಂತುಪೋಷಿತವೆ ಲೇಸಲ್ತೆ.....?

"ದೀರ್ಘಂ ಪಶ್ಯತ ಮಾ ಹ್ರಸ್ವಮ್" ಮಹರ್ಷಿಗಳ ದೀರ್ಘದೃಷ್ಟಿಯ ಉಪದೇಶವಿದು ಮಾನವ ಸಂಕುಲಕ್ಕೆ. "ದೀರ್ಘದರ್ಶಿಗಳಾಗಿ, ಸಮೀಪದರ್ಶಿಗಳಾಗಬೇಡಿ" ಅವರು ಕಂಡು ನುಡಿದ ದೀರ್ಘ ಭಗವಂತನವರೆಗೆ ವ್ಯಾಪಿಸಿದ್ದು. ನಮ್ಮ ಪರಿಸ್ಥಿಯಲ್ಲಿ ಜೀವನದ ಗುರಿಯಾದ ಅಧ್ಯಾತ್ಮದ ದೀರ್ಘದೆಡೆಗಿನ ಸಾಗುವಿಕೆ ಒತ್ತಟ್ಟಿಗಿರಲಿ, ಲೌಕಿಕ ಬದುಕಿನ ದೂರದರ್ಶಿತ್ವವೂ ನಮಗಿಲ್ಲವಾಗಿದೆ. ನಾವಿಂದು ಆಹಾರದ ಹೆಸರಿನಲ್ಲಿ ವಿಷವನ್ನು ಉಣ್ಣುತ್ತಿದ್ದೇವೆ. ಹೆಚ್ಚು ಇಳುವರಿಯೆನ್ನುವ ಭ್ರಮಾಲೋಕದ ಕೋಟೆಯೊಳಗಿನ ಬಂಧಿಗಳಾಗಿ ನಾವು ನವನಾಗರಿಕತೆಯ ಸಿದ್ಧಾಂತವನ್ನು ರೂಪಿಸಿದ್ದು, ರಾಸಾಯನಿಕಗಳ ರೂಪದಲ್ಲಿ.

ಫಸಲನ್ನು ಹೆಚ್ಚಿಸುವ ಗೊಬ್ಬರವಾಗಿ ರಾಸಾಯನಿಕಗಳ ಬಳಕೆ ; ಬೆಳೆದ ಫಸಲನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲೋಸುಗ ರಾಸಾಯನಿಕ ಕೀಟನಾಶಕಗಳ ಉಪಯೋಗ ; ಕೃಷಿಕ್ಷೇತ್ರದಿಂದ ಬೇರ್ಪಡಿಸಿದ ಬೆಳೆಗಳ ಸಂರಕ್ಷಣೆಗಾಗಿ ಮತ್ತೆ ರಾಸಾಯನಿಕಗಳಿಗೆ ಮೊರೆ - ಇದು ನಮ್ಮ ವಿಷವ್ಯೂಹ.

ರಾಸಾಯನಿಕಗಳ ವ್ಯಾಪಕ ಬಳಕೆ ಸೃಷ್ಟಿಸುವ ಸಮಸ್ಯೆಗಳು ಸರಮಾಲೆಯೇ ಸರಿ. ದೈಹಿಕವಾಗಿ ಅನಾರೋಗ್ಯಗಳ ಸಾಲು ಸಾಲು, ಭಾರತೀಯರ ಮಹತ್ತ್ವದ ಶೋಧನೆಯಾದ 'ಅನ್ನಸ್ಯ ಯೋ ಆಣಿಷ್ಠೋ ರಸಃ ತನ್ಮನಃ''ಅನ್ನಮಯಂ ಹಿ ಸೋಮ್ಯ ಮನಃ' ಎನ್ನುವ ಅನ್ನದಿಂದಲೇ ರೂಪುಗೊಳ್ಳುವ ಮನಸ್ಸಿನ ಮೇಲಾಗುವ ದುಷ್ಪರಿಣಾಮ ನಿಜಕ್ಕೂ ಭಯಂಕರ. ಈ ವಿಷವ್ಯೂಹದ ಘೋರ ಪರಿಣಾಮ ಇಷ್ಟಕ್ಕೇ ಸೀಮಿತವೇನೂ ಅಲ್ಲ. ಇದು ಪ್ರಕೃತಿಮಾತೆಯ ದಿವ್ಯ ಮಡಿಲನ್ನು ಛಿದ್ರಗೊಳಿಸುತ್ತಿರುವುದು, ಅದನ್ನು ಕಂಡೂ ಕಾಣದಂತಿರುವ ಕಂದರಾದ ನಮ್ಮ ವರ್ತನೆ ಮೂರ್ಖತೆಯ ತುಟ್ಟತುದಿ.

ನಮ್ಮ ಪರಂಪರೆಯ ಆಹಾರ ಸ್ವೀಕಾರದ ಕ್ರಮ ನಮ್ಮ ಆಹಾರದ ಉತ್ಪಾದನೆ ಮತ್ತು ಸಂರಕ್ಷಣೆಗಳು ಹೇಗಿರಬೇಕೆನ್ನುವುದು ತೋರಿಸಿಕೊಡುತ್ತಿದೆ. ನಾವು ಆಹಾರ ಸ್ವೀಕರಿಸುವಾಗ ಕೈಯಲ್ಲಿ ಶುದ್ಧ ಜಲವನ್ನು "ಅಮೃತೋಪಿಸ್ತರಣಮಸಿ ಸ್ವಾಹಾ" ಎಂದು ನುಡಿದು ಆ ಜಲವನ್ನು ಕುಡಿಯುತ್ತೇವೆ. ಮುಂದೆ ಸ್ವೀಕರಿಸಲಿರುವ ಆಹಾರಕ್ಕಿಂತ ಮೊದಲು ಉದರದಲ್ಲಿ ಅಮೃತಮಯವಾದ ಅಡಿಪಾತ್ರವಾಗಿ ಆ ಜಲ ಕಾರ್ಯನಿರ್ವಹಿಸಬೇಕೆನ್ನುವುದು ಅದರ ಆಶಯ. ಊಟ ಮುಗಿದಾಗ ಮತ್ತೆ ಶುದ್ಧ ಜಲವನ್ನು "ಅಮೃತಾಪಿಧಾನಮಸಿ ಸ್ವಾಹಾ" ಎಂದು ಸ್ವೀಕರಿಸಿದ ಆಹಾರದ ಮೇಲೆ ಅಮೃತಮಯವಾದ ಮುಚ್ಚಳವಾಗಿ ರೂಪುಗೊಳ್ಳಬೇಕೆಂದು ಬಯಸಿ ಸ್ವೀಕರಿಸುತ್ತೇವೆ. ಆದ್ದರಿಂದ ಆಹಾರ ಅಮೃತವಾಗಬೇಕೇ ಹೊರತು ವಿಷವಾಗಬಾರದು.

"ಅಮೃತಸ್ಯ ಪುತ್ರಾಃ" ಎಂದು ಕರೆಸಿಕೊಳ್ಳುವ ನಾವು, ನಮ್ಮ ಆಹಾರವು ಮೃತಸತ್ತ್ವವಾಗದೆ ಅಮೃತಸತ್ತ್ವವಾಗುವಂತೆ ಬಯಸಿ ಅಮೃತಪುತ್ರರಾಗೋಣವೇ?

(ನವೆಂಬರ್ ೨೦೦೪ನೇ ಧರ್ಮಭಾರತೀ ಸಂಪಾದಕೀಯ)

Wednesday 4 February 2009

ಮನುಭಾಷಿತ - 14

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಸೆ"-

ಜಗದ ಅಸ್ತಿತ್ವಕ್ಕೆ ಇದೇ ಕಾರಣ. ಈಗಿನ್ನೂ ಕಣ್ಬಿಟ್ಟ ಹಸುಗೂಸಿನಿಂದಾರಂಭಿಸಿ ಜೀರ್ಣಗೊಂಡ ಹಿರಿಯಜ್ಜನವರೆಗೂ ಆಸೆ ಸಾಮಾನ್ಯವೇ. ಬಣ್ಣ ಬೇರೆ, ಒಳ ಆಕೃತಿ ಒಂದೇ.

ಜಗತಿನ ಇತಿಹಾಸ - ವರ್ತಮಾನ - ಭವಿಷ್ಯತ್ತುಗಳನ್ನು ತುಂಬಿ ನಿಂತ ಮಹಿಮೆ ಅದರದ್ದು.

ಅದರಿಂದಾಗಿಯೇ ಎಲ್ಲ ; ಅದಿಲ್ಲದೆ ಏನೂ ಇಲ್ಲ.

ಕವಿಯೊಬ್ಬ ಹೃದ್ಯವಾಗಿ ಅದರ ದೊಡ್ಡತನವನ್ನು ತಿಳಿಸುತ್ತಾನೆ -
"ಪರ್ವತ ದೊಡ್ಡದು ; ಅದಕ್ಕಿಂತ ಸಮುದ್ರ ; ಸಮುದ್ರವನ್ನು ಮೀರಿದ್ದು ಆಗಸ ; ಆಗಸ ಬ್ರಹ್ಮನಷ್ಟಲ್ಲ ; ಆಸೆ ಬ್ರಹ್ಮನಿಗಿಂತಲೂ ದೊಡ್ಡದು".

ಭಗವಂತನ ಜಗತಿನ ರಚನೆಯನ್ನೇ "ಹಾಗಿರಬೇಕಿತ್ತು - ಹೀಗಿರಬೇಕಿತ್ತು" ಎಂದು ಕಲ್ಪಿಸಬಲ್ಲದು ಆಸೆ.

ಸೃಷ್ಟಿಯಾರಂಭವೇ ಆಸೆಯಿಂದ ಎನ್ನುತ್ತದೆ ಉಪನಿಷತ್ತು - "ಸೋಕಾಮಯತ" ಎಂದು.

ಮನುವೂ
"ಪ್ರಜೆಗಳನ್ನು ಸೃಷ್ಟಿಸಲು ಹೊರಟ ಭಗವಂತ ಮೊದಲು ಇಚ್ಛೆಯನ್ನು ಸೃಷ್ಟಿಸಿದ" ಎನುತ್ತಾನೆ.

ಹೀಗೆ ಸೃಷ್ಟಿಯನ್ನು ಆಮೂಲಾಗ್ರ ವ್ಯಾಪಿಸಿದ ಆಸೆಯ ಸ್ಥಾನ ಜೀವನದಲ್ಲೇನು? ಎನುವ ಜಿಜ್ಞಾಸೆಗಿಳಿದರೆ "ಆಸೆ ನಿಯಂತ್ರಿತವಾಗಬೇಕು" ಎನ್ನುವುದೇ ಹಲವರ ಅಭಿಮತ.

ಯಾರು ಆಸೆಗೆ ದಾಸರೋ ಅವರು ಲೋಕಕ್ಕೇ ಅಡುಯಾಳು ;
ಯಾರಿಗೆ ಆಸೆಯೇ ಅಡಿಯಾಳೋ ಅವರು ಲೋಕದ ಒಡೆಯರು-

ಆಶಾಯಾ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ |
ಅಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||ಎನ್ನುತ್ತಾನೆ ಅನುಭವಿ.

ಮನು ಆಸೆಯ ಕುರಿತಾಗಿ ಜೀವಲೋಕಕ್ಕೆ ಅಮರಸಂದೇಶ ನೀಡುತ್ತಾನೆ. ಆ ಸಂದೇಶ ಪ್ರತಿ ವ್ಯಕ್ತಿಯ ಪ್ರಾತಃ ಸ್ಮರಣೀಯವಾಗಬೇಕು ; ಶಯನ ಪ್ರತಿಜ್ಞೆಯೂ ಆಗಬೇಕು.

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇನ ಭೂಯ ಏವಾಭಿವರ್ಧತೇ ||

ಆಸೆ, ಅದರ ಅನುಭವದಿಂದ ಉಪಶಮನಗೊಳ್ಳುವುದಿಲ್ಲ ; ಆಸೆಯನ್ನು ಈಡೇರಿಸಿದಷ್ಟೂ ಅದು ವಿಜೃಂಭಿಸುತ್ತದೆ - ಅಗ್ನಿಗೆ ನೀಡುವ ಹವಿಸ್ಸಿನಿಂದ ಅಗ್ನಿಯ ಜ್ವಾಲೆ ಹೆಚ್ಚಾದಂತೆ.

ಆಸೆಯ ನಿಯಂತ್ರಣವೇ ಜೀವನ ಯಶಸ್ಸಿನ ಮಹಾಮಂತ್ರ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತೀ ಅಂಕಣ ಬರಹ)

Monday 2 February 2009

ಮನುಭಾಷಿತ - 13

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ನಾವಿಷ್ಣುಃ ಪೃಥಿವೀಪತಿಃ - ವಿಷ್ಣುವಾಗದವ ಭೂಮಿಯಾಳಲಾರ".
ಸನಾತನ ಸಂಸ್ಕೃತಿ ಪ್ರಭುತ್ವಕ್ಕೆ ಕೊಡುವ ಅದ್ಭುತ ವಿವರಣೆ.

ಜೀವಜಗತ್ತು ಸುಖಮಯವಾಗಿ ಬದುಕಲು ಪ್ರಭುತ್ವ ಬೇಕು, ಪ್ರಭು ಬೇಕು. ರಾಜನಿಲ್ಲದೆ ಅರಾಜಕಸ್ಥಿತಿಯ ದೇಶ ವಾಸಕ್ಕೆ ಅನರ್ಹ. ಅರಾಜಕತ್ವ ಸೃಷ್ಟಿಗೆ ಭಯಕಾರಕ. ಆದ್ದರಿಂದಲೇ ಭಗವಂತನಿಂದ ರಾಜತ್ವದ ಸೃಷ್ಟಿ.

ಆದರೆ ರಾಜ ಹೇಗಿರಬೇಕು? ರಾಜನ ಗುಣ - ಸ್ವಭಾವ ಎಂತಿರಬೇಕು? ಎಂತಹ ವ್ಯಕ್ತಿತ್ವವುಳ್ಳವ ರಾಜನಾಗಬೇಕು?

ಚರ್ಚೆ ಇಂದಿನದು ಮಾತ್ರವಲ್ಲ ; ಹಿಂದಿನದೂ ಹೌದು. ನಾಳೆಯದು ಅಲ್ಲವೆನ್ನುವಂತೆಯೂ ಇಲ್ಲ. ಅಂದರೆ ಚರ್ಚೆ ಸಾರ್ವಕಾಲಿಕ.

ಚರ್ಚೆಯೇ ಸಾರ್ವಕಾಲಿಕವೆಂದಾದರೆ ವಿಷಯಕ್ಕೊಂದು ನಿರ್ಣಯವಿಲ್ಲ ಎಂದಾಯಿತು. ವಾಸ್ತವ ಹಾಗಿಲ್ಲ. ಎಂದೋ ಇದು ನಿರ್ಣೀತವಾದ ವಿಷಯ. ಹಾಗಿದ್ದರೆ ಚರ್ಚೆಯೇಕೆ? ಅದು ಅರ್ಥಮಾಡಿಕೊಳ್ಳದವರ ಕಾರ್ಯ. ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿದರೆ...ಸಿದ್ಧವಿದೆ ಸಾನಾತನ ಸಾಹಿತ್ಯ.

ಮೂರ್ಧನ್ಯ ಸಾಹಿತ್ಯ ಮನುಸ್ಮೃತಿ ರಾಜಧರ್ಮವನ್ನು ವಿಸ್ತಾರವಾಗಿ ವಿವರಿಸುತ್ತದೆ. ವರ್ತಮಾನದ ರಾಜತ್ವದ ಸಮಸ್ಯೆಯಲ್ಲಿ ಪ್ರಧಾನವಾದುದು ಭ್ರಷ್ಟಾಚಾರ. ಭ್ರಷ್ಟಾಚಾರಕ್ಕೆ ಕಾರಣ ಭೋಗಲಾಲಸೆ.

ಪರಿಹಾರ?

ಮನುಭಾಷಿತ ಹೀಗಿದೆ -

ಇಂದ್ರಿಯಾಣಾಂ ಜಯೇ ಯೋಗಂ ಸಮಾತಿಷ್ಠೇದ್ದಿವಾನಿಶಮ್ |
ಜಿತೇಂದ್ರಿಯೋ ಹಿ ಶಕ್ನೋತಿ ವಶೇ ಸ್ಥಾಪಯಿತುಂ ಪ್ರಜಾಃ ||

ರಾಜನಾದವನು ರಾತ್ರಿ - ಹಗಲು ಇಂದ್ರಿಯ ಜಯಕ್ಕಾಗಿ ಪ್ರಯತ್ನಶೀಲನಾಗಬೇಕು. ಜಿತೇಂದ್ರಿಯನಾದವನೇ ಪ್ರಜಾಪಾಲನೆಗೆ ಅರ್ಹ.

ದೇಶದ ಸಂಪತ್ತೂ ರಾಜನ ಅಧೀನ. ಅಧೀನವಾಗಿಸದಿದ್ದರೆ ಆಳುವುದು ಅಸಾಧ್ಯ. ಅಧೀನವಾಗಿಸಿದರೆ ದುರುಪಯೋಗ ಸಾಧ್ಯ.

ರಾಜವ್ಯವಸ್ಥೆಯ ಆರಂಭಿಕ ಹಂತದಲ್ಲಿಯೇ ಇದನ್ನು ಚಿಂತಿಸಿದ ಮನು ಸೂಚಿಸಿದ ಪರಿಹಾರ "ಇಂದ್ರಿಯಜಯ".

ಇದನ್ನೇ ಕೌಟಿಲ್ಯ ಪುನರುಚ್ಚರಿಸಿದ -

"ಅರಿಷಡ್ವರ್ಗತ್ಯಾಗೇನೇಂದ್ರಿಯಜಯಂ ಕುರ್ವೀತ - ರಾಜನು ಅರಿಷಡ್ವರ್ಗವನ್ನು ತ್ಯಜಿಸಿ ಜಿತೇಂದ್ರಿಯನಾಗಬೇಕು" ಎಂದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)