Wednesday 21 December, 2011

ಆಸೆ ಮತ್ತು ಬಿಡುಗಡೆ

ಒಬ್ಬ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ. ಮನೆ ಸಂಸಾರ ಆಸ್ತಿ ಪಾಸ್ತಿ ಉದ್ಯೋಗ ಅಧಿಕಾರ... ಎಲ್ಲವನ್ನೂ ಬಿಟ್ಟು ಬಂದಿದ್ದ. ಆಸೆ ಮೋಹಗಳಿಂದ ದೂರವಾಗಿ ಕಾಡು ಸೇರಿದ್ದ. ಆಹಾರಕ್ಕಾಗಿಯೂ ಪ್ರಯತ್ನಿಸುತ್ತಿರಲಿಲ್ಲ. ಆ ಕಾಡಿನಲ್ಲಿದ್ದ ವನವಾಸಿ ಹುಡುಗಿಯೊಬ್ಬಳು ಅವನ ಮುಂದೆ ಪ್ರತಿದಿನ ಗಡ್ದೆಗೆಣಸು-ಹಣ್ಣುಹಂಪಲುಗಳನ್ನು ಇಟ್ಟು ಹೋಗುತ್ತಿದ್ದಳು. ಇವನ ತಪಸ್ಸು ದಿನದಿಂದ ದಿನಕ್ಕೆ ಉಗ್ರವಾಗುತ್ತಾ ಸಾಗಿತ್ತು. ಇಂದ್ರನಿಗೆ ಭಯ ಆರಂಭವಾಯಿತು, ಇವನ ತಪಸ್ಸು ಎಲ್ಲಿಗೆ ಬಂದು ನಿಂತೀತೋ ಎಂದು. ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸಿದ. ಎಂದಿನಂತೆ ಅಪ್ಸರೆಯನ್ನು ಕಳುಹಿಸದೆ ಕಾಡಿನ ಆ ಹುಡುಗಿಯನ್ನೇ ಸುಂದರಿಯಾಗಿಸಿದ. ತಪಸ್ವಿಯ ಮನಸ್ಸು ಅವಳತ್ತ ಆಕರ್ಷಿತವಾಯಿತು. ಅವಳಿಗೂ ಇಂದ್ರನ ಮಾಯೆಯಿಂದ ಅವನೆಡೆ ಆಕರ್ಷಣೆ ಹುಟ್ಟಿತು. ಆತ ಅವಳಲ್ಲಿ ಮದುವೆಯ ಆಸೆಯನ್ನು ವ್ಯಕ್ತಪಡಿಸಿದ, ಅವಳೂ ಒಪ್ಪಿದಳು. ಅಂದು ರಾತ್ರಿ ಅವಳಿಗೆ ತಾನು ತಪ್ಪು ಮಾಡುತ್ತಿದ್ದೇನೆಂದು ಅನ್ನಿಸತೊಡಗಿತು. ಯಾಕೆಂದರೆ ಬದಲಾದದ್ದು ಅವಳ ಹೊರರೂಪವೇ ಹೊರತು ಒಳಮನಸ್ಸಲ್ಲವಲ್ಲ! ತಪಸ್ವಿಯೂ ಚಿಂತಿಸತೊಡಗಿದ ತಾನೇಕೆ ಮತ್ತೆ ಮೋಹಕ್ಕೆ ಒಳಗಾದೆ ಎಂದು. ನಾಳೆ ಅವಳು ಬಂದಾಗ ನಿರಾಕರಿಸಬೇಕೆಂದುಕೊಂಡ. ಇತ್ತ ಹುಡುಗಿ ಆ ಕಾಡನ್ನೇ ಬಿಟ್ಟು ತೆರಳಲು ನಿರ್ಧರಿಸಿದಳು. ಬೆಳಗ್ಗೆ ತಪಸ್ವಿಯ ಸಮೀಪ ಬಂದವಳೇ ತನ್ನವರೊಂದಿಗೆ ಕಾಡಿನಿಂದ ಬೇರೆಡೆ ತೆರಳುವುದಾಗಿ ತಿಳಿಸಿದಳು. ಅವನೂ ಒಳ್ಳೆಯದಾಯಿತೆಂದುಕೊಂಡ. ತಪಸ್ಸು ಮುಂದುವರಿಯಿತು. ಅತ್ಯುಗ್ರವಾದ ತಪಸ್ಸು ಮಾಡತೊಡಗಿದ. ಎಷ್ಟೋ ಕಾಲ ಕಳೆಯಿತು. ಇಂದ್ರನಿಗೆ ಒಲಿಯುವುದರ ಹೊರತು ಬೇರೆ ದಾರಿಯೇ ಕಾಣಲಿಲ್ಲ. ಧರೆಗಿಳಿದು ಬಂದ; ತಪಸ್ವಿಯ ಮುಂದೆ ನಿಂದ; ಬೇಕಾದ ವರಕೊಡುವೆನೆಂದ; 'ನಿನ್ನ ತಪಸ್ಸಿಗೆ ಸ್ವರ್ಗ ನೀಡಲೋ? ಮೋಕ್ಷ ಕರುಣಿಸಲೋ' ಎಂದು ಕೇಳಿದ. ತಪಸ್ವಿ ಎರಡೂ ಬೇಡವೆಂದ. ಇಂದ್ರನಿಗೆ ಅಚ್ಚರಿ. 'ನಿನ್ನ ತಪಸ್ಸಿಗೆ ಇದಕ್ಕಿಂತ ದೊಡ್ದದು ಕೊಡಲೇನಿದೆ?' ಎಂದು ಪ್ರಶ್ನಿಸಿದ. ತಪಸ್ವಿ 'ಕೆಲವು ವರ್ಷಗಳ ಹಿಂದೆ ಇಲ್ಲೊಬ್ಬಳು ಹುಡುಗಿ ಇದ್ದಳಲ್ಲ, ಅವಳೀಗ ಎಲ್ಲಿದ್ದಾಳೆ?' ಎಂದು ಕೇಳಿದ.

ಓಶೋ 'ಆಸೆ'ಯ ಕುರಿತು ಹೇಳುವ ಕತೆಯಿದು.

ಆಸೆಯೇ ಹೀಗೆ. ಅದನ್ನು ನಾವು ಬಿಟ್ಟರೂ ಅದು ನಮ್ಮನ್ನು ಬಿಡದು. ನಾವು ಬಿಟ್ಟೆವೆಂದುಕೊಳ್ಳುತ್ತೇವೆ. ಅದು ಬೆನ್ನು ಹತ್ತಿರುತ್ತದೆ. ರೂಪಾಂತರ ತಾಳಿ ನಮ್ಮೊಂದಿಗೆಯೇ ಸಾಗುತ್ತಿರುತ್ತದೆ.

ಎಂದು ಅದರಿಂದ ಬಿಡುಗಡೆ ಹೊಂದುತ್ತೇವೋ ಅಂದು ಎಲ್ಲ ಬಂಧನದಿಂದಲೂ ಬಿಡುಗಡೆ ಹೊಂದಲು ಸಾಧ್ಯ.

No comments: