Saturday, 30 August, 2008

'ಭಾರತ'ಎಲ್ಲದಕ್ಕೂ ಪರ್ಯಾಯವೇ?

{ಸೆಪ್ಟೆಂಬರ್ ೨೦೦೮ರ ಧರ್ಮಭಾರತೀ ಮಾಸಪತ್ರಿಕೆಯ ಸಂಪಾದಕೀಯ}


'ಭಾರತ'ವೆಂದರೆ ಅದು ಅಚ್ಚರಿಗಳ ಅನೂಹ್ಯ ಲೋಕ. ಅದರ ಹೆಜ್ಜೆಯ ಕ್ರಮ ವಿಭಿನ್ನ, ವಿಶಿಷ್ಟ. ಜೀವನದ ಎಲ್ಲ ಕ್ಷೇತ್ರಗಳ ಮೇಲೂ ಅದರ ಕ್ಷ-ಕಿರಣ ಹರಿದಿದೆ. ಅದರಿಂದಾಗಿಯೇ ಎಲ್ಲದರ ಒಳ-ಹೊರಗನ್ನೂ ಸ್ಪರ್ಶಿಸಿಯೇ ಅದು ಮಾತನಾಡುವುದು. ಅದರ ಚಿಂತನೆಯ ವ್ಯಾಪಕತೆಯ ಗುಟ್ಟೂ ಅದೇ.


ಇಂತಹ 'ಭಾರತ'ವನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯದ ಮಾತು. ಅದೊಂದು ಬಯಲಂತೆ. ಬಯಲು ಬರಿದೋ ಬರಿದು. ಬರಿದಾದದ್ದರಲ್ಲಿ ಏನೂ ಇಲ್ಲದ ಮೇಲೆ ಇಲ್ಲದ್ದನ್ನು ಕಾಣುವುದೆಂತು? ಕಾಣದ್ದನ್ನು ಅರಿಯುವುದೆಂತು? ಅರಿಯದ್ದನ್ನು ಆಡುವುದೆಂತು? ಬಯಲ ಬಗೆಯರಿಯಲು ಬಯಲೆಲ್ಲ ಸುತ್ತಬೇಕು.ಈ ಪರಿಭ್ರಮಣ ಕೊನೆಗೊಮ್ಮೆ ಬಯಲಿನರಿವನ್ನು ಮೂಡಿಸೀತು.'ಭಾರತ' ಬಯಲು ಮಾತ್ರವಲ್ಲ; ಅದೊಂದು ಗುಹೆ. ಗುಹೆಯೆಂದರೆ ಕತ್ತಲು. ಹೊರಬೆಳಕಿಗೆ ಹೊಂದಿಕೊಂಡ ಕಣ್ಣು ಗುಹೆಯೊಳಗೆ ಕುರುಡು. ಬಹುಕಾಲ ಗುಹೆಯೊಳಗೆಯೇ ನೆಲೆ ನಿಂತರೆ, ಗುಹೆಯ ಬೆಳಕು; ಒಳ ಬೆಳಕು ಕಣ್ಣಿಗೆ ಹೊಂದಿಕೊಂಡೀತು. ಆಗ ಮಾತ್ರ ಗುಹೆ ಅರ್ಥವಾದೀತು.


ಹೀಗೆ ಭಾರತದ ಬಯಲು ಮತ್ತು ಗುಹೆಯೆನ್ನುವ ಎರಡು ಬಗೆಯನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕು; ಅವಧಾನ ಬೇಕು; ಪರಿವ್ರಾಜಕತೆ ಬೇಕು; ಏಕಾಗ್ರತೆ ಬೇಕು; ಇದೆಲ್ಲಕ್ಕೂ ಮಿಗಿಲಾಗಿ ಒಳಗಣ್ಣು ಬೇಕು. ಇದೆಲ್ಲದರಿಂದಾಗಿ ಭಾರತದರ್ಶನ ಸಾಧ್ಯ. ಹಾಗಾದಾಗ ಭಾರತ ಅನುಭವಸಿದ್ಧ.

ಇಂತಹ ಭಾರತದ ಜೀವನದರ್ಶನ ಆಧುನಿಕದ ಆದ್ಯತೆ. ಏಕೆಂದರೆ ಆಧುನಿಕಕ್ಕೆ ಒಂದಿಷ್ಟು ಕೊರತೆಯಿದೆ. ಅದನ್ನು ಆಧುನಿಕ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ.


ಪ್ರಕೃತ ಇಂದಿನ ಶಿಕ್ಷಣಕ್ಷೇತ್ರದ ಬಗ್ಗೆ ವ್ಯಾಪಕ ಚಿಂತನೆ ನಡೆಯುತ್ತಿದೆ. ಇದು ಪರಿಷ್ಕಾರಗಳ ಯುಗ. ದಿನದಿಂದ ದಿನಕ್ಕೆ ಶಿಕ್ಷಣದ ಪಠ್ಯ ಮತ್ತು ವಿಧಾನಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಇವೆ. ಆದರೆ ಈ ಎಲ್ಲ ಬದಲಾವಣೆಗಳೂ ಶಿಕ್ಷಣತಜ್ಞರಿಗೆ ಸಂತೃಪ್ತಿ - ಸಮಾಧಾನಗಳನ್ನು ತಂದೊಡ್ಡುತ್ತಿಲ್ಲ ಎನ್ನುವುದೂ ಕೂಡ ಸತ್ಯದ ಮಾತು.


ಶಿಕ್ಷಣಕ್ಷೇತ್ರದ ಸಮಸ್ಯೆಗಳಿಗೆ ಭಾರತೀಯ ಶಿಕ್ಷಣಪರಿಕಲ್ಪನೆಯಲ್ಲಿ ಪರಿಹಾರವಿದೆಯೇ? ಎನ್ನುವ ಜಿಜ್ಞಾಸೆ ಹುಟ್ಟಿಕೊಡಿದೆ. 'ಪರಿಹಾರವಿದೆ' ಎನ್ನುವ ಮಾತನ್ನು ಭಾರತೀಯ ಶಿಕ್ಷಣತಜ್ಞರು ಹೇಳಿಕೊಂಡು ಬರುತ್ತಿದ್ದಾರೆ.


ಭಾರತೀಯ ಶಿಕ್ಷಣಕ್ರಮ ಇಂದಿನ ಶಿಕ್ಷಣಲೋಕಕ್ಕೆ ಪರ್ಯಾಯ ಹೇಗೆ? ಇಂದಿನ ಶೈಕ್ಷಣಿಕ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರವೇನಿದೆ? ಎನ್ನುವ ಕುರಿತು ವ್ಯಾಪಕ ಶೋಧ ನಡೆಯಬೇಕಿದೆ.

ವಿದ್ವಾಂಸರುಗಳ ಅಧ್ಯಯನ - ಅನುಭವಗಳಲ್ಲಿ ಅಲ್ಲಲ್ಲಿ ಈ ಅಂಶಗಳೆಲ್ಲ ಇವೆಯಾದರೂ, ಒಂದೆಡೆಯಲ್ಲಿ; ಒಂದು ವ್ಯವಸ್ಥಿತರೂಪದಲ್ಲಿ ಅವು ಸಂಕಲನಗೊಂಡಿಲ್ಲ. ಅಥವಾ ವ್ಯವಸ್ಥೆಗೊಂಡಿಲ್ಲ.


ಭಾರತೀಯ ವಿದ್ವಾಂಸರು ಆ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಾಚೀನ ಶಿಕ್ಷಣ ಸಂಸ್ಥೆ, ಸಂಸ್ಥೆಯ ಸ್ವರೂಪ, ಕಲಿಕಾ ವಿಷಯಗಳು, ಬೋಧನಾ ತಂತ್ರಗಳು ಮುಂತಾದ ವಿಚಾರಗಳ ಸಮಗ್ರತೆಯನ್ನು ಶೋಧಿಸಬೇಕಿದೆ.


ಅಷ್ಟೇ ಅಲ್ಲದೆ, ಇಂದಿನ ವೃತ್ತಿಯ ಅವಶ್ಯಕತೆಗಳನ್ನು ಅದರೊಂದಿಗೆ ಜೋಡಿಸುವ ಕುರಿತೂ ಚಿಂತಿಸುವುದಿದೆ.


ಒಟ್ಟಿನಲ್ಲಿ ಭಾರತೀಯ ಶಿಕ್ಷಣಲೋಕವನ್ನು ಪುನಾರೂಪಿಸಬೇಕಿದೆ. ರೂಪಿಸುವ ಮುನ್ನ ವ್ಯಾಪಕ ಚಿಂತನ - ಮಂಥನಗಳು ನಡೆಯಬೇಕಿದೆ.

Sunday, 24 August, 2008

ಸರ್ಕಾರಕ್ಕೇಕೆ ದೇವಾಲಯಗಳು?

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಕರ್ನಾಟಕ ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ವಹಿಸಿದೆ. ಈ ಘಟನೆ ಸರ್ಕಾರದ 'ಪಾಲಿಸಿ'ಯೊಂದರ ಕುರಿತು ಚರ್ಚಿಸಲು ವೇದಿಕೆಯಾಗಿಸಿದೆ.


ದೇವಸ್ಥಾನಗಳೆಂದರೆ ಧಾರ್ಮಿಕಕ್ಷೇತ್ರಗಳು. ಧರ್ಮಕ್ಕೆ ಅದರದ್ದೇ ಆದ ಪದ್ಧತಿ ಇರುತ್ತದೆ.ಪದ್ಧತಿ ಪ್ರಾಚೀನತೆಯ ನೆರಳಿನಲ್ಲಿಯೇ ಬೆಳೆಯಬೇಕಾದದ್ದು. ಹಾಗಾಗಿ ದೇವಸ್ಥಾನಗಳ ಕುರಿತಾದ ಚಿಂತನೆ ಮತ್ತು ನಿರ್ಣಯಗಳು ಪರಂಪರೆಯ ಒರೆಗಲ್ಲಿನಲ್ಲಿ ತಿದ್ದಿ - ತೀಡಿ ಹೊರಬರಬೇಕಾಗುತ್ತದೆ.


ಭಾರತದಲ್ಲಿ ರಾಜ, ಧರ್ಮದ ಸಂರಕ್ಷಕನಾಗಿದ್ದ. ತನ್ನ ರಾಜ್ಯದ ಪ್ರಜೆಗಳ ಭಕ್ತಿ - ಉಪಾಸನೆ - ಅದರ ವಿಧಿವಿಧಾನಗಳು - ಹಾಗೂ ಅದಕ್ಕೆ ಸಂಬಂಧಿಸಿದ ಸಾಮೂಹಿಕ ಕೇಂದ್ರಗಳನ್ನು ರಾಜನೇ ವ್ಯವಸ್ಥೆಗೊಳಿಸುತ್ತಿದ್ದ. ಇದಕ್ಕಾಗಿ 'ಪರಿಷತ್' ಎನ್ನುವ ಪರಿಣತರಿಂದ ಕೂಡಿದ ಸ್ವಾಯತ್ತ ಸಂಸ್ಥೆ ಇರುತ್ತಿತ್ತು. ಅದು ರಾಜನ ಆಳ್ವಿಕೆಗೆ ಒಳಪಡುತ್ತಿರಲ್ಲಿಲ್ಲ. ರಾಜನಿಗೂ - ಪ್ರಜೆಗಳಿಗೂ ಮಾರ್ಗದರ್ಶನ ಮಾಡುವುದು ಅದರ ಕರ್ತವ್ಯವಾಗಿತ್ತು.


ರಾಜಪ್ರಭುತ್ವ ಅಳಿದು ಪ್ರಜಾರಾಜ್ಯ ಅಸ್ತಿತ್ವಕ್ಕೆ ಬಂದಾಗ ಈ ವಿಷಯಗಳ ಕುರಿತು ಪೂರ್ಣ ನಿರ್ಣಯಕ್ಕೆ ಬಂದ ಹಾಗೆ ಕಾಣಿಸುವುದಿಲ್ಲ.ಭಾರತಕ್ಕೆ 'ಸೆಕ್ಯುಲರ್' ರೂಪವನ್ನು ಕೊಡಲಾಯಿತು. ಧಾರ್ಮಿಕತೆಯ ಕುರಿತು ವಿಭಿನ್ನ ಆದರೆ ಗೊಂದಲದ ತೀರ್ಮಾನಕ್ಕೆ ಬರಲಾಯಿತು ಎನಿಸುತ್ತದೆ. ವಿದೇಶೀ ಮತಗಳನ್ನು ಧರ್ಮವೆಂದು ಕರೆಯಲಾಯಿತು.ಸನಾತನ ಧರ್ಮದ ಕೆಲವು ಅಂಗಗಳನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಲಾಯಿತು. ಇವೆರಡಕ್ಕೂ 'ಅಲ್ಪ ಸಂಖ್ಯಾತ' ಎಂದು ಹೆಸರಿಸಿ, ಅವುಗಳ ಧಾರ್ಮಿಕ ವ್ಯವಸ್ಥೆಗೆ ಸ್ವಾಯತ್ತತೆಯನ್ನು ನೀಡಲಾಯಿತು.


ಬಹು ಸಂಖ್ಯಾತರ ಧರ್ಮವೆಂದು(ಭಾರತದ ಮಟ್ಟಿಗೆ) ಕರೆಸಿಕೊಂಡ ಸನಾತನ ಧರ್ಮ ಅರೆ ಬರೆಯಾಗಿ ಸರ್ಕಾರದ ಅಡಿಗೆ ಬಂತು. ಕೆಲವು ದೇವಸ್ಥಾನಗಳು ಸರ್ಕಾರಕ್ಕೆ ಸೇರಿದವು.ಅದಕ್ಕಾಗಿಯೇ ಇರುವ ಧಾರ್ಮಿಕ ದತ್ತಿ ಇಲಾಖೆ ಆ ದೇವಾಲಯಗಳನ್ನು ನಿರ್ವಹಿಸತೊಡಗಿತು.


ವಾಸ್ತವವಾಗಿ ದೇವಾಲಯಗಳು ಧಾರ್ಮಿಕವ್ಯವಸ್ಥೆಯನ್ನು ಸ್ವತಂತ್ರಗೊಳಿಸಬೇಕಿತ್ತು. ಪರಂಪರೆಯಿಂದ ಅವು ಯಾವ ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತಿತ್ತೋ ಅಲ್ಲಿಗೇ ಒಪ್ಪಿಸಬೇಕಿತ್ತು. ಮೂಲಪದ್ಧತಿಗಳಿಗೆ ಅನುಗುಣವಾಗಿ ಅವುಗಳು ನಡೆಯಬೇಕಿತ್ತು.


ಪ್ರಶ್ನೆ, ಧಾರ್ಮಿಕ ಕೇಂದ್ರಗಳ ಸ್ವಾಯತ್ತತೆ ಸಮೂಹದ ಆಶೋತ್ತರಗಳಿಗೆ ವಿರುದ್ಧವಾದರೆ ಅಂತ. ಅಷ್ಟೇ ಅಲ್ಲ, ಸ್ವಾಯತ್ತ ಧಾರ್ಮಿಕ ಕೇಂದ್ರಗಳನ್ನು
ನಿರ್ವಹಿಸುವ ವ್ಯಕ್ತಿಗಳು ಆಮಿಷಗಳಿಗೆ ಒಳಗಾಗಿ ತಪ್ಪೆಸಗಿದರೆ ಅಂತ. ಹಾಗಾಗಿ ಅದರ ನಿಯಂತ್ರಣಕ್ಕೆ ಅಂದರೆ ಸಂಪ್ರದಾಯವಿರುದ್ಧವಾಗಿ ವರ್ತಿಸದಂತಿರಲು ಮತ್ತು ಅವ್ಯವಹಾರ ನಡೆಯದಂತಿರಲು ಕಾವಲು ಸಂಸ್ಥೆಗಳಿರಬೇಕು. ಅವು ಕಾಲಕಾಲಕ್ಕೆ ಪ್ರಕ್ರಿಯೆಗಳನ್ನು ಗಮನಿಸುತ್ತಿರಬೇಕು.


ಹೀಗೊಂದು ವ್ಯವಸ್ಥೆಯನ್ನು ನಿರ್ಮಾಣಮಾಡಿ, ಸರ್ಕಾರ ಮೊದಲು ದೇವಾಲಯಗಳನ್ನು ನಿರ್ವಹಿಸುತ್ತಿದ್ದ ಮಠಮಾನ್ಯಗಳು - ವಂಶವಾಹಿ ಧರ್ಮದರ್ಶಿಗಳು - ವಂಶವಾಹಿ ಸಮೂಹಗಳಿಗೆ ಮತ್ತೆ ವಹಿಸಿಕೊಡಬೇಕಿತ್ತು.


ಈಗಲಾದರೂ ಸರ್ಕಾರ ಮರು ಚಿಂತನೆ ಮಾಡಲಿ. ದೇವಾಲಯಗಳನ್ನು ಬಿಟ್ಟುಕೊಟ್ಟು ಪ್ರವಾಸೋದ್ಯಮವನ್ನು ಸರ್ಕಾರವೇ ಉಳಿಸಿಕೊಳ್ಳಲಿ. ತೀರ್ಥಕ್ಷೇತ್ರಗಳನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮದ ಲಾಭಗಳನ್ನು ಪಡೆದುಕೊಳ್ಳಲಿ.

Saturday, 9 August, 2008

"ವಾಕ್ ಸ್ವಾತಂತ್ರ್ಯ"

ನವ ಜಗದ ನವೀನ ಪರಿಕಲ್ಪನೆಗಳಲ್ಲಿ 'ವಾಕ್ ಸ್ವಾತಂತ್ರ್ಯ'ವೂ ಒಂದು. ಹಾಗೆಂದರೆ ಪ್ರತಿವ್ಯಕ್ತಿಯೂ ತನಗನ್ನಿಸಿದ್ದನ್ನು ಹಾಗೆಯೇ ಹೇಳಬಹುದು.


ಆಧುನಿಕತೆಯ ಪರಿಷ್ಕಾರಗಳಲ್ಲಿ ಇದು ತುಂಬಾ ಒಳ್ಳೆಯದು ಅಂತ ಅನ್ನಿಸತ್ತೆ. ಯಾರನ್ನೂ ಯಾರೂ ವಿಮರ್ಶಿಸಬಹುದಾದರೆ, ಸಮಾಜದ ಪ್ರತಿಯೋರ್ವನಿಗೂ ಸಮಾನ ಸ್ಥಾನಮಾನ ಲಭ್ಯವಾಗುತ್ತದೆ. ಮೇಲು - ಕೀಳು ಎನ್ನುವ ಸ್ತರದ ಶ್ರೇಣೀಕೃತವಾದ ತಾರತಮ್ಯ ಇಲ್ಲವಾಗುತ್ತದೆ. ಎಲ್ಲರೂ ಎಲ್ಲರಿಗೂ ಸಮಾನರಾಗುತ್ತಾರೆ. ಅಸಮಾನತೆಯೇ ಇನ್ನಿಲ್ಲದಂತೆ ಕಾಣೆಯಾಗುತ್ತದೆ.ಹೀಗೆ ಯೋಚಿಸಿದಾಗ 'ವಾಕ್ ಸ್ವಾತಂತ್ರ್ಯ' ಉತ್ತಮ ಅಂತಲೇ ಅನ್ನಿಸತ್ತೆ.


'ವಾಕ್ ಸ್ವಾತಂತ್ರ್ಯ'ದ ಇನ್ನೊಂದು ಮುಖವನ್ನೂ ಅವಲೋಕಿಸಿ ನೋಡಬೇಕಿದೆ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆಯೂ, ಎಲ್ಲವರ ಬಗ್ಗೆಯೂ ಮಾತನಾಡುತ್ತಿದ್ದಾರೆ.


ಯಾವುದೇ ಕ್ಷೇತ್ರದ ಕುರಿತು ವಿಮರ್ಶಿಸುವಾಗ ಆ ಕ್ಷೇತ್ರದ ಮೇಲೆ ಹೋಲ್ಡ್ ಇರಬೇಕಾಗುತ್ತದೆ. ಹಿಡಿತವಿಲ್ಲದ ಕ್ಷೇತ್ರದ ಬಗ್ಗೆ ಮಾತನಾಡುವುದು ಲಗಾಮಿಲ್ಲದ ಕುದುರೆಯಂತೆ. ಸರ್ಕಾರಗಳು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿದ ಮೇಲೆ ಮಾಧ್ಯಮಗಳು ಜನರ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತಾರೆ ಅಥವಾ ಪ್ರಕಟಿಸುತ್ತಾರೆ. ಪ್ರತಿಪಕ್ಷದವರು,ಬಜೆಟ್ ನಲ್ಲಿ ಉಲ್ಲೇಖಗೊಂಡ ಕ್ಷೇತ್ರದ ಪ್ರಮುಖರು, ಜನಸಾಮಾನ್ಯರು ಮಾತನಾಡಿರುತ್ತಾರೆ. ಆರ್ಥಿಕ ತಜ್ಞರುಗಳ ಪ್ರತಿಕ್ರಿಯೆ ಇಲ್ಲವೇ ಇಲ್ಲವೇನೋ ಎನ್ನುವಷ್ಟು ಕಡಿಮೆ ಇರುತ್ತದೆ. ಬಜೆಟ್ ಗಳನ್ನು ಸಿದ್ಧಪಡಿಸುವವರು ಆರ್ಥಿಕ ತಜ್ಞರು. ರಾಜಕಾರಣಿಗಳಲ್ಲ. ಅವರದನ್ನು ಮಂಡಿಸುವವರಷ್ಟೇ. ಆರ್ಥಿಕತಜ್ಞರ ಕಾರ್ಯವನ್ನು ಆ ಕ್ಷೇತ್ರದ ಅರಿವಿಲ್ಲದಿರುವವರು ವಿಮರ್ಶಿಸಲು ಹೇಗೆ ಸಾಧ್ಯ? ಇದರಿಂದಾಗಿಯೇ 'ಜನಪ್ರಿಯ ಬಜೆಟ್' ಅನ್ನುವ ಕಲ್ಪನೆ ಹುಟ್ಟಿದ್ದು. ಇಂತವನ್ನು ಚುನಾವಣಾ ಬಜೆಟ್ ಎಂದು ಕೂಡ ಕರೆಯುತ್ತಾರೆ. ಒಬ್ಬ ಆರ್ಥಿಕತಜ್ಞನೇ ವಿಮರ್ಶಿಸುವುದಾದರೆ ಜನಪ್ರಿಯ ಘೋಷಣೆಗಳಿಗೆ ಬಜೆಟ್ ನಲ್ಲಿ ಜಾಗವಿರುವುದಿಲ್ಲ.


ಹೀಗೆಯೇ ಯಾವುದೇ ಕ್ಷೇತ್ರವನ್ನು ಕುರಿತು ಮಾತನಾಡುವಾಗೆಲ್ಲ ನಾಲಗೆ ಹರಿದಂತೆ ಹರಿಸಬಾರದು. ಹಾಗಾಗಿ 'ವಾಕ್ ಸ್ವಾತಂತ್ರ್ಯ' ಪರಿಕಲ್ಪನೆಗೆ ಪರಿಷ್ಕಾರ ಬೇಕು.

Saturday, 2 August, 2008

ಹೇಗೆ ಓದೋದು?

'ಟೈಮ್ ಮ್ಯಾನೇಜ್ ಮೆಂಟ್' ಪುಸ್ತಕ ಓದ್ತಾ ಇದ್ದೆ. 'ಸ್ಪೀಡಾಗಿ ಓದುವುದು ಅಂತ ಒಂದು ಅಧ್ಯಾಯ ಗಮನ ಸೆಳೆಯಿತು.ತುಂಬಾ ದಿನಗಳಿಂದ ಓದುವ ಬಗ್ಗೆ ಗುರುಕುಲದ ಮಕ್ಕಳಿಗೆ ವಿಧಾನವೊಂದನ್ನು ರೂಪಿಸಿಕೊಡುವ ಮನಸ್ಸಿತ್ತು. ನನಗನ್ನಿಸಿದಂತೆ 'ಓದುವುದು ಹೇಗೆ?' ಅನ್ನುವ ಕುರಿತು ಸಾಕಷ್ಟು ಶೋಧನೆಯಾಗಿಲ್ಲ. ಎಲ್ಲ ಶಿಕ್ಷಕರೂ, ಎಲ್ಲ ಪೋಷಕರೂ ಮಕ್ಕಳಿಗೆ ಓದಿ ಅಂತ ಹೇಳ್ತಾನೇ ಇರ್ತಾರೆ. ಆದರೆ ಅದು ಹೇಗೆ? ಅನ್ನೋದನ್ನ ಯಾರೂ ಹೇಳಿಕೊಡಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮದೇ ವಿಧಾನವನ್ನು ರೂಪಿಸಿಕೊಂಡಿರುತ್ತಾರೆ. ಉಳಿದ ವಿದ್ಯಾರ್ಥಿಗಳು ಕಷ್ಟಪಡುತ್ತಿರುತ್ತಾರೆ.


ಇವುಗಳನ್ನು ನಾನಿನ್ನೂ ಪ್ರಯೋಗಕ್ಕೆ ಅಳವಡಿಸಿಲ್ಲ. ಲೇಖಕರ ಅಭಿಪ್ರಾಯವನ್ನು ಇಲ್ಲಿ ಸಾರಾಂಶಗೊಳಿಸಿದ್ದೇನೆ.

* 1. ಪ್ರೀವ್ಯೂ

* 2. ಸ್ವೀಪಿಂಗ್

* 3. ಬ್ರಷಿಂಗ್

ಹೀಗೆ ಮೂರು ಕ್ರಮಗಳನ್ನು ಲೇಖಕರು ನಿರೂಪಿಸ್ತಾರೆ.


1. ಸಿನಿಮಾಗಳನ್ನು ಬಿಡುಗಡೆ ಮಾಡುವ ಮೊದಲು ಕೆಲವರಿಗೆ ತೋರಿಸುವಂತೆ ಪುಸ್ತಕವನ್ನು ಪೂರ್ಣ ಓದಲಾರಂಭಿಸುವ ಮೊದಲು ಮೇಲುಮೇಲೆ ಓದಬೇಕು. ಇದು 'ಪ್ರೀವ್ಯೂ'.


2. 'ಪ್ರೀವ್ಯೂ' ಮಾಡಲು 'ಸ್ವೀಪಿಂಗ್' ತಂತ್ರ ಬಳಸಬೇಕು. ಪುಟದ ಮೇಲಿನಿಂದ ಕೆಳಗಿನವರೆಗೆ ವೇಗವಾಗಿ ಓದುವುದು. ಸ್ವೀಪಿಂಗ್ ಮಾಡುವಾಗ ತೋರು ಬೆರಳನ್ನು ಹಾವು ಹರಿದಂತೆ ವಕ್ರಗತಿಯಲ್ಲಿ ಪುಟದ ಮೇಲಿನಿಂದ ಕೆಳಗಿನವರೆಗೆ ಓಡಿಸಬೇಕು, ಕಣ್ಣು ಕೈ ತುದಿಯನ್ನು ಹಿಂಬಾಲಿಸಬೇಕು.3. ಪ್ರತಿ ಪುಟವನ್ನು ಎಡದಿಂದ ಬಲಕ್ಕೆ ಪ್ರತಿ ಲೈನ್ ಮೇಲೆ ಕೈಯೋಡಿಸಿ, ಕಣ್ಣು ಹಿಂಬಾಲಿಸುವಾಂತಾದರೆ ಅದು 'ಬ್ರಷಿಂಗ್'.
ಇಷ್ಟಾದ ಮೇಲೆ ಪುಸ್ತಕದ ಪೂರ್ಣ ಓದು.ಅದಕ್ಕೆ ಕೆಲವು ಸೂಚನೆಗಳು :

1. ಬೆನ್ನು ನೇರವಾಗಿ ಕುಳಿತುಕೊಳ್ಳಬೇಕು.

2. ಪುಸ್ತಕ 45ಡಿಗ್ರಿ ಕೋನದಲ್ಲಿರಬೇಕು.

3. ಪರಿಸರ ನೀಟಾಗಿರಬೇಕು.


ಈ ಬಗ್ಗೆ ನಿಮ್ಮ ಅನುಭವ - ಅಧ್ಯಯನಗಳ ನೆಲೆಯಲ್ಲಿ ಸಲಹೆಗಳನ್ನು ಕೊಡಿ.