Friday, 25 September, 2009

ರಾಜ್ಯವೇ ಬೇಡವೆಂದವಗೆ "ಸಾಸಿವೆ ಕಳ್ಳ" ಎಂದಂತೆ

(ಅಕ್ಟೋಬರ್ ೨೦೦೯ರ ಧರ್ಮಭಾರತೀ ಸಂಪಾದಕೀಯ)

ಗಣೇಶ ಚತುರ್ಥಿ ಮೊನ್ನೆಯಷ್ಟೆ ಮುಗಿದಿದೆ. ಅಂದು ಆಗಸದಲ್ಲಿ ಎಂದಿನಂತೆ ಮಿನುಗುವ ಚಂದ್ರನನ್ನು ನೋಡಬಾರದಂತೆ. ಅಕಸ್ಮಾತ್ ನೋಡಿಬಿಟ್ಟರೆ? 'ಮಿಥ್ಯಾಪವಾದ' ಬರುತ್ತದಂತೆ. ಹಾಗೆಂದರೆ? ಮಾಡದ್ದನ್ನು ಮಾಡಿದ್ದಾನೆ ಎಂದು ಜಗವೆಲ್ಲ ತಿಳಿದುಕೊಳ್ಳುತ್ತದೆ. ಅದರ ಪರಿಹಾರಕ್ಕೆ ಶಮಂತಕೋಪಾಖ್ಯಾನವನ್ನು ಓದಬೇಕಂತೆ ಅಥವಾ ಕೇಳಬೇಕಂತೆ.

ಏನದು ಆ ಉಪಾಖ್ಯಾನ? ಅದೊಂದು ಕಥೆ. ಓರ್ವ ಚಾರಿತ್ರ್ಯವಂತನ ತೇಜೋವಧೆಯ ಪ್ರಯತ್ನದ ವ್ಯಥೆ. ಶ್ರೀಕೃಷ್ಣನ ಜೀವನದ ಘಟನೆಯೊಂದದು. ಯಾದವರ ಉತ್ಕರ್ಷಕ್ಕೆ ಶ್ರೀಕೃಷ್ಣನ ಕೊಡುಗೆ ದೊಡ್ಡದು ಅಥವಾ ಅದಕ್ಕೆ ಅವನೇ ಕಾರಣ. ಆದರೂ ಅವರು ಅವನನ್ನು ಅನುಮಾನಿಸುತ್ತಾರೆ. ಅನುಮಾನದಿಂದಲೇ ಅವಮಾನಿಸುತ್ತಾರೆ ಕೂಡ.

ಘಟನೆ ಪ್ರಾರಂಭವಾಗುವುದು ಸತ್ರಾಜಿತನ ಸೂರ್ಯಭಕ್ತಿಯಿಂದ. ಅದರ ಪರಿಣಾಮವಾಗಿ ಅವನಿಗೊಂದು ದಿವ್ಯಮಣಿ ದೊರೆಯುತ್ತದೆ. ಪ್ರತಿನಿತ್ಯ ಸಂಪತ್ತನ್ನು ಸ್ರವಿಸುವ ಬೆರಗಿನ ಮಣಿಯದು. ಸತ್ರಾಜಿತ ಅದನ್ನು ಧರಿಸಿ ದ್ವಾರಕೆಯೆಡೆಗೆ ಬರುತ್ತಾನೆ, ತನ್ನ ದೇವರ ಮನೆಯಲ್ಲಿ ಸ್ಥಾಪಿಸುತ್ತಾನೆ. ಆ ಮಣಿ ದಿನವೊಂದಕ್ಕೆ ೧೦೮ ಮಣ ಬಂಗಾರವನ್ನು ನೀಡುತ್ತಿತ್ತು. ಅಲ್ಲದೇ ಅದಿದ್ದಲ್ಲಿ ಬರ - ರೋಗಗಳೇ ಇದ್ದಿರಲಿಲ್ಲ. ಸಾವಿರಾರು ಜನರಿಗೆ ಉಪಯುಕ್ತವಾಗುವ ವಸ್ತು ರಾಜನ ಬಳಿ ಇರಬೇಕು ಎಂದೋ ಅಥವಾ ಮುಂದಾಗುವ ತೊಡಕುಗಳ ಅರಿವಿನಿಂದಲೋ ಕೃಷ್ಣ ಅದನ್ನು ದೊರೆ ಉಗ್ರಸೇನನಿಗಾಗಿ ಕೇಳುತ್ತಾನೆ. ಸತ್ರಾಜಿತ ಅರ್ಥಲೋಭಿಯಾಗಿ ನಿರಾಕರಿಸುತ್ತಾನೆ. ಇದೇ ಮಣಿಯ ಪ್ರಕರಣದಿಂದಾಗಿ ಮುಂದೆ ಸತ್ರಾಜಿತನ ತಮ್ಮ ಪ್ರಸೇನನೂ ಮತ್ತು ಸ್ವಯಂ ಸತ್ರಾಜಿತನೂ ಸಾಯುತ್ತಾರೆ. ಆದರೆ ಮುಂದಾಗುವುದು ಇಂದು ಹೇಗೆ ಅವನಿಗೆ ಅರಿವಾಗಬೇಕು? ಆಪತ್ತು ಆರಂಭವಾಗಿಯೇ ಬಿಡುತ್ತದೆ.

ಸತ್ರಾಜಿತನ ತಮ್ಮ ಪ್ರಸೇನ. ಅವನೊಂದು ದಿನ ಬೇಟೆಗೆ ತೆರಳುತ್ತಾನೆ. ಹೋಗುವಾಗ ಮಣಿಯನ್ನು ಧರಿಸಿರುತ್ತಾನೆ. ಕಾಡಿನಲ್ಲೊಂದು ಸಿಂಹ ಅವನನ್ನು ಕೊಲ್ಲುತ್ತದೆ, ಮಣಿಯನ್ನು ಕೊಂಡೊಯ್ಯುತ್ತದೆ. ರಾಮಾಯಣದ ಜಾಂಬವ ಆ ಸಿಂಹವನ್ನು ಕೊಲ್ಲುತ್ತಾನೆ. ಮಣಿಯನ್ನು ಗುಹೆಯಲ್ಲಿದ್ದ ಮಗುವಿಗೆ ಆಟಕ್ಕೆ ನೀಡುತ್ತಾನೆ. ಭೇಟೆಗೆ ಹೋದ ಪ್ರಸೇನ ಹಿಂದಿರುಗುವುದಿಲ್ಲ. ಸತ್ರಾಜಿತ ಏನಾಗಿರಬೇಕೆಂದು ಚಿಂತಿಸಿದವ ಕೂಡಲೇ ನಿರ್ಣಯಕ್ಕೆ ಬರುತ್ತಾನೆ " ಇದು ಕೃಷ್ಣನದೇ ಕೆಲಸ. ಯಾಕೆಂದರೆ ಹಿಂದೆ ಕೃಷ್ಣ ಮಣಿಯನ್ನು ಕೇಳಿದ್ದನಲ್ಲ. ಕೊಡದ ಸಿಟ್ಟಿಗೆ ಅವನನ್ನು ಕೊಂದ" ಎಂದು.

ಆಗ ಇಂದಿಗೂ ಅಂದಿಗೂ ಜನರ ಸಹಜವೋ ಎಂಬಂತಿರುವ ಸ್ವಭಾವವೊಂದು ಅನಾವರಣಗೊಂಡುಬಿಡುತ್ತದೆ. ಸತ್ರಾಜಿತ ನುಡಿದದ್ದನ್ನು ಜನರು ಒಪ್ಪಿಯೇ ಬಿಡುತ್ತಾರೆ ; ಪರಿಶೀಲನೆಯೇ ಇಲ್ಲದೆ. ಎಲ್ಲರೂ ಕಿವಿಯಿಂದ ಕಿವಿಗೆ ಪ್ರಸಾರ ಮಾಡಿದರಂತೆ. ಇದು ವಿಚಿತ್ರ ; ಆದರೂ ಸತ್ಯ. ಈ ಆರೋಪ ಬರುವವರೆಗೆ ಕೃಷ್ಣ ದ್ವಾರಕೆಯ ಜನಕ್ಕೆ ಆರಾಧ್ಯದೈವ. ಅವರ ರಕ್ಷಕ, ಪೋಷಕ ಎಲ್ಲವೂ. ಯಾದವರನ್ನು ಮೇಲೆತ್ತಿದವನೇ ಕೃಷ್ಣ. ಕೃಷ್ಣ ಬರುವವರೆಗೆ ಯಾದವರು ನಗಣ್ಯರು.ಅವರನ್ನು ಉಳಿಸಿ, ಬೆಳೆಸಿ ಗಣ್ಯರನ್ನಾಗಿಸಿದವ ಕೃಷ್ಣ. ಇಂತಹ ಕೃಷ್ಣನನ್ನೇ 'ಕೊಲೆಗಡುಕ, ಕಳ್ಳ' ಎಂದು ಬಿಡುತ್ತಾರೆ.

ಮುಂದಿನದೋ ಕೃಷ್ಣನ ಪರಿಪಾಟಲು. ತನಗಂಟಿದ ಅಪಖ್ಯಾತಿಯನ್ನು ತೊಳೆದುಕೊಳ್ಳಲು ಅವನೇ ಹೊರಡುತ್ತಾನೆ. ನಿರಪರಾಧಿಯನ್ನು 'ಅಪರಾಧಿ' ಎಂದರೆ ಅವನೇ 'ನಾನು ನಿರಪರಾಧಿ' ಎಂದು ನಿರೂಪಿಸಲು ಮುಂದಾಗಬೇಕು ತಾನೆ? ಆತ್ಮೀಯರೊಂದಿಗೆ ಪ್ರಸೇನನನ್ನು ಹುಡುಕುತ್ತಾ ಕೃಷ್ಣ ಕಾಡು ಸೇರುತ್ತಾನೆ. ಅಲ್ಲಿ ಜಾಂಬವಂತನೊಂದಿಗೆ ಯುದ್ಧವಾಗಿ ಮಣಿಯೂ, ಜಾಂಬವತಿಯೆನ್ನುವ ಕನ್ಯಾಮಣಿಯೂ ಅವನದಾಗುತ್ತಾರೆ. ಸತ್ಯವರಿತು ಪಶ್ಚಾತ್ತಾಪಗೊಂಡ ಸತ್ರಾಜಿತ ಮಣಿಯನ್ನೂ, ಸತ್ಯಭಾಮೆಯೆನ್ನುವ ಕನ್ಯಾಮಣಿಯನ್ನೂ ಅವನಿಗೆ ನೀಡುತ್ತಾನೆ. ಮುಂದೆ ಅಕ್ರೂರ - ಕೃತವರ್ಮರ ಪ್ರಲೋಭನೆಯಿಂದ ಶತಧನ್ವ ಸತ್ರಾಜಿತನನ್ನು ಕೊಂದು ಮಣಿಯನ್ನು ಅಪಹರಿಸುತ್ತಾನೆ. ಅವನ ಸಂಹಾರ, ಅಕ್ರೂರನಲ್ಲಿ ನ್ಯಾಸವಾಗಿದ್ದ ಮಣಿಯ ದರ್ಶನ, ಎಲ್ಲರಿಗೂ ನಂಬಿಕೆ ಉಂಟಾಗುವುದು ಹೀಗೆ ಕತೆ ಮುಗಿಯುತ್ತದೆ.

ಹೀಗೆ ಕತೆಯನ್ನು ವಿಸ್ತಾರವಾಗಿ ನಿರೂಪಿಸುವ ವ್ಯಾಸರು " ಆ ಆಖ್ಯಾನವನ್ನು ಓದುವವನ, ಕೇಳುವವನ, ನೆನಪಿಸಿಕೊಳ್ಳುವವನ ಮಿಥ್ಯಾರೋಪವುಇಲ್ಲವಾಗುತ್ತದೆ" ಎಂದು ನುಡಿಯುತ್ತಾರೆ. ಆದರೆ ಸುಳ್ಳು ಆರೋಪಗಳನ್ನು ಸೃಷ್ಟಿಸಿದ, ಪಸರಿಸಿದ, ದ್ವಾರಕೆಯ ಜನ ತಮ್ಮ ಪಾಪವನ್ನು ಹೇಗೆ ಪರಿಹರಿಸಿಕೊಂಡರೆನ್ನುವ ವಿಚಾರವನ್ನಾಗಲೀ, ಬೇರೆ ಯಾರಾದರೂ ಇಂತಹ ತಪ್ಪು ಮಾಡಿದರೆ ಅವರು ಹೇಗ ಶುದ್ಧರಾಗಬೇಕೆನ್ನುವ ವಿಷಯವನ್ನಾಗಲೀ ಈ ಪ್ರಕರಣದಲ್ಲಿ ವ್ಯಾಸರು ನಿರೂಪಿಸುವುದೇ ಇಲ್ಲ.