Tuesday, 21 September, 2010

ಬುದ್ಧಿ-ಮನಸ್ಸುಗಳ ನಿಲುಗಡೆ

ಅದು ದ್ವಾಪರಯುಗ. ಕುರುಕ್ಷೇತ್ರ ಮಹಾಸಂಗ್ರಾಮ ಮುಗಿದಿದೆ. ದುರ್ಯೋಧನ, ಅವನ ಅನುಜರು, ಮತ್ತವನ ದುರುಳ ಪರಿವಾರ ಸಂಪೂರ್ಣವಾಗಿ ನಾಶವಾಗಿದೆ. ಈಗ ಧರ್ಮದ ರಾಜ್ಯಭಾರ. ಯಾಕೆಂದರೆ ಆಳ್ವಿಕೆ ಯುಧಿಷ್ಠಿರನದು.

ಕೆಲಕಾಲ ಕಳೆದಿದೆ. ಧೃತರಾಷ್ಟ್ರ ವಾನಪ್ರಸ್ಥಕ್ಕೆ ತೆರಳುವ ಮನಸ್ಸು ಮಾಡಿದ್ದಾನೆ. ಅವನೊಂದಿಗೆ ಗಾಂಧಾರಿ, ವಿದುರರೂ ಹೊರಟು ನಿಂತಿದ್ದಾರೆ. ಅಚ್ಚರಿಯೆಂದರೆ ರಾಜಮಾತೆ ಕುಂತಿ ಕೂಡ ವಾನಪ್ರಸ್ಥದ ನಿರ್ಣಯ ಮಾಡಿದ್ದಾಳೆ. ಕುಂತಿಗೆ ಮಾತ್ರ ಸಾಧ್ಯವಾಗುವ ಕಾರ್ಯವಿದು.

ವಾಸ್ತವವಾಗಿ ಕುಂತಿಗಿದು ನೆಮ್ಮದಿಯ ಕಾಲ. ಅಸಂಖ್ಯ ವರ್ಷಗಳ ಕಷ್ಟವಳಿದು ಸೌಖ್ಯ ಬದುಕನ್ನಾವರಿಸಿದೆ. ಅಕಾಲದಲ್ಲಿ ಪತಿಯ ಮರಣ. ಅದಿನ್ನೂ ಕುಂತಿಯ ಯೌವನದ ಕಾಲ. ಮಕ್ಕಳನ್ನು ಬೆಳೆಸುವುದಷ್ಟೇ ಅಲ್ಲ, ಅವರನ್ನು ಉಳಿಸಿಕೊಳ್ಳುವ ಸಂಕಷ್ಟ ಬೇರೆ. ಅರಗಿನ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುವಷ್ಟು ಭೀಭತ್ಸಕರ ಕ್ರೌರ್ಯ, ಅದೂ ಸ್ವಕೀಯರಿಂದಲೇ. ಕಾಡುಮೇಡಿನಲ್ಲಿ ಅಲೆದಾಟ. ಕೊನೆಗೊಮ್ಮೆ ಇಂದ್ರಪ್ರಸ್ಥ ಪಾಂಡವರದ್ದಾಯಿತು ಎಂದುಕೊಳ್ಳುತ್ತಿರುವಾಗಲೇ ಜೂಜಿನ ದೌರ್ಭಾಗ್ಯ. 'ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ' ಎನ್ನುವ ಗಾದೆಮಾತಿಗೆ ಎಣೆಯಾಗುವಂತಹ ಬದುಕು ಮಕ್ಕಳದ್ದು. ಮತ್ತೊಂದು ಯುದ್ಧ.

ಈಗಿನದ್ದು ಸಮೃದ್ಧ ತಂಪಿನ ಕಾಲ. ಶೇಷವೂ ಇಲ್ಲದಂತೆ ಶತ್ರುನಾಶವಾಗಿದೆ. ಮಗ ಯುಧಿಷ್ಠಿರ ರಾಜನಾಗಿದ್ದಾನೆ. ಕುಂತಿ ಈಗ ರಾಜಮಾತೆ. ಬೇರೆ ಯಾರೇ ಆಗಿದ್ದರೂ ಅರಮನೆಯಲ್ಲಿ ಉಂಡುಟ್ಟು ಸುಖವಾಗಿರುತ್ತಿದ್ದರು. ಕುಂತಿ ಮತ್ತೆ ಕಾಡಿನ ದಾರಿ ಹಿಡಿದಿದ್ದಾಳೆ. ಅದೂ ವಾನಪ್ರಸ್ಥಕ್ಕೆ. ವಾನಪ್ರಸ್ಥವೆಂದರೆ ಬಹು ಕಷ್ಟದ ಬದುಕು. ಅದು ವನವಿಹಾರವಲ್ಲ. ಕಾಡಿನ ನಡುವೆ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಆಳುಕಾಳುಗಳನ್ನು ಇಟ್ಟುಕೊಂಡು ಬದುಕುವುದೂ ಅಲ್ಲ. ಕುಟೀರದಲ್ಲಿ ವಾಸ. ನೆಲದ ಮೇಲೆ ಮಲಗುವುದು. ಊಟಕ್ಕೆ ಪಂಚಭಕ್ಷ್ಯ ಪರಮಾನ್ನಗಳಿಲ್ಲ. ಗೆಡ್ಡೆಗೆಣಸುಗಳನ್ನು ಆಯ್ದುಕೊಂಡು ತಿನ್ನಬೇಕು. ನದಿಯ ತಣ್ಣೀರೇ ಸ್ನಾನಕ್ಕೆ. ಹೇಳಿಕೇಳಿ ವೃದ್ಧಾಪ್ಯದ ಅವಸ್ಥೆ. ಹೀಗೆ ಸಾಯುವ ತನಕ ದೇಹವನ್ನು ಸವೆಸಿ, ಒಂದುದಿನ ದೇಹತ್ಯಾಗ ಮಾಡಬೇಕು. ರಾಜಮಾತೆ ಶೇಷಾಯುಷ್ಯಕ್ಕೆ ಆರಿಸಿಕೊಂಡಿದ್ದು ಇಂತಹ ಬದುಕನ್ನು.

ಇದು ಭಾರತೀಯ ಆದರ್ಶ ವ್ಯಕ್ತಿಗಳು ಬದುಕುವ ರೀತಿ; ಇದೇ ಭಾರತೀಯ ಆದರ್ಶ ಬದುಕಿನ ನೀತಿ.
ದುಃಖಿತರಾದ ಪಾಂಡವರನ್ನು ಸಾಂತ್ವನಪಡಿಸಿ ಹೊರಡುವಾಗ ಕುಂತಿ, ಯುಧಿಷ್ಠಿರನಿಗೆ ಜೀವನ ಸಂದೇಶವೊಂದನ್ನು ನೀಡುತ್ತಾಳೆ:

ಧರ್ಮ ತೇ ಧೀಯತಾಂ ಬುದ್ಧಿಃ ಮನಸ್ತು ಮಹದಸ್ತು ಚ
ಇದು ಕುಂತಿಯ ಜೀವನದರ್ಶನ. ಕುಂತಿ, ಒಬ್ಬ ಹೆಣ್ಣಿಗೆ ಬರಬಹುದಾದ ಎಲ್ಲ ತಲ್ಲಣಗಳನ್ನು ಅನುಭವಿಸಿಯೂ ಬದುಕಿದ್ದರೆ, ಬದುಕಿ-ಬದುಕಿನ ಕೊನೆಯಲ್ಲಿ ವಾನಪ್ರಸ್ಥದ ನಿರ್ಣಯಕ್ಕೆ ಬಂದಿದಿದ್ದರೆ ಅದು ಜೀವನಾನುಭವದ ಪರಿಪಾಕವೇ ಸರಿ.
ಬುದ್ಧಿಯು ಧರ್ಮದಲ್ಲಿ ನೆಲೆ ನಿಲ್ಲಲಿ; ಮನಸ್ಸು ದೊಡ್ಡದಾಗಲಿ"
ಇದು ಕುಂತಿ ತನ್ನ ಮಗನಿಗೆ ನೀಡಿದ ಒಂದೇ ಒಂದು ಸಂದೇಶ. ಕುಂತಿಯಲ್ಲದೆ ಯಾವ ವೀರಮಾತೆ ಹೀಗೆ ಮಾತನಾಡಬಲ್ಲಳು! ಇಂದು ಕುಂತಿ ಯುಧಿಷ್ಠಿರನಿಗೆ ನೀಡುವ ಸಂದೇಶವಷ್ಟೇ ಅಲ್ಲ. ಸಾರ್ವಕಾಲಿಕವಾಗಿ ಸಾರ್ವದೇಶಿಕವಾಗಿ ತಾಯಿ ಮಗುವಿಗೆ ನೀಡುವ ಬಾಳಬುತ್ತಿ.

ಹೌದು. ಬದುಕಿನ ಸೌಖ್ಯಕ್ಕೆ, ಸೌಂದರ್ಯಕ್ಕೆ, ಸಮೃದ್ಧಿಗೆ ಈ ಎರಡೇ ಸಾಕು. ಯಾಕೆಂದರೆ ಬದುಕಿನ ಒಳಿತು-ಕೆಡುಕುಗಳಿಗೆ ನಮ್ಮ ಬುದ್ಧಿ ಕಾರಣ. ಅದು ಸರಿ-ತಪ್ಪುಗಳನ್ನು ಯೋಗ್ಯವಾಗಿ ಗ್ರಹಿಸಿದರೆ ಬದುಕು ಗೆದ್ದಿತೆಂದೇ ಅರ್ಥ. ಹಾಗೆಯೇ ಮನಸ್ಸು. ಅದು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.

Wednesday, 15 September, 2010

ಸುಖವೇತಕೆ? ದುಃಖವದೇತಕೆ?

ಬದುಕೆಂದರೆ ಹಾಗೆ. ಒಮ್ಮೆ ಸುಖ; ಒಮ್ಮೆ ದುಃಖ. ಗೆಲುವೊಮ್ಮೆ; ಸೋಲು ಇನ್ನೊಮ್ಮೆ. ಆಶಾವಾದವೊಂದು ಬಾರಿ; ಏನೂ ಬೇಡವೆನ್ನುವ ನಿರಾಶೆ ಮತ್ತೊಂದು ಬಾರಿ. ಹೀಗೆ ಒಂದಾದ ಮೇಲೊಂದು ಸುತ್ತುತ್ತಲೇ ಇರುತ್ತದೆ.

ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |
ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ||

ಸುಖ-ದುಃಖಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಈ ಅನುಭವಿಯ ಮಾತು.

ಸುಖ, ಗೆಲುವುಗಳು ನಮ್ಮನ್ನು ಬೀಗಿವಂತೆ ಮಾಡಿದರೆ ದುಃಖ, ಸೋಲುಗಳು ಕಂಗೆಡುವಂತೆ ಮಾಡುತ್ತವೆ. ಸಂತೋಷವಿದ್ದಾಗ ಎಲ್ಲವೂ ಸುಂದರವೆನಿಸಿದರೆ ದುಃಖ ಅದೆಲ್ಲವನ್ನೂ ಭೀಕರಗೊಳಿಸುತ್ತದೆ. ಸುಖದಲ್ಲಿದ್ದಾಗ ರುಚಿಯೆನಿಸಿದ ಊಟ ದುಃಖದಲ್ಲಿ ಬೇಡವೇ ಬೇಡವೆನಿಸುತ್ತದೆ. ಸುಖದಲ್ಲಿದ್ದಾಗ ಸಂಗಾತಿಯ ಮಾತು ಮಧುರ ಸಂಗೀತವೆನಿಸಿದರೆ ದುಃಖದಲ್ಲಿದ್ದಾಗ ಅದು ಕರ್ಣಕಠೋರವೆನಿಸಿಬಿಡುತ್ತದೆ. ಸುಖದಲ್ಲಿದ್ದಾಗ ಹತ್ತಿರ ಬಂದ ಮಗುವನ್ನು ಬಾಚಿ ತಬ್ಬಿಕೊಳ್ಳುತ್ತೇವಾದರೆ ದುಃಖದಲ್ಲಿದ್ದಾಗ
ಗಮನಿಸಿಯೂ ಗಮನಿಸದಂತಿದ್ದುಬಿಡುತ್ತೇವೆ. ಸುಖದಲ್ಲಿದ್ದಾಗ ಸ್ವಚ್ಛವಾದ ಗರಿಗರಿ ಬಟ್ಟೆ ಉಡುತ್ತಿದ್ದವರು ದುಃಖದಲ್ಲಿದ್ದಾಗ ಹೇಗಾದರೆ ಹಾಗೆ ಇರುತ್ತೇವೆ. ಆಗಾಗ ಬದುಕು ಹೀಗೇಕೆ ಎಂದುಕೊಳ್ಳುತ್ತಿರುತ್ತೇವೆ.

ಅವರು ನಮ್ಮಷ್ಟು ಒಳ್ಳೆಯವರಲ್ಲ; ನಮ್ಮಷ್ಟು ಬೇರೆಯವರಿಗೆ ಸಹಾಯ ಮಾಡಿಲ್ಲ; ದಾನ-ಧರ್ಮವಂತೂ ಅವರ ವಂಶದಲ್ಲೇ ಇಲ್ಲ; ದೇವರಿಂದ ಅವರು ಮಾರುದೂರು; ಆದರೂ ಅವರು ಸುಖವಾಗಿದ್ದಾರೆ; ಅವರಿಗೆ ಕಷ್ಟಗಳೇ ಬರುವುದಿಲ್ಲ; ನಮಗೆ ಮಾತ್ರ ಕಷ್ಟ ಎಂದು ಇನ್ಯಾರನ್ನೋ ನೋಡಿ ಅಂದುಕೊಳ್ಳುತ್ತೇವೆ. ನಾವು ತಪ್ಪು ಮಾಡದೆಯೂ ಕಷ್ಟ ಪಡುವುದು, ಇನ್ನೊಬ್ಬರು ತಪ್ಪು ಮಾಡಿಯೂ ಸುಖವಾಗಿರುವುದು ನಮ್ಮ ಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸಿಬಿಡುತ್ತದೆ. ಕೆಲವೊಮ್ಮೆ ನಮಗೆ ಕಷ್ಟ ಕೊಟ್ಟವರೇ ಸುಖವಾಗಿರುವುದನ್ನು ಕಂಡಾಗಲಂತೂ ದೈವದ ಮೇಲೆಯೇ ಮುನಿಸಿಕೊಳ್ಳುತ್ತೇವೆ.

ಆದರೆ ವಾಸ್ತವವೇ ಬೇರೆ. ಸುಖ-ದುಃಖಗಳೆರಡೂ ನಮ್ಮದೇ ಕೂಸುಗಳು. ನಾವನುಭವಿಸುತ್ತಿರುವ ಸುಖ-ದುಃಖಗಳ ಅಪ್ಪನೂ ನಾವೇ, ಅಮ್ಮನೂ ನಾವೇ. ನಾವು ಮಾಡಿದ್ದನ್ನೇ ನಾವನುಭವಿಸುತ್ತೇವೆ. ಸೃಷ್ಟಿಯ ಜೀವನಸೂತ್ರದಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ನಿಶ್ಚಿತ, ತಪ್ಪು ಮಾಡದವನಿಗೆ ರಕ್ಷೆ ನಿಶ್ಚಿತ. ಇಂದು ಅನುಭವಿಸುತ್ತಿರುವ ನೋವಿಗೆ ಈ ಜನ್ಮದಲ್ಲಿ ಕಾರಣ ಕಾಣದಿದ್ದರೆ ಪೂರ್ವಜನ್ಮದಲ್ಲಿ ಅಂತಹ ತಪ್ಪು ನಡೆದಿದೆ ಎಂದರ್ಥ. ನಾವೇ ಹಿಂದಿನ ಜನ್ಮಾಂತರದಲ್ಲಿ ಮಾಡಿದ ಕರ್ಮವನ್ನು ಈ ಜನ್ಮದಲ್ಲಿ ಅನುಭವಿಸುತ್ತಿರುತ್ತೇವೆ ಅಷ್ಟೆ. ಇನ್ನೊಬ್ಬ ಈ ಜೀವನದಲ್ಲಿ ಸುಖಿಯೆನಿಸಿದರೆ ಅದವನ ಹಿಂದಿನ ಜನ್ಮದ ಕರ್ಮಪಾಕವಷ್ಟೆ.

ಸುಖಸ್ಯ ದುಃಖಸ್ಯ ನ ಕೋಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ |
ಅಹಂ ಕರೋಮೀತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ ||

ನಮಗಾರೂ ಸುಖ ನೀಡರು; ದುಃಖವನ್ನೂ ನೀಡರು. ಅವರಿವರಿಂದ ಸುಖವಾಯಿತು, ದುಃಖವಾಯಿತು ಎಂಬುದು ಭ್ರಮೆ. ಹಾಗೆಯೇ ನಾನು ಯಾರಿಗಾದೂ ಸುಖ ನೀಡುತ್ತೇನೆ, ದುಃಖ ನೀಡುತ್ತೇನೆ ಎಂಬುದೂ ಭ್ರಮೆಯೇ. ಯಾಕೆಂದರೆ ಪ್ರತಿಯೊಬ್ಬನೂ ಪ್ರತಿಕ್ಷಣವೂ ತನ್ನದೇ ಕರ್ಮದ ಫಲವನ್ನು ಅನುಭವಿಸುತ್ತಿರುತ್ತಾನೆ.