Tuesday, 21 September, 2010

ಬುದ್ಧಿ-ಮನಸ್ಸುಗಳ ನಿಲುಗಡೆ

ಅದು ದ್ವಾಪರಯುಗ. ಕುರುಕ್ಷೇತ್ರ ಮಹಾಸಂಗ್ರಾಮ ಮುಗಿದಿದೆ. ದುರ್ಯೋಧನ, ಅವನ ಅನುಜರು, ಮತ್ತವನ ದುರುಳ ಪರಿವಾರ ಸಂಪೂರ್ಣವಾಗಿ ನಾಶವಾಗಿದೆ. ಈಗ ಧರ್ಮದ ರಾಜ್ಯಭಾರ. ಯಾಕೆಂದರೆ ಆಳ್ವಿಕೆ ಯುಧಿಷ್ಠಿರನದು.

ಕೆಲಕಾಲ ಕಳೆದಿದೆ. ಧೃತರಾಷ್ಟ್ರ ವಾನಪ್ರಸ್ಥಕ್ಕೆ ತೆರಳುವ ಮನಸ್ಸು ಮಾಡಿದ್ದಾನೆ. ಅವನೊಂದಿಗೆ ಗಾಂಧಾರಿ, ವಿದುರರೂ ಹೊರಟು ನಿಂತಿದ್ದಾರೆ. ಅಚ್ಚರಿಯೆಂದರೆ ರಾಜಮಾತೆ ಕುಂತಿ ಕೂಡ ವಾನಪ್ರಸ್ಥದ ನಿರ್ಣಯ ಮಾಡಿದ್ದಾಳೆ. ಕುಂತಿಗೆ ಮಾತ್ರ ಸಾಧ್ಯವಾಗುವ ಕಾರ್ಯವಿದು.

ವಾಸ್ತವವಾಗಿ ಕುಂತಿಗಿದು ನೆಮ್ಮದಿಯ ಕಾಲ. ಅಸಂಖ್ಯ ವರ್ಷಗಳ ಕಷ್ಟವಳಿದು ಸೌಖ್ಯ ಬದುಕನ್ನಾವರಿಸಿದೆ. ಅಕಾಲದಲ್ಲಿ ಪತಿಯ ಮರಣ. ಅದಿನ್ನೂ ಕುಂತಿಯ ಯೌವನದ ಕಾಲ. ಮಕ್ಕಳನ್ನು ಬೆಳೆಸುವುದಷ್ಟೇ ಅಲ್ಲ, ಅವರನ್ನು ಉಳಿಸಿಕೊಳ್ಳುವ ಸಂಕಷ್ಟ ಬೇರೆ. ಅರಗಿನ ಮನೆಯಲ್ಲಿ ಕೂಡಿಹಾಕಿ ಸುಟ್ಟುಹಾಕುವಷ್ಟು ಭೀಭತ್ಸಕರ ಕ್ರೌರ್ಯ, ಅದೂ ಸ್ವಕೀಯರಿಂದಲೇ. ಕಾಡುಮೇಡಿನಲ್ಲಿ ಅಲೆದಾಟ. ಕೊನೆಗೊಮ್ಮೆ ಇಂದ್ರಪ್ರಸ್ಥ ಪಾಂಡವರದ್ದಾಯಿತು ಎಂದುಕೊಳ್ಳುತ್ತಿರುವಾಗಲೇ ಜೂಜಿನ ದೌರ್ಭಾಗ್ಯ. 'ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ' ಎನ್ನುವ ಗಾದೆಮಾತಿಗೆ ಎಣೆಯಾಗುವಂತಹ ಬದುಕು ಮಕ್ಕಳದ್ದು. ಮತ್ತೊಂದು ಯುದ್ಧ.

ಈಗಿನದ್ದು ಸಮೃದ್ಧ ತಂಪಿನ ಕಾಲ. ಶೇಷವೂ ಇಲ್ಲದಂತೆ ಶತ್ರುನಾಶವಾಗಿದೆ. ಮಗ ಯುಧಿಷ್ಠಿರ ರಾಜನಾಗಿದ್ದಾನೆ. ಕುಂತಿ ಈಗ ರಾಜಮಾತೆ. ಬೇರೆ ಯಾರೇ ಆಗಿದ್ದರೂ ಅರಮನೆಯಲ್ಲಿ ಉಂಡುಟ್ಟು ಸುಖವಾಗಿರುತ್ತಿದ್ದರು. ಕುಂತಿ ಮತ್ತೆ ಕಾಡಿನ ದಾರಿ ಹಿಡಿದಿದ್ದಾಳೆ. ಅದೂ ವಾನಪ್ರಸ್ಥಕ್ಕೆ. ವಾನಪ್ರಸ್ಥವೆಂದರೆ ಬಹು ಕಷ್ಟದ ಬದುಕು. ಅದು ವನವಿಹಾರವಲ್ಲ. ಕಾಡಿನ ನಡುವೆ ಪುಟ್ಟದೊಂದು ಅರಮನೆ ಕಟ್ಟಿಕೊಂಡು ಆಳುಕಾಳುಗಳನ್ನು ಇಟ್ಟುಕೊಂಡು ಬದುಕುವುದೂ ಅಲ್ಲ. ಕುಟೀರದಲ್ಲಿ ವಾಸ. ನೆಲದ ಮೇಲೆ ಮಲಗುವುದು. ಊಟಕ್ಕೆ ಪಂಚಭಕ್ಷ್ಯ ಪರಮಾನ್ನಗಳಿಲ್ಲ. ಗೆಡ್ಡೆಗೆಣಸುಗಳನ್ನು ಆಯ್ದುಕೊಂಡು ತಿನ್ನಬೇಕು. ನದಿಯ ತಣ್ಣೀರೇ ಸ್ನಾನಕ್ಕೆ. ಹೇಳಿಕೇಳಿ ವೃದ್ಧಾಪ್ಯದ ಅವಸ್ಥೆ. ಹೀಗೆ ಸಾಯುವ ತನಕ ದೇಹವನ್ನು ಸವೆಸಿ, ಒಂದುದಿನ ದೇಹತ್ಯಾಗ ಮಾಡಬೇಕು. ರಾಜಮಾತೆ ಶೇಷಾಯುಷ್ಯಕ್ಕೆ ಆರಿಸಿಕೊಂಡಿದ್ದು ಇಂತಹ ಬದುಕನ್ನು.

ಇದು ಭಾರತೀಯ ಆದರ್ಶ ವ್ಯಕ್ತಿಗಳು ಬದುಕುವ ರೀತಿ; ಇದೇ ಭಾರತೀಯ ಆದರ್ಶ ಬದುಕಿನ ನೀತಿ.
ದುಃಖಿತರಾದ ಪಾಂಡವರನ್ನು ಸಾಂತ್ವನಪಡಿಸಿ ಹೊರಡುವಾಗ ಕುಂತಿ, ಯುಧಿಷ್ಠಿರನಿಗೆ ಜೀವನ ಸಂದೇಶವೊಂದನ್ನು ನೀಡುತ್ತಾಳೆ:

ಧರ್ಮ ತೇ ಧೀಯತಾಂ ಬುದ್ಧಿಃ ಮನಸ್ತು ಮಹದಸ್ತು ಚ
ಇದು ಕುಂತಿಯ ಜೀವನದರ್ಶನ. ಕುಂತಿ, ಒಬ್ಬ ಹೆಣ್ಣಿಗೆ ಬರಬಹುದಾದ ಎಲ್ಲ ತಲ್ಲಣಗಳನ್ನು ಅನುಭವಿಸಿಯೂ ಬದುಕಿದ್ದರೆ, ಬದುಕಿ-ಬದುಕಿನ ಕೊನೆಯಲ್ಲಿ ವಾನಪ್ರಸ್ಥದ ನಿರ್ಣಯಕ್ಕೆ ಬಂದಿದಿದ್ದರೆ ಅದು ಜೀವನಾನುಭವದ ಪರಿಪಾಕವೇ ಸರಿ.
ಬುದ್ಧಿಯು ಧರ್ಮದಲ್ಲಿ ನೆಲೆ ನಿಲ್ಲಲಿ; ಮನಸ್ಸು ದೊಡ್ಡದಾಗಲಿ"
ಇದು ಕುಂತಿ ತನ್ನ ಮಗನಿಗೆ ನೀಡಿದ ಒಂದೇ ಒಂದು ಸಂದೇಶ. ಕುಂತಿಯಲ್ಲದೆ ಯಾವ ವೀರಮಾತೆ ಹೀಗೆ ಮಾತನಾಡಬಲ್ಲಳು! ಇಂದು ಕುಂತಿ ಯುಧಿಷ್ಠಿರನಿಗೆ ನೀಡುವ ಸಂದೇಶವಷ್ಟೇ ಅಲ್ಲ. ಸಾರ್ವಕಾಲಿಕವಾಗಿ ಸಾರ್ವದೇಶಿಕವಾಗಿ ತಾಯಿ ಮಗುವಿಗೆ ನೀಡುವ ಬಾಳಬುತ್ತಿ.

ಹೌದು. ಬದುಕಿನ ಸೌಖ್ಯಕ್ಕೆ, ಸೌಂದರ್ಯಕ್ಕೆ, ಸಮೃದ್ಧಿಗೆ ಈ ಎರಡೇ ಸಾಕು. ಯಾಕೆಂದರೆ ಬದುಕಿನ ಒಳಿತು-ಕೆಡುಕುಗಳಿಗೆ ನಮ್ಮ ಬುದ್ಧಿ ಕಾರಣ. ಅದು ಸರಿ-ತಪ್ಪುಗಳನ್ನು ಯೋಗ್ಯವಾಗಿ ಗ್ರಹಿಸಿದರೆ ಬದುಕು ಗೆದ್ದಿತೆಂದೇ ಅರ್ಥ. ಹಾಗೆಯೇ ಮನಸ್ಸು. ಅದು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.

3 comments:

ಹೊಸಮನೆ said...

ಅಂತಹ ಆದರ್ಶ ವ್ಯಕ್ತಿಗಳ ಕಾಲ ಆಗಿಹೋಗಿರಬೇಕು. ಈಗ ಯಾರಿದ್ದಾರೆ? ಮತ್ತೆ ಕುಂತಿ ಪಾಂಡವರಿಗೆ ಮಾತ್ರ ತಾಯಿಯಲ್ಲ,ಕರ್ಣನಿಗೂ ಕೂಡ. ಅವನ ಜತೆ ಆಕೆ ನಡೆದುಕೊಂಡ ರೀತಿಯನ್ನೂ ಆದರ್ಶ ಅನ್ನುತ್ತೀರಾ? ಆದರ್ಶ ಹೇಳಲು ಸುಲಭ,ಆಚರಿಸಲು ಕಷ್ಟ!

ಶ್ರೀ ರಾಮಾರ್ಪಣ ಕಲಾ ವೇದಿಕೆ said...

yes...ಮನಸ್ಸು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.

ಶ್ರೀ ರಾಮಾರ್ಪಣ ಕಲಾ ವೇದಿಕೆ said...

yes .... ಮನಸ್ಸು ಸಂಕುಚಿತಗೊಂಡಷ್ಟೂ ಬದುಕು ಸಣ್ಣದಾಗುತ್ತದೆ; ಅದು ವಿಶಾಲವಾದಷ್ಟೂ ಜೀವನ ವಿಶಾಲವಾಗುತ್ತದೆ.sogasaada baraha