Monday 29 November, 2010

ಸಂಗತ


"ಯದ್ಯದಾಚರತಿ ಶ್ರೇಷ್ಠಃ
ತತ್ತದೇವೇತರೇ ಜನಾಃ|
ಸಯತ್ಪ್ರಮಾಣಂ ಕುರುತೇ
ಲೋಕಸ್ತದನುವರ್ತತೇ||
ಮಹಾತ್ಮರಾದವರನ್ನು ಜನರು ಅನುಸರಿಸುವುದು ಲೋಕರೂಢಿ. ಈ ಹಿಂದೆ ನೂರಾರು ಮಂದಿ ತಮ್ಮ ಜೀವನದ ಸಿಹಿಕಹಿಗಳನ್ನು ಬರೆದು ಹತ್ತು ಮಂದಿಗೆ ತಿಳಿಸಿ ಹಂಚಿಕೊಂಡಿದ್ದಾರೆ. ಲಿಖಿತ ರೂಪ ಕೊಡದ ಹಿರಿಯರೂ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹಿರಿಯರ ಕಥೆಗಳೊಂದಿಗೆ ತಮ್ಮ ಜೀವನಾನುಭವಗಳನ್ನೂ, ಕಲ್ಪನೆಗಳನ್ನೂ ತಿಳಿಸಿ ಅವರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ನನ್ನ ತಂದೆ ಜೀವನದುದ್ದಕ್ಕೂ ತನ್ನ ಜೀವನದ ಏರಿಳಿತದ ಕಥೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರ ಪರಿಣಾಮವಾಗಿ ನಮ್ಮ ಜೀವನವಿಧಾನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಇತಿಹಾಸ ಓದುವ, ಕಲಿಸುವ ಗುರಿ ಇದೇ ತಾನೆ?

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆತ್ತವರು, ಮಕ್ಕಳು ಜೊತೆಯಲ್ಲಿದ್ದು ಅನುಭವ ಹಂಚಿಕೊಳ್ಳುವ ಕಾಲಾವಕಾಶ ಕಡಿಮೆ. ಅಪ್ಪ-ಅಮ್ಮನ ಡೈರಿನೋಡಿ ಮಕ್ಕಳು ತಿಳಿದುಕೊಳ್ಳುವ ಕಾಲವೂ ಮರೆಯಾಗಿ ಅಪ್ಪನ ಗಣಕಯಂತ್ರ-ಈ ಮೇಲ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ಕಾಲ ಇದಿರಾಗುತ್ತಿರುವ ಈ ಕಾಲದಲ್ಲಿ ನಮ್ಮ ಜೀವನಾನುಭವಗಳನ್ನು ಹಿತೈಷಿಗಳೊಂದಿಗೆ ಹಂಚಿಕೊಳ್ಳಲು ಇಂತಹ ಜೀವನಕಥೆಗಳು ಸಹಾಯಕವಲ್ಲವೇ?"

ಇದು ಶ್ರೀ ಎಸ್. ಈಶ್ವರ ಭಟ್, ಎಳ್ಯಡ್ಕ ಅವರು ತಮ್ಮ 'ದೃಷ್ಟ-ಅದೃಷ್ಟ' ಪುಸ್ತಕದ ಮುನ್ನುಡಿಯಲ್ಲಿ ಹೇಳುವ ಮಾತು. 'ದೃಷ್ಟ-ಅದೃಷ್ಟ' ಶ್ರೀಭಟ್ಟರ ಆತ್ಮಚರಿತ್ರೆ. ಒಮ್ಮೆ ಓದಲೇಬೇಕಾದ ಪುಸ್ತಕವಿದು.

ಯಾವುದೇ ವ್ಯಕ್ತಿಯ ಆತ್ಮಚರಿತ್ರೆಯೆಂದರೆ ಸಹಜವಾಗಿಯೇ ಅದು ಆತ್ಮಸ್ತುತಿಯ ಆಗರವಾಗಿರುತ್ತದೆ. ಓದುಗ ಅಸಹನೀಯ ವೇದನೆಯನ್ನು ಅನುಭವಿಸುವಂತಿರುತ್ತದೆ. ಯಾಕೆಂದರೆ ವ್ಯಕ್ತಿ ತನ್ನನ್ನು ದೊಡ್ಡವನನ್ನಾಗಿಸಿಕೊಳ್ಳುವ ಪ್ರಯತ್ನವನ್ನು ಅಲ್ಲಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ 'ದೃಷ್ಟ-ಅದೃಷ್ಟ' ಅದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿ ಈಶ್ವರ ಭಟ್ಟರು ತಮ್ಮನ್ನು ದೊಡ್ಡವರನ್ನಾಗಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಪ್ರಾಥಮಿಕ ಶಾಲೆಗೆ ಹೋಗುವ ಯಾವ ಸಾಧ್ಯತೆಯೂ ಇಲ್ಲದ ತಮ್ಮ ದುರ್ಭರ ಬಾಲ್ಯದ ಸಂಕಟಗಳನ್ನೆದುರಿಸಿ ಮುಖ್ಯಾಧ್ಯಾಪಕರಾಗುವವರೆಗಿನ ಅವರ ಯಶೋಗಾಥೆ ಓದುಗನ ಮನದಲ್ಲಿ ಅವರನ್ನು ದೊಡ್ಡವರನ್ನಾಗಿಸುತ್ತದೆ.

('ತ್ರಿವಿಕ್ರಮ' ಪತ್ರಿಕೆಯ ಅಂಕಣಬರಹ)

Friday 26 November, 2010

ಸಾಮ್ರಾಜ್ಯದಲ್ಲಿ 'ಸಾಮ್ರಾಟ್' ಇನ್ನಿಲ್ಲ

ಸಾಮ್ರಾಟ್ ಇನ್ನಿಲ್ಲ. ಶ್ರೀಮಠದ ಗೋಲೋಕ ರಾಜನಿಲ್ಲದ ರಾಜ್ಯವಾಗಿದೆ. ಸಾಮ್ರಾಟನನ್ನು ಕಂಡವರು, ಪ್ರೀತಿಸಿದವರು ಅವನಿಲ್ಲದ ಅಮೃತಧಾರಾ ಗೋಲೋಕವನ್ನು ಕಲ್ಪಿಸಿಕೊಳ್ಳಲಾರರು. ಅವನ ಇರುವಿಕೆಯೇ ಹಾಗಿತ್ತು. ಅವನು ಮಲಗಿದರೂ, ನಿಂತರೂ, ನಡೆದಾಡಿದರೂ, ಮುಕುಟ ಧರಿಸಿದ ಮಹಾರಾಜನಂತೆ ಕಾಣುತ್ತಿದ್ದ. ಅವನನ್ನು ನೋಡುವುದೇ ಸೊಬಗು. ಗೋಲೋಕದ ವೀಕ್ಷಕರಂತೂ ಒಟ್ಟು ಗೋಲೋಕವನ್ನು ನೋಡಿದಷ್ಟು ಹೊತ್ತು ಸಾಮ್ರಾಟ್ ಮುಂದೂ ನಿಂತಿರುತ್ತಿದ್ದರು.

೨೦೦೭ ಏಪ್ರಿಲ್ ನಲ್ಲಿ ನಡೆದ ಚಾರಿತ್ರಿಕ ವಿಶ್ವಗೋಸಮ್ಮೇಳನದಲ್ಲಿ ಶ್ರೀಶ್ರೀಗಳವರ ಅನಂತರದ ಕೇಂದ್ರಬಿಂದು ಸಾಮ್ರಾಟನೇ ಆಗಿದ್ದ. ಹೆಚ್ಚಾಗಿ ಭವ್ಯ-ವಿಶಾಲ ಸಭಾಂಗಣದಲ್ಲಿ ನಿಂತಿರುತ್ತಿದ್ದ ಅವನನ್ನು ನೋಡುವುದೇ ಜನರಿಗೆ ಹಬ್ಬವಾಗಿತ್ತು. ಅಂತಹ ಅದ್ಭುತ ಆಕಾರವನ್ನು ದೂರದಿಂದ ಕಂಡು ಬೆಚ್ಚಿದವರೂ ಅವನ ಶಾಂತಗಂಭೀರ ಸ್ತಿಮಿತತೆಯನ್ನು ಕಂಡು ಅಚ್ಚರಿ ತಾಳುತಿದ್ದರು. ಭಾವುಕರಂತೂ ಸಮ್ಮೇಳನಕ್ಕೆ ಬಂದ ದೈವಪ್ರತಿನಿಧಿ, ಪ್ರತ್ಯಕ್ಷ ನಂದಿ ಎಂದು ಕೈಮುಗಿದಿದ್ದರು.

ಸಾಮ್ರಾಟ್ ಮೂಲತಃ ಗುಜರಾತಿನವನು. ಅಹಮದಾಬಾದ್‌ನ ಶ್ರೀಜಗನ್ನಾಥ ಮಂದಿರದ ಗೋಶಾಲೆಯಲ್ಲಿದ್ದವ. ಅಲ್ಲಿದ್ದಾಗ ಅವನ ಹೆಸರು ಸಾಮ್ರಾಟ್ ಎಂದೂ ಅಲ್ಲ. ಅವನಾಗ ಸಾಮ್ರಾಟನೂ ಅಲ್ಲ. ಗಾಡಿ ಎಳೆಯುವ ಸಾಮಾನ್ಯ ಎತ್ತು. ಅಲ್ಲಿಗೆ ಚಿತ್ತೈಸಿದ್ದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಕಣ್ಣಿಗೆ ಈ ಚೆಲುವಾಂತ ಚೆನ್ನಿಗ ಕಾಣಸಿಕ್ಕಿದ. ಪಾಮರ ಕಣ್ಣು ಗುರುತಿಸದ ಅವನ ಹಿರಿಮೆಯನ್ನು ಆ ಕಣ್ಣು ಗುರುತಿಸಿತು. ಶ್ರೀಶ್ರೀಗಳ ಸೂಚನೆಯಂತೆ ಗಾಡಿ ಎಳೆಯುವ ಈ ಸಾಮಾನ್ಯ ಎತ್ತು ಶ್ರೀಮಠಕ್ಕೆ ಬಂತು.

ಪರಮಪೂಜ್ಯರು ಅವನನ್ನು ಸಾಮ್ರಾಟ್ ಎಂದರು. ಅವನ ಹೆಸರಷ್ಟೇ ಅಲ್ಲ, ಅವನು ಸಾಮ್ರಾಟನೇ ಆದ ಗೋಪ್ರೇಮಿಗಳ ಹೃದಯದಲ್ಲಿ. ಸಾಮ್ರಾಟ್ ಬಂದ ಕೆಲವೇ ದಿನಕ್ಕೆ ವಿಶ್ವಗೋಸಮ್ಮೇಳನ. ಅದರ ಮೌಲ್ಯವನ್ನೇ ಸಾಮ್ರಾಟ್ ಹೆಚ್ಚಿಸಿಬಿಟ್ಟ. ಅನಂತರದ್ದು ಅವನ ವಿಜೃಂಭಣೆಯ ಇತಿಹಾಸ. ಶ್ರೀಮಠದ ಕಾಮದುಘಾದ ಮೂಲಪುರುಷ ಗಾಂಭೀರ್ಯವೇ ಮೈವೆತ್ತ ಮಹಾನಂದಿಯನ್ನೂ ಮೀರಿಸುವ ಜನಪ್ರಿಯತೆ ಅವನದಾಗಿಬಿಟ್ಟಿತ್ತು. ಎತ್ತರದ ಅವನ ಕೋಡುಗಳ ವಿನ್ಯಾಸ, ಅದನ್ನು ಹೊತ್ತ ಅವನ ನೋಟ, ನಡೆ ಎಲ್ಲವೂ ಎಲ್ಲರ ಮನಸ್ಸನ್ನು ಸೆರೆಹಿಡಿದವು.

ಅಂತಹ ಸಾಮ್ರಾಟ್ ಇನ್ನಿಲ್ಲವಾದ. ಕೆಲ ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಬಿದ್ದು ಒಂದು ಕೋಡನ್ನು ಮುರಿದುಕೊಂಡಿದ್ದೇ ನೆವವಾಯಿತು. ಅಲ್ಲಿಂದಲೇ ಸ್ವಲ್ಪ ಅನಾರೋಗ್ಯ ಅವನನ್ನು ಕಾಡುತ್ತಲೇ ಇತ್ತು. ಅಂತೂ ೨೨ರ ಹರೆಯದಲ್ಲಿ ಈ ಜನ್ಮ ಮುಗಿಸಿದ. ಇನ್ನು ಅವನ ನೆನಪಷ್ಟೇ...

"ಪ್ರಿಯ ಸಾಮ್ರಾಟ್, ಉನ್ನತ ಲೋಕದಲ್ಲಿ ನೀನಿರುವಿ. ಮತ್ತೆ ಬಾ ಈ ಕರಾಳ ಲೋಕಕ್ಕೆ ಎಂದು ಕರೆಯಲಾರೆವು. ಏಕೆಂದರೆ ನಾವು ಆಳುತ್ತಿರುವ ಈ ಪ್ರಪಂಚ ನಿನ್ನ ವಂಶಕ್ಕೆ ನಿರ್ಭೀತಿಯಿಂದ ಬದುಕಲು ಯೋಗ್ಯವಾಗಿಲ್ಲ. ಆದರೆ ನಿನ್ನಲ್ಲಿ ನಮ್ಮ ಪ್ರಾರ್ಥನೆ ಇಷ್ಟೇ....

ಅಲ್ಲಿಂದಲೇ ನಮ್ಮನ್ನು ಹರಸು. ನಮ್ಮ ಸ್ವಾರ್ಥಕ್ಕಾಗಿ ಅಲ್ಲ. ನಮಗಾಗಿ ವರ ಕೇಳಿಕೊಳ್ಳಲು ನಾವು ಸಮರ್ಥರು. ವರ ಬೇಡ. ನಿನ್ನ ವಂಶದ ರಕ್ಷಣೆಯ ಮನಸ್ಸು ನಮ್ಮದಾಗಲಿ; ಅದಕ್ಕೆ ಬೇಕಾದ ಬುದ್ಧಿಬಲ-ಬಾಹುಬಲಗಳು ನಮ್ಮದಾಗಲಿ; ಮನುಷ್ಯರಲ್ಲಿ ಮನುಷ್ಯತ್ವವಾದರೂ ಉಳಿಯಲಿ"

('ಧರ್ಮಭಾರತಿ'ಮಾಸ ಪತ್ರಿಕೆಯ ಸಂಪಾದಕ ಬರಹ.)

Wednesday 24 November, 2010

ನೃತ್ಯವೋ ಜಗವೆಲ್ಲ...

ಬ್ರಹ್ಮಾಂಡವೇ ನೃತ್ಯವೇದಿಕೆ; ಭಗವಂತನೇ ಸೂತ್ರಧಾರ; ಜೀವಗಳೆಲ್ಲ ನರ್ತಕರು; ಬದುಕಿನೆಲ್ಲ ನಡೆಯೇ ನರ್ತನದ ಪದವಿನ್ಯಾಸ; ಸೂತ್ರಧಾರನ ಸೂತ್ರಕ್ಕೆ ಒಪ್ಪುವಂತಿದ್ದರೆ ಅದು ಪ್ರೇಕ್ಷಕರ ಮನ ತಣಿಸುವ, ಹೃದಯ ಮಣಿಸುವ, ನರ್ತಕರನ್ನು ಸೂತ್ರದ ಸುಮವಾಗಿಸುವ ನೃತ್ಯ. ಸೂತ್ರದಿಂದ ಹೊರಬಂದರೆ ಅದು ತಪ್ಪು ನಡೆ, ತಪ್ಪಿದ ನಡೆ. ಹಾಗಾದಾಗ ಬದುಕು ಸೂತ್ರ ಹರಿದ ಗಾಳಿಪಟ.

ಜೀವನನೃತ್ಯದ ಈ ಸೂತ್ರಧಾರ ಸ್ವಯಂ ನೃತ್ಯಗಾರನೂ ಹೌದು. ಅವನ ತಾಂಡವ ಜೀವಗಳ ಸಂಹಾರಕ್ಕೆ ಕಾರಣವಾದರೆ, ಅವನ ಶಕ್ತಿರೂಪಿಣಿಯ ಲಾಸ್ಯ ಪ್ರಪಂಚವನ್ನೇ ಸೃಷ್ಟಿಸುವಂತದ್ದು. ಶ್ರೀಶಂಕರಭಗವತ್ಪಾದರು-
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ|
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ||
ಎಂದು ಲಾಸ್ಯ-ತಾಂಡವಗಳಲ್ಲಿನ ದೈವಕಾರ್ಯಗಳನ್ನು ವರ್ಣಿಸುತ್ತಾರೆ. ಮಾತೆ ಶಿವೆ ನರ್ತಿಸಿದರೆ ಅವಳ ವಾತ್ಸಲ್ಯಧಾರೆಯಲ್ಲಿ ಮಿಂದೆದ್ದ ಜೀವಲೋಕ ಹುಟ್ಟಿಕೊಳ್ಳುತ್ತದೆ; ತಂದೆ ಶಿವ ನರ್ತಿಸಿದರೆ ಎಲ್ಲ ಜೀವಿಗಳೂ ಅಸ್ತಿತ್ವ ಕಳೆದುಕೊಂಡು ಮಹಾಪ್ರಳಯ ಸಂಭವಿಸುತ್ತದೆ.

ಕೀರ್ತಿಶೇಷರಾದ ಶ್ರೀ ಡಿ. ವಿ. ಜಿ-
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ|
ಪ್ರತ್ಯೇಕಜೀವದಶೆಯವನಂಗಭಂಗಿ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ|
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ||
ಎನ್ನುತ್ತಾರೆ. ಅವರ ಕ್ರಾಂತದರ್ಶಿಯಾದ ಕವಿಮನಸ್ಸು ಜಗವೆಲ್ಲ ನಟರಾಜನ ನೃತ್ಯವೆಂದು ಗುರುತಿಸುತ್ತದೆ. ನೃತ್ಯದ ಅಂಗಭಂಗಿಗಳೆಲ್ಲಿ? ಎಂದರೆ ಜೀವದ ಜೀವನದ ದಶೆಗಳೆಲ್ಲ ಅವನ ಅಂಗಭಂಗಿಗಳೆನ್ನುತ್ತಾರೆ. ಕಣ್ಣನ್ನು ತೆರೆದು ಜಗವನ್ನು ಕಂಡರೆ ನೃತ್ಯದ ದೃಶ್ಯ, ಕಣ್ಮುಚ್ಚಿ ಅಂತರಂಗವನ್ನು ಕಂಡರೆ ನಿಶ್ಚಲತೆಯೆನ್ನುವ ಅವನ ನರ್ತಿಸುತ್ತಲೂ ನರ್ತಿಸದ, ನರ್ತಿಸದೆಯೂ ನರ್ತಿಸುವ ವಿಚಿತ್ರವಿನ್ಯಾಸವನ್ನು ಮತ್ತೆ ಶ್ರೀ ಡಿ. ವಿ. ಜಿ ಹೀಗೆನ್ನುತ್ತಾರೆ-
ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ|
ಕಣ್ಮುಚ್ಚಿ ನೋಡು, ನಿಶ್ಚಲಶುದ್ಧಸತ್ತ್ವ||
ಉನ್ಮುಖನು ನೀನೆರಡು ಜಗಕಮಿರುತಿರುವಾಗ|
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ||

ಅವನ ಸೃಷ್ಟಿಯೆನ್ನುವ ನರ್ತನವೇ ವಿಚಿತ್ರ-ವಿಶಿಷ್ಟ. ಎಲ್ಲವನ್ನೂ ಎಲ್ಲರನ್ನೂ ತಣಿಸುವ ರಚನೆಯದು. ಅಲ್ಲಿ ಎಲ್ಲ ಜೀವಗಳಿಗೂ ಸುಖವಿದೆ-ಸಂತೋಷವಿದೆ-ನೆಮ್ಮದಿಯಿದೆ. ಸಿಹಿ ರುಚಿಯೆನಿಸಿದವಗೆ ಸಿಹಿಯಿದೆ; ಕಹಿ ಪಥ್ಯವೆನಿಸಿದರೆ ಕಹಿಯೂ ಇದೆ. ಕರುಣೆಯಲ್ಲಿ ರಸ ಕಾಣುವುದಾದರೆ ಕರುಣೆಯಿದೆ; ಶೃಂಗಾರರಸಜೀವಿಗೆ ಶೃಂಗಾರವೂ ಇದೆ. ಉಪ್ಪು-ಖಾರಗಳು; ಹುಳಿ-ಒಗರುಗಳು; ಅದ್ಭುತ-ವೀರಗಳು; ಹಾಸ್ಯ-ಭಯಾನಕಗಳು; ರೌದ್ರ-ಭೀಭತ್ಸಗಳು ಎಲ್ಲವೂ ಇದೆ ಸೃಷ್ಟಿನೃತ್ಯದಲ್ಲಿ. ಇದೆಲ್ಲವನ್ನೂ ಮೀರಿದ ಮಧುರಶಾಂತವೂ ಎಲ್ಲದರೊಂದಿಗೆ ಮೇಳೈಸಿದೆ.

ಇಂತಹ ಸೃಷ್ಟಿನೃತ್ಯದ ಪ್ರತಿಕೃತಿ ಅಥವಾ ಪ್ರತಿನಿಧಿ ನಮ್ಮ ಭಾರತೀಯ ನೃತ್ಯಕಲೆ. ಇಲ್ಲಿ ಸೃಷ್ಟಿಯ ಕತೆಯಿದೆ; ಸ್ಥಿತಿಯ ವಿಸ್ತಾರವಿದೆ; ಲಯದ ರುದ್ರತೆಯಿದೆ. ಮಹೋನ್ನತ ಸತ್ತ್ವರ ಚರಿತೆಯಿದೆ; ದುಷ್ಟರ ದೌಷ್ಟ್ಯವಿದೆ. ದುಷ್ಟತನವಳಿದು ಸತ್ತ್ವ ಬೆಳಗಿದ ಜೀವನಪಾಠವಿದೆ. ಇತಿಹಾಸವಿದೆ; ಪುರಾಣವಿದೆ. ಭಾವವಿದೆ; ಭಾಷೆಯಿದೆ. ರಸವಿದೆ; ರಾಗವಿದೆ. ಸಾಧನೆಯಿದೆ; ಸಿದ್ಧಿಯಿದೆ... ಹೀಗೆ ಬದುಕಿನ ಎಲ್ಲವೂ ಇದ್ದರೂ ಇರುವ ಎಲ್ಲದಕ್ಕೂ ಸೂತ್ರಬದ್ಧತೆಯಿದೆ. ಆ ಸೂತ್ರದಲ್ಲಿ ಪೋಣಿಸಿದ ಸುಮಗಳಾಗಿ ಈ ಎಲ್ಲವೂ ವಿಶ್ವಚೇತನದ ಕಂಠವನ್ನು ಅಲಂಕರಿಸುವ ಮಹದುದ್ದೇಶ ನೃತ್ಯಕ್ಕೆ ದಿವ್ಯತೆಯನ್ನು ಮೇಳೈಸಿದೆ.

ಅಂತಹ ನೃತ್ಯಕ್ಕೂ, ನಮ್ಮ ಒಳಹೊರಗೆ ದಿವ್ಯನೃತ್ಯಗೈಯುವ ಶಿವ-ಶಿವೆಯರಿಗೂ, ಅದನ್ನು ನಮಗಿತ್ತ ಭರತಮುನಿಗೂ, ಉಳಿಸಿ-ಬೆಳಸಿದ ಇತಿಹಾಸ ಕಂಡ ಸಹಸ್ರ ಸಹಸ್ರ ನೃತ್ಯಸಾಧಕರಿಗೂ, ವೈಪರೀತ್ಯದ ಇಂದಿನ ಬದುಕಿನಲ್ಲೂ ನೃತ್ಯಕ್ಕೆ ಜೀವಂತಿಕೆಯನ್ನೀಯುತ್ತೀರುವ ಎಲ್ಲ ನೃತ್ಯಪಟುಗಳಿಗೂ ಲೋಕ ನಿರಂತರ ಕೃತಜ್ಞ.

'ಭರತಾಮೃತಮ್' ಸ್ಮರಣ ಸಂಚಿಕೆಯಲ್ಲಿ ಪ್ರಕಟಿತ ಬರಹ.

Tuesday 16 November, 2010

ಬಾಯಿಂದ ಹೊರಬಾರದಿರಲಿ; ಹೃದಯಕ್ಕೂ ಇಳಿಯದಿರಲಿ; ಜೀರ್ಣವಾಗಲದು ಕಂಠದಲಿ;

ಮನುಷ್ಯನಿಗೆ ಮಾತಿನ ತೆವಲು. ಮಾತನಾಡುತ್ತಲೇ ಇರಬೇಕು. ಮಾತಿಗೊಂದು ಉದಾತ್ತ ಉದ್ದೇಶವಿಲ್ಲದಿದ್ದಾಗ, ಅದಕ್ಕೊಂದು ಗಾಂಭೀರ್ಯವೂ ಇರುವುದಿಲ್ಲ. ಮಾತನಾಡಬೇಕು ಅಷ್ಟೆ. ಆದರೆ ಮಾತನಾಡಲು ವಿಷಯ ಬೇಕು. ವಿಷಯಾಧಾರಿತವಾಗಿ ಬಹಳ ಹೊತ್ತು ಮಾತನಾಡುವುದು ಕಷ್ಟವೇ. ಆಗ ಆರಂಭವಾಗುವುದೇ ಲಘುವಾದ ಮಾತುಕತೆಗಳು. ಅದಕ್ಕೆ ಸಿಗುವ ಆಶ್ರಯವೆಂದರೆ ವ್ಯಕ್ತಿವಿಮರ್ಶೆ. ಬಹಳ ಸುಲಭವಾದದ್ದಿದು. ಯಾರದೋ ನಡತೆ, ಮಾತು, ಕಾರ್ಯಗಳ ಕುರಿತು ಆಡಿಕೊಳ್ಳುವುದು. ಟೀಕೆಯೇ ಉದ್ದೇಶವಾಗಿಬಿಟ್ಟರೆ ಎಲ್ಲವನ್ನೂ ಟೀಕಿಸಬಹುದು. ನೋಡುವ ನೋಟವನ್ನು ಅವಲಂಬಿಸಿದೆ ಇದು. ನಕಾರಾತ್ಮಕವಾದ ನೋಟಕ್ಕೆ ಎಲ್ಲೆಲ್ಲೂ ತಪ್ಪೇ ಕಾಣುವುದು. ಹಗುರ ಮಾತುಗಾರಿಕೆಗೆ ನಕಾರನೊಟವೂ ಸೇರಿಬಿಟ್ಟರೆ ಮುಗಿಯಿತು. ಯಾರದೋ ಬದುಕು ಬಯಲಿಗೆ ಬಂದಿತೆಂದೇ ಅರ್ಥ. ಅಷ್ಟೇ ಅಲ್ಲದೇ ಪ್ರತಿ ವ್ಯಕ್ತಿಯಲ್ಲಿಯೂ ಒಂದಿಷ್ಟು ದೋಷಗಳಿರುವುದು ಸಹಜವೇ. ಹಾಗಿರಬಾರದೆನ್ನುವುದು ಆದರ್ಶವಾದರೂ ವಾಸ್ತವ ಹಾಗಿರುವುದಿಲ್ಲ. ವ್ಯಕ್ತಿಯ ಇಂತಹ ದೌರ್ಬಲ್ಯಗಳು ಮಾತನಾಡುವವರಿಗೆ ಸಿಕ್ಕಿಬಿಟ್ಟರಂತೂ ಮಾತು ಮಹಾನದಿಪ್ರವಾಹವಾಗಿ ಹರಿದು ಬಿಡುತ್ತದೆ; ಅಕ್ಕಪಕ್ಕದ್ದನ್ನೆಲ್ಲ ಕೊಚ್ಚಿಕೊಂಡು. ಇದರಿಂದ ಕಷ್ಟಕ್ಕೊಳಗಾಗುವುದು ವ್ಯಕ್ತಿಯ ಬದುಕು.
ಮಾತು ಹೀಗಿಲ್ಲದಿರುವುದು ಒಳಿತು. ಅಂತಹ ಮಾತು ಸೊಗಸು ಕೂಡ. ಯಾರದೋ ಕುರಿತು ಮಾತನಾಡುವುದು ಸರಿಯಲ್ಲ. ಅದರಲ್ಲೂ ನಕಾರಾತ್ಮಕ ಮಾತುಗಳಂತೂ ಎಷ್ಟಕ್ಕೂ ಸರಿಯಲ್ಲ. ನಮ್ಮ ಪ್ರತಿಚರ್ಯೆಯೂ ಉಳಿದವರಿಗೆ ಒಳಿತಾಗುವಂತಿರಬೇಕು. ಕೊನೆಯ ಪಕ್ಷ ಕೆಡುಕಂತೂ ಆಗಬಾರದಲ್ಲ. ಅಲ್ಲದೆ ನಮ್ಮ ಹೃದಯದಲ್ಲಿ ಇಂತಹ ಮಾತನಾಡುತ್ತಾ ಎಲ್ಲರ ಕುರಿತು ದುರ್ಭಾವನೆಗಳೇ ತುಂಬಿಹೋಗಿಬಿಡಬಹುದು. ಅದು ಅತ್ಯಂತ ಅಪಾಯಕಾರಿ. ಹೃದಯದ ಮೃದುತ್ವ ನಾಶವಾಗಿಬಿಡಬಹುದು. ಮಾನವಕುಲದ ಮೇಲಿನ ನಂಬಿಕೆ ಕುಸಿಯಬಹುದು. ಸುತ್ತಲಿನವರ ಕುರಿತಾದ ವಿಶ್ವಾಸವೇ ನಶಿಸಿದ ಮೇಲೆ ಬದುಕು ಮಾಡುವುದು ಕಷ್ಟವಾದೀತು. ಅಲ್ಲದೆ ಹಾಗೆ ಮಾತನಾಡುವವರ ಕುರಿತು ಜನರಿಗೂ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಎದುರಿಗೆ ಸಹಜವಾಗಿಯೇ ಇದ್ದರೂ ಹಿಂದಿನಿಂದ ಅವರನ್ನೂ ಟೀಕಿಸುತ್ತಾರೆ. ಎಂಬಲ್ಲಿಗೆ ಅಂತಹ ಮಾತು ಮಾತನಾಡುವವರಿಗೂ ಒಳಿತಲ್ಲ.
ಶಿವನಂತಿರಬೇಕು ವಿಷಯದಲ್ಲಿ. ಅದು ಸಮುದ್ರಮಥನದ ಸಂದರ್ಭ. ಅಮೃತಕ್ಕಾಗಿ ದೇವಾಸುರರು ಪ್ರಯತ್ನಿಸುತ್ತಿದ್ದರು. ಕಡೆದು ಕಡೆದು ಇನ್ನೇನು ಅಮೃತ ಬಂದೀತೆಂದು ಕಾಯುತ್ತಿರುವಾಗ ಹೊರಬಂದಿದ್ದು ಹಾಲಾಹಲವಿಷ.
ಅದೆಷ್ಟು ಭಯಂಕರವೆಂದರೆ, ಕುಡಿದವರು ಮಾತ್ರ ಸಾಯುವುದಲ್ಲ; ಅದು ತಾನಾಗಿಯೇ ಜಗತ್ತನ್ನು ಸುಡತೊಡಗಿತು. ಆಗಲ್ಲಿಗೆ ಪರಶಿವನ ಆವಿರ್ಭಾವವಾಯಿತು. ವಿಷವನ್ನು ಶಿವ ಕುಡಿದ. ಒಳಗಿಳಿದರೆ ಶಿವನ ಹೃದಯದ ಅಮೃತಸಮುದ್ರ ಕಲಕೀತು. ಹೊರಹಾಕಿದರೆ ಸೃಷ್ಟಿ ಸುಟ್ಟೀತು. ಹಾಗಾಗಿ ತನ್ನ ಕಂಠದಲ್ಲೇ ಅದನ್ನವ ನಿಲ್ಲಿಸಿಕೊಂಡ. ಬೇರೆಯವರ ದೋಷವನ್ನು ಹೀಗೆ ಗ್ರಹಿಸಬೇಕು. ಹೃದಯಕ್ಕೆ ಅದನ್ನು ಇಳಿಸಿಕೊಳ್ಳಬಾರದು. ಹೊರಗೂ ಉಗುಳಬಾರದು. ಕಂಠದಲ್ಲಿಯೇ ಜೀರ್ಣಗೊಳಿಸಿಬಿಡಬೇಕು. ಅಂದರೆ ವ್ಯಕ್ತಿಯ ಕುರಿತಾಗಿ ದುರ್ಭಾವ ತಾಳಬಾರದು. ದೋಷ-ದೌರ್ಬಲ್ಯಗಳು ಅವನಿಗೆ ಸೇರಿದ್ದು. ಅದವನ ಪುರ್ವಾರ್ಜಿತ ಕರ್ಮ. ನಮಗೇಕೆ ಅದರ ಉಸಾಬರಿ. ಹಾಗೆಯೇ ಅದರ ಕುರಿತು ಆಡಲೂಬಾರದು. ಅದು ಆಡುವವರಿಗೂ, ಆಡಿಸಿಕೊಂಡವರಿಗೂ, ಸಮಾಜಕ್ಕೂ ಮಾರಕ.
ಮುಖೇನ ನೋದ್ಗಿರತ್ಯೂರ್ಧ್ವಂ ಹೃದಯೇನ ನಯತ್ಯಧಃ|
ಜರಯತ್ಯಂತರೇ ಸಾಧುರ್ದೋಷಂ ವಿಷಮಿವೇಶ್ವರಃ||
'ತ್ರಿವಿಕ್ರಮ' ಮಾಸಪತ್ರಿಕೆಯ ಸಂಪಾದಕ ಬರಹ.

Friday 5 November, 2010

ಟಿ.ವಿ. ಬೇಕೇ?

ಹೀಗೊಂದು ಪ್ರಶ್ನೆಗೆ ನಮಗೆಲ್ಲಿದೆ ಅವಕಾಶ ?
ಅನ್ನುವುದು ವಾಸ್ತವ ಪ್ರಶ್ನೆ. ಯಾಕೆಂದರೆ - ಬದುಕಿನ ಎಲ್ಲದರೊಂದಿಗೆ ಹೆಣೆದುಕೊಂಡಿರುವುದನ್ನು ಬೇಕು ಬೇಡದ ಜಿಜ್ಞಾಸೆಗೆ ಒಳಪಡಿಸುವುದು ಹೇಗೆ?
ಟಿ.ವಿ.ಯ ಆವಶ್ಯಕತೆಯನ್ನು ವಿಮರ್ಶೆಗೆ ಒಳಪಡಿಸುವ ಮೊದಲು ಮನೋರಂಜನೆಯ ಸ್ವರೂಪ ನಿಷ್ಕರ್ಷೆಯಾಗಬೇಕು.
ದಿನವಿಡಿಯ ಮನೋರಂಜನೆ ನಮ್ಮ ಸಂಸ್ಕೃತಿಗೆ ಪಥ್ಯವಾದದ್ದಂತೂ ಅಲ್ಲ. ಯಾವ ಜೀವನವಿಧಾನವೂ ಇದನ್ನು ಒಪ್ಪಿಕೊಳ್ಳಲಾರದು. ಹೇಗೆ ಒಪ್ಪಲು ಸಾಧ್ಯ ? ಅದು ಜೀವನದ ಒಂದು ಅಂಗ ಮಾತ್ರ ಆಗಿರಬೇಕಷ್ಟೇ.
ಮನೋರಂಜನೆಯನ್ನೇ ವೃತ್ತಿಯಾಗಿ ಸ್ವೀಕರಿಸುವವರ ವಿಷಯ ಬೇರೆ ; ಆದರೆ ಕೇಳುಗ ಅಥವಾ ನೋಡುಗ ಮನೋರಂಜನೆಯನ್ನೇ ನಿತ್ಯಕಾಯಕವಾಗಿಸಿಕೊಳ್ಳುವುದು ಸರಿಯಲ್ಲ. ಬದಲಾದ ಜೀವನಶೈಲಿ ಮನೋರಂಜನೆಯನ್ನೇ ಬದುಕಿನಲ್ಲಿ ಪ್ರಧಾನವಾಗಿಸಿಕೊಂಡಿದೆ. ಇದರಿಂದಾಗಿ ಊಟಕ್ಕೆ ಉಪ್ಪಿನಕಾಯಿಯ ಬದಲು ಉಪ್ಪಿನಕಾಯಿಯೇ ಊಟವಾಗಿದೆ.
ಮನಸ್ಸಿಗೆ ವೃತ್ತಿ ಅಥವಾ ಪ್ರವೃತ್ತಿಯ ಕಾರ್ಯಗಳಿಂದ ಏಕತಾನತೆ ಒದಗಿದಾಗ, ಅನ್ಯಾನ್ಯ ಕಾರಣಗಳಿಂದಾಗಿ ಬೇಸರ-ನೋವು-ನಿರಾಸೆಗಳು ಮನಸ್ಸನ್ನು ಆಕ್ರಮಿಸಿದಾಗ, ಮತ್ತೊಮ್ಮೆ ಹೊಸತನ ತುಂಬಿಕೊಳ್ಳಲು ಮನೋರಂಜನೆ ಅತ್ಯವಶ್ಯ. ಹಾಗಾಗದೆ ವೃತ್ತಿಯಷ್ಟೇ ಟಿ.ವಿ. ವೀಕ್ಷಣೆಯು ಪ್ರಮುಖವಾದರೆ ?

ಹಾಗಾಗಿ ಮನೋರಂಜನೆಯ ಈ ಸಿದ್ಧಾಂತ ಬದಲಾಗದೆ ಟಿ.ವಿ. ಉತ್ತಮಗೊಳ್ಳುವುದು ಅಸಾಧ್ಯ. ಟಿ.ವಿ.ಯ ಪ್ರಯೋಜನ ಖಂಡಿತವಾಗಿ ಮನೋರಂಜನೆ ಮಾತ್ರವಲ್ಲ, ಶಿಕ್ಷಣ-ಮಾಹಿತಿ ಸಂವಹನ-ಕಲಾಪ್ರದರ್ಶನ-ಸುದ್ದಿಪ್ರಸಾರ-ಸಾರ್ವಜನಿಕರ ಅಭಿಪ್ರಾಯ ಪ್ರಕಟಣೆಯ ಸಾಧ್ಯತೆ.... ಹೀಗೆ ಅದು ಬಹುವಿಧ ಪ್ರಯೋಜನಕಾರಿ.
ಆದರೆ ಇದೆಲ್ಲದರ ಉಪಯೋಗವನ್ನು ಬಹುಜನತೆ ಹೇಗೆ ಪಡೆದುಕೊಳ್ಳುತ್ತಿದೆ ? ಮನೆ-ಮನೆಗಳ ಟಿ.ವಿ. ಇವೆಲ್ಲದಕ್ಕಿಂತ ಧಾರಾವಾಹಿ-ಸಿನಿಮಾ-ಸಿನಿಮಾಧಾರಿತ ಕಾರ್ಯಕ್ರಮಗಳಿಗೆ ತನ್ನನ್ನು ತೆರೆದುಕೊಂಡಿರುತ್ತದೆ.
ಜೀವನಕ್ಕೊಂದು ಆದರ್ಶದ ಚೌಕಟ್ಟು ನಿರ್ಮಿಸುವ ಇರಾದೆಯೇ ಇಲ್ಲದ ಈ ಕಾರ್ಯಕ್ರಮಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿವೆ. ಕೌಟುಂಬಿಕಪರಿಸರ ಪ್ರಧಾನವಾಗಿ ಟಿ.ವಿ.ಯಿಂದಾಗಿ ಛಿದ್ರಗೊಳ್ಳುತ್ತಿದೆ. ಕುಟುಂಬ ಸದಸ್ಯರ ಪರಸ್ಪರ ಮಾತುಕತೆಗಾಗಲೀ, ಮನೆಗೆ ಬಂದವರೊಂದಿಗೆ ಮಾತನಾಡುವುದಕ್ಕಾಗಲೀ ಅವಕಾಶವಿಲ್ಲದಂತೆ ಟಿ.ವಿ.ಯ ದೃಶ್ಯ ಮತ್ತು ಶಬ್ದಗಳು ಮನೆಯನ್ನು ತುಂಬಿಕೊಳ್ಳುತ್ತಿವೆ.
ಹಾಗಾಗಿ ಮರುಚಿಂತನೆ ಇಂದಿನ ತುರ್ತು ಆವಶ್ಯಕತೆ-
“ಇಂದು ಇರುವ ವಿಧಾನದಲ್ಲಿ ನಮಗೆ ಟಿ.ವಿ. ಬೇಕೇ ?”

Monday 1 November, 2010

ತಮವ ಕಳೆಯಲಿ ದೀಪಾವಳೀ

ದೀಪಾವಳಿ ಮತ್ತೆ ಬಂದಿದೆ. ಅದು ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ನಾವು ಹುಟ್ಟುವ ಮೊದಲೂ ಬರುತ್ತಿತ್ತು; ನಾವು ಇಲ್ಲವಾದರೂ ಬರುತ್ತದೆ. ನಾವಿರುವಾಗಲೂ ಬರುತ್ತಲೇ ಇದೆ. ಕಾಲಾತೀತಪುರುಷನ ಪ್ರೀತಿಯ ಹರಿವು ಅದು. ಅವನ ಪ್ರೀತಿ ಅದಮ್ಯ. ಅಂದರೆ ಅದನ್ನು ದಮನ ಮಾಡಲು ಸಾಧ್ಯವೇ ಇಲ್ಲ. ಪ್ರೀತಿಯನ್ನು ದಮನ ಮಾಡಲು ಇರುವ ಅತ್ಯಂತ ಪರಿಣಾಮಕಾರಿ ಆಯುಧವೆಂದರೆ ನಿರ್ಲಕ್ಷ್ಯ. ಪ್ರೀತಿ ಎಲ್ಲವನ್ನೂ ಸಹಿಸುತ್ತದೆ, ನಿರ್ಲಕ್ಷ್ಯ್ವನ್ನು ಮಾತ್ರ ಸಹಿಸಲಾರದು. ನಿರ್ಲಕ್ಷ್ಯ ಇರುವಲ್ಲಿ ಪ್ರೀತಿ ಇರದು. ಆದರೆ ಅವನ ಪ್ರೀತಿ ಇದನ್ನು ಮೀರಿದ್ದು. ನಮ್ಮೆಲ್ಲ ನಿರ್ಲಕ್ಷ್ಯವನ್ನೂ ನಿರ್ಲಕ್ಷ್ಯೈಸಿ ಅವನ ಪ್ರೀತಿ ಹರಿಯುತ್ತಲೇ ಇರುತ್ತದೆ.

ಪ್ರತಿದಿನದ ಸಂಧ್ಯಾಕಾಲಗಳು, ವರ್ಷವಿಡೀ ನಿಯತವಾಗಿ ಬರುವ ಹಬ್ಬಗಳು-ಹರಿದಿನಗಳು ಇವೆಲ್ಲ ಪ್ರೀತಿಯ ಅಭಿಜ್ಞಾನಗಳು. ಅಷ್ಟೇ ಅಲ್ಲ ಅವು ನಮ್ಮ ಏಳ್ಗೆಯ ಸಾಧನಗಳು ಕೂಡ. ಕೊಡುವವ ಇದನ್ನು ಕೊಡುತ್ತಲೇ ಇದ್ದಾನೆ. ನಾವು ಬಳಸಿಕೊಳ್ಳುತ್ತಿಲ್ಲವೆನ್ನುವುದು ದೌರ್ಭಾಗ್ಯ.

ಮತ್ತೆ ದೀಪಾವಳಿಗೆ ಬರೋಣ. ಅದಂತೂ ಮತ್ತೆ ಬಂದಿದೆ. ನಾವು ನೋಡದಿದ್ದರೂ ಅದು ಬೆಳಗೇ ಬೆಳಗುತ್ತದೆ. ನಾವು ಕಣ್ದೆರೆದರೆ ಬೆಳಕು ಕಾಣಿಸೀತು, ಬೆಳಕಿನಲ್ಲಿ ಕಾಣಬೇಕಾದ್ದೂ ಕಾಣಿಸೀತು.

ನಾಲ್ಕು ಸಾಮಯಿಕ ಸಮಸ್ಯೆಗಳ ಕತ್ತಲೆಯನ್ನು ಈ ದೀಪಾವಳಿ ಬೆಳಗಬೇಕಿದೆ:

ಮೊದಲನೆಯದು...
ನಮ್ಮ ರಾಜ್ಯರಾಜಕೀಯ ಜಂಜಡ. ದಿನದಿಂದ ದಿನಕ್ಕೆ ಅದು ವಿಷಮಿಸುತ್ತಿದೆ. ಆರೋಪ-ಪ್ರತ್ಯಾರೋಪಗಳು, ತಂತ್ರ-ಪ್ರತಿತಂತ್ರಗಳು ಕ್ಷಣಕ್ಷಣದ ಬೆಳವಣಿಗೆಗಳಾಗಿವೆ. ಮುಂದೆ ಏನಾದೀತೆನ್ನುವ ಕಲ್ಪನೆ ಪ್ರಜೆಗಳಿಗಿರಲಿ ನಾಯಕರಿಗೇ ತಿಳಿಯದಾಗಿದೆ. ಎಲ್ಲರ ಹೃದಯದಲ್ಲಿಯೂ ಕತ್ತಲೆ ಮುಸುಕಿದೆ. ದೀಪಾವಳಿಯ ದೀಪಮಾಲೆ ನಮ್ಮ ನಾಯಕರ ಹೃದಯವನ್ನು ಬೆಳಗಲಿ; ದ್ವೇಷಾಸೂಯೆಗಳು ಅಳಿದು ಉತ್ತಮ ನಾಯಕತ್ವ ನಮಗೆ ಸಿಗಲಿ.

ಎರಡನೆಯದು...
ಕಾಮನ್ವೆಲ್ತ್ ಕ್ರೀಡಾಕೂಟ ಭಾರತಕ್ಕೆ ಸಿಕ್ಕ ಅಪೂರ್ವ ಅವಕಾಶವದು. ಜಾಗತಿಕ ಸ್ತರದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾದದ್ದು. ಕ್ರೀಡಾಕೂಟ ಆಯೋಜನೆಯ ಯಶಸ್ಸಿನಿಂದ ಚೀನಾದ ಕುರಿತಾಗಿ ವಿದೇಶಗಳಲ್ಲಿ ಮೂಡಿದ್ದಂತ ಭಾವನೆ ಭಾರತದ ಕುರಿತೂ ಮೂಡುವಂತಾಗಬೇಕಿತ್ತು. ಆದರೆ ಪೂರ್ವಸಿದ್ಧತೆಯ ಹಂತದ ದೊಂಬರಾಟ ದಿಗ್ಭ್ರಮೆ ಮೂಡಿಸಿತ್ತು. ಕ್ರೀಡಾಕೂಟ ಅಪಯಶಸ್ಸನ್ನು ಕಟ್ಟಿಕೊಳ್ಳುತದೆಯೇನೋ ಎಂದು ಅನ್ನಿಸಿಬಿಟ್ಟಿತು. ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಗಳ ಆರೋಪ ವಿಜೃಂಭಿಸಿತು. ಏನೇ ಇರಲಿ ಕ್ರೀಡಾಕೂಟ ಯಶಸ್ವಿಯಾಯಿತು. ಭಾರತದ ಕ್ರೀಡಾಪಟುಗಳು ದೇಶದ ಕೀರ್ತಿಯನ್ನು ಹೆಚ್ಚಿಸಿದರು. ಈಗ ಭ್ರಷ್ಟಾಚಾರದ ತನಿಖೆಯ ಮಾತುಗಳು ಕೇಳಿಬರುತ್ತಿದೆ. ದೇಶದ ಮರ್ಯಾದೆ ಕಾಯುವವರ ಬುದ್ಧಿಯ ಕತ್ತಲೆಯಂತೂ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ. ದೀಪಾವಳಿ ಅದನ್ನು ಕಳೆಯಲಿ; ಬದ್ಧತೆಯ ಬೆಳಕು ಬೆಳಗಲಿ.

ಮೂರನೆಯದು...
ಅಯೋಧ್ಯಾ ವಿವಾದದ ನಿಟ್ಟುಸಿರು. ಏನೋ ಆದೀತೆಂದು ಬಗೆದಿದ್ದ ನ್ಯಾಯಾಲಯದ ತೀರ್ಪು ಏನೂ ಆಗದಂತೆ ಮಾಡಿತು. ನಾಯಕರಿಂದ ಸಾಮಾನ್ಯರವರೆಗೆ ಎಲ್ಲರೂ ಕ್ಷಣಕಾಲ ನೆಮ್ಮದಿ ಕಂಡರು. ಹಾಗೆಂದು ಉಭಯ ಪಕ್ಷದ ಎಲ್ಲರಿಗೂ ತೀರ್ಪು ಸಮಾಧಾನ ತಂದಿಲ್ಲ. ಅಸಮಾಧಾನಗೊಂಡವರು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಇದೇ ಅಂತಿಮ ತೀರ್ಪಾಗಲಿ ಎನ್ನುತ್ತಿದ್ದಾರೆ. ಮಾತುಕತೆಯಲ್ಲಿ ಪರಿಹಾರ ಕಂಡುಕೊಳ್ಳುವ ಮಾತೂ ಕೇಳಿಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾದುದು ನ್ಯಾಯ. ಜನ್ಮಭೂಮಿ ವಿಚಾರದಲ್ಲಿ ನ್ಯಾಯ ಗೆಲ್ಲಬೇಕಷ್ಟೆ. ಎಲ್ಲರ ವಿವೇಕವನ್ನು ದೀಪಾವಳಿ ಬೆಳಗಲಿ; ನ್ಯಾಯಕ್ಕೆ ಸ್ವಯಂಪ್ರೇರಿತವಾಗಿ ತಲೆಬಾಗುವಂತಾಗಲಿ.

ನಾಲ್ಕನೆಯದು...
ಗೋಹತ್ಯಾ ನಿಷೇಧ ವಿಚಾರ. ಕರ್ನಾಟಕ ರಾಜ್ಯ ಸರ್ಕಾರ ಅಂತದ್ದೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ನೀರೀಕ್ಷೆಯಂತೆ ಪರ-ವಿರೋಧದ ಚಟುವಟಿಕೆಗಳು ನಡೆದಿದೆ. ಹೇಳಿಕೆ-ಪ್ರತಿಹೇಳಿಕೆ, ಪ್ರತಿಭಟನೆ ಎನೆಲ್ಲ ನಡೆದಿದೆ. ಆದರೆ ಸೈದ್ಧಾಂತಿಕ ಚರ್ಚೆ-ಚರ್ಯೆಗಳಿಗಿಂತ ರಾಜಕಿಯ ಹಿತಾಸಕ್ತಿಯೇ ಪ್ರಕರಣವನ್ನು ವ್ಯಾಪಿಸಿದೆ. ಗೋಮಾತೆಯ ಜೀವ ಉಳಿಸುವಲ್ಲಿ ಸ್ವಾರ್ಥ ಮರೆಯಾಗಬೇಕಿದೆ. ತಿನ್ನುವುದೇ ಬದುಕೆನ್ನುವ ಜೀವನಸಿದ್ಧಾಂತವಂತೂ ಅಚ್ಚರಿ ಮೂಡಿಸುತ್ತಿದೆ. ಇಂತಹ ಅರೆಬೆಂದ ವಿಚಾರಗಳಿಂದ ಗೋವನ್ನು ಕೊಲ್ಲುವ ಹಕ್ಕಿನ ಪ್ರತಿಪಾದನೆ ವಿಚಿತ್ರವೇ ಸರಿ. ದೀಪಾವಳಿ ಅವರೆಲ್ಲರ ಬದುಕಿನ ಕತ್ತಲೆಯನ್ನು ಕಳೆಯಲಿ; ಗೋವಿನ ಬೆಳಕು ಅವರೆಲ್ಲರನ್ನೂ ವ್ಯಾಪಿಸಲಿ.