Wednesday, 24 November, 2010

ನೃತ್ಯವೋ ಜಗವೆಲ್ಲ...

ಬ್ರಹ್ಮಾಂಡವೇ ನೃತ್ಯವೇದಿಕೆ; ಭಗವಂತನೇ ಸೂತ್ರಧಾರ; ಜೀವಗಳೆಲ್ಲ ನರ್ತಕರು; ಬದುಕಿನೆಲ್ಲ ನಡೆಯೇ ನರ್ತನದ ಪದವಿನ್ಯಾಸ; ಸೂತ್ರಧಾರನ ಸೂತ್ರಕ್ಕೆ ಒಪ್ಪುವಂತಿದ್ದರೆ ಅದು ಪ್ರೇಕ್ಷಕರ ಮನ ತಣಿಸುವ, ಹೃದಯ ಮಣಿಸುವ, ನರ್ತಕರನ್ನು ಸೂತ್ರದ ಸುಮವಾಗಿಸುವ ನೃತ್ಯ. ಸೂತ್ರದಿಂದ ಹೊರಬಂದರೆ ಅದು ತಪ್ಪು ನಡೆ, ತಪ್ಪಿದ ನಡೆ. ಹಾಗಾದಾಗ ಬದುಕು ಸೂತ್ರ ಹರಿದ ಗಾಳಿಪಟ.

ಜೀವನನೃತ್ಯದ ಈ ಸೂತ್ರಧಾರ ಸ್ವಯಂ ನೃತ್ಯಗಾರನೂ ಹೌದು. ಅವನ ತಾಂಡವ ಜೀವಗಳ ಸಂಹಾರಕ್ಕೆ ಕಾರಣವಾದರೆ, ಅವನ ಶಕ್ತಿರೂಪಿಣಿಯ ಲಾಸ್ಯ ಪ್ರಪಂಚವನ್ನೇ ಸೃಷ್ಟಿಸುವಂತದ್ದು. ಶ್ರೀಶಂಕರಭಗವತ್ಪಾದರು-
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ|
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ||
ಎಂದು ಲಾಸ್ಯ-ತಾಂಡವಗಳಲ್ಲಿನ ದೈವಕಾರ್ಯಗಳನ್ನು ವರ್ಣಿಸುತ್ತಾರೆ. ಮಾತೆ ಶಿವೆ ನರ್ತಿಸಿದರೆ ಅವಳ ವಾತ್ಸಲ್ಯಧಾರೆಯಲ್ಲಿ ಮಿಂದೆದ್ದ ಜೀವಲೋಕ ಹುಟ್ಟಿಕೊಳ್ಳುತ್ತದೆ; ತಂದೆ ಶಿವ ನರ್ತಿಸಿದರೆ ಎಲ್ಲ ಜೀವಿಗಳೂ ಅಸ್ತಿತ್ವ ಕಳೆದುಕೊಂಡು ಮಹಾಪ್ರಳಯ ಸಂಭವಿಸುತ್ತದೆ.

ಕೀರ್ತಿಶೇಷರಾದ ಶ್ರೀ ಡಿ. ವಿ. ಜಿ-
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ|
ಪ್ರತ್ಯೇಕಜೀವದಶೆಯವನಂಗಭಂಗಿ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ|
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ||
ಎನ್ನುತ್ತಾರೆ. ಅವರ ಕ್ರಾಂತದರ್ಶಿಯಾದ ಕವಿಮನಸ್ಸು ಜಗವೆಲ್ಲ ನಟರಾಜನ ನೃತ್ಯವೆಂದು ಗುರುತಿಸುತ್ತದೆ. ನೃತ್ಯದ ಅಂಗಭಂಗಿಗಳೆಲ್ಲಿ? ಎಂದರೆ ಜೀವದ ಜೀವನದ ದಶೆಗಳೆಲ್ಲ ಅವನ ಅಂಗಭಂಗಿಗಳೆನ್ನುತ್ತಾರೆ. ಕಣ್ಣನ್ನು ತೆರೆದು ಜಗವನ್ನು ಕಂಡರೆ ನೃತ್ಯದ ದೃಶ್ಯ, ಕಣ್ಮುಚ್ಚಿ ಅಂತರಂಗವನ್ನು ಕಂಡರೆ ನಿಶ್ಚಲತೆಯೆನ್ನುವ ಅವನ ನರ್ತಿಸುತ್ತಲೂ ನರ್ತಿಸದ, ನರ್ತಿಸದೆಯೂ ನರ್ತಿಸುವ ವಿಚಿತ್ರವಿನ್ಯಾಸವನ್ನು ಮತ್ತೆ ಶ್ರೀ ಡಿ. ವಿ. ಜಿ ಹೀಗೆನ್ನುತ್ತಾರೆ-
ಕಣ್ದೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ|
ಕಣ್ಮುಚ್ಚಿ ನೋಡು, ನಿಶ್ಚಲಶುದ್ಧಸತ್ತ್ವ||
ಉನ್ಮುಖನು ನೀನೆರಡು ಜಗಕಮಿರುತಿರುವಾಗ|
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ||

ಅವನ ಸೃಷ್ಟಿಯೆನ್ನುವ ನರ್ತನವೇ ವಿಚಿತ್ರ-ವಿಶಿಷ್ಟ. ಎಲ್ಲವನ್ನೂ ಎಲ್ಲರನ್ನೂ ತಣಿಸುವ ರಚನೆಯದು. ಅಲ್ಲಿ ಎಲ್ಲ ಜೀವಗಳಿಗೂ ಸುಖವಿದೆ-ಸಂತೋಷವಿದೆ-ನೆಮ್ಮದಿಯಿದೆ. ಸಿಹಿ ರುಚಿಯೆನಿಸಿದವಗೆ ಸಿಹಿಯಿದೆ; ಕಹಿ ಪಥ್ಯವೆನಿಸಿದರೆ ಕಹಿಯೂ ಇದೆ. ಕರುಣೆಯಲ್ಲಿ ರಸ ಕಾಣುವುದಾದರೆ ಕರುಣೆಯಿದೆ; ಶೃಂಗಾರರಸಜೀವಿಗೆ ಶೃಂಗಾರವೂ ಇದೆ. ಉಪ್ಪು-ಖಾರಗಳು; ಹುಳಿ-ಒಗರುಗಳು; ಅದ್ಭುತ-ವೀರಗಳು; ಹಾಸ್ಯ-ಭಯಾನಕಗಳು; ರೌದ್ರ-ಭೀಭತ್ಸಗಳು ಎಲ್ಲವೂ ಇದೆ ಸೃಷ್ಟಿನೃತ್ಯದಲ್ಲಿ. ಇದೆಲ್ಲವನ್ನೂ ಮೀರಿದ ಮಧುರಶಾಂತವೂ ಎಲ್ಲದರೊಂದಿಗೆ ಮೇಳೈಸಿದೆ.

ಇಂತಹ ಸೃಷ್ಟಿನೃತ್ಯದ ಪ್ರತಿಕೃತಿ ಅಥವಾ ಪ್ರತಿನಿಧಿ ನಮ್ಮ ಭಾರತೀಯ ನೃತ್ಯಕಲೆ. ಇಲ್ಲಿ ಸೃಷ್ಟಿಯ ಕತೆಯಿದೆ; ಸ್ಥಿತಿಯ ವಿಸ್ತಾರವಿದೆ; ಲಯದ ರುದ್ರತೆಯಿದೆ. ಮಹೋನ್ನತ ಸತ್ತ್ವರ ಚರಿತೆಯಿದೆ; ದುಷ್ಟರ ದೌಷ್ಟ್ಯವಿದೆ. ದುಷ್ಟತನವಳಿದು ಸತ್ತ್ವ ಬೆಳಗಿದ ಜೀವನಪಾಠವಿದೆ. ಇತಿಹಾಸವಿದೆ; ಪುರಾಣವಿದೆ. ಭಾವವಿದೆ; ಭಾಷೆಯಿದೆ. ರಸವಿದೆ; ರಾಗವಿದೆ. ಸಾಧನೆಯಿದೆ; ಸಿದ್ಧಿಯಿದೆ... ಹೀಗೆ ಬದುಕಿನ ಎಲ್ಲವೂ ಇದ್ದರೂ ಇರುವ ಎಲ್ಲದಕ್ಕೂ ಸೂತ್ರಬದ್ಧತೆಯಿದೆ. ಆ ಸೂತ್ರದಲ್ಲಿ ಪೋಣಿಸಿದ ಸುಮಗಳಾಗಿ ಈ ಎಲ್ಲವೂ ವಿಶ್ವಚೇತನದ ಕಂಠವನ್ನು ಅಲಂಕರಿಸುವ ಮಹದುದ್ದೇಶ ನೃತ್ಯಕ್ಕೆ ದಿವ್ಯತೆಯನ್ನು ಮೇಳೈಸಿದೆ.

ಅಂತಹ ನೃತ್ಯಕ್ಕೂ, ನಮ್ಮ ಒಳಹೊರಗೆ ದಿವ್ಯನೃತ್ಯಗೈಯುವ ಶಿವ-ಶಿವೆಯರಿಗೂ, ಅದನ್ನು ನಮಗಿತ್ತ ಭರತಮುನಿಗೂ, ಉಳಿಸಿ-ಬೆಳಸಿದ ಇತಿಹಾಸ ಕಂಡ ಸಹಸ್ರ ಸಹಸ್ರ ನೃತ್ಯಸಾಧಕರಿಗೂ, ವೈಪರೀತ್ಯದ ಇಂದಿನ ಬದುಕಿನಲ್ಲೂ ನೃತ್ಯಕ್ಕೆ ಜೀವಂತಿಕೆಯನ್ನೀಯುತ್ತೀರುವ ಎಲ್ಲ ನೃತ್ಯಪಟುಗಳಿಗೂ ಲೋಕ ನಿರಂತರ ಕೃತಜ್ಞ.

'ಭರತಾಮೃತಮ್' ಸ್ಮರಣ ಸಂಚಿಕೆಯಲ್ಲಿ ಪ್ರಕಟಿತ ಬರಹ.

No comments: