Tuesday, 16 November, 2010

ಬಾಯಿಂದ ಹೊರಬಾರದಿರಲಿ; ಹೃದಯಕ್ಕೂ ಇಳಿಯದಿರಲಿ; ಜೀರ್ಣವಾಗಲದು ಕಂಠದಲಿ;

ಮನುಷ್ಯನಿಗೆ ಮಾತಿನ ತೆವಲು. ಮಾತನಾಡುತ್ತಲೇ ಇರಬೇಕು. ಮಾತಿಗೊಂದು ಉದಾತ್ತ ಉದ್ದೇಶವಿಲ್ಲದಿದ್ದಾಗ, ಅದಕ್ಕೊಂದು ಗಾಂಭೀರ್ಯವೂ ಇರುವುದಿಲ್ಲ. ಮಾತನಾಡಬೇಕು ಅಷ್ಟೆ. ಆದರೆ ಮಾತನಾಡಲು ವಿಷಯ ಬೇಕು. ವಿಷಯಾಧಾರಿತವಾಗಿ ಬಹಳ ಹೊತ್ತು ಮಾತನಾಡುವುದು ಕಷ್ಟವೇ. ಆಗ ಆರಂಭವಾಗುವುದೇ ಲಘುವಾದ ಮಾತುಕತೆಗಳು. ಅದಕ್ಕೆ ಸಿಗುವ ಆಶ್ರಯವೆಂದರೆ ವ್ಯಕ್ತಿವಿಮರ್ಶೆ. ಬಹಳ ಸುಲಭವಾದದ್ದಿದು. ಯಾರದೋ ನಡತೆ, ಮಾತು, ಕಾರ್ಯಗಳ ಕುರಿತು ಆಡಿಕೊಳ್ಳುವುದು. ಟೀಕೆಯೇ ಉದ್ದೇಶವಾಗಿಬಿಟ್ಟರೆ ಎಲ್ಲವನ್ನೂ ಟೀಕಿಸಬಹುದು. ನೋಡುವ ನೋಟವನ್ನು ಅವಲಂಬಿಸಿದೆ ಇದು. ನಕಾರಾತ್ಮಕವಾದ ನೋಟಕ್ಕೆ ಎಲ್ಲೆಲ್ಲೂ ತಪ್ಪೇ ಕಾಣುವುದು. ಹಗುರ ಮಾತುಗಾರಿಕೆಗೆ ನಕಾರನೊಟವೂ ಸೇರಿಬಿಟ್ಟರೆ ಮುಗಿಯಿತು. ಯಾರದೋ ಬದುಕು ಬಯಲಿಗೆ ಬಂದಿತೆಂದೇ ಅರ್ಥ. ಅಷ್ಟೇ ಅಲ್ಲದೇ ಪ್ರತಿ ವ್ಯಕ್ತಿಯಲ್ಲಿಯೂ ಒಂದಿಷ್ಟು ದೋಷಗಳಿರುವುದು ಸಹಜವೇ. ಹಾಗಿರಬಾರದೆನ್ನುವುದು ಆದರ್ಶವಾದರೂ ವಾಸ್ತವ ಹಾಗಿರುವುದಿಲ್ಲ. ವ್ಯಕ್ತಿಯ ಇಂತಹ ದೌರ್ಬಲ್ಯಗಳು ಮಾತನಾಡುವವರಿಗೆ ಸಿಕ್ಕಿಬಿಟ್ಟರಂತೂ ಮಾತು ಮಹಾನದಿಪ್ರವಾಹವಾಗಿ ಹರಿದು ಬಿಡುತ್ತದೆ; ಅಕ್ಕಪಕ್ಕದ್ದನ್ನೆಲ್ಲ ಕೊಚ್ಚಿಕೊಂಡು. ಇದರಿಂದ ಕಷ್ಟಕ್ಕೊಳಗಾಗುವುದು ವ್ಯಕ್ತಿಯ ಬದುಕು.
ಮಾತು ಹೀಗಿಲ್ಲದಿರುವುದು ಒಳಿತು. ಅಂತಹ ಮಾತು ಸೊಗಸು ಕೂಡ. ಯಾರದೋ ಕುರಿತು ಮಾತನಾಡುವುದು ಸರಿಯಲ್ಲ. ಅದರಲ್ಲೂ ನಕಾರಾತ್ಮಕ ಮಾತುಗಳಂತೂ ಎಷ್ಟಕ್ಕೂ ಸರಿಯಲ್ಲ. ನಮ್ಮ ಪ್ರತಿಚರ್ಯೆಯೂ ಉಳಿದವರಿಗೆ ಒಳಿತಾಗುವಂತಿರಬೇಕು. ಕೊನೆಯ ಪಕ್ಷ ಕೆಡುಕಂತೂ ಆಗಬಾರದಲ್ಲ. ಅಲ್ಲದೆ ನಮ್ಮ ಹೃದಯದಲ್ಲಿ ಇಂತಹ ಮಾತನಾಡುತ್ತಾ ಎಲ್ಲರ ಕುರಿತು ದುರ್ಭಾವನೆಗಳೇ ತುಂಬಿಹೋಗಿಬಿಡಬಹುದು. ಅದು ಅತ್ಯಂತ ಅಪಾಯಕಾರಿ. ಹೃದಯದ ಮೃದುತ್ವ ನಾಶವಾಗಿಬಿಡಬಹುದು. ಮಾನವಕುಲದ ಮೇಲಿನ ನಂಬಿಕೆ ಕುಸಿಯಬಹುದು. ಸುತ್ತಲಿನವರ ಕುರಿತಾದ ವಿಶ್ವಾಸವೇ ನಶಿಸಿದ ಮೇಲೆ ಬದುಕು ಮಾಡುವುದು ಕಷ್ಟವಾದೀತು. ಅಲ್ಲದೆ ಹಾಗೆ ಮಾತನಾಡುವವರ ಕುರಿತು ಜನರಿಗೂ ಒಳ್ಳೆಯ ಅಭಿಪ್ರಾಯ ಇರುವುದಿಲ್ಲ. ಎದುರಿಗೆ ಸಹಜವಾಗಿಯೇ ಇದ್ದರೂ ಹಿಂದಿನಿಂದ ಅವರನ್ನೂ ಟೀಕಿಸುತ್ತಾರೆ. ಎಂಬಲ್ಲಿಗೆ ಅಂತಹ ಮಾತು ಮಾತನಾಡುವವರಿಗೂ ಒಳಿತಲ್ಲ.
ಶಿವನಂತಿರಬೇಕು ವಿಷಯದಲ್ಲಿ. ಅದು ಸಮುದ್ರಮಥನದ ಸಂದರ್ಭ. ಅಮೃತಕ್ಕಾಗಿ ದೇವಾಸುರರು ಪ್ರಯತ್ನಿಸುತ್ತಿದ್ದರು. ಕಡೆದು ಕಡೆದು ಇನ್ನೇನು ಅಮೃತ ಬಂದೀತೆಂದು ಕಾಯುತ್ತಿರುವಾಗ ಹೊರಬಂದಿದ್ದು ಹಾಲಾಹಲವಿಷ.
ಅದೆಷ್ಟು ಭಯಂಕರವೆಂದರೆ, ಕುಡಿದವರು ಮಾತ್ರ ಸಾಯುವುದಲ್ಲ; ಅದು ತಾನಾಗಿಯೇ ಜಗತ್ತನ್ನು ಸುಡತೊಡಗಿತು. ಆಗಲ್ಲಿಗೆ ಪರಶಿವನ ಆವಿರ್ಭಾವವಾಯಿತು. ವಿಷವನ್ನು ಶಿವ ಕುಡಿದ. ಒಳಗಿಳಿದರೆ ಶಿವನ ಹೃದಯದ ಅಮೃತಸಮುದ್ರ ಕಲಕೀತು. ಹೊರಹಾಕಿದರೆ ಸೃಷ್ಟಿ ಸುಟ್ಟೀತು. ಹಾಗಾಗಿ ತನ್ನ ಕಂಠದಲ್ಲೇ ಅದನ್ನವ ನಿಲ್ಲಿಸಿಕೊಂಡ. ಬೇರೆಯವರ ದೋಷವನ್ನು ಹೀಗೆ ಗ್ರಹಿಸಬೇಕು. ಹೃದಯಕ್ಕೆ ಅದನ್ನು ಇಳಿಸಿಕೊಳ್ಳಬಾರದು. ಹೊರಗೂ ಉಗುಳಬಾರದು. ಕಂಠದಲ್ಲಿಯೇ ಜೀರ್ಣಗೊಳಿಸಿಬಿಡಬೇಕು. ಅಂದರೆ ವ್ಯಕ್ತಿಯ ಕುರಿತಾಗಿ ದುರ್ಭಾವ ತಾಳಬಾರದು. ದೋಷ-ದೌರ್ಬಲ್ಯಗಳು ಅವನಿಗೆ ಸೇರಿದ್ದು. ಅದವನ ಪುರ್ವಾರ್ಜಿತ ಕರ್ಮ. ನಮಗೇಕೆ ಅದರ ಉಸಾಬರಿ. ಹಾಗೆಯೇ ಅದರ ಕುರಿತು ಆಡಲೂಬಾರದು. ಅದು ಆಡುವವರಿಗೂ, ಆಡಿಸಿಕೊಂಡವರಿಗೂ, ಸಮಾಜಕ್ಕೂ ಮಾರಕ.
ಮುಖೇನ ನೋದ್ಗಿರತ್ಯೂರ್ಧ್ವಂ ಹೃದಯೇನ ನಯತ್ಯಧಃ|
ಜರಯತ್ಯಂತರೇ ಸಾಧುರ್ದೋಷಂ ವಿಷಮಿವೇಶ್ವರಃ||
'ತ್ರಿವಿಕ್ರಮ' ಮಾಸಪತ್ರಿಕೆಯ ಸಂಪಾದಕ ಬರಹ.

1 comment:

ಯಜ್ಞೇಶ್ (yajnesh) said...

tumba chennagi barediddira.

jivana dalli maatina mahatwa enu embudu nimma lekhanadalli chennagu mudibamdide