Friday, 24 October, 2008

ವಂದನೆಗಳಿದೋ ಸ್ತ್ರೀಯೆ ಸ್ವೀಕರಿಸು

ಪ್ರಕೃತಿ....
ನೀನು ಭಗವಂತನ ಸೃಷ್ಟಿಶೀಲ ಸ್ವರೂಪ. ಭಗವಂತನ ಮೊದಲ ಕಾಮನೆಯನ್ನು ಈಡೇರಿಸಿದ ಹಿರಿಮೆ ನಿನ್ನದು. ಭಗವಂತ ತುಂಬಾ ಹಿಂದೊಮ್ಮೆ ಒಬ್ಬನೇ ಇದ್ದನಂತೆ. ತುಂಬಾ ಹಿಂದೆ ಎಂದರೆ ನೀರು ಹರಿಯುವ ಮುನ್ನ, ಭೂಮಿ ನಿಲ್ಲುವ ಮುನ್ನ, ಆಕಾಶ ಹರಡುವ ಮುನ್ನ, ಗಾಳಿ ಚಲಿಸುವ ಮುನ್ನ, ಅಗ್ನಿ ಉರಿಯುವ ಮುನ್ನ. ಒಟ್ಟಿನಲ್ಲಿ ಪ್ರಕೃತಿ ಉದಯಿಸುವ ಮುನ್ನ ಭಗವಂತ ಒಬ್ಬನೇ ಇದ್ದ. ಅವನ ಮನದಲ್ಲಿ ಆಸೆಯೊಂದು ಉದಯಿಸಿತು. "ತಾನು ಬಹುವಾಗಿ ಹುಟ್ಟಿ ಬೆಳೆಯಬೇಕು". ಈ ಇಚ್ಚೆ ಕ್ರಿಯೆಯಾಗಬೇಕಲ್ಲ. ಕ್ರಿಯೆಯಾಗಿಸಬಲ್ಲ ಶಕ್ತಿ ಬೇಕಲ್ಲ. ಶಕ್ತಿ ವ್ಯಕ್ತಿಯಾಗಬೇಕಲ್ಲ.ಅದಕ್ಕಾಗಿ ತನ್ನನ್ನೇ ಇಬ್ಬಾಗವಾಗಿಸಿಕೊಂಡ. ಆ ಇಬ್ಬಾಗದ ಇನ್ನೊಂದು ಭಾಗವೇ ನೀನು. ಅಂದರೆ ನಾರೀ. ನೀನಿಲ್ಲದಿದ್ದರೆ ಸೃಷ್ಟಿ ಬೆಳೆಯದು. ಅದರಿಂದಾಗಿಯೇ ವಿಕಾಸದ - ಅರಳುವಿಕೆಯ ಶಕ್ತಿ ನೀನು. ಭಗವಂತನ ಭಾಗವೇ ಆದ ನಿನ್ನಿಂದ ಸೃಷ್ಟಿ ಬೆಳೆಯಿತು. ಸಂತಾನ ಸಾವಿರವಾಯಿತು. ನಿನ್ನ ಈ ಮಹಿಮೆಯನ್ನೇ ಶ್ರೀಶಂಕರಭಗವತ್ಪಾದರು ಗಾನಮಾಡಿದರು-

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್ |
(ಶಿವ ಶಕ್ತಿಯೊಂದಿಗೆ ಒಡಗೂಡಿದಾಗಲೇ ಪ್ರಭವಿಸಿಯಾನು - ಪ್ರಭುವಾದಾನು.)

ತಾಯೇ....
ಮಾತೆ ನೀನು. ಮಾತೇ ಹೊರಡದು ನಿನ್ನ ತಾಯ್ತನ ಮನದಲ್ಲಿ ಹಸಿರಾದಾಗ. ನವಮಾಸ ಹೊತ್ತೆ ನೀನು, ನಿನ್ನ ಗರ್ಭಗೃಹದ ಉದಾತ್ತತೆಯಲ್ಲಿ. ಬಿಂದುವನ್ನು ಸಿಂಧುವಾಗಿಸಿದೆ. ಮತ್ತೊಂದು ಜೀವದ ವಿಕಾಸಪ್ರಕ್ರಿಯೆಯಲ್ಲಿನ ನೋವನ್ನೆಲ್ಲ ನಲಿವಾಗಿ ಅಪ್ಪಿಕೊಂಡೆ. ನವಮಾಸ ತುಂಬಿದಾಗ ಹೆತ್ತೆ. ಪ್ರಸವದ ಅಸಹನೀಯ ವೇದನೆಯನ್ನು ಅನುಭವಿಸುವ ನಿನ್ನ ಸಹನೆ ನಿನಗೆ ಮಾತ್ರ ಸಾಧ್ಯ. ಮಗುವನ್ನು ನೀನು ಬೆಳೆಸಿದೆ. ಅದರ ಪರಿಯಿದೆಯಲ್ಲ ಅದು ಜೀವಲೋಕದ ಅದ್ಭುತ. ಒಡಲ ಕುಡಿಯನ್ನು ಮಾತ್ರವಲ್ಲ, ಮಗುವೆನಿಪ ಮಗುವನ್ನೆಲ್ಲ ಮಡಿಲಲ್ಲಿ ತುಂಬಿಕೊಳ್ಳುವ ನಿನ್ನ ಯಶೋದೆಯ ಭಾವವಿದೆಯಲ್ಲ ಅದು ನಿನ್ನನ್ನು ಲೋಕಮಾತೆಯನ್ನಾಗಿಸಿದೆ. ಅಧ್ಯಾತ್ಮದೀಪವನ್ನೇ ಮಗುವಾಗಿಸಿಕೊಳ್ಳಬಲ್ಲ ದೇವಕಿಯೂ ನೀನೆ. ಮಗನಿಂದಲೇ ಅಧ್ಯಾತ್ಮವನ್ನರಿಯುವ ದೇವಹೂತಿಯೂ ನೀನೆ. ನಿನ್ನ ಈ ಹಿರಿಮೆಯನ್ನು ಶ್ರೀಶಂಕರಭಗವತ್ಪಾದರು ಗಾನ ಮಾಡಿದ ಪರಿ ಹೀಗೆ-

ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ |
(ಕೆಟ್ಟ ಮಗ ಹುಟ್ಟಿಯಾನು ; ಆದರೆ ತಾಯಿ ಕೆಟ್ಟವಳಾಗಲು.)

ಗೃಹವೇ....
ಗೃಹವೆಂದರೆ ನೀನೆ. ಯಾಕೆಂದರೆ ನೀನು ಗೃಹಿಣಿ, ನೀನಿಲ್ಲದ ಮನೆ ಅಡವಿಯೇ ಸರಿ. ನೀನಿದ್ದಾಗ ಮಾತ್ರ ಅದು ಮನೆ. ಮನೆಗೆ ಬಂದು ಮನೆಯೇ ಆಗುವ, ಮನೆಯ ಅಂಶವನ್ನೆಲ್ಲ ತುಂಬುವ, ಮನೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸುವ, ಸಮಸ್ಯೆಗಳನ್ನೆಲ್ಲ ನಿಭಾಯಿಸುವ ನೀನಲ್ಲದೆ ಇನ್ನಾವುದು ಗೃಹವೆನಿಸೀತು? ಹಿರಿಯರ ಹಿರಿತನಕ್ಕೆ ಹೀನತೆ ಬಾರದಂತೆ, ಸಮಾನರ ಮಾನಕ್ಕೆ ಮುಪ್ಪು ಬಾರದಂತೆ, ಕಿರಿಯರ ಕಿರಿತನ ಹಿರಿದಾಗುವಂತೆ, ನಂದುವ ಮನೆಯನ್ನೂ ನಂದನವನವಾಗಿಸಬಲ್ಲದು ನಿನ್ನ ಸಾಮರ್ಥ್ಯ. ಪುರುಷ ದುಡಿದು ತಂದದ್ದನ್ನು ಸಂರಕ್ಷಿಸುವ, ಸಂರಕ್ಷಿಸಿದ್ದನ್ನು ಯೋಗ್ಯವಾಗಿ ವಿನಿಯೋಗಿಸುವ ನಿನ್ನ ಕುಶಲತೆಯನ್ನು ಕಂಡೇ ಮನು ನಿಯಮ ರೂಪಿಸುತ್ತಾನೆ -

ಅರ್ಥಸ್ಯ ಸಂಗ್ರಹೇ ಚೈನಾಂ ವ್ಯಯೇ ಚೈವ ನಿಯೋಜಯೇತ್ |
(ಅರ್ಥದ ಸಂಗ್ರಹ ಮತ್ತು ವ್ಯಯಕ್ಕೆ ಸ್ತ್ರೀಯು ಸಮರ್ಥಳು)

ಪಾಕಪ್ರವೀಣೆ....
ಜೀವ, ಜಗದೊಡೆಯನ ಅಂಶ. ಪೂರ್ಣನಾದ ಪರಮಾತ್ಮನೊಂದಿಗೆ ಸೇರಿ ಹೋಗುವುದು ಜೀವದ ಲಕ್ಷ್ಯ. ಲಕ್ಷ್ಯ ತಲುಪಲು, ಕಟ್ಟಿದ ಕಟ್ಟು ಬಿಟ್ಟು ಹೋಗಬೇಕು. ಕಟ್ಟು ಕಡಿಯುವುದು, ಪರಮಾತ್ಮನ ನೆನಪು ಚಿರಂತನವಾದಾಗ. ನೆನಪು ನಿರಂತರವಾಗುವುದು ಸತ್ತ್ವಶುದ್ಧವಾದಾಗ. ಸತ್ತ್ವ ಶುದ್ಧಿಗೆ ಆಹಾರದ ಕಾಣ್ಕೆ ದೊಡ್ಡದು. ಅಂತಹ ಆಹಾರದ ಸಿದ್ಧತೆ ನಿನ್ನ ಬದ್ಧತೆ. ಆರು ರಸಗಳ ಸವಿಯನ್ನು ಉಣಬಡಿಸುತ್ತ ರಸಮಯನಾದ ಭಗವಂತನ ನೆಲೆಯಲ್ಲಿ ಜೀವಜಗತ್ತನ್ನು ನಿಲ್ಲಿಸಬಲ್ಲೆ. ಆದ್ದರಿಂದಲೇ ಅರಿತವರು ಜಗನ್ಮಾತೆಯನ್ನು ಹೀಗೆ ಪ್ರಾರ್ಥಿಸಿದರು-

ಪತ್ನೀಂ ದೇಹಿ, ತಾರಿಣೀಂ ದುರ್ಗಸಂಸಾರಸಾಗರಸ್ಯ ಕುಲೋದ್ಭವಾಮ್ |
(ದಾಟಲು ಕಷ್ಟಸಾಧ್ಯವಾದ ಸಂಸಾರಸಾಗರವನ್ನು ದಾಟಿಸುವ, ಸತ್ಕುಲಪ್ರಸೂತೆಯಾದ ಪತ್ನಿಯನ್ನು ಅನುಗ್ರಹಿಸು.)

ಪ್ರಿಯ ಪುತ್ರಿ....
ಮಗುವಿನ ತಾಯಾಗಬಲ್ಲ ನೀನು ತಾಯ್ತಂದೆಯರಿಗೆ ಒಲುಮೆಯ ಮಗಳೂ ಆಗಬಲ್ಲೆ. ಮಗಳಾಗಿ ನೀನು ಬೆಳೆಯುವ ಸಿರಿ ಅನುಪಮ. ನೀನು ಬೆಳೆಯುತ್ತಲೇ ಮನೆ -ಮನವನ್ನೆಲ್ಲ ತುಂಬುತ್ತಾ ಹೋಗುವ ಕ್ರಮ ಅನನ್ಯ. ನೀನು ಹುಟ್ಟಿದೆ, ಮನೆ ಬೆಳಕಾಯಿತು. ನೀನು ಬೆಳೆದೆ, ಬೆಳಕು ಇಮ್ಮಡಿಯಾಯಿತು. ಒಂದು ದಿನ.........ಅದೇ ಆ ದಿನ.......ಬಂದೇ ಬಂದಿತು. ನಿನ್ನನ್ನು ಇನ್ನೊಂದು ಮನೆಯನ್ನು ಬೆಳಗಲು ಕಳುಹಿಸಿ ಕೊಡುವ ದಿನ. ಕಳುಹಿಸಿಕೊಟ್ಟ ಮೇಲೂ ನೀನು ತವರಿನ ಕುರಿತು ಯೋಚಿಸುವ ಪರಿಗೆ ಜಗತ್ತೇ ತಲೆಬಾಗಬೇಕು. ಕಳುಹಿಸಲಾರದೇ ನಿನ್ನನ್ನು ಕಳುಹಿಸುವ ಅನಿವಾರ್ಯತೆಯನ್ನು ಕಾಳಿದಾಸ ಹೀಗೆನ್ನುತ್ತಾನೆ-

ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ |
(ಮಗಳಿಂದ ದೂರವಾಗುವ ದುಃಖದಿಂದ ಎಲ್ಲ ಗೃಹಸ್ಥರೂ ಪೀಡನೆಗೊಳಗಾಗುತ್ತಾರೆ.)

ಕಲಾಸಾಮ್ರಾಜ್ಞಿ....
ನಿನ್ನ ಕೊರಳ ದನಿಯ ಅನುರಣನ, ಕಾಲ್ಗೆಜ್ಜೆಯ ತನನ ತನನ ಪ್ರಕೃತಿಯನ್ನು ಚೇತೋಹಾರಿಯಾನ್ನಾಗಿಸಿದೆ. ಜೀವಕುಸುಮವನ್ನು ಪರಮಪುರುಷ ಪರಮಾತ್ಮನ ಕಂಠಸಿರಿಯ ಮೆರೆಯುವ ಮಾಲಿಕೆಯಲ್ಲಿ ಜೋಡಿಸಿದೆ. ಸಂಗೀತ - ನರ್ತನಗಳ ಮೂಲಕ ಸಹಸ್ರ ಸಂವತ್ಸರಗಳಿಂದ ನೀನು ನೀಡುತ್ತಾ ಬಂದ ಸಂಸ್ಕಾರ ಸಮಾಜವನ್ನು ಇಂದಿಗೂ ರಕ್ಷಿಸುತ್ತಿದೆ. ಕಲೆ ಭಗವಂತನ ವಿಶಿಷ್ಟ ಉಪಾಸನೆ. ಅಂತಹ ಉಪಾಸನೆಯ ಪೌರೋಹಿತ್ಯ ನಿನ್ನ ಕ್ರಿಯಾಶೀಲತೆಯಲ್ಲಿ ನಳನಳಿಸುತ್ತಿದೆ. ಕಲೆ ನಿನ್ನ ಮೂಲರೂಪಗಳಲ್ಲೊಂದಾದ ಮಾತೆ ಸರಸ್ವತಿಯ ಅಂಗವೇ ಆಗಿದೆ ಎನ್ನುವುದು ಅನುಭವದ ಮಾತು.

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ |
(ಸಂಗೀತ ಮತ್ತು ಸಾಹಿತ್ಯಗಳು ಮಾತೆ ಸರಸ್ವತಿಯ ದಿವ್ಯಪಯೋಧರಗಳು)

ಪೂಜ್ಯಳೇ....
ನಿನ್ನ ಕುರಿತಾಗಿ ಹೇಳಹೊರಡುವುದೇ ಸರಿಯಲ್ಲ. ಯಾಕೆಂದರೆ ಅದು ಹೇಳಿ ಮುಗಿಯುವುದಿಲ್ಲ. ಸಂಗಾತಿಯಾಗಿ ನೀನು ಪುರುಷನ ಯಶಸ್ಸಿಗೆ ಕಾರಣಳಾಗಿದ್ದಿ. ಸಹೋದರಿಯಾಗಿ ಸಹೋದರರ ಬದುಕಿನ ಭೂಮಿಯನ್ನು ಹಸನಾಗಿಸಿದ್ದಿ. ಕವಯಿತ್ರಿಯಾಗಿ ಬದುಕನ್ನು ರಸಮಯ ಕಾವ್ಯವಾಗಿರಿಸಿದ್ದಿ. ದೇಶವನ್ನು ಆಳಿಯೂ, ಸೈ ಎನ್ನಿಸಿಕೊಂಡಿದ್ದಿ. ಹೀಗೆ ಸೃಷ್ಟಿಗೆ ನಿನ್ನ ಉಪಸ್ಥಿತಿ ಅನಿವಾರ್ಯ. ಸೃಷ್ಟಿಯನ್ನು ಕಾಪಿಡುವ ದೇವತೆಗಳು ಈ ಎಲ್ಲ ಕಾರಣಗಳಿಗಾಗಿಯೇ ನಿನ್ನನ್ನು ಗೌರವಿಸುತ್ತಾರೆ. ನಿನ್ನ ಪೂಜೆಯಲ್ಲಿ ತಾವೂ ಪೂಜೆಗೊಳ್ಳುತ್ತಾರೆ ; ಸಂತಸಪಡುತ್ತಾರೆ. ಮನು ಅದನ್ನೇ ನುಡಿಯುತ್ತಾನೆ-

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
(ಎಲ್ಲಿ ನಾರಿ ಪೂಜೆಗೊಳ್ಳುವಳೋ, ಅಲ್ಲಿ ದೇವತೆಗಳೇ ಸಂತೋಷಪಡುವರು.)

{'ಜನನಿ' ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ}

1 comment:

Harish - ಹರೀಶ said...

ಸರಳವಾಗಿ ಸ್ತ್ರೀಯ ಗುಣಗಳನ್ನು ವಿವರಿಸಿದ್ದೀರಿ. ಚೆನ್ನಾಗಿದೆ.

ನೀವು ಉಲ್ಲೇಖಿಸಿರುವ ಶ್ಲೋಕಗಳು ಎಲ್ಲಿಂದ ತೆಗೆದುಕೊಂಡಿದ್ದು ಎಂಬುದನ್ನೂ ಬರೆದಿದ್ದರೆ ಉಪಕಾರವಾಗುತ್ತಿತ್ತು.