Tuesday 24 June, 2008

ಪದ್ಮಪ್ರಿಯಾ ಸತ್ತರು.... ಮಕ್ಕಳೊಂದಿಗೆ ರಘುಪತಿ ಭಟ್ಟರು ಸಾಯುತ್ತಿದ್ದಾರೆ...ಕೊಲೆಗಾರರು ಯಾರು?

ಕರ್ನಾಟಕದಲ್ಲೀಗ ಪದ್ಮಪ್ರಿಯಾರ ಪ್ರಕರಣ ಚರ್ಚೆಯಲ್ಲಿದೆ. ಉಡುಪಿಯ ಶಾಸಕ ರಘುಪತಿ ಭಟ್ಟರು. ಅವರ ಪತ್ನಿ ಪದ್ಮ ಪ್ರಿಯಾ. ಒಂದುದಿನ ಇದ್ದಕ್ಕಿದ್ದಂತೆ ಪದ್ಮಪ್ರಿಯಾ ನಾಪತ್ತೆಯಾಗುತ್ತಾರೆ. ಕಾರು ನಕ್ಸಲ್ ಪೀಡಿತ ಪ್ರದೇಶದ ಬಳಿ ದೊರೆಯುತ್ತದೆ. ಆಡಳಿತ ಪಕ್ಷದ ಶಾಸಕರ ಪತ್ನಿ ಎಂದಾದ ಮೇಲೆ ಪೋಲೀಸರು ವಿಶೇಷ ಆಸ್ಥೆವಹಿಸುತ್ತಾರೆ. ಸ್ವತಃ ಗೃಹ ಸಚಿವರ ಕ್ಷೇತ್ರ ಬೇರೆ ಅದೇ ಆಗಿರುತ್ತದೆ. ಭಟ್ಟರು ಆಚಾರ್ಯರಿಗೆ ಆತ್ಮೀಯರು.

"ಆಳುವವರೇನು ಮೇಲಿನಿಂದ ಇಳಿದುಬಂದವರೇ? ಅವರೂ ನಮ್ಮಂತೆಯೇ ಮನುಷ್ಯರು." ಎಂದು ಮೇಲಿಂದ ಮೇಲೆ ಮಾತನಾಡುವ ಮಾಧ್ಯಮ ಅಲರ್ಟ್ ಆಗಿಬಿಡುತ್ತದೆ, ತುಸು ಹೆಚ್ಚೇ ಎನಿಸುವಷ್ಟು. ಒಬ್ಬ ಸಾಮಾನ್ಯ ಪ್ರಜೆಯ ಹೆಂಡತಿ ಕಾಣೆಯಾಗಿದ್ದರೆ ಇಷ್ಟೊಂದು ಪ್ರಾಮುಖ್ಯ ಕೊಡದ ಮಾಧ್ಯಮ ಸುದ್ದಿಯಾಗಿ ಬಳಸಿಕೊಳ್ಳುತ್ತದೆ ಪ್ರಕರಣವನ್ನು.

ಪ್ರಕರಣ ನಾಡಿನ ಮನೆಮಾತಾಗುತ್ತದೆ. "ಪದ್ಮ ಪ್ರಿಯಾ ತಮ್ಮ ಪ್ರೇಮಿ ಅತುಲ್ ಅವರೊಂದಿಗೆ ಓಡಿಹೋಗಿದ್ದಾರೆ." ಎಂಬರ್ಥದ ಮಾತು ಕತೆಗಳನ್ನು ಕೆಲವರು ಆಡತೊಡಗುತ್ತಾರೆ. "ರಘುಪತಿ ಭಟ್ಟರು ಸ್ವಲ್ಪವೂ ,ಸರಿಯಿರಲಿಲ್ಲ ಅದೇ ಇಷ್ಟಕ್ಕೆಲ್ಲ ಕಾರಣ" ಎನ್ನತೊಡಗುತ್ತಾರೆ ಇನ್ನು ಕೆಲವರು. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮದವರು ಮತ್ತು ಜನಸಾಮಾನ್ಯರು ಈ ಮೂವರಲ್ಲೂ ಈ ಮಾತುಗಳು ಚಾಲನೆಗೊಳ್ಳುತ್ತವೆ.

ಇದಿಷ್ಟು ಪ್ರಕರಣ.

ಪ್ರಕರಣದ ಕುರಿತು ನನ್ನ ಚಿಂತನೆ ಇದು-

ನಮಗಿದು ಸಹಜ. ನಾವು ಯಾರ ಬಗ್ಗೆಯೂ ನಮಗನ್ನಿಸಿದಂತೆ ಮಾತನಾಡುವ ಹಕ್ಕನ್ನು ಹುಟ್ಟುತ್ತಲೇ ಪಡೆದು ಬಂದಂತೆ ವರ್ತಿಸುತ್ತೇವೆ.

ಮೊದಲ ಚಿಂತನೆ-
ಬೇರೆಯವರ ಬಗ್ಗೆ ನಾವು ಮಾತನಾಡಬೇಕೇಕೆ? ಅದು ನಾಲಿಗೆಯ ಚಾಪಲ್ಯ ತಾನೆ? ನಾವು ಅವರಿಗೆ ಜವಾಬ್ದಾರರಾದರೆ ಮಾತನಾಡುವುದು ಸರಿ. ಅದೂ ಅವರ ಬಳಿ ಅಥವಾ ಅವರನ್ನು ಸರಿಪಡಿಸಲು ಸಾಧ್ಯವಾಗುವ ಇನ್ನಾರಾದರು ಯೋಗ್ಯರ ಬಳಿ.

ದ್ವಿತೀಯ ಚಿಂತನೆ- ಪ್ರತಿವ್ಯಕ್ತಿಯು ಒಳಿತು-ಕೆಡುಕಿನ ಸಂಗಮ. ಗುಣ-ದೋಷಗಳು, ಸಾಮರ್ಥ್ಯ-ದೌರ್ಬಲ್ಯಗಳು ಎಲ್ಲರಲ್ಲು ಇರುತ್ತವೆ. ಯಾರೂ ಇದಕ್ಕೆ ಹೊರತಲ್ಲ. ಅತ್ಯಂತ ಉನ್ನತ ವ್ಯಕ್ತಿಗಳಿಂದ ಸಾಮಾನ್ಯನವರೆಗೂ ಇದು ಹೀಗೆಯೇ. ಒಬ್ಬನಲ್ಲಿರುವ ಗುಣ ಇನ್ನೊಬ್ಬನಲ್ಲಿ ಇರಲಾರದು; ಒಬ್ಬನಲ್ಲಿರುವ ದೋಷ ಇನ್ನೊಬ್ಬನದಾಗಿರಲಾರದು. ಸ್ವತಃ ನಾವೇ ಪರಿಪೂರ್ಣರಲ್ಲದಿರುವಾಗ ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಅಸಮಂಜಸ (ಯಾರನ್ನಾದರೂ ತಿದ್ದುವ ವಿಷಯ ಹೊರತು ಪಡಿಸಿ. ಅದರ ವಿಧಾನ ಪ್ರಥಮ ಚಿಂತನದಲ್ಲಿದೆ.

ತೃತೀಯ ಚಿಂತನೆ-
ಬೇರೆಯವರನ್ನು ವಿಮರ್ಶಿಸುವ ನಾವು ನಮ್ಮ ಕುರಿತಾದ ವಿಮರ್ಶೆಯನ್ನೂ ಹಾಗೆಯೇ ಸ್ವೀಕರಿಸುತ್ತೀವಾ? ನಾವಾಡುವ ಮಾತು ಅಭಿವ್ಯಕ್ತಿ ಸ್ವಾತಂತ್ರ್ಯ. ಅದರ ಕುರಿತು ಬೇರೆಯವರು ಆಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯಹರಣ. ಇದು ಆಧುನಿಕ ಸಿದ್ಧಾಂತವಾಗಿಬಿಟ್ಟಿದೆ.

ಚತುರ್ಥ ಚಿಂತನೆ-
ಇದಿಷ್ಟು ನಮ್ಮರಿವಿಗೆ ಬಂದ ವಿಷಯಗಳ ಮೇಲಿನ ಮಾತಾಯಿತು. ನಾವು ಹೆಚ್ಚಾಗಿ ಮಾತನಾಡುವುದು ನಮಗೆ ಪ್ರತ್ಯಕ್ಷವಾಗಿ ಗೊತ್ತಿಲ್ಲದ, ಯಾರೋ ಹೇಳಿದ ಮಾತನ್ನು ಆದರಿಸಿದ್ದು. ಎಷ್ಟೋಬಾರಿ ನಮಗೆ ಹೇಳಿದವರಿಗೂ ಬೇರೆಯವರು ಹೇಳಿದ್ದೇ ಆಗಿರುತ್ತದೆ.
ಹೆಚ್ಚಾಗಿ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಮಾತುಗಳು ಹೀಗೆಯೇ ಆಗಿರುತ್ತದೆ. ಯಾವುದೇ ಹುಡುಗಿಯ ಜಾತಕ ಬಂದರೂ, ಯಾರಾದರೂ ಒಬ್ಬರು "ಅವಳು ಸರಿಯಿಲ್ಲ" ಎನ್ನುತ್ತಾರೆ. "ಅವಳು ಅವನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ" ಎನ್ನುತ್ತಾರೆ. ನಾವದನ್ನು ನಮ್ಮ ಬದುಕಿನ ಧ್ಯೇಯವೆಂದೇ ಸ್ವೀಕರಿಸುತ್ತೇವೆ. ಆ ಹುಡುಗಿಯ ಹೆಸರು ಬಂದಾಗಲೆಲ್ಲ ಅದನ್ನೂ ಪ್ರಚಾರ ಮಾಡಲಾರಂಭಿಸುತ್ತೇವೆ.
ಹಾಗೆಯೇ ಯಾರಾದರೂ ಗಂಡಸಿನ ಕುರಿತು "ಅವನು ವುಮನೈಜರ್" ಎನ್ನತೊಡುಗುತ್ತೇವೆ.ಅದಕ್ಕೆ ಸಾಕ್ಷಿ? ನಮ್ಮ ಕಣ್ಣಂತೂ ಅಲ್ಲ, ಬೇರೆಯವರ ನಾಲಗೆ. ಅವರಿಗೆ ಸಾಕ್ಷಿ? ಅವರ ಕಿವಿ, ಅದರಲ್ಲಿ ಸುತ್ತುಹಾಕುತ್ತಿರುವ ಇನ್ನಾರದೋ ನಾಲಗೆ. ವಾಸ್ತವವಾಗಿ ಯಾರೂ ಯಾರ ಸಂಬಂಧವನ್ನೂ ಕಂಡಿರುವುದಿಲ್ಲ. ಬರೀ ಅನುಮಾನ ಮಾತ್ರ. ಹುಡುಗಿಯರೊಂದಿಗೆ ಮಾತನಾಡಿದ್ದನ್ನು ನೋಡಿರುತ್ತೇವೆ; ಹೋಟ್ಳಲ್ಲೋ, ಮದುವೆ ಮನೆಯಲ್ಲೋ, ಪೇಟೆಯಲ್ಲೋ ಒಟ್ಟಿಗೆ ನಿಂತಿದ್ದನ್ನು ಕಂಡಿರುತ್ತೇವೆ. ಕಾಣದಿರುವುದೆಲ್ಲ ನಮ್ಮ ಕವಿತ್ವದ ಸಾಮರ್ಥ್ಯ ಅಷ್ಟೇ.

ಇತ್ತೀಚೆಗೆ ನನಗೆ ಗೊತ್ತಾದ ಒಂದು ಘಟನೆ. ಒಬ್ಬರ ಬಗ್ಗೆ ಅವರ ಹತ್ತಿರದವರು ನೈತಿಕತೆಯ ಕುರಿತು ಅವರ ಹತ್ತಿರದ ಇನ್ನೂ ಕೆಲವರಲ್ಲಿ ಮಾತನಾಡುತ್ತಾರೆ. ಅವರು ಬೇರೆಯವರಲ್ಲಿ ಹೇಳುತ್ತಾರೆ. ಅವರು ಮತ್ತೊಬ್ಬರಲ್ಲಿ.........
ವಾಸ್ತವವೆಂದರೆ ಇಡೀ ಪ್ರಕರಣದದಲ್ಲಿ ಮಾತನಾಡಿದ್ದು ಕಿವಿಯೇ ಹೊರತು ಕಣ್ಣಲ್ಲ.

ಹೀಗೆ ತನ್ನದೇ ವೃತ್ತದಲ್ಲಿ ತನ್ನ ಬಗ್ಗೆ ಇಂತಹ ಮಾತುಗಳು ಪ್ರಸಾರಗೊಳ್ಳತೊಡಗಿದರೆ - ಅದು ಆ ವ್ಯಕ್ತಿಗೆ ಗೊತ್ತಾದರೆ, ಅವರಿಗೆಷ್ಟು "ಶಾಕ್" ಆಗಬಹುದು? ಅವರಿಗೆ ಜೀವನದಲ್ಲಿ ಲವಲವಿಕೆ ಎಷ್ಟು ಉಳಿಯಬಹುದು? ತನ್ನ ವೃತ್ತದ ವ್ಯಕ್ತಿಗಳ ಕುರಿತು ಅವರಲ್ಲಿ ಎಂತಹ ಭಾವನೆ ರೂಪುಗೊಳ್ಳಬಹುದು? ಯಾಕೆಂದರೆ ದೋಷ - ದೌರ್ಬಲ್ಯಗಳನ್ನು ಪ್ರಸಾರ ಮಾಡದಿರುವವರಿಗೆ ತಾನೇ ಆತ್ಮೀಯರೆನ್ನುವುದು? ಹಾಗಿರುವಾಗ ಸುಳ್ಳು ಸುದ್ದಿಗೆ ಕೈ ಕಾಲು ಜೋಡಿಸುವವರಿಗೆ ಆತ್ಮೀಯರೆನ್ನಲಾದೀತೇ?ಅವರೊಂದಿಗೆ ಮುಂದೆ ಬದುಕಲಾದೀತೇ?

ಮತ್ತೆ "ಪದ್ಮಪ್ರಿಯಾ" ಪ್ರಕರಣಕ್ಕೆ ಬಂದರೆ-
ಪದ್ಮಪ್ರಿಯಾ ಪತಿಯೊಂದಿಗೆ ಬದುಕಲಾರದ ಹಂತಕ್ಕೆ ಬಂದಿದ್ದರೆ ಅದಕ್ಕೆ ಅವರ ಕಾಮತೃಷೆಯೇ ಕಾರಣವಾಗಬೇಕೇ? ಗಂಡ - ಹೆಂಡಿರ ನಡುವೆ ಇರುವುದು ಕಾಮವೊಂದೆಯೇ? ಭಾವನಾತ್ಮಕವಾಗಿ ತುಂಬಬೇಕಾದ್ದನ್ನು ಭಟ್ಟರು ಒಂದೊಮ್ಮೆ ತುಂಬಿಕೊಡದಿದ್ದರೆ, ಆಗ ಬದುಕು ಅಸಹನೀಯವೆನಿಸಿರಬಹುದು. ತುಂಬಿಕೊಡುವ ಸ್ವಭಾವ ಅತುಲ್ ರಾವ್ ರಲ್ಲಿ ಕಂಡಿರಬಹುದು. ಇದನ್ನು ನೈತಿಕ ಅಧಃಪತನ ಎನ್ನುವಂತಿಲ್ಲ. { ಭಾರತೀಯ ಸಂಸ್ಕೃತಿಯ ನೇರದಲ್ಲಿ ಇದು ಸರಿಯೇ? ಎನ್ನುವುದು ಬೇರೆ ಚರ್ಚೆಯ ವಿಷಯ.} ಹಾಗಾಗಿ "ಅತುಲ್ ರೊಂದಿಗೆ ಸಂಬಂಧವಿತ್ತು" ಎನ್ನುವ ಕೊಳಕು ಮಾತನ್ನು ಆಡುವಂತಿಲ್ಲ.
ಪದ್ಮಪ್ರಿಯಾ ಸತ್ತರು. ಅದಕ್ಕೆ ರಘುಪತಿಭಟ್ಟರ "ಕಚ್ಚೆ ಹರುಕುತನ" ಕಾರಣ ಅಂತ ಸಾರಾಸಗಾಟಾಗಿ ಉದ್ಘೋಷಿಸಲು ಹೇಗೆ ಸಾಧ್ಯ? ನಮ್ಮೂರ ಭಾಷೆಯಲ್ಲಿ ಹೇಳುವುದಾದರೆ - ಮಾತನಾಡುವವರು "ಬ್ಯಾಟರಿ" ಬಿಟ್ಟಿದ್ದರೇ?
ಅವರ ದಾಂಪತ್ಯ ವಿರಸಕ್ಕೆ ಸಾವಿರ ಕಾರಣಗಳಿರಬಹುದು. ಅದು ಭಟ್ಟರದ್ದೂ ಆಗಿರಬಹುದು; ಪದ್ಮಪ್ರಿಯಾರದ್ದು ಆಗಿರಬಹುದು; ಇಬ್ಬರದ್ದೂ ಆಗಿರಬಹುದು; ಇಬ್ಬರದ್ದೂ ಅಲ್ಲದಿರಬಹುದು. ಮಾತನಾಡುತ್ತಿರುವ ಎಲ್ಲರ ಮುಂದೆ ಭಟ್ಟರು ಮತ್ತು ಪದ್ಮಪ್ರಿಯಾರ ಹುಟ್ಟಿದಂದಿನಿಂದ ಇಂದಿವರೆಗಿನ ಪ್ರತಿಕ್ಷಣದ ಘಟನೆಗಳು ರಜತಪರದೆಯಲ್ಲಿ ಬಿತ್ತರಗೊಂಡಿದೆಯೇ? ಹಾಗಿಲ್ಲದಿದ್ದ ಮೇಲೆ ಯಾರದೋ ಮಾತುಗಳನ್ನು ಕೇಳಿ "ಭಟ್ಟರು ಸರಿಯಿರಲಿಲ್ಲ, ಅದಕ್ಕೆ ಹೀಗಾಯಿತು" ಎನ್ನುವುದು ಹೇಗೆ ಸರಿ?

"ಪದ್ಮಪ್ರಿಯಾ ತಾವೇ ಸತ್ತರು.
ಭಟ್ಟರನ್ನು ನಾವು ಸಾಯಿಸುತ್ತಿದ್ದೇವೆ.
ಅಷ್ಟೇ ಅಲ್ಲ, ತಮ್ಮ ಹೆತ್ತವರ ಬಗ್ಗೆ ಹೀನಾತಿಹೀನ ಮಾತುಗಳನ್ನು ಕೇಳುತ್ತಿರುವ ಅವರ ಇಬ್ಬರು ಮಕ್ಕಳನ್ನು ಚಿತ್ರಹಿಂಸೆ ಕೊಟ್ಟು ಕೊಟ್ಟು ಸಾಯಿಸುತ್ತಿದ್ದೇವೆ"
ಅಂತ ಅನ್ನಿಸುವುದಿಲ್ಲವೇ?






6 comments:

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

prayaasada payanadalli obba aatmiya sikkastu santoshavaytu.e aatmiyana payana nirantaravagali,jote saguva bhagya nannadagali

NiTiN Muttige said...

ಖಂಡಿತ ಇದನ್ನು ಓದಿದ ಮೇಲೆ, ನಮ್ಮ ಮಾಧ್ಯಮಗಳು ಈ ರೀತಿ ಯೋಚಿಸಿದರೆ ಚೆನ್ನ ಅನ್ನಿಸಿತು. ನಿಜವಾಗಿಯೂ ನಿಮ್ಮ ಬರಹ ಚಿಂತನೆಗೆ ಹಚ್ಚಿಸೀತು .

Krupesh said...

blog lokakke swaagatha annange! hingaadru, neenu barediddu odakkaghtu nodu. looking forward to more blog write up...

kuthoohala matthu dourbalyagalu swaabhavika. adu innobbarige tondareyaadaaga maathra kasta. media makes this mistake always knowingly or unknowingly, making innocents suffer

ಜಗದೀಶಶರ್ಮಾ said...

ಗೆಳೆಯರೆ
ನಿಮ್ಮ ಪ್ರತಿಕ್ರಿಯೆ ಖುಶಿ ಕೊಟ್ಟಿತು. ನಿರಂತರತೆ ಇರಲಿ.

venu said...

prabudda baraha. Nimma abhiprayakke nanna 100% voting ide.

Anonymous said...

ಪ್ರಿಯ ಜಗದೀಶಣ್ಣ..........
ನಿಮ್ಮ ಸಮಾಜಮುಖೀಕಾರ್ಯದ ಜಂಜಾಟದ ನಡುವೆ ನಿಮ್ಮದೇ ಆದ ಬ್ಲಾಗೊಂದು ಆವೀರ್ಭವಿಸಿರುವುದು ವಿದ್ಯಾರ್ಥಿಲೋಕಕ್ಕೊಂದು ಸಂತಸದ ವಿಷಯ.
ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕೆನ್ನಿಸುವ ನಿಮ್ಮ ಆ ಶೈಲಿ.....ಬುದ್ಧಿವಾದಿಗಳ ಬಾಯನ್ನು ಮುಚ್ಚಿಸುವಂತಹ ವಿಭಿನ್ನವಾದ ಮತ್ತು ಧರ್ಮಯುಕ್ತವಾದ ಚಿಂತನೆ.....ಪದ್ಮಪ್ರಿಯಾ ಮುಂತಾದ ಘಟನೆಗಳಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕೆಂಬ ದ್ವಂದ್ವದಲ್ಲಿದ್ದಾಗ ನಿಮ್ಮಿಂದ ಬರುವ ಸಹಜವಾದ ಉತ್ತರ......ಇದೆಲ್ಲವನ್ನವಲೋಕಿಸಿದಾಗ ಈ ಬ್ಲಾಗ್ ಲೋಕಕ್ಕೆ ಹೀಗೊಬ್ಬ ಲೇಖಕ ಮುಂಚೆಯೇ ದೊರೆಯಬಾರದಿತ್ತೇ?ಎಂದೆನಿಸುತ್ತದೆ.
ಬ್ಲಾಗ್ ಪ್ರಿಯರೇ,
ನಾವು ಎಷ್ಟೋ ಈ ರೀತಿಯ ಲೇಖಕರನ್ನು ಹಲವು ರೀತಿಯಲ್ಲಿ ಕಳೆದುಕೊಂಡು ಬಿಟ್ಟಿದ್ದೇವೆ.ಮತ್ತೆ ಆ ತಪ್ಪು ಮರುಕಳಿಸದಿರಲಿ.ಇವರ ಲೇಖನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತ ನಮಗೆ ಕನಿಷ್ಠ ದಿನಕ್ಕೊಂದು ಲೇಖನವಾದರೂ ಹೊರಬರಲೆಂದು ಪ್ರಾರ್ಥಿಸೋಣ....
ಏನಂತೀರಿ.....?