Monday 23 June, 2008

ಓದಲೊಂದು ಪುಸ್ತಕ

ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಸಾಹಿತಿಗಳ ಸ್ಮೃತಿ" ಓದುತ್ತಿದ್ದೆ. ಚೇತೋಹಾರಿ ಅನುಭವ. ಓದಹೊರಡುವ ಮುನ್ನ ಇಂತದ್ದೊಂದು ಮಧುರಾನುಭವದ ನಿರೀಕ್ಷೆಯೇ ಇರಲಿಲ್ಲ
ಕಿಡ್ನಿಸ್ಟೋನಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಸೇರಿದ ಸಂಧರ್ಭ. ಹೊತ್ತುಕಳೆಯಲು ಹೊತ್ತಿಗೆ ಬೇಕೆನಿಸಿದಾಗ ಡಾ.ಚಿತ್ರಲೇಖ ತಂದುಕೊಟ್ಟ ಪುಸ್ತಕಗಳಲ್ಲಿ ಒಂದು ಪುಸ್ತಕ ಗಮನ ಸೆಳೆಯಿತು. ಅದು ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಯೇಗ್ದಾಗೆಲ್ಲಾ ಐತೆ" ಗ್ರಂಥ ಅಲ್ಲಲ್ಲಿ ಶಾಸ್ತ್ರಿಗಳ ಹೆಸರು ಕೇಳಿದ್ದನೆ ಹೊರತು ಅವರನ್ನು ಓದಿರಲಿಲ್ಲ. ಸರಿ, ನೋಡೋಣ ಎಂದು ಕೊಂಡು ಓದತೊಡಗಿದೆ.
ಚಿಕಿತ್ಸೆ ಮುಗಿಯಿತು, ವಿಚಿಕಿತ್ಸೆ ಹಾಗೇ ಉಳಿಯಿತು. ಶಾಸ್ತ್ರಿಗಳು ಮನದಲ್ಲಿ ಪ್ರಶ್ನೆಯಾಗಿಯೇ ಉಳಿದರು.

ಗುರುಕುಲದ ಗ್ರಂಥಧಾಮಕ್ಕೆ ಹೊಸರೂಪ ಕೊಡುವ ಪ್ರಯತ್ನದಲ್ಲಿದ್ದಾಗ "ಸಾಹಿತಿಗಳ ಸ್ಮೃತಿ" ಗಮನ ಸೆಳೆಯಿತು. ಓದು ಸಾಗಿತು..................

ಮಾಸ್ತಿ - ಡಿ.ವಿ.ಜಿ - ಬೇಂದ್ರೆ - ರಾಜರತ್ನಂ - ವಿ.ಸಿ. - ದೇವುಡು ಹೀಗೆ ಆ ಕಾಲದ ಸಾಹಿತಿಗಳ ಸಂಗದ ಸವಿನೆನಪು ಪುಸ್ತಕದಲ್ಲಿ ಬಿತ್ತರಗೊಂಡಿದೆ. ಪುಸ್ತಕ ಕಿರಿದು. ಒಳಗೂ ಅಷ್ಟೇ. ದೀರ್ಘ ಲೇಖನಗಳಿಲ್ಲ, ಒಂದೂವರೆಯಿಂದ ಎರಡೂವರೆ ಪುಟದ ಪುಟ್ಟಲೇಖನದ ಗುಚ್ಛ. ಶೈಲಿಯೂ ಹಾಗೆಯೇ. ಅನುಭವಿಸಿದ್ದನ್ನು ನೇರವಾಗಿ ಹೇಳಿದ್ದು.

ಆ ಮಹನೀಯರುಗಳ ಸರಳ, ಆದರೆ ಉದಾತ್ತ ಜೀವನವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ ಈ ಗ್ರಂಥ. ಅವರ ಜೀವನದ ಸಣ್ಣ ಸಣ್ಣ ಘಟನೆಗಳು ಬದುಕಿಗೆ ದೊಡ್ಡ ಪಾಠ ನೀಡುತ್ತವೆ.

ಬೇಂದ್ರೆ ಆಡುವ ಈ ಮಾತೊಂದು ಸಾಕು, ಪುಸ್ತಕದ ಉಪಯುಕ್ತತೆಯನ್ನರುಹಲು-
"ಸುಖ ಅಂದರೆ ಹಿತ. ಅದು ನಮ್ಗು ಹಿತ, ಪಕ್ಕದಲ್ಲಿದ್ದವರಿಗೂ ಹಿತ, ಸರ್ವರಿಗೂ ಹಿತ ಆದಾಗ ಸುಖ ಆಗ್ತದ".
ಓದ್ತೀರಲ್ಲಾ ಗೆಳೆಯರೇ!

3 comments:

ಯಜ್ಞೇಶ್ (yajnesh) said...

ಆತ್ಮೀಯ ಭಾವಯ್ಯ,

ಬಿಡುವಿಲ್ಲದ ಜವಾಬ್ದಾರಿಗಳ ನಡುವೆ ಬ್ಲಾಗ್ ಲೋಕಕ್ಕೆ ಕಾಲಿಟ್ಟಿರುವ ನಿಮಗೆ ಸ್ವಾಗತ. ನಿಮ್ಮ ಅನುಭವದ ಧಾರೆ ಬ್ಲಾಗಿನಲ್ಲಿ ಬರಲಿ.

ಜಗದೀಶಶರ್ಮಾ said...

ಹಳೆ-ಹೊಸದರ ಸಮನ್ವಯ ಚಿಂತನೆಯ ಹೊಸ ಹಾದಿ ಹುಡುಕೋಣ.

venu said...

Ninna gadibidiya jeevanadalli baravanigege ondistu samaya kottu nammanta paamararigella spoortiyaaguva ninna lekhanagalige swagata...........