Sunday 25 December, 2011

ಗುರುವೆ ಬದುಕಿನ ಗರಿಮೆ

ಗುರು ಬದುಕಿನ ಸರ್ವಸ್ವ.
ಅವನ ಒಲುಮೆಯಿದ್ದರೆ ಮಾತ್ರ ಜೀವನ ಸಾರ್ಥಕ. ಇಲ್ಲವಾದರೆ ಜೀವನ ನಿರರ್ಥಕ.

ಜೀವನದ ಅರ್ಥವೆಂದರೆ ಪರಮಾರ್ಥ.
ಅದಕ್ಕಾಗಿಯೇ ಬದುಕು; ಅದರಿಂದಲೇ ಬದುಕು; ಅದೇ ಬದುಕು.

ಪರಂಜ್ಯೋತಿಯೊಂದಿಗೆ ಒಂದಾಗುವುದೇ ಜೀವನಕ್ಕಿರುವ ಪ್ರಯೋಜನ.
ಯಾಕೆಂದರೆ ಇರುವುದು ಪರಂಜ್ಯೋತಿಯೊಂದೇ. ಇನ್ನೆಲ್ಲ ಇರುವಂತೆ ತೋರುವುದಷ್ಟೆ.
ಇದನ್ನೇ ಭಗವತ್ಪಾದರು 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ' ಎಂದರು.

ಇರುವುದು ಅದೊಂದೇ ಎಂದಮೇಲೆ ಜೀವದ ಜೀವಸ್ಥಿತಿಯೂ ಅಸ್ತಿತ್ವರಹಿತವೇ ಸರಿ. ಅದು ತತ್ಕಾಲದ ಸತ್ಯ. ನಿತ್ಯಸತ್ಯ 'ತತ್' ಎಂದೆನಿಸಿಕೊಳ್ಳುವ ಅದೇ 'ಅದು'. ಅದನ್ನು ಸೇರಬೇಕು.
ಅದೇ ಅಸ್ತಿತ್ವ, ಅದೇ ಅಸ್ಮಿತೆ.

ಸರಿ, ಸೇರುವುದಾದರೂ ಹೇಗೆ? ಎಲ್ಲಿ? ಎಂತು?
ಉತ್ತರಿಸುವವ ಬೇಕು. ಮಾತ್ರವಲ್ಲ, ಆತ ಎತ್ತರಿಸುವವನೂ ಆಗಿರಲೇಬೇಕು.
ಯಾರದು? ಇನ್ನಾರು....
"ಗುರು".

ಗುರುವಿನಾಶ್ರಯ ಬದುಕಿನ ಪರಮಾರ್ಥಕ್ಕೆ ಸಾಧಕ. ಗುರುವಿನಾಶಯವೂ ಅದೇ ತಾನೇ!
ಹಾಗಾಗಿ ಗುರು ಬೇಕು, ಗುರುವನ್ನು ನಂಬಬೇಕು, ಗುರುವನ್ನು ಆಶ್ರಯಿಸಬೇಕು, ಗುರುವನ್ನು ಆರಾಧಿಸಬೇಕು.

ಗುರುವಿನ ಆರಾಧನೆಗೆ ಹತ್ತು ಮಾರ್ಗಗಳು, ಹಲವು ವಿಧಾನಗಳು.

ಯಾವುದೇ ಮಾರ್ಗ, ಯಾವುದೇ ವಿಧಾನ ನಮ್ಮೆದುರು ತೆರೆದುಕೊಂಡರೂ ಅದನ್ನು ಬಳಸಿಕೊಳ್ಳೋಣ;
ಗುರುವಿನ ಅನುಗ್ರಹ ಧಾರೆಯಲ್ಲಿ ಮಿಂದು ಪುನೀತರಾಗೋಣ;
ಪರಮಾರ್ಥಪಥಿಕರಾಗೋಣ.

2 comments:

Suresh Bhat Adagodi said...

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..

ಜಗದೀಶಶರ್ಮಾ said...

Dhanyata....