Sunday, 21 December, 2008

ಎಂಟರ ಗಂಟು....ಇರಲದರ ನಂಟು....

ಧರ್ಮ ಮಾನವೀಯ. ಅಮಾನವೀಯತೆ ಧರ್ಮಕ್ಕೆ ಸಲ್ಲುವಂತದ್ದಲ್ಲ. ಧರ್ಮ ಮೈಗೂಡಿದರೆ ಅದು ವ್ಯಕ್ತಿತ್ವದ ಪರಿಪೂರ್ಣತೆ. ವ್ಯಕ್ತಿ ಪೂರ್ಣಗೊಳ್ಳಬೇಕು. ಹಾಗಿದ್ದರೆ ಧರ್ಮ ಮೈಗೂಡಬೇಕು. ಅದು ಹೇಗೆ? ಧರ್ಮದ ಸಾಧಾರಣತೆ ನಮ್ಮದಾಗಬೇಕು. ಆಗ ಅದು ಸಾಧ್ಯ.

ಧರ್ಮಕ್ಕೆ ಎಂಟು ಅಂಶಗಳು. ಹಾಗೆಂದು ಬೃಹಸ್ಪತಿಯ ನುಡಿ. ಯಾವುದದು ಎಂಟು?
೧. ದಯಾ ೨. ಕ್ಷಮಾ ೩. ಅನಸೂಯಾ ೪. ಶೌಚ
೫. ಅನಾಯಾಸ ೬. ಮಂಗಲ ೭. ಅಕಾರ್ಪಣ್ಯ ೮. ಅಸ್ಪೃಹಾ

ದಯೆಯೆಂದರೆ....

ಮೊದಲಿನದ್ದು 'ದಯಾ'. ಅದೊಂದು ಜೀವರಸ. ಅದು ಹರಿದಲ್ಲಿ ಕೊರಡು ಕೊನರೀತು. ಅದಕ್ಕೆ ಭೇದದ ಭಾವವಿಲ್ಲ. ಅದರ ನೋಟದಲ್ಲಿ ಎಲ್ಲವೂ ಸಮಾನ. ಎಲ್ಲದರ ಹಿತವೇ ಅದರ ಮತ. ಎಲ್ಲರನ್ನೂ ರಕ್ಷಿಸುತ್ತದೆ ಅದು. ಬಂಧುವನ್ನೂ - ಬಂಧುವಲ್ಲದವನನ್ನೂ, ಮಿತ್ರನನ್ನೂ - ಶತ್ರುವನ್ನೂ ಕಾಪಾಡುವ ತವಕ ಅದರದ್ದು. ಅದಿಲ್ಲದೆ ನಡೆದ ಸಂಘರ್ಷಗಳೆಷ್ಟೋ? ಯುದ್ಧಗಳೆಷ್ಟೋ? ಹರಿದ ರಕ್ತದ ಧಾರೆ ಅದೆಷ್ಟೋ? ಅದಿರುವವರಿಂದ ಲೋಕಕ್ಕೆ ದೊರೆತ ಶಾಂತಿ ಇನ್ನದೆಷ್ಟೋ? ಅದೇ ದಯೆ.

ಕ್ಷಮೆಯೆಂದರೆ....

ಎರಡನೆಯದ್ದು 'ಕ್ಷಮಾ'. ಅದೊಂದು ದೃಢತೆ. ಹೊರನೋಟಕ್ಕದು ಅಸಮರ್ಥತೆ. ಹಾಗೆನಿಸುತ್ತದೆ, ಆದರದು ಹಾಗಲ್ಲ. ಅದು ಅತ್ಯಂತ ಗಟ್ಟಿತನ. ಬದುಕಿನ ಮೇಲೆ ಆಘಾತಗಳು ಸಹಜ. ಕೆಲವೊಮ್ಮೆ ಅದು ವ್ಯಕ್ತಿನಿರ್ಮಿತ. ಆಗ ನಮ್ಮನ್ನಾವರಿಸುತ್ತದೆ ಕೋಪ. ಕೋಪದ ಮುಂದಿನ ಹೆಜ್ಜೆ ಹಿಂಸೆ. ಹಾಗಾಗದಿರುವಿಕೆಯೇ ಕ್ಷಮೆ. ಅಂದರೆ ಕೋಪಗೊಳ್ಳದಿರುವುದು. ಹಿಂಸೆ ಮಾಡಿದವನ ವಿಷಯದಲ್ಲಿಯೂ ಅಹಿಂಸೆ. ಅಳು ತರಿಸಿದವನಿಗೆ ನಗು. ಹೊಡೆದವನಿಗೆ ಹೂವಿನ ಮಾಲೆ. ಮನದಲ್ಲಿ ಕೋಪವಿಲ್ಲ ; ಮಾತಿನಲ್ಲಿ ಬೈಗುಳಿಲ್ಲ ; ಕರದಲ್ಲಿ ಕರವಾಲವಿಲ್ಲ. ಇದು ಕ್ಷಮೆ.

ಅನಸೂಯೆಯೆಂದರೆ....

ಮೂರನೆಯದ್ದು 'ಅನಸೂಯಾ'. ಅಸೂಯೆ ಇಲ್ಲದಿರುವಿಕೆಗೆ ಆ ಹೆಸರು. ಅದಿರುವುದು ಹೇಗೆ? ಗುಣವಂತರ ಕಂಡರಾಗದು. ಕಣ್ಣು ಕುಕ್ಕುತ್ತದೆ ಅದರ ಗುಣ. ಗುಣ ಕಡಿಮೆಯಿದ್ದರೆ? ಹಬ್ಬದೂಟ ಸಿಕ್ಕಂತಾಯಿತು. ಟೀಕೆಯ ಸುರಿಮಳೆ ಆರಂಭ. ಒಂದಿಷ್ಟು ದೋಷಗಳು ಕಂಡರಂತೂ, ಬಿಡಿ ; ಮುಗಿದೇ ಹೋಯಿತು. ಅದು ಮದುವೆ ಊಟವೇ ಸರಿ. ಟೀಕೆ - ನಿಂದೆ - ಅವಹೇಳನ ಎಲ್ಲದರ ಮಹಾಪ್ರವಾಹ. ಇದು ನಮ್ಮ ಸ್ಥಿತಿ. ಇದೇಕೆ ಹೀಗೆ? ಅದು ಹೀಗೆಯೇ. ಇದೊಂದು ತರಹದ ಮನೋವ್ಯಾಧಿ. ಒಳಿತನ್ನು ಒಳಿತೆಂದುಕೊಳ್ಳಲಾರೆವು. ಅದರಲ್ಲಿರುವ ತಪ್ಪಲ್ಲೇ ನಮಗೆ ಅಭಿರುಚಿ. ಸುಂದರವಾದ ದೇಹದ ಯಾವ ಸ್ಥಳವೂ ನೊಣಕ್ಕಾಗದು. ಕೀವು ತುಂಬಿದ ಹುಣ್ಣೇ ಅದಕ್ಕೆ ಬೇಕು. ಬೇರೆಯವರ ಉತ್ಕರ್ಷದೆಡೆಗೆ ಅಸಹನೆ. ಅದಕ್ಕೆ ಅಸೂಯೆಯೆಂದು ಹೆಸರು. ಅದಿಲ್ಲದಿರುವುದೇ 'ಅನಸೂಯಾ'.

ಶೌಚವೆಂದರೆ....

ನಾಲ್ಕನೆಯದು ಶುಚಿತ್ವ. ಕೊಳಕು ಸೃಷ್ಟಿಗೆ ಸಹಜ. ಈ ಕ್ಷಣ ಫಳಫಳನೆ ಹೊಳೆಯುತ್ತಿದೆ ಕ್ಟಕಿಯ ಗಾಜು. ಐದು ನಿಮಿಷ ಬಿಟ್ಟಾಗ ಧೂಳು ಧೂಳು. ಸ್ವಚ್ಛವಾಗಿ ತೊಳೆದ ಬಟ್ಟೆ. ನಾಳೆ ಮತ್ತೆ ತೊಳೆಯುವುದೇ. ಇದು ಬಹಿರಂಗದ ಮಾತಾಯಿತು. ಅಂತರಂಗವೂ ಅಂತೆಯೇ. ಶುದ್ಧವೆಂದು ಅಂದುಕೊಂಡಿರುತ್ತೇವೆ ನಾವು. ಅದಾಗಲೇ ಸಂಸ್ಕಾರ ಕಳೆದುಕೊಂಡಿರುತ್ತದೆ.ಹೊರ ಬದುಕಿನಲ್ಲೊಂದು ಸ್ವಚ್ಛತೆ, ಒಳ ಬದುಕಿಗೊಂದು ಸಂಸ್ಕಾರ. ಇದೊಂದು ನಿರಂತರ ಪ್ರಕ್ರಿಯೆ. ಸಾಗುತ್ತಲೇ ಇರಬೇಕು. ಅದು 'ಶೌಚ'.

ಅನಾಯಾಸವೆಂದರೆ....

ಐದನೆಯದ್ದು 'ಅನಾಯಾಸ'. ಶರಿರ ಒಂದು ಅಚ್ಚರಿ. ಜೀವಂತ ಶರೀರ ಇಂದಿಗೂ ವಿಜ್ಞಾನಕ್ಕೆ ವಿಸ್ಮಯ. ಅದರ ಪ್ರತಿಸೃಷ್ಟಿ ಅಸಂಭವ. ಹಾಗೆಯೇ ಅದರ ಚಿರಂಜೀವಿತೆಯೂ. ಅದಿದ್ದರೆ ಜಗವುಂಟು. ಅದಿಲ್ಲದಿದ್ದರೆ ಜಗವಿಲ್ಲ. ಅದರ ಪಾಲನೆ ಅಪೇಕ್ಷಿತ. ಅನಿವಾರ್ಯವೂ ಕೂಡ. ಅದು ಬೇಯಬಾರದು. ಬಸವಳಿಯಬಾರದು. ಸವೆಯಬಾರದು. ಒಣಗಬಾರದು. ಅದು ಆಯಾಸಗೊಳ್ಳಲೂಬಾರದು. ಬದುಕಿಗೆ ಬೇಕಾದ ಕಾರ್ಯವೇ ಇದ್ದೀತು. ಅದರಿಂದ ದೇಹಕ್ಕೆ ತಡೆಯಲಾರದ ಆಯಾಸ ಸರಿಯಲ್ಲ. ಹಾಗಿರುವುದು 'ಅನಾಯಾಸ'.

ಮಂಗಲವೆಂದರೆ....

ಆರನೆಯದ್ದು 'ಮಂಗಲ'. ಕ್ರಿಯೆಯಿಲ್ಲದೆ ಬದುಕಿಲ್ಲ. ಕ್ರಿಯೆಯೇ ಬದುಕೆಲ್ಲ. ಮಾಡುತ್ತಲೇ ಇರುತ್ತೇವೆ. ಏನನ್ನು? ಏನೇನನ್ನೋ. 'ಏನಾದರೂ ಮಾಡುತಿರು ತಮ್ಮ' ಎಂದಿದ್ದಾರಲ್ಲ. ಮಾಡುತ್ತಲೇ ಇದ್ದೇವೆ. ಅದರಿಂದೇನಾಯ್ತು? ಅನುಕೂಲವೂ ಪ್ರತಿಕೂಲವೂ. ಕೆಲವು ಬೇರೆಯವರಿಗೆ ಪ್ರತಿಕೂಲ. ಕೆಲವು ಒಳ್ಳೆಯ ಕಾರ್ಯ. ಕೆಲವು ಕೆಡುಕು. ಕೆಲವು ಲೋಕ ಮೆಚ್ಚುವಂತದ್ದು. ಲೋಕ ನಿಂದಿಸುವ ಕಾರ್ಯ ಅಮಂಗಲ. ಲೋಕ ಪ್ರಶಂಸಿಸುವ ಕಾರ್ಯ 'ಮಂಗಲ'.

ಅಕಾರ್ಪಣ್ಯವೆಂದರೆ....

ಏಳನೆಯದ್ದು 'ಅಕಾರ್ಪಣ್ಯ'. ಕೊಡುವಿಕೆ ಸೃಷ್ಟಿಯ ಧರ್ಮ. ಅದೇ ಅದರ ಬೆಳವಣಿಗೆಗೆ ಸಾಧನ. ಅದರ ಉಳಿವಿಕೆಗೂ ಅದೇ ಕಾರನ. ಒಂದು ಇನ್ನೊಂದಕ್ಕೆ, ಅದು ಮತ್ತೊಂದಕ್ಕೆ, ಹೀಗೆ ಕೊಡುವಿಕೆಯಿಂದ ಸಾಗಿದೆ ಪ್ರಪಂಚ. ಕೊಡುವಿಕೆ ಕಾಯಕವಾಗಬೇಕು. ಅದೂ ಪ್ರತಿನಿತ್ಯ. ಸಾಮರ್ಥ್ಯದಷ್ಟು ದಾನ ಪ್ರಶಸ್ತ. ಕೊಡುವ ಮನವಿಲ್ಲದಿರುವುದು ಕಾರ್ಪಣ್ಯ. ಅದೇ ಜಿಪುಣತನ. ಅದಿಲ್ಲದಿರುವುದು ಔದಾರ್ಯ. ಅದೇ 'ಅಕಾರ್ಪಣ್ಯ'.

ಅಸ್ಪೃಹವೆಂದರೆ....

ಎಂಟನೆಯದ್ದು 'ಅಸ್ಪೃಹಾ'. ವಸ್ತುಗಳು ಬೇಕು. ಸುಖ ಜೀವನಕ್ಕದು ಸಾಧನ. ಬದುಕೆಲ್ಲ ವಸ್ತುಸಂಗ್ರಹಕ್ಕೇ ಪ್ರಯತ್ನ. ಮನೆ ತುಂಬಿದರೂ ತೃಪ್ತಿಯಿಲ್ಲ. ಅನ್ಯರ ವಸ್ತುವಿನ ಮೇಲೆ ಕಣ್ಣು. ಅದಾದ ಮೇಲೆ ಭೂಮಿ. ಮೊಮ್ಮಕ್ಕಳಿಗೂ ಸಾಕು. ಆದರೂ ಹಪಹಪಿಕೆ. ಹಣವೂ ಹಾಗೆಯೇ. ಎಷ್ಟಿದ್ದರೂ ಸಾಲದು. ಇದು ಸ್ಪೃಹಾ. ಪರರ ವಸ್ತುವಿನ ಮೇಲೆ ಆಸೆಯಿಲ್ಲ. ತನಗೆ ದಕ್ಕಿದ್ದಷ್ಟೇ ತನ್ನದು. ದುಡಿಮೆ ನ್ಯಾಯಯುತ. ಅನ್ಯಾಯದ ಸಂಪಾದನೆಯಿಲ್ಲ. ಅತ್ಯಾಸೆ ಮೊದಲೇ ಇಲ್ಲ.ಅದು 'ಅಸ್ಪೃಹಾ'.

ಎಂಟರ ನಂಟಿರಲಿ....

ಇಂತಹ ಧರ್ಮ ನಮ್ಮದಿರಲಿ. ಅದು ನಮ್ಮ ಮೈಗೂಡಿರಲಿ. ಅದರ ಗೂಡಲ್ಲಿ ನಮ್ಮ ತಾವಿರಲಿ. ಅದು ನಮಗೂ ಹಿತ. ಪರರಿಗೂ ಹಿತ.


(ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)

No comments: