Saturday 20 December, 2008

ಮನುಭಾಷಿತ - 8

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಧನಸಂಗ್ರಹ" ಆಧುನಿಕ ಜನಜೀವನದ ಪ್ರಮುಖೋದ್ದೇಶ. ಶಯನದಿಂದ ಕಣ್ದೆರೆಯುವುದೇ ಧನಪ್ರಾಪ್ತಿಗಾಗಿ ; ಸಹಜೀವಿಗಳೊಂದಿಗೆ ಸಂವಾದವೂ ಧನಾಗಮನಕ್ಕಾಗಿ ; ಪರಿಸರದೊಂದಿಗೆ ಒಡನಾಟವೂ ಅರ್ಥಸಂಪತ್ತಿಗಾಗಿ ; ಅಷ್ಟೇಕೆ, ಶಿಕ್ಷಣವನ್ನು ಸಂಪಾದಿಸುವುದೂ ಧನಸಂಪಾದನೆಗಾಗಿಯೇ.

ಧನದ ಹಿಂದೆ ಓಡುತ್ತಿದೆ ಹುಚ್ಚು ಕುದುರೆಯಂತೆ ಜಗತ್ತಿನ ಮನಸ್ಸು.

ಆಧುನಿಕ ಜಗತ್ತಿನ ಸರ್ವಕ್ಷೀಣತೆಗೆ ಧನದಾಹವೇ ಕಾರಣವೆಂದರೆ ಸೂರ್ಯಸ್ಪಷ್ಟ ಸಂಗತಿಯೇ ಸರಿ.

ಹಣಕ್ಕಾಗಿ ಬದುಕಿನೆಲ್ಲ ಕ್ಷಣಗಳನ್ನು ವಿನಿಯೋಗಿಸುವ ಮನಸ್ಸುಗಳು ಇಲ್ಲಿವೆ.

ಹಣಕ್ಕಾಗಿ ತಂದೆ - ತಾಯಿ - ಹೆಂಡತಿ - ಮಕ್ಕಳು - ಮಿತ್ರರು - ಸಂಬಂಧಿಗಳು....ಎನ್ನುವ ಎಲ್ಲ ಮಾನವೀಯ ಸಂಬಂಧಗಳನ್ನು ಛಿದ್ರಗೊಳಿಸುವ ಘಟನೆಗಳು ಹುಚ್ಚೆದ್ದು ಕುಣಿಯುತ್ತಿವೆ.

ಹಣಕ್ಕಾಗಿ ಅನ್ಯರ ಬದುಕಿನ ಸುಮಸದೃಶ ಸುಖಮಯ ಕ್ಷಣಗಳನ್ನು ಹೊಸಕಿ ಹಾಕುವ ಕ್ರೂರತೆ ಜಗತ್ತನ್ನು ದಹಿಸುತ್ತಿದೆ.

ಹಣಕ್ಕಾಗಿ ಮನುಷ್ಯ ಎಷ್ಟು ಕಾಲಕ್ಕೂ ನೀಡಲಸಾಧ್ಯವಾದ ಜೀವವನ್ನೇ ಹರಣಮಾಡುವ ಭೀಭತ್ಸತೆಯೂ ನಮ್ಮ ಮುಂದಿದೆ.

ಇದನ್ನೇ ಕವಿಹೃದಯ ಅನುರಣಿಸುತ್ತಿದೆ-

"ಕುರುಡು ಕಾಂಚಾಣ ಕುಣಿಯುತಲಿತ್ತು, ಎದುರಿಗೆ ಬಂದವರ ತುಳಿಯುತಲಿತ್ತು" ಎಂದು.

ಆಧುನಿಕದ ಈ ಅಪರಿಹಾರ್ಯವೆನಿಸಿದ ಸಮಸ್ಯೆಗೆ ಪ್ರಾಚೀನ ಮನುಭಾಷಿತದ ಪರಿಹಾರ?

ಇಂತಿದೆ-

ಯಾತ್ರಾಮಾತ್ರಪ್ರಸಿದ್ಧ್ಯರ್ಥಂ ಸ್ವೈಃ ಕರ್ಮಭಿರಗಱಿತೈಃ |
ಅಕ್ಲೇಶೇನ ಶರೀರಸ್ಯ ಕುರ್ವೀತ ಧನಸಂಚಯಮ್ ||

ಜೀವನದ ಪರಮೋದ್ದೇಶ ಸಾಧನೆಗಾಗಿ ಪ್ರಾಣಧಾರಣೆ. ಪ್ರಾಣಧಾರಣೆಗಾಗಿ ಧನಸಂಗ್ರಹ.

ಧನಸಂಗ್ರಹವೂ ತನಗೆ ವಿಹಿತವಾದ ಕರ್ಮಗಳಿಂದಲೇ. ಅದು ಕೂಡ ಶರೀರಶೋಷಣೆಯಿಲ್ಲದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

1 comment:

ಯಜ್ಞೇಶ್ (yajnesh) said...

ಶರ್ಮಾರೇ,

ನೀನ್ಯಾರಿಗಾದೆಯೋ ಎಲೆ ಮಾನವ ಲೇಖನದಲ್ಲಿ ಹಣದ ಬಗ್ಗೆ ಬರಿಯಬೇಕು ಅಂತಿದ್ದೆ. ನೀವೂ ಈಗಾಗ್ಲೆ ಅಂಕಣ ಬರಹದಲ್ಲಿ ಬರೆದಿದ್ದೀರಾ !!!

ಈಗ ನನ್ನ ಶೈಲಿಯನ್ನು ಬದಲಾಯಿಸಬೇಕು. ಲೇಖನದಲ್ಲಿ ಇರೋದು ನೂರಕ್ಕೆ ನೂರು ಸತ್ಯ. ಜೀವನದಲ್ಲಿ ಹಣಕ್ಕೆ ಪ್ರಾಮುಖ್ಯತೆಯಿಲ್ಲದಿದ್ದರೆ ಎಷ್ಟು ಚೆನ್ನಿತ್ತು ಅಲ್ವಾ? ಜೀವನದ ದೃಷ್ಟಿಕೋನವೇ ಬದಲಾಗುತ್ತಿತ್ತು