Saturday 18 October, 2008

ಮನುಭಾಷಿತ 3

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಕಾಲಕ್ಕೆ ರಾಜನೇ ಕಾರಣ - "ರಾಜಾ ಕಾಲಸ್ಯ ಕಾರಣಮ್" ಎನ್ನುವುದು ಭಾರತದ ಅನುಭವ. ಕಾಲದ ಪರಿಣಾಮದಿಂದ ರಾಜನ ಗುಣದಲ್ಲಿ ಪರಿವರ್ತನೆಯೋ, ರಾಜನಿಂದಾಗಿಯೇ ಕಾಲದಲ್ಲಿ ಬದಲಾವಣೆಯೋ ಎನ್ನುವ ಪ್ರಾಚೀನ ಜಿಜ್ಞಾಸೆಗೆ ಭಾರತ ಕಂಡ ಅಪ್ರತಿಮ ರಾಜನೀತಿಜ್ಞ ಭೀಷ್ಮನ ಅಭಿಮತವಿದು.

ಕಾಲವೆಂದರೆ ನಡೆದದ್ದು ; ಕಾಲವೆಂದರೆ ನಡೆಯುತ್ತಲಿರುವುದು ; ಕಾಲವೆಂದರೆ ನಡೆಯಲಿರುವುದು ; ಕಾಲವೆಂದರೆ ಈ ಮೂರರ ಕಲನ - ಕೂಡುವಿಕೆ. ಕಾಲವೆಂದರೆ "ಸೃಷ್ಟಿಯ ಎಲ್ಲವೂ" ಎಂದಂತೆಯೇ.

ಸೃಷ್ಟಿಯ ಎಲ್ಲದಕ್ಕೂ ಕಾರಣನಾಗುವವನು ರಾಜನೆಂದಾದರೆ, ರಾಜ ಹೇಗಿರಬೇಕು? ಎನ್ನುವುದು ಸೃಷ್ಟಿಯ ಬಹುದೊಡ್ಡ ವಿಚಾರವೇ ಸರಿ.

ರಾಜನ ಕುರಿತು ಸುದೀರ್ಘವಾಗಿ ವಿವರಿಸುವ ಮನು ರಾಜನಲ್ಲಿ ಇರಬಾರದ್ದನ್ನು ನೆನಪಿಸುವ ಪರಿ ಆಳುವವರಿಗೆ ಆದರ್ಶದ ನುಡಿ -

ದಶ ಕಾಮಸಮುತ್ಟಾನಿ ತಥಾಷ್ಟೌ ಕ್ರೋಧಜಾನಿ ಚ |
ವ್ಯಸನಾನಿ ದುರಂತಾನಿ ಪ್ರಯತ್ನೇನ ವಿವರ್ಜಯೇತ್ ||

ಆಸೆಯಿಂದ ಹುಟ್ಟಿಕೊಳ್ಳುವುದು ಹತ್ತು ; ಸಿಟ್ಟಿನಿಂದ ಹುಟ್ಟಿಕೊಳ್ಳುವುದು ಎಂಟು ; ಈ ವ್ಯಸನಗಳು ರಾಜನ ಬದುಕಿನ ದುರಂತಗಳು, ಬಿಡಲೇಬೇಕು ಅವನ್ನು. ಮೊದಲ ಹತ್ತು :-
೧. ಮೃಗಬೇಟೆ
೨. ಜೂಜು
೩. ಆಲಸ್ಯದ ಪ್ರತಿರೂಪವಾದ ಹಗಲ ನಿದ್ರೆ
೪. ಅನ್ಯರ ಟೀಕೆ
೫. ಸ್ತ್ರೀ ಚಪಲತೆ
೬. ಮದ್ಯಪಾನ
೭. ಕೇವಲ ಕಣ್ಣಿನ ಸಂತೋಷಕ್ಕೆ ನೃತ್ಯವೀಕ್ಷಣೆ
೮. ಮೂಲ ಮರೆತ ಕಿವಿಗಿಂಪು ಮಾತ್ರವಾದ ಹಾಡುವಿಕೆಯಲ್ಲಿ ಅಭಿರುಚಿ
೯. ಉದ್ದೇಶವಿರದ ವಾದ್ಯವಾದನದಲ್ಲಿ ಆಸಕ್ತಿ
೧೦. ಬರಿದೆ ತಿರುಗಾಟ

ಕೊನೆಯ ಎಂಟು :-
೧. ಇಲ್ಲದ ದೋಷವನ್ನು ಬೇರೆಯವರಲ್ಲಿ ಆರೋಪಿಸುವುದು
೨. ಸಜ್ಜನರ ಶೋಷಣೆ
೩. ಮೋಸ
೪. ಬೇರೆಯವರ ಗುಣದಲ್ಲಿ ಅಸಹನೆ
೫. ಬೇರೆಯವರ ಗುಣವನ್ನು ದೋಷವೆನ್ನುವುದು
೬. ಹಣದ ಅವ್ಯವಹಾರ
೭. ಕಠಿಣವಾದ ಮಾತು
೮. ದೈಹಿಕ ಹಿಂಸೆ
ಇವೆಲ್ಲ ರಾಜನಲ್ಲಿ ಇರಬಾರದವು.


ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

2 comments:

Unknown said...

ರಾಜನಿಂದ ಪ್ರಜೆಗಳು ಎಂದು ನೋಡಿದಾಗ ರಾಜನ ಈ ಸದ್ಗುಣ ಸರಿ. ಆದರೆ ಇಂದು ಪ್ರಜೆಗಳಿಂದ ರಾಜ ಎಂಬ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಮೇಲೆ ಪ್ರಜೆಗಳೇ ರಾಜ ಎಂದಾಗುತ್ತದೆ. ಹಾಗಾಗಿ ಪ್ರಜೆಗಳೆಂಬ ರಾಜರು ಈ ಸದ್ಗುಣ ಅಳವಡಿಸಿಕೊಳ್ಳಬೇಕು. ಈಗ ಎಲ್ಲಾ ಉಲ್ಟಾ . ಸಾವಿರಾರು ಪ್ರಜೆಗಳ ದುರ್ಬುದ್ದಿಯನ್ನು ಕ್ರೂಢಿಕರಿಸಿಕೊಂಡು ಒಬ್ಬರಲ್ಲ ನೂರಾರು ರಾಜರು ಎಂ.ಎಲ್.ಎ, ಎಂ.ಪಿ ಎಂಬ ರೂಪದಲ್ಲಿ ಹೊರಹೊಮ್ಮುತ್ತಾರೆ. ಅವರ ಯಾವುದೇ ವರ್ತನೆಗಳಿಗೆ ಅವರನ್ನು ಆಯ್ಕೆಮಾಡಿದ ರಾಜರೇ ಹೊಣೆ. ಏನಂತೀರಿ..?

ಜಗದೀಶಶರ್ಮಾ said...

ನೀವು ಹೇಳೋದು ನೂರಕ್ಕೆ ನೂರರಷ್ಟು ಸರಿ.