Monday 1 September, 2008

ಧರ್ಮವಲ್ಲದೆಡೆ ಧರ್ಮವೆನ್ನುವರಯ್ಯಾ! ಮೂಢಾತ್ಮರಿವರು

ಅವನು ಮುದಕಪ್ಪ ನೀಲಪ್ಪ ಕರಡಿ. ಬದಾಮಿ ತಾಲೂಕಿನ ಆಡಗಲ್ ಗ್ರಾಮದವನು. ಈ ಅಪ್ರಸಿದ್ಧವ್ಯಕ್ತಿ ಕರ್ನಾಟಕದ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಏಕಾಏಕಿ ಮುಖ್ಯಸುದ್ದಿಯಾದ.

ಆಗಸ್ಟ್ ೨೭, ಬುಧವಾರ ರಾತ್ರಿ. ಆಡಗಲ್ಲಿನ ಶಂಕ್ರಯ್ಯ ಸ್ವಾಮಿ ಗದ್ದುಗೆಯಿರುವ ಗುಡಿ. ಮುದಕಪ್ಪ ಅಲ್ಲಿಗೆ ಬರುತ್ತಾನೆ. ಬಹಳ ಹೊತ್ತು ಸಣ್ಣದಾಗಿ ಏನನ್ನೋ ಹೇಳಿಕೊಳ್ಳುತ್ತಿರುತ್ತಾನೆ. ಇದವನ ಪ್ರತಿನಿತ್ಯದ ಕಾಯಕವಾಗಿರುವುದರಿಂದ ಅಲ್ಲಿಯೇ ಮಲಗಿದ್ದ ಗ್ರಾಮಸ್ಥರು ಅವನನ್ನು ಹೆಚ್ಚು ಗಮನಿಸುವುದಿಲ್ಲ.ಇದ್ದಕ್ಕಿದ್ದ ಹಾಗೇ ಮುದುಕಪ್ಪ ತನ್ನ ಬೆರಳಿನಿಂದಲೇ ತನ್ನ ಬಲಗಣ್ಣನ್ನು ಕಿತ್ತು ಗದ್ದುಗೆಯ ಮೇಲೆ ಇಟ್ಟುಬಿಡುತ್ತಾನೆ.

ಮನಸ್ಸು ವಿಹ್ವಲಗೊಳ್ಳುತ್ತಿದೆಯೇ? ಹೃದಯ ಕಂಪಿಸತೊಡಗುತ್ತಿದೆಯೇ? ಘಟನೆ ಅಸಹನೀಯ ಎನ್ನಿಸುತ್ತಿದೆಯೇ? ಈ ಧರ್ಮ, ದೇವರು, ಭಕ್ತಿ, ಪೂಜೆ, ದೇವಸ್ಥಾನ ಇವನ್ನೆಲ್ಲ ನಮ್ಮ ಮಾನವ ಜಗತ್ತಿನಿಂದ ಶಾಶ್ವತವಾಗಿ ಕಿತ್ತುಹಾಕಿಬಿಡೋಣ ಎನ್ನಿಸುತ್ತಿದೆಯೇ? ಹೀಗೆಲ್ಲ ಅನ್ನಿಸಿದರೆ ಯಾವ ತಪ್ಪೂ ಇಲ್ಲ, ಬಿಡಿ.

ಧರ್ಮಭಾರತೀಯಂತಹ ಪತ್ರಿಕೆಯ ಸಂಪಾದಕನಾಗಿ, ಧಾರ್ಮಿಕ ಕ್ಷೇತ್ರವನ್ನೇ ಅಧ್ಯಯನ ಮಾಡಿದವನಾಗಿ, ಧಾರ್ಮಿಕ ಪರಿಸರದಲ್ಲಿಯೇ ಇರುವವನಾಗಿ, ಧಾರ್ಮಿಕ ವಿಷಯಗಳನ್ನೇ ಬೋಧಿಸುವವನಾಗಿ ಇರುವ ನಾನು ಹೀಗೆನ್ನುತ್ತಿದ್ದೇನಲ್ಲ ಎನ್ನುವ ಅಚ್ಚರಿ ನಿಮ್ಮಲ್ಲಿ ಮೂಡಬಹುದು.

ಧರ್ಮದ ಹೆಸರಿನಲ್ಲಿ ಧರ್ಮವಲ್ಲದ ಪಾಶವೀಕೃತ್ಯಗಳನ್ನು, ಅಜ್ಞಾನ ಸಾಮ್ರಾಜ್ಯವನ್ನು, ಮೌಢ್ಯದ ಪರಾಕಾಷ್ಠೆಗಳನ್ನು ಕಂಡಾಗ ಹೃದಯವಂತರೆಲ್ಲರೂ ಹೀಗೆಯೇ ಪ್ರತಿಕ್ರಿಯಿಸುತ್ತಾರೆ. ಇಂತಹ ಆಚರಣೆಗಳು, ವರ್ತನೆಗಳು, ಘಟನೆಗಳು ಮತ್ತು ಮಾತುಕತೆಗಳನ್ನು ಅವಲಂಬಿಸಿಯೇ ಜಗತ್ತಿನ ಅಸಂಖ್ಯ ವಿದ್ಯಾವಂತರು ನಾಸ್ತಿಕರಾಗಿ ಬಿಡುತ್ತಾರೆ.

ನೈಜದರಿವೇ ಇಲ್ಲದ ಹಸೀ ಸುಳ್ಳನ್ನೇ ಬದುಕಿನ ಮೂಲದ್ರವ್ಯವಾಗಿಸಿಕೊಂಡ ಅನೇಕ ಮಠಗಳು, ಮಠಾಧೀಶರು, ಸಂತರು, ಯೋಗಿಗಳು, ಪಂಡಿತರು, ಪುರೋಹಿತರುಗಳು ಸನಾತನ ಧರ್ಮಕ್ಕೆ ಕುಠಾರಪ್ರಯರಾಗುತ್ತಿರುವುದನ್ನು ಕಂಡಾಗ ಅಸಹನೀಯ ವೇದನೆಯಾಗುತ್ತಿದೆ.

ನಾನು ಗಮನಿಸಿದಂತೆ ಈ ಕ್ಷಣದವರೆಗೂ ಮೇಲೆ ಉಲ್ಲೇಖಿಸಿದ ಯಾವೊಬ್ಬ ವ್ಯಕ್ತಿಯೂ 'ಹೀಗೆ ಕಣ್ಣನ್ನು ಕೀಳುವುದು ಧರ್ಮಸಮ್ಮತವಲ್ಲ' ಎನ್ನುವ ತಿಳಿವಳಿಕೆಯ ಮಾತನ್ನು ಜಗಜ್ಜಾಹೀರಾಗುವಂತೆ ಆಡಿಯೇ ಇಲ್ಲ. ತಮಗೆ ಸಂಬಂಧಿಸದ ಅಸಂಖ್ಯ ವಿಷಯಗಳನ್ನಿಟ್ಟುಕೊಂಡು ಇವರೆಲ್ಲ ಆಗಾಗ ಮಾಧ್ಯಮಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳುತಾರೆ. ಆದರೆ ಮಾತನಾಡಲೇ ಬೇಕಾದ ಈ ಸಂದರ್ಭದಲ್ಲಿ ದಿವ್ಯ ನಿರ್ಲಕ್ಷ್ಯ ತಾಳುತ್ತಾರೆ.

ಮುದಕಪ್ಪನಂತಹ ಆಳವಾದ ಭಕ್ತಿಯುಳ್ಳ ಅಸಂಖ್ಯ ಜನ ಇಂದು ನಮ್ಮ ನಡುವೆ ಇದ್ದಾರೆ.ಅವರ ಭಕ್ತಿ ಅರಿವಿನಿಂದ ಮೂಡಿಬಂದದ್ದಲ್ಲ; ನಂಬಿಕೆಯ ಅಡಿಪಾಯದ ಮೇಲೆ ನಿರ್ಮಾಣಗೊಂಡದ್ದು. ನಂಬಿಕೆಯ ಮೇಲೆ ಬೆಳೆದ ಭಾವನೆಗೆ ಅರಿವಿನ ಕವಚ ತೊಡಿಸುವ ಕಾರ್ಯ ಧಾರ್ಮಿಕ ಮಾರ್ಗದರ್ಶಕರೆನಿಸಿಕೊಂಡವರಿಂದ ಆಗಬೇಕಿತ್ತು.

ಧಾರ್ಮಿಕ ಕ್ಷೇತ್ರದವರಿಗೆ ಮಾಡಲು ಬೇರೆಲ್ಲ ಕೆಲಸವಿದೆ; ಧರ್ಮಪ್ರಸಾರವೊಂದನ್ನು ಬಿಟ್ಟು.

ಮಾವಿನಮರಕ್ಕೆ ಬಂದಳಿಕೆ ಸಹಜ. ಆ ಬಂದಳಿಕೆಯನ್ನು ಕೃಷಿಕ ಕಿತ್ತೊಗೆಯದಿದ್ದರೆ ಮರದ ಮರಣವೂ ಸಹಜವೇ. ಮಾವಿನಮರದಲ್ಲಿನ ಮಾವಿನ ಅಂಶ ಯಾವುದು? ಮಾವಿನ ಅಂಶವನ್ನೇ ನಿರ್ವಂಶಗೊಳಿಸುವ ಅದರಲ್ಲೇ ಬೆಳೆದ ಬದನಿಕೆ ಯಾವುದು? ಎನ್ನುವುದೇ ಕೃಷಿಕನಿಗೆ ತಿಳಿಯುವುದಿಲ್ಲವಾದರೆ ಅವನನ್ನು ಆ ಹೆಸರಿನಿಂದ ವ್ಯವಹರಿಸುವುದು ತಪ್ಪಾಗುತ್ತದೆ. ಇದೊಂದು ಬಗೆಯಾದರೆ, ಮಾವಿಗೂ ಬದನಿಕೆಗೂ ವ್ಯತ್ಯಾಸ ಗೊತ್ತಿದ್ದೂ ಮಾವಿನತನವನ್ನು ಉಳಿಸಲಾರದೇ ಹೋಗುವ ಕೃಷಿಕನದ್ದು ಇನ್ನೊಂದು ಬಗೆ.

ನಮ್ಮ ಧರ್ಮವೇತ್ತರು ಈ ಎರಡು ಬಗೆಗಳಲ್ಲಿ ಯಾವುದರಲ್ಲಿದ್ದಾರೋ ತಿಳಿಯದು. ಧರ್ಮ ಯಾವುದು? ಧರ್ಮಕ್ಕೆ ಸುತ್ತಿಕೊಂಡ ಅಧರ್ಮ ಯಾವುದು? ಎನ್ನುವುದೇ ಇವರಿಗೆ ತಿಳಿಯುತ್ತಿಲ್ಲವೋ ಅಥವಾ ತಿಳಿದಿದ್ದರೂ ಜಾಣಕುರುಡೋ? ಭಗವಂತನೇ ಬಲ್ಲ.

ಮುದಕಪ್ಪನ ಇನ್ನೊಂದು ಕಣ್ಣೂ ದೃಷ್ಟಿಹೀನವಾಗುತ್ತಿದೆಯೆಂದು ವೈದ್ಯರು ನುಡಿದಿದ್ದಾರಂತೆ. ಅವನಿಗೆ ಬದುಕು ಕುರುಡು; ಅವನೇ ಕಣ್ಣಾಗಿದ್ದ ಅವನ ಕುಟುಂಬಕ್ಕೆ ಮುಂದೇನೂ ಕಾಣದು.

ಧರ್ಮದ ಹೆಸರಿನಲ್ಲಿ ಇನ್ನೆಷ್ಟು ಜನ ಕುರುಡರಾಗಬೇಕೇನೋ?

2 comments:

ಸಿರಿರಮಣ said...

ಶರ್ಮರೇ,
ನಿಮ್ಮದೊಂದು ಬ್ಲಾಗಿರುವುದೇ ತಿಳಿದಿರಲಿಲ್ಲ. ಇತ್ತೀಚಿಗೆ ತಿಳಿಯಿತು ಬೇರೆಮೂಲಗಳಿಂದ. ತುಂಬ ಚೆನ್ನಾಗಿ ನಡೆಯುತ್ತಿದೆ. ನಿಮ್ಮ ಬ್ಲಾಗಿನಲ್ಲಿ ನನ್ನ ಬ್ಲಾಗಿನ ಕುರಿತು (ಬಲಗಡೆ ಲಿಂಕ್) ತಿಳಿಯುವಂತೆ ಮಾಡಲು ದಾರಿಯಾವುದು ?
ನಮಸ್ಕಾರಗಳೊಂದಿಗೆ
ಸಿರಿರಮಣ

ಜಗದೀಶಶರ್ಮಾ said...

ಪ್ರತಿಕ್ರಿಯೆಗ ಧನ್ಯವಾದಗಳು....