Friday 6 February, 2009

ವಿಷದೂಟಕಿಂತುಪೋಷಿತವೆ ಲೇಸಲ್ತೆ.....?

"ದೀರ್ಘಂ ಪಶ್ಯತ ಮಾ ಹ್ರಸ್ವಮ್" ಮಹರ್ಷಿಗಳ ದೀರ್ಘದೃಷ್ಟಿಯ ಉಪದೇಶವಿದು ಮಾನವ ಸಂಕುಲಕ್ಕೆ. "ದೀರ್ಘದರ್ಶಿಗಳಾಗಿ, ಸಮೀಪದರ್ಶಿಗಳಾಗಬೇಡಿ" ಅವರು ಕಂಡು ನುಡಿದ ದೀರ್ಘ ಭಗವಂತನವರೆಗೆ ವ್ಯಾಪಿಸಿದ್ದು. ನಮ್ಮ ಪರಿಸ್ಥಿಯಲ್ಲಿ ಜೀವನದ ಗುರಿಯಾದ ಅಧ್ಯಾತ್ಮದ ದೀರ್ಘದೆಡೆಗಿನ ಸಾಗುವಿಕೆ ಒತ್ತಟ್ಟಿಗಿರಲಿ, ಲೌಕಿಕ ಬದುಕಿನ ದೂರದರ್ಶಿತ್ವವೂ ನಮಗಿಲ್ಲವಾಗಿದೆ. ನಾವಿಂದು ಆಹಾರದ ಹೆಸರಿನಲ್ಲಿ ವಿಷವನ್ನು ಉಣ್ಣುತ್ತಿದ್ದೇವೆ. ಹೆಚ್ಚು ಇಳುವರಿಯೆನ್ನುವ ಭ್ರಮಾಲೋಕದ ಕೋಟೆಯೊಳಗಿನ ಬಂಧಿಗಳಾಗಿ ನಾವು ನವನಾಗರಿಕತೆಯ ಸಿದ್ಧಾಂತವನ್ನು ರೂಪಿಸಿದ್ದು, ರಾಸಾಯನಿಕಗಳ ರೂಪದಲ್ಲಿ.

ಫಸಲನ್ನು ಹೆಚ್ಚಿಸುವ ಗೊಬ್ಬರವಾಗಿ ರಾಸಾಯನಿಕಗಳ ಬಳಕೆ ; ಬೆಳೆದ ಫಸಲನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲೋಸುಗ ರಾಸಾಯನಿಕ ಕೀಟನಾಶಕಗಳ ಉಪಯೋಗ ; ಕೃಷಿಕ್ಷೇತ್ರದಿಂದ ಬೇರ್ಪಡಿಸಿದ ಬೆಳೆಗಳ ಸಂರಕ್ಷಣೆಗಾಗಿ ಮತ್ತೆ ರಾಸಾಯನಿಕಗಳಿಗೆ ಮೊರೆ - ಇದು ನಮ್ಮ ವಿಷವ್ಯೂಹ.

ರಾಸಾಯನಿಕಗಳ ವ್ಯಾಪಕ ಬಳಕೆ ಸೃಷ್ಟಿಸುವ ಸಮಸ್ಯೆಗಳು ಸರಮಾಲೆಯೇ ಸರಿ. ದೈಹಿಕವಾಗಿ ಅನಾರೋಗ್ಯಗಳ ಸಾಲು ಸಾಲು, ಭಾರತೀಯರ ಮಹತ್ತ್ವದ ಶೋಧನೆಯಾದ 'ಅನ್ನಸ್ಯ ಯೋ ಆಣಿಷ್ಠೋ ರಸಃ ತನ್ಮನಃ''ಅನ್ನಮಯಂ ಹಿ ಸೋಮ್ಯ ಮನಃ' ಎನ್ನುವ ಅನ್ನದಿಂದಲೇ ರೂಪುಗೊಳ್ಳುವ ಮನಸ್ಸಿನ ಮೇಲಾಗುವ ದುಷ್ಪರಿಣಾಮ ನಿಜಕ್ಕೂ ಭಯಂಕರ. ಈ ವಿಷವ್ಯೂಹದ ಘೋರ ಪರಿಣಾಮ ಇಷ್ಟಕ್ಕೇ ಸೀಮಿತವೇನೂ ಅಲ್ಲ. ಇದು ಪ್ರಕೃತಿಮಾತೆಯ ದಿವ್ಯ ಮಡಿಲನ್ನು ಛಿದ್ರಗೊಳಿಸುತ್ತಿರುವುದು, ಅದನ್ನು ಕಂಡೂ ಕಾಣದಂತಿರುವ ಕಂದರಾದ ನಮ್ಮ ವರ್ತನೆ ಮೂರ್ಖತೆಯ ತುಟ್ಟತುದಿ.

ನಮ್ಮ ಪರಂಪರೆಯ ಆಹಾರ ಸ್ವೀಕಾರದ ಕ್ರಮ ನಮ್ಮ ಆಹಾರದ ಉತ್ಪಾದನೆ ಮತ್ತು ಸಂರಕ್ಷಣೆಗಳು ಹೇಗಿರಬೇಕೆನ್ನುವುದು ತೋರಿಸಿಕೊಡುತ್ತಿದೆ. ನಾವು ಆಹಾರ ಸ್ವೀಕರಿಸುವಾಗ ಕೈಯಲ್ಲಿ ಶುದ್ಧ ಜಲವನ್ನು "ಅಮೃತೋಪಿಸ್ತರಣಮಸಿ ಸ್ವಾಹಾ" ಎಂದು ನುಡಿದು ಆ ಜಲವನ್ನು ಕುಡಿಯುತ್ತೇವೆ. ಮುಂದೆ ಸ್ವೀಕರಿಸಲಿರುವ ಆಹಾರಕ್ಕಿಂತ ಮೊದಲು ಉದರದಲ್ಲಿ ಅಮೃತಮಯವಾದ ಅಡಿಪಾತ್ರವಾಗಿ ಆ ಜಲ ಕಾರ್ಯನಿರ್ವಹಿಸಬೇಕೆನ್ನುವುದು ಅದರ ಆಶಯ. ಊಟ ಮುಗಿದಾಗ ಮತ್ತೆ ಶುದ್ಧ ಜಲವನ್ನು "ಅಮೃತಾಪಿಧಾನಮಸಿ ಸ್ವಾಹಾ" ಎಂದು ಸ್ವೀಕರಿಸಿದ ಆಹಾರದ ಮೇಲೆ ಅಮೃತಮಯವಾದ ಮುಚ್ಚಳವಾಗಿ ರೂಪುಗೊಳ್ಳಬೇಕೆಂದು ಬಯಸಿ ಸ್ವೀಕರಿಸುತ್ತೇವೆ. ಆದ್ದರಿಂದ ಆಹಾರ ಅಮೃತವಾಗಬೇಕೇ ಹೊರತು ವಿಷವಾಗಬಾರದು.

"ಅಮೃತಸ್ಯ ಪುತ್ರಾಃ" ಎಂದು ಕರೆಸಿಕೊಳ್ಳುವ ನಾವು, ನಮ್ಮ ಆಹಾರವು ಮೃತಸತ್ತ್ವವಾಗದೆ ಅಮೃತಸತ್ತ್ವವಾಗುವಂತೆ ಬಯಸಿ ಅಮೃತಪುತ್ರರಾಗೋಣವೇ?

(ನವೆಂಬರ್ ೨೦೦೪ನೇ ಧರ್ಮಭಾರತೀ ಸಂಪಾದಕೀಯ)

Wednesday 4 February, 2009

ಮನುಭಾಷಿತ - 14

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಸೆ"-

ಜಗದ ಅಸ್ತಿತ್ವಕ್ಕೆ ಇದೇ ಕಾರಣ. ಈಗಿನ್ನೂ ಕಣ್ಬಿಟ್ಟ ಹಸುಗೂಸಿನಿಂದಾರಂಭಿಸಿ ಜೀರ್ಣಗೊಂಡ ಹಿರಿಯಜ್ಜನವರೆಗೂ ಆಸೆ ಸಾಮಾನ್ಯವೇ. ಬಣ್ಣ ಬೇರೆ, ಒಳ ಆಕೃತಿ ಒಂದೇ.

ಜಗತಿನ ಇತಿಹಾಸ - ವರ್ತಮಾನ - ಭವಿಷ್ಯತ್ತುಗಳನ್ನು ತುಂಬಿ ನಿಂತ ಮಹಿಮೆ ಅದರದ್ದು.

ಅದರಿಂದಾಗಿಯೇ ಎಲ್ಲ ; ಅದಿಲ್ಲದೆ ಏನೂ ಇಲ್ಲ.

ಕವಿಯೊಬ್ಬ ಹೃದ್ಯವಾಗಿ ಅದರ ದೊಡ್ಡತನವನ್ನು ತಿಳಿಸುತ್ತಾನೆ -
"ಪರ್ವತ ದೊಡ್ಡದು ; ಅದಕ್ಕಿಂತ ಸಮುದ್ರ ; ಸಮುದ್ರವನ್ನು ಮೀರಿದ್ದು ಆಗಸ ; ಆಗಸ ಬ್ರಹ್ಮನಷ್ಟಲ್ಲ ; ಆಸೆ ಬ್ರಹ್ಮನಿಗಿಂತಲೂ ದೊಡ್ಡದು".

ಭಗವಂತನ ಜಗತಿನ ರಚನೆಯನ್ನೇ "ಹಾಗಿರಬೇಕಿತ್ತು - ಹೀಗಿರಬೇಕಿತ್ತು" ಎಂದು ಕಲ್ಪಿಸಬಲ್ಲದು ಆಸೆ.

ಸೃಷ್ಟಿಯಾರಂಭವೇ ಆಸೆಯಿಂದ ಎನ್ನುತ್ತದೆ ಉಪನಿಷತ್ತು - "ಸೋಕಾಮಯತ" ಎಂದು.

ಮನುವೂ
"ಪ್ರಜೆಗಳನ್ನು ಸೃಷ್ಟಿಸಲು ಹೊರಟ ಭಗವಂತ ಮೊದಲು ಇಚ್ಛೆಯನ್ನು ಸೃಷ್ಟಿಸಿದ" ಎನುತ್ತಾನೆ.

ಹೀಗೆ ಸೃಷ್ಟಿಯನ್ನು ಆಮೂಲಾಗ್ರ ವ್ಯಾಪಿಸಿದ ಆಸೆಯ ಸ್ಥಾನ ಜೀವನದಲ್ಲೇನು? ಎನುವ ಜಿಜ್ಞಾಸೆಗಿಳಿದರೆ "ಆಸೆ ನಿಯಂತ್ರಿತವಾಗಬೇಕು" ಎನ್ನುವುದೇ ಹಲವರ ಅಭಿಮತ.

ಯಾರು ಆಸೆಗೆ ದಾಸರೋ ಅವರು ಲೋಕಕ್ಕೇ ಅಡುಯಾಳು ;
ಯಾರಿಗೆ ಆಸೆಯೇ ಅಡಿಯಾಳೋ ಅವರು ಲೋಕದ ಒಡೆಯರು-

ಆಶಾಯಾ ಯೇ ದಾಸಾಃ ತೇ ದಾಸಾಃ ಸರ್ವಲೋಕಸ್ಯ |
ಅಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ||ಎನ್ನುತ್ತಾನೆ ಅನುಭವಿ.

ಮನು ಆಸೆಯ ಕುರಿತಾಗಿ ಜೀವಲೋಕಕ್ಕೆ ಅಮರಸಂದೇಶ ನೀಡುತ್ತಾನೆ. ಆ ಸಂದೇಶ ಪ್ರತಿ ವ್ಯಕ್ತಿಯ ಪ್ರಾತಃ ಸ್ಮರಣೀಯವಾಗಬೇಕು ; ಶಯನ ಪ್ರತಿಜ್ಞೆಯೂ ಆಗಬೇಕು.

ನ ಜಾತು ಕಾಮಃ ಕಾಮಾನಾಮ್ ಉಪಭೋಗೇನ ಶಾಮ್ಯತಿ |
ಹವಿಷಾ ಕೃಷ್ಣವರ್ತ್ಮೇನ ಭೂಯ ಏವಾಭಿವರ್ಧತೇ ||

ಆಸೆ, ಅದರ ಅನುಭವದಿಂದ ಉಪಶಮನಗೊಳ್ಳುವುದಿಲ್ಲ ; ಆಸೆಯನ್ನು ಈಡೇರಿಸಿದಷ್ಟೂ ಅದು ವಿಜೃಂಭಿಸುತ್ತದೆ - ಅಗ್ನಿಗೆ ನೀಡುವ ಹವಿಸ್ಸಿನಿಂದ ಅಗ್ನಿಯ ಜ್ವಾಲೆ ಹೆಚ್ಚಾದಂತೆ.

ಆಸೆಯ ನಿಯಂತ್ರಣವೇ ಜೀವನ ಯಶಸ್ಸಿನ ಮಹಾಮಂತ್ರ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತೀ ಅಂಕಣ ಬರಹ)

Monday 2 February, 2009

ಮನುಭಾಷಿತ - 13

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ನಾವಿಷ್ಣುಃ ಪೃಥಿವೀಪತಿಃ - ವಿಷ್ಣುವಾಗದವ ಭೂಮಿಯಾಳಲಾರ".
ಸನಾತನ ಸಂಸ್ಕೃತಿ ಪ್ರಭುತ್ವಕ್ಕೆ ಕೊಡುವ ಅದ್ಭುತ ವಿವರಣೆ.

ಜೀವಜಗತ್ತು ಸುಖಮಯವಾಗಿ ಬದುಕಲು ಪ್ರಭುತ್ವ ಬೇಕು, ಪ್ರಭು ಬೇಕು. ರಾಜನಿಲ್ಲದೆ ಅರಾಜಕಸ್ಥಿತಿಯ ದೇಶ ವಾಸಕ್ಕೆ ಅನರ್ಹ. ಅರಾಜಕತ್ವ ಸೃಷ್ಟಿಗೆ ಭಯಕಾರಕ. ಆದ್ದರಿಂದಲೇ ಭಗವಂತನಿಂದ ರಾಜತ್ವದ ಸೃಷ್ಟಿ.

ಆದರೆ ರಾಜ ಹೇಗಿರಬೇಕು? ರಾಜನ ಗುಣ - ಸ್ವಭಾವ ಎಂತಿರಬೇಕು? ಎಂತಹ ವ್ಯಕ್ತಿತ್ವವುಳ್ಳವ ರಾಜನಾಗಬೇಕು?

ಚರ್ಚೆ ಇಂದಿನದು ಮಾತ್ರವಲ್ಲ ; ಹಿಂದಿನದೂ ಹೌದು. ನಾಳೆಯದು ಅಲ್ಲವೆನ್ನುವಂತೆಯೂ ಇಲ್ಲ. ಅಂದರೆ ಚರ್ಚೆ ಸಾರ್ವಕಾಲಿಕ.

ಚರ್ಚೆಯೇ ಸಾರ್ವಕಾಲಿಕವೆಂದಾದರೆ ವಿಷಯಕ್ಕೊಂದು ನಿರ್ಣಯವಿಲ್ಲ ಎಂದಾಯಿತು. ವಾಸ್ತವ ಹಾಗಿಲ್ಲ. ಎಂದೋ ಇದು ನಿರ್ಣೀತವಾದ ವಿಷಯ. ಹಾಗಿದ್ದರೆ ಚರ್ಚೆಯೇಕೆ? ಅದು ಅರ್ಥಮಾಡಿಕೊಳ್ಳದವರ ಕಾರ್ಯ. ಅರ್ಥಮಾಡಿಕೊಳ್ಳುವ ಮನಸ್ಸು ಮಾಡಿದರೆ...ಸಿದ್ಧವಿದೆ ಸಾನಾತನ ಸಾಹಿತ್ಯ.

ಮೂರ್ಧನ್ಯ ಸಾಹಿತ್ಯ ಮನುಸ್ಮೃತಿ ರಾಜಧರ್ಮವನ್ನು ವಿಸ್ತಾರವಾಗಿ ವಿವರಿಸುತ್ತದೆ. ವರ್ತಮಾನದ ರಾಜತ್ವದ ಸಮಸ್ಯೆಯಲ್ಲಿ ಪ್ರಧಾನವಾದುದು ಭ್ರಷ್ಟಾಚಾರ. ಭ್ರಷ್ಟಾಚಾರಕ್ಕೆ ಕಾರಣ ಭೋಗಲಾಲಸೆ.

ಪರಿಹಾರ?

ಮನುಭಾಷಿತ ಹೀಗಿದೆ -

ಇಂದ್ರಿಯಾಣಾಂ ಜಯೇ ಯೋಗಂ ಸಮಾತಿಷ್ಠೇದ್ದಿವಾನಿಶಮ್ |
ಜಿತೇಂದ್ರಿಯೋ ಹಿ ಶಕ್ನೋತಿ ವಶೇ ಸ್ಥಾಪಯಿತುಂ ಪ್ರಜಾಃ ||

ರಾಜನಾದವನು ರಾತ್ರಿ - ಹಗಲು ಇಂದ್ರಿಯ ಜಯಕ್ಕಾಗಿ ಪ್ರಯತ್ನಶೀಲನಾಗಬೇಕು. ಜಿತೇಂದ್ರಿಯನಾದವನೇ ಪ್ರಜಾಪಾಲನೆಗೆ ಅರ್ಹ.

ದೇಶದ ಸಂಪತ್ತೂ ರಾಜನ ಅಧೀನ. ಅಧೀನವಾಗಿಸದಿದ್ದರೆ ಆಳುವುದು ಅಸಾಧ್ಯ. ಅಧೀನವಾಗಿಸಿದರೆ ದುರುಪಯೋಗ ಸಾಧ್ಯ.

ರಾಜವ್ಯವಸ್ಥೆಯ ಆರಂಭಿಕ ಹಂತದಲ್ಲಿಯೇ ಇದನ್ನು ಚಿಂತಿಸಿದ ಮನು ಸೂಚಿಸಿದ ಪರಿಹಾರ "ಇಂದ್ರಿಯಜಯ".

ಇದನ್ನೇ ಕೌಟಿಲ್ಯ ಪುನರುಚ್ಚರಿಸಿದ -

"ಅರಿಷಡ್ವರ್ಗತ್ಯಾಗೇನೇಂದ್ರಿಯಜಯಂ ಕುರ್ವೀತ - ರಾಜನು ಅರಿಷಡ್ವರ್ಗವನ್ನು ತ್ಯಜಿಸಿ ಜಿತೇಂದ್ರಿಯನಾಗಬೇಕು" ಎಂದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)