Tuesday 2 March, 2010

ಅವನಿಗಿರಲಿ ಅವನದೇ ವಿಧಾನ

[ವಿಜಯಕರ್ನಾಟಕದ ಲವಲvkಯಲ್ಲಿ ಪ್ರಕಟಿತ ಬರಹ]

ನೀವು ಕಲಿಸಿದಂತೆ
ನಾನು ಕಲಿಯಲಾರೆ;
ನಾನು ಕಲಿಯುವಂತೆ
ನೀವು ಕಲಿಸಬಲ್ಲಿರಾ?
-ವಿದ್ಯಾರ್ಥಿ

ಹೀಗೊಂದು ಎಸ್.ಎಮ್.ಎಸ್. ಇನ್ ಬಾಕ್ಸ್ ನಲ್ಲಿ ಬಂದು ಕುಳಿತಿತ್ತು. ಹಿಂದೆ ಮುಂದೆ ಏನೂ ಇಲ್ಲದೆ ಹೀಗೆ ಕಳಿಸಿದ್ದು ಓರ್ವ ಶಿಕ್ಷಕರೇ ಆದ್ದರಿಂದ ಸಂದೇಶ ಚಿಂತನೆಗೆ ಹಚ್ಚಿತು. ನಿತ್ಯ ಪಾಠ ಮಾಡಿ ನಿರೀಕ್ಷಿತ ಪರಿಣಾಮವನ್ನು ವಿದ್ಯಾರ್ಥಿಯಲ್ಲಿ ಕಾಣದೆ, ಅವನ ಅಭಿಪ್ರಾಯವನ್ನು ಹೀಗೆ ಗ್ರಹಿಸಿರಬೇಕೆನ್ನಿಸಿತು. ಶಿಕ್ಷಣ ಕ್ಷೇತ್ರದ ನಿಜವಾದ ಸಮಸ್ಯೆಯಿರುವುದೇ ಇಲ್ಲಿ.

ನಾವು ನಮ್ಮಂತೆ ಕಲಿಸುತ್ತಿದ್ದೇವೆ. ಅವನಂತೆ ಕಲಿಸುತ್ತಿಲ್ಲ. ಅವನಂತೆ ಕಲಿಸಿದ್ದರೆ ಕಲಿಕೆಯಲ್ಲಿ ಹಿಂದುಳಿಯುವ ಅಥವಾ ಫೇಲ್ ಆಗುವ ಸಂಭವವಿರುತ್ತಿರಲಿಲ್ಲ. ಅಥವಾ ಪ್ರಮಾಣವಂತೂ ಕಡಿಮೆಯಿರುತ್ತಿತ್ತು. ಇದೇ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ಹೊಸ ಕ್ರಮಗಳನ್ನು ಅನ್ವೇಷಿಸಿ ಕ್ರಿಯಾರೂಪಕ್ಕೆ ತರಲು ಪ್ರಯತ್ನಿಸುತ್ತಿವೆ.ಆದರೆ ಅದು ನಿರೀಕ್ಷಿತ ಪರಿಣಾಮವನ್ನು ಕೊಟ್ಟಂತಿಲ್ಲ.

ಜಗತ್ತಿನ ಪ್ರತಿವ್ಯಕ್ತಿಯೂ ಭಿನ್ನ. ಒಬ್ಬನಿದ್ದಂತೆ ಇನ್ನೊಬ್ಬನಿಲ್ಲ. ಜೀವನದ ಗುರಿ, ಶೈಲಿ, ಆಹಾರ, ಮಾತು, ನಡೆ, ನಡವಳಿಕೆ, ಬಟ್ಟೆಯ ಆಯ್ಕೆ, ಘಟನೆಗಳಿಗೆ ಪ್ರತಿಕ್ರಿಯಿಸುವ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗೆಯೇ ಗ್ರಹಿಕೆಯ ವಿಧಾನ ಮತ್ತು ಸಮಯದಲ್ಲಿಯೂ ಬದಲಾವಣೆ ಇರುತ್ತದೆ. ಸ್ಥೂಲವಾಗಿ ಕೆಲವು ಗುಂಪುಗಳಲ್ಲಿ ಒಂದಿಷ್ಟು ಸಮಾನಾಂಶಗಳು ಕಂಡುಬರುತ್ತವಾದರೂ ಸೂಕ್ಷ್ಮವಾದ ವ್ಯತ್ಯಾಸಗಳಿರುತ್ತವೆ. ಒಂದು ದೇಶದ ಜನ, ಒಂದು ಪ್ರದೇಶದ ಜನ, ಒಂದು ಸಮುದಾಯದ ಜನ, ಒಂದು ವಯೋಮಾನದ ಜನ......... ಹೀಗೆ ಇಂತಹ ಗುಂಪುಗಳು ಕೆಲವಷ್ಟರ ಮಟ್ಟಿಗೆ ಏಕರೂಪವಾಗಿರುತ್ತವೆ. ಆದರೆ ಒಂದೇ ಮನೆಯಲ್ಲಿ ಹುಟ್ಟಿ ಬೆಳೆದ ಸ್ವಂತ ಅಣ್ಣ-ತಮ್ಮಂದಿರಲ್ಲೇ ಕಲಿಕೆಯಲ್ಲಿ ಮುಂದಿರುವ ಹಾಗೂ ಹಿಂದಿರುವ ಪರಿಸ್ಥಿತಿಯನ್ನು ಕಾಣುತ್ತೇವೆ. ಹಾಗಾಗಿ ಕಲಿಕಾ ವಿಧಾನವನ್ನು ಏಕರೂಪಗೊಳಿಸಲು ಸಾಧ್ಯವಿಲ್ಲ. ಸಮೂಹ ಶಿಕ್ಷಣದ ಇಂದಿನ ಬಹುವ್ಯಾಪಕ ವ್ಯವಸ್ಥೆಯಲ್ಲಿ ವಿಧಾನದ ಏಕರೂಪತೆ ಅನಿವಾರ್ಯ ಅನ್ನುವ ಅಭಿಪ್ರಾಯವೂ ಪ್ರಾಯೋಗಿಕತೆಯ ಹಿನ್ನೆಲೆಯಲ್ಲಿ ತಳ್ಳಿಹಾಕುವಂತದ್ದಲ್ಲ.

ಆದ್ದರಿಂದಲೇ ಶಿಕ್ಷಣದ ಯಶಸ್ಸು ಮತ್ತೆ ಶಿಕ್ಷಕನ ಕೈಯಲ್ಲೇ ಬಂದು ನಿಲ್ಲುತ್ತದೆ. ಶಿಕ್ಷಣವನ್ನು ರೂಪಿಸುವ ತಜ್ನರು, ಕ್ರಿಯಾರೂಪಗೊಳಿಸುವ ಅಧಿಕಾರಿಗಳು ಮಾಡಲಾಗದ್ದನ್ನು ಶಿಕ್ಷಕ ಮಾಡಬೇಕಾಗುತ್ತದೆ. ಆಣೆಕಟ್ಟೆಯಿಂದ ನೀರನ್ನು ಹರಿಸಲಾಗುತ್ತದೆ. ಆ ಕಾಲುವೆಯಿಂದ ನಮ್ಮ ಹೊಲದ ಕಿರುಗಾಲುವೆಗೂ ನೀರು ಹರಿದು ಬರುತ್ತದೆ. ಒಬ್ಬ ಯೋಗ್ಯ ಕೃಷಿಕ ಅದನ್ನು ನೋಡುತ್ತಾ ಕಾಲು ಚಾಚಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪ್ರತಿ ಗಿಡದ ಬುಡವನ್ನೂ ಗಮನಿಸುತ್ತಾನೆ; ನೀರು ಸರಿಯಾಗಿ ಸಂದಿದೆಯೇ ಎಂದು. ಹಾಗಿಲ್ಲದಿದ್ದರೆ ಅದರೆಡೆಗೆ ನೀರು ಹರಿಯುವಂತೆ ಮಾಡುತ್ತಾನೆ. ಯಾವ ಗಿಡಕ್ಕೆ, ಯಾವ ಬೆಳೆಗೆ, ಯಾವ ಮಣ್ಣಿಗೆ, ಯಾವ ಕಾಲಕ್ಕೆ ಎಷ್ಟು ನೀರು ಬಿಡಬೇಕೆನ್ನುವುದನ್ನು ತನ್ನ ಅನುಭವದಿಂದ ನಿರ್ಣಯಿಸಿಕೊಂಡಿರುತ್ತಾನೆ. ಶಿಕ್ಷಕನೂ ಹೀಗೆ ಮಾಡಿದಾಗ ಯಶಸ್ಸು ಸಾಧ್ಯ.

ಅದರ ಕುರಿತಾದ ಒಂದಷ್ಟು ಸಲಹೆಗಳು ಇಲ್ಲಿವೆ-

*** ತರಗತಿಯ ಯಾವ ವಿದ್ಯಾರ್ಥಿಗೆ ಯಾವ ವಿಷಯವನ್ನು ಯಾವ ವಿಧಾನವನ್ನು ಅವಲಂಬಿಸಿ ಹೇಗೆ ಮನದಟ್ಟು ಮಾಡಬೇಕೆಂದು ಗುರುತಿಸಿಕೊಳ್ಳಬೇಕು.

*** ಪ್ರತಿ ವಿದ್ಯಾರ್ಥಿಯ ಕೌಟುಂಬಿಕ ಹಿನ್ನೆಲೆ, ಭಾವನಾತ್ಮಕ ಸ್ಥಿತಿ, ಗ್ರಹಿಕೆಯ ಮಟ್ಟ, ಗ್ರಹಿಕೆಗೆ ತೆಗೆದುಕೊಳ್ಳುವ ಸಮಯಗಳನ್ನು ಅನುಸರಿಸಿ ಅವನಿಗೆ ಕಲಿಸಲು ಅವನದ್ದೇ ಆದ ವಿಧಾನವನ್ನು ರೂಪಿಸಿಕೊಳ್ಳಬೇಕು.

*** ಆ ವಿಧಾನವನ್ನು ನಿರಂತರ ಪ್ರಯೋಗ ಮತ್ತು ಪರಿಶೀಲನೆಗೆ ಒಳಪಡಿಸಿಕೊಳ್ಳಬೇಕು.

*** ಬಿಗುಮಾನ ಬಿಟ್ಟು ವಿದ್ಯಾರ್ಥಿಯೊಂದಿಗೆ " ನಾನು ಕಲಿಸಿದ್ದು ತಿಳಿಯಿತೇ? ಈ ವಿಧಾನ ಏನನ್ನಿಸಿತು? " ಎನ್ನುವ ಮಾತುಕತೆ ಇಟ್ಟುಕೊಳ್ಳಬೇಕು.

*** ಅದೇ ವಿದ್ಯಾರ್ಥಿಗೆ ಬೇರೆ ವಿಷಯವನ್ನು ಕಲಿಸುವ ಸಹ ಶಿಕ್ಷಕರೊಂದಿಗೆ ಚರ್ಚಿಸಿ, ಅಭಿಪ್ರಾಯ ವಿನಿಮಯ ಮಾಡಿಕೊಂಡು ವ್ಯಕ್ತಿಗತ ಕಲಿಕಾ ವಿಧಾನವನ್ನು ಪರಿಷ್ಕರಿಸಿಕೊಳ್ಳಬೇಕು.

ಹೀಗಾದಾಗ
" ನಾವು ಕಲಿಸಿದಂತೆ ಕಲಿಯಲಾಗದ ವಿದ್ಯಾರ್ಥಿಗೆ ಅವನು ಕಲಿಯುವಂತೆ ಕಲಿಸಲು ಸಾಧ್ಯ "

2 comments:

Unknown said...

ಹೌದು ಅವೆಲ್ಲಾ ನಿಜ. ಆದರೆ ಶಿಕ್ಷಕರಿಗೆ ಬಹಳ ಅಂದರೆ ಬಹಳ ತಾಳ್ಮೆ ಬೇಕು ಹೀಗೆ ಕಲಿಸಲು. ಶಿಕ್ಷಕರ ಜೀವನಕ್ಕೆ ಯೋಚನೆ ಇರದಷ್ಟು ಸಂಬಳ ಸಿಗಬೇಕು . ಆದರೆ ಮಜ ಗೊತ್ತಾ ? ಮನುಷ್ಯ ತನ್ನ ಜೀವನ ಭದ್ರವಾದ ಮೇಲೆ ಇಂಥಹ ಕಲಿಕೆಗಳನ್ನು ಮರೆತುಬಿಡುತ್ತಾನೆ. ನಮ್ಮ ಕಾಲೇಜುಗಳು ಇದಕ್ಕೆ ಸಾಕ್ಷಿ. ಆದ್ದರಿಂದ ಶಿಕ್ಷಕರಿಗೆ ಅತಿ ಕಡಿಮೆ ಸಂಬಳ ನೀಡಬೇಕು ಹೀಗೆಲ್ಲಾ ಕಲಿಸಲು. ಮತ್ತದೇ.....

ಗೌತಮ್ ಹೆಗಡೆ said...

tumbaa chennagi vishayavanna mandisiddeeri...nice reading