Sunday 21 December, 2008

ಎಂಟರ ಗಂಟು....ಇರಲದರ ನಂಟು....

ಧರ್ಮ ಮಾನವೀಯ. ಅಮಾನವೀಯತೆ ಧರ್ಮಕ್ಕೆ ಸಲ್ಲುವಂತದ್ದಲ್ಲ. ಧರ್ಮ ಮೈಗೂಡಿದರೆ ಅದು ವ್ಯಕ್ತಿತ್ವದ ಪರಿಪೂರ್ಣತೆ. ವ್ಯಕ್ತಿ ಪೂರ್ಣಗೊಳ್ಳಬೇಕು. ಹಾಗಿದ್ದರೆ ಧರ್ಮ ಮೈಗೂಡಬೇಕು. ಅದು ಹೇಗೆ? ಧರ್ಮದ ಸಾಧಾರಣತೆ ನಮ್ಮದಾಗಬೇಕು. ಆಗ ಅದು ಸಾಧ್ಯ.

ಧರ್ಮಕ್ಕೆ ಎಂಟು ಅಂಶಗಳು. ಹಾಗೆಂದು ಬೃಹಸ್ಪತಿಯ ನುಡಿ. ಯಾವುದದು ಎಂಟು?
೧. ದಯಾ ೨. ಕ್ಷಮಾ ೩. ಅನಸೂಯಾ ೪. ಶೌಚ
೫. ಅನಾಯಾಸ ೬. ಮಂಗಲ ೭. ಅಕಾರ್ಪಣ್ಯ ೮. ಅಸ್ಪೃಹಾ

ದಯೆಯೆಂದರೆ....

ಮೊದಲಿನದ್ದು 'ದಯಾ'. ಅದೊಂದು ಜೀವರಸ. ಅದು ಹರಿದಲ್ಲಿ ಕೊರಡು ಕೊನರೀತು. ಅದಕ್ಕೆ ಭೇದದ ಭಾವವಿಲ್ಲ. ಅದರ ನೋಟದಲ್ಲಿ ಎಲ್ಲವೂ ಸಮಾನ. ಎಲ್ಲದರ ಹಿತವೇ ಅದರ ಮತ. ಎಲ್ಲರನ್ನೂ ರಕ್ಷಿಸುತ್ತದೆ ಅದು. ಬಂಧುವನ್ನೂ - ಬಂಧುವಲ್ಲದವನನ್ನೂ, ಮಿತ್ರನನ್ನೂ - ಶತ್ರುವನ್ನೂ ಕಾಪಾಡುವ ತವಕ ಅದರದ್ದು. ಅದಿಲ್ಲದೆ ನಡೆದ ಸಂಘರ್ಷಗಳೆಷ್ಟೋ? ಯುದ್ಧಗಳೆಷ್ಟೋ? ಹರಿದ ರಕ್ತದ ಧಾರೆ ಅದೆಷ್ಟೋ? ಅದಿರುವವರಿಂದ ಲೋಕಕ್ಕೆ ದೊರೆತ ಶಾಂತಿ ಇನ್ನದೆಷ್ಟೋ? ಅದೇ ದಯೆ.

ಕ್ಷಮೆಯೆಂದರೆ....

ಎರಡನೆಯದ್ದು 'ಕ್ಷಮಾ'. ಅದೊಂದು ದೃಢತೆ. ಹೊರನೋಟಕ್ಕದು ಅಸಮರ್ಥತೆ. ಹಾಗೆನಿಸುತ್ತದೆ, ಆದರದು ಹಾಗಲ್ಲ. ಅದು ಅತ್ಯಂತ ಗಟ್ಟಿತನ. ಬದುಕಿನ ಮೇಲೆ ಆಘಾತಗಳು ಸಹಜ. ಕೆಲವೊಮ್ಮೆ ಅದು ವ್ಯಕ್ತಿನಿರ್ಮಿತ. ಆಗ ನಮ್ಮನ್ನಾವರಿಸುತ್ತದೆ ಕೋಪ. ಕೋಪದ ಮುಂದಿನ ಹೆಜ್ಜೆ ಹಿಂಸೆ. ಹಾಗಾಗದಿರುವಿಕೆಯೇ ಕ್ಷಮೆ. ಅಂದರೆ ಕೋಪಗೊಳ್ಳದಿರುವುದು. ಹಿಂಸೆ ಮಾಡಿದವನ ವಿಷಯದಲ್ಲಿಯೂ ಅಹಿಂಸೆ. ಅಳು ತರಿಸಿದವನಿಗೆ ನಗು. ಹೊಡೆದವನಿಗೆ ಹೂವಿನ ಮಾಲೆ. ಮನದಲ್ಲಿ ಕೋಪವಿಲ್ಲ ; ಮಾತಿನಲ್ಲಿ ಬೈಗುಳಿಲ್ಲ ; ಕರದಲ್ಲಿ ಕರವಾಲವಿಲ್ಲ. ಇದು ಕ್ಷಮೆ.

ಅನಸೂಯೆಯೆಂದರೆ....

ಮೂರನೆಯದ್ದು 'ಅನಸೂಯಾ'. ಅಸೂಯೆ ಇಲ್ಲದಿರುವಿಕೆಗೆ ಆ ಹೆಸರು. ಅದಿರುವುದು ಹೇಗೆ? ಗುಣವಂತರ ಕಂಡರಾಗದು. ಕಣ್ಣು ಕುಕ್ಕುತ್ತದೆ ಅದರ ಗುಣ. ಗುಣ ಕಡಿಮೆಯಿದ್ದರೆ? ಹಬ್ಬದೂಟ ಸಿಕ್ಕಂತಾಯಿತು. ಟೀಕೆಯ ಸುರಿಮಳೆ ಆರಂಭ. ಒಂದಿಷ್ಟು ದೋಷಗಳು ಕಂಡರಂತೂ, ಬಿಡಿ ; ಮುಗಿದೇ ಹೋಯಿತು. ಅದು ಮದುವೆ ಊಟವೇ ಸರಿ. ಟೀಕೆ - ನಿಂದೆ - ಅವಹೇಳನ ಎಲ್ಲದರ ಮಹಾಪ್ರವಾಹ. ಇದು ನಮ್ಮ ಸ್ಥಿತಿ. ಇದೇಕೆ ಹೀಗೆ? ಅದು ಹೀಗೆಯೇ. ಇದೊಂದು ತರಹದ ಮನೋವ್ಯಾಧಿ. ಒಳಿತನ್ನು ಒಳಿತೆಂದುಕೊಳ್ಳಲಾರೆವು. ಅದರಲ್ಲಿರುವ ತಪ್ಪಲ್ಲೇ ನಮಗೆ ಅಭಿರುಚಿ. ಸುಂದರವಾದ ದೇಹದ ಯಾವ ಸ್ಥಳವೂ ನೊಣಕ್ಕಾಗದು. ಕೀವು ತುಂಬಿದ ಹುಣ್ಣೇ ಅದಕ್ಕೆ ಬೇಕು. ಬೇರೆಯವರ ಉತ್ಕರ್ಷದೆಡೆಗೆ ಅಸಹನೆ. ಅದಕ್ಕೆ ಅಸೂಯೆಯೆಂದು ಹೆಸರು. ಅದಿಲ್ಲದಿರುವುದೇ 'ಅನಸೂಯಾ'.

ಶೌಚವೆಂದರೆ....

ನಾಲ್ಕನೆಯದು ಶುಚಿತ್ವ. ಕೊಳಕು ಸೃಷ್ಟಿಗೆ ಸಹಜ. ಈ ಕ್ಷಣ ಫಳಫಳನೆ ಹೊಳೆಯುತ್ತಿದೆ ಕ್ಟಕಿಯ ಗಾಜು. ಐದು ನಿಮಿಷ ಬಿಟ್ಟಾಗ ಧೂಳು ಧೂಳು. ಸ್ವಚ್ಛವಾಗಿ ತೊಳೆದ ಬಟ್ಟೆ. ನಾಳೆ ಮತ್ತೆ ತೊಳೆಯುವುದೇ. ಇದು ಬಹಿರಂಗದ ಮಾತಾಯಿತು. ಅಂತರಂಗವೂ ಅಂತೆಯೇ. ಶುದ್ಧವೆಂದು ಅಂದುಕೊಂಡಿರುತ್ತೇವೆ ನಾವು. ಅದಾಗಲೇ ಸಂಸ್ಕಾರ ಕಳೆದುಕೊಂಡಿರುತ್ತದೆ.ಹೊರ ಬದುಕಿನಲ್ಲೊಂದು ಸ್ವಚ್ಛತೆ, ಒಳ ಬದುಕಿಗೊಂದು ಸಂಸ್ಕಾರ. ಇದೊಂದು ನಿರಂತರ ಪ್ರಕ್ರಿಯೆ. ಸಾಗುತ್ತಲೇ ಇರಬೇಕು. ಅದು 'ಶೌಚ'.

ಅನಾಯಾಸವೆಂದರೆ....

ಐದನೆಯದ್ದು 'ಅನಾಯಾಸ'. ಶರಿರ ಒಂದು ಅಚ್ಚರಿ. ಜೀವಂತ ಶರೀರ ಇಂದಿಗೂ ವಿಜ್ಞಾನಕ್ಕೆ ವಿಸ್ಮಯ. ಅದರ ಪ್ರತಿಸೃಷ್ಟಿ ಅಸಂಭವ. ಹಾಗೆಯೇ ಅದರ ಚಿರಂಜೀವಿತೆಯೂ. ಅದಿದ್ದರೆ ಜಗವುಂಟು. ಅದಿಲ್ಲದಿದ್ದರೆ ಜಗವಿಲ್ಲ. ಅದರ ಪಾಲನೆ ಅಪೇಕ್ಷಿತ. ಅನಿವಾರ್ಯವೂ ಕೂಡ. ಅದು ಬೇಯಬಾರದು. ಬಸವಳಿಯಬಾರದು. ಸವೆಯಬಾರದು. ಒಣಗಬಾರದು. ಅದು ಆಯಾಸಗೊಳ್ಳಲೂಬಾರದು. ಬದುಕಿಗೆ ಬೇಕಾದ ಕಾರ್ಯವೇ ಇದ್ದೀತು. ಅದರಿಂದ ದೇಹಕ್ಕೆ ತಡೆಯಲಾರದ ಆಯಾಸ ಸರಿಯಲ್ಲ. ಹಾಗಿರುವುದು 'ಅನಾಯಾಸ'.

ಮಂಗಲವೆಂದರೆ....

ಆರನೆಯದ್ದು 'ಮಂಗಲ'. ಕ್ರಿಯೆಯಿಲ್ಲದೆ ಬದುಕಿಲ್ಲ. ಕ್ರಿಯೆಯೇ ಬದುಕೆಲ್ಲ. ಮಾಡುತ್ತಲೇ ಇರುತ್ತೇವೆ. ಏನನ್ನು? ಏನೇನನ್ನೋ. 'ಏನಾದರೂ ಮಾಡುತಿರು ತಮ್ಮ' ಎಂದಿದ್ದಾರಲ್ಲ. ಮಾಡುತ್ತಲೇ ಇದ್ದೇವೆ. ಅದರಿಂದೇನಾಯ್ತು? ಅನುಕೂಲವೂ ಪ್ರತಿಕೂಲವೂ. ಕೆಲವು ಬೇರೆಯವರಿಗೆ ಪ್ರತಿಕೂಲ. ಕೆಲವು ಒಳ್ಳೆಯ ಕಾರ್ಯ. ಕೆಲವು ಕೆಡುಕು. ಕೆಲವು ಲೋಕ ಮೆಚ್ಚುವಂತದ್ದು. ಲೋಕ ನಿಂದಿಸುವ ಕಾರ್ಯ ಅಮಂಗಲ. ಲೋಕ ಪ್ರಶಂಸಿಸುವ ಕಾರ್ಯ 'ಮಂಗಲ'.

ಅಕಾರ್ಪಣ್ಯವೆಂದರೆ....

ಏಳನೆಯದ್ದು 'ಅಕಾರ್ಪಣ್ಯ'. ಕೊಡುವಿಕೆ ಸೃಷ್ಟಿಯ ಧರ್ಮ. ಅದೇ ಅದರ ಬೆಳವಣಿಗೆಗೆ ಸಾಧನ. ಅದರ ಉಳಿವಿಕೆಗೂ ಅದೇ ಕಾರನ. ಒಂದು ಇನ್ನೊಂದಕ್ಕೆ, ಅದು ಮತ್ತೊಂದಕ್ಕೆ, ಹೀಗೆ ಕೊಡುವಿಕೆಯಿಂದ ಸಾಗಿದೆ ಪ್ರಪಂಚ. ಕೊಡುವಿಕೆ ಕಾಯಕವಾಗಬೇಕು. ಅದೂ ಪ್ರತಿನಿತ್ಯ. ಸಾಮರ್ಥ್ಯದಷ್ಟು ದಾನ ಪ್ರಶಸ್ತ. ಕೊಡುವ ಮನವಿಲ್ಲದಿರುವುದು ಕಾರ್ಪಣ್ಯ. ಅದೇ ಜಿಪುಣತನ. ಅದಿಲ್ಲದಿರುವುದು ಔದಾರ್ಯ. ಅದೇ 'ಅಕಾರ್ಪಣ್ಯ'.

ಅಸ್ಪೃಹವೆಂದರೆ....

ಎಂಟನೆಯದ್ದು 'ಅಸ್ಪೃಹಾ'. ವಸ್ತುಗಳು ಬೇಕು. ಸುಖ ಜೀವನಕ್ಕದು ಸಾಧನ. ಬದುಕೆಲ್ಲ ವಸ್ತುಸಂಗ್ರಹಕ್ಕೇ ಪ್ರಯತ್ನ. ಮನೆ ತುಂಬಿದರೂ ತೃಪ್ತಿಯಿಲ್ಲ. ಅನ್ಯರ ವಸ್ತುವಿನ ಮೇಲೆ ಕಣ್ಣು. ಅದಾದ ಮೇಲೆ ಭೂಮಿ. ಮೊಮ್ಮಕ್ಕಳಿಗೂ ಸಾಕು. ಆದರೂ ಹಪಹಪಿಕೆ. ಹಣವೂ ಹಾಗೆಯೇ. ಎಷ್ಟಿದ್ದರೂ ಸಾಲದು. ಇದು ಸ್ಪೃಹಾ. ಪರರ ವಸ್ತುವಿನ ಮೇಲೆ ಆಸೆಯಿಲ್ಲ. ತನಗೆ ದಕ್ಕಿದ್ದಷ್ಟೇ ತನ್ನದು. ದುಡಿಮೆ ನ್ಯಾಯಯುತ. ಅನ್ಯಾಯದ ಸಂಪಾದನೆಯಿಲ್ಲ. ಅತ್ಯಾಸೆ ಮೊದಲೇ ಇಲ್ಲ.ಅದು 'ಅಸ್ಪೃಹಾ'.

ಎಂಟರ ನಂಟಿರಲಿ....

ಇಂತಹ ಧರ್ಮ ನಮ್ಮದಿರಲಿ. ಅದು ನಮ್ಮ ಮೈಗೂಡಿರಲಿ. ಅದರ ಗೂಡಲ್ಲಿ ನಮ್ಮ ತಾವಿರಲಿ. ಅದು ನಮಗೂ ಹಿತ. ಪರರಿಗೂ ಹಿತ.


(ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)

Saturday 20 December, 2008

ಮನುಭಾಷಿತ - 8

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಧನಸಂಗ್ರಹ" ಆಧುನಿಕ ಜನಜೀವನದ ಪ್ರಮುಖೋದ್ದೇಶ. ಶಯನದಿಂದ ಕಣ್ದೆರೆಯುವುದೇ ಧನಪ್ರಾಪ್ತಿಗಾಗಿ ; ಸಹಜೀವಿಗಳೊಂದಿಗೆ ಸಂವಾದವೂ ಧನಾಗಮನಕ್ಕಾಗಿ ; ಪರಿಸರದೊಂದಿಗೆ ಒಡನಾಟವೂ ಅರ್ಥಸಂಪತ್ತಿಗಾಗಿ ; ಅಷ್ಟೇಕೆ, ಶಿಕ್ಷಣವನ್ನು ಸಂಪಾದಿಸುವುದೂ ಧನಸಂಪಾದನೆಗಾಗಿಯೇ.

ಧನದ ಹಿಂದೆ ಓಡುತ್ತಿದೆ ಹುಚ್ಚು ಕುದುರೆಯಂತೆ ಜಗತ್ತಿನ ಮನಸ್ಸು.

ಆಧುನಿಕ ಜಗತ್ತಿನ ಸರ್ವಕ್ಷೀಣತೆಗೆ ಧನದಾಹವೇ ಕಾರಣವೆಂದರೆ ಸೂರ್ಯಸ್ಪಷ್ಟ ಸಂಗತಿಯೇ ಸರಿ.

ಹಣಕ್ಕಾಗಿ ಬದುಕಿನೆಲ್ಲ ಕ್ಷಣಗಳನ್ನು ವಿನಿಯೋಗಿಸುವ ಮನಸ್ಸುಗಳು ಇಲ್ಲಿವೆ.

ಹಣಕ್ಕಾಗಿ ತಂದೆ - ತಾಯಿ - ಹೆಂಡತಿ - ಮಕ್ಕಳು - ಮಿತ್ರರು - ಸಂಬಂಧಿಗಳು....ಎನ್ನುವ ಎಲ್ಲ ಮಾನವೀಯ ಸಂಬಂಧಗಳನ್ನು ಛಿದ್ರಗೊಳಿಸುವ ಘಟನೆಗಳು ಹುಚ್ಚೆದ್ದು ಕುಣಿಯುತ್ತಿವೆ.

ಹಣಕ್ಕಾಗಿ ಅನ್ಯರ ಬದುಕಿನ ಸುಮಸದೃಶ ಸುಖಮಯ ಕ್ಷಣಗಳನ್ನು ಹೊಸಕಿ ಹಾಕುವ ಕ್ರೂರತೆ ಜಗತ್ತನ್ನು ದಹಿಸುತ್ತಿದೆ.

ಹಣಕ್ಕಾಗಿ ಮನುಷ್ಯ ಎಷ್ಟು ಕಾಲಕ್ಕೂ ನೀಡಲಸಾಧ್ಯವಾದ ಜೀವವನ್ನೇ ಹರಣಮಾಡುವ ಭೀಭತ್ಸತೆಯೂ ನಮ್ಮ ಮುಂದಿದೆ.

ಇದನ್ನೇ ಕವಿಹೃದಯ ಅನುರಣಿಸುತ್ತಿದೆ-

"ಕುರುಡು ಕಾಂಚಾಣ ಕುಣಿಯುತಲಿತ್ತು, ಎದುರಿಗೆ ಬಂದವರ ತುಳಿಯುತಲಿತ್ತು" ಎಂದು.

ಆಧುನಿಕದ ಈ ಅಪರಿಹಾರ್ಯವೆನಿಸಿದ ಸಮಸ್ಯೆಗೆ ಪ್ರಾಚೀನ ಮನುಭಾಷಿತದ ಪರಿಹಾರ?

ಇಂತಿದೆ-

ಯಾತ್ರಾಮಾತ್ರಪ್ರಸಿದ್ಧ್ಯರ್ಥಂ ಸ್ವೈಃ ಕರ್ಮಭಿರಗಱಿತೈಃ |
ಅಕ್ಲೇಶೇನ ಶರೀರಸ್ಯ ಕುರ್ವೀತ ಧನಸಂಚಯಮ್ ||

ಜೀವನದ ಪರಮೋದ್ದೇಶ ಸಾಧನೆಗಾಗಿ ಪ್ರಾಣಧಾರಣೆ. ಪ್ರಾಣಧಾರಣೆಗಾಗಿ ಧನಸಂಗ್ರಹ.

ಧನಸಂಗ್ರಹವೂ ತನಗೆ ವಿಹಿತವಾದ ಕರ್ಮಗಳಿಂದಲೇ. ಅದು ಕೂಡ ಶರೀರಶೋಷಣೆಯಿಲ್ಲದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Wednesday 3 December, 2008

ಸಂಪ್ರತಿ - ನಮ್ಮ ನಾಯಕರು....

ಭಾರತದ ಭವಿಷ್ಯದ ನಾಯಕರಲ್ಲೊಬ್ಬರೆಂದು ಬಿಂಬಿತರಾಗಿರುವ ನಮ್ಮ ರಾಹುಲ್ ಗಾಂಧಿ ಮುಂಬಯಿ ಹತ್ಯಾಕಾಂಡೋತ್ತರ ಶೋಕಕಾಲದಲ್ಲಿ ಸಂತೋಷಕೂಟದಲ್ಲಿ ಮೈಮರೆತಿದ್ದರಂತೆ. ಹಾಗೆಂದು ಪತ್ರಿಕೆಗಳು ವರದಿ ಮಾಡಿವೆ.

ಇದು ಪ್ರಜಾಪ್ರಭುತ್ವದ ವೈಖರಿ. ರಾಜಪ್ರಭುತ್ವವನ್ನು ಭಾರತ ತಿರಸ್ಕರಿಸಿದ ಕಾರಣಗಳು ಯಾವುದು ಎನ್ನುವುದೇ ತಿಳಿಯುತ್ತಿಲ್ಲ. ಜನನಾಯಕ ಜನರ ನಡುವಿನಿಂದ ಮೇಲೆದ್ದು ಬರಬೇಕು, ಅವನಿಗೆ ಬಡತನದ ದುಃಖದುಮ್ಮಾನಗಳೇ ಮುಂತಾದ ಜನರ ಸಂಕಷ್ಟಗಳ ಅರಿವಿರಬೇಕು, ಅವನು ವಂಶವಾಹಿ ಅಧಿಕಾರಿಯಾಗಿರದೇ ಜನರಿಂದ ಆಯ್ಕೆಯಾದವನಾಗಿರಬೇಕು,ಐಶಾರಾಮಿಯಾಗಿರಬಾರದು, ಅವನು ಕೋಟೆಯೊಳಗಿನ ಅರಮನೆಯ ಸಿಂಹಾಸನದಲ್ಲಿ ಹೊಗಳುಭಟರ ನಡುವೆ ವಿರಾಜಮಾನನಾಗಿರದೇ ಸಾಮಾನ್ಯರೊಂದಿಗೆ ಬೆರೆತಿರುವವನಾಗಿರಬೇಕು,.........

ನನಗೆ ಗೊತ್ತಿಲ್ಲ, ರಾಜಪ್ರಭುತ್ವದ ತಿರಸ್ಕಾರದ ಕಾರಣಗಳು. ಇವೆಲ್ಲ ಇರಬಹುದೇನೋ ಅಂತ.

ಸರಿ, ನಾವೇನು ಸಾಧಿಸಿದೆವು? ದೇಶದ್ರೋಹಿಗಳಿಗೆ ಆರ್ಥಿಕ ಸಹಾಯ ಘೋಷಿಸುವ ಅಮರ್ ಸಿಂಗ್ ರಂತವರು, ರಾಹುಲ್ ಗಾಂಧಿಯಂತವರು, ಪ್ರಜಾರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವರ ಕುಟುಂಬದವರನ್ನು ಅವಮಾನಿಸುವ ಅಚ್ಯುತಾನಂದನ್ ತರದವರು .......ಇವರೆಲ್ಲ ನಮ್ಮ ನಾಯಕರು.

ಮುಂದೇನು ಕಾದಿದೆಯೋ? ದೇವರಿಗೇ ಗೊತ್ತು.

Saturday 22 November, 2008

ವಿಶ್ವಮಂಗಲಕ್ಕಾಗಿ ಭಾರತದ ಗೋಯಾತ್ರೆ....

ಗೋವು ಉಳಿಯಬೇಕು. ಅದು ಭಾರತಕ್ಕೆ ಅನಿವಾರ್ಯ. ವಿಶ್ವಕ್ಕೂ ಅನಿವಾರ್ಯವೇ. ಭಾರತೀಯತೆ ಅದರ ಮಹತ್ತ್ವವನ್ನು ಹಾಗೆ ಗುರುತಿಸಿದೆ.

ಭಾರತೀಯತೆಯ ಮೊದಲ ಲಕ್ಷಣವೇ ಅನ್ವೇಷಣೆ. ಎಲ್ಲದರ ಮೂಲದ ಹುಡುಕಾಟಕ್ಕೆ ಅದು ತನ್ನನ್ನು ಕೊಟ್ಟುಕೊಂಡಿದೆ. ಈ ಹುಡುಕಾಟದಲ್ಲಿ ಅದಕ್ಕೆ ಕಾಣಸಿಕ್ಕಿದ್ದು ಗೋವು. ಇಹಕ್ಕೂ ಪರಕ್ಕೂ ಗೋವು ಬೇಕೆಂಬುದನ್ನು ಅದು ಮನಗಂಡಿತು. ಅದಕ್ಕಾದ ಆ ಸತ್ಯದರ್ಶನ, ಗೋವನ್ನು ಬದುಕಿನೊಂದಿಗೆ ಹಾಸುಹೊಕ್ಕಾಗಿ ಹೆಣೆಯಿತು. ಹಾಗಾಗಿ ಗೋವು ಅಧ್ಯಾತ್ಮದ ಸಾಧನವಾಯಿತು ; ಭೌತಿಕದ ಜೀವಿಕೆಯಾಯಿತು.

ಆಧುನಿಕದ ಬದುಕು ಇದನ್ನೆಲ್ಲ ಮರೆತಿದೆ. ಅದು ಸಹಜ. ಮುನ್ನೋಟದ ಯಾನದಲ್ಲಿ ಹಿಂದಿನದ್ದು ಕಾಣದು. ಹಾಗೆಂದು ಅನುಭವವನ್ನು ನಿರಾಕರಿಸುವಂತಿಲ್ಲ. ಆದರೂ ಮರೆತಿದೆ. ಮರೆತದ್ದನ್ನು ನೆನಪಿಸಬೇಕಿದೆ. ಅದು ಸಮಾಜ ಚಿಂತಕರ ಪರಮ ಕರ್ತವ್ಯ.

ಅಂತದ್ದೊಂದು ಕಾರ್ಯಕ್ಕೆ ಸುದೀರ್ಘ ಇತಿಹಾಸವಿದೆ. ಗೋವನ್ನು ಉಳಿಸಿಕೊಳ್ಳಬೇಕೆನ್ನುವ ಜಾಗೃತಿ ಇಂದು - ನಿನ್ನೆ ಮೂಡಿದ್ದಲ್ಲ. ಪರಕೀಯರ ಧಾಳಿ ಆರಂಭವಾದಂದಿನಿಂದಲೇ ಅದೂ ಆರಂಭಗೊಂಡಿದೆ. ಯಾಕೆಂದರೆ ಗೋವಿಗೆ ಅಪಾಯ ಆರಂಭವಾದದ್ದು ಅಂದಿನಿಂದಲೇ.

ಗೋಸಂರಕ್ಷಣೆಗಾಗಿ ಪ್ರಾಣಾಹುತಿಗಳೂ ನಡೆದಿವೆ ಎನ್ನುವುದು ಇತಿಹಾಸಪುಟಗಳು ಗುರುತಿಸಿವೆ. ಎಂಬಲ್ಲಿಗೆ ಅದರ ಮಹತ್ತ್ವ ಮತ್ತು ಅದಕ್ಕಿರುವ ಪ್ರಬಲ ಪ್ರತಿರೋಧ ಎಷ್ಟೆನ್ನುವುದು ಅರಿವಾಗುತ್ತದೆ.

ನಾವು ಬದುಕುತ್ತಿರುವ ಕಾಲಘಟ್ಟದಲ್ಲಿಯೂ ಈ ಎರಡೂ ಹಾಗೆಯೇ ಮುಂದುವರಿದಿದೆ. ಗೋವಿನ ಮಹತ್ತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ, ಹಾಗೆಯೇ ಪ್ರತಿರೋಧವೂ.

ವರ್ತಮಾನದಲ್ಲಿಯೂ ಗೋವಿಗಾಗಿ ಅನೇಕ ಸಂಸ್ಥೆಗಳಿಂದ, ಅಸಂಖ್ಯ ವ್ಯಕ್ತಿಗಳಿಂದ ಕಾರ್ಯ ನಡೆಯುತ್ತಿದೆ ; ಅವರವರದ್ದೇ ಆದ ವಿಧಾನಗಳಲ್ಲಿ.

ಶ್ರೀರಾಮಚಂದ್ರಾಪುರಮಠ ಗೋಸಂರಕ್ಷಣೆಯ ಕಾರ್ಯವನ್ನು ಈ ಕಾಲಘಟ್ಟದ ತನ್ನ ಆದ್ಯತೆಯನ್ನಾಗಿ ಸ್ವೀಕರಿಸಿದೆ. ಆ ದಿಸೆಯಲ್ಲಿ ಹೆಜ್ಜೆಯಿಟ್ಟು 'ಕಾಮದುಘಾ' ಯೋಜನೆಯನ್ನು ಕೈಗೊಂಡಿದೆ. ಸಂರಕ್ಷಣೆ - ಸಂವರ್ಧನೆ - ಸಂಶೋಧನೆ - ಸಂಬೋಧನೆ ಎನ್ನುವ ನಾಲ್ಕು ಆಯಾಮಗಳನ್ನು ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನೂ ಮಾಡಿದೆ.

ಜನಜಾಗೃತಿಯ 'ಸಂಬೋಧನೆ'ಯಲ್ಲಿ ಈಗಾಗಲೇ ಭಾರತೀಯ ಗೋಯಾತ್ರೆ - ಗೋಸಂಧ್ಯಾ - ಗೋಸಂಸತ್ - ವಿಶ್ವಗೋಸಮ್ಮೇಳನ - ಕೋಟಿನೀರಾಜನ - ದೀಪಗೋಪುರ ಮುಂತಾದ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಒಂದಿಷ್ಟು ಜಾಗೃತಿ ಇದರಿಂದ ಸಾಧಿತವಾಗಿದೆ.

ಈಗ ರಾಷ್ಟ್ರದ ಮೂಲೆ -ಮೂಲೆಗೆ ತಲುಪಿಸಲು 'ವಿಶ್ವಮಂಗಲ ಗೋ ಗ್ರಾಮ ಯಾತ್ರಾ' ಸಂಘಟಿತಗೊಳ್ಳುತ್ತಿದೆ. ವಿರೋಧಿ ಸಂವತ್ಸರದ ವಿಜಯದಶಮಿಯಂದು ಆರಂಭಗೊಳ್ಳುವ ಯಾತ್ರೆ ಸಮಗ್ರ ಭಾರತದ ಆದ್ಯಂತ ಸಂಚರಿಸಲಿದೆ. ಯಾತ್ರೆ ಪೂರ್ಣಗೊಂಡಾಗ ಗೋಸಂರಕ್ಷಣೆಯ ಮೊದಲ ಹೆಜ್ಜೆ ಪೂರ್ಣಗೊಂಡಂತಾಗುತ್ತದೆ.

ಯಾತ್ರೆಯ ಕುರಿತು :
* ಯಾತ್ರೆಯ ಸಂಕಲ್ಪ, ಪರಿಕಲ್ಪನೆ ಮತ್ತು ಮಾರ್ಗದರ್ಶನ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರದ್ದು.

* ಯಾತ್ರೆ 'ಸಂತಮಂಡಲ'ದ ಬೆಂಬಲದಲ್ಲಿ ನಡೆಯಲಿದೆ.

* ಯಾತ್ರೆಯ ಪ್ರಸ್ಥಾವಕರು ; ಶ್ರೀಶ್ರೀರವಿಶಂಕರ ಗುರೂಜಿ - ಶ್ರೀರಾಮದೇವಜೀಬಾಬಾ - ಪೂಜ್ಯಾ ಅಮೃತಾನಂದಮಯೀಜೀ - ಪೂಜ್ಯ ಆಚಾರ್ಯ ವಿದ್ಯಾಸಾಗರಜೀ ಮಹಾರಾಜ್ - ಪೂಜ್ಯ ಆಚಾರ್ಯ ಮಹಾಪ್ರಾಜ್ಞಜೀ - ಪೂಜ್ಯ ರತ್ನಸುಂದರ ಸುರೇಶ್ವರಜೀ - ಪೂಜ್ಯ ದಯಾನಂದ ಸರಸ್ವತೀಜೀ.

* ಯಾತ್ರಾ ಸಮಯ 108 ದಿನಗಳು.

* 400 ಸ್ಥಳಗಳಲ್ಲಿ ಸಭಾಕಾರ್ಯಕ್ರಮಗಳು.

* ಹಳ್ಳಿಗಳಿಂದ ಮುಖ್ಯಕೇಂದ್ರಗಳಿಗೆ ಉಪಯಾತ್ರೆಗಳು.

* ಗೋಹತ್ಯಾ ನಿಷೇಧ ಕಾನೂನಿಗೆ ಸಹಿ ಸಂಗ್ರಹ.

* ಮೆರವಣಿಗೆಗಳು.

* ಗೋಪೂಜೆಗಳು.

* ಸಂತರು, ವಿಜ್ಞಾನಿಗಳಿಂದ ಗೋಸಂದೇಶ.

ಹೀಗೆ ಯಾತ್ರೆ ಭಾರತದೆಲ್ಲೆಡೆ ಸಂಚರಿಸಲಿದೆ ; ಭಾರತದ ಪ್ರತಿ ಮನೆಯನ್ನು ಗೋ 'ಅಭಯಧಾಮ'ವನ್ನಾಗಿಸಲು ಪ್ರಯತ್ನಿಸಲಿದೆ.

ನಮ್ಮ ಕಾಲಘಟ್ಟದ ಈ ಮಹತ್ತ್ವಾಕಾಂಕ್ಷಿ ಯಾತ್ರೆಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ.


(ಡಿಸೆಂಬರ್ 2008ರ ಧರ್ಮಭಾರತಿಯ ಸಂಪಾದಕೀಯ)

Thursday 20 November, 2008

ಜೀವನ ಸಂಧ್ಯೆ

ಅಸ್ತಗಿರಿಯಂಚಿನಲಿ ಮುಳುಗಿದನು ರವಿತೇಜ
ಆವರಿಸುತಿದೆ ಜಗವ ತಿಮಿರ ಪಂಕ್ತಿ ;
ಬಾನಿನಂಗಳದಲ್ಲಿ ತಾರೆಗಳ ಸುಳಿವಿಲ್ಲ ;
ಮೋಡ ಮುಸುಕಿದೆ ನಭವ ಶಶಿರಹಿತ ರಾತ್ರಿ.

ಉದಯಿಸುತ ರವಿಯಾಗ ಬೆಳಗಿದ್ದ ಈ ಜಗವ ;
ಬೆಳೆಸಿದ್ದ ವನಸಿರಿಯ ತರುಲತೆಗಳ,
ಸೂರ್ಯಕಿರಣದಿ ಲೋಕ ತಿಳಿದೆದ್ದು ನಲಿದಿತ್ತು ;
ಯಾರಿಲ್ಲ ಅವನ ಜೊತೆ ಮುಳುಗುವಾಗ.

ತಂದೆ ತಾಯಿಗಳೆಂದು, ಅಣ್ಣತಮ್ಮರು ಎಂದು
ಸವೆಸಿದ್ದೆ ಬಾಲ್ಯವನು ಶ್ರಮದಿ ಬೆರೆತು
ಮತ್ತೆ ಯೌವನದಲ್ಲಿ ಪತ್ನಿಮಕ್ಕಳಿಗೆಂದು
ದುಡಿದಿದ್ದೆ ನನ್ನೆಲ್ಲ ಸುಖವ ಮರೆತು.

ಜಗದಗಲ ತುಂಬಿರುವ ನೋವು ತುಂಬಿದ ಜನರ
ಕಣ್ಣೀರ ಕರೆಗೆಂದು ಹೃದಯ ದ್ರವಿಸಿ
ಕೈನೀಡಿ ; ಮೇಲೆತ್ತಿ ; ಮೈದಡವಿ ; ಸಂತೈಸಿ
ಹೋರಾಟ ಮಾಡಿದ್ದೆ ಕಷ್ಟ ಸಹಿಸಿ.

ನನ್ನ ದೇಹದ ಶಕ್ತಿ ನೀರಾಗಿ ಹರಿದಂದು
ನನಗಿಲ್ಲವಾಯಿತು ಊರುಗೋಲು
ಊರು ಕೇರಿಯ ಜನರು ನೋಡಿ ಸಾಗುತಲಿಹರು
ಅಯ್ಯೋ! ಬಿರಿಯುತಲಿದೆ ನನ್ನ ಒಡಲು.

ವಿಗಡವಿಧಿ ಬರೆದಿರುವ ರುದ್ರನಾಟಕದಲ್ಲಿ
ಶೋಕನಾಯಕ ನಾನು ನನಗೆಲ್ಲಿ ಸೊಗಸು?
ನನ್ನ ಜೀವನ ನದಿಯು ಸಾಗರವ ಸೇರುತಿದೆ
ಬದುಕ ಸಂಧ್ಯೆಯೊಳಿಲ್ಲ ಸಾಂತ್ವನದ ಹೊಳಪು.

ಸೂರ್ಯನಿಗೆ ಬೇಳಗುಂಟು ; ನನಗಿಲ್ಲ ಬೆಳಕು
ನನ್ನ ಜೊತೆ ಯಾರಿಲ್ಲ ; ಏಕಾಂಗಿ ಬದುಕು
ಏ...ಕಾಂ....ಗಿ......
ಬ........ದು......ಕು

Tuesday 18 November, 2008

ಸಿದ್ಧ, ಬುದ್ಧನಾದದ್ದು

ಮಹಾರಾಜ ಶುದ್ಧೋದನನ ಅರಮನೆಯಲ್ಲಿ ಅಂದು ಸಂತಸದ ಹೊಳೆ. ಅರಮನೆಯಷ್ಟೇ ಏನು? ರಾಜ್ಯಕ್ಕೆ ರಾಜ್ಯವೇ ಹರ್ಷಗೊಂಡಿತ್ತು. ಮಹಾರಾಜನಿಗೊಬ್ಬ ಮಗ ಹುಟ್ಟಿದ್ದು ಈ ಸಂತೋಷಕ್ಕೆ ಕಾರಣ.

ವಿಧಿ - ವಿಧಾನದಂತೆ ಜಾತಕರ್ಮ, ನಾಮಕರಣಗಳು ನಡೆದವು. ಸರ್ವಾರ್ಥಸಿದ್ಧ ಎಂದು ಹೆಸರನ್ನೂ ಇಡಲಾಯಿತು. ಸಂಭ್ರಮದ ಸಂದರ್ಭದಲ್ಲಿಯೇ ಅರಮನೆಗೆ 'ಅಸಿತ' ಮಹರ್ಷಿಯ ಆಗಮನವಾಯಿತು. ಮುನಿಯನ್ನು ಯಥೋಚಿತವಾಗಿ ಸತ್ಕರಿಸಲಾಯಿತು. ಮಂಗಲ ಸಮಯದಲ್ಲಿ ಮಹರ್ಷಿ ಬಂದಿರುವಾಗ ಮಗನ ಭವಿಷ್ಯ ಕೇಳದಿದ್ದರೆ ಹೇಗೆ? ಶುದ್ಧೋದನ ತನ್ನ ಮಗನ ಮುಂದಿನ ಬದುಕು ಹೇಗೆಂದು ಕೇಳಿದ.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಮುನಿ ನುಡಿದ ಮಾತು !?!

" ದೊರೆಯೇ, ನಿನ್ನ ಮಗನದ್ದು ಅದ್ಭುತ ಜನ್ಮಕುಂಡಲಿ. ಜಗತ್ತು ಎಂದೆಂದಿಗೂ ನೆನಪಿನಲ್ಲಿಡುವ ವ್ಯಕ್ತಿಯಾಗುತ್ತಾನೀತ. ಆದರೆ......"

ಮುನಿ ಮಾತು ನಿಲ್ಲಿಸಿದರು.

ರಾಜನ ಕುತೂಹಲ ಎಲ್ಲೆಮೀರಿತು. "ಆದರೆ....ಆದರೇನು? ಮುನಿವರ್ಯ!" ದೊರೆ ಕೇಳಿದ.

"ರಾಜನ್, ನಿನ್ನ ಮಗ ಸಮಸ್ತ ಭೂಮಂಡಲದ ಚಕ್ರವರ್ತಿಯಾಗುತ್ತಾನೆ. ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಗುರುತಿಸುವಂತೆ ಜಗತ್ತನ್ನು ಆಳುತ್ತಾನೆ."

ರಾಜ ಮುನಿಯ ಮಾತನ್ನು ತುಂಡರಿಸಿದ "ತಾವು ಆದರೆ... ಎಂದು ನಿಲ್ಲಿಸಿದ್ದನ್ನು ನೋಡಿ ಬೆದರಿದ್ದೆ ಪೂಜ್ಯರೇ. ಈಗ ಮನಕ್ಕೆ ಮಹದಾನಂದವಾಯಿತು."

ಮುನಿ ಮುಗುಳ್ನಗುತ್ತಾ ನುಡಿದರು "ನನ್ನ ಮಾತಿನ್ನೂ ಮುಗಿದಿಲ್ಲ ಮಹಾರಾಜ. ಅವನು ಅಖಂಡ ಭೂಮಂಡಲಕ್ಕೆ ಸಾರ್ವಭೌಮನಾಗುತ್ತಾನೆ, ಅಥವಾ ಎಲ್ಲವನ್ನೂ ಬಿಟ್ಟ ಪರಿವ್ರಾಜಕನಾಗುತ್ತಾನೆ. ಅವನಿಗೆಂದು ಬದುಕಿನ ನೋವುಗಳ ಸಂವೇಗ ಉಂಟಾಗುತ್ತದೆಯೋ ಅಂದು ಅವನ ದಾರಿ ಬದಲಾಗುತ್ತದೆ." ಮುನಿ ಮಾತು ನಿಲ್ಲಿಸಿದರು.

ರಾಜನೂ.

ರಾಜ ನಿರ್ಣಯಿಸಿ ಬಿಟ್ಟ, ನನ್ನ ಮಗನಿಗೆ ಬದುಕಿನ ಯಾವ ಕಷ್ಟವೂ ತಿಳಿಯದಂತೆಯೇ ಅವನನ್ನು ಬೆಳೆಸುತ್ತೇನೆ ಎಂದು. ಹಾಗೆಯೇ ಬೆಳೆಸಿದ ಕೂಡ. ಸರ್ವಾರ್ಥಸಿದ್ಧ ವಿಶಾಲ ಅರಮನೆಯ ಅಂಗಳದಲ್ಲಿಯೇ ಬೆಳೆದ. ಅವನ ಸುತ್ತೆಲ್ಲ ಸದಾ ಸಮೃದ್ಧಿಯೇ ತುಂಬಿತ್ತು. ಎಲ್ಲೆಂದರಲ್ಲಿ ಸಂತೋಷ ಕೂಟಗಳು. ನಲಿವೋ ನಲಿವು. ಅಚ್ಚರಿಯ ಮಾತೆಂದರೆ ರಾಜಕುಮಾರ ಹೊರಪ್ರಪಂಚವನ್ನೇ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಯಶೋಧರೆಯೊಂದಿಗೆ ಮುದುವೆಯೂ ಆಗಿ ರಾಹುಲ ಹುಟ್ಟಿಯೂ ಆಗಿತ್ತು.

ಒಂದು ದಿನ, ರಾಜಕುಮಾರನಿಗೆ ಅರಮನೆಯನ್ನು ದಾಟಿದ ಪ್ರಪಂಚವನ್ನು ನೋಡಬೇಕೆನಿಸಿತು. ತಂದೆಗೆ ತನ್ನಾಸೆಯನ್ನು ಹೇಳಿದ. ಆಗಲೇ ಸಂಸಾರಿಯಾಗಿದ್ದವ ಸಂನ್ಯಾಸಿಯಾಗುವುದು ಹೇಗೆ? ಹಾಗಾಗಿ ಶುದ್ಧೋದನ ಸಂತೋಷದಿಂದ ಅವನ ಹೊರ ವಿಹಾರವನ್ನು ಒಪ್ಪಿದ.

ಸಾರಥಿಯೊಂದಿಗೆ ಸವಾರಿ ಹೊರಟಿತು. ಸರ್ವಾರ್ಥಸಿದ್ಧ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಸಾಗಿದ.

ಮುಂದೊಂದು ಅಚ್ಚರಿ ಕಾದಿತ್ತು ರಾಜಕುಮಾರನಿಗೆ. ಅಲ್ಲೊಬ್ಬ ಎದುರಾದ. ಅವನ ಬೆನ್ನು ಬಾಗಿತ್ತು. ಹುಬ್ಬುಗಳು ಜೋಲುತ್ತಾ ಕಣ್ಣನ್ನು ಮುಚ್ಚಿದ್ದವು. ಕೈಕಾಲುಗಳು ನಡುಗುತ್ತಿದ್ದವು. ತುಟಿ ಅದುರುತ್ತಿತ್ತು. ಕೈಯಲ್ಲಿದ್ದ ಕೋಲನ್ನು ನೆಲದ ಮೇಲೆ ಊರಿ ನಡೆಯುತ್ತಿದ್ದ. ತಲೆಯ ಕೂದಲು ಬಿಳಿಯಾಗಿತ್ತು. ಹಿಂದೆಂದೂ ನೋಡದ ಈ ರೂಪ ಸರ್ವಾರ್ಥಸಿದ್ಧನನ್ನು ಚಕಿತಗೊಳಿಸಿತು.

ಸಾರಥಿಯನ್ನು ಕೇಳಿದ "ಇದೇನಿದು? ಇವನಿಗೇಕೆ ಹೀಗಾಗಿದೆ?" ಸಾರಥಿ ನುಡಿದ. "ರಾಜಕುಮಾರ! ಇದು ಮುಪ್ಪು. ಪ್ರತಿಯೊಬ್ಬನಿಗೂ ಇದು ಬಂದೇಬರುತ್ತದೆ. ಜೀವನ ಸಂಧ್ಯೆಯ ಅವಸ್ಥೆಯಿದು."

ರಾಜಕುಮಾರ ಗಂಭೀರನಾದ. ಅರಮನೆಗೆ ಹಿಂದಿರುಗುವಂತೆ ಆದೇಶಿಸಿದ. ಹಿಂದಿರುಗಿದವ ಚಿಂತೆಗೀಡಾದ. ಆಗಾಗ ಶೂನ್ಯದೆಡೆಗೆ ನೋಡುತ್ತಾ ಯೋಚಿಸುತ್ತಿದ್ದ.

ಸ್ವಲ್ಪಸಮಯ ಕಳೆಯಿತು. ಮತ್ತೊಮ್ಮೆ ಹೊರ ಹೋಗುವ ಮನಸ್ಸಾಯಿತು ಸರ್ವಾರ್ಥಸಿದ್ಧನಿಗೆ.

ಮುಂದಿನದೆಲ್ಲ ಹಿಂದಿನಂತೆಯೇ. ಈಗ ಎದುರಾದದ್ದು ಇನ್ನೊಂದು ವಿಚಿತ್ರ. ಅದೂ ಹೊಚ್ಚಹೊಸತು ರಾಜಕುಮಾರನಿಗೆ. ಎದುರಾದವನ ಹೊಟ್ಟೆ ವಿಚಿತ್ರವಾಗಿ ಉಬ್ಬಿತ್ತು. ಕೈಕಾಲುಗಳು ಬಡವಾಗಿದ್ದವು. ಉಸಿರಾಡಿದಂತೆ ಇಡೀ ದೇಹವೇ ಅಲುಗಾಡುತ್ತಿತ್ತು. ಒಂದೊಂದು ಹೆಜ್ಜೆಗೂ "ಅಮ್ಮಾ" ಎಂದು ಕಿರುಚುತ್ತಿದ್ದ.

ಬೆಚ್ಚಿದ ಸರ್ವಾರ್ಥಸಿದ್ಧ ಸಾರಥಿಯನ್ನು ಇದೇನೆಂದು ಕೇಳಿದ. ಸಾರಥಿ ನುಡಿದ "ಇವನು ರೋಗಿ. ಯಾವುದೋ ರೋಗ ಇವನನ್ನು ಬಾಧಿಸುತ್ತಿದೆ. ರೋಗಗಳು ಎಲ್ಲ ಮನುಷ್ಯರನ್ನು ಕಾಡುವುದು ಸಹಜವೇ."

ರಾಜಕುಮಾರ ಅರಮನೆಗೆ ಹಿಂದಿರುಗಿದ, ಪ್ರಯಾಣ ಮೊಟುಕುಗೊಳಿಸಿದ. ಶೂನ್ಯದ ಅವಲೋಕನ ಮತ್ತಷ್ಟು ಹೆಚ್ಚಾಯಿತು.

ಕೆಲಕಾಲ ಕಳೆಯಿತು. ಮತ್ತೆ ವಿಹಾರದ ಮನಸ್ಸಾಯಿತು.

ದೊರೆ ಅರೆ ಮನಸ್ಸಿಂದ ಒಪ್ಪಿದ. ಆದರೆ ಸಾರಥಿ ಮತ್ತು ದಾರಿ ಬದಲಾಯಿತು. ಪ್ರಯಾಣ ಸಾಗಿತು. ಮತ್ತೊಂದು ಹೊಸ ದೃಶ್ಯ ಎದುರಾಯಿತು. ಮಲಗಿದ್ದ ಓರ್ವನನ್ನು ನಾಲ್ವರು ಹೊತ್ತು ಸಾಗುತ್ತಿದ್ದರು. ಹಿಂದೊಂದು ಗುಂಪು ಹಿಂಬಾಲಿಸುತ್ತಿತ್ತು. ಕೆಲವರು ಜೋರಾಗಿ ಅಳುತ್ತಿದ್ದರು, ಗೋಳಿಡುತ್ತಿದ್ದರು. ಕೆಲವರು ಅವರನ್ನು ಸಮಾಧಾನಪಡಿಸುತ್ತಿದ್ದರು.

ಸಾರಥಿಯನ್ನು "ಇದೆಂತಹ ಮೆರವಣಿಗೆ" ಎಂದು ಕೇಳಿದ ಸರ್ವಾರ್ಥಸಿದ್ಧ. ಸಾರಥಿ ವಿವರಿಸತೊಡಗಿದ "ಇದು ಸಾವು. ಎಲ್ಲರೂ ಆಯುಷ್ಯ ತೀರಿದ ಮೇಲೆ ಸಾಯಲೇಬೇಕು. ಸತ್ತಾಗ ಹೀಗೆಯೇ ಮೆರವಣಿಗೆ. ಕೊನೆಗೆ ಸ್ಮಶಾನದಲ್ಲಿ ಬೂದಿಯಾಗುವುದು.ಅಲ್ಲಿಗೆ ಬದುಕಿನ ಕೊನೆ".

ರಥ ಹಿಂದಿರುಗಿತು ಅರಮನೆಗೆ. ರಾಜಕುಮಾರ ಮೌನಿಯಾಗಿಬಿಟ್ಟ. ಈ ಎಲ್ಲ ಬದುಕಿನ ನೋವುಗಳನ್ನು ಕಳೆದುಕೊಳ್ಳಬೇಕೆನಿಸಿತು. ಪ್ರಪಂಚದ ಎಲ್ಲರ ನೋವನ್ನು ಕಳೆಯಬೇಕೆನಿಸಿತು.

ಒಂದು ಮಧ್ಯರಾತ್ರಿ ಎಲ್ಲವನ್ನೂ ಬಿಟ್ಟು ಶಾಶ್ವತ ಸುಖವನ್ನರಸುತ್ತಾ ಹೊರಟ.

* * *

ಗೆಳೆಯರೆ,

ಈ ಹಿನ್ನ್ಮೆಲೆಯಲ್ಲಿ ನನ್ನ "ನಾನು ಬುದ್ಧನಾಗುವುದಿಲ್ಲ" ಕವಿತೆಯನ್ನು ಮತ್ತೊಮ್ಮೆ ಓದಿ.

Monday 17 November, 2008

ನಾನು ಬುದ್ಧನಾಗುವುದಿಲ್ಲ........

ಸಾಗುತಿದೆ ಶವಯಾತ್ರೆ
ಅನಂತದೆಡೆಗೆ
ಜೊತೆಗೆ
ಅಳು ಆಕ್ರಂದನ
ಬೆಂಕಿ ಮಡಿಕೆ
ಚಟ್ಟ ಕಟ್ಟಿಗೆ
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

ಚರ್ಮಕ್ಕೆಲ್ಲ ತೊನ್ನು
ಒಂಟಿಕೈ
ತಿರುಚಿದ ಕಾಲು
ಸುರಿಯುತ್ತಿದೆ ಸಿಂಬಳ
ಆಗಾಗ ವಾಂತಿ
ಕಜ್ಜಿ ತುರಿ
ಎಂಜಲೆಲೆಗಳ ಮಧ್ಯೆ
ಹುಡುಕಾಟ ಬದುಕಿಗಾಗಿ ಅಲ್ಲೂ ಸ್ಪರ್ಧೆ ನಾಯಿಗಳೊಂದಿಗೆ
ಕಂಡರೂ
ನಾನಾಗುವಿದಿಲ್ಲವೇಕೆ ಬುದ್ಧ?

ಬಾಗಿದ ಬೆನ್ನು
ಕೋಲು ಕೈಯಲ್ಲಿ
ಮುಖ ಬದನೆಕಾಯಿ ಬಜ್ಜಿ
ಕೂದಲು?
ಒಣಗಿದ ಭತ್ತದ ಹುಲ್ಲು
ಕೈಕಾಲು ಕಟ್ಟಿಗೆ
ಹೊಟ್ಟೆಯಂತೂ ಪೆಟ್ಟಿಗೆ
ಉಬ್ಬಸ ಎದೆನೋವು ...ವಗೈರೆ...ವಗೈರೆ...
ಕಂಡರೂ
ನಾನಾಗುವುದಿಲ್ಲವೇಕೆ ಬುದ್ಧ?

Tuesday 11 November, 2008

ಹುತ್ತದ ಬೆಳಕು

ಹುತ್ತಗಟ್ಟಿದೆ ಸುತ್ತ, ಮತ್ತೆಲ್ಲ ಕತ್ತಲೆಯು
ಆಳದಲಿ ಹತ್ತುತಿದೆ ಹಣತೆ ದೀಪ |
ಮುನಿಯ ಮಾತೇ ಮಂತ್ರ, ಮನನಕ್ಕೆ ತ್ರಾಣವದು
ಮೈಮರೆತು ಮನವರಿತು ಮುಳುಗಿತಲ್ಲೆ ||

ಹೆಪ್ಪುಗಟ್ಟಿದ ಹುತ್ತ ಕರಗತೊಡಗಿದ ಸಮಯ
ಮಂತ್ರ ಮನದಾಳಕ್ಕೆ ಇಳಿಯುತಿರಲು |
ಆಳದಾಳದ ಬೆಳಕು ಮೇಲುಮೇಲಕೆ ಬರಲು
ಕತ್ತಲೆಯ ಕೋಟೆಯೊಳು ಬಿರುಕು ಬಿರುಕು ||

ಕೋಟೆ ಬಿರಿದಾಕ್ಷಣವು ಜಗಕೆಲ್ಲ ಮಂಗಲವು
ಸತ್ವದುನ್ನತಿಗೇರ್ದ ಮಧುರ ಗಳಿಗೆ |
ಕಂಡ ರೂಪದ ಬಿಂಬ ಜಗದಗಲ ಹರಡಿತ್ತು
ಹುತ್ತದೊಳ ಚೈತನ್ಯ ಇಳಿಯಿತಿಳೆಗೆ ||

Sunday 9 November, 2008

ಮನುಭಾಷಿತ - 7

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸಮಾಜವೊಂದರ ಬೆಳವಣಿಗೆಯೆಂದರೆ ಅದೊಂದು ಸರಪಳಿಯಂತಹ ವ್ಯವಸ್ಥೆ. ಒಂದು ಕೊಂಡಿಯೊಳಗೆ ಇನ್ನೊಂದು ಕೊಂಡಿ ; ಇದರೊಳಗೆ ಇನ್ನೊಂದು ಕೊಂಡಿ ; ಮತ್ತದರೊಳಗೆ ಮುಂದಿನದು ; ಮುಂದಿನದರೊಳಗೆ ಹಿಂದಿನದು....ಹೀಗೆ ಹಿಂದಿನದು ಮುಂದಿನದಕ್ಕೆ ಕೊಟ್ಟುಕೊಳ್ಳುತ್ತಾ, ತಾನೂ ಪಡೆದುಕೊಳ್ಳುತ್ತಾ ಸಾಗುವಿಕೆ, ಮುಂದಿನದೂ ಕೂಡ ಹಿಂದಿನದರಿಂದ ಪಡೆದುಕೊಳ್ಳುತ್ತಾ, ತಾನೂ ಕೊಟ್ಟುಕೊಳ್ಳುತ್ತಾ ಸಾಗುವ ಕ್ರಮ - ಸರಪಳಿಯದ್ದು.

ಅಂತೆಯೇ ಸಮಾಜದ ಕ್ರಮಣವೂ. ಹಿರಿಯ ತಲೆಮಾರು ಮತ್ತು ಕಿರಿಯ ತಲೆಮಾರು ಪರಸ್ಪರ ಕೊಟ್ಟುಕೊಳ್ಳುತ್ತ ಸಾಗಬೇಕು.

ಇದರಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ, ಅನುಪಮ. ತಾನು ತುಂಬಿಕೊಂಡದ್ದೆಲ್ಲವನ್ನೂ ಬರಿದಾಗಿಸುವ ಪ್ರಕ್ರಿಯೆ ಅದರದ್ದು. ತಮ್ಮ ಮುಂದಿನ ಜಗತ್ತಿನ ಸೌಖ್ಯಕ್ಕಾಗಿ ತಮ್ಮ ಸಾಧನೆ - ಅನುಭವಗಳನ್ನವರು ಸ್ವಾರ್ಥರಹಿತರಾಗಿ ಸಮರ್ಪಿಸುತ್ತಾರೆ ಸೃಷ್ಟಿಗೆ. ಈ ಜಗತ್ತಿನ ಸಂಬಂಧವನ್ನು ಮರಣವೆನ್ನುವ ಹೆಸರಿನಿಂದ ಕಡಿದುಕೊಳ್ಳುವ ಅವರಿಗೆ ಈ ಸಮರ್ಪಣೆಯಿಂದಾಗುವ ಲಾಭವೇನು?

ಇಂತಹ ತ್ಯಾಗಶೀಲತೆ ಗೌರವಾರ್ಹ. ಅವರ ಅನುಭವ ಸ್ವೀಕಾರಾರ್ಹ. ಯಾವ ಕಾಲ, ಯಾವ ದೇಶ, ಯಾವ ಜನಾಂಗ ಅವರನ್ನು ನಿರ್ಲಕ್ಷಿಸಿದೆಯೋ ಅದು ನಿಶ್ಚಿತವಾಗಿಯೂ ಪತನಮುಖಿ.

ಹಿರಿಯರ ಅನುಭವ ಕಿರಿಯರ ಬಾಳಬುತ್ತಿ. ಬುತ್ತಿಯೆಂದರೆ ಅದೇ, ಬೆಂಕಿ ಹತ್ತಿಸಬೇಕಿಲ್ಲ ; ನೀರು ಕುದಿಸಬೇಕಿಲ್ಲ ; ಪದಾರ್ಥಗಳ ಸಂಯೋಜನೆಯ ಕಾರ್ಯವಿಲ್ಲ. ಅದು ಸಿದ್ಡ ಆಹಾರ. ಬಾಯಿಗಿಟ್ಟುಕೊಳ್ಳುವುದು ಮಾತ್ರ ನಮ್ಮ ಕೆಲಸ. ಹಿರಿಯರ ಅನುಭವವೂ ಹಾಗೆಯೇ. ಶೂನ್ಯ ಜಗತ್ತಿನಲ್ಲಿ ನಾವು ಯೋಚಿಸಬೇಕಿಲ್ಲ. ಹೊಸದಾಗಿ ಕಾರ್ಯಾರಂಭ ಮಾಡಬೇಕಿಲ್ಲ. ಹೊಸ ಬದುಕಿಗೆ ಅದನ್ನು ಅನ್ವಯಿಸಿಕೊಳ್ಳುವುದು ಮಾತ್ರ ಕಿರಿಯ ತಲೆಮಾರಿನ ಕಾರ್ಯ.

ಇಂತಹ ಬಾಳಬುತ್ತಿಯನ್ನು ನೀಡುವ ಹಿರಿಯರನ್ನು ನಿತ್ಯವೂ ಗೌರವಿಸಬೇಕು ; ಅದರಿಂದ ದೊರೆಯುವ ನಾಲ್ಕು ಲಾಭಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಮನುಭಾಷಿತ -

ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ |
ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್ ||

ನಿತ್ಯವೂ ವೃದ್ಡರನ್ನು ಸೇವಿಸುವವನಿಗೆ, ವೃದ್ಧರಿಗೆ ತಲೆಬಾಗುವವನಿಗೆ ಆಯುಸ್ಸು ; ವಿದ್ಯೆ ; ಯಶಸ್ಸು ; ಬಲಗಳು ವೃದ್ಡಿಯಾಗುತ್ತವೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

(ಧರ್ಮಭಾರತಿಯ ಅಂಕಣ ಬರಹ)

Tuesday 28 October, 2008

ಮನುಭಾಷಿತ - 6

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಆಹಾರ" ಜೀವಸಂಕುಲದ ಆಧಾರ. ಆಹಾರದಿಂದಲೇ ಇರುವಿಕೆ ಸಾಧ್ಯವಾಗುವುದು. ಆಹಾರ ಸ್ವೀಕಾರವಿಲ್ಲವೆಂದರೆ ಜೀವಿ ಮರಣದೆಡೆಗೆ ಮುಖಮಾಡಿದೆ ಎಂದೇ ಅರ್ಥ. ಹಾಗಾಗಿಯೇ ಭೋಜನ ದಿನದ ಪ್ರಧಾನಕಾರ್ಯ.

'ಆಹಾರ'- ಹೊಟ್ಟೆ ಎನ್ನುವ ಚೀಲವನ್ನು ತುಂಬಿಸಿ, ದೇಹಕ್ಕೆ ಶಕ್ತಿಸಾಮರ್ಥ್ಯಗಳನ್ನು ತುಂಬುವ ಸಾಧನವೆನ್ನುವುದು ಹಲವರ ಅಂಬೋಣ. ಸರಿಯೆಂದೆ ಅನ್ನಿಸುತ್ತದೆ. ಯಾಕೆಂದರೆ ಹಸಿವಿನ ಬಾಧೆ ಇಲ್ಲದಿದ್ದವ ಮಾತ್ರ ಏನನ್ನಾದರೂ ಮಾಡಬಲ್ಲ. ಆದರೆ ಆಹಾರದ ಕಾರ್ಯ ಇಷ್ಟೇ ಅಲ್ಲವೆನ್ನುವುದು ಭಾರತೀಯ ಅನುಭವ.

ಮನುಭಾಷಿತ ದೇಹದ ಅವಶ್ಯಕತೆಗಿಂತ ಹೆಚ್ಚು ಆಹಾರ ಸ್ವೀಕರಿಸುವ 'ಅತಿಭೋಜನ'ವನ್ನು ತಪ್ಪೆನ್ನುತ್ತ ಆಹಾರದ ಉದ್ದೇಶಗಳನ್ನು ಹೀಗೆ ಗುರುತಿಸುತ್ತದೆ.

ಅನಾರೋಗ್ಯಮನಾಯುಷ್ಯಮಸ್ವರ್ಗ್ಯಂ ಚಾತಿಭೋಜನಮ್ |
ಅಪುಣ್ಯಂ ಲೋಕವಿದ್ವಿಷ್ಟಂ ತಸ್ಮಾತ್ತತ್ತ್ಪರಿವರ್ಜಯೇತ್ ||

ಅತಿಭೋಜನ ನಿಷಿದ್ಡ. ಕಾರಣ? ಆರೋಗ್ಯಕ್ಕೆ ತೊಂದರೆಯುಂಟಾಗುವುದರಿಂದ ; ಆಯುಷ್ಯಕ್ಕೆ ಹಾನಿಯುಂಟಾಗುವುದರಿಂದ ; ಸ್ವರ್ಗವೇ ಮುಂತಾದ ಉತ್ತಮ ಲೋಕಗಳು ದೊರೆಯದೇ ಇರುವುದರಿಂದ ; ಪುಣ್ಯಸಂಪಾದನೆಯಾಗದೇ ಇರುವುದರಿಂದ ಮತ್ತು ಸಮಾಜದ ಜನರಿಂದ ನಿಂದೆಗೊಳಗಾಗುವುದರಿಂದ.

ಪರ್ಯಾಯವಾಗಿ ಭೋಜನದ ಉದ್ದೇಶಗಳನ್ನು ಈ ಮನುಭಾಷಿತ ಸೂಚಿಸುತ್ತದೆ.

'ಆಹಾರ' ಆರೋಗ್ಯಕಾರಕ. ಅನಾರೋಗ್ಯಕಾರಕವಾದ ಆಹಾರವೂ ಇಲ್ಲದಿಲ್ಲ. ಅದಕ್ಕೆ ನಮ್ಮ ಅನುಭವವೇ ಸಾಕ್ಷಿ. ಆಹಾರದಿಂದಾಗಿಯೇ ರೋಗಗ್ರಸ್ತವಾಗುತ್ತಿಲ್ಲವೇ ನಮ್ಮ ದೇಹ?

'ಆಹಾರ' ಆಯುಷ್ಯಕರ. ನಮ್ಮ ಎಷ್ಟೋ ಆಹಾರಗಳು ಆಯುಷ್ಯದ ದಿನಗಳನ್ನು ಕಡಿಮೆಗೊಳಿಸುತ್ತಿವೆ. ನಿಜವಾದ ಆಹಾರ ಆಯುಷ್ಯವನ್ನು ವೃದ್ಧಿಗೊಳಿಸುವಂತಹದ್ದು.

'ಆಹಾರ' ಪುಣ್ಯಲೋಕಗಳಿಗೆ ತಲುಪಿಸುವಂತಹದ್ದು. ಸ್ವರ್ಗ ಮುಂತಾದ ಪುಣ್ಯಲೋಕಗಳು ಮರಣಾನಂತರ ಪುಣ್ಯವಂತರಿಗೆ ದೊರೆಯುತ್ತವೆ. ಇಂತಹ ಲೋಕಗಳಿಗೆ ತಲುಪಿಸುವ ಕಾರ್ಯದಲ್ಲಿ ಆಹಾರದ ಸಹಕಾರವಿದೆ.

'ಆಹಾರ' ಪುಣ್ಯಕರ. ಜೀವನವನ್ನು ಸುಖಮಯಗೊಳಿಸುವ ಪುಣ್ಯಾರ್ಜನೆಯಲ್ಲಿಯೂ ಆಹಾರ ಪಾತ್ರವಿದೆ.

'ಆಹಾರ' ಲೋಕದ ಪ್ರೀತಿಗೂ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.


(ಧರ್ಮಭಾರತಿಯ ಅಂಕಣ ಬರಹ)

Friday 24 October, 2008

ವಂದನೆಗಳಿದೋ ಸ್ತ್ರೀಯೆ ಸ್ವೀಕರಿಸು

ಪ್ರಕೃತಿ....
ನೀನು ಭಗವಂತನ ಸೃಷ್ಟಿಶೀಲ ಸ್ವರೂಪ. ಭಗವಂತನ ಮೊದಲ ಕಾಮನೆಯನ್ನು ಈಡೇರಿಸಿದ ಹಿರಿಮೆ ನಿನ್ನದು. ಭಗವಂತ ತುಂಬಾ ಹಿಂದೊಮ್ಮೆ ಒಬ್ಬನೇ ಇದ್ದನಂತೆ. ತುಂಬಾ ಹಿಂದೆ ಎಂದರೆ ನೀರು ಹರಿಯುವ ಮುನ್ನ, ಭೂಮಿ ನಿಲ್ಲುವ ಮುನ್ನ, ಆಕಾಶ ಹರಡುವ ಮುನ್ನ, ಗಾಳಿ ಚಲಿಸುವ ಮುನ್ನ, ಅಗ್ನಿ ಉರಿಯುವ ಮುನ್ನ. ಒಟ್ಟಿನಲ್ಲಿ ಪ್ರಕೃತಿ ಉದಯಿಸುವ ಮುನ್ನ ಭಗವಂತ ಒಬ್ಬನೇ ಇದ್ದ. ಅವನ ಮನದಲ್ಲಿ ಆಸೆಯೊಂದು ಉದಯಿಸಿತು. "ತಾನು ಬಹುವಾಗಿ ಹುಟ್ಟಿ ಬೆಳೆಯಬೇಕು". ಈ ಇಚ್ಚೆ ಕ್ರಿಯೆಯಾಗಬೇಕಲ್ಲ. ಕ್ರಿಯೆಯಾಗಿಸಬಲ್ಲ ಶಕ್ತಿ ಬೇಕಲ್ಲ. ಶಕ್ತಿ ವ್ಯಕ್ತಿಯಾಗಬೇಕಲ್ಲ.ಅದಕ್ಕಾಗಿ ತನ್ನನ್ನೇ ಇಬ್ಬಾಗವಾಗಿಸಿಕೊಂಡ. ಆ ಇಬ್ಬಾಗದ ಇನ್ನೊಂದು ಭಾಗವೇ ನೀನು. ಅಂದರೆ ನಾರೀ. ನೀನಿಲ್ಲದಿದ್ದರೆ ಸೃಷ್ಟಿ ಬೆಳೆಯದು. ಅದರಿಂದಾಗಿಯೇ ವಿಕಾಸದ - ಅರಳುವಿಕೆಯ ಶಕ್ತಿ ನೀನು. ಭಗವಂತನ ಭಾಗವೇ ಆದ ನಿನ್ನಿಂದ ಸೃಷ್ಟಿ ಬೆಳೆಯಿತು. ಸಂತಾನ ಸಾವಿರವಾಯಿತು. ನಿನ್ನ ಈ ಮಹಿಮೆಯನ್ನೇ ಶ್ರೀಶಂಕರಭಗವತ್ಪಾದರು ಗಾನಮಾಡಿದರು-

ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್ |
(ಶಿವ ಶಕ್ತಿಯೊಂದಿಗೆ ಒಡಗೂಡಿದಾಗಲೇ ಪ್ರಭವಿಸಿಯಾನು - ಪ್ರಭುವಾದಾನು.)

ತಾಯೇ....
ಮಾತೆ ನೀನು. ಮಾತೇ ಹೊರಡದು ನಿನ್ನ ತಾಯ್ತನ ಮನದಲ್ಲಿ ಹಸಿರಾದಾಗ. ನವಮಾಸ ಹೊತ್ತೆ ನೀನು, ನಿನ್ನ ಗರ್ಭಗೃಹದ ಉದಾತ್ತತೆಯಲ್ಲಿ. ಬಿಂದುವನ್ನು ಸಿಂಧುವಾಗಿಸಿದೆ. ಮತ್ತೊಂದು ಜೀವದ ವಿಕಾಸಪ್ರಕ್ರಿಯೆಯಲ್ಲಿನ ನೋವನ್ನೆಲ್ಲ ನಲಿವಾಗಿ ಅಪ್ಪಿಕೊಂಡೆ. ನವಮಾಸ ತುಂಬಿದಾಗ ಹೆತ್ತೆ. ಪ್ರಸವದ ಅಸಹನೀಯ ವೇದನೆಯನ್ನು ಅನುಭವಿಸುವ ನಿನ್ನ ಸಹನೆ ನಿನಗೆ ಮಾತ್ರ ಸಾಧ್ಯ. ಮಗುವನ್ನು ನೀನು ಬೆಳೆಸಿದೆ. ಅದರ ಪರಿಯಿದೆಯಲ್ಲ ಅದು ಜೀವಲೋಕದ ಅದ್ಭುತ. ಒಡಲ ಕುಡಿಯನ್ನು ಮಾತ್ರವಲ್ಲ, ಮಗುವೆನಿಪ ಮಗುವನ್ನೆಲ್ಲ ಮಡಿಲಲ್ಲಿ ತುಂಬಿಕೊಳ್ಳುವ ನಿನ್ನ ಯಶೋದೆಯ ಭಾವವಿದೆಯಲ್ಲ ಅದು ನಿನ್ನನ್ನು ಲೋಕಮಾತೆಯನ್ನಾಗಿಸಿದೆ. ಅಧ್ಯಾತ್ಮದೀಪವನ್ನೇ ಮಗುವಾಗಿಸಿಕೊಳ್ಳಬಲ್ಲ ದೇವಕಿಯೂ ನೀನೆ. ಮಗನಿಂದಲೇ ಅಧ್ಯಾತ್ಮವನ್ನರಿಯುವ ದೇವಹೂತಿಯೂ ನೀನೆ. ನಿನ್ನ ಈ ಹಿರಿಮೆಯನ್ನು ಶ್ರೀಶಂಕರಭಗವತ್ಪಾದರು ಗಾನ ಮಾಡಿದ ಪರಿ ಹೀಗೆ-

ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ |
(ಕೆಟ್ಟ ಮಗ ಹುಟ್ಟಿಯಾನು ; ಆದರೆ ತಾಯಿ ಕೆಟ್ಟವಳಾಗಲು.)

ಗೃಹವೇ....
ಗೃಹವೆಂದರೆ ನೀನೆ. ಯಾಕೆಂದರೆ ನೀನು ಗೃಹಿಣಿ, ನೀನಿಲ್ಲದ ಮನೆ ಅಡವಿಯೇ ಸರಿ. ನೀನಿದ್ದಾಗ ಮಾತ್ರ ಅದು ಮನೆ. ಮನೆಗೆ ಬಂದು ಮನೆಯೇ ಆಗುವ, ಮನೆಯ ಅಂಶವನ್ನೆಲ್ಲ ತುಂಬುವ, ಮನೆಯ ಎಲ್ಲ ಕಾರ್ಯಗಳನ್ನು ನಿರ್ವಹಿಸುವ, ಸಮಸ್ಯೆಗಳನ್ನೆಲ್ಲ ನಿಭಾಯಿಸುವ ನೀನಲ್ಲದೆ ಇನ್ನಾವುದು ಗೃಹವೆನಿಸೀತು? ಹಿರಿಯರ ಹಿರಿತನಕ್ಕೆ ಹೀನತೆ ಬಾರದಂತೆ, ಸಮಾನರ ಮಾನಕ್ಕೆ ಮುಪ್ಪು ಬಾರದಂತೆ, ಕಿರಿಯರ ಕಿರಿತನ ಹಿರಿದಾಗುವಂತೆ, ನಂದುವ ಮನೆಯನ್ನೂ ನಂದನವನವಾಗಿಸಬಲ್ಲದು ನಿನ್ನ ಸಾಮರ್ಥ್ಯ. ಪುರುಷ ದುಡಿದು ತಂದದ್ದನ್ನು ಸಂರಕ್ಷಿಸುವ, ಸಂರಕ್ಷಿಸಿದ್ದನ್ನು ಯೋಗ್ಯವಾಗಿ ವಿನಿಯೋಗಿಸುವ ನಿನ್ನ ಕುಶಲತೆಯನ್ನು ಕಂಡೇ ಮನು ನಿಯಮ ರೂಪಿಸುತ್ತಾನೆ -

ಅರ್ಥಸ್ಯ ಸಂಗ್ರಹೇ ಚೈನಾಂ ವ್ಯಯೇ ಚೈವ ನಿಯೋಜಯೇತ್ |
(ಅರ್ಥದ ಸಂಗ್ರಹ ಮತ್ತು ವ್ಯಯಕ್ಕೆ ಸ್ತ್ರೀಯು ಸಮರ್ಥಳು)

ಪಾಕಪ್ರವೀಣೆ....
ಜೀವ, ಜಗದೊಡೆಯನ ಅಂಶ. ಪೂರ್ಣನಾದ ಪರಮಾತ್ಮನೊಂದಿಗೆ ಸೇರಿ ಹೋಗುವುದು ಜೀವದ ಲಕ್ಷ್ಯ. ಲಕ್ಷ್ಯ ತಲುಪಲು, ಕಟ್ಟಿದ ಕಟ್ಟು ಬಿಟ್ಟು ಹೋಗಬೇಕು. ಕಟ್ಟು ಕಡಿಯುವುದು, ಪರಮಾತ್ಮನ ನೆನಪು ಚಿರಂತನವಾದಾಗ. ನೆನಪು ನಿರಂತರವಾಗುವುದು ಸತ್ತ್ವಶುದ್ಧವಾದಾಗ. ಸತ್ತ್ವ ಶುದ್ಧಿಗೆ ಆಹಾರದ ಕಾಣ್ಕೆ ದೊಡ್ಡದು. ಅಂತಹ ಆಹಾರದ ಸಿದ್ಧತೆ ನಿನ್ನ ಬದ್ಧತೆ. ಆರು ರಸಗಳ ಸವಿಯನ್ನು ಉಣಬಡಿಸುತ್ತ ರಸಮಯನಾದ ಭಗವಂತನ ನೆಲೆಯಲ್ಲಿ ಜೀವಜಗತ್ತನ್ನು ನಿಲ್ಲಿಸಬಲ್ಲೆ. ಆದ್ದರಿಂದಲೇ ಅರಿತವರು ಜಗನ್ಮಾತೆಯನ್ನು ಹೀಗೆ ಪ್ರಾರ್ಥಿಸಿದರು-

ಪತ್ನೀಂ ದೇಹಿ, ತಾರಿಣೀಂ ದುರ್ಗಸಂಸಾರಸಾಗರಸ್ಯ ಕುಲೋದ್ಭವಾಮ್ |
(ದಾಟಲು ಕಷ್ಟಸಾಧ್ಯವಾದ ಸಂಸಾರಸಾಗರವನ್ನು ದಾಟಿಸುವ, ಸತ್ಕುಲಪ್ರಸೂತೆಯಾದ ಪತ್ನಿಯನ್ನು ಅನುಗ್ರಹಿಸು.)

ಪ್ರಿಯ ಪುತ್ರಿ....
ಮಗುವಿನ ತಾಯಾಗಬಲ್ಲ ನೀನು ತಾಯ್ತಂದೆಯರಿಗೆ ಒಲುಮೆಯ ಮಗಳೂ ಆಗಬಲ್ಲೆ. ಮಗಳಾಗಿ ನೀನು ಬೆಳೆಯುವ ಸಿರಿ ಅನುಪಮ. ನೀನು ಬೆಳೆಯುತ್ತಲೇ ಮನೆ -ಮನವನ್ನೆಲ್ಲ ತುಂಬುತ್ತಾ ಹೋಗುವ ಕ್ರಮ ಅನನ್ಯ. ನೀನು ಹುಟ್ಟಿದೆ, ಮನೆ ಬೆಳಕಾಯಿತು. ನೀನು ಬೆಳೆದೆ, ಬೆಳಕು ಇಮ್ಮಡಿಯಾಯಿತು. ಒಂದು ದಿನ.........ಅದೇ ಆ ದಿನ.......ಬಂದೇ ಬಂದಿತು. ನಿನ್ನನ್ನು ಇನ್ನೊಂದು ಮನೆಯನ್ನು ಬೆಳಗಲು ಕಳುಹಿಸಿ ಕೊಡುವ ದಿನ. ಕಳುಹಿಸಿಕೊಟ್ಟ ಮೇಲೂ ನೀನು ತವರಿನ ಕುರಿತು ಯೋಚಿಸುವ ಪರಿಗೆ ಜಗತ್ತೇ ತಲೆಬಾಗಬೇಕು. ಕಳುಹಿಸಲಾರದೇ ನಿನ್ನನ್ನು ಕಳುಹಿಸುವ ಅನಿವಾರ್ಯತೆಯನ್ನು ಕಾಳಿದಾಸ ಹೀಗೆನ್ನುತ್ತಾನೆ-

ಪೀಡ್ಯಂತೇ ಗೃಹಿಣಃ ಕಥಂ ನ ತನಯಾವಿಶ್ಲೇಷದುಃಖೈರ್ನವೈಃ |
(ಮಗಳಿಂದ ದೂರವಾಗುವ ದುಃಖದಿಂದ ಎಲ್ಲ ಗೃಹಸ್ಥರೂ ಪೀಡನೆಗೊಳಗಾಗುತ್ತಾರೆ.)

ಕಲಾಸಾಮ್ರಾಜ್ಞಿ....
ನಿನ್ನ ಕೊರಳ ದನಿಯ ಅನುರಣನ, ಕಾಲ್ಗೆಜ್ಜೆಯ ತನನ ತನನ ಪ್ರಕೃತಿಯನ್ನು ಚೇತೋಹಾರಿಯಾನ್ನಾಗಿಸಿದೆ. ಜೀವಕುಸುಮವನ್ನು ಪರಮಪುರುಷ ಪರಮಾತ್ಮನ ಕಂಠಸಿರಿಯ ಮೆರೆಯುವ ಮಾಲಿಕೆಯಲ್ಲಿ ಜೋಡಿಸಿದೆ. ಸಂಗೀತ - ನರ್ತನಗಳ ಮೂಲಕ ಸಹಸ್ರ ಸಂವತ್ಸರಗಳಿಂದ ನೀನು ನೀಡುತ್ತಾ ಬಂದ ಸಂಸ್ಕಾರ ಸಮಾಜವನ್ನು ಇಂದಿಗೂ ರಕ್ಷಿಸುತ್ತಿದೆ. ಕಲೆ ಭಗವಂತನ ವಿಶಿಷ್ಟ ಉಪಾಸನೆ. ಅಂತಹ ಉಪಾಸನೆಯ ಪೌರೋಹಿತ್ಯ ನಿನ್ನ ಕ್ರಿಯಾಶೀಲತೆಯಲ್ಲಿ ನಳನಳಿಸುತ್ತಿದೆ. ಕಲೆ ನಿನ್ನ ಮೂಲರೂಪಗಳಲ್ಲೊಂದಾದ ಮಾತೆ ಸರಸ್ವತಿಯ ಅಂಗವೇ ಆಗಿದೆ ಎನ್ನುವುದು ಅನುಭವದ ಮಾತು.

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ |
(ಸಂಗೀತ ಮತ್ತು ಸಾಹಿತ್ಯಗಳು ಮಾತೆ ಸರಸ್ವತಿಯ ದಿವ್ಯಪಯೋಧರಗಳು)

ಪೂಜ್ಯಳೇ....
ನಿನ್ನ ಕುರಿತಾಗಿ ಹೇಳಹೊರಡುವುದೇ ಸರಿಯಲ್ಲ. ಯಾಕೆಂದರೆ ಅದು ಹೇಳಿ ಮುಗಿಯುವುದಿಲ್ಲ. ಸಂಗಾತಿಯಾಗಿ ನೀನು ಪುರುಷನ ಯಶಸ್ಸಿಗೆ ಕಾರಣಳಾಗಿದ್ದಿ. ಸಹೋದರಿಯಾಗಿ ಸಹೋದರರ ಬದುಕಿನ ಭೂಮಿಯನ್ನು ಹಸನಾಗಿಸಿದ್ದಿ. ಕವಯಿತ್ರಿಯಾಗಿ ಬದುಕನ್ನು ರಸಮಯ ಕಾವ್ಯವಾಗಿರಿಸಿದ್ದಿ. ದೇಶವನ್ನು ಆಳಿಯೂ, ಸೈ ಎನ್ನಿಸಿಕೊಂಡಿದ್ದಿ. ಹೀಗೆ ಸೃಷ್ಟಿಗೆ ನಿನ್ನ ಉಪಸ್ಥಿತಿ ಅನಿವಾರ್ಯ. ಸೃಷ್ಟಿಯನ್ನು ಕಾಪಿಡುವ ದೇವತೆಗಳು ಈ ಎಲ್ಲ ಕಾರಣಗಳಿಗಾಗಿಯೇ ನಿನ್ನನ್ನು ಗೌರವಿಸುತ್ತಾರೆ. ನಿನ್ನ ಪೂಜೆಯಲ್ಲಿ ತಾವೂ ಪೂಜೆಗೊಳ್ಳುತ್ತಾರೆ ; ಸಂತಸಪಡುತ್ತಾರೆ. ಮನು ಅದನ್ನೇ ನುಡಿಯುತ್ತಾನೆ-

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
(ಎಲ್ಲಿ ನಾರಿ ಪೂಜೆಗೊಳ್ಳುವಳೋ, ಅಲ್ಲಿ ದೇವತೆಗಳೇ ಸಂತೋಷಪಡುವರು.)

{'ಜನನಿ' ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ}

Thursday 23 October, 2008

ಮನುಭಾಷಿತ - 5

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಸೃಷ್ಟಿಯಲ್ಲೇಕೆ ತಾರತಮ್ಯ?
ಒಬ್ಬ ಸಿರಿವಂತ ; ಮತ್ತೊಬ್ಬ ಬಡವ.
ಪ್ರತಿಭಾಶಾಲಿಯೊಬ್ಬ ; ಅಪ್ರತಿಭನೊಬ್ಬ.
ಲೇಖಕನೊಂದು ಕಡೆ ; ಅಕ್ಷರವನ್ನೇ ಗುರುತಿಸದವ ಇನ್ನೊಂದು ಕಡೆ.
ಓರ್ವನಿಗೆ ಉದ್ಯಮದ ಸೌಭಾಗ್ಯ ; ಕೂಲಿಯ ದೌರ್ಭಾಗ್ಯಕ್ಕೆ ಹೆಗಲು ಇನ್ನೋರ್ವನದು.
ಸೌಂದರ್ಯದ ಅಧಿರಾಣಿಯ ವಿಲಾಸ ಒಂದು ಕಡೆ ; ಕುರೂಪಿಯ ಬವಣೆ ಇನ್ನೊಂದು ಕಡೆ.
ಆಲದ ಮರ ; ಕೊತ್ತುಂಬರಿ ಗಿಡ.
ಆನೆ ; ಇರುವೆ.
ಹುಲಿ ; ಕುರಿ.
....................ಹೀಗೆ ಸೃಷ್ಟಿ, ಮೇಲುಕೀಳಿನ ಸಂತೆ.

ಹೀಗೇಕೆ? ಎಲ್ಲವೂ ಸಮವಾಗಿಲ್ಲ ಏಕೆ? ಕೆಲವರು ಮಾತ್ರ ಹಾಡಬಲ್ಲರೇಕೆ? ಕೆಲವರು ಮಾತ್ರ ಅಭಿನಯಿಸಬಲ್ಲರೇಕೆ? ಕೆಲವರು ಮಾತ್ರ ವಾಗ್ಮಿಗಳಾಗುವುದು ಏಕೆ? ಸಮಾನತೆಯ ಕೂಗನ್ನು ಅಂಬರಕ್ಕೆ ತಲುಪುವಂತೆ ಮಾಡಿದರೂ ಈ ಅಸಮಾನತೆ ಬದಲಾಗದು.

ಇದಕ್ಕೆ ಉತ್ತರವಿರುವುದು ಭಾರತೀಯರ ಕರ್ಮಸಿದ್ಧಾಂತದಲ್ಲಿ. ಬದುಕಿನ ಎಲ್ಲದರ ಕಾರಣ ಮನದ ಯೋಚನೆ, ಭಾವಾಭಿವ್ಯಕ್ತಿಯ ಮಾತು, ನಮ್ಮೆಲ್ಲ ಕ್ರಿಯೆಗಳು.

ಸೃಷ್ಟಿಯ ಭಿನ್ನತೆಗೆ ಕಾರಣ ಇವುಗಳೇ. ಯೋಚನೆ - ಮಾತು - ಕ್ರಿಯೆಗಳಿಂದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು. ಒಳ್ಳೆಯದರಿಂದ ಒಳಿತು, ಕೆಟ್ಟದರಿಂದ ಕೆಡುಕು. ಇದನ್ನೇ ಮನು ಹೀಗೆನ್ನುತಾನೆ :

ಶುಭಾಶುಭಫಲಂ ಕರ್ಮ ಮನೋವಾಗ್ದೇಹ ಸಂಭವಮ್ |
ಕರ್ಮಜಾ ಗತಯೋ ನೄಣಾಮುತ್ತಮಾಧಮಮಧ್ಯಮಾಃ ||

ಮನಸ್ಸು - ಮಾತು - ದೇಹಗಳಿಂದ ಮಾಡುವ ಒಳ್ಳೆಯ ಕೆಟ್ಟ ಕರ್ಮಗಳಿಂದಾಗಿ ಜೀವಿಯ ಉತ್ತಮ - ಮಧ್ಯಮ - ಅಧಮ ಜೀವನ ನಿರ್ಣಯವಾಗುತ್ತದೆ.

ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

Wednesday 22 October, 2008

ಹಾರೈಕೆ

ಮಂಗಲದ ಹೊಂಗನಸು ನನಸ ಗೇಹದೊಳಿರಲಿ
ಯಶವಿರಲಿ ಜೀವನದಿ ರಸವು ತುಂಬಿರಲಿ |
ಸತ್ಯ ಶಿವ ಸುಂದರದ ಹಂದರದ ನೆರಳಿರಲಿ
ಪೂರ್ಣತೆಯ ಗಮ್ಯದೆಡೆ ಜೀವ ಹರಿಯುತಿರಲಿ ||

ನಯನ ಮಂದಿರ ಪರಮಗುರುವ ಹೊಂದಿರಲಿ
ದಿವ್ಯ ಗಂಧದ ಮರುತ ಜೀವದುಸಿರಾಗಿರಲಿ |
ಕಿವಿದೆರೆಯಳೋಂಕಾರ ದನಿಯ ಮಧುರತೆಯಿರಲಿ
ಪರಮರಸನಲಿ ಸೇರ್ವ ರಸವೆ ರುಚಿಯಾಗಿರಲಿ ||

ಕಾಯ ಕರ್ಮೇಂದ್ರಿಯವು ಸತ್ಕರ್ಮ ರತವಿರಲಿ
ಜ್ಞಾನದೀವಿಗೆ ಹಚ್ಚೆ ಅರಿವಿನಿಂದ್ರಿಯ ಗೆಲಲಿ |
ಕಾಯ ಸಂಪದ ಶಿವನ ಅಡಿಗೆ ಅರ್ಪಿತವಿರಲಿ
ದೇಹದೇಗುಲ ದೈವ ಸುವಿಲಾಸಮಯವಿರಲಿ ||

Sunday 19 October, 2008

ಮನುಭಾಷಿತ - 4

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)



ಜೀವನದ ಹಾದಿ ದುರ್ಗಮ. ಅದು ರಾಜವೀಥಿಯಲ್ಲ. ಅದರಲ್ಲಿ ಕಡಿದಾದ ಬೆಟ್ಟವಿದೆ ; ಆಳವಾದ ಪ್ರಪಾತವಿದೆ ; ಕೊರಕಲಿದೆ ; ಕಲ್ಲಿದೆ ; ಮುಳ್ಳಿದೆ ; ಎಲ್ಲಕ್ಕಿಂತ ಹೆಚ್ಚಾಗಿ ಗುರಿ ಮತ್ತು ಗುರಿ ತಲುಪುವ ವಿಷಯದಲ್ಲಿ ಕತ್ತಲೆಯಿದೆ.

ಇಂತಹ ಪಯಣ, ಮಾರ್ಗದರ್ಶಿ ಸಾಪೇಕ್ಷ. ಮಾರ್ಗದರ್ಶಿಯೇ 'ಗುರು'.

ಗುರು 'ಭಾರತ'ರ ಬದುಕಿನ ಪರಮೋಚ್ಚ ಸ್ಥಾನ. ಗುರುವಿಗೆ ಅಧೀನವಾಗದ ಯಾವೊಂದು ಕ್ಷಣವೂ ಬದುಕಿನಲ್ಲಿಲ್ಲ.

ಬದುಕಿನೆಲ್ಲ ಬೇಕುಗಳನ್ನು ಈಡೇರಿಸುವ ಗುರುವಿಗೆ ಸಲ್ಲಿಸಬೇಕಾದ ಕೃತಜ್ಞತೆಯೇ ಪರಮಾದರ ಸಮರ್ಪಣೆ.

ಆದರಣೀಯ ಗುರುವಿನ ನಿಂದೆ ಸಜ್ಜನಿಕೆಯಲ್ಲ. ಹಾಗೆಂದು ನಿಂದಿಸುವ ದುರ್ಜನರ ಅಸ್ತಿತ್ವವೂ ಇಲ್ಲದಿಲ್ಲ.

ಗುರುನಿಂದೆ ಮಹಾಪಾಪ. ನಿಂದಿಸುವ ಮಾತು ಹಾಗಿರಲಿ, ನಿಂದನೆಯನ್ನು ಕೇಳುವುದೂ ಪಾಪಕರ್ಮವೆನ್ನುವುದು ಮನುವಿನ ಅಭಿಮತ -

ಗುರೋರ್ಯತ್ರ ಪರೀವಾದಃ ನಿಂದಾವಾಪಿ ಪ್ರವರ್ತತೆ |
ಕರ್ಣೌ ತತ್ರ ಪಿಧಾತವ್ಯಂ ಗಂತವ್ಯಂ ವಾ ತತೋನ್ಯತಃ ||

ಎಲ್ಲಿ ಗುರುವಿಗೆ ಅವಮಾನ ನಡೆಯುತ್ತದೆಯೋ, ಎಲ್ಲಿ ಗುರುವಿನ ನಿಂದೆ ನಡೆಯುತ್ತದೆಯೋ ಅಲ್ಲಿ ಕಿವಿ ಮುಚ್ಚಿ ಕುಳಿತುಕೊಳ್ಳಬೇಕು ಅಥವಾ ಅಲ್ಲಿಂದ ಹೊರನಡೆಯಬೇಕು.

ಇದು ಮನುಭಾಷಿತ. ಈ ಮಾತಿನ ಅರ್ಥವ್ಯಾಪ್ತಿ ವಿಶಾಲ. ಗುರುನಿಂದೆಯ ಶ್ರವಣ ಮಾತ್ರದ ನಿಷೇಧ ಧ್ವನಿಸುವುದು ಅದರ ಭೀಕರತೆಯನ್ನು.

ನಿಂದ್ಯವಾದ ಅಂಶಗಳೇ ಇಲ್ಲದ ಗುರುವಿನ ನಿಂದೆ ಹೇಗೆ ಸಾಧ್ಯ? ಸಾಧ್ಯ, ಯಾಕೆಂದರೆ ನಿಂದಿಸುವ ನಾಲಿಗೆ ಅಂತಹದ್ದು. ಅದಕ್ಕೆ ಸರಿ - ತಪ್ಪುಗಳ ನಿರ್ಣಯವಿಲ್ಲ. ಆ ನಾಲಿಗೆಯ ಹಿಂದಿನ ಮನಸ್ಸು ಕಾಲುಷ್ಯಪೂರ್ಣ. ಸ್ವಯಂ ಕಲುಷಿತಗೊಂಡದ್ದು ಮಂಗಲವನ್ನು ಆಚರಿಸುವುದು ಹೇಗೆ? ಇಂತಹ ಮನಸ್ಸು ಆಡಿಸುವ ನಾಲಿಗೆಯನ್ನು ಕಂಡೇ ದಾಸರು -
ಅಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ........ಎಂದು ಹಾಡಿರುವುದು.

Saturday 18 October, 2008

ಮನುಭಾಷಿತ 3

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಕಾಲಕ್ಕೆ ರಾಜನೇ ಕಾರಣ - "ರಾಜಾ ಕಾಲಸ್ಯ ಕಾರಣಮ್" ಎನ್ನುವುದು ಭಾರತದ ಅನುಭವ. ಕಾಲದ ಪರಿಣಾಮದಿಂದ ರಾಜನ ಗುಣದಲ್ಲಿ ಪರಿವರ್ತನೆಯೋ, ರಾಜನಿಂದಾಗಿಯೇ ಕಾಲದಲ್ಲಿ ಬದಲಾವಣೆಯೋ ಎನ್ನುವ ಪ್ರಾಚೀನ ಜಿಜ್ಞಾಸೆಗೆ ಭಾರತ ಕಂಡ ಅಪ್ರತಿಮ ರಾಜನೀತಿಜ್ಞ ಭೀಷ್ಮನ ಅಭಿಮತವಿದು.

ಕಾಲವೆಂದರೆ ನಡೆದದ್ದು ; ಕಾಲವೆಂದರೆ ನಡೆಯುತ್ತಲಿರುವುದು ; ಕಾಲವೆಂದರೆ ನಡೆಯಲಿರುವುದು ; ಕಾಲವೆಂದರೆ ಈ ಮೂರರ ಕಲನ - ಕೂಡುವಿಕೆ. ಕಾಲವೆಂದರೆ "ಸೃಷ್ಟಿಯ ಎಲ್ಲವೂ" ಎಂದಂತೆಯೇ.

ಸೃಷ್ಟಿಯ ಎಲ್ಲದಕ್ಕೂ ಕಾರಣನಾಗುವವನು ರಾಜನೆಂದಾದರೆ, ರಾಜ ಹೇಗಿರಬೇಕು? ಎನ್ನುವುದು ಸೃಷ್ಟಿಯ ಬಹುದೊಡ್ಡ ವಿಚಾರವೇ ಸರಿ.

ರಾಜನ ಕುರಿತು ಸುದೀರ್ಘವಾಗಿ ವಿವರಿಸುವ ಮನು ರಾಜನಲ್ಲಿ ಇರಬಾರದ್ದನ್ನು ನೆನಪಿಸುವ ಪರಿ ಆಳುವವರಿಗೆ ಆದರ್ಶದ ನುಡಿ -

ದಶ ಕಾಮಸಮುತ್ಟಾನಿ ತಥಾಷ್ಟೌ ಕ್ರೋಧಜಾನಿ ಚ |
ವ್ಯಸನಾನಿ ದುರಂತಾನಿ ಪ್ರಯತ್ನೇನ ವಿವರ್ಜಯೇತ್ ||

ಆಸೆಯಿಂದ ಹುಟ್ಟಿಕೊಳ್ಳುವುದು ಹತ್ತು ; ಸಿಟ್ಟಿನಿಂದ ಹುಟ್ಟಿಕೊಳ್ಳುವುದು ಎಂಟು ; ಈ ವ್ಯಸನಗಳು ರಾಜನ ಬದುಕಿನ ದುರಂತಗಳು, ಬಿಡಲೇಬೇಕು ಅವನ್ನು. ಮೊದಲ ಹತ್ತು :-
೧. ಮೃಗಬೇಟೆ
೨. ಜೂಜು
೩. ಆಲಸ್ಯದ ಪ್ರತಿರೂಪವಾದ ಹಗಲ ನಿದ್ರೆ
೪. ಅನ್ಯರ ಟೀಕೆ
೫. ಸ್ತ್ರೀ ಚಪಲತೆ
೬. ಮದ್ಯಪಾನ
೭. ಕೇವಲ ಕಣ್ಣಿನ ಸಂತೋಷಕ್ಕೆ ನೃತ್ಯವೀಕ್ಷಣೆ
೮. ಮೂಲ ಮರೆತ ಕಿವಿಗಿಂಪು ಮಾತ್ರವಾದ ಹಾಡುವಿಕೆಯಲ್ಲಿ ಅಭಿರುಚಿ
೯. ಉದ್ದೇಶವಿರದ ವಾದ್ಯವಾದನದಲ್ಲಿ ಆಸಕ್ತಿ
೧೦. ಬರಿದೆ ತಿರುಗಾಟ

ಕೊನೆಯ ಎಂಟು :-
೧. ಇಲ್ಲದ ದೋಷವನ್ನು ಬೇರೆಯವರಲ್ಲಿ ಆರೋಪಿಸುವುದು
೨. ಸಜ್ಜನರ ಶೋಷಣೆ
೩. ಮೋಸ
೪. ಬೇರೆಯವರ ಗುಣದಲ್ಲಿ ಅಸಹನೆ
೫. ಬೇರೆಯವರ ಗುಣವನ್ನು ದೋಷವೆನ್ನುವುದು
೬. ಹಣದ ಅವ್ಯವಹಾರ
೭. ಕಠಿಣವಾದ ಮಾತು
೮. ದೈಹಿಕ ಹಿಂಸೆ
ಇವೆಲ್ಲ ರಾಜನಲ್ಲಿ ಇರಬಾರದವು.


ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

Tuesday 14 October, 2008

ಧರ್ಮ ಯಾವುದಯ್ಯಾ...

(೧೩.೧೦.೨೦೦೮ ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ )


ಧರ್ಮ ಭಯ ಹುಟ್ಟಿಸುತ್ತಿದೆ. ಇದು ಇಂದಿನ ವಾಸ್ತವ. ಅಂದಮೇಲೆ ಅದು ಭಯೋತ್ಪಾದಕ. ಭಯೋತ್ಪಾದನೆ ನಮಗೆ ಬೇಡ. ಅದು ಸುಖೀಜೀವನಕ್ಕೆ ಮಾರಕ. ಮಾರಕವಾದದ್ದು ಅಳಿಯಲೇ ಬೇಕು. ಪೂರಕವಾದದ್ದು ಮಾತ್ರ ಉಳಿಯಬೇಕು. ಉಳಿಸುವುದು ಉಳಿಯಲಿ ; ಅಳಿಸುವುದು ಅಳಿಯಲಿ. ಇದೇ ತಾನೇ ನಮ್ಮ ನಿಲುವು.

ನೈಜವಾಗಿ ಧರ್ಮ ಅಂತಹದ್ದೇ? ಚಿಂತನಾರ್ಹ ಸಂಗತಿ.

ಅಂತಹದ್ದೇನೋ ಎಂದು ಅನಿಸುತ್ತಿದೆ. ಅನಿಸಿಕೆಯೆಲ್ಲ ವಸ್ತುಸ್ಥಿತಿಯಾಗದು. ವಸ್ತುಸ್ಥಿತಿಯೂ ಒಮ್ಮೊಮ್ಮೆ ಅನಿಸಿಕೆಯಾಗಬಹುದು, ಅಷ್ಟೆ.

'ಧರ್ಮ' ಶಬ್ದ ಸಂಸ್ಕೃತದ್ದು. ಅಲ್ಲದಕ್ಕೆ ಎರಡು ಅರ್ಥಗಳು. ಧರಿಸುವುದು ಧರ್ಮ. ಇದು ಧರ್ಮದ ಮೊದಲ ಅರ್ಥ. ಧರಿಸುವುದೆಂದರೆ? ನಾವು ಬಟ್ಟೆ ಧರಿಸಿದಂತೆ. ಬಟ್ಟೆ ನಮ್ಮ ಮೇಲಿದೆಯಾದರೂ ಅದು ನಿಂತಿರುವುದು ನಮ್ಮಿಂದಾಗಿಯೇ. ನಮ್ಮ ದೇಹವಿಲ್ಲದಿದ್ದರೆ ಬಟ್ಟೆ ಬಿದ್ದುಹೋಗುತ್ತಿತ್ತು. ಹಾಗೆಯೇ ಬದುಕನ್ನು ಧರಿಸುವುದು 'ಧರ್ಮ'. ಧರ್ಮವಿಲ್ಲದಿದ್ದರೆ? ಬದುಕು ಬಿದ್ದು ಹೋಗುತ್ತಿತ್ತು. ಧರ್ಮವಿದೆ; ಅದರಿಂದಾಗಿಯೇ ಬದುಕು ಉಳಿದಿದೆ. ಎಂಬಲ್ಲಿಗೆ ಧರ್ಮ ಬದುಕಿಸುವುದು ಎಂದಾಯಿತು.

ಪೋಷಿಸುವುದು ಧರ್ಮ. ಇದು ಇದರ ಇನ್ನೊಂದು ಅರ್ಥ. ಪೋಷಣೆಯೆಂದರೆ? ಗಿಡಕ್ಕೆ ಮಣ್ಣು ಕೊಟ್ಟಂತೆ ; ಗೊಬ್ಬರವಿಟ್ಟಂತೆ ; ನೀರುಣಿಸಿದಂತೆ. ಬದುಕಿಗಿಂತಹ ಪೋಷಣೆ ಧರ್ಮದ್ದು.

ಹಾಗಾದರೆ ಇಂದು ಮಾರಕ ; ಶೋಷಕ ಎನಿಸಿಕೊಂಡಿರುವುದೇನು? ಅದು ಧರ್ಮದ ವೇಷ ; ಧರ್ಮವಲ್ಲ. ರಾವಣನ ಸಂನ್ಯಾಸದಂತೆ. ಸೀತೆಯ ಅಪಹರಣಕ್ಕೆ ಬಂದಾಗ ರಾವಣನೂ ಸಂನ್ಯಾಸಿಯೇ. ಹೊರನೋಟಕ್ಕೆ ಹಾಗೆಯೇ ಕಾಣಿಸಿಕೊಂಡಿದ್ದನಾತ. ಒಳಗೆ? ಸಂನ್ಯಾಸವಿರಲಿಲ್ಲ. ಅಲ್ಲೊಬ್ಬ ಕಾಮುಕನಿದ್ದ ; ಕ್ರೂರಿಯಿದ್ದ. ಒಳಗಿನ ಸ್ಥಿತಿಯನ್ನು ಅರಿಯುವುದು ಹೇಗೆ? ಅದಕ್ಕೆ ಒಳನೋಟ ಬೇಕು. ಹೊರನೋಟದಿಂದ ಅದು ಸಾಧ್ಯವಾಗದು.

ಧರ್ಮ ಕೇವಲ ಹೊರಗಿನಿಂದ ಅರ್ಥವಾಗುವುದಿಲ್ಲ ಎನ್ನುವುದು ಇಂದಿನ ಮಾತು ಮಾತ್ರವಲ್ಲ, ಅದು ಹಳೆಯ ಅನುಭವವೇ. ಗೊತ್ತು ಅಂದುಕೊಂಡವರಿಗೂ ಸಿಗದಿದ್ದು ಅದು. ಇವನಿಗೇನು ಗೊತ್ತಾದೀತು? ಎನಿಸಿಕೊಂಡವನಿಗೂ ಆಳವಿತ್ತದ್ದದು.

ಬಹು ಹಿಂದಿನದೊಂದು ಕಥೆ. ಹಿಂದೆ ಎಂದರೆ ದ್ವಾಪರ ಯುಗದಷ್ಟು ಹಿಂದೆ. ಅದೊಂದು ವನ. ವನದಲ್ಲೊಂದು ಆಶ್ರಮ. ಆಶ್ರಮದ ಮುಂದೊಂದು ವೃಕ್ಷ. ವೃಕ್ಷದ ಬುಡದಲ್ಲೊಬ್ಬ ಮುನಿ. ಕೌಶಿಕನೆಂದು ಮುನಿಯ ಹೆಸರು. ಮುನಿ ವೇದವನ್ನು ನುಡಿವವ ; ಶಾಸ್ತ್ರವನ್ನು ಅರಿತವ ; ಪುರಾಣ ಅವನಿಗೆ ಕರತಲಾಮಲಕ ; ಇತಿಹಾಸದಲ್ಲವ ನಿಷ್ಣಾತ. ಈ ಮುನಿ ಧ್ಯಾನಮಗ್ನನಾಗಿದ್ದ. ಮರದ ಮೇಲೊಂದು ಪಕ್ಷಿ. ಪಕ್ಷಿ ಹಿಕ್ಕೆ ಹಾಕಿತು. ಮುನಿಗೆ ಸಿಟ್ಟು ಬಂತು. ಪಕ್ಷಿಯನ್ನು ಸುಟ್ಟು ಬಿಡಬೇಕೆಂದು ಕೊಂಡ. ಏನಾಶ್ಚರ್ಯ? ಪಕ್ಷಿ ಸುಟ್ಟು ಕರಕಲಾಗಿ ಕೆಳಗೆ ಬಿದ್ದಿತ್ತು. ಮುನಿಗೆ ತನ್ನ ಹಿಂಸಾಪ್ರವೃತ್ತಿಯ ಬಗ್ಗೆ ತಪ್ಪೆನಿಸಿದರೂ, ತನ್ನ ತಪೋಬಲದ ಬಗ್ಗೆ ಹೆಮ್ಮೆ ಎನಿಸಿತು.

ಮುನಿ ಮಧ್ಯಾಹ್ನದ ಭಿಕ್ಷೆಗಾಗಿ ಸಮೀಪದ ಗ್ರಾಮಕ್ಕೆ ಬಂದ. ಮನೆಯೊಂದರ ನುಂದೆ ನಿಂತು 'ಭಿಕ್ಷಾಂ ದೇಹಿ' ಎಂದ. ಒಳಗಿದ್ದ ಗೃಹಿಣಿ 'ಬಂದೇ' ಎಂದಳು. ಅದೇ ಹೊತ್ತಿಗೆ ಅವಳ ಪತಿ ಹಸಿದು ಊಟಕ್ಕೆ ಬಂದ. ಗಂಡನಿಗೆ ಊಟ ಬಡಿಸುವ ಕಾರ್ಯಕ್ಕೆ ತೊಡಗಿದ ಗೃಹಿಣಿ ಮುನಿಯನ್ನು ಮರೆತಳು. ಸಹಜವಾಗಿಯೇ ಮುನಿ ಕುಪಿತನಾದ. ಕೆಲ ಹೊತ್ತಿನ ಅನಂತರ ಭಿಕ್ಷೆ ನೀಡಲು ಬಂದಳು. ಮುನಿ ದುರುಗುಟ್ಟಿ ನೋಡಿದ. " ನಿನ್ನ ನೋಟಕ್ಕೆ ಸುಟ್ಟು ಹೋಗಲು ನಾನು ಪಕ್ಷಿಯಲ್ಲ " ಎಂದಳು ಗೃಹಿಣಿ. ಮುನಿ ಬೆಚ್ಚಿದ. ಏಕಾಂತದ ಘಟನೆ ಗೃಹಿಣಿಯ ಅರಿವಿಗೆ ಬಂದದ್ದು ಹೇಗೆಂದು ಚಕಿತನಾದ. 'ಅದು ಧರ್ಮದ ಮಹಿಮೆ' ಎಂದಳವಳು. ಮುನಿಯ ತಪಸ್ಸನ್ನು ಪ್ರಶಂಸಿಸುತ್ತಾ ಧರ್ಮದ ನೈಜ ಅರಿವು ಮುನಿಗಿಲ್ಲವೆಂದಳು. ಅಚ್ಚರಿಗೊಂಡ ಮುನಿ ಧರ್ಮದ ಅರಿವಿನ ಮಾರ್ಗ ಕೇಳಿದ. 'ಮಿಥಿಲೆಯಲ್ಲಿ ಧರ್ಮವ್ಯಾಧನೆನ್ನುವ ಧರ್ಮಾತ್ಮನಿದ್ದಾನೆ. ಅವನ ಬಳಿ ತೆರಳು, ಅವನು ತಿಳಿಸಬಲ್ಲ' ಎಂದಳು.

ಮುನಿ ಮಿಥಿಲೆಗೆ ಬಂದ. ಧರ್ಮವ್ಯಾಧನ ಅಂಗಡಿಯ ಮುಂದೆ ನಿಂತ. ಮುನಿಗೆ ವಿಚಿತ್ರವೆನಿಸಿತು. ಅದೊಂದು ಮಾಂಸದಂಗಡಿ. ಮಾರಾಟಗಾರನೇ ಧರ್ಮವ್ಯಾಧ. ಧರ್ಮವ್ಯಾಧ ಇವನನ್ನೇ ನಿರೀಕ್ಷಿಸುತ್ತಿದ್ದವನಂತೆ 'ಗೃಹಿಣಿ ಕಳಿಸಿದಳೇ?' ಎಂದ. ಕೌಶಿಕ ಆಶ್ಚರ್ಯ ಸಾಗರದಲ್ಲಿ ಮುಳುಗಿ ಹೋದ.

ಮುನಿ ಜಿಜ್ಞಾಸುವಾದ ; ಧರ್ಮವ್ಯಾಧ ವ್ಯಾಖ್ಯಾನಕಾರನಾದ. ಧರ್ಮ ಚಿಂತನೆ ನಡೆಯಿತು. ಪರಿಣಾಮವಾಗಿ ಧರ್ಮವರಿತ ಕೌಶಿಕ ; ಧರ್ಮದ ಮರ್ಮವರಿತ.

ಧರ್ಮದ ನಡೆ ಸೂಕ್ಷ್ಮವಾದದ್ದು. ಅದರ ಅರಿವಿಗೆ ಒಳನೋಟ ಬೇಕು. ಆ ಒಳನೋಟ ಸಿಕ್ಕಾಗ ಧರ್ಮದ ಧರಿಸುವ - ಪೋಷಿಸುವ ಗುಣ ಮನದಟ್ಟಾಗುತ್ತದೆ. ಅದಾಗದಿದ್ದಾಗ ಧರ್ಮದ ಹೆಸರಿನಲ್ಲಿ ಧರ್ಮವಲ್ಲದ್ದು ಮೆರೆದಾಡುತ್ತದೆ. ಹಾಗಾಗದಂತಿರಲು ಧರ್ಮದ ನೈಜ ಅರಿವು ಬೇಕು. ಅದಕ್ಕೆ ಪ್ರಯತ್ನಶೀಲರಾಗಬೇಕು.

Monday 29 September, 2008

ಮನುಭಾಷಿತ 2

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

(ಧರ್ಮ ಭಾರತಿಯ ಅಂಕಣ ಬರಹ)

ಜೀವಿಗೆ ಬದುಕುವುದು ಗುರಿ. ಮರಣ ಯಾರಿಗೆ ತಾನೇ ಅಪೇಕ್ಷಿತ? ಬದುಕಲು ಆಹಾರ ಅನಿವಾರ್ಯ. ಆಹಾರದಿಂದ ದೇಹಕ್ಕೆ ಪುಷ್ಟಿ; ಮನಕ್ಕೆ ತುಷ್ಟಿ.

"ಹೊಟ್ಟೆಯೆನ್ನುವ ಚೀಲವನ್ನು ತುಂಬಿಸುವುದು ಆಹಾರ." ಹೀಗೆಂಬ ನಂಬಿಕೆ ಇಂದಿನದ್ದು.

"ಆಹಾರದ ವ್ಯಾಪ್ತಿ ಅಧ್ಯಾತ್ಮದ ತುದಿ" ಹೇಗೆಂದು ಅರಿತವರು ಪ್ರಾಚೀನರು. ಪ್ರಾಚೀನರ ಈ ಶೋಧನೆಯೇ ಆಹಾರದ ನಿಯಮಾವಳಿಗೆ ಕಾರಣ.

ಇದು ಬೇಕೆಂದರು; ಅದು ಬೇಡವೆಂದರು. ಹೇಗೆ ಮಾಡೆಂದರು; ಹಾಗೆ ಮಾಡಲಾಗದೆಂದರು.

ನವೀನರಿಗಿದು ಮೈಯುರಿಸುವ ವಿಷಯ. ದೇಹ ಪುಷ್ಟಿ; ಮನಸ್ತುಷ್ಟಿ; ಇದಕ್ಕೇಕೆ ನಿಯಮಬದ್ಧತೆ?

ಇದು ಕಂಡವರಿಗೂ - ಕಾಣದವರಿಗೂ ಇರುವ ವ್ಯತ್ಯಾಸ. ಕಂಡವರು ಎಂದರು. ಕಾಣದವರು? ನೊಂದರು.

ಆಹಾರದಿಂದ ಸತ್ತ್ವ ಶುದ್ಧಿ; ಸತ್ತ್ವಶುದ್ಧಿಯಿಂದ ಭದ್ರವಾದ ನೆನಹು. ನೆನಹಿನ ಗಟ್ಟಿತನವೇ ಬದುಕಿನೆಲ್ಲ ನೋವುಗಳಿಂದ ಬಿಡುಗಡೆ. ಇದು ಕಂಡವರ ಊಟ. ನಮಗೆ? ಈ ನೋಟವೇ ಇಲ್ಲದಿರುವಾಗ ಆ ಊಟವೆಲ್ಲಿ?

ಆಹಾರದ ವ್ಯಾಪ್ತಿ ವಿಸ್ತಾರವಾದಂತೆ ಅದರ ಹಿರಿತನವೂ ಹೆಚ್ಚುತ್ತದೆ.

ಹಿರಿತನದ ಮಹಿಮೆಯೇ ಅಂತಹದ್ದು. ಅದು ಜೀವನಕ್ಕೆ ಬೇಕಾದ್ದನೆಲ್ಲ ಕೊಡುತ್ತದೆ. ಹಿಂಡಿದಷ್ಟೂ ರಸ ಸುರಿಸುವ ಕಬ್ಬಿನ ಜಲ್ಲೆಯಂತೆ.

ಹತ್ತಿರ ಸರಿದಷ್ಟೂ ಅದು ಎತ್ತರಕ್ಕೆ ಏರಿಸುತ್ತದೆ. ಎತ್ತರ ಪಡೆದಷ್ಟೂ ಉತ್ತಮಗೊಳಿಸುತ್ತದೆ.

ಇಂತಹ ಹಿರಿತನದ ಆಹಾರ, ಮನುವಿನ ಕಣ್ಣಿಗೆ ಕಾಣಿಸುವುದು ಹೀಗೆ -

ಪೂಜಯೇದಶನಂ ನಿತ್ಯಮದ್ಯಾಚ್ಚೈತದಕುತ್ಸಯನ್ |
ದೃಷ್ಟ್ವಾ ಹೃಷ್ಯೇತ್ಪ್ರಸೀದೇಚ್ಚ ಪ್ರತಿನಂದೇಚ್ಚ ಸರ್ವಶಃ ||

ನಿತ್ಯವೂ ಆಹಾರವನ್ನು ಪೂಜಿಸಬೇಕು; ನಿಂದಿಸಬಾರದು; ಕಂಡಮಾತ್ರಕ್ಕೆಯೇ ಸಂತೋಷ ಪಡಬೇಕು; ಅದನ್ನು ಅಭಿನಂದಿಸಬೇಕು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ

Friday 26 September, 2008

ಮನುಭಾಷಿತ 1

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


'ಮನುಸ್ಮೃತಿ' ಸನಾತನಧರ್ಮದ ಆಧಾರ ಗ್ರಂಥ. ಬದುಕಿನ ಎಲ್ಲ ಎಳೆಗಳನ್ನೂ ಜೋಡಿಸಿ ಸುಸೂತ್ರಗೊಳಿಸುವ ಜೀವನಮಾರ್ಗದರ್ಶಿ. ಮನುಸ್ಮೃತಿ ಸ್ಪರ್ಶಿಸದ ಯಾವ ಕ್ಷೇತ್ರವೂ ಜೀವನದಲ್ಲಿಲ್ಲವೇನೋ ಎನ್ನುವಷ್ಟು ಹರಡಿದೆ ಇದರ ವಿಷಯವ್ಯಾಪ್ತಿ. ಮನುಸ್ಮೃತಿ ಮನುಮಹರ್ಷಿಗಳ ಉಪದೇಶ.

"ಯದ್ವೈ ಕಿಂ ಚ ಮನುರವದತ್ ತದ್ಭೇಷಜಮ್ - ಮನು ನುಡಿದದ್ದೆಲ್ಲವೂ ಜೀವನೌಷಧ" ಎಂದು ವೇದವಾಣಿ ಮೊಳಗುವಷ್ಟು ಮನುಮಹರ್ಷಿಗಳ ಮಾತಿಗೆ ಭಾರತೀಯ ಪರಂಪರೆಯಲ್ಲಿ ಉನ್ನತಸ್ಥಾನ.

ಅಂತಹ ಮನುಮಹರ್ಷಿಗಳ ಕೆಲವು ಮಾತುಗಳನ್ನು ಪರಿಚಯಿಸುವುದು ಈ ಅಂಕಣದ ಉದ್ದೇಶ.

ಅಂಕಣವಿದು "ಮನುಭಾಷಿತ". ಭಾಷಿತವೆಂದರೆ ಮಾತು. ಅಂಕಣದ ಮೊದಲ ಮಾತು ಮಾತಿನ ಕುರಿತಾದ ಮನುವಿನ ಮಾತಿನಿಂದ.

ಮಾತು ಬದುಕಿಗೆ ಅತ್ಯವಶ್ಯಕ. ಮಾತಿಲ್ಲದ ವ್ಯವಹಾರ ಪ್ರಪಂಚ ಊಹಾತೀತ. ಮಾತೆನ್ನುವ ಬೆಳಕು ಜಗತ್ತನ್ನು ಬೆಳಗದೇ ಇದ್ದಿದ್ದರೆ ಮೂರ್ಲೋಕಗಳೂ ಕತ್ತಲೆಯಲ್ಲಿ ಮುಳುಗುತ್ತಿದ್ದವು ಎನ್ನುತ್ತಾನೆ ಆಚಾರ್ಯದಂಡಿ.

ಮಾತು ಹೇಗಿರಬೇಕು?
ಮನುವಿನ ಮಾತಿನಲ್ಲಿಯೇ ಕೇಳುವುದಾದರೆ -
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಧರ್ಮಃ ಸನಾತನಃ ||

ಸತ್ಯವನ್ನಾಡಬೇಕು - ಪ್ರಿಯವನ್ನಾಡಬೇಕು.

ಇರುವುದನ್ನು ಇದ್ದಂತೆ ನುಡಿಯುವುದು ಸತ್ಯ. ಕೇಳುಗನ ಮನಸ್ಸು ಸಂತಸಪಡುವಂತೆ ನುಡಿಯುವುದು ಪ್ರಿಯ.

ಆದರೆ ಸತ್ಯವೆಲ್ಲವೂ ಪ್ರಿಯವಾಗಲಾರದು. ಹಾಗೆಯೇ ಪ್ರಿಯವೆಲ್ಲವೂ ಸತ್ಯವೂ ಆಗಲಾರದು.

ಅಪ್ರಿಯವಾದ ಸತ್ಯ - ಅಸತ್ಯವಾದ ಪ್ರಿಯ ಇವೆರಡು ಮಾತಿನ ವಿಷಯವಾದಾಗ?
ಸತ್ಯವೇ ಆಗಿದ್ದರೂ ಪ್ರಿಯವಲ್ಲವಾದರೆ ನುಡಿಯಬಾರದು. ಹಾಗೆಂದು ಪ್ರಿಯವೇ ಆಗಿದ್ದರೂ ಅಸತ್ಯವಾದರೆ ನುಡಿಯಬಾರದು.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

Monday 1 September, 2008

ಧರ್ಮವಲ್ಲದೆಡೆ ಧರ್ಮವೆನ್ನುವರಯ್ಯಾ! ಮೂಢಾತ್ಮರಿವರು

ಅವನು ಮುದಕಪ್ಪ ನೀಲಪ್ಪ ಕರಡಿ. ಬದಾಮಿ ತಾಲೂಕಿನ ಆಡಗಲ್ ಗ್ರಾಮದವನು. ಈ ಅಪ್ರಸಿದ್ಧವ್ಯಕ್ತಿ ಕರ್ನಾಟಕದ ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಏಕಾಏಕಿ ಮುಖ್ಯಸುದ್ದಿಯಾದ.

ಆಗಸ್ಟ್ ೨೭, ಬುಧವಾರ ರಾತ್ರಿ. ಆಡಗಲ್ಲಿನ ಶಂಕ್ರಯ್ಯ ಸ್ವಾಮಿ ಗದ್ದುಗೆಯಿರುವ ಗುಡಿ. ಮುದಕಪ್ಪ ಅಲ್ಲಿಗೆ ಬರುತ್ತಾನೆ. ಬಹಳ ಹೊತ್ತು ಸಣ್ಣದಾಗಿ ಏನನ್ನೋ ಹೇಳಿಕೊಳ್ಳುತ್ತಿರುತ್ತಾನೆ. ಇದವನ ಪ್ರತಿನಿತ್ಯದ ಕಾಯಕವಾಗಿರುವುದರಿಂದ ಅಲ್ಲಿಯೇ ಮಲಗಿದ್ದ ಗ್ರಾಮಸ್ಥರು ಅವನನ್ನು ಹೆಚ್ಚು ಗಮನಿಸುವುದಿಲ್ಲ.ಇದ್ದಕ್ಕಿದ್ದ ಹಾಗೇ ಮುದುಕಪ್ಪ ತನ್ನ ಬೆರಳಿನಿಂದಲೇ ತನ್ನ ಬಲಗಣ್ಣನ್ನು ಕಿತ್ತು ಗದ್ದುಗೆಯ ಮೇಲೆ ಇಟ್ಟುಬಿಡುತ್ತಾನೆ.

ಮನಸ್ಸು ವಿಹ್ವಲಗೊಳ್ಳುತ್ತಿದೆಯೇ? ಹೃದಯ ಕಂಪಿಸತೊಡಗುತ್ತಿದೆಯೇ? ಘಟನೆ ಅಸಹನೀಯ ಎನ್ನಿಸುತ್ತಿದೆಯೇ? ಈ ಧರ್ಮ, ದೇವರು, ಭಕ್ತಿ, ಪೂಜೆ, ದೇವಸ್ಥಾನ ಇವನ್ನೆಲ್ಲ ನಮ್ಮ ಮಾನವ ಜಗತ್ತಿನಿಂದ ಶಾಶ್ವತವಾಗಿ ಕಿತ್ತುಹಾಕಿಬಿಡೋಣ ಎನ್ನಿಸುತ್ತಿದೆಯೇ? ಹೀಗೆಲ್ಲ ಅನ್ನಿಸಿದರೆ ಯಾವ ತಪ್ಪೂ ಇಲ್ಲ, ಬಿಡಿ.

ಧರ್ಮಭಾರತೀಯಂತಹ ಪತ್ರಿಕೆಯ ಸಂಪಾದಕನಾಗಿ, ಧಾರ್ಮಿಕ ಕ್ಷೇತ್ರವನ್ನೇ ಅಧ್ಯಯನ ಮಾಡಿದವನಾಗಿ, ಧಾರ್ಮಿಕ ಪರಿಸರದಲ್ಲಿಯೇ ಇರುವವನಾಗಿ, ಧಾರ್ಮಿಕ ವಿಷಯಗಳನ್ನೇ ಬೋಧಿಸುವವನಾಗಿ ಇರುವ ನಾನು ಹೀಗೆನ್ನುತ್ತಿದ್ದೇನಲ್ಲ ಎನ್ನುವ ಅಚ್ಚರಿ ನಿಮ್ಮಲ್ಲಿ ಮೂಡಬಹುದು.

ಧರ್ಮದ ಹೆಸರಿನಲ್ಲಿ ಧರ್ಮವಲ್ಲದ ಪಾಶವೀಕೃತ್ಯಗಳನ್ನು, ಅಜ್ಞಾನ ಸಾಮ್ರಾಜ್ಯವನ್ನು, ಮೌಢ್ಯದ ಪರಾಕಾಷ್ಠೆಗಳನ್ನು ಕಂಡಾಗ ಹೃದಯವಂತರೆಲ್ಲರೂ ಹೀಗೆಯೇ ಪ್ರತಿಕ್ರಿಯಿಸುತ್ತಾರೆ. ಇಂತಹ ಆಚರಣೆಗಳು, ವರ್ತನೆಗಳು, ಘಟನೆಗಳು ಮತ್ತು ಮಾತುಕತೆಗಳನ್ನು ಅವಲಂಬಿಸಿಯೇ ಜಗತ್ತಿನ ಅಸಂಖ್ಯ ವಿದ್ಯಾವಂತರು ನಾಸ್ತಿಕರಾಗಿ ಬಿಡುತ್ತಾರೆ.

ನೈಜದರಿವೇ ಇಲ್ಲದ ಹಸೀ ಸುಳ್ಳನ್ನೇ ಬದುಕಿನ ಮೂಲದ್ರವ್ಯವಾಗಿಸಿಕೊಂಡ ಅನೇಕ ಮಠಗಳು, ಮಠಾಧೀಶರು, ಸಂತರು, ಯೋಗಿಗಳು, ಪಂಡಿತರು, ಪುರೋಹಿತರುಗಳು ಸನಾತನ ಧರ್ಮಕ್ಕೆ ಕುಠಾರಪ್ರಯರಾಗುತ್ತಿರುವುದನ್ನು ಕಂಡಾಗ ಅಸಹನೀಯ ವೇದನೆಯಾಗುತ್ತಿದೆ.

ನಾನು ಗಮನಿಸಿದಂತೆ ಈ ಕ್ಷಣದವರೆಗೂ ಮೇಲೆ ಉಲ್ಲೇಖಿಸಿದ ಯಾವೊಬ್ಬ ವ್ಯಕ್ತಿಯೂ 'ಹೀಗೆ ಕಣ್ಣನ್ನು ಕೀಳುವುದು ಧರ್ಮಸಮ್ಮತವಲ್ಲ' ಎನ್ನುವ ತಿಳಿವಳಿಕೆಯ ಮಾತನ್ನು ಜಗಜ್ಜಾಹೀರಾಗುವಂತೆ ಆಡಿಯೇ ಇಲ್ಲ. ತಮಗೆ ಸಂಬಂಧಿಸದ ಅಸಂಖ್ಯ ವಿಷಯಗಳನ್ನಿಟ್ಟುಕೊಂಡು ಇವರೆಲ್ಲ ಆಗಾಗ ಮಾಧ್ಯಮಗಳಲ್ಲಿ ಸ್ಥಾನವನ್ನು ಪಡೆದುಕೊಳ್ಳುತಾರೆ. ಆದರೆ ಮಾತನಾಡಲೇ ಬೇಕಾದ ಈ ಸಂದರ್ಭದಲ್ಲಿ ದಿವ್ಯ ನಿರ್ಲಕ್ಷ್ಯ ತಾಳುತ್ತಾರೆ.

ಮುದಕಪ್ಪನಂತಹ ಆಳವಾದ ಭಕ್ತಿಯುಳ್ಳ ಅಸಂಖ್ಯ ಜನ ಇಂದು ನಮ್ಮ ನಡುವೆ ಇದ್ದಾರೆ.ಅವರ ಭಕ್ತಿ ಅರಿವಿನಿಂದ ಮೂಡಿಬಂದದ್ದಲ್ಲ; ನಂಬಿಕೆಯ ಅಡಿಪಾಯದ ಮೇಲೆ ನಿರ್ಮಾಣಗೊಂಡದ್ದು. ನಂಬಿಕೆಯ ಮೇಲೆ ಬೆಳೆದ ಭಾವನೆಗೆ ಅರಿವಿನ ಕವಚ ತೊಡಿಸುವ ಕಾರ್ಯ ಧಾರ್ಮಿಕ ಮಾರ್ಗದರ್ಶಕರೆನಿಸಿಕೊಂಡವರಿಂದ ಆಗಬೇಕಿತ್ತು.

ಧಾರ್ಮಿಕ ಕ್ಷೇತ್ರದವರಿಗೆ ಮಾಡಲು ಬೇರೆಲ್ಲ ಕೆಲಸವಿದೆ; ಧರ್ಮಪ್ರಸಾರವೊಂದನ್ನು ಬಿಟ್ಟು.

ಮಾವಿನಮರಕ್ಕೆ ಬಂದಳಿಕೆ ಸಹಜ. ಆ ಬಂದಳಿಕೆಯನ್ನು ಕೃಷಿಕ ಕಿತ್ತೊಗೆಯದಿದ್ದರೆ ಮರದ ಮರಣವೂ ಸಹಜವೇ. ಮಾವಿನಮರದಲ್ಲಿನ ಮಾವಿನ ಅಂಶ ಯಾವುದು? ಮಾವಿನ ಅಂಶವನ್ನೇ ನಿರ್ವಂಶಗೊಳಿಸುವ ಅದರಲ್ಲೇ ಬೆಳೆದ ಬದನಿಕೆ ಯಾವುದು? ಎನ್ನುವುದೇ ಕೃಷಿಕನಿಗೆ ತಿಳಿಯುವುದಿಲ್ಲವಾದರೆ ಅವನನ್ನು ಆ ಹೆಸರಿನಿಂದ ವ್ಯವಹರಿಸುವುದು ತಪ್ಪಾಗುತ್ತದೆ. ಇದೊಂದು ಬಗೆಯಾದರೆ, ಮಾವಿಗೂ ಬದನಿಕೆಗೂ ವ್ಯತ್ಯಾಸ ಗೊತ್ತಿದ್ದೂ ಮಾವಿನತನವನ್ನು ಉಳಿಸಲಾರದೇ ಹೋಗುವ ಕೃಷಿಕನದ್ದು ಇನ್ನೊಂದು ಬಗೆ.

ನಮ್ಮ ಧರ್ಮವೇತ್ತರು ಈ ಎರಡು ಬಗೆಗಳಲ್ಲಿ ಯಾವುದರಲ್ಲಿದ್ದಾರೋ ತಿಳಿಯದು. ಧರ್ಮ ಯಾವುದು? ಧರ್ಮಕ್ಕೆ ಸುತ್ತಿಕೊಂಡ ಅಧರ್ಮ ಯಾವುದು? ಎನ್ನುವುದೇ ಇವರಿಗೆ ತಿಳಿಯುತ್ತಿಲ್ಲವೋ ಅಥವಾ ತಿಳಿದಿದ್ದರೂ ಜಾಣಕುರುಡೋ? ಭಗವಂತನೇ ಬಲ್ಲ.

ಮುದಕಪ್ಪನ ಇನ್ನೊಂದು ಕಣ್ಣೂ ದೃಷ್ಟಿಹೀನವಾಗುತ್ತಿದೆಯೆಂದು ವೈದ್ಯರು ನುಡಿದಿದ್ದಾರಂತೆ. ಅವನಿಗೆ ಬದುಕು ಕುರುಡು; ಅವನೇ ಕಣ್ಣಾಗಿದ್ದ ಅವನ ಕುಟುಂಬಕ್ಕೆ ಮುಂದೇನೂ ಕಾಣದು.

ಧರ್ಮದ ಹೆಸರಿನಲ್ಲಿ ಇನ್ನೆಷ್ಟು ಜನ ಕುರುಡರಾಗಬೇಕೇನೋ?

Saturday 30 August, 2008

'ಭಾರತ'ಎಲ್ಲದಕ್ಕೂ ಪರ್ಯಾಯವೇ?

{ಸೆಪ್ಟೆಂಬರ್ ೨೦೦೮ರ ಧರ್ಮಭಾರತೀ ಮಾಸಪತ್ರಿಕೆಯ ಸಂಪಾದಕೀಯ}


'ಭಾರತ'ವೆಂದರೆ ಅದು ಅಚ್ಚರಿಗಳ ಅನೂಹ್ಯ ಲೋಕ. ಅದರ ಹೆಜ್ಜೆಯ ಕ್ರಮ ವಿಭಿನ್ನ, ವಿಶಿಷ್ಟ. ಜೀವನದ ಎಲ್ಲ ಕ್ಷೇತ್ರಗಳ ಮೇಲೂ ಅದರ ಕ್ಷ-ಕಿರಣ ಹರಿದಿದೆ. ಅದರಿಂದಾಗಿಯೇ ಎಲ್ಲದರ ಒಳ-ಹೊರಗನ್ನೂ ಸ್ಪರ್ಶಿಸಿಯೇ ಅದು ಮಾತನಾಡುವುದು. ಅದರ ಚಿಂತನೆಯ ವ್ಯಾಪಕತೆಯ ಗುಟ್ಟೂ ಅದೇ.


ಇಂತಹ 'ಭಾರತ'ವನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯದ ಮಾತು. ಅದೊಂದು ಬಯಲಂತೆ. ಬಯಲು ಬರಿದೋ ಬರಿದು. ಬರಿದಾದದ್ದರಲ್ಲಿ ಏನೂ ಇಲ್ಲದ ಮೇಲೆ ಇಲ್ಲದ್ದನ್ನು ಕಾಣುವುದೆಂತು? ಕಾಣದ್ದನ್ನು ಅರಿಯುವುದೆಂತು? ಅರಿಯದ್ದನ್ನು ಆಡುವುದೆಂತು? ಬಯಲ ಬಗೆಯರಿಯಲು ಬಯಲೆಲ್ಲ ಸುತ್ತಬೇಕು.ಈ ಪರಿಭ್ರಮಣ ಕೊನೆಗೊಮ್ಮೆ ಬಯಲಿನರಿವನ್ನು ಮೂಡಿಸೀತು.'ಭಾರತ' ಬಯಲು ಮಾತ್ರವಲ್ಲ; ಅದೊಂದು ಗುಹೆ. ಗುಹೆಯೆಂದರೆ ಕತ್ತಲು. ಹೊರಬೆಳಕಿಗೆ ಹೊಂದಿಕೊಂಡ ಕಣ್ಣು ಗುಹೆಯೊಳಗೆ ಕುರುಡು. ಬಹುಕಾಲ ಗುಹೆಯೊಳಗೆಯೇ ನೆಲೆ ನಿಂತರೆ, ಗುಹೆಯ ಬೆಳಕು; ಒಳ ಬೆಳಕು ಕಣ್ಣಿಗೆ ಹೊಂದಿಕೊಂಡೀತು. ಆಗ ಮಾತ್ರ ಗುಹೆ ಅರ್ಥವಾದೀತು.


ಹೀಗೆ ಭಾರತದ ಬಯಲು ಮತ್ತು ಗುಹೆಯೆನ್ನುವ ಎರಡು ಬಗೆಯನ್ನು ಅರ್ಥಮಾಡಿಕೊಳ್ಳಲು ಸಮಯ ಬೇಕು; ಅವಧಾನ ಬೇಕು; ಪರಿವ್ರಾಜಕತೆ ಬೇಕು; ಏಕಾಗ್ರತೆ ಬೇಕು; ಇದೆಲ್ಲಕ್ಕೂ ಮಿಗಿಲಾಗಿ ಒಳಗಣ್ಣು ಬೇಕು. ಇದೆಲ್ಲದರಿಂದಾಗಿ ಭಾರತದರ್ಶನ ಸಾಧ್ಯ. ಹಾಗಾದಾಗ ಭಾರತ ಅನುಭವಸಿದ್ಧ.

ಇಂತಹ ಭಾರತದ ಜೀವನದರ್ಶನ ಆಧುನಿಕದ ಆದ್ಯತೆ. ಏಕೆಂದರೆ ಆಧುನಿಕಕ್ಕೆ ಒಂದಿಷ್ಟು ಕೊರತೆಯಿದೆ. ಅದನ್ನು ಆಧುನಿಕ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ.


ಪ್ರಕೃತ ಇಂದಿನ ಶಿಕ್ಷಣಕ್ಷೇತ್ರದ ಬಗ್ಗೆ ವ್ಯಾಪಕ ಚಿಂತನೆ ನಡೆಯುತ್ತಿದೆ. ಇದು ಪರಿಷ್ಕಾರಗಳ ಯುಗ. ದಿನದಿಂದ ದಿನಕ್ಕೆ ಶಿಕ್ಷಣದ ಪಠ್ಯ ಮತ್ತು ವಿಧಾನಗಳಲ್ಲಿ ಬದಲಾವಣೆಗಳು ನಡೆಯುತ್ತಲೇ ಇವೆ. ಆದರೆ ಈ ಎಲ್ಲ ಬದಲಾವಣೆಗಳೂ ಶಿಕ್ಷಣತಜ್ಞರಿಗೆ ಸಂತೃಪ್ತಿ - ಸಮಾಧಾನಗಳನ್ನು ತಂದೊಡ್ಡುತ್ತಿಲ್ಲ ಎನ್ನುವುದೂ ಕೂಡ ಸತ್ಯದ ಮಾತು.


ಶಿಕ್ಷಣಕ್ಷೇತ್ರದ ಸಮಸ್ಯೆಗಳಿಗೆ ಭಾರತೀಯ ಶಿಕ್ಷಣಪರಿಕಲ್ಪನೆಯಲ್ಲಿ ಪರಿಹಾರವಿದೆಯೇ? ಎನ್ನುವ ಜಿಜ್ಞಾಸೆ ಹುಟ್ಟಿಕೊಡಿದೆ. 'ಪರಿಹಾರವಿದೆ' ಎನ್ನುವ ಮಾತನ್ನು ಭಾರತೀಯ ಶಿಕ್ಷಣತಜ್ಞರು ಹೇಳಿಕೊಂಡು ಬರುತ್ತಿದ್ದಾರೆ.


ಭಾರತೀಯ ಶಿಕ್ಷಣಕ್ರಮ ಇಂದಿನ ಶಿಕ್ಷಣಲೋಕಕ್ಕೆ ಪರ್ಯಾಯ ಹೇಗೆ? ಇಂದಿನ ಶೈಕ್ಷಣಿಕ ಸಮಸ್ಯೆಗಳಿಗೆ ಅದರಲ್ಲಿ ಪರಿಹಾರವೇನಿದೆ? ಎನ್ನುವ ಕುರಿತು ವ್ಯಾಪಕ ಶೋಧ ನಡೆಯಬೇಕಿದೆ.

ವಿದ್ವಾಂಸರುಗಳ ಅಧ್ಯಯನ - ಅನುಭವಗಳಲ್ಲಿ ಅಲ್ಲಲ್ಲಿ ಈ ಅಂಶಗಳೆಲ್ಲ ಇವೆಯಾದರೂ, ಒಂದೆಡೆಯಲ್ಲಿ; ಒಂದು ವ್ಯವಸ್ಥಿತರೂಪದಲ್ಲಿ ಅವು ಸಂಕಲನಗೊಂಡಿಲ್ಲ. ಅಥವಾ ವ್ಯವಸ್ಥೆಗೊಂಡಿಲ್ಲ.


ಭಾರತೀಯ ವಿದ್ವಾಂಸರು ಆ ಕಾರ್ಯಕ್ಕೆ ಮುಂದಾಗಬೇಕಿದೆ. ಪ್ರಾಚೀನ ಶಿಕ್ಷಣ ಸಂಸ್ಥೆ, ಸಂಸ್ಥೆಯ ಸ್ವರೂಪ, ಕಲಿಕಾ ವಿಷಯಗಳು, ಬೋಧನಾ ತಂತ್ರಗಳು ಮುಂತಾದ ವಿಚಾರಗಳ ಸಮಗ್ರತೆಯನ್ನು ಶೋಧಿಸಬೇಕಿದೆ.


ಅಷ್ಟೇ ಅಲ್ಲದೆ, ಇಂದಿನ ವೃತ್ತಿಯ ಅವಶ್ಯಕತೆಗಳನ್ನು ಅದರೊಂದಿಗೆ ಜೋಡಿಸುವ ಕುರಿತೂ ಚಿಂತಿಸುವುದಿದೆ.


ಒಟ್ಟಿನಲ್ಲಿ ಭಾರತೀಯ ಶಿಕ್ಷಣಲೋಕವನ್ನು ಪುನಾರೂಪಿಸಬೇಕಿದೆ. ರೂಪಿಸುವ ಮುನ್ನ ವ್ಯಾಪಕ ಚಿಂತನ - ಮಂಥನಗಳು ನಡೆಯಬೇಕಿದೆ.

Sunday 24 August, 2008

ಸರ್ಕಾರಕ್ಕೇಕೆ ದೇವಾಲಯಗಳು?

ಶ್ರೀಕ್ಷೇತ್ರ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಕರ್ನಾಟಕ ಸರ್ಕಾರ ಶ್ರೀರಾಮಚಂದ್ರಾಪುರಮಠಕ್ಕೆ ವಹಿಸಿದೆ. ಈ ಘಟನೆ ಸರ್ಕಾರದ 'ಪಾಲಿಸಿ'ಯೊಂದರ ಕುರಿತು ಚರ್ಚಿಸಲು ವೇದಿಕೆಯಾಗಿಸಿದೆ.


ದೇವಸ್ಥಾನಗಳೆಂದರೆ ಧಾರ್ಮಿಕಕ್ಷೇತ್ರಗಳು. ಧರ್ಮಕ್ಕೆ ಅದರದ್ದೇ ಆದ ಪದ್ಧತಿ ಇರುತ್ತದೆ.ಪದ್ಧತಿ ಪ್ರಾಚೀನತೆಯ ನೆರಳಿನಲ್ಲಿಯೇ ಬೆಳೆಯಬೇಕಾದದ್ದು. ಹಾಗಾಗಿ ದೇವಸ್ಥಾನಗಳ ಕುರಿತಾದ ಚಿಂತನೆ ಮತ್ತು ನಿರ್ಣಯಗಳು ಪರಂಪರೆಯ ಒರೆಗಲ್ಲಿನಲ್ಲಿ ತಿದ್ದಿ - ತೀಡಿ ಹೊರಬರಬೇಕಾಗುತ್ತದೆ.


ಭಾರತದಲ್ಲಿ ರಾಜ, ಧರ್ಮದ ಸಂರಕ್ಷಕನಾಗಿದ್ದ. ತನ್ನ ರಾಜ್ಯದ ಪ್ರಜೆಗಳ ಭಕ್ತಿ - ಉಪಾಸನೆ - ಅದರ ವಿಧಿವಿಧಾನಗಳು - ಹಾಗೂ ಅದಕ್ಕೆ ಸಂಬಂಧಿಸಿದ ಸಾಮೂಹಿಕ ಕೇಂದ್ರಗಳನ್ನು ರಾಜನೇ ವ್ಯವಸ್ಥೆಗೊಳಿಸುತ್ತಿದ್ದ. ಇದಕ್ಕಾಗಿ 'ಪರಿಷತ್' ಎನ್ನುವ ಪರಿಣತರಿಂದ ಕೂಡಿದ ಸ್ವಾಯತ್ತ ಸಂಸ್ಥೆ ಇರುತ್ತಿತ್ತು. ಅದು ರಾಜನ ಆಳ್ವಿಕೆಗೆ ಒಳಪಡುತ್ತಿರಲ್ಲಿಲ್ಲ. ರಾಜನಿಗೂ - ಪ್ರಜೆಗಳಿಗೂ ಮಾರ್ಗದರ್ಶನ ಮಾಡುವುದು ಅದರ ಕರ್ತವ್ಯವಾಗಿತ್ತು.


ರಾಜಪ್ರಭುತ್ವ ಅಳಿದು ಪ್ರಜಾರಾಜ್ಯ ಅಸ್ತಿತ್ವಕ್ಕೆ ಬಂದಾಗ ಈ ವಿಷಯಗಳ ಕುರಿತು ಪೂರ್ಣ ನಿರ್ಣಯಕ್ಕೆ ಬಂದ ಹಾಗೆ ಕಾಣಿಸುವುದಿಲ್ಲ.ಭಾರತಕ್ಕೆ 'ಸೆಕ್ಯುಲರ್' ರೂಪವನ್ನು ಕೊಡಲಾಯಿತು. ಧಾರ್ಮಿಕತೆಯ ಕುರಿತು ವಿಭಿನ್ನ ಆದರೆ ಗೊಂದಲದ ತೀರ್ಮಾನಕ್ಕೆ ಬರಲಾಯಿತು ಎನಿಸುತ್ತದೆ. ವಿದೇಶೀ ಮತಗಳನ್ನು ಧರ್ಮವೆಂದು ಕರೆಯಲಾಯಿತು.ಸನಾತನ ಧರ್ಮದ ಕೆಲವು ಅಂಗಗಳನ್ನು ಪ್ರತ್ಯೇಕ ಧರ್ಮವೆಂದು ಗುರುತಿಸಲಾಯಿತು. ಇವೆರಡಕ್ಕೂ 'ಅಲ್ಪ ಸಂಖ್ಯಾತ' ಎಂದು ಹೆಸರಿಸಿ, ಅವುಗಳ ಧಾರ್ಮಿಕ ವ್ಯವಸ್ಥೆಗೆ ಸ್ವಾಯತ್ತತೆಯನ್ನು ನೀಡಲಾಯಿತು.


ಬಹು ಸಂಖ್ಯಾತರ ಧರ್ಮವೆಂದು(ಭಾರತದ ಮಟ್ಟಿಗೆ) ಕರೆಸಿಕೊಂಡ ಸನಾತನ ಧರ್ಮ ಅರೆ ಬರೆಯಾಗಿ ಸರ್ಕಾರದ ಅಡಿಗೆ ಬಂತು. ಕೆಲವು ದೇವಸ್ಥಾನಗಳು ಸರ್ಕಾರಕ್ಕೆ ಸೇರಿದವು.ಅದಕ್ಕಾಗಿಯೇ ಇರುವ ಧಾರ್ಮಿಕ ದತ್ತಿ ಇಲಾಖೆ ಆ ದೇವಾಲಯಗಳನ್ನು ನಿರ್ವಹಿಸತೊಡಗಿತು.


ವಾಸ್ತವವಾಗಿ ದೇವಾಲಯಗಳು ಧಾರ್ಮಿಕವ್ಯವಸ್ಥೆಯನ್ನು ಸ್ವತಂತ್ರಗೊಳಿಸಬೇಕಿತ್ತು. ಪರಂಪರೆಯಿಂದ ಅವು ಯಾವ ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತಿತ್ತೋ ಅಲ್ಲಿಗೇ ಒಪ್ಪಿಸಬೇಕಿತ್ತು. ಮೂಲಪದ್ಧತಿಗಳಿಗೆ ಅನುಗುಣವಾಗಿ ಅವುಗಳು ನಡೆಯಬೇಕಿತ್ತು.


ಪ್ರಶ್ನೆ, ಧಾರ್ಮಿಕ ಕೇಂದ್ರಗಳ ಸ್ವಾಯತ್ತತೆ ಸಮೂಹದ ಆಶೋತ್ತರಗಳಿಗೆ ವಿರುದ್ಧವಾದರೆ ಅಂತ. ಅಷ್ಟೇ ಅಲ್ಲ, ಸ್ವಾಯತ್ತ ಧಾರ್ಮಿಕ ಕೇಂದ್ರಗಳನ್ನು
ನಿರ್ವಹಿಸುವ ವ್ಯಕ್ತಿಗಳು ಆಮಿಷಗಳಿಗೆ ಒಳಗಾಗಿ ತಪ್ಪೆಸಗಿದರೆ ಅಂತ. ಹಾಗಾಗಿ ಅದರ ನಿಯಂತ್ರಣಕ್ಕೆ ಅಂದರೆ ಸಂಪ್ರದಾಯವಿರುದ್ಧವಾಗಿ ವರ್ತಿಸದಂತಿರಲು ಮತ್ತು ಅವ್ಯವಹಾರ ನಡೆಯದಂತಿರಲು ಕಾವಲು ಸಂಸ್ಥೆಗಳಿರಬೇಕು. ಅವು ಕಾಲಕಾಲಕ್ಕೆ ಪ್ರಕ್ರಿಯೆಗಳನ್ನು ಗಮನಿಸುತ್ತಿರಬೇಕು.


ಹೀಗೊಂದು ವ್ಯವಸ್ಥೆಯನ್ನು ನಿರ್ಮಾಣಮಾಡಿ, ಸರ್ಕಾರ ಮೊದಲು ದೇವಾಲಯಗಳನ್ನು ನಿರ್ವಹಿಸುತ್ತಿದ್ದ ಮಠಮಾನ್ಯಗಳು - ವಂಶವಾಹಿ ಧರ್ಮದರ್ಶಿಗಳು - ವಂಶವಾಹಿ ಸಮೂಹಗಳಿಗೆ ಮತ್ತೆ ವಹಿಸಿಕೊಡಬೇಕಿತ್ತು.


ಈಗಲಾದರೂ ಸರ್ಕಾರ ಮರು ಚಿಂತನೆ ಮಾಡಲಿ. ದೇವಾಲಯಗಳನ್ನು ಬಿಟ್ಟುಕೊಟ್ಟು ಪ್ರವಾಸೋದ್ಯಮವನ್ನು ಸರ್ಕಾರವೇ ಉಳಿಸಿಕೊಳ್ಳಲಿ. ತೀರ್ಥಕ್ಷೇತ್ರಗಳನ್ನು ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಪ್ರವಾಸೋದ್ಯಮದ ಲಾಭಗಳನ್ನು ಪಡೆದುಕೊಳ್ಳಲಿ.

Saturday 9 August, 2008

"ವಾಕ್ ಸ್ವಾತಂತ್ರ್ಯ"

ನವ ಜಗದ ನವೀನ ಪರಿಕಲ್ಪನೆಗಳಲ್ಲಿ 'ವಾಕ್ ಸ್ವಾತಂತ್ರ್ಯ'ವೂ ಒಂದು. ಹಾಗೆಂದರೆ ಪ್ರತಿವ್ಯಕ್ತಿಯೂ ತನಗನ್ನಿಸಿದ್ದನ್ನು ಹಾಗೆಯೇ ಹೇಳಬಹುದು.


ಆಧುನಿಕತೆಯ ಪರಿಷ್ಕಾರಗಳಲ್ಲಿ ಇದು ತುಂಬಾ ಒಳ್ಳೆಯದು ಅಂತ ಅನ್ನಿಸತ್ತೆ. ಯಾರನ್ನೂ ಯಾರೂ ವಿಮರ್ಶಿಸಬಹುದಾದರೆ, ಸಮಾಜದ ಪ್ರತಿಯೋರ್ವನಿಗೂ ಸಮಾನ ಸ್ಥಾನಮಾನ ಲಭ್ಯವಾಗುತ್ತದೆ. ಮೇಲು - ಕೀಳು ಎನ್ನುವ ಸ್ತರದ ಶ್ರೇಣೀಕೃತವಾದ ತಾರತಮ್ಯ ಇಲ್ಲವಾಗುತ್ತದೆ. ಎಲ್ಲರೂ ಎಲ್ಲರಿಗೂ ಸಮಾನರಾಗುತ್ತಾರೆ. ಅಸಮಾನತೆಯೇ ಇನ್ನಿಲ್ಲದಂತೆ ಕಾಣೆಯಾಗುತ್ತದೆ.



ಹೀಗೆ ಯೋಚಿಸಿದಾಗ 'ವಾಕ್ ಸ್ವಾತಂತ್ರ್ಯ' ಉತ್ತಮ ಅಂತಲೇ ಅನ್ನಿಸತ್ತೆ.


'ವಾಕ್ ಸ್ವಾತಂತ್ರ್ಯ'ದ ಇನ್ನೊಂದು ಮುಖವನ್ನೂ ಅವಲೋಕಿಸಿ ನೋಡಬೇಕಿದೆ. ಆಧುನಿಕ ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆಯೂ, ಎಲ್ಲವರ ಬಗ್ಗೆಯೂ ಮಾತನಾಡುತ್ತಿದ್ದಾರೆ.


ಯಾವುದೇ ಕ್ಷೇತ್ರದ ಕುರಿತು ವಿಮರ್ಶಿಸುವಾಗ ಆ ಕ್ಷೇತ್ರದ ಮೇಲೆ ಹೋಲ್ಡ್ ಇರಬೇಕಾಗುತ್ತದೆ. ಹಿಡಿತವಿಲ್ಲದ ಕ್ಷೇತ್ರದ ಬಗ್ಗೆ ಮಾತನಾಡುವುದು ಲಗಾಮಿಲ್ಲದ ಕುದುರೆಯಂತೆ. ಸರ್ಕಾರಗಳು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿದ ಮೇಲೆ ಮಾಧ್ಯಮಗಳು ಜನರ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತಾರೆ ಅಥವಾ ಪ್ರಕಟಿಸುತ್ತಾರೆ. ಪ್ರತಿಪಕ್ಷದವರು,ಬಜೆಟ್ ನಲ್ಲಿ ಉಲ್ಲೇಖಗೊಂಡ ಕ್ಷೇತ್ರದ ಪ್ರಮುಖರು, ಜನಸಾಮಾನ್ಯರು ಮಾತನಾಡಿರುತ್ತಾರೆ. ಆರ್ಥಿಕ ತಜ್ಞರುಗಳ ಪ್ರತಿಕ್ರಿಯೆ ಇಲ್ಲವೇ ಇಲ್ಲವೇನೋ ಎನ್ನುವಷ್ಟು ಕಡಿಮೆ ಇರುತ್ತದೆ. ಬಜೆಟ್ ಗಳನ್ನು ಸಿದ್ಧಪಡಿಸುವವರು ಆರ್ಥಿಕ ತಜ್ಞರು. ರಾಜಕಾರಣಿಗಳಲ್ಲ. ಅವರದನ್ನು ಮಂಡಿಸುವವರಷ್ಟೇ. ಆರ್ಥಿಕತಜ್ಞರ ಕಾರ್ಯವನ್ನು ಆ ಕ್ಷೇತ್ರದ ಅರಿವಿಲ್ಲದಿರುವವರು ವಿಮರ್ಶಿಸಲು ಹೇಗೆ ಸಾಧ್ಯ? ಇದರಿಂದಾಗಿಯೇ 'ಜನಪ್ರಿಯ ಬಜೆಟ್' ಅನ್ನುವ ಕಲ್ಪನೆ ಹುಟ್ಟಿದ್ದು. ಇಂತವನ್ನು ಚುನಾವಣಾ ಬಜೆಟ್ ಎಂದು ಕೂಡ ಕರೆಯುತ್ತಾರೆ. ಒಬ್ಬ ಆರ್ಥಿಕತಜ್ಞನೇ ವಿಮರ್ಶಿಸುವುದಾದರೆ ಜನಪ್ರಿಯ ಘೋಷಣೆಗಳಿಗೆ ಬಜೆಟ್ ನಲ್ಲಿ ಜಾಗವಿರುವುದಿಲ್ಲ.


ಹೀಗೆಯೇ ಯಾವುದೇ ಕ್ಷೇತ್ರವನ್ನು ಕುರಿತು ಮಾತನಾಡುವಾಗೆಲ್ಲ ನಾಲಗೆ ಹರಿದಂತೆ ಹರಿಸಬಾರದು. ಹಾಗಾಗಿ 'ವಾಕ್ ಸ್ವಾತಂತ್ರ್ಯ' ಪರಿಕಲ್ಪನೆಗೆ ಪರಿಷ್ಕಾರ ಬೇಕು.

Saturday 2 August, 2008

ಹೇಗೆ ಓದೋದು?

'ಟೈಮ್ ಮ್ಯಾನೇಜ್ ಮೆಂಟ್' ಪುಸ್ತಕ ಓದ್ತಾ ಇದ್ದೆ. 'ಸ್ಪೀಡಾಗಿ ಓದುವುದು ಅಂತ ಒಂದು ಅಧ್ಯಾಯ ಗಮನ ಸೆಳೆಯಿತು.



ತುಂಬಾ ದಿನಗಳಿಂದ ಓದುವ ಬಗ್ಗೆ ಗುರುಕುಲದ ಮಕ್ಕಳಿಗೆ ವಿಧಾನವೊಂದನ್ನು ರೂಪಿಸಿಕೊಡುವ ಮನಸ್ಸಿತ್ತು. ನನಗನ್ನಿಸಿದಂತೆ 'ಓದುವುದು ಹೇಗೆ?' ಅನ್ನುವ ಕುರಿತು ಸಾಕಷ್ಟು ಶೋಧನೆಯಾಗಿಲ್ಲ. ಎಲ್ಲ ಶಿಕ್ಷಕರೂ, ಎಲ್ಲ ಪೋಷಕರೂ ಮಕ್ಕಳಿಗೆ ಓದಿ ಅಂತ ಹೇಳ್ತಾನೇ ಇರ್ತಾರೆ. ಆದರೆ ಅದು ಹೇಗೆ? ಅನ್ನೋದನ್ನ ಯಾರೂ ಹೇಳಿಕೊಡಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮದೇ ವಿಧಾನವನ್ನು ರೂಪಿಸಿಕೊಂಡಿರುತ್ತಾರೆ. ಉಳಿದ ವಿದ್ಯಾರ್ಥಿಗಳು ಕಷ್ಟಪಡುತ್ತಿರುತ್ತಾರೆ.


ಇವುಗಳನ್ನು ನಾನಿನ್ನೂ ಪ್ರಯೋಗಕ್ಕೆ ಅಳವಡಿಸಿಲ್ಲ. ಲೇಖಕರ ಅಭಿಪ್ರಾಯವನ್ನು ಇಲ್ಲಿ ಸಾರಾಂಶಗೊಳಿಸಿದ್ದೇನೆ.

* 1. ಪ್ರೀವ್ಯೂ

* 2. ಸ್ವೀಪಿಂಗ್

* 3. ಬ್ರಷಿಂಗ್

ಹೀಗೆ ಮೂರು ಕ್ರಮಗಳನ್ನು ಲೇಖಕರು ನಿರೂಪಿಸ್ತಾರೆ.


1. ಸಿನಿಮಾಗಳನ್ನು ಬಿಡುಗಡೆ ಮಾಡುವ ಮೊದಲು ಕೆಲವರಿಗೆ ತೋರಿಸುವಂತೆ ಪುಸ್ತಕವನ್ನು ಪೂರ್ಣ ಓದಲಾರಂಭಿಸುವ ಮೊದಲು ಮೇಲುಮೇಲೆ ಓದಬೇಕು. ಇದು 'ಪ್ರೀವ್ಯೂ'.


2. 'ಪ್ರೀವ್ಯೂ' ಮಾಡಲು 'ಸ್ವೀಪಿಂಗ್' ತಂತ್ರ ಬಳಸಬೇಕು. ಪುಟದ ಮೇಲಿನಿಂದ ಕೆಳಗಿನವರೆಗೆ ವೇಗವಾಗಿ ಓದುವುದು. ಸ್ವೀಪಿಂಗ್ ಮಾಡುವಾಗ ತೋರು ಬೆರಳನ್ನು ಹಾವು ಹರಿದಂತೆ ವಕ್ರಗತಿಯಲ್ಲಿ ಪುಟದ ಮೇಲಿನಿಂದ ಕೆಳಗಿನವರೆಗೆ ಓಡಿಸಬೇಕು, ಕಣ್ಣು ಕೈ ತುದಿಯನ್ನು ಹಿಂಬಾಲಿಸಬೇಕು.



3. ಪ್ರತಿ ಪುಟವನ್ನು ಎಡದಿಂದ ಬಲಕ್ಕೆ ಪ್ರತಿ ಲೈನ್ ಮೇಲೆ ಕೈಯೋಡಿಸಿ, ಕಣ್ಣು ಹಿಂಬಾಲಿಸುವಾಂತಾದರೆ ಅದು 'ಬ್ರಷಿಂಗ್'.
ಇಷ್ಟಾದ ಮೇಲೆ ಪುಸ್ತಕದ ಪೂರ್ಣ ಓದು.



ಅದಕ್ಕೆ ಕೆಲವು ಸೂಚನೆಗಳು :

1. ಬೆನ್ನು ನೇರವಾಗಿ ಕುಳಿತುಕೊಳ್ಳಬೇಕು.

2. ಪುಸ್ತಕ 45ಡಿಗ್ರಿ ಕೋನದಲ್ಲಿರಬೇಕು.

3. ಪರಿಸರ ನೀಟಾಗಿರಬೇಕು.


ಈ ಬಗ್ಗೆ ನಿಮ್ಮ ಅನುಭವ - ಅಧ್ಯಯನಗಳ ನೆಲೆಯಲ್ಲಿ ಸಲಹೆಗಳನ್ನು ಕೊಡಿ.

Monday 21 July, 2008

ಚಕ್ರವ್ಯೂಹದ ಚಕ್ರದೊಳಗೆ

ನಿನ್ನೆ ಗುರುಕುಲದಲ್ಲಿ ನಾಟಕವೊಂದನ್ನು ಮಾಡಿಸಿದ್ದೆ. 'ಅಂಕುರ' ತಂಡದವರು ಅಭಿನಯಿಸಿದ್ದು. ನೀನಾಸಂನಲ್ಲಿ ತರಬೇತಿ ಪಡೆದ ೬ ಜನರ ತಂಡವಿದು.


ನಾಟಕದ ವಸ್ತು, ಹತ್ತಾರು ಬಾರಿ ಬೇರೆಬೇರೆ ಕಲಾಮಾಧ್ಯಮಗಳಲ್ಲಿ ನಾವು ಕಂಡ 'ಚಕ್ರವ್ಯೂಹ'. ಈ ರಾಮಾಯಣ - ಮಾಹಾಭಾರತಗಳ ಶಕ್ತಿ ಅದ್ಭುತ ಅನಿಸುತ್ತೆ. ಅಲ್ಲಿಯ ಕತೆಗಳನ್ನು ಎಷ್ಟು ಬಾರಿ ಕೇಳಿಲ್ಲ? ಎಷ್ಟು ಬಾರಿ ಹೇಳಿಲ್ಲ? ಎಷ್ಟು ಬಾರಿ ನೋಡಿಲ್ಲ? ಎಷ್ಟು ಬಾರಿ ವಿಮರ್ಶೆ ಮಾಡಿಲ್ಲ? ಮತ್ತದು ರಂಗಕ್ಕೆ ಬಂದ್ರೆ,ಅಂತರಂಗಕ್ಕೆ ಇಳಿದ್ರೆ ಹೊಸ ಅನುಭವ ಮೂಡಿಬರುತ್ತೆ.


ನಿನ್ನೆ ಆದದ್ದೂ ಅದೇ. ಆ ಹ್ಯಾಂಗೋವರ್ ನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅಭಿಮನ್ಯುವಿನ ಚಕ್ರವ್ಯೂಹ ಹಾಗೆ ಮನಸ್ಸನ್ನು ತುಂಬಿದೆ.


'ಅಂಕುರ' ಅದನ್ನು ರಂಗಕ್ಕೆ ತಂದಿದ್ದು ವಿನೂತನ ವಿನ್ಯಾಸದಲ್ಲಿ. ನಮ್ಮ ಕುಮಾರವ್ಯಾಸ ಸ್ವತಃ ಮಾತನಾಡತೊಡಗಿದ್ದ. 'ಕರ್ಣಾಟಭಾರತಕಥಾಮಂಜರಿ'ಯ ಪದ್ಯಗಳೇ ಅದರಲ್ಲಿ ಮಾತುಗಳು. ಬೇರೆ ಸಂಭಾಷಣೆಯೇ ಅದರಲ್ಲಿಲ್ಲ. ಹಳಗನ್ನಡದ ಪದ್ಯಗಳನ್ನೇ ಹಾಡಾಗಿ, ಮಾತಾಗಿ ಹಾಗೆಯೇ ಬಳಸಿಕೊಳ್ಳಲಾಗಿತ್ತು. ಅರ್ಥವೇ ಆಗದೇನೋ ಎನ್ನುವ ಆ ಪದ್ಯಗಳು ಅದೆಷ್ಟು ಚೆನ್ನಾಗಿ ಪ್ರೇಕ್ಷಕರ ಒಳಗೆ ಇಳಿದವೆಂದರೆ, ಅದು ಹಳಗನ್ನಡವೆನ್ನುವುದೇ ಮರೆತುಹೋಗಿತ್ತು.


ಕಳರಿಪಯಟ್ ಮತ್ತು ಯಕ್ಷಗಾನದ ನಡೆಗಳನ್ನು ಜೋಡಿಸಿಕೊಂಡಿದ್ದು ಪರಿಣಾಮಕಾರಿಯಾಗಿತ್ತು. ಕಳರಿಪಯಟ್ ಗೆ ಯಕ್ಷಗಾನದ ರಿದಂನ ಬಳಕೆ ವಿಶಿಷ್ಟವಾಗಿತ್ತು. ರಾಗಸಂಯೋಜನೆ ಚೆನ್ನಾಗಿತ್ತು.


ಹಳೆಯ ಸಾಹಿತ್ಯ ಜನಮಾನಸದಿಂದ ದೂರಸರಿಯುತ್ತಿರುವ ಸಂದರ್ಭದಲ್ಲಿ; ಹಳೆಯ ಭಾಷೆ ಅರ್ಥವೇ ಆಗದ ಸನ್ನಿವೇಶದಲ್ಲಿ; ಕಾವ್ಯಗಳಲ್ಲಿ ಹೀಗೂ ಆಸಕ್ತಿ ಮೂಡಿಸಬಹುದು ಅನ್ನೋದು ಒಂದು ಹೊಸ ಸಾಧ್ಯತೆ.

Wednesday 16 July, 2008

"ಶಿಕ್ಷಣ ಕ್ರಾಂತಿ"! ಭ್ರಾಂತಿಯೇ?

ಓಶೋ ವಿಚಾರಧಾರೆಯೇ ಹಾಗೆ. ಯಾವ ವಿಷಯದ ಕುರಿತು ಅವರು ಮಾತನಾಡಿದರೂ ಅದು ಅದೇ ವಿಷಯದ ಉಳಿದೆಲ್ಲರ ವಿಚಾರಕ್ಕಿಂತ ಭಿನ್ನವಾಗಿರುತ್ತದೆ.


ಓಶೋ ನುಡಿಯುವ ಅಸಂಖ್ಯ ವಿಚಾರಗಳು ಭಾರತೀಯ ನೈಜ ವಿಚಾರಧಾರೆಗೆ ನೇರವಾಗಿ ಸಮನ್ವಿತವಾಗಿರುತ್ತದೆ. ಹಾಗಾಗಿಯೇ ಓಶೋ ಪುಸ್ತಕ ಆಪ್ಯಾಯಮಾನವೆನಿಸುವುದು.


ಶಿಕ್ಷಣದ ಹೊಸ ಪ್ರಣಾಳಿಕೆಗಾಗಿ ಪ್ರಯತ್ನಿಸುತ್ತಾ ಗುರುಕುಲದ ಕನಸು ಹೊತ್ತ ನನಗೆ ಓಶೋರ "ಶಿಕ್ಷಣ ಕ್ರಾಂತಿ"ಯ ಈ ವಿಚಾರಧಾರೆ ನಮ್ಮ ಚಿಂತನೆಗೆ ಸಂವಾದಿ ಎನಿಸಿತು.

ಒಂದಿಷ್ಟು ವಿಚಾರಗಳು ಇಲ್ಲಿವೆ ನೋಡಿ -


* ಮನುಷ್ಯನಲ್ಲಿರುವ ಮೊಗ್ಗು ಸಂಪೂರ್ಣವಾಗಿ ಅರಳುತ್ತಿಲ್ಲ. ಮನುಷ್ಯನಲ್ಲಿಯ ಹೂ ಪೂರ್ಣವಾಗಿ ಅರಳಿದಾಗ - ಕೃಷ್ಣ, ಬುದ್ಧ, ಕ್ರಿಸ್ತನಂತವರ ಆನಂದ, ಕಣ ಕಣದಲ್ಲೂ ತುಂಬಿ ತುಳುಕಾಡುತ್ತದೆ. ನಮಗೆ ಹೀಗೆ ಅರಳಲಾಗುತ್ತಿಲ್ಲ.ನನ್ನ ದೃಷ್ಟಿಯಲ್ಲಿ ಎಷ್ಟೇ ಕಷ್ಟ ಬಂದರೂ ಸರಿಯೇ, ಪ್ರತಿವ್ಯಕ್ತಿಯ ಒಳಗಿರುವ ಹೂ ಅರಳುವಂತೆ ಸಹಕರಿಸುವ ಶಿಕ್ಷಣದ ಪ್ರಯೋಗಗಳನ್ನು, ಪ್ರಕ್ರಿಯೆಗಳನ್ನು ಕಂಡುಹಿಡಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗಬಾರದು, ಶಿಕ್ಷಣ ಸಂಸ್ಥೆಗಳು ಪ್ರತಿ ವ್ಯಕ್ತಿಗೂ ತನ್ನ ಆತ್ಮಾನ್ವೇಷಣೆಯ ಶಾಲೆಯಾಗಬೇಕು.ಆಗವರು ತಮ್ಮ ಆತ್ಮಾನ್ವೇಷಣೆಯ ಯಾತ್ರೆಯಲ್ಲಿ ಮುಂದೆ ಸಾಗುವರು. ಆಗವರು ತಾವ್ಯಾರು, ತಾವೇನಾಗಬಹುದು ಎಂಬುದನ್ನು ಕಂಡುಕೊಳ್ಳುವರು.


* ಪ್ರತಿವ್ಯಕ್ತಿಯೊಳಗೆ ಹುದುಗಿರುವ ಹೂವನ್ನು ಅರಳಿಸುವ, ಸಹಜ ಸ್ಫೂರ್ತಿ ಬರುವಂತೆ ನಾವೇನು ಮಾಡಬೇಕೆಂಬ ವಿಚಾರ ಬಲು ವಿಸ್ತಾರವಾದ ವಿಚಾರ. ನಾವಿಷ್ಟಾದರೂ ಮಾಡಬಹುದು. ಪ್ರತಿ ವ್ಯಕ್ತಿಯೂ ಬೇರೆಬೇರೆ. ಎಲ್ಲರನ್ನೂ ಒಂದೇ ತರಹ ಮಾಡಲಾಗದು, ಮಾಡಲೂಬಾರದು ಎಂಬ ತಿಳುವಳಿಕೆ ನಮಗೆ ಬಂದರೆ ಸಾಕು, ನಮಗಿದು ಸ್ವೀಕೃತಿ ಆದರೆ ಸಾಕು, ಬಲು ಗಹನವಾದ , ಆಳವಾದ ಪರಿಣಾಮವನ್ನು ತರಬಹುದು. ಉದಾಹರಣೆಗೆ - ಒಬ್ಬ ವಿದ್ಯಾರ್ಥಿ ಗಣಿತದಲ್ಲಿನ ಹಿಂದೆ ಇದ್ದರೆ, ಆತ ಗಣಿತದಲ್ಲಿ ಸುಧಾರಿಸಿದರೆ ಮಾತ್ರ ಆತನನ್ನು ಮುಂದಿನ ತರಗತಿಗೆ ಹೋಗಲು ಅವಕಾಶ ಕೊಡುತ್ತೇವೆ ಎಂದು ಶಿಕ್ಷಣ ಸಂಸ್ಥೆ ಒತ್ತಾಯಿಸಬಾರದು. ಗಣಿತವೇನು ಅಂತಹ ದೊಡ್ಡ ವಿಷಯವೇನಲ್ಲ, ಇದಿಲ್ಲದಿದ್ದರೆ ಆತ ಜೀವನ ನಡೆಸಲಿಕ್ಕಾಗದು ಎಂದೇನಿಲ್ಲ. ನಮ್ಮ ಈ ಒತ್ತಾಯದಿಂದ ಆಗುವುದೇನೆಂದರೆ, ಆ ವಿದ್ಯಾರ್ಥಿ ಒಂದು ಕೀಳರಿಮೆಯಿಂದ , ತನ್ನ ಬಗ್ಗೆ ಹೀನತಾಭಾವದಿಂದ ಪ್ರಪಂಚಕ್ಕೆ ಪ್ರವೇಶಿಸುತ್ತಾನೆ. ನಾನು ಗಣಿತದಲ್ಲಿ ದಡ್ಡ ಎಂಬೀತನ ಭಾವನೆ ಜೀವನದ ಎಲ್ಲ ಆಯಾಮಗಳಲ್ಲೂ ಸಹ ಸೋಲಿನ ಭಾವನೆಯನ್ನು ನಿರ್ಮಿಸುತ್ತದೆ.ಎಲ್ಲೇ ಹೋದರೂ ತಾನು ಸೋಲುವೆನೆಂಬುದು ಈತನ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ.

* * *

ನಮ್ಮ ಪೋಷಕರು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಎಂದಿಗೇನೋ?

Monday 7 July, 2008

ಕಾರಂತರೂ, ಬೆಟ್ಟದ ಜೀವವೂ

ಶಿವರಾಮ ಕಾರಂತರ 'ಬೆಟ್ಟದ ಜೀವ' ಓದಿದೆ. ಸಾಮಾಜಿಕವಾಗಿ ಉತ್ತಮ ಬದುಕು ಮಾಡಹೊರಡುವ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ. 'ಕಾದಂಬರಿ'ಯ ಕುರಿತಾದ ಇಂದಿನ ಮನೋಭೂಮಿಕೆಯನ್ನು ಮನದಲ್ಲಿಟ್ಟುಕೊಂಡು 'ಬೆಟ್ಟದ ಜೀವ'ವನ್ನು ವಿಮರ್ಶಿಸಹೊರಟರೆ ಅದನ್ನು 'ಕಾದಂಬರಿ'ಯ ಪ್ರಕಾರಕ್ಕೆ ಸೇರಿಸಬಾರದೆನ್ನಿಸುತ್ತದೆ.


ಇಡೀ ಹೊತ್ತಿಗೆ ನಾಲ್ಕೈದು ದಿನಗಳಲ್ಲಿ ನಡೆಯುವ ಘಟನೆಯಲ್ಲಿಯೇ ಮುಗಿದುಹೋಗುತ್ತದೆ. ಅಷ್ಟರೊಳಗೆ ಒಂದು ಕಾಲಘಟ್ಟದ ಬದುಕು, ಬವಣೆ ಎಲ್ಲವನ್ನೂ ನಿರೂಪಿಸುವ ಪರಿ ವಿಶೇಷವಾಗಿದೆ.


ಲೇಖಕರು ದಾರಿತಪ್ಪಿ ರಾತ್ರಿಯೊಂದರ ಆಸರೆಗಾಗಿ ಮನೆಯೊಂದನ್ನು ಸೇರುತ್ತಾರೆ. ಬೆಳಗ್ಗೆ ಎದ್ದು ಹೊರಡಬೇಕಾದವರು ಒಂದೊಂದಾಗಿ ಘಟನೆಗಳು ನಡೆಯತೊಡಗಿದಂತೆ ಹೊರಡುವುದನ್ನು ಮುಂದೂಡುತ್ತಾ ಬರುತ್ತಾರೆ. ಇದರೊಂದಿಗೆ ಆ ಮನೆಯ ಕಥೆ - ವ್ಯಥೆ, ನೋವು - ನಿರಾಸೆ, ಸಾಮರ್ಥ್ಯ - ಔದಾರ್ಯ, ನಲಿವು - ಗೆಲುವು..... ಎಲ್ಲವೂ ಬಿಚ್ಚಿಕೊಳ್ಳತೊಡಗುತ್ತದೆ.


ಸಣ್ಣಸಣ್ಣ ತೊಡಕುಗಳು ಎದುರಾದಾಗಲೂ ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ ವರ್ತಿಸುತ್ತಿರುತ್ತೇವೆ. ನಮಗಾದ ಕಷ್ಟ ಪ್ರಪಂಚದ ಇನ್ನಾರಿಗೂ ಆಗಲೇ ಇಲ್ಲವೇನೋ ಎನ್ನುವಂತೆ ಕೂಗಾಡುತ್ತೇವೆ, ರೇಗಾಡುತ್ತೇವೆ, ಗೋಳಾಡುತ್ತೇವೆ, ಚೀರಾಡುತ್ತೇವೆ. 'ಬೆಟ್ಟದ ಜೀವ'ದ ಕಥಾನಾಯಕ ಬೆಟ್ಟವನ್ನೂ ಬರಿದಾಗಿಸಿ ಬದುಕಿ 'ಬೆಟ್ಟದ ಜೀವ'ವಾಗಿ ನಿಂತ ರೀತಿ ನಮಗೆಲ್ಲ ಮಾದರಿ. ಕಥಾನಾಯಕನ ನೈಜ ಬದುಕಿನ ಚಿತ್ರಣ ಅದು ಎಂದು ಕಾರಂತರು ನುಡಿಯುವಾಗಲಂತೂ, ಆ ವ್ಯಕ್ತಿಯನ್ನು ನಾವು ನೋಡಬೇಕಿತ್ತು ಎನಿಸುತ್ತದೆ.


ಒಂದು ಹವ್ಯಕ ಕುಟುಂಬದ ಕತೆ ಇದಾಗಿರುವುದು, ಮತ್ತೊಬ್ಬ ಹವ್ಯಕನಾಗಿ ನನಗೆ ಆತ್ಮೀಯ ಎನಿಸುತ್ತದೆ.


ಕಾರಂತರ ಕಥನಶೈಲಿಗೆ ತಲೆದೂಗಲೇಬೇಕು; ತಲೆಬಾಗಲೇಬೇಕು.

Sunday 6 July, 2008

ಇಂಗ್ಲಿಷೋ? ಕಂಗ್ಲಿಷೋ?

ಕರ್ನಾಟಕದಲ್ಲೀಗ ಹೊಸ ವಿವಾದ. ಅಲ್ಲ ಹಳೆ ವಿವಾದಕ್ಕೆ ಹೊಸ ಜೀವ. ಕರ್ನಾಟಕದ ಉಚ್ಚನ್ಯಾಯಾಲಯ ಹೊಸ ತೀರ್ಪು ನೀಡಿತು. ಆಂಗ್ಲಭಾಷಾಮಾಧ್ಯಮದ ವಾದಕ್ಕದು ಪುಷ್ಟಿನೀಡಿತು. ಪರ - ವಿರೋಧದ ವಾದಸರಣಿ ಮತ್ತೆ ಗರಿಗೆದರಿತು.


ಹೌದು, ನಿಜವಾಗಿ ಇಂಗ್ಲಿಷ್ ನಮಗೆ ಬೇಕೇ? ನಾವಿಂದು ಬದುಕುತ್ತಿರುವ ಜಗತ್ತು ಪ್ರಾದೇಶಿಕ ಬದುಕಿನ ವಾಸ್ತವದಲ್ಲಿಲ್ಲ. ಅದು ಜಗದ್ವ್ಯಾಪಿ. ಜಗದೆಲ್ಲೆಡೆಯ ಸಂಬಂಧ - ಸಂಪರ್ಕಗಳು ನಮಗೆ ಅನಿವಾರ್ಯ. ಇಡೀ ಜಗತ್ತು ಪರಸ್ಪರ ಸಹಕಾರಿಯಾಗಿ ಬದುಕಬೇಕೆಂದರೆ ಭಾವ ವಿನಿಮಯ ಅಪೇಕ್ಷಿತ. ಭಾವ ವಿನಿಮಯಕ್ಕೆ ಪರಸ್ಪರ ಅರ್ಥವಾಗುವ ಭಾಷೆಯೊಂದು ಬೇಕೇಬೇಕು. ಆ ಭಾಷೆ ಯಾವುದಾಗಬೇಕೆಂದು ಚರ್ಚಿಸುವ, ನಿರ್ಣಯಿಸುವ ಅವಕಾಶ ನಮಗಿಲ್ಲವೇ ಇಲ್ಲ. ಇಂಗ್ಲಿಷ್ ಜಾಗತಿಕ ಸಂಪರ್ಕ ಭಾಷೆಯಾಗಿ ಸಾರ್ವತ್ರಿಕ ಅಂಗೀಕಾರವನ್ನು ಈಗಾಗಲೇ ಪಡೆದುಕೊಂಡಿದೆ.


ಒಟ್ಟಿನಲ್ಲಿ ಜಾಗತಿಕ ಸಂಪರ್ಕ ನಮಗೆ ಬೇಕು; ಅದಕ್ಕೊಂದು ಭಾಷೆ ಬೇಕು; ಬೇಕೋಬೇಡವೋ ಇಂಗ್ಲಿಷ್ ಆ ಜಾಗದಲ್ಲಿದೆ. ಹಾಗಾಗಿ ನಾವದನ್ನು ಒಪ್ಪಿಕೊಳ್ಳಲೇ ಬೇಕು.


ಇಂಗ್ಲಿಷ್ ಬೇಕೆಂದ ಮೇಲೆ ವಿದ್ಯಾರ್ಥಿ ದೆಸೆಯಲ್ಲಿಯೇ ಅದನ್ನು ವ್ಯವಸ್ಥಿತವಾಗಿ ಕಲಿಸುವುದು ಅವಶ್ಯಕ. ಇಂಗ್ಲಿಷ್ ಕಲಿಯದೇ ಅಸಂಖ್ಯ ವ್ಯಕ್ತಿಗಳು ಜೀವನದಲ್ಲಿ ಏರಬಹುದಾಗಿದ್ದ ಸ್ಥಾನದಿಂದ ವಂಚಿತರಾಗಿದ್ದಾರೆನ್ನುವುದು ಸೂರ್ಯಸ್ಪಷ್ಟ ಸಂಗತಿ.


ಇಂಗ್ಲಿಷ್ ಮಾಧ್ಯಮದ ಪರ - ವಿರೋಧ ಚರ್ಚೆಯಲ್ಲಿ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದು ಕಡಿಮೆಯೇ ಎನ್ನಬೇಕು.


ಇಂಗ್ಲಿಷ್ ಕಲಿತರೆ ಸಂಸ್ಕೃತಿಯೇ ನಷ್ಟವೆಂದವರು ಕೆಲವರು. ಇಂಗ್ಲಿಷ್ ಕಲಿತರೆ ದೇಸೀ ಹಾಳಾಯಿತು ಅಂತ ಮತ್ತೆ ಕೆಲವರು. ಮತ್ತೊಂದು ಭಾಷೆಯನ್ನು ಕಲಿತ ಮಾತ್ರಕ್ಕೆಯೇ ಇವೆಲ್ಲ ಹಾಳಾಗುವುದಾದರೆ ಅಷ್ಟೊಂದು ಅಶಾಶ್ವತವಾದದ್ದನ್ನು ನಾವೇಕೆ ಉಳಿಸಿಕೊಳ್ಳಬೇಕು? ಹಾಗಲ್ಲವಾದರೆ ಆ ಭಾಷೆಯೂ ಇದಕ್ಕೆ ಪೂರಕವೇ ಆಗಬೇಕು, ಆಗುತ್ತದೆ.

ವಿವೇಕಾನಂದರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಸನಾತನಸಂಸ್ಕೃತಿ ಜಗತ್ತಿನ ಗಮನ ಸೆಳೆದದ್ದು. ಅನಂತಮೂರ್ತಿಯಂತವರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಕನ್ನಡದ ಕಂಪು ಹೊರಗೂ ಹರಿದದ್ದು.

ಪ್ರಶ್ನೆ ಇರುವುದು ಮಾಧ್ಯಮದ ವಿಷಯದಲ್ಲಿ. ಖಂಡಿತವಾಗಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತಗಳಲ್ಲಂತೂ ಮಾತೃ ಭಾಷೆಯೇ ಮಾಧ್ಯಮವಾಗಬೇಕು. ಹೊಸದೊಂದು ಭಾಷೆಯನ್ನು ಕಲಿಯುತ್ತಲೇ, ಕಲಿಯಬೇಕಾದ ಅನ್ಯ ವಿಷಯಗಳನ್ನೂ ಅದರ ಮೂಲಕವೇ ಕಲಿಯ ಹೊರಡುವುದು ಎಳೆ ವಯಸ್ಸಿಗೆ ಶಿಕ್ಷೆಯೇ ಸರಿ.


ಅಷ್ಟೇ ಅಲ್ಲದೆ ಮಾತೃಭಾಷೆ ಮತ್ತು ಮಾತೃಭಾಷೆಯ ಪರಿಸರ ಮಗುವಿನ ಬೆಳವಣಿಗೆಗೆ ಸಹಕಾರಿ. ಅದು
ತಾಯಿಬೇರು. ಅದನ್ನು ಕಳಕೊಳ್ಳುವಂತಿಲ್ಲ.


ಆಂಗ್ಲಮಾಧ್ಯಮಪ್ರಿಯರ ಅಭಿಮತ - ಕಿರು ವಯಸ್ಸಿನಿಂದಲೇ ಎಲ್ಲವನ್ನೂ ಇಂಗ್ಲಿಷ್ ಮಯ ಗೊಳಿಸಿದರೆ ಭಾಷೆಯ ಮೇಲೆ ಪ್ರಭುತ್ವ ಸಾಧ್ಯ, ಇಲ್ಲವಾದರೆ ಅದು ಅಸಾಧ್ಯ ಅಂತ.


ಇದು ತಪ್ಪಭಿಪ್ರಾಯ.ಭಾಷೆಯ ಕಲಿಕೆಗೆ ಅದು ಶಿಕ್ಷಣ ಮಾಧ್ಯಮವೇ ಆಗಬೇಕೆಂದಾದರೆ ಪ್ರಪಂಚದ ಇಷ್ಟೊಂದು ಜನ ತಮ್ಮದಲ್ಲದ ಇಷ್ಟಾರು ಭಾಷೆಯನ್ನು ಕಲಿಯಲು ಸಾಧ್ಯವಿರಲಿಲ್ಲ.


ಹಾಗಾಗಿ ಇಂಗ್ಲಿಷನ್ನು ಕಲಿಕೆಯ ಒಂದು ಅಂಗವಾಗಿ ಚೆನ್ನಾಗಿ ಕಲಿಸುವುದು ಯೋಗ್ಯ. ಯಾವ ಕಾರಣಕ್ಕೂ ಮಾಧ್ಯಮವಾಗಿ ಬೇಡ.

Tuesday 1 July, 2008

ಹೇಳೋದೊಂದು; ಮಾಡೋದೊಂದು. ಸರೀನಾ ಸ್ವಾಮಿ!?!

ಕನ್ನಡದ ವಿಷಯದಲ್ಲಿ ಹೊಸ ಚರ್ಚೆಗೆ ಉಪಕ್ರಮ ದೊರೆತಿದೆ. ಮಾತನಾಡುವ ಕನ್ನಡಕ್ಕೂ ಮತ್ತು ಬರೆಯುವ ಕನ್ನಡಕ್ಕೂ ಭಿನ್ನತೆ ಬೇಕೇ? ಬೇಡವೇ? ಅಂತ. ಶ್ರೀ ಕೆ. ವಿ. ತಿರುಮಲೇಶ್ ಸುಂದರವಾಗಿ ತಮ್ಮ ಅಭಿಪ್ರಾಯ ನಿರೂಪಿಸಿದ್ದಾರೆ- "ನುಡಿದಂತೆ ನಡೆಯಬೇಕು; ಆದರೆ ಬರೆಯಬಾರದು" ಅಂತ.


ಅವರು ಆ ಅಭಿಪ್ರಾಯಕ್ಕೆ ಬರುವ ಮುನ್ನ ಹುಟ್ಟಿಕೊಂಡ ಚರ್ಚೆ, ಗ್ರಾಂಥಿಕ ಕನ್ನಡದ ಬಗ್ಗೆ. ನಾವು ಮಾತನಾಡುವುದೇ ಬೇರೆ ರೀತಿ, ಬರೆಯುವುದೇ ಬೇರೆ ರೀತಿ. "ಈ ಭೇದ ಬೇಡ" ಅಂತ ಕೆಲವರ ನಿಲುವು. "ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಬರೆಯೋಣ" ಎನ್ನುತ್ತಾರವರು. ಇದರಿಂದ ಭಾಷೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆನ್ನುವುದು ಅವರ ಆಶಯ.


ಶ, ಷಗಳನ್ನು ತೆಗೆಯಬಹುದು, ಸ ಒಂದೇ ಸಾಕಾಗುತ್ತದೆ; ಮಹಾಪ್ರಾಣಗಳೇ ಬೇಡ; ದೀರ್ಘವನ್ನು ಬಿಟ್ಟುಬಿಡೋಣ; ಮುಂತಾದ ಅಭಿಪ್ರಾಯಗಳಿಗೆ ಅವರು ಬಂದಿದ್ದಾರೆ. ಇಷ್ಟೇ ಆದಾಗ 'ತುಂಬ ಸರಳ ಆಯ್ತಲ್ಲ' ಅಂತ ಅನ್ನಿಸತ್ತೆ.


ಭಾಷೆಯೊಂದರ ವ್ಯಾಕರಣಬದ್ಧತೆಯನ್ನು ಕಳಚಿ ಬಿಟ್ಟರೆ, ಭಾಷೆಯ ಭಾವವಿನಿಮಯದ ಉದ್ದೇಶ ವಿಫಲವಾಗತ್ತೆ. ಒಂದು ಪ್ರದೇಶದಲ್ಲಿ ವಾಸಿಸುವವರು ತಮ್ಮ ಭಾವ ವಿನಿಮಯಕ್ಕೆ ಸಂಕೇತಿಸಿಕೊಂಡದ್ದು ಈ ಕನ್ನಡ ಭಾಷೆ. ಕನ್ನಡದಲ್ಲಿ ಇಂದು ಮಾತನಾಡುವ ಭಾಷೆಯಲ್ಲಿ ಸಹಸ್ರ ಬಗೆಗಳುಂಟಾಗಿವೆ. ಜಾತಿಯ ಭಾಷೆಗಳು - ವರ್ಗದ ಭಾಷೆಗಳು - ಪ್ರದೇಶದ ಭಾಷೆಗಳು - ವೃತ್ತಿಯ ಭಾಷೆಗಳು . . . ಹೀಗೆ. ಇದರಲ್ಲೂ ಸಹ ಒಳಭೇದಗಳಿವೆ. ಉದಾಹರಣೆಗೆ ನಾನು ಮನೆಯಲ್ಲಿ ಮಾತನಾಡುವ ಹವ್ಯಕ ಕನ್ನಡ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡದ ಹವ್ಯಕರ ಭಾಷೆ ಬೇರೆ ಬೇರೆ. ಅಷ್ಟೇ ಅಲ್ಲದೆ, ಹವ್ಯಕರು ವಾಸಿಸುವ ಪ್ರದೇಶಗಳಲ್ಲಿನ ಸೀಮಾ ವ್ಯವಸ್ಥೆಗಳಲ್ಲಿ ಇದು ಬೇರೆ ಬೇರೆ.


ಹೀಗಿರುವಾಗ ಮಾತನಾಡಿದಂತೆಯೇ ಬರೆಯಹೊರಟರೆ, ಬರೆದದ್ದು ಸಮಸ್ತ ಕನ್ನಡಿಗರಿಗೆ ಅರ್ಥವಾದೀತೇ? ಖಂಡಿತ ಅರ್ಥವಾಗದು.

ಹಾಗಾಗಿಯೇ ಸಾಹಿತ್ಯಕವಾಗಿ, ಗ್ರಾಂಥಿಕವಾಗಿ ಕನ್ನಡದ ಬೇರೆಯದೇ ರೂಪದ ಅಸ್ತಿತ್ವ ಅನಿವಾರ್ಯ.

Saturday 28 June, 2008

ತಿಂದ ದೋಸೇಲಿ ಭಿನ್ನರಾಶಿ ಕಲಿಸ್ಬಹುದಾ!?!

"ಶಿಕ್ಷಣ" ಇಂದು ಬಹು ಚರ್ಚಿತ ವಿಷಯ. "ಕಲಿಸುವುದು ಹೇಗೆ?" ಅನ್ನೋದನ್ನೇ ಪ್ರಧಾನ ವಿಷಯವಾಗಿಸಿಕೊಂಡು ಇಂದು ಚರ್ಚೆ ಸಾಗಿದೆ. "ಏನನ್ನು ಕಲಿಸಬೇಕು"? ಅನ್ನುವಷ್ಟೇ ಪ್ರಾಧಾನ್ಯ "ಹೇಗೆ ಕಲಿಸಬೇಕು"? ಅನ್ನೋದಕ್ಕೂ ಸಿಕ್ಕಿದೆ.

ನಾವು 'ಗುರುಕುಲ'ದ ಕನಸು ಕಟ್ಟಿದಾಗ ನಮ್ಮ ಯೋಚನೆ ಇದ್ದದ್ದು ಇದೇ. ಇವತ್ತು ನಮ್ಮ ಶಾಲೆಗಳು ಕಲಿಸುತ್ತಿರುವುದನ್ನು ಬೇರೆ ವಿಧಾನದಲ್ಲಿ, ಇನ್ನೂ ಸುಲಭವಾಗಿ, ಇನ್ನೂ ಸರಳವಾಗಿ, ಇನ್ನೂ ಬೇಗ ಕಲಿಸಬಹುದೇ ಅಂತ.

ಈ ವಿಷಯದ ಬಗ್ಗೆ ನಾವು ತುಂಬಾ ಪ್ರಯೋಗ ಮಾಡಿದೆವು. ಎಲ್ಲ ಪ್ರಯೋಗಗಳ ಕೊನೆಗೆ ಸಿಕ್ಕ ಫಲಿತಾಂಶ ಅಂದ್ರೆ, ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಅಂತ. ಈಗ್ಲೇ ಇದೆಲ್ಲ ಆಗಿದೆ ಅಂತ ಅಲ್ಲ, ಮಾಡಬಹುದು ಅಷ್ಟೇ.

ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಎಷ್ಟು ಸುಲಭವಾಗಿ ಪಾಠ ಮಾಡಬಹುದು ಅನ್ನುವುದರ ಬಗ್ಗೆ ನಿನ್ನೆ ಸಿಕ್ಕ ಘಟನೆಯೊಂದು ಈ ಮಾತುಗಳನ್ನು ಬರೆಯುವಂತೆ ಮಾಡಿತು.

ನಮ್ಮ ಜಟ್ಟೀಮನೆ ಗಣಪತಣ್ಣ ಹೇಳಿದ ಘಟನೆ -
ಅವರು ಮೂರನೆಯ ತರಗತಿಯಲ್ಲಿದ್ದ ಸಮಯ. ಅವರಿಗಾಗ ಗಣಿತ ಬಲು ಕಷ್ಟದ ವಿಷಯ. ಅರ್ಥವೇ ಆಗುತ್ತಿರಲಿಲ್ಲವಂತೆ. ಅದರಲ್ಲೂ 'ಭಿನ್ನರಾಶಿ' ಅಂದ್ರೆ ಏನೂ ಅಂತನೇ ಗೊತ್ತಾಗ್ತಾ ಇರಲಿಲ್ಲವಂತೆ. ಒಬ್ಬ ಹೊಸ ಮೇಷ್ಟ್ರು ಅವತ್ತು ಗಣಿತ ಕಲಿಸಲು ಬಂದ್ರು. ಇವರಿಗೆ ಭಿನ್ನರಾಶಿ ಬರಲ್ಲ ಅಂತ ಗೊತ್ತಾಯ್ತು. ಆಗ ಅವರು ಪಾಠ ಮಾಡಿದ್ದು ಹೀಗೆ -
"ನಿಮ್ಮ ಮನೇಲಿ ಇವತ್ತು ದೋಸೆ ಮಾಡಿದಾರೆ ಅಂದ್ಕೋ. ನಿನ್ನ ತಟ್ಟೇಲಿ ದೋಸೆ ಇದೆ. ನೀನದನ್ನ ನಾಲ್ಕು ಪಾಲು ಮಾಡ್ತೀಯಾ. ಅದರಲ್ಲಿ ಒಂದು ಪಾಲು ತಿಂತೀಯಾ. ಮೊದಲು ನಾಲ್ಕು ಪಾಲು ಇತ್ತು. ಈಗ ಒಂದು ಪಾಲು ತಿಂದೆ. ಎಷ್ಟು ಪಾಲು ನಿನ್ನ ತಟ್ಟೇಲಿ ಉಳೀತು? ಕೂಡಲೇ ಉತ್ತರ ಬಂತು - ಮೂರು ಪಾಲು ಅಂತ. ಅದನ್ನು ನಾಲ್ಕನೇ ಮೂರು ಭಾಗ ಅಂತ ಕರೀತಾರೆ. ಹಾಗಾದ್ರೆ ಈಗ ಹೇಳು, ನೀನು ತಿಂದ ಭಾಗ ಎಷ್ಟು? ಮತ್ತೆ ಕೂಡಲೇ ಉತ್ತರ - "ನಾಲ್ಕನೇ ಒಂದು ಭಾಗ".

ಭಿನ್ನರಾಶಿ ತನಗೆ ಬಂತು ಅನ್ನುವ ಅನಿಸಿಕೆ ತಂದ ಆತ್ಮವಿಶ್ವಾಸ, ಗಣಪತಣ್ಣ ಗಣಿತದಲ್ಲಿ ಹಿಂದಿರುಗಿ ನೋಡದಂತೆ ಮಾಡಿತು.

ಇದೇ ಶಿಕ್ಷಣ. ಇಷ್ಟೇ ಅದರ ಗುಟ್ಟು.

ಕೀರ್ತಿಶೇಷ ಡಿ.ವಿ.ಜಿ. ಇದನ್ನೇ ಸುಂದರವಾಗಿ ಹೇಳ್ತಾರೆ - ಸಾವಿರ ಶಾಸ್ತ್ರ ವಾಕ್ಯಗಳಿಗಿಂತ ಸರಿಯುದಾಹರಣೆ ಲೇಸು ಅಂತ.

Wednesday 25 June, 2008

ನನ್ನ ಗುರುಕುಲ..............

ಗುರುಕುಲವೆಂದರೆ..............

ಅಧ್ಯಾತ್ಮದ ನೋಟ.
ಸಾಮರ್ಥ್ಯದ ವೃಧ್ಧಿ.
ಕೌಶಲದ ಪ್ರಗತಿ.
ಭಾವನೆಯ ಉತ್ಕಟತೆ.
ಆತ್ಮೀಯ ಒಡನಾಡಿ.
ಕಣಕಣವು ಜೀವಸೆಲೆ.
ಕಣ್ಣಿಗೆ ತಂಪು.
ಕಿವಿಗೆ ಇಂಪು.
ಉದರಕ್ಕೆ ಸೊಂಪು.
ಮನದ ಆಹ್ಲಾದ.
ಶಿರದ ಹೊನ್ನ ಕಿರೀಟ.
ಒಳನೋಟದ ಒಸಗೆ.
ಬಯಲಿನ ಬೆಸುಗೆ.


ಗುರುಕುಲದಲ್ಲಿ..............

ಪರೀಕ್ಷೆಯ ಭಯವಿಲ್ಲ; ಎದುರಿಸುವ ಆತ್ಮವಿಶ್ವಾಸವಿದೆ.
ಶಿಕ್ಷಣದ ವ್ಯಾಪಾರವಿಲ್ಲ; ವ್ಯಾಪಾರದ ಶಿಕ್ಷಣವಿದೆ.
ಅಹಂಕಾರದ ನುಡಿಯಿಲ್ಲ; ಆತ್ಮವಿಶ್ವಾಸದ ನಡೆಯಿದೆ.
ಗೆಲುವಿನ ಹಂಬಲವಿಲ್ಲ; ಗೆಲುವೇ ಉಸಿರಾಗಿದೆ.
ತಲೆ ತಗ್ಗಿಸುವ ವರ್ತನೆಯಿಲ್ಲ; ತಲೆಯೆತ್ತಿ ನಡೆಯುವ ದಿಟ್ಟತನವಿದೆ.
ದೌರ್ಜನ್ಯ ದೂರದ ಮಾತು; ಸೌಜನ್ಯವೆ ಮನೆ ಮಾತು.
ಜೀವನಕ್ಕಾಗಿ ಕಲಿಕೆಯಲ್ಲ; ಜೀವನವೇ ಕಲಿಕೆ.


ಗುರುಕುಲದಲ್ಲಿ...................

ಸಂಸ್ಕಾರವಿದೆ.
ಸಂಸ್ಕೃತವಿದೆ.
ಆಧುನಿಕತೆಯಿದೆ.
ಆಂಗ್ಲಭಾಷೆಯಿದೆ.
ದೇಶಭಕ್ತಿಯಿದೆ.
ಹಿಂದಿ ಕಲಿಕೆಯಿದೆ.
ವೇದವಿದೆ.
ವಿಜ್ಞಾನವಿದೆ.
ರಾಜನೀತಿಯಿದೆ.
ಪೌರನೀತಿಯಿದೆ.
ಇತಿಹಾಸವಿದೆ.
ಭೂಗೋಳವಿದೆ.
ಆಚಾರವಿದೆ.
ವಿಚಾರವಿದೆ.
ಸಂಸ್ಕೃತಿಯಿದೆ.
ಪ್ರಗತಿಯಿದೆ.
ಧ್ಯಾನವಿದೆ.
ಶ್ರಮಸೇವೆಯಿದೆ.
ಮೌನವಿದೆ.
ಸಂಗೀತವಿದೆ.
ನೃತ್ಯವಿದೆ.
ಮೃದಂಗವಿದೆ.
ವೀಣೆಯಿದೆ.
ವೇಣುವಿದೆ.
ವಿಜ್ಞಾನ ಪ್ರಯೋಗವಿದೆ.
ಕರ್ಮಕಾಂಡ ಪ್ರಯೋಗವಿದೆ.
ಗೃಹ ವಿಜ್ಞಾನವಿದೆ.
ಕಂಪ್ಯೂಟರ್ ಶಿಕ್ಷಣವಿದೆ.
ಲೇಖನವಿದೆ.
ಭಾಷಣವಿದೆ.
ಅಭಿನಯವಿದೆ.
ಅನುಭವವಿದೆ.
ಪೂಜೆಯಿದೆ.
ಪ್ರಾರ್ಥನೆಯಿದೆ.


ಗುರುಕುಲದ ಆಚಾರ್ಯರೆಂದರೆ..................

ಅಮಿತ ಶಿಷ್ಯಪ್ರೇಮ.
ಅನವರತ ಕ್ರಿಯಾಶೀಲತೆ.
ಅವಿರತ ಪ್ರಯತ್ನ.
ಅಸಂಭವದ ಸಾಧ್ಯತೆ.
ಅನನ್ಯ ಗುಣಪೂರ್ಣತೆ.
ಅನಂತದೆಡೆಗೆ ಲಕ್ಷ್ಯ.
ಅಪೂರ್ವ ಸೃಷ್ಟಿಶೀಲತೆ.
ಅಗಣಿತ ವಿಷಯ ಜ್ಞಾನ.
ಅಭಿನಂದನೀಯ ನಿಷ್ಕಪಟತೆ.
ಅನುಪಮ ಗಾಂಭೀರ್ಯ.
ಅವ್ಯಾಜ ಕರುಣೆ.
ಅನುಭವದ ವಜ್ರಗಣಿ.


ಗುರುಕುಲದ ಮಕ್ಕಳೆಂದರೆ..............

ಅಧ್ಯಾತ್ಮದ ತುಡಿತ.
ಪ್ರಗತಿಯ ಮಿಡಿತ.
ವಿದ್ಯೆಯ ಹಂಬಲ.
ವಿನಯದ ಬೆಂಬಲ.
ಸೌಜನ್ಯದ ಗಣಿ.
ಔದಾರ್ಯದ ಧಣಿ.
ವಿನಯದ ಮೂರ್ತಿ.
ಸಾಧನೆಯ ಕೀರ್ತಿ.
ದೇಶಭಕ್ತಿಯ ಸೆಲೆ.
ವಿಶ್ವಪ್ರೇಮದ ನೆಲೆ.
ಗುರುವಿನ ಬಲ.
ಗುರಿಯೆಡೆಗೆ ಛಲ.
ವಿಜ್ಞಾನ ಬೆಂಗಾವಲು.
ವಿವೇಕ ಕಣ್ಗಾವಲು.
ಸ್ವಜೀವನ ಸ್ವೀಕೃತ.
ಸಮಾಜ ಸೇವೆಯಲ್ಲಿ ವ್ಯಾಪೃತ.

ಮುಸ್ಲಿಂ - ರವಿ ಬೆಳೆಗೆರೆ - ಧರ್ಮ

'' ಮುಸ್ಲಿಂ'' ಬಹುದಿನದಿಂದ ಕೇಳುತ್ತಿದ್ದ ಹೆಸರು. 'ರವಿ ಬೆಳಗೆರೆ' ಬರೆದಿದ್ದಾರೆ ಅಂತ ಕೇಳಿದ್ದೆ. ಅಲ್ಲಿ ಇಲ್ಲಿ ಚೂರು ಪಾರು ವಿಮರ್ಶೆಯನ್ನೂ ಕೇಳಿದ ನೆನಪಿನ ತುಣುಕು.

ಗುರುಕುಲದ ಗ್ರಂಥಧಾಮದಲ್ಲಿ ಇಣುಕುತ್ತಿದ್ದಾಗ ಪುಸ್ತಕ ಕಣ್ಣಿಗೆ ಬಿತ್ತು. ಓದಲೇಬೇಕೆಂದು ಮನಸ್ಸು ಮಾಡಿ ಓದತೊಡಗಿದೆ.

ನಮಗೆ ಗೊತ್ತಿರದ- ಗೊತ್ತಿರಲೇಬೇಕಾದ ಮಾಹಿತಿಗಳ ಮಹಾಪೂರ. ಇಂತದ್ದೊಂದು ಕ್ರೂರ ಜಗತ್ತು ಹೊರಗಿದೆ ಅನ್ನೋದೇ ಗೊತ್ತಿರಲಿಲ್ಲ.

ಮೊನ್ನೆ ಬಾಳಠಾಕ್ರೆಯವರ ಹೇಳಿಕೆಯೊಂದು ವಿವಾದದ ರೂಪ ತಾಳಿತ್ತು- 'ಹಿಂದೂ ಆತ್ಮಹತ್ಯಾದಳಗಳು ಬೇಕು' ಅಂತ.
" ಮುಸ್ಲಿಂ" ಓದಿದಾಗ, ಭಾರತದ ಮುಸ್ಲಿಮರು 'ಜೆಹಾದ್'ನ ಕೈಯಲ್ಲಿ ಸಿಕ್ಕರೆ; ಮುಂದೊಂದು ದಿನ ಠಾಕ್ರೆ ಹೇಳಿದಂತೆ ಮಾಡಬೇಕೇನೋ ಅನ್ನಿಸುತ್ತದೆ.

ಕ್ರಿಶ್ಚಿಯನ್ನರ 'ಮತಾಂತರ'-ಮುಸ್ಲಿಂರ 'ಜೆಹಾದ್'ಗಳು ಧರ್ಮ ಎನ್ನುವ ಹೆಸರಿನಡಿಯಲ್ಲಿಯೇ ಬಂದು ಬಂದು ನಾವಿವತ್ತು ಸನಾತನ ಧರ್ಮವನ್ನೂ ಸಂಶಯದಿಂದ ನೋಡುವಂತಾಗಿದೆ.

ನಾವೆಲ್ಲ ಧಾರ್ಮಿಕರೆನಿಸಿಕೊಂಡವರು ಏನು ಹೇಳಿದರೂ ಅದರಲ್ಲಿ 'ಮತಾಂತರ-ಜೆಹಾದ್'ನ ಕ್ರೌರ್ಯದ ಅಂಶಗಳನ್ನು ಜಗತ್ತು ಹುಡುಕತೊಡಗುತ್ತದೆ.

ಹಿಂದೂಧರ್ಮದ ಪ್ರಚಾರಕರೂ-ಪ್ರತಿಪಾದಕರೂ ಕೆಲವು ಬಾರಿ ಆಡುವ ಮಾತುಗಳು, ತೋರುವ ವರ್ತನೆಗಳು, ಅಭಿಮಾನವಿದ್ದರೂ ಅರಿವಿಲ್ಲದಿರುವುದರಿಂದ ಹಾಗಿರುವುದೂ ಸುಳ್ಳಲ್ಲ.

ಜಗತ್ತಿನ ಒಳಿತೊಂದನ್ನೇ ಹಾರೈಸುವ ಸನಾತನ ಧರ್ಮವನ್ನು ಇಂತಹ ಸಂದರ್ಭದಲ್ಲಿ ಮೂಲದ ಆಶಯದೊಂದಿಗೆ ಜಗದ ಮುಂದಿಡುವುದು ಹೇಗೇನೋ?

ಏನೇ ಇರಲಿ, ' ಮುಸ್ಲಿಂ' ಎಲ್ಲರೂ ಓದಬೇಕಾದ ಹೊತ್ತಗೆ.

Tuesday 24 June, 2008

ಪದ್ಮಪ್ರಿಯಾ ಸತ್ತರು.... ಮಕ್ಕಳೊಂದಿಗೆ ರಘುಪತಿ ಭಟ್ಟರು ಸಾಯುತ್ತಿದ್ದಾರೆ...ಕೊಲೆಗಾರರು ಯಾರು?

ಕರ್ನಾಟಕದಲ್ಲೀಗ ಪದ್ಮಪ್ರಿಯಾರ ಪ್ರಕರಣ ಚರ್ಚೆಯಲ್ಲಿದೆ. ಉಡುಪಿಯ ಶಾಸಕ ರಘುಪತಿ ಭಟ್ಟರು. ಅವರ ಪತ್ನಿ ಪದ್ಮ ಪ್ರಿಯಾ. ಒಂದುದಿನ ಇದ್ದಕ್ಕಿದ್ದಂತೆ ಪದ್ಮಪ್ರಿಯಾ ನಾಪತ್ತೆಯಾಗುತ್ತಾರೆ. ಕಾರು ನಕ್ಸಲ್ ಪೀಡಿತ ಪ್ರದೇಶದ ಬಳಿ ದೊರೆಯುತ್ತದೆ. ಆಡಳಿತ ಪಕ್ಷದ ಶಾಸಕರ ಪತ್ನಿ ಎಂದಾದ ಮೇಲೆ ಪೋಲೀಸರು ವಿಶೇಷ ಆಸ್ಥೆವಹಿಸುತ್ತಾರೆ. ಸ್ವತಃ ಗೃಹ ಸಚಿವರ ಕ್ಷೇತ್ರ ಬೇರೆ ಅದೇ ಆಗಿರುತ್ತದೆ. ಭಟ್ಟರು ಆಚಾರ್ಯರಿಗೆ ಆತ್ಮೀಯರು.

"ಆಳುವವರೇನು ಮೇಲಿನಿಂದ ಇಳಿದುಬಂದವರೇ? ಅವರೂ ನಮ್ಮಂತೆಯೇ ಮನುಷ್ಯರು." ಎಂದು ಮೇಲಿಂದ ಮೇಲೆ ಮಾತನಾಡುವ ಮಾಧ್ಯಮ ಅಲರ್ಟ್ ಆಗಿಬಿಡುತ್ತದೆ, ತುಸು ಹೆಚ್ಚೇ ಎನಿಸುವಷ್ಟು. ಒಬ್ಬ ಸಾಮಾನ್ಯ ಪ್ರಜೆಯ ಹೆಂಡತಿ ಕಾಣೆಯಾಗಿದ್ದರೆ ಇಷ್ಟೊಂದು ಪ್ರಾಮುಖ್ಯ ಕೊಡದ ಮಾಧ್ಯಮ ಸುದ್ದಿಯಾಗಿ ಬಳಸಿಕೊಳ್ಳುತ್ತದೆ ಪ್ರಕರಣವನ್ನು.

ಪ್ರಕರಣ ನಾಡಿನ ಮನೆಮಾತಾಗುತ್ತದೆ. "ಪದ್ಮ ಪ್ರಿಯಾ ತಮ್ಮ ಪ್ರೇಮಿ ಅತುಲ್ ಅವರೊಂದಿಗೆ ಓಡಿಹೋಗಿದ್ದಾರೆ." ಎಂಬರ್ಥದ ಮಾತು ಕತೆಗಳನ್ನು ಕೆಲವರು ಆಡತೊಡಗುತ್ತಾರೆ. "ರಘುಪತಿ ಭಟ್ಟರು ಸ್ವಲ್ಪವೂ ,ಸರಿಯಿರಲಿಲ್ಲ ಅದೇ ಇಷ್ಟಕ್ಕೆಲ್ಲ ಕಾರಣ" ಎನ್ನತೊಡಗುತ್ತಾರೆ ಇನ್ನು ಕೆಲವರು. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮದವರು ಮತ್ತು ಜನಸಾಮಾನ್ಯರು ಈ ಮೂವರಲ್ಲೂ ಈ ಮಾತುಗಳು ಚಾಲನೆಗೊಳ್ಳುತ್ತವೆ.

ಇದಿಷ್ಟು ಪ್ರಕರಣ.

ಪ್ರಕರಣದ ಕುರಿತು ನನ್ನ ಚಿಂತನೆ ಇದು-

ನಮಗಿದು ಸಹಜ. ನಾವು ಯಾರ ಬಗ್ಗೆಯೂ ನಮಗನ್ನಿಸಿದಂತೆ ಮಾತನಾಡುವ ಹಕ್ಕನ್ನು ಹುಟ್ಟುತ್ತಲೇ ಪಡೆದು ಬಂದಂತೆ ವರ್ತಿಸುತ್ತೇವೆ.

ಮೊದಲ ಚಿಂತನೆ-
ಬೇರೆಯವರ ಬಗ್ಗೆ ನಾವು ಮಾತನಾಡಬೇಕೇಕೆ? ಅದು ನಾಲಿಗೆಯ ಚಾಪಲ್ಯ ತಾನೆ? ನಾವು ಅವರಿಗೆ ಜವಾಬ್ದಾರರಾದರೆ ಮಾತನಾಡುವುದು ಸರಿ. ಅದೂ ಅವರ ಬಳಿ ಅಥವಾ ಅವರನ್ನು ಸರಿಪಡಿಸಲು ಸಾಧ್ಯವಾಗುವ ಇನ್ನಾರಾದರು ಯೋಗ್ಯರ ಬಳಿ.

ದ್ವಿತೀಯ ಚಿಂತನೆ- ಪ್ರತಿವ್ಯಕ್ತಿಯು ಒಳಿತು-ಕೆಡುಕಿನ ಸಂಗಮ. ಗುಣ-ದೋಷಗಳು, ಸಾಮರ್ಥ್ಯ-ದೌರ್ಬಲ್ಯಗಳು ಎಲ್ಲರಲ್ಲು ಇರುತ್ತವೆ. ಯಾರೂ ಇದಕ್ಕೆ ಹೊರತಲ್ಲ. ಅತ್ಯಂತ ಉನ್ನತ ವ್ಯಕ್ತಿಗಳಿಂದ ಸಾಮಾನ್ಯನವರೆಗೂ ಇದು ಹೀಗೆಯೇ. ಒಬ್ಬನಲ್ಲಿರುವ ಗುಣ ಇನ್ನೊಬ್ಬನಲ್ಲಿ ಇರಲಾರದು; ಒಬ್ಬನಲ್ಲಿರುವ ದೋಷ ಇನ್ನೊಬ್ಬನದಾಗಿರಲಾರದು. ಸ್ವತಃ ನಾವೇ ಪರಿಪೂರ್ಣರಲ್ಲದಿರುವಾಗ ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಅಸಮಂಜಸ (ಯಾರನ್ನಾದರೂ ತಿದ್ದುವ ವಿಷಯ ಹೊರತು ಪಡಿಸಿ. ಅದರ ವಿಧಾನ ಪ್ರಥಮ ಚಿಂತನದಲ್ಲಿದೆ.

ತೃತೀಯ ಚಿಂತನೆ-
ಬೇರೆಯವರನ್ನು ವಿಮರ್ಶಿಸುವ ನಾವು ನಮ್ಮ ಕುರಿತಾದ ವಿಮರ್ಶೆಯನ್ನೂ ಹಾಗೆಯೇ ಸ್ವೀಕರಿಸುತ್ತೀವಾ? ನಾವಾಡುವ ಮಾತು ಅಭಿವ್ಯಕ್ತಿ ಸ್ವಾತಂತ್ರ್ಯ. ಅದರ ಕುರಿತು ಬೇರೆಯವರು ಆಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯಹರಣ. ಇದು ಆಧುನಿಕ ಸಿದ್ಧಾಂತವಾಗಿಬಿಟ್ಟಿದೆ.

ಚತುರ್ಥ ಚಿಂತನೆ-
ಇದಿಷ್ಟು ನಮ್ಮರಿವಿಗೆ ಬಂದ ವಿಷಯಗಳ ಮೇಲಿನ ಮಾತಾಯಿತು. ನಾವು ಹೆಚ್ಚಾಗಿ ಮಾತನಾಡುವುದು ನಮಗೆ ಪ್ರತ್ಯಕ್ಷವಾಗಿ ಗೊತ್ತಿಲ್ಲದ, ಯಾರೋ ಹೇಳಿದ ಮಾತನ್ನು ಆದರಿಸಿದ್ದು. ಎಷ್ಟೋಬಾರಿ ನಮಗೆ ಹೇಳಿದವರಿಗೂ ಬೇರೆಯವರು ಹೇಳಿದ್ದೇ ಆಗಿರುತ್ತದೆ.
ಹೆಚ್ಚಾಗಿ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಮಾತುಗಳು ಹೀಗೆಯೇ ಆಗಿರುತ್ತದೆ. ಯಾವುದೇ ಹುಡುಗಿಯ ಜಾತಕ ಬಂದರೂ, ಯಾರಾದರೂ ಒಬ್ಬರು "ಅವಳು ಸರಿಯಿಲ್ಲ" ಎನ್ನುತ್ತಾರೆ. "ಅವಳು ಅವನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ" ಎನ್ನುತ್ತಾರೆ. ನಾವದನ್ನು ನಮ್ಮ ಬದುಕಿನ ಧ್ಯೇಯವೆಂದೇ ಸ್ವೀಕರಿಸುತ್ತೇವೆ. ಆ ಹುಡುಗಿಯ ಹೆಸರು ಬಂದಾಗಲೆಲ್ಲ ಅದನ್ನೂ ಪ್ರಚಾರ ಮಾಡಲಾರಂಭಿಸುತ್ತೇವೆ.
ಹಾಗೆಯೇ ಯಾರಾದರೂ ಗಂಡಸಿನ ಕುರಿತು "ಅವನು ವುಮನೈಜರ್" ಎನ್ನತೊಡುಗುತ್ತೇವೆ.ಅದಕ್ಕೆ ಸಾಕ್ಷಿ? ನಮ್ಮ ಕಣ್ಣಂತೂ ಅಲ್ಲ, ಬೇರೆಯವರ ನಾಲಗೆ. ಅವರಿಗೆ ಸಾಕ್ಷಿ? ಅವರ ಕಿವಿ, ಅದರಲ್ಲಿ ಸುತ್ತುಹಾಕುತ್ತಿರುವ ಇನ್ನಾರದೋ ನಾಲಗೆ. ವಾಸ್ತವವಾಗಿ ಯಾರೂ ಯಾರ ಸಂಬಂಧವನ್ನೂ ಕಂಡಿರುವುದಿಲ್ಲ. ಬರೀ ಅನುಮಾನ ಮಾತ್ರ. ಹುಡುಗಿಯರೊಂದಿಗೆ ಮಾತನಾಡಿದ್ದನ್ನು ನೋಡಿರುತ್ತೇವೆ; ಹೋಟ್ಳಲ್ಲೋ, ಮದುವೆ ಮನೆಯಲ್ಲೋ, ಪೇಟೆಯಲ್ಲೋ ಒಟ್ಟಿಗೆ ನಿಂತಿದ್ದನ್ನು ಕಂಡಿರುತ್ತೇವೆ. ಕಾಣದಿರುವುದೆಲ್ಲ ನಮ್ಮ ಕವಿತ್ವದ ಸಾಮರ್ಥ್ಯ ಅಷ್ಟೇ.

ಇತ್ತೀಚೆಗೆ ನನಗೆ ಗೊತ್ತಾದ ಒಂದು ಘಟನೆ. ಒಬ್ಬರ ಬಗ್ಗೆ ಅವರ ಹತ್ತಿರದವರು ನೈತಿಕತೆಯ ಕುರಿತು ಅವರ ಹತ್ತಿರದ ಇನ್ನೂ ಕೆಲವರಲ್ಲಿ ಮಾತನಾಡುತ್ತಾರೆ. ಅವರು ಬೇರೆಯವರಲ್ಲಿ ಹೇಳುತ್ತಾರೆ. ಅವರು ಮತ್ತೊಬ್ಬರಲ್ಲಿ.........
ವಾಸ್ತವವೆಂದರೆ ಇಡೀ ಪ್ರಕರಣದದಲ್ಲಿ ಮಾತನಾಡಿದ್ದು ಕಿವಿಯೇ ಹೊರತು ಕಣ್ಣಲ್ಲ.

ಹೀಗೆ ತನ್ನದೇ ವೃತ್ತದಲ್ಲಿ ತನ್ನ ಬಗ್ಗೆ ಇಂತಹ ಮಾತುಗಳು ಪ್ರಸಾರಗೊಳ್ಳತೊಡಗಿದರೆ - ಅದು ಆ ವ್ಯಕ್ತಿಗೆ ಗೊತ್ತಾದರೆ, ಅವರಿಗೆಷ್ಟು "ಶಾಕ್" ಆಗಬಹುದು? ಅವರಿಗೆ ಜೀವನದಲ್ಲಿ ಲವಲವಿಕೆ ಎಷ್ಟು ಉಳಿಯಬಹುದು? ತನ್ನ ವೃತ್ತದ ವ್ಯಕ್ತಿಗಳ ಕುರಿತು ಅವರಲ್ಲಿ ಎಂತಹ ಭಾವನೆ ರೂಪುಗೊಳ್ಳಬಹುದು? ಯಾಕೆಂದರೆ ದೋಷ - ದೌರ್ಬಲ್ಯಗಳನ್ನು ಪ್ರಸಾರ ಮಾಡದಿರುವವರಿಗೆ ತಾನೇ ಆತ್ಮೀಯರೆನ್ನುವುದು? ಹಾಗಿರುವಾಗ ಸುಳ್ಳು ಸುದ್ದಿಗೆ ಕೈ ಕಾಲು ಜೋಡಿಸುವವರಿಗೆ ಆತ್ಮೀಯರೆನ್ನಲಾದೀತೇ?ಅವರೊಂದಿಗೆ ಮುಂದೆ ಬದುಕಲಾದೀತೇ?

ಮತ್ತೆ "ಪದ್ಮಪ್ರಿಯಾ" ಪ್ರಕರಣಕ್ಕೆ ಬಂದರೆ-
ಪದ್ಮಪ್ರಿಯಾ ಪತಿಯೊಂದಿಗೆ ಬದುಕಲಾರದ ಹಂತಕ್ಕೆ ಬಂದಿದ್ದರೆ ಅದಕ್ಕೆ ಅವರ ಕಾಮತೃಷೆಯೇ ಕಾರಣವಾಗಬೇಕೇ? ಗಂಡ - ಹೆಂಡಿರ ನಡುವೆ ಇರುವುದು ಕಾಮವೊಂದೆಯೇ? ಭಾವನಾತ್ಮಕವಾಗಿ ತುಂಬಬೇಕಾದ್ದನ್ನು ಭಟ್ಟರು ಒಂದೊಮ್ಮೆ ತುಂಬಿಕೊಡದಿದ್ದರೆ, ಆಗ ಬದುಕು ಅಸಹನೀಯವೆನಿಸಿರಬಹುದು. ತುಂಬಿಕೊಡುವ ಸ್ವಭಾವ ಅತುಲ್ ರಾವ್ ರಲ್ಲಿ ಕಂಡಿರಬಹುದು. ಇದನ್ನು ನೈತಿಕ ಅಧಃಪತನ ಎನ್ನುವಂತಿಲ್ಲ. { ಭಾರತೀಯ ಸಂಸ್ಕೃತಿಯ ನೇರದಲ್ಲಿ ಇದು ಸರಿಯೇ? ಎನ್ನುವುದು ಬೇರೆ ಚರ್ಚೆಯ ವಿಷಯ.} ಹಾಗಾಗಿ "ಅತುಲ್ ರೊಂದಿಗೆ ಸಂಬಂಧವಿತ್ತು" ಎನ್ನುವ ಕೊಳಕು ಮಾತನ್ನು ಆಡುವಂತಿಲ್ಲ.
ಪದ್ಮಪ್ರಿಯಾ ಸತ್ತರು. ಅದಕ್ಕೆ ರಘುಪತಿಭಟ್ಟರ "ಕಚ್ಚೆ ಹರುಕುತನ" ಕಾರಣ ಅಂತ ಸಾರಾಸಗಾಟಾಗಿ ಉದ್ಘೋಷಿಸಲು ಹೇಗೆ ಸಾಧ್ಯ? ನಮ್ಮೂರ ಭಾಷೆಯಲ್ಲಿ ಹೇಳುವುದಾದರೆ - ಮಾತನಾಡುವವರು "ಬ್ಯಾಟರಿ" ಬಿಟ್ಟಿದ್ದರೇ?
ಅವರ ದಾಂಪತ್ಯ ವಿರಸಕ್ಕೆ ಸಾವಿರ ಕಾರಣಗಳಿರಬಹುದು. ಅದು ಭಟ್ಟರದ್ದೂ ಆಗಿರಬಹುದು; ಪದ್ಮಪ್ರಿಯಾರದ್ದು ಆಗಿರಬಹುದು; ಇಬ್ಬರದ್ದೂ ಆಗಿರಬಹುದು; ಇಬ್ಬರದ್ದೂ ಅಲ್ಲದಿರಬಹುದು. ಮಾತನಾಡುತ್ತಿರುವ ಎಲ್ಲರ ಮುಂದೆ ಭಟ್ಟರು ಮತ್ತು ಪದ್ಮಪ್ರಿಯಾರ ಹುಟ್ಟಿದಂದಿನಿಂದ ಇಂದಿವರೆಗಿನ ಪ್ರತಿಕ್ಷಣದ ಘಟನೆಗಳು ರಜತಪರದೆಯಲ್ಲಿ ಬಿತ್ತರಗೊಂಡಿದೆಯೇ? ಹಾಗಿಲ್ಲದಿದ್ದ ಮೇಲೆ ಯಾರದೋ ಮಾತುಗಳನ್ನು ಕೇಳಿ "ಭಟ್ಟರು ಸರಿಯಿರಲಿಲ್ಲ, ಅದಕ್ಕೆ ಹೀಗಾಯಿತು" ಎನ್ನುವುದು ಹೇಗೆ ಸರಿ?

"ಪದ್ಮಪ್ರಿಯಾ ತಾವೇ ಸತ್ತರು.
ಭಟ್ಟರನ್ನು ನಾವು ಸಾಯಿಸುತ್ತಿದ್ದೇವೆ.
ಅಷ್ಟೇ ಅಲ್ಲ, ತಮ್ಮ ಹೆತ್ತವರ ಬಗ್ಗೆ ಹೀನಾತಿಹೀನ ಮಾತುಗಳನ್ನು ಕೇಳುತ್ತಿರುವ ಅವರ ಇಬ್ಬರು ಮಕ್ಕಳನ್ನು ಚಿತ್ರಹಿಂಸೆ ಕೊಟ್ಟು ಕೊಟ್ಟು ಸಾಯಿಸುತ್ತಿದ್ದೇವೆ"
ಅಂತ ಅನ್ನಿಸುವುದಿಲ್ಲವೇ?






Monday 23 June, 2008

ಓದಲೊಂದು ಪುಸ್ತಕ

ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಸಾಹಿತಿಗಳ ಸ್ಮೃತಿ" ಓದುತ್ತಿದ್ದೆ. ಚೇತೋಹಾರಿ ಅನುಭವ. ಓದಹೊರಡುವ ಮುನ್ನ ಇಂತದ್ದೊಂದು ಮಧುರಾನುಭವದ ನಿರೀಕ್ಷೆಯೇ ಇರಲಿಲ್ಲ
ಕಿಡ್ನಿಸ್ಟೋನಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಸೇರಿದ ಸಂಧರ್ಭ. ಹೊತ್ತುಕಳೆಯಲು ಹೊತ್ತಿಗೆ ಬೇಕೆನಿಸಿದಾಗ ಡಾ.ಚಿತ್ರಲೇಖ ತಂದುಕೊಟ್ಟ ಪುಸ್ತಕಗಳಲ್ಲಿ ಒಂದು ಪುಸ್ತಕ ಗಮನ ಸೆಳೆಯಿತು. ಅದು ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಯೇಗ್ದಾಗೆಲ್ಲಾ ಐತೆ" ಗ್ರಂಥ ಅಲ್ಲಲ್ಲಿ ಶಾಸ್ತ್ರಿಗಳ ಹೆಸರು ಕೇಳಿದ್ದನೆ ಹೊರತು ಅವರನ್ನು ಓದಿರಲಿಲ್ಲ. ಸರಿ, ನೋಡೋಣ ಎಂದು ಕೊಂಡು ಓದತೊಡಗಿದೆ.
ಚಿಕಿತ್ಸೆ ಮುಗಿಯಿತು, ವಿಚಿಕಿತ್ಸೆ ಹಾಗೇ ಉಳಿಯಿತು. ಶಾಸ್ತ್ರಿಗಳು ಮನದಲ್ಲಿ ಪ್ರಶ್ನೆಯಾಗಿಯೇ ಉಳಿದರು.

ಗುರುಕುಲದ ಗ್ರಂಥಧಾಮಕ್ಕೆ ಹೊಸರೂಪ ಕೊಡುವ ಪ್ರಯತ್ನದಲ್ಲಿದ್ದಾಗ "ಸಾಹಿತಿಗಳ ಸ್ಮೃತಿ" ಗಮನ ಸೆಳೆಯಿತು. ಓದು ಸಾಗಿತು..................

ಮಾಸ್ತಿ - ಡಿ.ವಿ.ಜಿ - ಬೇಂದ್ರೆ - ರಾಜರತ್ನಂ - ವಿ.ಸಿ. - ದೇವುಡು ಹೀಗೆ ಆ ಕಾಲದ ಸಾಹಿತಿಗಳ ಸಂಗದ ಸವಿನೆನಪು ಪುಸ್ತಕದಲ್ಲಿ ಬಿತ್ತರಗೊಂಡಿದೆ. ಪುಸ್ತಕ ಕಿರಿದು. ಒಳಗೂ ಅಷ್ಟೇ. ದೀರ್ಘ ಲೇಖನಗಳಿಲ್ಲ, ಒಂದೂವರೆಯಿಂದ ಎರಡೂವರೆ ಪುಟದ ಪುಟ್ಟಲೇಖನದ ಗುಚ್ಛ. ಶೈಲಿಯೂ ಹಾಗೆಯೇ. ಅನುಭವಿಸಿದ್ದನ್ನು ನೇರವಾಗಿ ಹೇಳಿದ್ದು.

ಆ ಮಹನೀಯರುಗಳ ಸರಳ, ಆದರೆ ಉದಾತ್ತ ಜೀವನವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ ಈ ಗ್ರಂಥ. ಅವರ ಜೀವನದ ಸಣ್ಣ ಸಣ್ಣ ಘಟನೆಗಳು ಬದುಕಿಗೆ ದೊಡ್ಡ ಪಾಠ ನೀಡುತ್ತವೆ.

ಬೇಂದ್ರೆ ಆಡುವ ಈ ಮಾತೊಂದು ಸಾಕು, ಪುಸ್ತಕದ ಉಪಯುಕ್ತತೆಯನ್ನರುಹಲು-
"ಸುಖ ಅಂದರೆ ಹಿತ. ಅದು ನಮ್ಗು ಹಿತ, ಪಕ್ಕದಲ್ಲಿದ್ದವರಿಗೂ ಹಿತ, ಸರ್ವರಿಗೂ ಹಿತ ಆದಾಗ ಸುಖ ಆಗ್ತದ".
ಓದ್ತೀರಲ್ಲಾ ಗೆಳೆಯರೇ!