Sunday 21 December, 2008

ಎಂಟರ ಗಂಟು....ಇರಲದರ ನಂಟು....

ಧರ್ಮ ಮಾನವೀಯ. ಅಮಾನವೀಯತೆ ಧರ್ಮಕ್ಕೆ ಸಲ್ಲುವಂತದ್ದಲ್ಲ. ಧರ್ಮ ಮೈಗೂಡಿದರೆ ಅದು ವ್ಯಕ್ತಿತ್ವದ ಪರಿಪೂರ್ಣತೆ. ವ್ಯಕ್ತಿ ಪೂರ್ಣಗೊಳ್ಳಬೇಕು. ಹಾಗಿದ್ದರೆ ಧರ್ಮ ಮೈಗೂಡಬೇಕು. ಅದು ಹೇಗೆ? ಧರ್ಮದ ಸಾಧಾರಣತೆ ನಮ್ಮದಾಗಬೇಕು. ಆಗ ಅದು ಸಾಧ್ಯ.

ಧರ್ಮಕ್ಕೆ ಎಂಟು ಅಂಶಗಳು. ಹಾಗೆಂದು ಬೃಹಸ್ಪತಿಯ ನುಡಿ. ಯಾವುದದು ಎಂಟು?
೧. ದಯಾ ೨. ಕ್ಷಮಾ ೩. ಅನಸೂಯಾ ೪. ಶೌಚ
೫. ಅನಾಯಾಸ ೬. ಮಂಗಲ ೭. ಅಕಾರ್ಪಣ್ಯ ೮. ಅಸ್ಪೃಹಾ

ದಯೆಯೆಂದರೆ....

ಮೊದಲಿನದ್ದು 'ದಯಾ'. ಅದೊಂದು ಜೀವರಸ. ಅದು ಹರಿದಲ್ಲಿ ಕೊರಡು ಕೊನರೀತು. ಅದಕ್ಕೆ ಭೇದದ ಭಾವವಿಲ್ಲ. ಅದರ ನೋಟದಲ್ಲಿ ಎಲ್ಲವೂ ಸಮಾನ. ಎಲ್ಲದರ ಹಿತವೇ ಅದರ ಮತ. ಎಲ್ಲರನ್ನೂ ರಕ್ಷಿಸುತ್ತದೆ ಅದು. ಬಂಧುವನ್ನೂ - ಬಂಧುವಲ್ಲದವನನ್ನೂ, ಮಿತ್ರನನ್ನೂ - ಶತ್ರುವನ್ನೂ ಕಾಪಾಡುವ ತವಕ ಅದರದ್ದು. ಅದಿಲ್ಲದೆ ನಡೆದ ಸಂಘರ್ಷಗಳೆಷ್ಟೋ? ಯುದ್ಧಗಳೆಷ್ಟೋ? ಹರಿದ ರಕ್ತದ ಧಾರೆ ಅದೆಷ್ಟೋ? ಅದಿರುವವರಿಂದ ಲೋಕಕ್ಕೆ ದೊರೆತ ಶಾಂತಿ ಇನ್ನದೆಷ್ಟೋ? ಅದೇ ದಯೆ.

ಕ್ಷಮೆಯೆಂದರೆ....

ಎರಡನೆಯದ್ದು 'ಕ್ಷಮಾ'. ಅದೊಂದು ದೃಢತೆ. ಹೊರನೋಟಕ್ಕದು ಅಸಮರ್ಥತೆ. ಹಾಗೆನಿಸುತ್ತದೆ, ಆದರದು ಹಾಗಲ್ಲ. ಅದು ಅತ್ಯಂತ ಗಟ್ಟಿತನ. ಬದುಕಿನ ಮೇಲೆ ಆಘಾತಗಳು ಸಹಜ. ಕೆಲವೊಮ್ಮೆ ಅದು ವ್ಯಕ್ತಿನಿರ್ಮಿತ. ಆಗ ನಮ್ಮನ್ನಾವರಿಸುತ್ತದೆ ಕೋಪ. ಕೋಪದ ಮುಂದಿನ ಹೆಜ್ಜೆ ಹಿಂಸೆ. ಹಾಗಾಗದಿರುವಿಕೆಯೇ ಕ್ಷಮೆ. ಅಂದರೆ ಕೋಪಗೊಳ್ಳದಿರುವುದು. ಹಿಂಸೆ ಮಾಡಿದವನ ವಿಷಯದಲ್ಲಿಯೂ ಅಹಿಂಸೆ. ಅಳು ತರಿಸಿದವನಿಗೆ ನಗು. ಹೊಡೆದವನಿಗೆ ಹೂವಿನ ಮಾಲೆ. ಮನದಲ್ಲಿ ಕೋಪವಿಲ್ಲ ; ಮಾತಿನಲ್ಲಿ ಬೈಗುಳಿಲ್ಲ ; ಕರದಲ್ಲಿ ಕರವಾಲವಿಲ್ಲ. ಇದು ಕ್ಷಮೆ.

ಅನಸೂಯೆಯೆಂದರೆ....

ಮೂರನೆಯದ್ದು 'ಅನಸೂಯಾ'. ಅಸೂಯೆ ಇಲ್ಲದಿರುವಿಕೆಗೆ ಆ ಹೆಸರು. ಅದಿರುವುದು ಹೇಗೆ? ಗುಣವಂತರ ಕಂಡರಾಗದು. ಕಣ್ಣು ಕುಕ್ಕುತ್ತದೆ ಅದರ ಗುಣ. ಗುಣ ಕಡಿಮೆಯಿದ್ದರೆ? ಹಬ್ಬದೂಟ ಸಿಕ್ಕಂತಾಯಿತು. ಟೀಕೆಯ ಸುರಿಮಳೆ ಆರಂಭ. ಒಂದಿಷ್ಟು ದೋಷಗಳು ಕಂಡರಂತೂ, ಬಿಡಿ ; ಮುಗಿದೇ ಹೋಯಿತು. ಅದು ಮದುವೆ ಊಟವೇ ಸರಿ. ಟೀಕೆ - ನಿಂದೆ - ಅವಹೇಳನ ಎಲ್ಲದರ ಮಹಾಪ್ರವಾಹ. ಇದು ನಮ್ಮ ಸ್ಥಿತಿ. ಇದೇಕೆ ಹೀಗೆ? ಅದು ಹೀಗೆಯೇ. ಇದೊಂದು ತರಹದ ಮನೋವ್ಯಾಧಿ. ಒಳಿತನ್ನು ಒಳಿತೆಂದುಕೊಳ್ಳಲಾರೆವು. ಅದರಲ್ಲಿರುವ ತಪ್ಪಲ್ಲೇ ನಮಗೆ ಅಭಿರುಚಿ. ಸುಂದರವಾದ ದೇಹದ ಯಾವ ಸ್ಥಳವೂ ನೊಣಕ್ಕಾಗದು. ಕೀವು ತುಂಬಿದ ಹುಣ್ಣೇ ಅದಕ್ಕೆ ಬೇಕು. ಬೇರೆಯವರ ಉತ್ಕರ್ಷದೆಡೆಗೆ ಅಸಹನೆ. ಅದಕ್ಕೆ ಅಸೂಯೆಯೆಂದು ಹೆಸರು. ಅದಿಲ್ಲದಿರುವುದೇ 'ಅನಸೂಯಾ'.

ಶೌಚವೆಂದರೆ....

ನಾಲ್ಕನೆಯದು ಶುಚಿತ್ವ. ಕೊಳಕು ಸೃಷ್ಟಿಗೆ ಸಹಜ. ಈ ಕ್ಷಣ ಫಳಫಳನೆ ಹೊಳೆಯುತ್ತಿದೆ ಕ್ಟಕಿಯ ಗಾಜು. ಐದು ನಿಮಿಷ ಬಿಟ್ಟಾಗ ಧೂಳು ಧೂಳು. ಸ್ವಚ್ಛವಾಗಿ ತೊಳೆದ ಬಟ್ಟೆ. ನಾಳೆ ಮತ್ತೆ ತೊಳೆಯುವುದೇ. ಇದು ಬಹಿರಂಗದ ಮಾತಾಯಿತು. ಅಂತರಂಗವೂ ಅಂತೆಯೇ. ಶುದ್ಧವೆಂದು ಅಂದುಕೊಂಡಿರುತ್ತೇವೆ ನಾವು. ಅದಾಗಲೇ ಸಂಸ್ಕಾರ ಕಳೆದುಕೊಂಡಿರುತ್ತದೆ.ಹೊರ ಬದುಕಿನಲ್ಲೊಂದು ಸ್ವಚ್ಛತೆ, ಒಳ ಬದುಕಿಗೊಂದು ಸಂಸ್ಕಾರ. ಇದೊಂದು ನಿರಂತರ ಪ್ರಕ್ರಿಯೆ. ಸಾಗುತ್ತಲೇ ಇರಬೇಕು. ಅದು 'ಶೌಚ'.

ಅನಾಯಾಸವೆಂದರೆ....

ಐದನೆಯದ್ದು 'ಅನಾಯಾಸ'. ಶರಿರ ಒಂದು ಅಚ್ಚರಿ. ಜೀವಂತ ಶರೀರ ಇಂದಿಗೂ ವಿಜ್ಞಾನಕ್ಕೆ ವಿಸ್ಮಯ. ಅದರ ಪ್ರತಿಸೃಷ್ಟಿ ಅಸಂಭವ. ಹಾಗೆಯೇ ಅದರ ಚಿರಂಜೀವಿತೆಯೂ. ಅದಿದ್ದರೆ ಜಗವುಂಟು. ಅದಿಲ್ಲದಿದ್ದರೆ ಜಗವಿಲ್ಲ. ಅದರ ಪಾಲನೆ ಅಪೇಕ್ಷಿತ. ಅನಿವಾರ್ಯವೂ ಕೂಡ. ಅದು ಬೇಯಬಾರದು. ಬಸವಳಿಯಬಾರದು. ಸವೆಯಬಾರದು. ಒಣಗಬಾರದು. ಅದು ಆಯಾಸಗೊಳ್ಳಲೂಬಾರದು. ಬದುಕಿಗೆ ಬೇಕಾದ ಕಾರ್ಯವೇ ಇದ್ದೀತು. ಅದರಿಂದ ದೇಹಕ್ಕೆ ತಡೆಯಲಾರದ ಆಯಾಸ ಸರಿಯಲ್ಲ. ಹಾಗಿರುವುದು 'ಅನಾಯಾಸ'.

ಮಂಗಲವೆಂದರೆ....

ಆರನೆಯದ್ದು 'ಮಂಗಲ'. ಕ್ರಿಯೆಯಿಲ್ಲದೆ ಬದುಕಿಲ್ಲ. ಕ್ರಿಯೆಯೇ ಬದುಕೆಲ್ಲ. ಮಾಡುತ್ತಲೇ ಇರುತ್ತೇವೆ. ಏನನ್ನು? ಏನೇನನ್ನೋ. 'ಏನಾದರೂ ಮಾಡುತಿರು ತಮ್ಮ' ಎಂದಿದ್ದಾರಲ್ಲ. ಮಾಡುತ್ತಲೇ ಇದ್ದೇವೆ. ಅದರಿಂದೇನಾಯ್ತು? ಅನುಕೂಲವೂ ಪ್ರತಿಕೂಲವೂ. ಕೆಲವು ಬೇರೆಯವರಿಗೆ ಪ್ರತಿಕೂಲ. ಕೆಲವು ಒಳ್ಳೆಯ ಕಾರ್ಯ. ಕೆಲವು ಕೆಡುಕು. ಕೆಲವು ಲೋಕ ಮೆಚ್ಚುವಂತದ್ದು. ಲೋಕ ನಿಂದಿಸುವ ಕಾರ್ಯ ಅಮಂಗಲ. ಲೋಕ ಪ್ರಶಂಸಿಸುವ ಕಾರ್ಯ 'ಮಂಗಲ'.

ಅಕಾರ್ಪಣ್ಯವೆಂದರೆ....

ಏಳನೆಯದ್ದು 'ಅಕಾರ್ಪಣ್ಯ'. ಕೊಡುವಿಕೆ ಸೃಷ್ಟಿಯ ಧರ್ಮ. ಅದೇ ಅದರ ಬೆಳವಣಿಗೆಗೆ ಸಾಧನ. ಅದರ ಉಳಿವಿಕೆಗೂ ಅದೇ ಕಾರನ. ಒಂದು ಇನ್ನೊಂದಕ್ಕೆ, ಅದು ಮತ್ತೊಂದಕ್ಕೆ, ಹೀಗೆ ಕೊಡುವಿಕೆಯಿಂದ ಸಾಗಿದೆ ಪ್ರಪಂಚ. ಕೊಡುವಿಕೆ ಕಾಯಕವಾಗಬೇಕು. ಅದೂ ಪ್ರತಿನಿತ್ಯ. ಸಾಮರ್ಥ್ಯದಷ್ಟು ದಾನ ಪ್ರಶಸ್ತ. ಕೊಡುವ ಮನವಿಲ್ಲದಿರುವುದು ಕಾರ್ಪಣ್ಯ. ಅದೇ ಜಿಪುಣತನ. ಅದಿಲ್ಲದಿರುವುದು ಔದಾರ್ಯ. ಅದೇ 'ಅಕಾರ್ಪಣ್ಯ'.

ಅಸ್ಪೃಹವೆಂದರೆ....

ಎಂಟನೆಯದ್ದು 'ಅಸ್ಪೃಹಾ'. ವಸ್ತುಗಳು ಬೇಕು. ಸುಖ ಜೀವನಕ್ಕದು ಸಾಧನ. ಬದುಕೆಲ್ಲ ವಸ್ತುಸಂಗ್ರಹಕ್ಕೇ ಪ್ರಯತ್ನ. ಮನೆ ತುಂಬಿದರೂ ತೃಪ್ತಿಯಿಲ್ಲ. ಅನ್ಯರ ವಸ್ತುವಿನ ಮೇಲೆ ಕಣ್ಣು. ಅದಾದ ಮೇಲೆ ಭೂಮಿ. ಮೊಮ್ಮಕ್ಕಳಿಗೂ ಸಾಕು. ಆದರೂ ಹಪಹಪಿಕೆ. ಹಣವೂ ಹಾಗೆಯೇ. ಎಷ್ಟಿದ್ದರೂ ಸಾಲದು. ಇದು ಸ್ಪೃಹಾ. ಪರರ ವಸ್ತುವಿನ ಮೇಲೆ ಆಸೆಯಿಲ್ಲ. ತನಗೆ ದಕ್ಕಿದ್ದಷ್ಟೇ ತನ್ನದು. ದುಡಿಮೆ ನ್ಯಾಯಯುತ. ಅನ್ಯಾಯದ ಸಂಪಾದನೆಯಿಲ್ಲ. ಅತ್ಯಾಸೆ ಮೊದಲೇ ಇಲ್ಲ.ಅದು 'ಅಸ್ಪೃಹಾ'.

ಎಂಟರ ನಂಟಿರಲಿ....

ಇಂತಹ ಧರ್ಮ ನಮ್ಮದಿರಲಿ. ಅದು ನಮ್ಮ ಮೈಗೂಡಿರಲಿ. ಅದರ ಗೂಡಲ್ಲಿ ನಮ್ಮ ತಾವಿರಲಿ. ಅದು ನಮಗೂ ಹಿತ. ಪರರಿಗೂ ಹಿತ.


(ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ)

Saturday 20 December, 2008

ಮನುಭಾಷಿತ - 8

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

"ಧನಸಂಗ್ರಹ" ಆಧುನಿಕ ಜನಜೀವನದ ಪ್ರಮುಖೋದ್ದೇಶ. ಶಯನದಿಂದ ಕಣ್ದೆರೆಯುವುದೇ ಧನಪ್ರಾಪ್ತಿಗಾಗಿ ; ಸಹಜೀವಿಗಳೊಂದಿಗೆ ಸಂವಾದವೂ ಧನಾಗಮನಕ್ಕಾಗಿ ; ಪರಿಸರದೊಂದಿಗೆ ಒಡನಾಟವೂ ಅರ್ಥಸಂಪತ್ತಿಗಾಗಿ ; ಅಷ್ಟೇಕೆ, ಶಿಕ್ಷಣವನ್ನು ಸಂಪಾದಿಸುವುದೂ ಧನಸಂಪಾದನೆಗಾಗಿಯೇ.

ಧನದ ಹಿಂದೆ ಓಡುತ್ತಿದೆ ಹುಚ್ಚು ಕುದುರೆಯಂತೆ ಜಗತ್ತಿನ ಮನಸ್ಸು.

ಆಧುನಿಕ ಜಗತ್ತಿನ ಸರ್ವಕ್ಷೀಣತೆಗೆ ಧನದಾಹವೇ ಕಾರಣವೆಂದರೆ ಸೂರ್ಯಸ್ಪಷ್ಟ ಸಂಗತಿಯೇ ಸರಿ.

ಹಣಕ್ಕಾಗಿ ಬದುಕಿನೆಲ್ಲ ಕ್ಷಣಗಳನ್ನು ವಿನಿಯೋಗಿಸುವ ಮನಸ್ಸುಗಳು ಇಲ್ಲಿವೆ.

ಹಣಕ್ಕಾಗಿ ತಂದೆ - ತಾಯಿ - ಹೆಂಡತಿ - ಮಕ್ಕಳು - ಮಿತ್ರರು - ಸಂಬಂಧಿಗಳು....ಎನ್ನುವ ಎಲ್ಲ ಮಾನವೀಯ ಸಂಬಂಧಗಳನ್ನು ಛಿದ್ರಗೊಳಿಸುವ ಘಟನೆಗಳು ಹುಚ್ಚೆದ್ದು ಕುಣಿಯುತ್ತಿವೆ.

ಹಣಕ್ಕಾಗಿ ಅನ್ಯರ ಬದುಕಿನ ಸುಮಸದೃಶ ಸುಖಮಯ ಕ್ಷಣಗಳನ್ನು ಹೊಸಕಿ ಹಾಕುವ ಕ್ರೂರತೆ ಜಗತ್ತನ್ನು ದಹಿಸುತ್ತಿದೆ.

ಹಣಕ್ಕಾಗಿ ಮನುಷ್ಯ ಎಷ್ಟು ಕಾಲಕ್ಕೂ ನೀಡಲಸಾಧ್ಯವಾದ ಜೀವವನ್ನೇ ಹರಣಮಾಡುವ ಭೀಭತ್ಸತೆಯೂ ನಮ್ಮ ಮುಂದಿದೆ.

ಇದನ್ನೇ ಕವಿಹೃದಯ ಅನುರಣಿಸುತ್ತಿದೆ-

"ಕುರುಡು ಕಾಂಚಾಣ ಕುಣಿಯುತಲಿತ್ತು, ಎದುರಿಗೆ ಬಂದವರ ತುಳಿಯುತಲಿತ್ತು" ಎಂದು.

ಆಧುನಿಕದ ಈ ಅಪರಿಹಾರ್ಯವೆನಿಸಿದ ಸಮಸ್ಯೆಗೆ ಪ್ರಾಚೀನ ಮನುಭಾಷಿತದ ಪರಿಹಾರ?

ಇಂತಿದೆ-

ಯಾತ್ರಾಮಾತ್ರಪ್ರಸಿದ್ಧ್ಯರ್ಥಂ ಸ್ವೈಃ ಕರ್ಮಭಿರಗಱಿತೈಃ |
ಅಕ್ಲೇಶೇನ ಶರೀರಸ್ಯ ಕುರ್ವೀತ ಧನಸಂಚಯಮ್ ||

ಜೀವನದ ಪರಮೋದ್ದೇಶ ಸಾಧನೆಗಾಗಿ ಪ್ರಾಣಧಾರಣೆ. ಪ್ರಾಣಧಾರಣೆಗಾಗಿ ಧನಸಂಗ್ರಹ.

ಧನಸಂಗ್ರಹವೂ ತನಗೆ ವಿಹಿತವಾದ ಕರ್ಮಗಳಿಂದಲೇ. ಅದು ಕೂಡ ಶರೀರಶೋಷಣೆಯಿಲ್ಲದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Wednesday 3 December, 2008

ಸಂಪ್ರತಿ - ನಮ್ಮ ನಾಯಕರು....

ಭಾರತದ ಭವಿಷ್ಯದ ನಾಯಕರಲ್ಲೊಬ್ಬರೆಂದು ಬಿಂಬಿತರಾಗಿರುವ ನಮ್ಮ ರಾಹುಲ್ ಗಾಂಧಿ ಮುಂಬಯಿ ಹತ್ಯಾಕಾಂಡೋತ್ತರ ಶೋಕಕಾಲದಲ್ಲಿ ಸಂತೋಷಕೂಟದಲ್ಲಿ ಮೈಮರೆತಿದ್ದರಂತೆ. ಹಾಗೆಂದು ಪತ್ರಿಕೆಗಳು ವರದಿ ಮಾಡಿವೆ.

ಇದು ಪ್ರಜಾಪ್ರಭುತ್ವದ ವೈಖರಿ. ರಾಜಪ್ರಭುತ್ವವನ್ನು ಭಾರತ ತಿರಸ್ಕರಿಸಿದ ಕಾರಣಗಳು ಯಾವುದು ಎನ್ನುವುದೇ ತಿಳಿಯುತ್ತಿಲ್ಲ. ಜನನಾಯಕ ಜನರ ನಡುವಿನಿಂದ ಮೇಲೆದ್ದು ಬರಬೇಕು, ಅವನಿಗೆ ಬಡತನದ ದುಃಖದುಮ್ಮಾನಗಳೇ ಮುಂತಾದ ಜನರ ಸಂಕಷ್ಟಗಳ ಅರಿವಿರಬೇಕು, ಅವನು ವಂಶವಾಹಿ ಅಧಿಕಾರಿಯಾಗಿರದೇ ಜನರಿಂದ ಆಯ್ಕೆಯಾದವನಾಗಿರಬೇಕು,ಐಶಾರಾಮಿಯಾಗಿರಬಾರದು, ಅವನು ಕೋಟೆಯೊಳಗಿನ ಅರಮನೆಯ ಸಿಂಹಾಸನದಲ್ಲಿ ಹೊಗಳುಭಟರ ನಡುವೆ ವಿರಾಜಮಾನನಾಗಿರದೇ ಸಾಮಾನ್ಯರೊಂದಿಗೆ ಬೆರೆತಿರುವವನಾಗಿರಬೇಕು,.........

ನನಗೆ ಗೊತ್ತಿಲ್ಲ, ರಾಜಪ್ರಭುತ್ವದ ತಿರಸ್ಕಾರದ ಕಾರಣಗಳು. ಇವೆಲ್ಲ ಇರಬಹುದೇನೋ ಅಂತ.

ಸರಿ, ನಾವೇನು ಸಾಧಿಸಿದೆವು? ದೇಶದ್ರೋಹಿಗಳಿಗೆ ಆರ್ಥಿಕ ಸಹಾಯ ಘೋಷಿಸುವ ಅಮರ್ ಸಿಂಗ್ ರಂತವರು, ರಾಹುಲ್ ಗಾಂಧಿಯಂತವರು, ಪ್ರಜಾರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವರ ಕುಟುಂಬದವರನ್ನು ಅವಮಾನಿಸುವ ಅಚ್ಯುತಾನಂದನ್ ತರದವರು .......ಇವರೆಲ್ಲ ನಮ್ಮ ನಾಯಕರು.

ಮುಂದೇನು ಕಾದಿದೆಯೋ? ದೇವರಿಗೇ ಗೊತ್ತು.