Friday, 3 June, 2016

ಸೂತ್ರ-ಸುಸೂತ್ರ ೧

ಬ್ರಹ್ಮಸೂತ್ರ

|| ಜನ್ಮಾದ್ಯಸ್ಯ ಯತಃ ||

ಜಗತ್ತೊಂದು ಅದ್ಭುತ.
ಅದರ ಹುಟ್ಟು, ಅದರ ಇರುವಿಕೆ, ಅದರ ಇಲ್ಲವಾಗುವಿಕೆ ಇದನ್ನೆಲ್ಲ ಸಾಮಾನ್ಯನೊಬ್ಬ ಮಾಡಲಾರ.
ಎಲ್ಲವನ್ನು ತಿಳಿದವನು ಮತ್ತು ಎಲ್ಲವನ್ನು ಮಾಡಬಲ್ಲವನು ಮಾತ್ರ ಇದನ್ನೆಲ್ಲ ಮಾಡಬಲ್ಲ. ಅದೇ ಬ್ರಹ್ಮ, ಅವನೇ ಪರಮಾತ್ಮ.

Saturday, 30 June, 2012

'ಚುರುಕು-ಚಾವಡಿ' 2 ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!


ಸಂಪಜ ಎಂದರೆ?
              ಅಯ್ಯೋ ಹೆಸರಿನಲ್ಲೇನಿದೆ, ಬಿಡಿ..!

ಹುಟ್ಟಿನ ಗುಟ್ಟು...  
             ಜನ್ಮಾಂತರದ ಪಾಪದ ರಟ್ಟು...

ಮಾನವ ಜನ್ಮ ದೊಡ್ಡದೇಕೆ?    
             ತಪ್ಪಿನ ಅರಿವಾಗುವುದಕ್ಕೆ...

ಸಂಸಾರದ ಹುಚ್ಚು ಬಿಡಲು...     
             ಸಂಸಾರ ಹೆಚ್ಚು ಎಂಬುದ ಬಿಡಬೇಕು...

ಮೋಕ್ಷಕ್ಕೆ ಹೆದ್ದಾರಿ...   
             ಬಂಧನವ ಅರಿ...

ದುಡ್ಡು ದೊಡ್ಡಪ್ಪ..  ಚಿಕ್ಕಪ್ಪ
             ಅದರೊಂದಿಗೆ ಬರುವ ಭೋಗ...

ಅರಿವೇತಕೆ ಬೇಕು?  
               ಅರಿವಲ್ಲದ್ದ ಅರಿಯಲಿಕೆ...

ಮನಕೆ ನಿಲ್ದಾಣ...      
               ಮನದ ಆರಂಭ...

ಒಲವಿಗೂ ನಲಿವಿಗೂ ವೈರುಧ್ಯವೇಕೆ?      
               ಅಪಾತ್ರದಲ್ಲಿ ಇಡುವುದರಿಂದ...

ಸಾಯುವುದೇ ಆದರೆ ಹುಟ್ಟು ಏತಕೆ?  
               ಹೌದು! ಸಾಯುತ್ತೇವೆ, ಎಂದೇ ಹುಟ್ಟದಿರೋಣ...

ಲೋಕದಿ ಸೊಬಗಾವುದು?     
               ಹೆಣ್ಣು, ಹೊನ್ನು, ಮಣ್ಣು...

ದಾಸರು 'ಹುಚ್ಚಪ್ಪಗಳಿರಾ' ಎಂದದ್ದು ಯಾರಿಗೆ?      
                 ದೊಡ್ಡದ್ದನ್ನು ಸಣ್ಣದ್ದಾಗಿಸಿಕೊಂಡವರಿಗೆ...

ಜಗತ್ತಿನ ಮತ್ತಿಗೆ ಕಾರಣ?  
                 ಸೊತ್ತಿನ ಅರಿವಾಗದಿರುವುದು...

ಮಹಿಳೆಯರ ವಸ್ತ್ರತ್ಯಾಗವೂ ತ್ಯಾಗವಲ್ಲವೇ?  
                 ಹೌದು! ಮಾನ - ಮರ್ಯಾದೆಯ...

(ಧರ್ಮಭಾರತಿಯ ನನ್ನ ಅಂಕಣ)

Thursday, 28 June, 2012

ಚುರುಕು-ಚಾವಡಿ ೧ ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!!


ಅಹಂ ಉಳಿದರೆ...
               ಪರಂ ಇಲ್ಲ.

ದೇವರಿಗೆ ಬೇಕಾದದ್ದು...
               ಏನೂ ಬೇಡದಂತಾಗುವುದು.

ನನಗೆ ಗೊತ್ತಿಲ್ಲ ಎಂಬುದು....
              ಗೊತ್ತಾಗುವಿಕೆಯ ಲಕ್ಷಣ.

ಪೂಜೆಯ ಫಲ...
              ಪೂಜೆ ಮಾಡದಂತಾಗುವುದು.

ಸಂಘವಿರುವುದು...
              ನಿಸ್ಸಂಗನಾಗಿಸಲು.

ರಾಮ ನಾಮದಿಂದ...
              ಮಾರ ನಾಮಾವಶೇಷ.

ಸಾತ್ತ್ವಿಕನಾಗಲು ಬೇಕಾದದ್ದು...
              ರಾಜಸ - ತಾಮಸ.

(ಧರ್ಮಭಾರತಿಯ ನನ್ನ ಅಂಕಣ)Wednesday, 27 June, 2012

'ಚುರುಕು-ಚಾವಡಿ' - ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!


ಯೋಗವೆಂದರೇನು?
                       ಜೀವ-ದೇವರ ಸಂಗಮ...

ನಿಜವಾದ ಸುಖ ಯಾವುದು?
                       ಯಾವುದರಲ್ಲಿ ದುಃಖದ ಲವಲೇಶವೂ ಇಲ್ಲವೋ ಅದು...

ಎಲ್ಲರೂ ನಮ್ಮನ್ನು ಇಷ್ಟಪಡುವಂತಾಗಲು ಏನು ಮಾಡಬೇಕು?
                       ನಾವು ಎಲ್ಲರನ್ನೂ ಇಷ್ಟಪಡಬೇಕು...

ಯೋಚಿಸಲು ಹತ್ತು ತಲೆಯಿದ್ದರೂ ರಾವಣ ವಿಫಲನಾಗಿದ್ದೇಕೆ?
                       ಬೇರೆ ತಲೆಯನ್ನು ಉರುಳಿಸಲು ಹೊರಟಿದ್ದಕ್ಕೆ...

ಕಷ್ಟ ಕಾಲದಲ್ಲಿ ಕಾಪಾಡುವುದು ಯಾವುದು?
                      ಹಿಂದೆ ಮಾಡಿದ ಒಳ್ಳೆಯ ಕೆಲಸ...

ಶ್ರೀರಾಮ ವಾಲಿಯನ್ನು ಮರೆಯಲ್ಲಿ ನಿಂತು ಕೊಂದಿದ್ದು ಸರಿಯೇ?
                     ಸರಿಯೇ... ಯಾಕೆಂದರೆ ಅದು ಯುದ್ಧವಲ್ಲ, ಅಪರಾಧಿಗೆ ನೀಡಿದ ಶಿಕ್ಷೆ...

ಬದುಕಿನ ಗುರಿಯೇನು?
                      ತನ್ನನ್ನು ಪರಿಚಯಿಸಿಕೊಳ್ಳುವುದು...

(ಧರ್ಮಭಾರತಿಯ ನನ್ನ ಅಂಕಣ)

Sunday, 25 December, 2011

ಗುರುವೆ ಬದುಕಿನ ಗರಿಮೆ

ಗುರು ಬದುಕಿನ ಸರ್ವಸ್ವ.
ಅವನ ಒಲುಮೆಯಿದ್ದರೆ ಮಾತ್ರ ಜೀವನ ಸಾರ್ಥಕ. ಇಲ್ಲವಾದರೆ ಜೀವನ ನಿರರ್ಥಕ.

ಜೀವನದ ಅರ್ಥವೆಂದರೆ ಪರಮಾರ್ಥ.
ಅದಕ್ಕಾಗಿಯೇ ಬದುಕು; ಅದರಿಂದಲೇ ಬದುಕು; ಅದೇ ಬದುಕು.

ಪರಂಜ್ಯೋತಿಯೊಂದಿಗೆ ಒಂದಾಗುವುದೇ ಜೀವನಕ್ಕಿರುವ ಪ್ರಯೋಜನ.
ಯಾಕೆಂದರೆ ಇರುವುದು ಪರಂಜ್ಯೋತಿಯೊಂದೇ. ಇನ್ನೆಲ್ಲ ಇರುವಂತೆ ತೋರುವುದಷ್ಟೆ.
ಇದನ್ನೇ ಭಗವತ್ಪಾದರು 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ' ಎಂದರು.

ಇರುವುದು ಅದೊಂದೇ ಎಂದಮೇಲೆ ಜೀವದ ಜೀವಸ್ಥಿತಿಯೂ ಅಸ್ತಿತ್ವರಹಿತವೇ ಸರಿ. ಅದು ತತ್ಕಾಲದ ಸತ್ಯ. ನಿತ್ಯಸತ್ಯ 'ತತ್' ಎಂದೆನಿಸಿಕೊಳ್ಳುವ ಅದೇ 'ಅದು'. ಅದನ್ನು ಸೇರಬೇಕು.
ಅದೇ ಅಸ್ತಿತ್ವ, ಅದೇ ಅಸ್ಮಿತೆ.

ಸರಿ, ಸೇರುವುದಾದರೂ ಹೇಗೆ? ಎಲ್ಲಿ? ಎಂತು?
ಉತ್ತರಿಸುವವ ಬೇಕು. ಮಾತ್ರವಲ್ಲ, ಆತ ಎತ್ತರಿಸುವವನೂ ಆಗಿರಲೇಬೇಕು.
ಯಾರದು? ಇನ್ನಾರು....
"ಗುರು".

ಗುರುವಿನಾಶ್ರಯ ಬದುಕಿನ ಪರಮಾರ್ಥಕ್ಕೆ ಸಾಧಕ. ಗುರುವಿನಾಶಯವೂ ಅದೇ ತಾನೇ!
ಹಾಗಾಗಿ ಗುರು ಬೇಕು, ಗುರುವನ್ನು ನಂಬಬೇಕು, ಗುರುವನ್ನು ಆಶ್ರಯಿಸಬೇಕು, ಗುರುವನ್ನು ಆರಾಧಿಸಬೇಕು.

ಗುರುವಿನ ಆರಾಧನೆಗೆ ಹತ್ತು ಮಾರ್ಗಗಳು, ಹಲವು ವಿಧಾನಗಳು.

ಯಾವುದೇ ಮಾರ್ಗ, ಯಾವುದೇ ವಿಧಾನ ನಮ್ಮೆದುರು ತೆರೆದುಕೊಂಡರೂ ಅದನ್ನು ಬಳಸಿಕೊಳ್ಳೋಣ;
ಗುರುವಿನ ಅನುಗ್ರಹ ಧಾರೆಯಲ್ಲಿ ಮಿಂದು ಪುನೀತರಾಗೋಣ;
ಪರಮಾರ್ಥಪಥಿಕರಾಗೋಣ.

Wednesday, 21 December, 2011

ಆಸೆ ಮತ್ತು ಬಿಡುಗಡೆ

ಒಬ್ಬ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ. ಮನೆ ಸಂಸಾರ ಆಸ್ತಿ ಪಾಸ್ತಿ ಉದ್ಯೋಗ ಅಧಿಕಾರ... ಎಲ್ಲವನ್ನೂ ಬಿಟ್ಟು ಬಂದಿದ್ದ. ಆಸೆ ಮೋಹಗಳಿಂದ ದೂರವಾಗಿ ಕಾಡು ಸೇರಿದ್ದ. ಆಹಾರಕ್ಕಾಗಿಯೂ ಪ್ರಯತ್ನಿಸುತ್ತಿರಲಿಲ್ಲ. ಆ ಕಾಡಿನಲ್ಲಿದ್ದ ವನವಾಸಿ ಹುಡುಗಿಯೊಬ್ಬಳು ಅವನ ಮುಂದೆ ಪ್ರತಿದಿನ ಗಡ್ದೆಗೆಣಸು-ಹಣ್ಣುಹಂಪಲುಗಳನ್ನು ಇಟ್ಟು ಹೋಗುತ್ತಿದ್ದಳು. ಇವನ ತಪಸ್ಸು ದಿನದಿಂದ ದಿನಕ್ಕೆ ಉಗ್ರವಾಗುತ್ತಾ ಸಾಗಿತ್ತು. ಇಂದ್ರನಿಗೆ ಭಯ ಆರಂಭವಾಯಿತು, ಇವನ ತಪಸ್ಸು ಎಲ್ಲಿಗೆ ಬಂದು ನಿಂತೀತೋ ಎಂದು. ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸಿದ. ಎಂದಿನಂತೆ ಅಪ್ಸರೆಯನ್ನು ಕಳುಹಿಸದೆ ಕಾಡಿನ ಆ ಹುಡುಗಿಯನ್ನೇ ಸುಂದರಿಯಾಗಿಸಿದ. ತಪಸ್ವಿಯ ಮನಸ್ಸು ಅವಳತ್ತ ಆಕರ್ಷಿತವಾಯಿತು. ಅವಳಿಗೂ ಇಂದ್ರನ ಮಾಯೆಯಿಂದ ಅವನೆಡೆ ಆಕರ್ಷಣೆ ಹುಟ್ಟಿತು. ಆತ ಅವಳಲ್ಲಿ ಮದುವೆಯ ಆಸೆಯನ್ನು ವ್ಯಕ್ತಪಡಿಸಿದ, ಅವಳೂ ಒಪ್ಪಿದಳು. ಅಂದು ರಾತ್ರಿ ಅವಳಿಗೆ ತಾನು ತಪ್ಪು ಮಾಡುತ್ತಿದ್ದೇನೆಂದು ಅನ್ನಿಸತೊಡಗಿತು. ಯಾಕೆಂದರೆ ಬದಲಾದದ್ದು ಅವಳ ಹೊರರೂಪವೇ ಹೊರತು ಒಳಮನಸ್ಸಲ್ಲವಲ್ಲ! ತಪಸ್ವಿಯೂ ಚಿಂತಿಸತೊಡಗಿದ ತಾನೇಕೆ ಮತ್ತೆ ಮೋಹಕ್ಕೆ ಒಳಗಾದೆ ಎಂದು. ನಾಳೆ ಅವಳು ಬಂದಾಗ ನಿರಾಕರಿಸಬೇಕೆಂದುಕೊಂಡ. ಇತ್ತ ಹುಡುಗಿ ಆ ಕಾಡನ್ನೇ ಬಿಟ್ಟು ತೆರಳಲು ನಿರ್ಧರಿಸಿದಳು. ಬೆಳಗ್ಗೆ ತಪಸ್ವಿಯ ಸಮೀಪ ಬಂದವಳೇ ತನ್ನವರೊಂದಿಗೆ ಕಾಡಿನಿಂದ ಬೇರೆಡೆ ತೆರಳುವುದಾಗಿ ತಿಳಿಸಿದಳು. ಅವನೂ ಒಳ್ಳೆಯದಾಯಿತೆಂದುಕೊಂಡ. ತಪಸ್ಸು ಮುಂದುವರಿಯಿತು. ಅತ್ಯುಗ್ರವಾದ ತಪಸ್ಸು ಮಾಡತೊಡಗಿದ. ಎಷ್ಟೋ ಕಾಲ ಕಳೆಯಿತು. ಇಂದ್ರನಿಗೆ ಒಲಿಯುವುದರ ಹೊರತು ಬೇರೆ ದಾರಿಯೇ ಕಾಣಲಿಲ್ಲ. ಧರೆಗಿಳಿದು ಬಂದ; ತಪಸ್ವಿಯ ಮುಂದೆ ನಿಂದ; ಬೇಕಾದ ವರಕೊಡುವೆನೆಂದ; 'ನಿನ್ನ ತಪಸ್ಸಿಗೆ ಸ್ವರ್ಗ ನೀಡಲೋ? ಮೋಕ್ಷ ಕರುಣಿಸಲೋ' ಎಂದು ಕೇಳಿದ. ತಪಸ್ವಿ ಎರಡೂ ಬೇಡವೆಂದ. ಇಂದ್ರನಿಗೆ ಅಚ್ಚರಿ. 'ನಿನ್ನ ತಪಸ್ಸಿಗೆ ಇದಕ್ಕಿಂತ ದೊಡ್ದದು ಕೊಡಲೇನಿದೆ?' ಎಂದು ಪ್ರಶ್ನಿಸಿದ. ತಪಸ್ವಿ 'ಕೆಲವು ವರ್ಷಗಳ ಹಿಂದೆ ಇಲ್ಲೊಬ್ಬಳು ಹುಡುಗಿ ಇದ್ದಳಲ್ಲ, ಅವಳೀಗ ಎಲ್ಲಿದ್ದಾಳೆ?' ಎಂದು ಕೇಳಿದ.

ಓಶೋ 'ಆಸೆ'ಯ ಕುರಿತು ಹೇಳುವ ಕತೆಯಿದು.

ಆಸೆಯೇ ಹೀಗೆ. ಅದನ್ನು ನಾವು ಬಿಟ್ಟರೂ ಅದು ನಮ್ಮನ್ನು ಬಿಡದು. ನಾವು ಬಿಟ್ಟೆವೆಂದುಕೊಳ್ಳುತ್ತೇವೆ. ಅದು ಬೆನ್ನು ಹತ್ತಿರುತ್ತದೆ. ರೂಪಾಂತರ ತಾಳಿ ನಮ್ಮೊಂದಿಗೆಯೇ ಸಾಗುತ್ತಿರುತ್ತದೆ.

ಎಂದು ಅದರಿಂದ ಬಿಡುಗಡೆ ಹೊಂದುತ್ತೇವೋ ಅಂದು ಎಲ್ಲ ಬಂಧನದಿಂದಲೂ ಬಿಡುಗಡೆ ಹೊಂದಲು ಸಾಧ್ಯ.

Sunday, 8 May, 2011

ಒಳಿತಿನ ನುಡಿ- 2


ಮೃದುವಾಗಿರುವ, ಕೆಳಗಿರುವ, ಬಾಗಿರುವ ಹುಲ್ಲನ್ನು ಬೀಸಿ ಬರುವ ಬಿರುಗಾಳಿಯು ಬಾಧಿಸುವುದಿಲ್ಲ. ಎತ್ತರೆತ್ತರದ ಮರಗಳೇ ಅದರ ಗುರಿ.
ದೊಡ್ಡವರು ದೊಡ್ಡವರೊಂದಿಗೆಯೇ ಪರಾಕ್ರಮ ತೋರಿಸುವುದು.

ತೃಣಾನಿ ನೋನ್ಮೂಲಯತಿ ಪ್ರಭಂಜನೋ
ಮೃದೂನಿ ನೀಚೈಃ ಪ್ರಣತಾನಿ ಸರ್ವತಃ |
ಸಮುಚ್ಛ್ರಿತಾನೇವ ತರೂನ್ಪ್ರಬಾಧತೇ
ಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ ||