Tuesday 6 October, 2009

ಹೀಗಿರಲಿ ಮನಸು....

ಧರ್ಮದ ಕುರಿತು ನೋಡಹೊರಟಂತೆಲ್ಲ ಅದು ಅದ್ಭುತ ಚಿಂತನೆಗಳ ಆಗರವೆನ್ನುವುದು ಮನದಟ್ಟಾಗುತ್ತದೆ. ಮಹಾಭಾರತದ ಧರ್ಮವ್ಯಾದ-ಕೌಶಿಕ ಸಂವಾದ ಅದಕ್ಕೊಂದು ಉತ್ತಮ ಉದಾಹರಣೆ. ಧರ್ಮಮಯವಾದ ಬದುಕೆಂದರೇನೆಂದು ತನ್ನ ಬದುಕಿನ ಮೂಲಕವೇ ವಿವರಿಸಹೊರಡುವ ಧರ್ಮವ್ಯಾಧ ಸದಾ ಸಂತೋಷವಾಗಿರುವ ತಂತ್ರವೊಂದನ್ನು ಬಿಚ್ಚಿಡುತ್ತಾನೆ.

ಮನಸ್ಸೆಂಬುದು ಜಗತ್ತಿನ ವಿಚಿತ್ರ ವಸ್ತುಗಳಲ್ಲಿ ಮೊದಲನೆಯದು. ಅಷ್ಟೇ ಅಲ್ಲ, ಅತ್ಯಂತ ಬೇಗ ತನ್ನನ್ನೇ ಬದಲಾಯಿಸಿಕೊಳ್ಳುವ ಗೋಸುಂಬೆಯನ್ನೂ ಮೀರಿಸುವ ಚಾಂಚಲ್ಯ ಹೊಂದಿದ್ದು. ಹಾಗಾಗಿ ಸದಾಕಾಲ ಮನಸ್ಸನ್ನು ಏಕರೂಪವಾಗಿರಿಸಿಕೊಳ್ಳುವುದು ಕಷ್ಟವೇ ಆಗಿದೆ.ನಮ್ಮ ಮನಸ್ಸಿನ ಶಾಂತತೆಯನ್ನು ಕದಡುವ ಕಾರ್ಯ ಬೇರೆಯವರಿಂದ ನಡೆಯುತ್ತಲೇ ಇರುತ್ತದೆ. ಕೆಲವರು ನಮ್ಮನ್ನು ಹೊಗಳುತ್ತಾರೆ; ಮನಸ್ಸು ಆಗ ಸಂತೋಷ ಪಡುತ್ತದೆ. ಕೆಲವರು ನಮ್ಮನ್ನು ತೆಗಳುತ್ತಾರೆ; ಸಂತೋಷಗೊಂಡ ಅದೇ ಮನಸ್ಸು ಆಗ ಮುದುಡುತ್ತದೆ. ನಮ್ಮದೇ ಮನಸ್ಸು ಯಾರದೋ ಮಾತಿನಿಂದ ವಿಕಸಿತವೂ ಆಯಿತು, ಸಂಕುಚಿತವೂ ಆಯಿತು.ಈ ಎರಡೂ ಸಂದರ್ಭಗಳಲ್ಲಿ ಮನಸ್ಸನ್ನು ಸಮಾಧಾನವಾಗಿ ಇರಿಸಿಕೊಂಡಾಗ ಮಾತ್ರ ಬದುಕು ಸುಂದರ. ಹೆಚ್ಚು ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಈ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆಯ ಸ್ವರೂಪವನ್ನು ಬದಲಿಸಿಕೊಂಡಾಗ ನಾವು ಸುಖವಾಗಿರಲು ಸಾಧ್ಯ. ಮನಸ್ಸಿನ ಈ ಸ್ಥಿತಿಗೆ ಧರ್ಮವ್ಯಾಧ ನೀಡುವ ಪರಹಾರ ಹೀಗಿದೆ:
ಯೇ ಚೈವ ಮಾಂ ಪ್ರಶಂಸಂತಿ ಯೇ ಚ ನಿಂದಂತಿ ಮಾನವಾಃ |
ಸರ್ವಾನ್ಸುಪರಿಣೀತೇನ ಕರ್ಮಣಾ ತೋಷಯಾಮ್ಯಹಮ್ ||
" ಯಾರು ನನ್ನನ್ನು ಹೊಗಳುತ್ತಾರೋ, ಯಾರು ನನ್ನನ್ನು ತೆಗಳುತ್ತಾರೋ ಅವರೀರ್ವರನ್ನೂ ನಾನು ಸಮಾನವಾಗಿಯೇ ಕಾಣುತ್ತೇನೆ. ಉತ್ತಮ ಕಾರ್ಯದಿಂದ ಆ ಇಬ್ಬರನ್ನೂ ನಾನು ಸಂತೋಷಪಡಿಸುತ್ತೇನೆ".

ಬೈದಾಗ, ಭಂಗಿಸಿದಾಗ, ದ್ರೋಹವೆಸಗಿದಾಗ, ಅವಮಾನಿಸಿದಾಗ, ನಿರ್ಲಕ್ಷಿಸಿದಾಗ ಹೀಗೊಂದು ಮನಸ್ಸ್ಥಿತಿಯನ್ನು ಇಟ್ಟುಕೊಳ್ಳುವುದು ನಮಗೆ ಸಾಧ್ಯವಾದರೆ ನಾವು ಜಗತ್ತನ್ನೇ ಗೆದ್ದಂತೆ. ಹಾಗಾಗಲು ಮನಸ್ಸಿಗೊಂದು ಶಿಕ್ಷಣವನ್ನು ಕೊಟ್ಟುಕೊಳ್ಳಬೇಕು. ಅದು ಹೇಗೆ?
ನಿಂದೆಯ ಪ್ರತಿಕ್ರಿಯೆಯನ್ನು ಎರಡು ತರಹದಲ್ಲಿ ಇಟ್ಟುಕೊಳ್ಳಬೇಕು.

ಮೊದಲನೆಯದು - ನಿಂದೆಯ ಅಂಶಗಳು ನಮಗೆ ಹೊಂದಿಕೊಳ್ಳುತ್ತಿವೆಯೇ ಎನ್ನುವ ಪರಿಶೀಲನೆ. ಹೊಂದಿಕೊಳ್ಳುತ್ತಿದೆಯಾದರೆ ಅದು ನಿಂದೆಯೇ ಅಲ್ಲ.ಅದು ಜೀವನ ಮಾರ್ಗದರ್ಶನ.

ಎರಡನೆಯದು - ನಿಂದೆ ಹೊಂದಿಕೊಳ್ಳದಿದ್ದರೆ ಅದು ನಿಂದಿಸಿದವರ ತಪ್ಪು ಗ್ರಹಿಕೆ. ಆರಡಿಯ ವ್ಯಕ್ತಿಯನ್ನು ಮೂರಡಿ ಎಂದೊಬ್ಬ ಭಾವಿಸಿದರೆ ಅವನಿಗಿನ್ನೂ ಅಡಿಯ ಅಳತೆ ಸಿಕ್ಕಿಲ್ಲವೆಂದಷ್ಟೇ ಅರ್ಥ. ಸಾಧ್ಯವಾದರೆ ಅವನಿಗೆ ಅಡಿಯ ಲೆಕ್ಕ ಕಲಿಸೋಣ. ಸಾಧ್ಯವಾಗದಿದ್ದರೆ 'ಅಯ್ಯೋ ಪಾಪ' ಎಂದುಕೊಳ್ಳೋಣ.

ಈ ಎರಡು ಮಾರ್ಗಗಳನ್ನು ಅನುಸರಿಸಿದಾಗ ಮನಸ್ಸು ಕುಗ್ಗಲಾರದು. ಸದಾ ಹಿಗ್ಗಿದ ಆ ಮನಸ್ಸು ಜಗತ್ತಿನೆಲ್ಲ ಸಂತೋಷವನ್ನೂ ತನ್ನಲ್ಲಿ ತುಂಬಿಕೊಳ್ಳಬಲ್ಲದು. ಅಷ್ಟೇ ಏಕೆ? ಎಲ್ಲ ಸಂತೋಷದ ಮೂಲನಿಧಿಯಾದ ಆ ಆನಂದೋಬ್ರಹ್ಮವನ್ನೇ ತನ್ನೊಳಗೆ ತುಂಬಿಕೊಳ್ಳಬಹುದು ಅಥವಾ ಅದರಲ್ಲೇ ತಾನು ತುಂಬಿಹೋಗಬಹುದು.

{ ಬ್ರಹ್ಮ ಪತ್ರಿಕೆಯ ಅಂಕಣ ಬರಹ }