Monday, 21 July 2008

ಚಕ್ರವ್ಯೂಹದ ಚಕ್ರದೊಳಗೆ

ನಿನ್ನೆ ಗುರುಕುಲದಲ್ಲಿ ನಾಟಕವೊಂದನ್ನು ಮಾಡಿಸಿದ್ದೆ. 'ಅಂಕುರ' ತಂಡದವರು ಅಭಿನಯಿಸಿದ್ದು. ನೀನಾಸಂನಲ್ಲಿ ತರಬೇತಿ ಪಡೆದ ೬ ಜನರ ತಂಡವಿದು.


ನಾಟಕದ ವಸ್ತು, ಹತ್ತಾರು ಬಾರಿ ಬೇರೆಬೇರೆ ಕಲಾಮಾಧ್ಯಮಗಳಲ್ಲಿ ನಾವು ಕಂಡ 'ಚಕ್ರವ್ಯೂಹ'. ಈ ರಾಮಾಯಣ - ಮಾಹಾಭಾರತಗಳ ಶಕ್ತಿ ಅದ್ಭುತ ಅನಿಸುತ್ತೆ. ಅಲ್ಲಿಯ ಕತೆಗಳನ್ನು ಎಷ್ಟು ಬಾರಿ ಕೇಳಿಲ್ಲ? ಎಷ್ಟು ಬಾರಿ ಹೇಳಿಲ್ಲ? ಎಷ್ಟು ಬಾರಿ ನೋಡಿಲ್ಲ? ಎಷ್ಟು ಬಾರಿ ವಿಮರ್ಶೆ ಮಾಡಿಲ್ಲ? ಮತ್ತದು ರಂಗಕ್ಕೆ ಬಂದ್ರೆ,ಅಂತರಂಗಕ್ಕೆ ಇಳಿದ್ರೆ ಹೊಸ ಅನುಭವ ಮೂಡಿಬರುತ್ತೆ.


ನಿನ್ನೆ ಆದದ್ದೂ ಅದೇ. ಆ ಹ್ಯಾಂಗೋವರ್ ನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅಭಿಮನ್ಯುವಿನ ಚಕ್ರವ್ಯೂಹ ಹಾಗೆ ಮನಸ್ಸನ್ನು ತುಂಬಿದೆ.


'ಅಂಕುರ' ಅದನ್ನು ರಂಗಕ್ಕೆ ತಂದಿದ್ದು ವಿನೂತನ ವಿನ್ಯಾಸದಲ್ಲಿ. ನಮ್ಮ ಕುಮಾರವ್ಯಾಸ ಸ್ವತಃ ಮಾತನಾಡತೊಡಗಿದ್ದ. 'ಕರ್ಣಾಟಭಾರತಕಥಾಮಂಜರಿ'ಯ ಪದ್ಯಗಳೇ ಅದರಲ್ಲಿ ಮಾತುಗಳು. ಬೇರೆ ಸಂಭಾಷಣೆಯೇ ಅದರಲ್ಲಿಲ್ಲ. ಹಳಗನ್ನಡದ ಪದ್ಯಗಳನ್ನೇ ಹಾಡಾಗಿ, ಮಾತಾಗಿ ಹಾಗೆಯೇ ಬಳಸಿಕೊಳ್ಳಲಾಗಿತ್ತು. ಅರ್ಥವೇ ಆಗದೇನೋ ಎನ್ನುವ ಆ ಪದ್ಯಗಳು ಅದೆಷ್ಟು ಚೆನ್ನಾಗಿ ಪ್ರೇಕ್ಷಕರ ಒಳಗೆ ಇಳಿದವೆಂದರೆ, ಅದು ಹಳಗನ್ನಡವೆನ್ನುವುದೇ ಮರೆತುಹೋಗಿತ್ತು.


ಕಳರಿಪಯಟ್ ಮತ್ತು ಯಕ್ಷಗಾನದ ನಡೆಗಳನ್ನು ಜೋಡಿಸಿಕೊಂಡಿದ್ದು ಪರಿಣಾಮಕಾರಿಯಾಗಿತ್ತು. ಕಳರಿಪಯಟ್ ಗೆ ಯಕ್ಷಗಾನದ ರಿದಂನ ಬಳಕೆ ವಿಶಿಷ್ಟವಾಗಿತ್ತು. ರಾಗಸಂಯೋಜನೆ ಚೆನ್ನಾಗಿತ್ತು.


ಹಳೆಯ ಸಾಹಿತ್ಯ ಜನಮಾನಸದಿಂದ ದೂರಸರಿಯುತ್ತಿರುವ ಸಂದರ್ಭದಲ್ಲಿ; ಹಳೆಯ ಭಾಷೆ ಅರ್ಥವೇ ಆಗದ ಸನ್ನಿವೇಶದಲ್ಲಿ; ಕಾವ್ಯಗಳಲ್ಲಿ ಹೀಗೂ ಆಸಕ್ತಿ ಮೂಡಿಸಬಹುದು ಅನ್ನೋದು ಒಂದು ಹೊಸ ಸಾಧ್ಯತೆ.

1 comment:

ಯಜ್ಞೇಶ್ (yajnesh) said...

ಇಂದಿನ ಆಧುನಿಕ ಶಿಕ್ಷಣದಲ್ಲಿ ಇವೆಲ್ಲಾ ಅವಶ್ಯಕತೆಯಿದೆ. ಬರೀ ಪುಸ್ತಕದ ಬದನೆಕಾಯಿ ತಿಳಿದುಕೊಂಡರೇನು ಪ್ರಯೋಜನ!

ಗುರುಕುಲದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಾಕವಾಗಿ ನಾಟಕ ಹೊರಹೊಮ್ಮಿದೆಯೆಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಗುರುಕುಲದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಕಲಿಯುವ ಅವಕಾಶ ಸಿಗಲಿ.

ಗುರುಕುಲದ ವಿಧ್ಯಾರ್ಥಿಗಳಲ್ಲಿ ನಾನು ಕಂಡ ಒಂದು ಅದ್ಬುತ ಶಕ್ತಿಯೆಂದರೆ ಆತ್ಮವಿಶ್ವಾಸ. ಜನರೆಷ್ಟೇಯಿದ್ದರೂ ಒಂದಿನಿತೂ ಅಳುಕದೇ ಸುಲಲಿತವಾಗಿ ಅವರಿಂದ ಹೊಮ್ಮುವ ಗ್ರಂಥಗಳು, ಶ್ಲೋಕಗಳೇ ಇದಕ್ಕೊಂದು ಉದಾಹರಣೆಯೆನ್ನಬಹುದು.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ನಮ್ಮ ಸಮಾಜ ಉನ್ನತ ಸ್ಥಾನಕ್ಕೇರಬೇಕಾದರೇ ಅದಕ್ಕೆ ಉತ್ತಮ ಹಿನ್ನಲೆಯುಳ್ಳ ಯುವಕರ ಅವಶ್ಯಕತೆಯಿದೆ. ಅಂತಹ ಯುವಕರು ಗುರುಕುಲದಿಂದ ಹೊರಹೊಮ್ಮಲಿ.

ಗುರುಕುಲ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಲೆಂದು ಹಾರೈಸುತ್ತೇನೆ.