Tuesday, 18 November 2008

ಸಿದ್ಧ, ಬುದ್ಧನಾದದ್ದು

ಮಹಾರಾಜ ಶುದ್ಧೋದನನ ಅರಮನೆಯಲ್ಲಿ ಅಂದು ಸಂತಸದ ಹೊಳೆ. ಅರಮನೆಯಷ್ಟೇ ಏನು? ರಾಜ್ಯಕ್ಕೆ ರಾಜ್ಯವೇ ಹರ್ಷಗೊಂಡಿತ್ತು. ಮಹಾರಾಜನಿಗೊಬ್ಬ ಮಗ ಹುಟ್ಟಿದ್ದು ಈ ಸಂತೋಷಕ್ಕೆ ಕಾರಣ.

ವಿಧಿ - ವಿಧಾನದಂತೆ ಜಾತಕರ್ಮ, ನಾಮಕರಣಗಳು ನಡೆದವು. ಸರ್ವಾರ್ಥಸಿದ್ಧ ಎಂದು ಹೆಸರನ್ನೂ ಇಡಲಾಯಿತು. ಸಂಭ್ರಮದ ಸಂದರ್ಭದಲ್ಲಿಯೇ ಅರಮನೆಗೆ 'ಅಸಿತ' ಮಹರ್ಷಿಯ ಆಗಮನವಾಯಿತು. ಮುನಿಯನ್ನು ಯಥೋಚಿತವಾಗಿ ಸತ್ಕರಿಸಲಾಯಿತು. ಮಂಗಲ ಸಮಯದಲ್ಲಿ ಮಹರ್ಷಿ ಬಂದಿರುವಾಗ ಮಗನ ಭವಿಷ್ಯ ಕೇಳದಿದ್ದರೆ ಹೇಗೆ? ಶುದ್ಧೋದನ ತನ್ನ ಮಗನ ಮುಂದಿನ ಬದುಕು ಹೇಗೆಂದು ಕೇಳಿದ.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಮುನಿ ನುಡಿದ ಮಾತು !?!

" ದೊರೆಯೇ, ನಿನ್ನ ಮಗನದ್ದು ಅದ್ಭುತ ಜನ್ಮಕುಂಡಲಿ. ಜಗತ್ತು ಎಂದೆಂದಿಗೂ ನೆನಪಿನಲ್ಲಿಡುವ ವ್ಯಕ್ತಿಯಾಗುತ್ತಾನೀತ. ಆದರೆ......"

ಮುನಿ ಮಾತು ನಿಲ್ಲಿಸಿದರು.

ರಾಜನ ಕುತೂಹಲ ಎಲ್ಲೆಮೀರಿತು. "ಆದರೆ....ಆದರೇನು? ಮುನಿವರ್ಯ!" ದೊರೆ ಕೇಳಿದ.

"ರಾಜನ್, ನಿನ್ನ ಮಗ ಸಮಸ್ತ ಭೂಮಂಡಲದ ಚಕ್ರವರ್ತಿಯಾಗುತ್ತಾನೆ. ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಗುರುತಿಸುವಂತೆ ಜಗತ್ತನ್ನು ಆಳುತ್ತಾನೆ."

ರಾಜ ಮುನಿಯ ಮಾತನ್ನು ತುಂಡರಿಸಿದ "ತಾವು ಆದರೆ... ಎಂದು ನಿಲ್ಲಿಸಿದ್ದನ್ನು ನೋಡಿ ಬೆದರಿದ್ದೆ ಪೂಜ್ಯರೇ. ಈಗ ಮನಕ್ಕೆ ಮಹದಾನಂದವಾಯಿತು."

ಮುನಿ ಮುಗುಳ್ನಗುತ್ತಾ ನುಡಿದರು "ನನ್ನ ಮಾತಿನ್ನೂ ಮುಗಿದಿಲ್ಲ ಮಹಾರಾಜ. ಅವನು ಅಖಂಡ ಭೂಮಂಡಲಕ್ಕೆ ಸಾರ್ವಭೌಮನಾಗುತ್ತಾನೆ, ಅಥವಾ ಎಲ್ಲವನ್ನೂ ಬಿಟ್ಟ ಪರಿವ್ರಾಜಕನಾಗುತ್ತಾನೆ. ಅವನಿಗೆಂದು ಬದುಕಿನ ನೋವುಗಳ ಸಂವೇಗ ಉಂಟಾಗುತ್ತದೆಯೋ ಅಂದು ಅವನ ದಾರಿ ಬದಲಾಗುತ್ತದೆ." ಮುನಿ ಮಾತು ನಿಲ್ಲಿಸಿದರು.

ರಾಜನೂ.

ರಾಜ ನಿರ್ಣಯಿಸಿ ಬಿಟ್ಟ, ನನ್ನ ಮಗನಿಗೆ ಬದುಕಿನ ಯಾವ ಕಷ್ಟವೂ ತಿಳಿಯದಂತೆಯೇ ಅವನನ್ನು ಬೆಳೆಸುತ್ತೇನೆ ಎಂದು. ಹಾಗೆಯೇ ಬೆಳೆಸಿದ ಕೂಡ. ಸರ್ವಾರ್ಥಸಿದ್ಧ ವಿಶಾಲ ಅರಮನೆಯ ಅಂಗಳದಲ್ಲಿಯೇ ಬೆಳೆದ. ಅವನ ಸುತ್ತೆಲ್ಲ ಸದಾ ಸಮೃದ್ಧಿಯೇ ತುಂಬಿತ್ತು. ಎಲ್ಲೆಂದರಲ್ಲಿ ಸಂತೋಷ ಕೂಟಗಳು. ನಲಿವೋ ನಲಿವು. ಅಚ್ಚರಿಯ ಮಾತೆಂದರೆ ರಾಜಕುಮಾರ ಹೊರಪ್ರಪಂಚವನ್ನೇ ನೋಡಿರಲಿಲ್ಲ. ಅಷ್ಟರಲ್ಲಾಗಲೇ ಯಶೋಧರೆಯೊಂದಿಗೆ ಮುದುವೆಯೂ ಆಗಿ ರಾಹುಲ ಹುಟ್ಟಿಯೂ ಆಗಿತ್ತು.

ಒಂದು ದಿನ, ರಾಜಕುಮಾರನಿಗೆ ಅರಮನೆಯನ್ನು ದಾಟಿದ ಪ್ರಪಂಚವನ್ನು ನೋಡಬೇಕೆನಿಸಿತು. ತಂದೆಗೆ ತನ್ನಾಸೆಯನ್ನು ಹೇಳಿದ. ಆಗಲೇ ಸಂಸಾರಿಯಾಗಿದ್ದವ ಸಂನ್ಯಾಸಿಯಾಗುವುದು ಹೇಗೆ? ಹಾಗಾಗಿ ಶುದ್ಧೋದನ ಸಂತೋಷದಿಂದ ಅವನ ಹೊರ ವಿಹಾರವನ್ನು ಒಪ್ಪಿದ.

ಸಾರಥಿಯೊಂದಿಗೆ ಸವಾರಿ ಹೊರಟಿತು. ಸರ್ವಾರ್ಥಸಿದ್ಧ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಸಾಗಿದ.

ಮುಂದೊಂದು ಅಚ್ಚರಿ ಕಾದಿತ್ತು ರಾಜಕುಮಾರನಿಗೆ. ಅಲ್ಲೊಬ್ಬ ಎದುರಾದ. ಅವನ ಬೆನ್ನು ಬಾಗಿತ್ತು. ಹುಬ್ಬುಗಳು ಜೋಲುತ್ತಾ ಕಣ್ಣನ್ನು ಮುಚ್ಚಿದ್ದವು. ಕೈಕಾಲುಗಳು ನಡುಗುತ್ತಿದ್ದವು. ತುಟಿ ಅದುರುತ್ತಿತ್ತು. ಕೈಯಲ್ಲಿದ್ದ ಕೋಲನ್ನು ನೆಲದ ಮೇಲೆ ಊರಿ ನಡೆಯುತ್ತಿದ್ದ. ತಲೆಯ ಕೂದಲು ಬಿಳಿಯಾಗಿತ್ತು. ಹಿಂದೆಂದೂ ನೋಡದ ಈ ರೂಪ ಸರ್ವಾರ್ಥಸಿದ್ಧನನ್ನು ಚಕಿತಗೊಳಿಸಿತು.

ಸಾರಥಿಯನ್ನು ಕೇಳಿದ "ಇದೇನಿದು? ಇವನಿಗೇಕೆ ಹೀಗಾಗಿದೆ?" ಸಾರಥಿ ನುಡಿದ. "ರಾಜಕುಮಾರ! ಇದು ಮುಪ್ಪು. ಪ್ರತಿಯೊಬ್ಬನಿಗೂ ಇದು ಬಂದೇಬರುತ್ತದೆ. ಜೀವನ ಸಂಧ್ಯೆಯ ಅವಸ್ಥೆಯಿದು."

ರಾಜಕುಮಾರ ಗಂಭೀರನಾದ. ಅರಮನೆಗೆ ಹಿಂದಿರುಗುವಂತೆ ಆದೇಶಿಸಿದ. ಹಿಂದಿರುಗಿದವ ಚಿಂತೆಗೀಡಾದ. ಆಗಾಗ ಶೂನ್ಯದೆಡೆಗೆ ನೋಡುತ್ತಾ ಯೋಚಿಸುತ್ತಿದ್ದ.

ಸ್ವಲ್ಪಸಮಯ ಕಳೆಯಿತು. ಮತ್ತೊಮ್ಮೆ ಹೊರ ಹೋಗುವ ಮನಸ್ಸಾಯಿತು ಸರ್ವಾರ್ಥಸಿದ್ಧನಿಗೆ.

ಮುಂದಿನದೆಲ್ಲ ಹಿಂದಿನಂತೆಯೇ. ಈಗ ಎದುರಾದದ್ದು ಇನ್ನೊಂದು ವಿಚಿತ್ರ. ಅದೂ ಹೊಚ್ಚಹೊಸತು ರಾಜಕುಮಾರನಿಗೆ. ಎದುರಾದವನ ಹೊಟ್ಟೆ ವಿಚಿತ್ರವಾಗಿ ಉಬ್ಬಿತ್ತು. ಕೈಕಾಲುಗಳು ಬಡವಾಗಿದ್ದವು. ಉಸಿರಾಡಿದಂತೆ ಇಡೀ ದೇಹವೇ ಅಲುಗಾಡುತ್ತಿತ್ತು. ಒಂದೊಂದು ಹೆಜ್ಜೆಗೂ "ಅಮ್ಮಾ" ಎಂದು ಕಿರುಚುತ್ತಿದ್ದ.

ಬೆಚ್ಚಿದ ಸರ್ವಾರ್ಥಸಿದ್ಧ ಸಾರಥಿಯನ್ನು ಇದೇನೆಂದು ಕೇಳಿದ. ಸಾರಥಿ ನುಡಿದ "ಇವನು ರೋಗಿ. ಯಾವುದೋ ರೋಗ ಇವನನ್ನು ಬಾಧಿಸುತ್ತಿದೆ. ರೋಗಗಳು ಎಲ್ಲ ಮನುಷ್ಯರನ್ನು ಕಾಡುವುದು ಸಹಜವೇ."

ರಾಜಕುಮಾರ ಅರಮನೆಗೆ ಹಿಂದಿರುಗಿದ, ಪ್ರಯಾಣ ಮೊಟುಕುಗೊಳಿಸಿದ. ಶೂನ್ಯದ ಅವಲೋಕನ ಮತ್ತಷ್ಟು ಹೆಚ್ಚಾಯಿತು.

ಕೆಲಕಾಲ ಕಳೆಯಿತು. ಮತ್ತೆ ವಿಹಾರದ ಮನಸ್ಸಾಯಿತು.

ದೊರೆ ಅರೆ ಮನಸ್ಸಿಂದ ಒಪ್ಪಿದ. ಆದರೆ ಸಾರಥಿ ಮತ್ತು ದಾರಿ ಬದಲಾಯಿತು. ಪ್ರಯಾಣ ಸಾಗಿತು. ಮತ್ತೊಂದು ಹೊಸ ದೃಶ್ಯ ಎದುರಾಯಿತು. ಮಲಗಿದ್ದ ಓರ್ವನನ್ನು ನಾಲ್ವರು ಹೊತ್ತು ಸಾಗುತ್ತಿದ್ದರು. ಹಿಂದೊಂದು ಗುಂಪು ಹಿಂಬಾಲಿಸುತ್ತಿತ್ತು. ಕೆಲವರು ಜೋರಾಗಿ ಅಳುತ್ತಿದ್ದರು, ಗೋಳಿಡುತ್ತಿದ್ದರು. ಕೆಲವರು ಅವರನ್ನು ಸಮಾಧಾನಪಡಿಸುತ್ತಿದ್ದರು.

ಸಾರಥಿಯನ್ನು "ಇದೆಂತಹ ಮೆರವಣಿಗೆ" ಎಂದು ಕೇಳಿದ ಸರ್ವಾರ್ಥಸಿದ್ಧ. ಸಾರಥಿ ವಿವರಿಸತೊಡಗಿದ "ಇದು ಸಾವು. ಎಲ್ಲರೂ ಆಯುಷ್ಯ ತೀರಿದ ಮೇಲೆ ಸಾಯಲೇಬೇಕು. ಸತ್ತಾಗ ಹೀಗೆಯೇ ಮೆರವಣಿಗೆ. ಕೊನೆಗೆ ಸ್ಮಶಾನದಲ್ಲಿ ಬೂದಿಯಾಗುವುದು.ಅಲ್ಲಿಗೆ ಬದುಕಿನ ಕೊನೆ".

ರಥ ಹಿಂದಿರುಗಿತು ಅರಮನೆಗೆ. ರಾಜಕುಮಾರ ಮೌನಿಯಾಗಿಬಿಟ್ಟ. ಈ ಎಲ್ಲ ಬದುಕಿನ ನೋವುಗಳನ್ನು ಕಳೆದುಕೊಳ್ಳಬೇಕೆನಿಸಿತು. ಪ್ರಪಂಚದ ಎಲ್ಲರ ನೋವನ್ನು ಕಳೆಯಬೇಕೆನಿಸಿತು.

ಒಂದು ಮಧ್ಯರಾತ್ರಿ ಎಲ್ಲವನ್ನೂ ಬಿಟ್ಟು ಶಾಶ್ವತ ಸುಖವನ್ನರಸುತ್ತಾ ಹೊರಟ.

* * *

ಗೆಳೆಯರೆ,

ಈ ಹಿನ್ನ್ಮೆಲೆಯಲ್ಲಿ ನನ್ನ "ನಾನು ಬುದ್ಧನಾಗುವುದಿಲ್ಲ" ಕವಿತೆಯನ್ನು ಮತ್ತೊಮ್ಮೆ ಓದಿ.

1 comment:

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

ತುಂಬಾ ಚೆನ್ನಾಗಿದ್ದು ಶರ್ಮಾಜಿ
ನಿಮ್ಮ ಕವಿತಾ ಶಕ್ತಿ ದ್ವನಿಪೂರ್ಣ ಅಷ್ಟೇ ಸರಳ
ನೀವು ನಿರಂತರವಾಗಿ ಬರೆಯುತ್ತಿರಿ.
ಹಾಗೆ ಸಾಧ್ಯವಾದರೆ ಯವುದಾದರು ಜನಪ್ರಿಯ ಮಧ್ಯಮದಲ್ಲೂ ಪ್ರಕಟಿಸಿ.ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಲ್ಲಿ ಮಾತ್ರ.
ನಾವೆಲ್ಲಾ ಈ ಜಗದ ಶಾಶ್ವತ ಜಡವಾಗುತ್ತಿದ್ದೇವೆ ಅನ್ನಿಸುತ್ತಿದೆ.ಸೂಕ್ಷ್ಮವೆಲ್ಲ ಅರ್ಥವೇ ಆಗುತ್ತಿಲ್ಲ, ಭಾವ ಬರಡಾಗಿದೆ, ರಸದ ಬರ ಬಂದಂತಿದೆ ಎನಂತಿರಿ?