Sunday, 1 March 2009

ರಾಮ ದೊಡ್ಡವನೇಕೆ?

* ರಾಮನೆನ್ನುವವನೊಬ್ಬನಿದ್ದ ;
ರಾಮ ಒಬ್ಬನೇ ಏನು? ಸೃಷ್ಟಿಯ ಇತಿಹಾಸದಲ್ಲಿ ಅಸಂಖ್ಯ ಜನರಿದ್ದರು.

* ಅವನು ರಾಜನಾಗಿದ್ದ ;
ರಾಜರ ಗಣನೆಯೂ ಅಗಣಿತ.

* ಅವನು ಚಕ್ರವರ್ತಿಯಾಗಿದ್ದ :
ಚಕ್ರವರ್ತಿಗಳೂ ಅಸಂಖ್ಯರಿದ್ದರು.

* ಜನಕನ ಮಗಳು ಸೀತೆಯನ್ನವನು ವಿವಾಹವಾದ ;
ಎಲ್ಲ ರಾಜಕುಮಾರರೂ ರಾಜಕುಮಾರಿಯರನ್ನೇ ವಿವಾಹವಾಗುತ್ತಿದ್ದರು.

* ಅವನು ರಾಕ್ಷಸರನ್ನು ಕೊಂದ ;
ರಾಕ್ಷಸರನ್ನು ಹಲವರು ಕೊಂದಿದ್ದಾರೆ.

* ಅವನಿಗೆ ಅಪರಿಮಿತ ಸಾಮರ್ಥ್ಯವಿತ್ತು ;
ಅವನೊಬ್ಬನಿಗೆ ಏನೂ ಅಲ್ಲ.

* ಅವನು ಯಜ್ಞಗಳನ್ನು ರಕ್ಷಿಸಿದ ;
ಆ ಕಾರ್ಯ ಮಾಡಿದವರೂ ಬಹುಜನರಿದ್ದಾರೆ.

* ಮಿತ್ರರಾದ ಸುಗ್ರೀವ - ವಿಭೀಷಣರಿಗೆ ಸಹಾಯ ಮಾಡಿದ ;
ಮಿತ್ರರಿಗೆ ಸಹಕರಿಸುವವರು ಈಗಲೂ ಇದ್ದಾರೆ.

* ತನ್ನ ಪತ್ನಿಯನ್ನವನು ಅಪವಾದ ಬಂದಾಗ ಬಿಟ್ಟುಬಿಟ್ಟ ;
ಅಪವಾದ ಬಂದ ಪತ್ನಿಯನ್ನು ಎಲ್ಲರೂ ಬಿಡುತ್ತಾರೆ.

* ಅವನಿಗೆ ಸಹೋದರರ ಮೇಲೆ ತುಂಬಾ ಪ್ರೀತಿಯಿತ್ತು ;
ಅದು ದುರ್ಯೋಧನನಿಗೂ ಇತ್ತು.

* ಅವನು ದಿವಿಯಿಂದ ಇಳಿದು ಬಂದ ;
ಭಾರತೀಯ ದರ್ಶನದಂತೆ ಎಲ್ಲರೂ ಅಲ್ಲಿಂದ ಬಂದವರೇ.

ಹಾಗಿದ್ದರೇನು ರಾಮನ ವೈಶಿಷ್ಟ್ಯ? ಅವನಿಗೇಕೆ ಅತ್ಯುನ್ನತಸ್ಥಾನ?

ಚಕ್ರವರ್ತಿಪುತ್ರನಾಗಿಯೂ ರಾಮ ಅದನ್ನು ಸ್ವಲ್ಪವೂ ಬೇಸರವಿಲ್ಲದೆ ತಮ್ಮ ಭರತನಿಗೆ ಬಿಟ್ಟುಕೊಡುತ್ತಾನೆ. ಚಕ್ರವರ್ತಿಸ್ಥಾನವೆಂದರೆ ಸಾಮಾನ್ಯದ್ದಲ್ಲ. ಅಂದಿನ ಸಮಸ್ತ ವಿಶ್ವದ ಆಳ್ವಿಕೆ ಚಕ್ರವರ್ತಿಯದ್ದು. ಪ್ರಪಂಚವನ್ನೇ ಆಳುವ ವ್ಯಕ್ತಿಯ ವೈಭವ ಎಷ್ಟಿರಬೇಕು? ಅದನ್ನವನು ತಂದೆಯ ಮಾತನ್ನು ಉಳಿಸಲಿಕ್ಕಾಗಿ ಬಿಟ್ಟ. ಬಿಡುವಾಗಲೂ, ಬಿಟ್ಟಮೇಲೂ ಸಹೋದರ ಪ್ರೇಮವನ್ನು ರಾಮ ತೋರಿದ ಪರಿ ಅನನ್ಯ. ವನವಾಸ ಮುಗಿಸಿದ ಮೇಲೂ ಭರತ ಬಯಸಿದ್ದರೆ ರಾಜ್ಯವನ್ನು ಬಿಟ್ಟುಕೊಡಲು ಸಿದ್ಧನಿದ್ದ ಶ್ರೀರಾಮ. ಇದು ಅವನ ಹಿರಿಮೆ.

ಸೀತೆಯ ಕುರಿತಾಗಿ ಜನತೆ ಅಪವಾದದ ಮಾತುಗಳನ್ನು ಆಡತೊಡಗಿದಾಗ ಅವಳನ್ನು ಶ್ರೀರಾಮ ಪರಿತ್ಯಾಗ ಮಾಡುತ್ತಾನೆ. ಬೇರೆ ಗಂಡಂದಿರಂತೆ ಹೆಂಡತಿಯ ಮೇಲೆ ಅನುಮಾನ ಮೂಡಿ ಅವಳನ್ನು ಬಿಡುವುದಿಲ್ಲ. ಸೀತೆಯ ಪಾವಿತ್ರ್ಯದ ಮೇಲೆ ಅವನಿಗೆ ಪೂರ್ಣ ವಿಶ್ವಾಸವಿದೆ. ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದದ್ದು ರಾಜನ ಕರ್ತವ್ಯ ಎನ್ನುವುದನ್ನು ಸಾರ್ವಕಾಲಿಕವಾಗಿ ಜಗತ್ತಿಗೆ ತಿಳಿಸಲು ಅತ್ಯಂತ ಪ್ರೀತಿಪಾತ್ರಳಾದ ತನ್ನ ಪತ್ನಿಯನ್ನು ಶ್ರೀರಾಮ ಬಿಡುತ್ತಾನೆ. ಇದು ಅವನ ಗರಿಮೆ.

ಸುಗ್ರೀವ - ವಿಭೀಷಣರಿಗೆ ಪಟ್ಟ ಕಟ್ಟಿದ್ದು ಮಿತ್ರರಿಗೆ ಸಹಾಯ ಮಾಡಬೇಕು ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ. ಜಗತ್ತಿನ ಯಾವ ಜೀವಿಗೆ ಅನ್ಯಾಯವಾದರೂ ಶ್ರೀರಾಮ ರಕ್ಷಣೆಗೆ ಮುಂದಾಗುತ್ತಿದ್ದ, ನ್ಯಾಯ ಒದಗಿಸಿ ಕೊಡುತ್ತಿದ್ದ. ಯಜ್ಞರಕ್ಷಣೆ ಮತ್ತು ರಾಕ್ಷಸ ಸಂಹಾರಗಳು ಅವನ ಸಾಮರ್ಥ್ಯವನ್ನು ಮಾತ್ರ ತೋರಿಸುತ್ತಿಲ್ಲ. ಅಲ್ಲಿಯೂ ಅವನ ನ್ಯಾಯಪರತೆ ಅನನ್ಯವಾಗಿ ಕಾರ್ಯಮಾಡಿದೆ. ಇದು ಅವನ ಮಹಿಮೆ.

ಎಲ್ಲ ಜೀವಿಗಳು ಬ್ರಹ್ಮದಿಂದಲೇ ಬಂದವರಾದರೂ ಒಂದು ವ್ಯತ್ಯಾಸವಿದೆ. ನಾವೆಲ್ಲ ಮೇಲಿನಿಂದ ಬಿದ್ದವರು. ಬಿದ್ದ ನಮ್ಮನ್ನು ಮೇಲೆತ್ತಲು ಶ್ರೀರಾಮ ಇಳಿದವನು ; ಅವತರಿಸಿದವನು.

ಇಂತಹ ರಾಮನ ಉಪಾಸನೆಗೆ ಸಮಯ ಬಂದಿದೆ.
ಅಣಿಯಾಗೋಣ.

(ಏಪ್ರಿಲ್ ೨೦೦೮ನೇ ಧರ್ಮಭಾರತೀ ಸಂಪಾದಕೀಯ)

1 comment:

ಒಪ್ಪಣ್ಣ, said...

ತಲೆದೂಗಬೇಕಾದ ಮಾತುಗಳು.
ತುಂಬಾ ದೀರ್ಘವಾದ / ಆಳವಾದ ಅರ್ಥನಿಕ್ಷೇಪವಿದೆ.

ರಾಮೋಪಾಸನಗೆ ಸದಾ ಸಿದ್ಧನಾಗಿರೋಣ.