Friday, 6 February 2009

ವಿಷದೂಟಕಿಂತುಪೋಷಿತವೆ ಲೇಸಲ್ತೆ.....?

"ದೀರ್ಘಂ ಪಶ್ಯತ ಮಾ ಹ್ರಸ್ವಮ್" ಮಹರ್ಷಿಗಳ ದೀರ್ಘದೃಷ್ಟಿಯ ಉಪದೇಶವಿದು ಮಾನವ ಸಂಕುಲಕ್ಕೆ. "ದೀರ್ಘದರ್ಶಿಗಳಾಗಿ, ಸಮೀಪದರ್ಶಿಗಳಾಗಬೇಡಿ" ಅವರು ಕಂಡು ನುಡಿದ ದೀರ್ಘ ಭಗವಂತನವರೆಗೆ ವ್ಯಾಪಿಸಿದ್ದು. ನಮ್ಮ ಪರಿಸ್ಥಿಯಲ್ಲಿ ಜೀವನದ ಗುರಿಯಾದ ಅಧ್ಯಾತ್ಮದ ದೀರ್ಘದೆಡೆಗಿನ ಸಾಗುವಿಕೆ ಒತ್ತಟ್ಟಿಗಿರಲಿ, ಲೌಕಿಕ ಬದುಕಿನ ದೂರದರ್ಶಿತ್ವವೂ ನಮಗಿಲ್ಲವಾಗಿದೆ. ನಾವಿಂದು ಆಹಾರದ ಹೆಸರಿನಲ್ಲಿ ವಿಷವನ್ನು ಉಣ್ಣುತ್ತಿದ್ದೇವೆ. ಹೆಚ್ಚು ಇಳುವರಿಯೆನ್ನುವ ಭ್ರಮಾಲೋಕದ ಕೋಟೆಯೊಳಗಿನ ಬಂಧಿಗಳಾಗಿ ನಾವು ನವನಾಗರಿಕತೆಯ ಸಿದ್ಧಾಂತವನ್ನು ರೂಪಿಸಿದ್ದು, ರಾಸಾಯನಿಕಗಳ ರೂಪದಲ್ಲಿ.

ಫಸಲನ್ನು ಹೆಚ್ಚಿಸುವ ಗೊಬ್ಬರವಾಗಿ ರಾಸಾಯನಿಕಗಳ ಬಳಕೆ ; ಬೆಳೆದ ಫಸಲನ್ನು ಕೀಟಗಳ ಬಾಧೆಯಿಂದ ಸಂರಕ್ಷಿಸಲೋಸುಗ ರಾಸಾಯನಿಕ ಕೀಟನಾಶಕಗಳ ಉಪಯೋಗ ; ಕೃಷಿಕ್ಷೇತ್ರದಿಂದ ಬೇರ್ಪಡಿಸಿದ ಬೆಳೆಗಳ ಸಂರಕ್ಷಣೆಗಾಗಿ ಮತ್ತೆ ರಾಸಾಯನಿಕಗಳಿಗೆ ಮೊರೆ - ಇದು ನಮ್ಮ ವಿಷವ್ಯೂಹ.

ರಾಸಾಯನಿಕಗಳ ವ್ಯಾಪಕ ಬಳಕೆ ಸೃಷ್ಟಿಸುವ ಸಮಸ್ಯೆಗಳು ಸರಮಾಲೆಯೇ ಸರಿ. ದೈಹಿಕವಾಗಿ ಅನಾರೋಗ್ಯಗಳ ಸಾಲು ಸಾಲು, ಭಾರತೀಯರ ಮಹತ್ತ್ವದ ಶೋಧನೆಯಾದ 'ಅನ್ನಸ್ಯ ಯೋ ಆಣಿಷ್ಠೋ ರಸಃ ತನ್ಮನಃ''ಅನ್ನಮಯಂ ಹಿ ಸೋಮ್ಯ ಮನಃ' ಎನ್ನುವ ಅನ್ನದಿಂದಲೇ ರೂಪುಗೊಳ್ಳುವ ಮನಸ್ಸಿನ ಮೇಲಾಗುವ ದುಷ್ಪರಿಣಾಮ ನಿಜಕ್ಕೂ ಭಯಂಕರ. ಈ ವಿಷವ್ಯೂಹದ ಘೋರ ಪರಿಣಾಮ ಇಷ್ಟಕ್ಕೇ ಸೀಮಿತವೇನೂ ಅಲ್ಲ. ಇದು ಪ್ರಕೃತಿಮಾತೆಯ ದಿವ್ಯ ಮಡಿಲನ್ನು ಛಿದ್ರಗೊಳಿಸುತ್ತಿರುವುದು, ಅದನ್ನು ಕಂಡೂ ಕಾಣದಂತಿರುವ ಕಂದರಾದ ನಮ್ಮ ವರ್ತನೆ ಮೂರ್ಖತೆಯ ತುಟ್ಟತುದಿ.

ನಮ್ಮ ಪರಂಪರೆಯ ಆಹಾರ ಸ್ವೀಕಾರದ ಕ್ರಮ ನಮ್ಮ ಆಹಾರದ ಉತ್ಪಾದನೆ ಮತ್ತು ಸಂರಕ್ಷಣೆಗಳು ಹೇಗಿರಬೇಕೆನ್ನುವುದು ತೋರಿಸಿಕೊಡುತ್ತಿದೆ. ನಾವು ಆಹಾರ ಸ್ವೀಕರಿಸುವಾಗ ಕೈಯಲ್ಲಿ ಶುದ್ಧ ಜಲವನ್ನು "ಅಮೃತೋಪಿಸ್ತರಣಮಸಿ ಸ್ವಾಹಾ" ಎಂದು ನುಡಿದು ಆ ಜಲವನ್ನು ಕುಡಿಯುತ್ತೇವೆ. ಮುಂದೆ ಸ್ವೀಕರಿಸಲಿರುವ ಆಹಾರಕ್ಕಿಂತ ಮೊದಲು ಉದರದಲ್ಲಿ ಅಮೃತಮಯವಾದ ಅಡಿಪಾತ್ರವಾಗಿ ಆ ಜಲ ಕಾರ್ಯನಿರ್ವಹಿಸಬೇಕೆನ್ನುವುದು ಅದರ ಆಶಯ. ಊಟ ಮುಗಿದಾಗ ಮತ್ತೆ ಶುದ್ಧ ಜಲವನ್ನು "ಅಮೃತಾಪಿಧಾನಮಸಿ ಸ್ವಾಹಾ" ಎಂದು ಸ್ವೀಕರಿಸಿದ ಆಹಾರದ ಮೇಲೆ ಅಮೃತಮಯವಾದ ಮುಚ್ಚಳವಾಗಿ ರೂಪುಗೊಳ್ಳಬೇಕೆಂದು ಬಯಸಿ ಸ್ವೀಕರಿಸುತ್ತೇವೆ. ಆದ್ದರಿಂದ ಆಹಾರ ಅಮೃತವಾಗಬೇಕೇ ಹೊರತು ವಿಷವಾಗಬಾರದು.

"ಅಮೃತಸ್ಯ ಪುತ್ರಾಃ" ಎಂದು ಕರೆಸಿಕೊಳ್ಳುವ ನಾವು, ನಮ್ಮ ಆಹಾರವು ಮೃತಸತ್ತ್ವವಾಗದೆ ಅಮೃತಸತ್ತ್ವವಾಗುವಂತೆ ಬಯಸಿ ಅಮೃತಪುತ್ರರಾಗೋಣವೇ?

(ನವೆಂಬರ್ ೨೦೦೪ನೇ ಧರ್ಮಭಾರತೀ ಸಂಪಾದಕೀಯ)

No comments: