Sunday, 6 July 2008

ಇಂಗ್ಲಿಷೋ? ಕಂಗ್ಲಿಷೋ?

ಕರ್ನಾಟಕದಲ್ಲೀಗ ಹೊಸ ವಿವಾದ. ಅಲ್ಲ ಹಳೆ ವಿವಾದಕ್ಕೆ ಹೊಸ ಜೀವ. ಕರ್ನಾಟಕದ ಉಚ್ಚನ್ಯಾಯಾಲಯ ಹೊಸ ತೀರ್ಪು ನೀಡಿತು. ಆಂಗ್ಲಭಾಷಾಮಾಧ್ಯಮದ ವಾದಕ್ಕದು ಪುಷ್ಟಿನೀಡಿತು. ಪರ - ವಿರೋಧದ ವಾದಸರಣಿ ಮತ್ತೆ ಗರಿಗೆದರಿತು.


ಹೌದು, ನಿಜವಾಗಿ ಇಂಗ್ಲಿಷ್ ನಮಗೆ ಬೇಕೇ? ನಾವಿಂದು ಬದುಕುತ್ತಿರುವ ಜಗತ್ತು ಪ್ರಾದೇಶಿಕ ಬದುಕಿನ ವಾಸ್ತವದಲ್ಲಿಲ್ಲ. ಅದು ಜಗದ್ವ್ಯಾಪಿ. ಜಗದೆಲ್ಲೆಡೆಯ ಸಂಬಂಧ - ಸಂಪರ್ಕಗಳು ನಮಗೆ ಅನಿವಾರ್ಯ. ಇಡೀ ಜಗತ್ತು ಪರಸ್ಪರ ಸಹಕಾರಿಯಾಗಿ ಬದುಕಬೇಕೆಂದರೆ ಭಾವ ವಿನಿಮಯ ಅಪೇಕ್ಷಿತ. ಭಾವ ವಿನಿಮಯಕ್ಕೆ ಪರಸ್ಪರ ಅರ್ಥವಾಗುವ ಭಾಷೆಯೊಂದು ಬೇಕೇಬೇಕು. ಆ ಭಾಷೆ ಯಾವುದಾಗಬೇಕೆಂದು ಚರ್ಚಿಸುವ, ನಿರ್ಣಯಿಸುವ ಅವಕಾಶ ನಮಗಿಲ್ಲವೇ ಇಲ್ಲ. ಇಂಗ್ಲಿಷ್ ಜಾಗತಿಕ ಸಂಪರ್ಕ ಭಾಷೆಯಾಗಿ ಸಾರ್ವತ್ರಿಕ ಅಂಗೀಕಾರವನ್ನು ಈಗಾಗಲೇ ಪಡೆದುಕೊಂಡಿದೆ.


ಒಟ್ಟಿನಲ್ಲಿ ಜಾಗತಿಕ ಸಂಪರ್ಕ ನಮಗೆ ಬೇಕು; ಅದಕ್ಕೊಂದು ಭಾಷೆ ಬೇಕು; ಬೇಕೋಬೇಡವೋ ಇಂಗ್ಲಿಷ್ ಆ ಜಾಗದಲ್ಲಿದೆ. ಹಾಗಾಗಿ ನಾವದನ್ನು ಒಪ್ಪಿಕೊಳ್ಳಲೇ ಬೇಕು.


ಇಂಗ್ಲಿಷ್ ಬೇಕೆಂದ ಮೇಲೆ ವಿದ್ಯಾರ್ಥಿ ದೆಸೆಯಲ್ಲಿಯೇ ಅದನ್ನು ವ್ಯವಸ್ಥಿತವಾಗಿ ಕಲಿಸುವುದು ಅವಶ್ಯಕ. ಇಂಗ್ಲಿಷ್ ಕಲಿಯದೇ ಅಸಂಖ್ಯ ವ್ಯಕ್ತಿಗಳು ಜೀವನದಲ್ಲಿ ಏರಬಹುದಾಗಿದ್ದ ಸ್ಥಾನದಿಂದ ವಂಚಿತರಾಗಿದ್ದಾರೆನ್ನುವುದು ಸೂರ್ಯಸ್ಪಷ್ಟ ಸಂಗತಿ.


ಇಂಗ್ಲಿಷ್ ಮಾಧ್ಯಮದ ಪರ - ವಿರೋಧ ಚರ್ಚೆಯಲ್ಲಿ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದು ಕಡಿಮೆಯೇ ಎನ್ನಬೇಕು.


ಇಂಗ್ಲಿಷ್ ಕಲಿತರೆ ಸಂಸ್ಕೃತಿಯೇ ನಷ್ಟವೆಂದವರು ಕೆಲವರು. ಇಂಗ್ಲಿಷ್ ಕಲಿತರೆ ದೇಸೀ ಹಾಳಾಯಿತು ಅಂತ ಮತ್ತೆ ಕೆಲವರು. ಮತ್ತೊಂದು ಭಾಷೆಯನ್ನು ಕಲಿತ ಮಾತ್ರಕ್ಕೆಯೇ ಇವೆಲ್ಲ ಹಾಳಾಗುವುದಾದರೆ ಅಷ್ಟೊಂದು ಅಶಾಶ್ವತವಾದದ್ದನ್ನು ನಾವೇಕೆ ಉಳಿಸಿಕೊಳ್ಳಬೇಕು? ಹಾಗಲ್ಲವಾದರೆ ಆ ಭಾಷೆಯೂ ಇದಕ್ಕೆ ಪೂರಕವೇ ಆಗಬೇಕು, ಆಗುತ್ತದೆ.

ವಿವೇಕಾನಂದರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಸನಾತನಸಂಸ್ಕೃತಿ ಜಗತ್ತಿನ ಗಮನ ಸೆಳೆದದ್ದು. ಅನಂತಮೂರ್ತಿಯಂತವರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಕನ್ನಡದ ಕಂಪು ಹೊರಗೂ ಹರಿದದ್ದು.

ಪ್ರಶ್ನೆ ಇರುವುದು ಮಾಧ್ಯಮದ ವಿಷಯದಲ್ಲಿ. ಖಂಡಿತವಾಗಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತಗಳಲ್ಲಂತೂ ಮಾತೃ ಭಾಷೆಯೇ ಮಾಧ್ಯಮವಾಗಬೇಕು. ಹೊಸದೊಂದು ಭಾಷೆಯನ್ನು ಕಲಿಯುತ್ತಲೇ, ಕಲಿಯಬೇಕಾದ ಅನ್ಯ ವಿಷಯಗಳನ್ನೂ ಅದರ ಮೂಲಕವೇ ಕಲಿಯ ಹೊರಡುವುದು ಎಳೆ ವಯಸ್ಸಿಗೆ ಶಿಕ್ಷೆಯೇ ಸರಿ.


ಅಷ್ಟೇ ಅಲ್ಲದೆ ಮಾತೃಭಾಷೆ ಮತ್ತು ಮಾತೃಭಾಷೆಯ ಪರಿಸರ ಮಗುವಿನ ಬೆಳವಣಿಗೆಗೆ ಸಹಕಾರಿ. ಅದು
ತಾಯಿಬೇರು. ಅದನ್ನು ಕಳಕೊಳ್ಳುವಂತಿಲ್ಲ.


ಆಂಗ್ಲಮಾಧ್ಯಮಪ್ರಿಯರ ಅಭಿಮತ - ಕಿರು ವಯಸ್ಸಿನಿಂದಲೇ ಎಲ್ಲವನ್ನೂ ಇಂಗ್ಲಿಷ್ ಮಯ ಗೊಳಿಸಿದರೆ ಭಾಷೆಯ ಮೇಲೆ ಪ್ರಭುತ್ವ ಸಾಧ್ಯ, ಇಲ್ಲವಾದರೆ ಅದು ಅಸಾಧ್ಯ ಅಂತ.


ಇದು ತಪ್ಪಭಿಪ್ರಾಯ.ಭಾಷೆಯ ಕಲಿಕೆಗೆ ಅದು ಶಿಕ್ಷಣ ಮಾಧ್ಯಮವೇ ಆಗಬೇಕೆಂದಾದರೆ ಪ್ರಪಂಚದ ಇಷ್ಟೊಂದು ಜನ ತಮ್ಮದಲ್ಲದ ಇಷ್ಟಾರು ಭಾಷೆಯನ್ನು ಕಲಿಯಲು ಸಾಧ್ಯವಿರಲಿಲ್ಲ.


ಹಾಗಾಗಿ ಇಂಗ್ಲಿಷನ್ನು ಕಲಿಕೆಯ ಒಂದು ಅಂಗವಾಗಿ ಚೆನ್ನಾಗಿ ಕಲಿಸುವುದು ಯೋಗ್ಯ. ಯಾವ ಕಾರಣಕ್ಕೂ ಮಾಧ್ಯಮವಾಗಿ ಬೇಡ.

5 comments:

ಯಜ್ಞೇಶ್ (yajnesh) said...

ಹೌದು,

ನನ್ನದೂ ಇದಕ್ಕೆ ಸಮ್ಮತಿಯಿದೆ. ಇಂಗ್ಲೀಷನ್ನು ಕಲಿತ ತಕ್ಷಣ ಯಾರೂ ಹಾಳಾಗುವುದಿಲ್ಲ. ಕನ್ನಡದ ಬಗ್ಗೆ ಅಭಿಮಾನ ಇರುವವರು ಯಾವ ಭಾಷೆ ಕಲಿತರೂ ಆ ಅಭಿಮಾನವನ್ನು ಉಳಿಸಿಕೊಳ್ಳುತ್ತಾರೆ.

ಈಗಿನ ಆಧುನಿಕ ಯುಗದಲ್ಲಿ ಇಂಗ್ಲೀಷ್ ಬಹಳ ಅನಿವಾರ್ಯವಾಗಿದೆ. ಎಷ್ಟೋ ಜನರು ಬುದ್ದಿವಂತರಿದ್ದರೂ ಇಂಗ್ಲೀಷ್ ಬರದೇ ಪರಿಸ್ಥಿತಿಯನ್ನು ನಿಭಾಯಿಸುವುದಲ್ಲಿ ಒದ್ದಾಡುವುದನ್ನು ನಾವು ಕಾಣುತ್ತೇವೆ.

ನಮ್ಮಲ್ಲಿ ಮೊದಲು ಆಗಬೇಕಾದ ಕೆಲಸವೆಂದರೇ ಶಿಕ್ಷಣ ವ್ಯವಸ್ಥೆಯನ್ನು ಸುದಾರಿಸುವುದು.

ಉತ್ತಮವಾದ ಲೇಖನ

Krupesh said...

I agree. Knowing English is a competitive advantage in today's global world but it cannot replace the mother tongue. There is no reason for insecurity.

Unknown said...

ಖಂಡಿತಾ ಇದು ಆಗಬೇಕಾದ್ದೆ. ಇಂಗ್ಲೀಷ್ ಬೇಡ ಎಂದು ಕುಳಿತರೆ ಮುಂದೆ ಇನ್ನೂ ಹೆಚ್ಚಿನ ಅವಾಂತರವಾಗುತ್ತದೆ. ಈಗಿನ ಮಕ್ಕಳಿಗೆ ಅದು ಅನಿವಾರ್ಯ. ಇಂಗ್ಲೀಷ್ ಬರದೆ ನಾವು ಒದ್ದಾಡುತ್ತಿರುವುದು ಸಾಕು. ಕನ್ನಡ ಮರೆಯಬಾರದು ಅಷ್ಟೆ. ಆದರೆ ಸತ್ಯದ ಸಂಗತಿಯೆಂದರೆ ಯಾವ ಭಾಷೆಯಲ್ಲಿ ತಾಕತ್ತು ಇದೆಯೋ ಅದು ತನ್ನಷ್ಟಕ್ಕೆ ತಾನೆ ಬೆಳೆಯುತ್ತಾ ಹೋಗುತ್ತದೆ. ಎಲ್ಲಿ ತಾಕತ್ತು ಇಲ್ಲವೋ ಅದು ತನ್ನಷ್ಟಕ್ಕೆ ತಾನೆ ನಶಿಸುತದೆ. ಬಲಸ್ಯ ಪೃಥ್ವಿ ತತ್ವ ಎಲ್ಲವುದಕ್ಕೂ ಅನ್ವಯ.

venu said...

Yes, u r right, we should learn english as a langauge but not as a medium.

ವಿ.ರಾ.ಹೆ. said...

ನಮಸ್ಕಾರ,

ನಿಜ. ವಿವೇಕಾನಂದರು ಇಂಗ್ಲೀಷ್ ಮೀಡಿಯಂನಲ್ಲಿ ಓದಲಿಲ್ಲ, ಅನಂತಮೂರ್ತಿಯೂ ಇಂಗ್ಲೀಷ್ ಮೀಡಿಯಂನಲ್ಲಿ ಓದಿಲ್ಲ. ಆದರೂ ಜಗತ್ತಿಗೆ ಭಾರತ, ಕನ್ನಡವನ್ನು ಹರಡಿದರು. ಅಲ್ಲವೇ? ಇಂಗ್ಲೀಷ್ ಬೇಡ ಎನ್ನುವುದಕ್ಕೂ, ಇಂಗ್ಲೀಷ್ ಮಾಧ್ಯಮ ಬೇಡ ಎನ್ನುವುದಕ್ಕೂ ವ್ಯತ್ಯಾಸವಿದೆ. ಎರಡನ್ನು ಸೇರಿಸಿ ಜೆನರಲೈಸ್ ಮಾಡುವುದು ಸರಿಯಲ್ಲ. ಮಕ್ಕಳು ಕೊನೇಪಕ್ಷ ಏಳನೇ ತರಗತಿವರೆಗಾದರು ತಮ್ಮ ತಾಯ್ನುಡಿಯಲ್ಲಿ ಕಲಿತರೇ ಒಳ್ಳೆಯದು. ಇಂಗ್ಲೀಷ್ ಒಂದು ಭಾಷೆಯಾಗೇ ಇರಲಿ, ಮಾಧ್ಯಮವಾಗಿ ಬೇಡ.