ಅನ್ನುವುದು ವಾಸ್ತವ ಪ್ರಶ್ನೆ. ಯಾಕೆಂದರೆ - ಬದುಕಿನ ಎಲ್ಲದರೊಂದಿಗೆ ಹೆಣೆದುಕೊಂಡಿರುವುದನ್ನು ಬೇಕು ಬೇಡದ ಜಿಜ್ಞಾಸೆಗೆ ಒಳಪಡಿಸುವುದು ಹೇಗೆ?
ಟಿ.ವಿ.ಯ ಆವಶ್ಯಕತೆಯನ್ನು ವಿಮರ್ಶೆಗೆ ಒಳಪಡಿಸುವ ಮೊದಲು ಮನೋರಂಜನೆಯ ಸ್ವರೂಪ ನಿಷ್ಕರ್ಷೆಯಾಗಬೇಕು.
ದಿನವಿಡಿಯ ಮನೋರಂಜನೆ ನಮ್ಮ ಸಂಸ್ಕೃತಿಗೆ ಪಥ್ಯವಾದದ್ದಂತೂ ಅಲ್ಲ. ಯಾವ ಜೀವನವಿಧಾನವೂ ಇದನ್ನು ಒಪ್ಪಿಕೊಳ್ಳಲಾರದು. ಹೇಗೆ ಒಪ್ಪಲು ಸಾಧ್ಯ ? ಅದು ಜೀವನದ ಒಂದು ಅಂಗ ಮಾತ್ರ ಆಗಿರಬೇಕಷ್ಟೇ.
ಮನೋರಂಜನೆಯನ್ನೇ ವೃತ್ತಿಯಾಗಿ ಸ್ವೀಕರಿಸುವವರ ವಿಷಯ ಬೇರೆ ; ಆದರೆ ಕೇಳುಗ ಅಥವಾ ನೋಡುಗ ಮನೋರಂಜನೆಯನ್ನೇ ನಿತ್ಯಕಾಯಕವಾಗಿಸಿಕೊಳ್ಳುವುದು ಸರಿಯಲ್ಲ. ಬದಲಾದ ಜೀವನಶೈಲಿ ಮನೋರಂಜನೆಯನ್ನೇ ಬದುಕಿನಲ್ಲಿ ಪ್ರಧಾನವಾಗಿಸಿಕೊಂಡಿದೆ. ಇದರಿಂದಾಗಿ ಊಟಕ್ಕೆ ಉಪ್ಪಿನಕಾಯಿಯ ಬದಲು ಉಪ್ಪಿನಕಾಯಿಯೇ ಊಟವಾಗಿದೆ.
ಮನಸ್ಸಿಗೆ ವೃತ್ತಿ ಅಥವಾ ಪ್ರವೃತ್ತಿಯ ಕಾರ್ಯಗಳಿಂದ ಏಕತಾನತೆ ಒದಗಿದಾಗ, ಅನ್ಯಾನ್ಯ ಕಾರಣಗಳಿಂದಾಗಿ ಬೇಸರ-ನೋವು-ನಿರಾಸೆಗಳು ಮನಸ್ಸನ್ನು ಆಕ್ರಮಿಸಿದಾಗ, ಮತ್ತೊಮ್ಮೆ ಹೊಸತನ ತುಂಬಿಕೊಳ್ಳಲು ಮನೋರಂಜನೆ ಅತ್ಯವಶ್ಯ. ಹಾಗಾಗದೆ ವೃತ್ತಿಯಷ್ಟೇ ಟಿ.ವಿ. ವೀಕ್ಷಣೆಯು ಪ್ರಮುಖವಾದರೆ ?
ಹಾಗಾಗಿ ಮನೋರಂಜನೆಯ ಈ ಸಿದ್ಧಾಂತ ಬದಲಾಗದೆ ಟಿ.ವಿ. ಉತ್ತಮಗೊಳ್ಳುವುದು ಅಸಾಧ್ಯ. ಟಿ.ವಿ.ಯ ಪ್ರಯೋಜನ ಖಂಡಿತವಾಗಿ ಮನೋರಂಜನೆ ಮಾತ್ರವಲ್ಲ, ಶಿಕ್ಷಣ-ಮಾಹಿತಿ ಸಂವಹನ-ಕಲಾಪ್ರದರ್ಶನ-ಸುದ್ದಿಪ್ರಸಾರ-ಸಾರ್ವಜನಿಕರ ಅಭಿಪ್ರಾಯ ಪ್ರಕಟಣೆಯ ಸಾಧ್ಯತೆ.... ಹೀಗೆ ಅದು ಬಹುವಿಧ ಪ್ರಯೋಜನಕಾರಿ.
ಆದರೆ ಇದೆಲ್ಲದರ ಉಪಯೋಗವನ್ನು ಬಹುಜನತೆ ಹೇಗೆ ಪಡೆದುಕೊಳ್ಳುತ್ತಿದೆ ? ಮನೆ-ಮನೆಗಳ ಟಿ.ವಿ. ಇವೆಲ್ಲದಕ್ಕಿಂತ ಧಾರಾವಾಹಿ-ಸಿನಿಮಾ-ಸಿನಿಮಾಧಾರಿತ ಕಾರ್ಯಕ್ರಮಗಳಿಗೆ ತನ್ನನ್ನು ತೆರೆದುಕೊಂಡಿರುತ್ತದೆ.
ಜೀವನಕ್ಕೊಂದು ಆದರ್ಶದ ಚೌಕಟ್ಟು ನಿರ್ಮಿಸುವ ಇರಾದೆಯೇ ಇಲ್ಲದ ಈ ಕಾರ್ಯಕ್ರಮಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿವೆ. ಕೌಟುಂಬಿಕಪರಿಸರ ಪ್ರಧಾನವಾಗಿ ಟಿ.ವಿ.ಯಿಂದಾಗಿ ಛಿದ್ರಗೊಳ್ಳುತ್ತಿದೆ. ಕುಟುಂಬ ಸದಸ್ಯರ ಪರಸ್ಪರ ಮಾತುಕತೆಗಾಗಲೀ, ಮನೆಗೆ ಬಂದವರೊಂದಿಗೆ ಮಾತನಾಡುವುದಕ್ಕಾಗಲೀ ಅವಕಾಶವಿಲ್ಲದಂತೆ ಟಿ.ವಿ.ಯ ದೃಶ್ಯ ಮತ್ತು ಶಬ್ದಗಳು ಮನೆಯನ್ನು ತುಂಬಿಕೊಳ್ಳುತ್ತಿವೆ.
ಹಾಗಾಗಿ ಮರುಚಿಂತನೆ ಇಂದಿನ ತುರ್ತು ಆವಶ್ಯಕತೆ-
“ಇಂದು ಇರುವ ವಿಧಾನದಲ್ಲಿ ನಮಗೆ ಟಿ.ವಿ. ಬೇಕೇ ?”
1 comment:
ವಸ್ತು ಸ್ಥಿತಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರ. ಕಾಲಾಯ ತಸ್ಮೈ ನಮಹಃ
ಇಂದಿನ ಜಗತ್ತಲ್ಲಿ ಟಿ.ವಿ. ಗೆ ಸದ್ಯ ಪರ್ಯಾಯವಾಗಿ ಏನೂ ಪರ್ಯಾಯವಾಗಿ ಬರುವ ಸಾದ್ಯತೆಯಿಲ್ಲ. ಹಾಗಾಗಿ ಅವರು ಹಾಕಿದ್ದನ್ನು ನಾವು ನೋಡಬೇಕಾಗಿದೆ ಅಷ್ಟೆ.
Post a Comment