(೧೩.೧೦.೨೦೦೮ ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಿತ ಲೇಖನ )
ಧರ್ಮ ಭಯ ಹುಟ್ಟಿಸುತ್ತಿದೆ. ಇದು ಇಂದಿನ ವಾಸ್ತವ. ಅಂದಮೇಲೆ ಅದು ಭಯೋತ್ಪಾದಕ. ಭಯೋತ್ಪಾದನೆ ನಮಗೆ ಬೇಡ. ಅದು ಸುಖೀಜೀವನಕ್ಕೆ ಮಾರಕ. ಮಾರಕವಾದದ್ದು ಅಳಿಯಲೇ ಬೇಕು. ಪೂರಕವಾದದ್ದು ಮಾತ್ರ ಉಳಿಯಬೇಕು. ಉಳಿಸುವುದು ಉಳಿಯಲಿ ; ಅಳಿಸುವುದು ಅಳಿಯಲಿ. ಇದೇ ತಾನೇ ನಮ್ಮ ನಿಲುವು.
ನೈಜವಾಗಿ ಧರ್ಮ ಅಂತಹದ್ದೇ? ಚಿಂತನಾರ್ಹ ಸಂಗತಿ.
ಅಂತಹದ್ದೇನೋ ಎಂದು ಅನಿಸುತ್ತಿದೆ. ಅನಿಸಿಕೆಯೆಲ್ಲ ವಸ್ತುಸ್ಥಿತಿಯಾಗದು. ವಸ್ತುಸ್ಥಿತಿಯೂ ಒಮ್ಮೊಮ್ಮೆ ಅನಿಸಿಕೆಯಾಗಬಹುದು, ಅಷ್ಟೆ.
'ಧರ್ಮ' ಶಬ್ದ ಸಂಸ್ಕೃತದ್ದು. ಅಲ್ಲದಕ್ಕೆ ಎರಡು ಅರ್ಥಗಳು. ಧರಿಸುವುದು ಧರ್ಮ. ಇದು ಧರ್ಮದ ಮೊದಲ ಅರ್ಥ. ಧರಿಸುವುದೆಂದರೆ? ನಾವು ಬಟ್ಟೆ ಧರಿಸಿದಂತೆ. ಬಟ್ಟೆ ನಮ್ಮ ಮೇಲಿದೆಯಾದರೂ ಅದು ನಿಂತಿರುವುದು ನಮ್ಮಿಂದಾಗಿಯೇ. ನಮ್ಮ ದೇಹವಿಲ್ಲದಿದ್ದರೆ ಬಟ್ಟೆ ಬಿದ್ದುಹೋಗುತ್ತಿತ್ತು. ಹಾಗೆಯೇ ಬದುಕನ್ನು ಧರಿಸುವುದು 'ಧರ್ಮ'. ಧರ್ಮವಿಲ್ಲದಿದ್ದರೆ? ಬದುಕು ಬಿದ್ದು ಹೋಗುತ್ತಿತ್ತು. ಧರ್ಮವಿದೆ; ಅದರಿಂದಾಗಿಯೇ ಬದುಕು ಉಳಿದಿದೆ. ಎಂಬಲ್ಲಿಗೆ ಧರ್ಮ ಬದುಕಿಸುವುದು ಎಂದಾಯಿತು.
ಪೋಷಿಸುವುದು ಧರ್ಮ. ಇದು ಇದರ ಇನ್ನೊಂದು ಅರ್ಥ. ಪೋಷಣೆಯೆಂದರೆ? ಗಿಡಕ್ಕೆ ಮಣ್ಣು ಕೊಟ್ಟಂತೆ ; ಗೊಬ್ಬರವಿಟ್ಟಂತೆ ; ನೀರುಣಿಸಿದಂತೆ. ಬದುಕಿಗಿಂತಹ ಪೋಷಣೆ ಧರ್ಮದ್ದು.
ಹಾಗಾದರೆ ಇಂದು ಮಾರಕ ; ಶೋಷಕ ಎನಿಸಿಕೊಂಡಿರುವುದೇನು? ಅದು ಧರ್ಮದ ವೇಷ ; ಧರ್ಮವಲ್ಲ. ರಾವಣನ ಸಂನ್ಯಾಸದಂತೆ. ಸೀತೆಯ ಅಪಹರಣಕ್ಕೆ ಬಂದಾಗ ರಾವಣನೂ ಸಂನ್ಯಾಸಿಯೇ. ಹೊರನೋಟಕ್ಕೆ ಹಾಗೆಯೇ ಕಾಣಿಸಿಕೊಂಡಿದ್ದನಾತ. ಒಳಗೆ? ಸಂನ್ಯಾಸವಿರಲಿಲ್ಲ. ಅಲ್ಲೊಬ್ಬ ಕಾಮುಕನಿದ್ದ ; ಕ್ರೂರಿಯಿದ್ದ. ಒಳಗಿನ ಸ್ಥಿತಿಯನ್ನು ಅರಿಯುವುದು ಹೇಗೆ? ಅದಕ್ಕೆ ಒಳನೋಟ ಬೇಕು. ಹೊರನೋಟದಿಂದ ಅದು ಸಾಧ್ಯವಾಗದು.
ಧರ್ಮ ಕೇವಲ ಹೊರಗಿನಿಂದ ಅರ್ಥವಾಗುವುದಿಲ್ಲ ಎನ್ನುವುದು ಇಂದಿನ ಮಾತು ಮಾತ್ರವಲ್ಲ, ಅದು ಹಳೆಯ ಅನುಭವವೇ. ಗೊತ್ತು ಅಂದುಕೊಂಡವರಿಗೂ ಸಿಗದಿದ್ದು ಅದು. ಇವನಿಗೇನು ಗೊತ್ತಾದೀತು? ಎನಿಸಿಕೊಂಡವನಿಗೂ ಆಳವಿತ್ತದ್ದದು.
ಬಹು ಹಿಂದಿನದೊಂದು ಕಥೆ. ಹಿಂದೆ ಎಂದರೆ ದ್ವಾಪರ ಯುಗದಷ್ಟು ಹಿಂದೆ. ಅದೊಂದು ವನ. ವನದಲ್ಲೊಂದು ಆಶ್ರಮ. ಆಶ್ರಮದ ಮುಂದೊಂದು ವೃಕ್ಷ. ವೃಕ್ಷದ ಬುಡದಲ್ಲೊಬ್ಬ ಮುನಿ. ಕೌಶಿಕನೆಂದು ಮುನಿಯ ಹೆಸರು. ಮುನಿ ವೇದವನ್ನು ನುಡಿವವ ; ಶಾಸ್ತ್ರವನ್ನು ಅರಿತವ ; ಪುರಾಣ ಅವನಿಗೆ ಕರತಲಾಮಲಕ ; ಇತಿಹಾಸದಲ್ಲವ ನಿಷ್ಣಾತ. ಈ ಮುನಿ ಧ್ಯಾನಮಗ್ನನಾಗಿದ್ದ. ಮರದ ಮೇಲೊಂದು ಪಕ್ಷಿ. ಪಕ್ಷಿ ಹಿಕ್ಕೆ ಹಾಕಿತು. ಮುನಿಗೆ ಸಿಟ್ಟು ಬಂತು. ಪಕ್ಷಿಯನ್ನು ಸುಟ್ಟು ಬಿಡಬೇಕೆಂದು ಕೊಂಡ. ಏನಾಶ್ಚರ್ಯ? ಪಕ್ಷಿ ಸುಟ್ಟು ಕರಕಲಾಗಿ ಕೆಳಗೆ ಬಿದ್ದಿತ್ತು. ಮುನಿಗೆ ತನ್ನ ಹಿಂಸಾಪ್ರವೃತ್ತಿಯ ಬಗ್ಗೆ ತಪ್ಪೆನಿಸಿದರೂ, ತನ್ನ ತಪೋಬಲದ ಬಗ್ಗೆ ಹೆಮ್ಮೆ ಎನಿಸಿತು.
ಮುನಿ ಮಧ್ಯಾಹ್ನದ ಭಿಕ್ಷೆಗಾಗಿ ಸಮೀಪದ ಗ್ರಾಮಕ್ಕೆ ಬಂದ. ಮನೆಯೊಂದರ ನುಂದೆ ನಿಂತು 'ಭಿಕ್ಷಾಂ ದೇಹಿ' ಎಂದ. ಒಳಗಿದ್ದ ಗೃಹಿಣಿ 'ಬಂದೇ' ಎಂದಳು. ಅದೇ ಹೊತ್ತಿಗೆ ಅವಳ ಪತಿ ಹಸಿದು ಊಟಕ್ಕೆ ಬಂದ. ಗಂಡನಿಗೆ ಊಟ ಬಡಿಸುವ ಕಾರ್ಯಕ್ಕೆ ತೊಡಗಿದ ಗೃಹಿಣಿ ಮುನಿಯನ್ನು ಮರೆತಳು. ಸಹಜವಾಗಿಯೇ ಮುನಿ ಕುಪಿತನಾದ. ಕೆಲ ಹೊತ್ತಿನ ಅನಂತರ ಭಿಕ್ಷೆ ನೀಡಲು ಬಂದಳು. ಮುನಿ ದುರುಗುಟ್ಟಿ ನೋಡಿದ. " ನಿನ್ನ ನೋಟಕ್ಕೆ ಸುಟ್ಟು ಹೋಗಲು ನಾನು ಪಕ್ಷಿಯಲ್ಲ " ಎಂದಳು ಗೃಹಿಣಿ. ಮುನಿ ಬೆಚ್ಚಿದ. ಏಕಾಂತದ ಘಟನೆ ಗೃಹಿಣಿಯ ಅರಿವಿಗೆ ಬಂದದ್ದು ಹೇಗೆಂದು ಚಕಿತನಾದ. 'ಅದು ಧರ್ಮದ ಮಹಿಮೆ' ಎಂದಳವಳು. ಮುನಿಯ ತಪಸ್ಸನ್ನು ಪ್ರಶಂಸಿಸುತ್ತಾ ಧರ್ಮದ ನೈಜ ಅರಿವು ಮುನಿಗಿಲ್ಲವೆಂದಳು. ಅಚ್ಚರಿಗೊಂಡ ಮುನಿ ಧರ್ಮದ ಅರಿವಿನ ಮಾರ್ಗ ಕೇಳಿದ. 'ಮಿಥಿಲೆಯಲ್ಲಿ ಧರ್ಮವ್ಯಾಧನೆನ್ನುವ ಧರ್ಮಾತ್ಮನಿದ್ದಾನೆ. ಅವನ ಬಳಿ ತೆರಳು, ಅವನು ತಿಳಿಸಬಲ್ಲ' ಎಂದಳು.
ಮುನಿ ಮಿಥಿಲೆಗೆ ಬಂದ. ಧರ್ಮವ್ಯಾಧನ ಅಂಗಡಿಯ ಮುಂದೆ ನಿಂತ. ಮುನಿಗೆ ವಿಚಿತ್ರವೆನಿಸಿತು. ಅದೊಂದು ಮಾಂಸದಂಗಡಿ. ಮಾರಾಟಗಾರನೇ ಧರ್ಮವ್ಯಾಧ. ಧರ್ಮವ್ಯಾಧ ಇವನನ್ನೇ ನಿರೀಕ್ಷಿಸುತ್ತಿದ್ದವನಂತೆ 'ಗೃಹಿಣಿ ಕಳಿಸಿದಳೇ?' ಎಂದ. ಕೌಶಿಕ ಆಶ್ಚರ್ಯ ಸಾಗರದಲ್ಲಿ ಮುಳುಗಿ ಹೋದ.
ಮುನಿ ಜಿಜ್ಞಾಸುವಾದ ; ಧರ್ಮವ್ಯಾಧ ವ್ಯಾಖ್ಯಾನಕಾರನಾದ. ಧರ್ಮ ಚಿಂತನೆ ನಡೆಯಿತು. ಪರಿಣಾಮವಾಗಿ ಧರ್ಮವರಿತ ಕೌಶಿಕ ; ಧರ್ಮದ ಮರ್ಮವರಿತ.
ಧರ್ಮದ ನಡೆ ಸೂಕ್ಷ್ಮವಾದದ್ದು. ಅದರ ಅರಿವಿಗೆ ಒಳನೋಟ ಬೇಕು. ಆ ಒಳನೋಟ ಸಿಕ್ಕಾಗ ಧರ್ಮದ ಧರಿಸುವ - ಪೋಷಿಸುವ ಗುಣ ಮನದಟ್ಟಾಗುತ್ತದೆ. ಅದಾಗದಿದ್ದಾಗ ಧರ್ಮದ ಹೆಸರಿನಲ್ಲಿ ಧರ್ಮವಲ್ಲದ್ದು ಮೆರೆದಾಡುತ್ತದೆ. ಹಾಗಾಗದಂತಿರಲು ಧರ್ಮದ ನೈಜ ಅರಿವು ಬೇಕು. ಅದಕ್ಕೆ ಪ್ರಯತ್ನಶೀಲರಾಗಬೇಕು.
2 comments:
ನನಗೀ ಲೇಖನ ತುಂಬಾ ಖುಷಿಕೊಟ್ಟಿತು. ಮುನಿಯ ಕತೆ ಇನ್ನೂ ಖುಷಿ ಕೊಟ್ಟಿತು. ಹಾಗೆಯೇ ನಮ್ಮ ಆನಂದರಾಮ ಶಾಸ್ತ್ರಿಗಳು ಇನ್ನೊಂದಿಷ್ಟು ಸಮಸ್ಯೆ ಇಟ್ಟಿದ್ದಾರೆ.
ಸಾಧಕರು ಮಾಂಸದಂಗಡಿಯಲ್ಲಿಯೂ, ಮನೆಯಲ್ಲಿಯೂ ಕೊಚ್ಚೆಗುಂಡಿಯಲ್ಲಿಯೂ ಇರಬಹುದು ಎಂದಾಯಿತು.ನಿಜವಾದ ಸಾಧಕನಿಗೆ ಜ್ಞಾನಿಗೂ ಆತನ ವೇಷ ಭೂಷಣ ವೃತ್ತಿಗೂ ಸಂಬಂಧವಿಲ್ಲ ಎಂದಾದಮೇಲೆ ಜಪ ತಪ ಮಡಿ ಮೈಲಿಗೆ ಪಾರಾಯಣ ಪುರಾಣ ಮಾಡುತ್ತಲಿರುವವರು ಇನ್ನೂ ಜ್ಞಾನಿಯ ಹಂತಕ್ಕೆ ತಲುಪಿಲ್ಲ ಎಂಬ ಪರೋಕ್ಷ ಅರ್ಥವನ್ನು ನೀಡುತ್ತದೆ. ಸಾಧು ಸಂತರು ತಮ್ಮ ವೇಷಭೂಷಣ ಆಚಾರ ವಿಚಾರಗಳಿಂದ ಪಾಮರರನ್ನು ಮಾತ್ರಾ ಸೆಳೆಯಬಲ್ಲರು. ಜ್ಞಾನಿಗಳನ್ನಲ್ಲ. ಯಾವ ಮುನಿಗೆ ತನ್ನ ಜೀವದ ಜೀವನದ ಬಗ್ಗೆ ಭಯ ಇರುತ್ತದೆಯೋ ಆತ ಭಕ್ತರಿಗೆ ಅಭಯ ನೀಡಲಾರ.
ಅಸಮಾನ್ಯನಿಗಿಂತ ಜನಸಾಮಾನ್ಯನೇ ಜ್ಞಾನಿ.
ಜಗದೀಶ ಶರ್ಮರೇ ಈ ಆನಂದ ರಾಮ ಶಾಸ್ತ್ರಿಗಳ ಉತ್ತರ ರೂಪದ ಪ್ರಶ್ನೆಗಳು ನನಗೆ ಅರ್ಥವಾಗಿಲ್ಲ. ತಮಗೆ ಆಗಬಹುದು ಅರ್ಥ, ಕೊಂಚ ಬಿಡಿಸಿ ತಮ್ಮ ಮುಂದಿನ ಲೇಖನದಲ್ಲಿ ಹೇಳುವಿರಾ?
ಪ್ರತಿಕ್ರಿಯೆಗೆ ಧನ್ಯವಾದಗಳು.
ಉತ್ತಮ ಪ್ರಶ್ನೆಗಳನ್ನು ಕೇಳಿದ್ದೀರ.
ಖಂಡಿತಾ ಉತ್ತರಿಸುತ್ತೇನೆ.
Post a Comment