Saturday 31 January, 2009

ಅವನಿಗೊಪ್ಪುವ ನಡೆ - ನುಡಿ

ಜಗತ್ತಿಗೆ ಈಶನಾದ ಅವನೇ ನಮೆಲ್ಲರ ಅಪ್ಪ. ಅವನ ಅಡಿಗೆ ಬಾಗುವುದೇ ಜೀವಿಯ ಸೌಜನ್ಯ. ಅವನೇ ನಾಥನಿರುವಾಗ ಅನಾಥರಾರು? ಎಲ್ಲರು ಸನಾಥರೇ. ನಮೆಲ್ಲರ ಅಪ್ಪನಿಗೆ ಬೇಸರ ಉಂಟುಮಾಡದಿರುವುದೇ ಮಕ್ಕಳಾದ ನಮ್ಮೆಲ್ಲರ ಜೀವನ ವ್ರತವಾಗಬೇಕು. ಅವನಿಗೆ ಬೇಸರವಾಗುವುದು ಯಾವಾಗ? ಅವನ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸಿದಾಗ. ಸೃಷ್ಟಿ ಅವನದು. ಹಾಗಾಗಿ ಸೃಷ್ಟಿಯ ಕುರಿತಾದ ನಮ್ಮ ಧೋರಣೆಗಳು ಅವನೂ ಒಪ್ಪುವಂತಿರಬೇಕು. ಸೃಷ್ಟಿಯ ಬಳಕೆ ಅವನ ಅನುಮತಿಯಂತಿರಬೇಕು. ಅವನಿಗೆ ಸಂತಸವಾಗುವುದು ಈ ಎರಡನ್ನು ಒಪ್ಪಿಕೊಂಡಾಗ. ಅವನ ಮನ ಒಪ್ಪುವಂತೆ ನುಡಿಯಿರಲಿ ; ನಡೆಯಿರಲಿ.

Thursday 29 January, 2009

ಮನುಭಾಷಿತ - 12

ವ್ಯಕ್ತಿ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಮನುಷ್ಯನ ಎಲ್ಲ ಚಟುವಟಿಕೆಗಳು ಮನಸ್ಸಿನ ಅಧೀನ. ಮನಸ್ಸು ಕುಣಿಸಿದಂತೆ ಕುಣಿಯುವ ಸೂತ್ರದ ಬೊಂಬೆ ಈ ದೇಹ. ಕಣ್ಣು - ಮೂಗು - ಕಿವಿ - ಚರ್ಮ - ನಾಲಗೆ ಮುಂತಾದ ಇಂದ್ರಿಯಗಳೆಲ್ಲ ಮನಸ್ಸು ನುಡಿದಂತೆ ತಾನೇ ನಡೆಯುವುದು?

ಪ್ರತಿಯೊಬ್ಬ ಕೊಲೆಗಾರ ಹೊರಗೆ ಕೊಲ್ಲುವ ಮುನ್ನ ತನ್ನ ಮನಸ್ಸಿನಲಿಯೇ ಕೊಂದಿರುತ್ತಾನೆ. ಕಳ್ಳ ಕಳ್ಳತನ ಮಾಡುವುದು ಮೊದಲು ಮನಸ್ಸಿನಲ್ಲಿಯೇ. ವ್ಯಭಿಚಾರಿ ವ್ಯಭಿಚಾರ ಮಾಡುವುದೂ ಮೊದಲು ಮನದಲ್ಲಿಯೇ. ಎಲ್ಲ ಅಪರಾಧಗಳ ಜನ್ಮಭೂಮಿ ಮನಸ್ಸು.

ಅಪರಾಧ ಜಗತ್ತಿನಲ್ಲಿ ಶಿಕ್ಷೆಯಾಗುವುದು, ಹೊರ ಅಪರಾಧಗಳಿಗೆ. ಯಾಕೆಂದರೆ ಮನಸ್ಸಿನೊಳಗಿನ ಅಪರಾಧಕ್ಕೆ ಸಾಕ್ಷಿ ಇಲ್ಲ ; ಸಾಕ್ಷಿಯಿಲ್ಲದ ಅಪರಾಧ ಸಿಂಧುವಲ್ಲ ; ಸಿಂಧುವಾಗದ್ದಕ್ಕೆ ಶಿಕ್ಷೆಯಿಲ್ಲ.

ಮನಸ್ಸು ತಪ್ಪು ಮಾಡದಂತಿರಲು ಅಂತಸ್ಸಾಕ್ಷಿಯ ಜಾಗ್ರತಿ ಅಗತ್ಯ. ನ್ಯಾಯದ ಹಾದಿಯಲ್ಲಿ ಮುನ್ನಡೆಸುವ ಆ ಅಂತಸ್ಸಾಕ್ಷಿಗೆ ಹೆಸರು 'ವೈವಸ್ವತಯಮ'. ಅನುಭವಿಗಳು ನುಡಿಯುವುದು ಅದನ್ನೇ-

ಯಮೋ ವೈವಸ್ವತೋ ರಾಜಾ ಯಸ್ತವೈಷ ಹೃದಿಸ್ಥಿತಃ |
ತೇನ ಚೇದವಿವಾದಸ್ತೇ ಮಾ ಗಂಗಾನ್ ಮ ಕುರೂನ್ ಗಮಃ |
ತೇನ ಚೇಚ್ಚ ವಿವದಸ್ತೇ ಮಾ ಗಂಗಾನ್ ಮಾ ಕುರೂನ್ ಗಮಃ |

"ನಿನ್ನ ಹೃದಯದಲಿ ಬೆಳಗುತ್ತಿರುವ ಯಮಧರ್ಮನೊಂದಿಗೆ ನಿನಗೆ ವಿವಾದವಿಲ್ಲವಾದರೆ, ಅವನ ಧರ್ಮಪಥ ನಿನಗೆ ಪಥ್ಯವೆನಿಸಿದರೆ, ನಿನ್ನ ನಡೆ ಅವನಿಗೆ ಸಮ್ಮತವಾದರೆ, ನೀನು ಪುಣ್ಯಜೀವಿ ; ಪುಣ್ಯ ಸಂಪಾದನೆಗಾಗಿ ನೀನು ಕಾಶಿಕ್ಷೇತ್ರಕ್ಕೋ, ಕುರುಕ್ಷೇತ್ರಕ್ಕೋ ಯಾತ್ರೆ ಮಾಡಬೇಕಿಲ್ಲ. ನಿನಗೂ ಯಮನಿಗೂ ವಿವಾದವಿದ್ದರೆ, ನಿನ್ನ ಮನಸ್ಸು ಅವನಿಗೆ ಸರಿಹೊಂದದಿದ್ದರೆ ನೀನು ಪಾಪಿ ; ನೀನೆಲ್ಲಿಗೂ ಯಾತ್ರೆ ಮಾಡಬೇಕಿಲ್ಲ ; ನಿನ್ನ ಯಾತ್ರೆ ವ್ಯರ್ಥ".

ಮನು ತಪಸ್ಸಿನ ತಪ್ಪಾದ ಚಿಂತನೆಗಳನ್ನೂ ಅಶುಭ ಕರ್ಮವೆಂದು ಹೆಸರಿಸುತ್ತಾನೆ-

ಪರದ್ರವ್ಯೇಷ್ವಭಿಧ್ಯಾನಂ ಮನಸಾsನಿಷ್ಟಚಿಂತನಮ್ |
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ||

ಅನ್ಯರ ಗಳಿಕೆಯನ್ನು ಕಬಳಿಸುವ ಯೋಚನೆ ; ಮನಸ್ಸಿನ ತುಂಬ ಕೆಟ್ಟ ಚಿಂತನೆ. ಸತ್ಯವನ್ನು ಸುಳ್ಳೆಂದೂ, ಸುಳ್ಳನ್ನು ಸತ್ಯವೆಂದೂ ನಂಬುವುದು ಇದು ಮನಸ್ಸಿನ ಅಪರಾಧ. ಈ ಅಪರಾಧ ಮನಸ್ಸಿನ ಕ್ಷೋಭೆಗೆ ಕಾರಣ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Tuesday 27 January, 2009

ಅದಾಗಿ ಬರದಿರಲಿ....

"ಹನ್ನೆರಡು ವರ್ಷಗಳ ಕಾಲ ಸತತ ಯಾಗ ಮಾಡಿದವನಿಗಿಂತ ಒಮ್ಮೆಯೂ ಸಿಟ್ಟು ಮಾಡದವ ಶ್ರೇಷ್ಠ" ಎನ್ನುತ್ತದೆ ಮಹಾಭಾರತ.ಕೋಪವೊಂದಿಲ್ಲದಿರೆ ಮನಸ್ಸು ಅಸೀಮ ಶಾಂತಿಯ ಸರೋವರವಾಗಿರುತ್ತದೆ.ಮನವೆಂಬ ಮಾನಸ ಸರೋವರದ ನಿಶ್ಚಲತೆಯನ್ನು ಭಂಗಗೊಳಿಸಿ, ಅದನ್ನು ಅಲ್ಲೋಲಕಲ್ಲೋಲಗೊಳಿಸಲು ಕ್ಷಣಮಾತ್ರದ ಕೋಪವೆಂಬ ಕಲ್ಲು ಸಾಕು.ಮನದ ನಿಶ್ಚಲತೆಯೆಂದರೆ ಅದು ಅಧ್ಯಾತ್ಮದ ಉನ್ನತಿ ; ದೈವಿಕದ ಭವ್ಯತೆ ; ಭೌತಿಕದ ಬಂಗಾರ ; ಬುದ್ಧಿಯ ವಿಜಯ. ಹಾಗಿರುವಾಗ ಮನದ ನಿಶ್ಚಲತೆಯನ್ನು ಹಾಳುಮಾಡಿಕೊಳ್ಳದಿರುವುದು ಅಪೇಕ್ಷಣೀಯ. ಕೋಪ ಅದನ್ನು ಭಗ್ನಗೊಳಿಸುತ್ತದೆ ಎಂದಾದರೆ ಅದು ನಮಗೇಕೆ ಬೇಕು? ಕೋಪವೇ ಇಲದ ಬದುಕನ್ನು ಆಶಿಸೋಣ. ಕೋಪವೇ ಬೇಡವೆಂದಲ್ಲ. ನಾವಾಗಿ ಬೇಕಾದಾಗ ತರಿಸಿಕೊಳ್ಳೋಣ ; ಅದಾಗಿ ಬರುವುದು ಬೇಡ.

Monday 26 January, 2009

ಮನುಭಾಷಿತ - 11

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಬಯಕೆ ಬದುಕಿನ ಜೀವಸ್ರೋತ. ಸಾಮಾನ್ಯರಲ್ಲಿ ಸಾಮಾನ್ಯನ ಕ್ಷುದ್ರಾತಿಕ್ಷುದ್ರ ಬಯಕೆಯಿಂದಾರಂಭಿಸಿ ಅಧ್ಯಾತ್ಮಸಾಧಕರ ಪರಮೋನ್ನತ ಪರಮಾತ್ಮ ಕಾಮನೆಯವರೆಗೆ ಅದರ ಹರವು.

ಆದ್ದರಿಂದಲೇ ಫಲದ ಪ್ರತೀಕ್ಷೆಯಲ್ಲಿ ಕರ್ಮ.ಎಲ್ಲ ಸಲವೂ ನಿರೀಕ್ಷೆ ಸಫಲವಾಗುತ್ತದೆಯೆಂದೇನೂ ಇಲ್ಲ. ನಿರೀಕ್ಷಿತ ಫಲ ದೊರೆಯದಿದ್ದಾಗ ನಿರಾಸೆ ಸಹಜ.

ನಿರಾಸೆ, ಕಾರ್ಯದಿಂದಲೇ ವಿಮುಖವಾಗಿಸುತ್ತದೆ. ನಿರಾಸೆಯ ಕಬಂಧಬಾಹುಗಳಲ್ಲಿ ಬಂಧಿಯಾಗುವ ಮನುಷ್ಯ ಸ್ತಬ್ಧನಾಗುತ್ತಾನೆ ; ಜೀವನೋತ್ಸಾಹವನ್ನು ಕಳೆದುಕೊಳ್ಳುತ್ತಾನೆ ; ತನ್ನನ್ನು ಅಸಮರ್ಥ, ಅಪ್ರಯೋಜಕ ಎಂದುಕೊಳ್ಳುತ್ತಾನೆ ; ಜಗತಿನೆಲ್ಲೆಡೆ ಅವನಿಗೆ ಶೂನ್ಯವೇ ಕಾಣುತ್ತದೆ.

ಹಾಗೆಂದು ಈ ನಿರಾಸೆ ವ್ಯಕ್ತಿಯನ್ನು ಆಸೆಯೇ ಇಲ್ಲದವನನ್ನಾಗಿಯೇನೂ ಮಡುವುದಿಲ್ಲ. ಆಸೆ ಮನದೊಳಗೆ ಮಡುಗಟ್ಟಿಯೇ ಇರುತ್ತದೆ. ಬಯಕೆಯ ಈಡೇರಿಕೆಯತ್ತ ಕಾರ್ಯರತನಾಗುವುದಿಲ್ಲ ಅಷ್ಟೆ.

ಮಾನವ ಸಂಪನ್ಮೂಲ ಸರ್ವಶ್ರೇಷ್ಠ ಸಂಪನ್ಮೂಲ. ಸೃಷ್ಟಿಯ ಯಾವ ಸಂಪತ್ತೂ ವ್ಯರ್ಥವಾಗಬಾರದು. ಒಂದಲ್ಲ ಒಂದು ರೀತಿಯಲ್ಲಿ ಸೃಷ್ಟಿಗೆ ಸಹಕಾರಿಯಾಗಲೇ ಬೇಕು ಅದು. ಅದರಲ್ಲೂ ಭಗವಂತನ ಅದ್ಭುತ ಸೃಷ್ಟಿಯಾದ ಮಾನವ ನಿರುಪಯೋಗಿಯಾಗಬಾರದು.

"ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ ಶತಂ ಸಮಾಃ - ಕರ್ಮಗಳನ್ನು ಮಾಡುತ್ತಲೇ ಪೂರ್ಣಾಯುಷ್ಯವನ್ನು ಪೂರ್ಣಗೊಳಿಸು" ಎನ್ನುತ್ತದೆ ಉಪನಿಷತ್ತು. ನಿರಾಶಾವದಿಯಾಗಿ ಕಾರ್ಯವಿಹೀನನಾಗುವುದು ಸನಾತನ ಸಂಸ್ಕೃತಿಯ ಸದಾಚಾರವಲ್ಲ.

ಇಂತಹ ನಿರಾಶಾವದಿಗೆ ಮನು ನೀಡುವ ಮಾರ್ಗದರ್ಶನ -

ಆರಭೇತೈವ ಕರ್ಮಾಣಿ ಶ್ರಾಂತಃ ಶ್ರಾಂತಃ ಪುನಃ ಪುನಃ |
ಕರ್ಮಾಣ್ಯಾರಭಮಾಣಂ ಹಿ ಪುರುಷಂ ಶ್ರೀರ್ನಿಷೇವತೇ ||

ಕಾರ್ಯಗಳಲ್ಲಿ ಎಷ್ಟೇ ವಿಘ್ನಗಳು ಎದುರಾದರೂ, ವಿಘ್ನಗಳು ಎಷ್ಟೇ ಖಿನ್ನನನ್ನಾಗಿಸಿದರೂ ಮತ್ತೆ ಮತ್ತೆ ಪ್ರಯತ್ನಶೀಲನಾಗಬೇಕು.

ನಿರಾಶನಾಗದೆ ನಿರಂತರ ಕಾರ್ಯಶೀಲನಾಗುವ ಪುರುಷನಲ್ಲಿಗೆ ಸಂಪತ್ತು ಹರಿದುಬರುತ್ತದೆ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Friday 16 January, 2009

ನಿಯಮ ಕೋಟೆಯೊಳ ಸಾಮ್ರಾಟ

ಬದುಕಿನ ಗತಿ ಅನೂಹ್ಯ. ಅದು ಆರಂಭವಾಗುವುದು ಹೇಗೆ? ಅದರ ಮಧ್ಯ ಹೇಗೆ? ಅದರ ಅಂತ್ಯ ಹೇಗೆ? ಬರುವ ಸವಾಲುಗಳು ಹೇಗಿರುತ್ತವೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವುದು ಕಷ್ಟ.

ಪರಿಸರ, ಪ್ರವಾಹದಂತೆ ಬದುಕನ್ನು ತೇಲಿಸಿಕೊಂಡು ಹೋಗುವಂತದ್ದು. ಬದುಕು ತೇಲಿಹೋಗದಂತಿರಲು ದೃಢವಾದ ಆಸರೆ ಬೇಕು. ವಿವೇಕಕ್ಕಿಂತ ದೃಢವಾದ ಆಸರೆ ಬೇರಿಲ್ಲ. ವಿವೇಕ ಜೊತೆಯಿದ್ದಾಗ ಕುದಿಯುವ ಲಾವಾರಸವೂ ತಂಪಾಗುತ್ತದೆ ; ಸುರಿಯುವ ವರ್ಷಧಾರೆಯೂ ಸಿಂಚನವಾಗುತ್ತದೆ ; ಉಬ್ಬರದ ಸಾಗರವೂ ಶಾಂತಗಂಭೀರವಾಗುತ್ತದೆ ; ಬೀಸುವ ಚಂಡಮಾರುತವೂ ಅನುಕೂಲವಾತವಾಗುತ್ತದೆ.

'ವಿವೇಕ' ಜೀವನವನ್ನು ಲಯಬದ್ಧಗೊಳಿಸುತ್ತದೆ. ಲಯವಿಲ್ಲದ ಗೀತವೂ - ವಾದ್ಯವೂ ಕರ್ಕಶವೆನಿಸುತ್ತದೆ. ಕರ್ಣ ಮಾಧುರ್ಯಕ್ಕೆ ಅದು ಲಯಸಂಪನ್ನವಾಗಬೇಕು.

ಲಯಬದ್ಧ ಜೀವನಕ್ಕೆ ನಿಯಮ ಬೇಕು. ನಮ್ಮದೇ ಬದುಕನ್ನು ನಾವು ಸಜ್ಜನಿಕೆಯ ಬೇಲಿಯೊಳಗೆ ಬಂಧಿಸುವುದೇ ನಿಯಮ. ನಿಯಮ ಕೋಟೆಯೊಳಗಿನ ಬದುಕು ಸಾಮ್ರಾಟನ ಬದುಕು ; ಚಕ್ರಾಧಿಪತಿಯ ಬದುಕು. ಈ ಕೋಟೆ, ಸುತ್ತ ಇಲ್ಲದಿದ್ದರೆ ಅದು ಅನಾಥ ಬದುಕು ; ಭಿಕ್ಷುಕನ ಬದುಕು ; ಸೂತ್ರ ಹರಿದ ಗಾಳಿಪಟದಂತಹ ಬದುಕು.

Tuesday 6 January, 2009

ಮನುಭಾಷಿತ - 10

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸುಖ ಮತ್ತು ದುಃಖ. ಇವೆರಡು ಜಿಜ್ಞಾಸುಲೋಕಕ್ಕೊಂದು ಸವಾಲು. ಶೋಧಕರ ಶೋಧನೆಯ ಆದ್ಯತೆ ಕೂಡ. ಯಾಕೆಂದರೆ ಮನುಷ್ಯನ ಇತಿಹಾಸ ಪುಟಗಳು ಸಾರುತ್ತಿರುವುದು ; ವರ್ತಮಾನ ಕ್ರಿಯಾಶೀಲವಾಗಿರುವುದು ; ಭವಿಷ್ಯದ ಆಶೋತ್ತರಗಳು ಮೂಡಿಬರುವುದು ಈ ಎರಡು ವಿಷಯಗಳನ್ನು ಆಧರಿಸಿಯೇ.

ಸುಖ - ದುಃಖಗಳ ಜಿಜ್ಞಾಸೆ ಸೃಷ್ಟಿಯಷ್ಟೇ ಪ್ರಾಚೀನ. ಸೃಷ್ಟಿಯಾರಂಭದಿಂದ ಈ ಕುರಿತ ಚರ್ಚೆ ಜೀವಂತ. ಇಂದಿಗೂ ಜಗತ್ತಿನ ಚಿಂತಕರು ಇದರ ನಿರ್ವಚನವನ್ನು ನೀಡಲು ಪ್ರಯತ್ನಿಸುತ್ತಿರುವುದು ಅದರ ಗಾಂಭೀರ್ಯಕ್ಕೆ ದ್ಯೋತಕ.

ಇದು ಚಿಂತಕ ವರ್ಗಕ್ಕೆ ಮಾತ್ರವಲ್ಲ, ಸಾಮಾನ್ಯರಿಗೂ ಜಿಜ್ಞಾಸೆಯೇ. ಯಾಕೆಂದರೆ ವಿದ್ಯಾವಂತ - ಅನಕ್ಷರಸ್ಥ, ಬಡವ - ಶ್ರೀಮಂತ ಎನ್ನುವ ಭೇದವಿಲ್ಲದೆ ಎಲ್ಲರ ಬಾಳಿನ ಗುರಿಯೂ ಸುಖವೇ. ಸುಖದ ಅಪೇಕ್ಷೆ ಮನದಲ್ಲಿ ಮನೆಮಾಡಿದಾಗ ಮೊದಲು ಏಳುವ ಪ್ರಶ್ನೆಯೇ 'ಹಾಗೆಂದರೇನು?' ಎನ್ನುವುದು. ಸುಖದ ಅಭಿಲಾಷೆ ಮತ್ತು ದುಃಖದ ನಿವಾರಣೆ ಇವೆರಡು ಜೀವಿಯ ನಿರಂತರ ಕ್ರಿಯಾಶೀಲತೆಯ ಗುರಿಗಳು. ಗುರಿಯೆಡೆಗೆ ಸಾಗುವ ಪ್ರಯತ್ನದಲ್ಲಿ ಸುಖಕ್ಕೆ ಕಾರಣವಾಗುವವರ ಕುರಿತು ಪ್ರೀತಿ ; ದುಃಖವನ್ನುಂಟುಮಾಡುವವರ ಬಗ್ಗೆ ದ್ವೇಷಮೂಡುವುದು ಸಹಜವೇ ಎನ್ನಬೇಕು.

ಮನಸ್ಸಿನ ಇನ್ನೊಂದು ನಿರ್ಣಯವೆಂದರೆ ಸುಖ - ದುಃಖಗಳು ಬೇರೆಯವರಿಂದ ದೊರೆಯುತ್ತದೆನ್ನುವುದು. ಇದರಿಂದಾಗಿ ಸುಖದ ಬೆಂಬತ್ತಿ ಮರೀಚಿಕೆಯೆನ್ನುವ, ದುಃಖವನ್ನು ನಿರಾಕರಿಸಿ ಜನ್ಮಕ್ಕಂಟಿದ ಜಾಡ್ಯವೆನ್ನುವ ಪರಿಸ್ಥಿತಿಯ ನಿರ್ಮಾಣ.

ಮನು, ಅರ್ಥಮಾಡಿಕೊಂಡಷ್ಟೂ ಅರ್ಥದ ವ್ಯಾಪ್ತಿ ವಿಸ್ತಾರಗೊಳ್ಳುವ ವಿಶಿಷ್ಟ ಮಾತನ್ನಾಡುತ್ತಾನೆ-

ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಮ್ |
ಏತದ್ವಿದ್ಯಾತ್ಸಮಾಸೇನ ಲಕ್ಷಣಂ ಸುಖದುಃಖಯೋಃ ||

ಎಲ್ಲ ದುಃಖವೂ ಅನ್ಯರ ಅಧೀನ. ಎಲ್ಲ ಸುಖವೂ ತನ್ನೊಳಗಿನ ನಿಧಿ. ಹೀಗಿದೆ ಸುಖ - ದುಃಖದ ಸ್ವರೂಪ.

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Monday 5 January, 2009

ನಿನ್ನಂಘ್ರಿ ಪದರೇಣು ಶಿರಧರಿಪ ಹೊನ್ನಯ್ಯ
ಭಾಗ್ಯವದು ಎನಗಿರಲಿ ನಾ ದಾಸನಯ್ಯ

ನಿನ್ನ ಕಾಯಕಗೈವ ಹಂಬಲದ ಮಧುರಸವ
ಕಚ್ಚದೆಲೆ ಕಡಿಯದೆಲೆ ಮಧುಕರವು ನೀಡುವುದೇ
ಮಧುಕರಕೆ ಬೆಚ್ಚಿದರೆ ರಸದ ಸ್ವಾದದ ಸೊಲ್ಲ
ಸಾರಲಹುದೇ ದೇವ ಜಗಪೊರೆವ ಜಗದೀಶ

ನಿನ್ನ ಮಹಿಮೆಯ ಜಗಕೆ ಸಾರುವುದೇ ಪರಧರ್ಮ
ಸಾರುವರೆ ಬಲನೀಡು ಓ ಮಹಾಬಲದೇವ
ಮಧುಕರಕೆ ಶುಭವಿರಲಿ ಮಧುವು ಜಗಕಾಗಿರಲಿ
ಮಧುವ ಜಗಕುಣಿಸುವುದು ಬದುಕ ಗುರಿಯಾಗಿರಲಿ

Sunday 4 January, 2009

ಮನುಭಾಷಿತ - 9

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ

ಸ್ತ್ರೀ - ಪುರುಷ ಸಂಯೋಗ ಸೃಷ್ಟಿಸಹಜ ಕಾರ್ಯ. ಹೆಣ್ಣಿಗೆ ಗಂಡಿನಲ್ಲಿ ಒಲವು ; ಗಂಡಿಗೆ ಹೆಣ್ಣಿನಲ್ಲಿ ಅನುರಕ್ತಿ ; ಇದು ಸೃಷ್ಟೀಶ ಸೃಷ್ಟಿಗಿತ್ತ ವರ.

ಪ್ರಾಣಿಸಮೂಹದಲ್ಲಿ ಇದು ಮುಕ್ತ. ಮನುಷ್ಯರಲ್ಲಿ ಅದರಲ್ಲೂ ಭಾರತೀಯರಲ್ಲಿ ಇದಕ್ಕೊಂದು ಚೌಕಟ್ಟಿದೆ ; ಪರಿಧಿಯಿದೆ. ಈ ಚೌಕಟ್ಟಿಗೆ "ದಾಂಪತ್ಯ" ಎಂದು ಹೆಸರು.

ದಾಂಪತ್ಯ ಎರಡು ಹೃದಯಗಳ ಕೂಡುವಿಕೆಯ ವಿಶಿಷ್ಟ ಬದುಕು. ಅದು ಅನನ್ಯ ಕೂಡ.

ಮಮ ಹೃದಯಂ ತೇ ಅಸ್ತು |
ಮಮ ಚಿತ್ತೋ ಚಿತ್ತಮಸ್ತು ತೇ ||

ನನ್ನ ಹೃದಯದಲ್ಲಿ ನಿನ್ನ ಹೃದಯವಿರಲಿ, ನನ್ನ ಮನದಲ್ಲಿ ನಿನ್ನ ಮನಸ್ಸು ನೆಟ್ಟಿರಲಿ. ವಿವಾಹದ ಮಂಗಲ ಮುಹೂರ್ತದಲ್ಲಿ ವರ ವಧುವಿನೊಂದಿಗೆ ಹಂಚಿಕೊಳ್ಳುವ ಮಧುರ ಭಾವಾಭಿವ್ಯಕ್ತಿಯಿದು.

ಇಂತಹ ದಾಂಪತ್ಯವನ್ನೇ ಕವಿ ಭವಭೂತಿ ಅದ್ವೈತಕ್ಕೆ ಹೋಲಿಸುತ್ತಾನೆ. ಅವನ ನೋಟದಲ್ಲಿ ದಾಂಪತ್ಯ ಸುಖ - ದುಃಖಗಳ ಸಮ್ಮಿಶ್ರಣ ; ಅಸಂಖ್ಯ ಅವಸ್ಥೆಗಳ ಸಮ್ಮಿಲನ.

ಸಂಕೀರ್ಣವಾದ ದಾಂಪತ್ಯದ ಸಮಸ್ಯೆಗೆ ಮನು ಸೂಚಿಸುವುದು ಸರಳವಾದ ಪರಿಹಾರವನ್ನು -

ಸಂತುಷ್ಟೋ ಭಾರ್ಯಯಾ ಭರ್ತಾ
ಭರ್ತ್ರಾ ಭಾರ್ಯಾ ತಥೈವ ಚ |
ಯಸ್ಮಿನ್ನೇವ ಕುಲೇ ನಿತ್ಯಂ
ಕಲ್ಯಾಣಂ ತತ್ರ ವೈ ಧ್ರುವಮ್ ||

ಕುಟುಂಬದಲ್ಲಿ ಕಲ್ಯಾಣ ಸದಾ ನೆಲೆಸಿರಬೇಕೆಂದರೆ ಸತಿಪತಿಯರ ಪರಸ್ಪರ ಸಂಬಂಧ ಸುಮಧುರವಾಗಿರಬೇಕು.

ಸಂಬಂಧ ಸುಮಧುರವಾಗಿರಬೇಕೆಂದರೆ ಒಬ್ಬರಿಂದೊಬ್ಬರು ಸಂತುಷ್ಟರಾಗಬೇಕು. ಪತ್ನಿಯಿಂದಾಗಿ ಪತಿಯ ಬದುಕು ಸದಾ ಹಸಿರಾಗಬೇಕು ; ಪತಿಯಿಂದ ಪತ್ನಿಯ ಜೀವನಕ್ಕೆ ಹರ್ಷದ ನೆಲೆ ಒದಗಬೇಕು.

ಅರಿವಿನಿಂದ ಕೂಡಿದ ಅನ್ಯೋನ್ಯತೆಯ ಅನನ್ಯ ಸಹಜೀವನ ಭಾರತೀಯ ಪರಂಪರೆಯ ಅನುಪಮ ಕೊಡುಗೆ. ಅದನ್ನು ಉಳಿಸುಕೊಳ್ಳುವ ಮನೋದಾರ್ಢ್ಯ ದಂಪತಿಗಳದ್ದಾಗಿರಬೇಕಷ್ಟೇ!

ಇದು ಮನುವಿನ ಆಶಯ - ಸನಾತನ ಧರ್ಮದ ಹೃದಯ.

(ಧರ್ಮಭಾರತೀ ಅಂಕಣ ಬರಹ)

Saturday 3 January, 2009

ರಾಮರಾಜ್ಯ

ಕಳೆದ ಶತಮಾನ ಮತ್ತು ಈ ಶತಮಾನಗಳ ಭಾರತದ ರಾಜಕೀಯ ಪುಟಗಳನ್ನು ತೆರೆದಾಗ 'ರಾಮರಾಜ್ಯ' ಎನ್ನುವ ಶಬ್ದದ ವ್ಯಾಪಕ ಬಳಕೆಯನ್ನು ಗಮನಿಸಬಹುದು. ಈ ಶಬ್ದದ ಬಳಕೆಗೆ ಅಥವಾ 'ರಾಮರಾಜ್ಯ'ದ ಪರಿಕಲ್ಪನೆಗೆ ಕಾರಣವಾದದ್ದು ವಾಲ್ಮೀಕಿಗಳು ವರ್ಣಿಸಿದ ರಾಮರಾಜ್ಯದ ಹಿರಿಮೆ - ಗರಿಮೆ.

ರಾಮರಾಜ್ಯದ ವಿಧಾನದ ಕುರಿತಾಗಿ ಅಲ್ಲ ; ರಾಮರಾಜ್ಯದ ಪರಿಣಾಮದ ಕುರಿತಾಗಿ ವಾಲ್ಮೀಕಿಗಳ ಕಥನವನ್ನು ಇಲ್ಲಿ ಸಂಗ್ರಹಿಸಿದೆ.

ರಾಮರಾಜ್ಯದಲ್ಲಿ....

* ಯಾರೂ ಅಕಾಲ ಮರಣಕ್ಕೆ ತುತ್ತಾಗುತ್ತಿರಲಿಲ್ಲ ; ಇದರಿಂದಾಗಿ ವಿಧವೆಯರ ದುಃಖದ ಪರಿಚಯ ಯಾರಿಗೂ ಇರಲಿಲ್ಲ.

* ವಿಷವೈದ್ಯರಿಗೆ ವೃತ್ತಿಯಿರಲಿಲ್ಲ ; ಏಕೆಂದರೆ ಸರ್ಪ ಮುಂತಾದ ವಿಷಜಂತುಗಳ ಭಯವೇ ಇರಲಿಲ್ಲ.

* ರೋಗದ ಭೀತಿ ಯಾರಿಗೂ ಇರಲಿಲ್ಲ ; ಏಕೆಂದರೆ ರೋಗವೇ ಇರಲಿಲ್ಲ.

* ಮನೆಗಳಿಗೆ ಅಲಂಕಾರಕ್ಕಾಗಿ ಮಾತ್ರ ದ್ವಾರಗಳಿದ್ದವು ; ಏಕೆಂದರೆ ಕಳ್ಳರೇ ಇರಲಿಲ್ಲ.

* ಹಿರಿಯರು ಕಿರಿಯರಿಗೆ ಪ್ರೇತಕಾರ್ಯ ಮಾಡುವ ಪರಿಸ್ಥಿತಿ ಇರಲಿಲ್ಲ ; ಏಕೆಂದರೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು.

* ಅಳು - ಆಕ್ರಂದನ ಎಲ್ಲೂ ಕೇಳುತ್ತಿರಲಿಲ್ಲ ; ಏಕೆಂದರೆ ಎಲ್ಲೆಲ್ಲೂ ಆನಂದವೇ ತುಂಬಿತ್ತು.

* ನ್ಯಾಯಸ್ಥಾನಗಳ ಅವಶ್ಯಕತೆ ಇರಲಿಲ್ಲ ; ಏಕೆಂದರೆ ಪ್ರಜೆಗಳು ಪರಸ್ಪರ ಕಲಹವನ್ನೇ ಮಾಡುತ್ತಿರಲಿಲ್ಲ.

* ಕಲಹ ಇಲ್ಲವಾಗಿತ್ತು ; ಆದ್ದರಿಂದ ಹಿಂಸೆಯೇ ಇರಲಿಲ್ಲ.

* ವೃಕ್ಷಗಳು ಬೀಳುತ್ತಿರಲಿಲ್ಲ ; ಏಕೆಂದರೆ ಆಳವಾದ - ದೃಢವಾದ ಬೇರುಗಳನ್ನು ಹೊಂದಿದ್ದವು.

* ನಿರ್ದಿಷ್ಟ ಫಲಪುಷ್ಪಗಳಿಗಾಗಿ ನಿರೀಕ್ಷಿಸಬೇಕಾಗಿರಲಿಲ್ಲ ; ಏಕೆಂದರೆ ವರ್ಷವಿಡೀ ಫಲಪುಷ್ಪ ಸಮೃದ್ಧಿ ಇರುತ್ತಿತ್ತು.

* ಪ್ರವಾಹ - ಬರಗಾಲ ಎರಡೂ ಇರಲಿಲ್ಲ ; ಏಕೆಂದರೆ ಪರ್ಜನ್ಯನು ಜನರ ಇಚ್ಛೆಯಂತೆ ಮಳೆಯನ್ನು ಸುರಿಸುತ್ತಿದ್ದನು.

* ಉಷ್ಣ ಮತ್ತು ಶೀತದ ಬಾಧೆಯೇ ಇರುತ್ತಿರಲಿಲ್ಲ ; ಏಕೆಂದರೆ ಜನರಿಗೆ ಹಿತವಾಗುವಂತೆಯೇ ವಾಯುವು ಸದಾ ಬೀಸುತ್ತಿದ್ದನು.

* ಕಾರ್ಯಗಳನ್ನು ನಿರ್ವಹಿಸಲು ಅಧಿಕಾರಿಗಳು ಬೇಕಿರಲಿಲ್ಲ ; ಏಕೆಂದರೆ ಎಲ್ಲರೂ ತಮ್ಮ ವೃತ್ತಿಯನ್ನು ಪ್ರೀತಿಸಿ ನಿರ್ವಹಿಸುತ್ತಿದ್ದರು.

* ಸುಳ್ಳು ಎಲ್ಲಿಯೂ ಇರಲಿಲ್ಲ ; ಏಕೆಂದರೆ ಎಲ್ಲರೂ ಸತ್ಯವಂತರಾಗಿದ್ದರು.

* ಅಧರ್ಮದ ಪ್ರಸಕ್ತಿಯೇ ಇರಲಿಲ್ಲ ; ಎಲ್ಲರೂ ಧರ್ಮಪರಾಯಣರಾಗಿದ್ದರು.

ಇದು ವಾಲ್ಮೀಕಿಗಳು ಕಂಡ ರಾಮರಾಜ್ಯ.
ಇಂತಹ ರಾಮರಾಜ್ಯವೇ ತಾನೇ ನಮಗೂ ಬೇಕಿರುವುದು?


(೨೦೦೬ ಸೆಪ್ಟೆಂಬರ್ 'ಧರ್ಮಭಾರತೀ'ಯಲ್ಲಿ ಪ್ರಕಟಿತ ಲೇಖನ)