Monday 21 July, 2008

ಚಕ್ರವ್ಯೂಹದ ಚಕ್ರದೊಳಗೆ

ನಿನ್ನೆ ಗುರುಕುಲದಲ್ಲಿ ನಾಟಕವೊಂದನ್ನು ಮಾಡಿಸಿದ್ದೆ. 'ಅಂಕುರ' ತಂಡದವರು ಅಭಿನಯಿಸಿದ್ದು. ನೀನಾಸಂನಲ್ಲಿ ತರಬೇತಿ ಪಡೆದ ೬ ಜನರ ತಂಡವಿದು.


ನಾಟಕದ ವಸ್ತು, ಹತ್ತಾರು ಬಾರಿ ಬೇರೆಬೇರೆ ಕಲಾಮಾಧ್ಯಮಗಳಲ್ಲಿ ನಾವು ಕಂಡ 'ಚಕ್ರವ್ಯೂಹ'. ಈ ರಾಮಾಯಣ - ಮಾಹಾಭಾರತಗಳ ಶಕ್ತಿ ಅದ್ಭುತ ಅನಿಸುತ್ತೆ. ಅಲ್ಲಿಯ ಕತೆಗಳನ್ನು ಎಷ್ಟು ಬಾರಿ ಕೇಳಿಲ್ಲ? ಎಷ್ಟು ಬಾರಿ ಹೇಳಿಲ್ಲ? ಎಷ್ಟು ಬಾರಿ ನೋಡಿಲ್ಲ? ಎಷ್ಟು ಬಾರಿ ವಿಮರ್ಶೆ ಮಾಡಿಲ್ಲ? ಮತ್ತದು ರಂಗಕ್ಕೆ ಬಂದ್ರೆ,ಅಂತರಂಗಕ್ಕೆ ಇಳಿದ್ರೆ ಹೊಸ ಅನುಭವ ಮೂಡಿಬರುತ್ತೆ.


ನಿನ್ನೆ ಆದದ್ದೂ ಅದೇ. ಆ ಹ್ಯಾಂಗೋವರ್ ನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅಭಿಮನ್ಯುವಿನ ಚಕ್ರವ್ಯೂಹ ಹಾಗೆ ಮನಸ್ಸನ್ನು ತುಂಬಿದೆ.


'ಅಂಕುರ' ಅದನ್ನು ರಂಗಕ್ಕೆ ತಂದಿದ್ದು ವಿನೂತನ ವಿನ್ಯಾಸದಲ್ಲಿ. ನಮ್ಮ ಕುಮಾರವ್ಯಾಸ ಸ್ವತಃ ಮಾತನಾಡತೊಡಗಿದ್ದ. 'ಕರ್ಣಾಟಭಾರತಕಥಾಮಂಜರಿ'ಯ ಪದ್ಯಗಳೇ ಅದರಲ್ಲಿ ಮಾತುಗಳು. ಬೇರೆ ಸಂಭಾಷಣೆಯೇ ಅದರಲ್ಲಿಲ್ಲ. ಹಳಗನ್ನಡದ ಪದ್ಯಗಳನ್ನೇ ಹಾಡಾಗಿ, ಮಾತಾಗಿ ಹಾಗೆಯೇ ಬಳಸಿಕೊಳ್ಳಲಾಗಿತ್ತು. ಅರ್ಥವೇ ಆಗದೇನೋ ಎನ್ನುವ ಆ ಪದ್ಯಗಳು ಅದೆಷ್ಟು ಚೆನ್ನಾಗಿ ಪ್ರೇಕ್ಷಕರ ಒಳಗೆ ಇಳಿದವೆಂದರೆ, ಅದು ಹಳಗನ್ನಡವೆನ್ನುವುದೇ ಮರೆತುಹೋಗಿತ್ತು.


ಕಳರಿಪಯಟ್ ಮತ್ತು ಯಕ್ಷಗಾನದ ನಡೆಗಳನ್ನು ಜೋಡಿಸಿಕೊಂಡಿದ್ದು ಪರಿಣಾಮಕಾರಿಯಾಗಿತ್ತು. ಕಳರಿಪಯಟ್ ಗೆ ಯಕ್ಷಗಾನದ ರಿದಂನ ಬಳಕೆ ವಿಶಿಷ್ಟವಾಗಿತ್ತು. ರಾಗಸಂಯೋಜನೆ ಚೆನ್ನಾಗಿತ್ತು.


ಹಳೆಯ ಸಾಹಿತ್ಯ ಜನಮಾನಸದಿಂದ ದೂರಸರಿಯುತ್ತಿರುವ ಸಂದರ್ಭದಲ್ಲಿ; ಹಳೆಯ ಭಾಷೆ ಅರ್ಥವೇ ಆಗದ ಸನ್ನಿವೇಶದಲ್ಲಿ; ಕಾವ್ಯಗಳಲ್ಲಿ ಹೀಗೂ ಆಸಕ್ತಿ ಮೂಡಿಸಬಹುದು ಅನ್ನೋದು ಒಂದು ಹೊಸ ಸಾಧ್ಯತೆ.

Wednesday 16 July, 2008

"ಶಿಕ್ಷಣ ಕ್ರಾಂತಿ"! ಭ್ರಾಂತಿಯೇ?

ಓಶೋ ವಿಚಾರಧಾರೆಯೇ ಹಾಗೆ. ಯಾವ ವಿಷಯದ ಕುರಿತು ಅವರು ಮಾತನಾಡಿದರೂ ಅದು ಅದೇ ವಿಷಯದ ಉಳಿದೆಲ್ಲರ ವಿಚಾರಕ್ಕಿಂತ ಭಿನ್ನವಾಗಿರುತ್ತದೆ.


ಓಶೋ ನುಡಿಯುವ ಅಸಂಖ್ಯ ವಿಚಾರಗಳು ಭಾರತೀಯ ನೈಜ ವಿಚಾರಧಾರೆಗೆ ನೇರವಾಗಿ ಸಮನ್ವಿತವಾಗಿರುತ್ತದೆ. ಹಾಗಾಗಿಯೇ ಓಶೋ ಪುಸ್ತಕ ಆಪ್ಯಾಯಮಾನವೆನಿಸುವುದು.


ಶಿಕ್ಷಣದ ಹೊಸ ಪ್ರಣಾಳಿಕೆಗಾಗಿ ಪ್ರಯತ್ನಿಸುತ್ತಾ ಗುರುಕುಲದ ಕನಸು ಹೊತ್ತ ನನಗೆ ಓಶೋರ "ಶಿಕ್ಷಣ ಕ್ರಾಂತಿ"ಯ ಈ ವಿಚಾರಧಾರೆ ನಮ್ಮ ಚಿಂತನೆಗೆ ಸಂವಾದಿ ಎನಿಸಿತು.

ಒಂದಿಷ್ಟು ವಿಚಾರಗಳು ಇಲ್ಲಿವೆ ನೋಡಿ -


* ಮನುಷ್ಯನಲ್ಲಿರುವ ಮೊಗ್ಗು ಸಂಪೂರ್ಣವಾಗಿ ಅರಳುತ್ತಿಲ್ಲ. ಮನುಷ್ಯನಲ್ಲಿಯ ಹೂ ಪೂರ್ಣವಾಗಿ ಅರಳಿದಾಗ - ಕೃಷ್ಣ, ಬುದ್ಧ, ಕ್ರಿಸ್ತನಂತವರ ಆನಂದ, ಕಣ ಕಣದಲ್ಲೂ ತುಂಬಿ ತುಳುಕಾಡುತ್ತದೆ. ನಮಗೆ ಹೀಗೆ ಅರಳಲಾಗುತ್ತಿಲ್ಲ.ನನ್ನ ದೃಷ್ಟಿಯಲ್ಲಿ ಎಷ್ಟೇ ಕಷ್ಟ ಬಂದರೂ ಸರಿಯೇ, ಪ್ರತಿವ್ಯಕ್ತಿಯ ಒಳಗಿರುವ ಹೂ ಅರಳುವಂತೆ ಸಹಕರಿಸುವ ಶಿಕ್ಷಣದ ಪ್ರಯೋಗಗಳನ್ನು, ಪ್ರಕ್ರಿಯೆಗಳನ್ನು ಕಂಡುಹಿಡಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾಗಬಾರದು, ಶಿಕ್ಷಣ ಸಂಸ್ಥೆಗಳು ಪ್ರತಿ ವ್ಯಕ್ತಿಗೂ ತನ್ನ ಆತ್ಮಾನ್ವೇಷಣೆಯ ಶಾಲೆಯಾಗಬೇಕು.ಆಗವರು ತಮ್ಮ ಆತ್ಮಾನ್ವೇಷಣೆಯ ಯಾತ್ರೆಯಲ್ಲಿ ಮುಂದೆ ಸಾಗುವರು. ಆಗವರು ತಾವ್ಯಾರು, ತಾವೇನಾಗಬಹುದು ಎಂಬುದನ್ನು ಕಂಡುಕೊಳ್ಳುವರು.


* ಪ್ರತಿವ್ಯಕ್ತಿಯೊಳಗೆ ಹುದುಗಿರುವ ಹೂವನ್ನು ಅರಳಿಸುವ, ಸಹಜ ಸ್ಫೂರ್ತಿ ಬರುವಂತೆ ನಾವೇನು ಮಾಡಬೇಕೆಂಬ ವಿಚಾರ ಬಲು ವಿಸ್ತಾರವಾದ ವಿಚಾರ. ನಾವಿಷ್ಟಾದರೂ ಮಾಡಬಹುದು. ಪ್ರತಿ ವ್ಯಕ್ತಿಯೂ ಬೇರೆಬೇರೆ. ಎಲ್ಲರನ್ನೂ ಒಂದೇ ತರಹ ಮಾಡಲಾಗದು, ಮಾಡಲೂಬಾರದು ಎಂಬ ತಿಳುವಳಿಕೆ ನಮಗೆ ಬಂದರೆ ಸಾಕು, ನಮಗಿದು ಸ್ವೀಕೃತಿ ಆದರೆ ಸಾಕು, ಬಲು ಗಹನವಾದ , ಆಳವಾದ ಪರಿಣಾಮವನ್ನು ತರಬಹುದು. ಉದಾಹರಣೆಗೆ - ಒಬ್ಬ ವಿದ್ಯಾರ್ಥಿ ಗಣಿತದಲ್ಲಿನ ಹಿಂದೆ ಇದ್ದರೆ, ಆತ ಗಣಿತದಲ್ಲಿ ಸುಧಾರಿಸಿದರೆ ಮಾತ್ರ ಆತನನ್ನು ಮುಂದಿನ ತರಗತಿಗೆ ಹೋಗಲು ಅವಕಾಶ ಕೊಡುತ್ತೇವೆ ಎಂದು ಶಿಕ್ಷಣ ಸಂಸ್ಥೆ ಒತ್ತಾಯಿಸಬಾರದು. ಗಣಿತವೇನು ಅಂತಹ ದೊಡ್ಡ ವಿಷಯವೇನಲ್ಲ, ಇದಿಲ್ಲದಿದ್ದರೆ ಆತ ಜೀವನ ನಡೆಸಲಿಕ್ಕಾಗದು ಎಂದೇನಿಲ್ಲ. ನಮ್ಮ ಈ ಒತ್ತಾಯದಿಂದ ಆಗುವುದೇನೆಂದರೆ, ಆ ವಿದ್ಯಾರ್ಥಿ ಒಂದು ಕೀಳರಿಮೆಯಿಂದ , ತನ್ನ ಬಗ್ಗೆ ಹೀನತಾಭಾವದಿಂದ ಪ್ರಪಂಚಕ್ಕೆ ಪ್ರವೇಶಿಸುತ್ತಾನೆ. ನಾನು ಗಣಿತದಲ್ಲಿ ದಡ್ಡ ಎಂಬೀತನ ಭಾವನೆ ಜೀವನದ ಎಲ್ಲ ಆಯಾಮಗಳಲ್ಲೂ ಸಹ ಸೋಲಿನ ಭಾವನೆಯನ್ನು ನಿರ್ಮಿಸುತ್ತದೆ.ಎಲ್ಲೇ ಹೋದರೂ ತಾನು ಸೋಲುವೆನೆಂಬುದು ಈತನ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ.

* * *

ನಮ್ಮ ಪೋಷಕರು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಎಂದಿಗೇನೋ?

Monday 7 July, 2008

ಕಾರಂತರೂ, ಬೆಟ್ಟದ ಜೀವವೂ

ಶಿವರಾಮ ಕಾರಂತರ 'ಬೆಟ್ಟದ ಜೀವ' ಓದಿದೆ. ಸಾಮಾಜಿಕವಾಗಿ ಉತ್ತಮ ಬದುಕು ಮಾಡಹೊರಡುವ ಪ್ರತಿಯೊಬ್ಬನೂ ಓದಲೇಬೇಕಾದ ಪುಸ್ತಕ. 'ಕಾದಂಬರಿ'ಯ ಕುರಿತಾದ ಇಂದಿನ ಮನೋಭೂಮಿಕೆಯನ್ನು ಮನದಲ್ಲಿಟ್ಟುಕೊಂಡು 'ಬೆಟ್ಟದ ಜೀವ'ವನ್ನು ವಿಮರ್ಶಿಸಹೊರಟರೆ ಅದನ್ನು 'ಕಾದಂಬರಿ'ಯ ಪ್ರಕಾರಕ್ಕೆ ಸೇರಿಸಬಾರದೆನ್ನಿಸುತ್ತದೆ.


ಇಡೀ ಹೊತ್ತಿಗೆ ನಾಲ್ಕೈದು ದಿನಗಳಲ್ಲಿ ನಡೆಯುವ ಘಟನೆಯಲ್ಲಿಯೇ ಮುಗಿದುಹೋಗುತ್ತದೆ. ಅಷ್ಟರೊಳಗೆ ಒಂದು ಕಾಲಘಟ್ಟದ ಬದುಕು, ಬವಣೆ ಎಲ್ಲವನ್ನೂ ನಿರೂಪಿಸುವ ಪರಿ ವಿಶೇಷವಾಗಿದೆ.


ಲೇಖಕರು ದಾರಿತಪ್ಪಿ ರಾತ್ರಿಯೊಂದರ ಆಸರೆಗಾಗಿ ಮನೆಯೊಂದನ್ನು ಸೇರುತ್ತಾರೆ. ಬೆಳಗ್ಗೆ ಎದ್ದು ಹೊರಡಬೇಕಾದವರು ಒಂದೊಂದಾಗಿ ಘಟನೆಗಳು ನಡೆಯತೊಡಗಿದಂತೆ ಹೊರಡುವುದನ್ನು ಮುಂದೂಡುತ್ತಾ ಬರುತ್ತಾರೆ. ಇದರೊಂದಿಗೆ ಆ ಮನೆಯ ಕಥೆ - ವ್ಯಥೆ, ನೋವು - ನಿರಾಸೆ, ಸಾಮರ್ಥ್ಯ - ಔದಾರ್ಯ, ನಲಿವು - ಗೆಲುವು..... ಎಲ್ಲವೂ ಬಿಚ್ಚಿಕೊಳ್ಳತೊಡಗುತ್ತದೆ.


ಸಣ್ಣಸಣ್ಣ ತೊಡಕುಗಳು ಎದುರಾದಾಗಲೂ ಆಕಾಶವೇ ಕಳಚಿ ಮೈಮೇಲೆ ಬಿದ್ದಂತೆ ವರ್ತಿಸುತ್ತಿರುತ್ತೇವೆ. ನಮಗಾದ ಕಷ್ಟ ಪ್ರಪಂಚದ ಇನ್ನಾರಿಗೂ ಆಗಲೇ ಇಲ್ಲವೇನೋ ಎನ್ನುವಂತೆ ಕೂಗಾಡುತ್ತೇವೆ, ರೇಗಾಡುತ್ತೇವೆ, ಗೋಳಾಡುತ್ತೇವೆ, ಚೀರಾಡುತ್ತೇವೆ. 'ಬೆಟ್ಟದ ಜೀವ'ದ ಕಥಾನಾಯಕ ಬೆಟ್ಟವನ್ನೂ ಬರಿದಾಗಿಸಿ ಬದುಕಿ 'ಬೆಟ್ಟದ ಜೀವ'ವಾಗಿ ನಿಂತ ರೀತಿ ನಮಗೆಲ್ಲ ಮಾದರಿ. ಕಥಾನಾಯಕನ ನೈಜ ಬದುಕಿನ ಚಿತ್ರಣ ಅದು ಎಂದು ಕಾರಂತರು ನುಡಿಯುವಾಗಲಂತೂ, ಆ ವ್ಯಕ್ತಿಯನ್ನು ನಾವು ನೋಡಬೇಕಿತ್ತು ಎನಿಸುತ್ತದೆ.


ಒಂದು ಹವ್ಯಕ ಕುಟುಂಬದ ಕತೆ ಇದಾಗಿರುವುದು, ಮತ್ತೊಬ್ಬ ಹವ್ಯಕನಾಗಿ ನನಗೆ ಆತ್ಮೀಯ ಎನಿಸುತ್ತದೆ.


ಕಾರಂತರ ಕಥನಶೈಲಿಗೆ ತಲೆದೂಗಲೇಬೇಕು; ತಲೆಬಾಗಲೇಬೇಕು.

Sunday 6 July, 2008

ಇಂಗ್ಲಿಷೋ? ಕಂಗ್ಲಿಷೋ?

ಕರ್ನಾಟಕದಲ್ಲೀಗ ಹೊಸ ವಿವಾದ. ಅಲ್ಲ ಹಳೆ ವಿವಾದಕ್ಕೆ ಹೊಸ ಜೀವ. ಕರ್ನಾಟಕದ ಉಚ್ಚನ್ಯಾಯಾಲಯ ಹೊಸ ತೀರ್ಪು ನೀಡಿತು. ಆಂಗ್ಲಭಾಷಾಮಾಧ್ಯಮದ ವಾದಕ್ಕದು ಪುಷ್ಟಿನೀಡಿತು. ಪರ - ವಿರೋಧದ ವಾದಸರಣಿ ಮತ್ತೆ ಗರಿಗೆದರಿತು.


ಹೌದು, ನಿಜವಾಗಿ ಇಂಗ್ಲಿಷ್ ನಮಗೆ ಬೇಕೇ? ನಾವಿಂದು ಬದುಕುತ್ತಿರುವ ಜಗತ್ತು ಪ್ರಾದೇಶಿಕ ಬದುಕಿನ ವಾಸ್ತವದಲ್ಲಿಲ್ಲ. ಅದು ಜಗದ್ವ್ಯಾಪಿ. ಜಗದೆಲ್ಲೆಡೆಯ ಸಂಬಂಧ - ಸಂಪರ್ಕಗಳು ನಮಗೆ ಅನಿವಾರ್ಯ. ಇಡೀ ಜಗತ್ತು ಪರಸ್ಪರ ಸಹಕಾರಿಯಾಗಿ ಬದುಕಬೇಕೆಂದರೆ ಭಾವ ವಿನಿಮಯ ಅಪೇಕ್ಷಿತ. ಭಾವ ವಿನಿಮಯಕ್ಕೆ ಪರಸ್ಪರ ಅರ್ಥವಾಗುವ ಭಾಷೆಯೊಂದು ಬೇಕೇಬೇಕು. ಆ ಭಾಷೆ ಯಾವುದಾಗಬೇಕೆಂದು ಚರ್ಚಿಸುವ, ನಿರ್ಣಯಿಸುವ ಅವಕಾಶ ನಮಗಿಲ್ಲವೇ ಇಲ್ಲ. ಇಂಗ್ಲಿಷ್ ಜಾಗತಿಕ ಸಂಪರ್ಕ ಭಾಷೆಯಾಗಿ ಸಾರ್ವತ್ರಿಕ ಅಂಗೀಕಾರವನ್ನು ಈಗಾಗಲೇ ಪಡೆದುಕೊಂಡಿದೆ.


ಒಟ್ಟಿನಲ್ಲಿ ಜಾಗತಿಕ ಸಂಪರ್ಕ ನಮಗೆ ಬೇಕು; ಅದಕ್ಕೊಂದು ಭಾಷೆ ಬೇಕು; ಬೇಕೋಬೇಡವೋ ಇಂಗ್ಲಿಷ್ ಆ ಜಾಗದಲ್ಲಿದೆ. ಹಾಗಾಗಿ ನಾವದನ್ನು ಒಪ್ಪಿಕೊಳ್ಳಲೇ ಬೇಕು.


ಇಂಗ್ಲಿಷ್ ಬೇಕೆಂದ ಮೇಲೆ ವಿದ್ಯಾರ್ಥಿ ದೆಸೆಯಲ್ಲಿಯೇ ಅದನ್ನು ವ್ಯವಸ್ಥಿತವಾಗಿ ಕಲಿಸುವುದು ಅವಶ್ಯಕ. ಇಂಗ್ಲಿಷ್ ಕಲಿಯದೇ ಅಸಂಖ್ಯ ವ್ಯಕ್ತಿಗಳು ಜೀವನದಲ್ಲಿ ಏರಬಹುದಾಗಿದ್ದ ಸ್ಥಾನದಿಂದ ವಂಚಿತರಾಗಿದ್ದಾರೆನ್ನುವುದು ಸೂರ್ಯಸ್ಪಷ್ಟ ಸಂಗತಿ.


ಇಂಗ್ಲಿಷ್ ಮಾಧ್ಯಮದ ಪರ - ವಿರೋಧ ಚರ್ಚೆಯಲ್ಲಿ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದು ಕಡಿಮೆಯೇ ಎನ್ನಬೇಕು.


ಇಂಗ್ಲಿಷ್ ಕಲಿತರೆ ಸಂಸ್ಕೃತಿಯೇ ನಷ್ಟವೆಂದವರು ಕೆಲವರು. ಇಂಗ್ಲಿಷ್ ಕಲಿತರೆ ದೇಸೀ ಹಾಳಾಯಿತು ಅಂತ ಮತ್ತೆ ಕೆಲವರು. ಮತ್ತೊಂದು ಭಾಷೆಯನ್ನು ಕಲಿತ ಮಾತ್ರಕ್ಕೆಯೇ ಇವೆಲ್ಲ ಹಾಳಾಗುವುದಾದರೆ ಅಷ್ಟೊಂದು ಅಶಾಶ್ವತವಾದದ್ದನ್ನು ನಾವೇಕೆ ಉಳಿಸಿಕೊಳ್ಳಬೇಕು? ಹಾಗಲ್ಲವಾದರೆ ಆ ಭಾಷೆಯೂ ಇದಕ್ಕೆ ಪೂರಕವೇ ಆಗಬೇಕು, ಆಗುತ್ತದೆ.

ವಿವೇಕಾನಂದರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಸನಾತನಸಂಸ್ಕೃತಿ ಜಗತ್ತಿನ ಗಮನ ಸೆಳೆದದ್ದು. ಅನಂತಮೂರ್ತಿಯಂತವರಿಗೆ ಇಂಗ್ಲಿಷ್ ಬಂದಿದ್ದರಿಂದಲೇ ಕನ್ನಡದ ಕಂಪು ಹೊರಗೂ ಹರಿದದ್ದು.

ಪ್ರಶ್ನೆ ಇರುವುದು ಮಾಧ್ಯಮದ ವಿಷಯದಲ್ಲಿ. ಖಂಡಿತವಾಗಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತಗಳಲ್ಲಂತೂ ಮಾತೃ ಭಾಷೆಯೇ ಮಾಧ್ಯಮವಾಗಬೇಕು. ಹೊಸದೊಂದು ಭಾಷೆಯನ್ನು ಕಲಿಯುತ್ತಲೇ, ಕಲಿಯಬೇಕಾದ ಅನ್ಯ ವಿಷಯಗಳನ್ನೂ ಅದರ ಮೂಲಕವೇ ಕಲಿಯ ಹೊರಡುವುದು ಎಳೆ ವಯಸ್ಸಿಗೆ ಶಿಕ್ಷೆಯೇ ಸರಿ.


ಅಷ್ಟೇ ಅಲ್ಲದೆ ಮಾತೃಭಾಷೆ ಮತ್ತು ಮಾತೃಭಾಷೆಯ ಪರಿಸರ ಮಗುವಿನ ಬೆಳವಣಿಗೆಗೆ ಸಹಕಾರಿ. ಅದು
ತಾಯಿಬೇರು. ಅದನ್ನು ಕಳಕೊಳ್ಳುವಂತಿಲ್ಲ.


ಆಂಗ್ಲಮಾಧ್ಯಮಪ್ರಿಯರ ಅಭಿಮತ - ಕಿರು ವಯಸ್ಸಿನಿಂದಲೇ ಎಲ್ಲವನ್ನೂ ಇಂಗ್ಲಿಷ್ ಮಯ ಗೊಳಿಸಿದರೆ ಭಾಷೆಯ ಮೇಲೆ ಪ್ರಭುತ್ವ ಸಾಧ್ಯ, ಇಲ್ಲವಾದರೆ ಅದು ಅಸಾಧ್ಯ ಅಂತ.


ಇದು ತಪ್ಪಭಿಪ್ರಾಯ.ಭಾಷೆಯ ಕಲಿಕೆಗೆ ಅದು ಶಿಕ್ಷಣ ಮಾಧ್ಯಮವೇ ಆಗಬೇಕೆಂದಾದರೆ ಪ್ರಪಂಚದ ಇಷ್ಟೊಂದು ಜನ ತಮ್ಮದಲ್ಲದ ಇಷ್ಟಾರು ಭಾಷೆಯನ್ನು ಕಲಿಯಲು ಸಾಧ್ಯವಿರಲಿಲ್ಲ.


ಹಾಗಾಗಿ ಇಂಗ್ಲಿಷನ್ನು ಕಲಿಕೆಯ ಒಂದು ಅಂಗವಾಗಿ ಚೆನ್ನಾಗಿ ಕಲಿಸುವುದು ಯೋಗ್ಯ. ಯಾವ ಕಾರಣಕ್ಕೂ ಮಾಧ್ಯಮವಾಗಿ ಬೇಡ.

Tuesday 1 July, 2008

ಹೇಳೋದೊಂದು; ಮಾಡೋದೊಂದು. ಸರೀನಾ ಸ್ವಾಮಿ!?!

ಕನ್ನಡದ ವಿಷಯದಲ್ಲಿ ಹೊಸ ಚರ್ಚೆಗೆ ಉಪಕ್ರಮ ದೊರೆತಿದೆ. ಮಾತನಾಡುವ ಕನ್ನಡಕ್ಕೂ ಮತ್ತು ಬರೆಯುವ ಕನ್ನಡಕ್ಕೂ ಭಿನ್ನತೆ ಬೇಕೇ? ಬೇಡವೇ? ಅಂತ. ಶ್ರೀ ಕೆ. ವಿ. ತಿರುಮಲೇಶ್ ಸುಂದರವಾಗಿ ತಮ್ಮ ಅಭಿಪ್ರಾಯ ನಿರೂಪಿಸಿದ್ದಾರೆ- "ನುಡಿದಂತೆ ನಡೆಯಬೇಕು; ಆದರೆ ಬರೆಯಬಾರದು" ಅಂತ.


ಅವರು ಆ ಅಭಿಪ್ರಾಯಕ್ಕೆ ಬರುವ ಮುನ್ನ ಹುಟ್ಟಿಕೊಂಡ ಚರ್ಚೆ, ಗ್ರಾಂಥಿಕ ಕನ್ನಡದ ಬಗ್ಗೆ. ನಾವು ಮಾತನಾಡುವುದೇ ಬೇರೆ ರೀತಿ, ಬರೆಯುವುದೇ ಬೇರೆ ರೀತಿ. "ಈ ಭೇದ ಬೇಡ" ಅಂತ ಕೆಲವರ ನಿಲುವು. "ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಬರೆಯೋಣ" ಎನ್ನುತ್ತಾರವರು. ಇದರಿಂದ ಭಾಷೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆನ್ನುವುದು ಅವರ ಆಶಯ.


ಶ, ಷಗಳನ್ನು ತೆಗೆಯಬಹುದು, ಸ ಒಂದೇ ಸಾಕಾಗುತ್ತದೆ; ಮಹಾಪ್ರಾಣಗಳೇ ಬೇಡ; ದೀರ್ಘವನ್ನು ಬಿಟ್ಟುಬಿಡೋಣ; ಮುಂತಾದ ಅಭಿಪ್ರಾಯಗಳಿಗೆ ಅವರು ಬಂದಿದ್ದಾರೆ. ಇಷ್ಟೇ ಆದಾಗ 'ತುಂಬ ಸರಳ ಆಯ್ತಲ್ಲ' ಅಂತ ಅನ್ನಿಸತ್ತೆ.


ಭಾಷೆಯೊಂದರ ವ್ಯಾಕರಣಬದ್ಧತೆಯನ್ನು ಕಳಚಿ ಬಿಟ್ಟರೆ, ಭಾಷೆಯ ಭಾವವಿನಿಮಯದ ಉದ್ದೇಶ ವಿಫಲವಾಗತ್ತೆ. ಒಂದು ಪ್ರದೇಶದಲ್ಲಿ ವಾಸಿಸುವವರು ತಮ್ಮ ಭಾವ ವಿನಿಮಯಕ್ಕೆ ಸಂಕೇತಿಸಿಕೊಂಡದ್ದು ಈ ಕನ್ನಡ ಭಾಷೆ. ಕನ್ನಡದಲ್ಲಿ ಇಂದು ಮಾತನಾಡುವ ಭಾಷೆಯಲ್ಲಿ ಸಹಸ್ರ ಬಗೆಗಳುಂಟಾಗಿವೆ. ಜಾತಿಯ ಭಾಷೆಗಳು - ವರ್ಗದ ಭಾಷೆಗಳು - ಪ್ರದೇಶದ ಭಾಷೆಗಳು - ವೃತ್ತಿಯ ಭಾಷೆಗಳು . . . ಹೀಗೆ. ಇದರಲ್ಲೂ ಸಹ ಒಳಭೇದಗಳಿವೆ. ಉದಾಹರಣೆಗೆ ನಾನು ಮನೆಯಲ್ಲಿ ಮಾತನಾಡುವ ಹವ್ಯಕ ಕನ್ನಡ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡದ ಹವ್ಯಕರ ಭಾಷೆ ಬೇರೆ ಬೇರೆ. ಅಷ್ಟೇ ಅಲ್ಲದೆ, ಹವ್ಯಕರು ವಾಸಿಸುವ ಪ್ರದೇಶಗಳಲ್ಲಿನ ಸೀಮಾ ವ್ಯವಸ್ಥೆಗಳಲ್ಲಿ ಇದು ಬೇರೆ ಬೇರೆ.


ಹೀಗಿರುವಾಗ ಮಾತನಾಡಿದಂತೆಯೇ ಬರೆಯಹೊರಟರೆ, ಬರೆದದ್ದು ಸಮಸ್ತ ಕನ್ನಡಿಗರಿಗೆ ಅರ್ಥವಾದೀತೇ? ಖಂಡಿತ ಅರ್ಥವಾಗದು.

ಹಾಗಾಗಿಯೇ ಸಾಹಿತ್ಯಕವಾಗಿ, ಗ್ರಾಂಥಿಕವಾಗಿ ಕನ್ನಡದ ಬೇರೆಯದೇ ರೂಪದ ಅಸ್ತಿತ್ವ ಅನಿವಾರ್ಯ.