Saturday 28 June, 2008

ತಿಂದ ದೋಸೇಲಿ ಭಿನ್ನರಾಶಿ ಕಲಿಸ್ಬಹುದಾ!?!

"ಶಿಕ್ಷಣ" ಇಂದು ಬಹು ಚರ್ಚಿತ ವಿಷಯ. "ಕಲಿಸುವುದು ಹೇಗೆ?" ಅನ್ನೋದನ್ನೇ ಪ್ರಧಾನ ವಿಷಯವಾಗಿಸಿಕೊಂಡು ಇಂದು ಚರ್ಚೆ ಸಾಗಿದೆ. "ಏನನ್ನು ಕಲಿಸಬೇಕು"? ಅನ್ನುವಷ್ಟೇ ಪ್ರಾಧಾನ್ಯ "ಹೇಗೆ ಕಲಿಸಬೇಕು"? ಅನ್ನೋದಕ್ಕೂ ಸಿಕ್ಕಿದೆ.

ನಾವು 'ಗುರುಕುಲ'ದ ಕನಸು ಕಟ್ಟಿದಾಗ ನಮ್ಮ ಯೋಚನೆ ಇದ್ದದ್ದು ಇದೇ. ಇವತ್ತು ನಮ್ಮ ಶಾಲೆಗಳು ಕಲಿಸುತ್ತಿರುವುದನ್ನು ಬೇರೆ ವಿಧಾನದಲ್ಲಿ, ಇನ್ನೂ ಸುಲಭವಾಗಿ, ಇನ್ನೂ ಸರಳವಾಗಿ, ಇನ್ನೂ ಬೇಗ ಕಲಿಸಬಹುದೇ ಅಂತ.

ಈ ವಿಷಯದ ಬಗ್ಗೆ ನಾವು ತುಂಬಾ ಪ್ರಯೋಗ ಮಾಡಿದೆವು. ಎಲ್ಲ ಪ್ರಯೋಗಗಳ ಕೊನೆಗೆ ಸಿಕ್ಕ ಫಲಿತಾಂಶ ಅಂದ್ರೆ, ನಾವು ಅಂದುಕೊಂಡದ್ದನ್ನು ಸಾಧಿಸಬಹುದು ಅಂತ. ಈಗ್ಲೇ ಇದೆಲ್ಲ ಆಗಿದೆ ಅಂತ ಅಲ್ಲ, ಮಾಡಬಹುದು ಅಷ್ಟೇ.

ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ಎಷ್ಟು ಸುಲಭವಾಗಿ ಪಾಠ ಮಾಡಬಹುದು ಅನ್ನುವುದರ ಬಗ್ಗೆ ನಿನ್ನೆ ಸಿಕ್ಕ ಘಟನೆಯೊಂದು ಈ ಮಾತುಗಳನ್ನು ಬರೆಯುವಂತೆ ಮಾಡಿತು.

ನಮ್ಮ ಜಟ್ಟೀಮನೆ ಗಣಪತಣ್ಣ ಹೇಳಿದ ಘಟನೆ -
ಅವರು ಮೂರನೆಯ ತರಗತಿಯಲ್ಲಿದ್ದ ಸಮಯ. ಅವರಿಗಾಗ ಗಣಿತ ಬಲು ಕಷ್ಟದ ವಿಷಯ. ಅರ್ಥವೇ ಆಗುತ್ತಿರಲಿಲ್ಲವಂತೆ. ಅದರಲ್ಲೂ 'ಭಿನ್ನರಾಶಿ' ಅಂದ್ರೆ ಏನೂ ಅಂತನೇ ಗೊತ್ತಾಗ್ತಾ ಇರಲಿಲ್ಲವಂತೆ. ಒಬ್ಬ ಹೊಸ ಮೇಷ್ಟ್ರು ಅವತ್ತು ಗಣಿತ ಕಲಿಸಲು ಬಂದ್ರು. ಇವರಿಗೆ ಭಿನ್ನರಾಶಿ ಬರಲ್ಲ ಅಂತ ಗೊತ್ತಾಯ್ತು. ಆಗ ಅವರು ಪಾಠ ಮಾಡಿದ್ದು ಹೀಗೆ -
"ನಿಮ್ಮ ಮನೇಲಿ ಇವತ್ತು ದೋಸೆ ಮಾಡಿದಾರೆ ಅಂದ್ಕೋ. ನಿನ್ನ ತಟ್ಟೇಲಿ ದೋಸೆ ಇದೆ. ನೀನದನ್ನ ನಾಲ್ಕು ಪಾಲು ಮಾಡ್ತೀಯಾ. ಅದರಲ್ಲಿ ಒಂದು ಪಾಲು ತಿಂತೀಯಾ. ಮೊದಲು ನಾಲ್ಕು ಪಾಲು ಇತ್ತು. ಈಗ ಒಂದು ಪಾಲು ತಿಂದೆ. ಎಷ್ಟು ಪಾಲು ನಿನ್ನ ತಟ್ಟೇಲಿ ಉಳೀತು? ಕೂಡಲೇ ಉತ್ತರ ಬಂತು - ಮೂರು ಪಾಲು ಅಂತ. ಅದನ್ನು ನಾಲ್ಕನೇ ಮೂರು ಭಾಗ ಅಂತ ಕರೀತಾರೆ. ಹಾಗಾದ್ರೆ ಈಗ ಹೇಳು, ನೀನು ತಿಂದ ಭಾಗ ಎಷ್ಟು? ಮತ್ತೆ ಕೂಡಲೇ ಉತ್ತರ - "ನಾಲ್ಕನೇ ಒಂದು ಭಾಗ".

ಭಿನ್ನರಾಶಿ ತನಗೆ ಬಂತು ಅನ್ನುವ ಅನಿಸಿಕೆ ತಂದ ಆತ್ಮವಿಶ್ವಾಸ, ಗಣಪತಣ್ಣ ಗಣಿತದಲ್ಲಿ ಹಿಂದಿರುಗಿ ನೋಡದಂತೆ ಮಾಡಿತು.

ಇದೇ ಶಿಕ್ಷಣ. ಇಷ್ಟೇ ಅದರ ಗುಟ್ಟು.

ಕೀರ್ತಿಶೇಷ ಡಿ.ವಿ.ಜಿ. ಇದನ್ನೇ ಸುಂದರವಾಗಿ ಹೇಳ್ತಾರೆ - ಸಾವಿರ ಶಾಸ್ತ್ರ ವಾಕ್ಯಗಳಿಗಿಂತ ಸರಿಯುದಾಹರಣೆ ಲೇಸು ಅಂತ.

Wednesday 25 June, 2008

ನನ್ನ ಗುರುಕುಲ..............

ಗುರುಕುಲವೆಂದರೆ..............

ಅಧ್ಯಾತ್ಮದ ನೋಟ.
ಸಾಮರ್ಥ್ಯದ ವೃಧ್ಧಿ.
ಕೌಶಲದ ಪ್ರಗತಿ.
ಭಾವನೆಯ ಉತ್ಕಟತೆ.
ಆತ್ಮೀಯ ಒಡನಾಡಿ.
ಕಣಕಣವು ಜೀವಸೆಲೆ.
ಕಣ್ಣಿಗೆ ತಂಪು.
ಕಿವಿಗೆ ಇಂಪು.
ಉದರಕ್ಕೆ ಸೊಂಪು.
ಮನದ ಆಹ್ಲಾದ.
ಶಿರದ ಹೊನ್ನ ಕಿರೀಟ.
ಒಳನೋಟದ ಒಸಗೆ.
ಬಯಲಿನ ಬೆಸುಗೆ.


ಗುರುಕುಲದಲ್ಲಿ..............

ಪರೀಕ್ಷೆಯ ಭಯವಿಲ್ಲ; ಎದುರಿಸುವ ಆತ್ಮವಿಶ್ವಾಸವಿದೆ.
ಶಿಕ್ಷಣದ ವ್ಯಾಪಾರವಿಲ್ಲ; ವ್ಯಾಪಾರದ ಶಿಕ್ಷಣವಿದೆ.
ಅಹಂಕಾರದ ನುಡಿಯಿಲ್ಲ; ಆತ್ಮವಿಶ್ವಾಸದ ನಡೆಯಿದೆ.
ಗೆಲುವಿನ ಹಂಬಲವಿಲ್ಲ; ಗೆಲುವೇ ಉಸಿರಾಗಿದೆ.
ತಲೆ ತಗ್ಗಿಸುವ ವರ್ತನೆಯಿಲ್ಲ; ತಲೆಯೆತ್ತಿ ನಡೆಯುವ ದಿಟ್ಟತನವಿದೆ.
ದೌರ್ಜನ್ಯ ದೂರದ ಮಾತು; ಸೌಜನ್ಯವೆ ಮನೆ ಮಾತು.
ಜೀವನಕ್ಕಾಗಿ ಕಲಿಕೆಯಲ್ಲ; ಜೀವನವೇ ಕಲಿಕೆ.


ಗುರುಕುಲದಲ್ಲಿ...................

ಸಂಸ್ಕಾರವಿದೆ.
ಸಂಸ್ಕೃತವಿದೆ.
ಆಧುನಿಕತೆಯಿದೆ.
ಆಂಗ್ಲಭಾಷೆಯಿದೆ.
ದೇಶಭಕ್ತಿಯಿದೆ.
ಹಿಂದಿ ಕಲಿಕೆಯಿದೆ.
ವೇದವಿದೆ.
ವಿಜ್ಞಾನವಿದೆ.
ರಾಜನೀತಿಯಿದೆ.
ಪೌರನೀತಿಯಿದೆ.
ಇತಿಹಾಸವಿದೆ.
ಭೂಗೋಳವಿದೆ.
ಆಚಾರವಿದೆ.
ವಿಚಾರವಿದೆ.
ಸಂಸ್ಕೃತಿಯಿದೆ.
ಪ್ರಗತಿಯಿದೆ.
ಧ್ಯಾನವಿದೆ.
ಶ್ರಮಸೇವೆಯಿದೆ.
ಮೌನವಿದೆ.
ಸಂಗೀತವಿದೆ.
ನೃತ್ಯವಿದೆ.
ಮೃದಂಗವಿದೆ.
ವೀಣೆಯಿದೆ.
ವೇಣುವಿದೆ.
ವಿಜ್ಞಾನ ಪ್ರಯೋಗವಿದೆ.
ಕರ್ಮಕಾಂಡ ಪ್ರಯೋಗವಿದೆ.
ಗೃಹ ವಿಜ್ಞಾನವಿದೆ.
ಕಂಪ್ಯೂಟರ್ ಶಿಕ್ಷಣವಿದೆ.
ಲೇಖನವಿದೆ.
ಭಾಷಣವಿದೆ.
ಅಭಿನಯವಿದೆ.
ಅನುಭವವಿದೆ.
ಪೂಜೆಯಿದೆ.
ಪ್ರಾರ್ಥನೆಯಿದೆ.


ಗುರುಕುಲದ ಆಚಾರ್ಯರೆಂದರೆ..................

ಅಮಿತ ಶಿಷ್ಯಪ್ರೇಮ.
ಅನವರತ ಕ್ರಿಯಾಶೀಲತೆ.
ಅವಿರತ ಪ್ರಯತ್ನ.
ಅಸಂಭವದ ಸಾಧ್ಯತೆ.
ಅನನ್ಯ ಗುಣಪೂರ್ಣತೆ.
ಅನಂತದೆಡೆಗೆ ಲಕ್ಷ್ಯ.
ಅಪೂರ್ವ ಸೃಷ್ಟಿಶೀಲತೆ.
ಅಗಣಿತ ವಿಷಯ ಜ್ಞಾನ.
ಅಭಿನಂದನೀಯ ನಿಷ್ಕಪಟತೆ.
ಅನುಪಮ ಗಾಂಭೀರ್ಯ.
ಅವ್ಯಾಜ ಕರುಣೆ.
ಅನುಭವದ ವಜ್ರಗಣಿ.


ಗುರುಕುಲದ ಮಕ್ಕಳೆಂದರೆ..............

ಅಧ್ಯಾತ್ಮದ ತುಡಿತ.
ಪ್ರಗತಿಯ ಮಿಡಿತ.
ವಿದ್ಯೆಯ ಹಂಬಲ.
ವಿನಯದ ಬೆಂಬಲ.
ಸೌಜನ್ಯದ ಗಣಿ.
ಔದಾರ್ಯದ ಧಣಿ.
ವಿನಯದ ಮೂರ್ತಿ.
ಸಾಧನೆಯ ಕೀರ್ತಿ.
ದೇಶಭಕ್ತಿಯ ಸೆಲೆ.
ವಿಶ್ವಪ್ರೇಮದ ನೆಲೆ.
ಗುರುವಿನ ಬಲ.
ಗುರಿಯೆಡೆಗೆ ಛಲ.
ವಿಜ್ಞಾನ ಬೆಂಗಾವಲು.
ವಿವೇಕ ಕಣ್ಗಾವಲು.
ಸ್ವಜೀವನ ಸ್ವೀಕೃತ.
ಸಮಾಜ ಸೇವೆಯಲ್ಲಿ ವ್ಯಾಪೃತ.

ಮುಸ್ಲಿಂ - ರವಿ ಬೆಳೆಗೆರೆ - ಧರ್ಮ

'' ಮುಸ್ಲಿಂ'' ಬಹುದಿನದಿಂದ ಕೇಳುತ್ತಿದ್ದ ಹೆಸರು. 'ರವಿ ಬೆಳಗೆರೆ' ಬರೆದಿದ್ದಾರೆ ಅಂತ ಕೇಳಿದ್ದೆ. ಅಲ್ಲಿ ಇಲ್ಲಿ ಚೂರು ಪಾರು ವಿಮರ್ಶೆಯನ್ನೂ ಕೇಳಿದ ನೆನಪಿನ ತುಣುಕು.

ಗುರುಕುಲದ ಗ್ರಂಥಧಾಮದಲ್ಲಿ ಇಣುಕುತ್ತಿದ್ದಾಗ ಪುಸ್ತಕ ಕಣ್ಣಿಗೆ ಬಿತ್ತು. ಓದಲೇಬೇಕೆಂದು ಮನಸ್ಸು ಮಾಡಿ ಓದತೊಡಗಿದೆ.

ನಮಗೆ ಗೊತ್ತಿರದ- ಗೊತ್ತಿರಲೇಬೇಕಾದ ಮಾಹಿತಿಗಳ ಮಹಾಪೂರ. ಇಂತದ್ದೊಂದು ಕ್ರೂರ ಜಗತ್ತು ಹೊರಗಿದೆ ಅನ್ನೋದೇ ಗೊತ್ತಿರಲಿಲ್ಲ.

ಮೊನ್ನೆ ಬಾಳಠಾಕ್ರೆಯವರ ಹೇಳಿಕೆಯೊಂದು ವಿವಾದದ ರೂಪ ತಾಳಿತ್ತು- 'ಹಿಂದೂ ಆತ್ಮಹತ್ಯಾದಳಗಳು ಬೇಕು' ಅಂತ.
" ಮುಸ್ಲಿಂ" ಓದಿದಾಗ, ಭಾರತದ ಮುಸ್ಲಿಮರು 'ಜೆಹಾದ್'ನ ಕೈಯಲ್ಲಿ ಸಿಕ್ಕರೆ; ಮುಂದೊಂದು ದಿನ ಠಾಕ್ರೆ ಹೇಳಿದಂತೆ ಮಾಡಬೇಕೇನೋ ಅನ್ನಿಸುತ್ತದೆ.

ಕ್ರಿಶ್ಚಿಯನ್ನರ 'ಮತಾಂತರ'-ಮುಸ್ಲಿಂರ 'ಜೆಹಾದ್'ಗಳು ಧರ್ಮ ಎನ್ನುವ ಹೆಸರಿನಡಿಯಲ್ಲಿಯೇ ಬಂದು ಬಂದು ನಾವಿವತ್ತು ಸನಾತನ ಧರ್ಮವನ್ನೂ ಸಂಶಯದಿಂದ ನೋಡುವಂತಾಗಿದೆ.

ನಾವೆಲ್ಲ ಧಾರ್ಮಿಕರೆನಿಸಿಕೊಂಡವರು ಏನು ಹೇಳಿದರೂ ಅದರಲ್ಲಿ 'ಮತಾಂತರ-ಜೆಹಾದ್'ನ ಕ್ರೌರ್ಯದ ಅಂಶಗಳನ್ನು ಜಗತ್ತು ಹುಡುಕತೊಡಗುತ್ತದೆ.

ಹಿಂದೂಧರ್ಮದ ಪ್ರಚಾರಕರೂ-ಪ್ರತಿಪಾದಕರೂ ಕೆಲವು ಬಾರಿ ಆಡುವ ಮಾತುಗಳು, ತೋರುವ ವರ್ತನೆಗಳು, ಅಭಿಮಾನವಿದ್ದರೂ ಅರಿವಿಲ್ಲದಿರುವುದರಿಂದ ಹಾಗಿರುವುದೂ ಸುಳ್ಳಲ್ಲ.

ಜಗತ್ತಿನ ಒಳಿತೊಂದನ್ನೇ ಹಾರೈಸುವ ಸನಾತನ ಧರ್ಮವನ್ನು ಇಂತಹ ಸಂದರ್ಭದಲ್ಲಿ ಮೂಲದ ಆಶಯದೊಂದಿಗೆ ಜಗದ ಮುಂದಿಡುವುದು ಹೇಗೇನೋ?

ಏನೇ ಇರಲಿ, ' ಮುಸ್ಲಿಂ' ಎಲ್ಲರೂ ಓದಬೇಕಾದ ಹೊತ್ತಗೆ.

Tuesday 24 June, 2008

ಪದ್ಮಪ್ರಿಯಾ ಸತ್ತರು.... ಮಕ್ಕಳೊಂದಿಗೆ ರಘುಪತಿ ಭಟ್ಟರು ಸಾಯುತ್ತಿದ್ದಾರೆ...ಕೊಲೆಗಾರರು ಯಾರು?

ಕರ್ನಾಟಕದಲ್ಲೀಗ ಪದ್ಮಪ್ರಿಯಾರ ಪ್ರಕರಣ ಚರ್ಚೆಯಲ್ಲಿದೆ. ಉಡುಪಿಯ ಶಾಸಕ ರಘುಪತಿ ಭಟ್ಟರು. ಅವರ ಪತ್ನಿ ಪದ್ಮ ಪ್ರಿಯಾ. ಒಂದುದಿನ ಇದ್ದಕ್ಕಿದ್ದಂತೆ ಪದ್ಮಪ್ರಿಯಾ ನಾಪತ್ತೆಯಾಗುತ್ತಾರೆ. ಕಾರು ನಕ್ಸಲ್ ಪೀಡಿತ ಪ್ರದೇಶದ ಬಳಿ ದೊರೆಯುತ್ತದೆ. ಆಡಳಿತ ಪಕ್ಷದ ಶಾಸಕರ ಪತ್ನಿ ಎಂದಾದ ಮೇಲೆ ಪೋಲೀಸರು ವಿಶೇಷ ಆಸ್ಥೆವಹಿಸುತ್ತಾರೆ. ಸ್ವತಃ ಗೃಹ ಸಚಿವರ ಕ್ಷೇತ್ರ ಬೇರೆ ಅದೇ ಆಗಿರುತ್ತದೆ. ಭಟ್ಟರು ಆಚಾರ್ಯರಿಗೆ ಆತ್ಮೀಯರು.

"ಆಳುವವರೇನು ಮೇಲಿನಿಂದ ಇಳಿದುಬಂದವರೇ? ಅವರೂ ನಮ್ಮಂತೆಯೇ ಮನುಷ್ಯರು." ಎಂದು ಮೇಲಿಂದ ಮೇಲೆ ಮಾತನಾಡುವ ಮಾಧ್ಯಮ ಅಲರ್ಟ್ ಆಗಿಬಿಡುತ್ತದೆ, ತುಸು ಹೆಚ್ಚೇ ಎನಿಸುವಷ್ಟು. ಒಬ್ಬ ಸಾಮಾನ್ಯ ಪ್ರಜೆಯ ಹೆಂಡತಿ ಕಾಣೆಯಾಗಿದ್ದರೆ ಇಷ್ಟೊಂದು ಪ್ರಾಮುಖ್ಯ ಕೊಡದ ಮಾಧ್ಯಮ ಸುದ್ದಿಯಾಗಿ ಬಳಸಿಕೊಳ್ಳುತ್ತದೆ ಪ್ರಕರಣವನ್ನು.

ಪ್ರಕರಣ ನಾಡಿನ ಮನೆಮಾತಾಗುತ್ತದೆ. "ಪದ್ಮ ಪ್ರಿಯಾ ತಮ್ಮ ಪ್ರೇಮಿ ಅತುಲ್ ಅವರೊಂದಿಗೆ ಓಡಿಹೋಗಿದ್ದಾರೆ." ಎಂಬರ್ಥದ ಮಾತು ಕತೆಗಳನ್ನು ಕೆಲವರು ಆಡತೊಡಗುತ್ತಾರೆ. "ರಘುಪತಿ ಭಟ್ಟರು ಸ್ವಲ್ಪವೂ ,ಸರಿಯಿರಲಿಲ್ಲ ಅದೇ ಇಷ್ಟಕ್ಕೆಲ್ಲ ಕಾರಣ" ಎನ್ನತೊಡಗುತ್ತಾರೆ ಇನ್ನು ಕೆಲವರು. ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮದವರು ಮತ್ತು ಜನಸಾಮಾನ್ಯರು ಈ ಮೂವರಲ್ಲೂ ಈ ಮಾತುಗಳು ಚಾಲನೆಗೊಳ್ಳುತ್ತವೆ.

ಇದಿಷ್ಟು ಪ್ರಕರಣ.

ಪ್ರಕರಣದ ಕುರಿತು ನನ್ನ ಚಿಂತನೆ ಇದು-

ನಮಗಿದು ಸಹಜ. ನಾವು ಯಾರ ಬಗ್ಗೆಯೂ ನಮಗನ್ನಿಸಿದಂತೆ ಮಾತನಾಡುವ ಹಕ್ಕನ್ನು ಹುಟ್ಟುತ್ತಲೇ ಪಡೆದು ಬಂದಂತೆ ವರ್ತಿಸುತ್ತೇವೆ.

ಮೊದಲ ಚಿಂತನೆ-
ಬೇರೆಯವರ ಬಗ್ಗೆ ನಾವು ಮಾತನಾಡಬೇಕೇಕೆ? ಅದು ನಾಲಿಗೆಯ ಚಾಪಲ್ಯ ತಾನೆ? ನಾವು ಅವರಿಗೆ ಜವಾಬ್ದಾರರಾದರೆ ಮಾತನಾಡುವುದು ಸರಿ. ಅದೂ ಅವರ ಬಳಿ ಅಥವಾ ಅವರನ್ನು ಸರಿಪಡಿಸಲು ಸಾಧ್ಯವಾಗುವ ಇನ್ನಾರಾದರು ಯೋಗ್ಯರ ಬಳಿ.

ದ್ವಿತೀಯ ಚಿಂತನೆ- ಪ್ರತಿವ್ಯಕ್ತಿಯು ಒಳಿತು-ಕೆಡುಕಿನ ಸಂಗಮ. ಗುಣ-ದೋಷಗಳು, ಸಾಮರ್ಥ್ಯ-ದೌರ್ಬಲ್ಯಗಳು ಎಲ್ಲರಲ್ಲು ಇರುತ್ತವೆ. ಯಾರೂ ಇದಕ್ಕೆ ಹೊರತಲ್ಲ. ಅತ್ಯಂತ ಉನ್ನತ ವ್ಯಕ್ತಿಗಳಿಂದ ಸಾಮಾನ್ಯನವರೆಗೂ ಇದು ಹೀಗೆಯೇ. ಒಬ್ಬನಲ್ಲಿರುವ ಗುಣ ಇನ್ನೊಬ್ಬನಲ್ಲಿ ಇರಲಾರದು; ಒಬ್ಬನಲ್ಲಿರುವ ದೋಷ ಇನ್ನೊಬ್ಬನದಾಗಿರಲಾರದು. ಸ್ವತಃ ನಾವೇ ಪರಿಪೂರ್ಣರಲ್ಲದಿರುವಾಗ ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಅಸಮಂಜಸ (ಯಾರನ್ನಾದರೂ ತಿದ್ದುವ ವಿಷಯ ಹೊರತು ಪಡಿಸಿ. ಅದರ ವಿಧಾನ ಪ್ರಥಮ ಚಿಂತನದಲ್ಲಿದೆ.

ತೃತೀಯ ಚಿಂತನೆ-
ಬೇರೆಯವರನ್ನು ವಿಮರ್ಶಿಸುವ ನಾವು ನಮ್ಮ ಕುರಿತಾದ ವಿಮರ್ಶೆಯನ್ನೂ ಹಾಗೆಯೇ ಸ್ವೀಕರಿಸುತ್ತೀವಾ? ನಾವಾಡುವ ಮಾತು ಅಭಿವ್ಯಕ್ತಿ ಸ್ವಾತಂತ್ರ್ಯ. ಅದರ ಕುರಿತು ಬೇರೆಯವರು ಆಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯಹರಣ. ಇದು ಆಧುನಿಕ ಸಿದ್ಧಾಂತವಾಗಿಬಿಟ್ಟಿದೆ.

ಚತುರ್ಥ ಚಿಂತನೆ-
ಇದಿಷ್ಟು ನಮ್ಮರಿವಿಗೆ ಬಂದ ವಿಷಯಗಳ ಮೇಲಿನ ಮಾತಾಯಿತು. ನಾವು ಹೆಚ್ಚಾಗಿ ಮಾತನಾಡುವುದು ನಮಗೆ ಪ್ರತ್ಯಕ್ಷವಾಗಿ ಗೊತ್ತಿಲ್ಲದ, ಯಾರೋ ಹೇಳಿದ ಮಾತನ್ನು ಆದರಿಸಿದ್ದು. ಎಷ್ಟೋಬಾರಿ ನಮಗೆ ಹೇಳಿದವರಿಗೂ ಬೇರೆಯವರು ಹೇಳಿದ್ದೇ ಆಗಿರುತ್ತದೆ.
ಹೆಚ್ಚಾಗಿ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಮಾತುಗಳು ಹೀಗೆಯೇ ಆಗಿರುತ್ತದೆ. ಯಾವುದೇ ಹುಡುಗಿಯ ಜಾತಕ ಬಂದರೂ, ಯಾರಾದರೂ ಒಬ್ಬರು "ಅವಳು ಸರಿಯಿಲ್ಲ" ಎನ್ನುತ್ತಾರೆ. "ಅವಳು ಅವನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ" ಎನ್ನುತ್ತಾರೆ. ನಾವದನ್ನು ನಮ್ಮ ಬದುಕಿನ ಧ್ಯೇಯವೆಂದೇ ಸ್ವೀಕರಿಸುತ್ತೇವೆ. ಆ ಹುಡುಗಿಯ ಹೆಸರು ಬಂದಾಗಲೆಲ್ಲ ಅದನ್ನೂ ಪ್ರಚಾರ ಮಾಡಲಾರಂಭಿಸುತ್ತೇವೆ.
ಹಾಗೆಯೇ ಯಾರಾದರೂ ಗಂಡಸಿನ ಕುರಿತು "ಅವನು ವುಮನೈಜರ್" ಎನ್ನತೊಡುಗುತ್ತೇವೆ.ಅದಕ್ಕೆ ಸಾಕ್ಷಿ? ನಮ್ಮ ಕಣ್ಣಂತೂ ಅಲ್ಲ, ಬೇರೆಯವರ ನಾಲಗೆ. ಅವರಿಗೆ ಸಾಕ್ಷಿ? ಅವರ ಕಿವಿ, ಅದರಲ್ಲಿ ಸುತ್ತುಹಾಕುತ್ತಿರುವ ಇನ್ನಾರದೋ ನಾಲಗೆ. ವಾಸ್ತವವಾಗಿ ಯಾರೂ ಯಾರ ಸಂಬಂಧವನ್ನೂ ಕಂಡಿರುವುದಿಲ್ಲ. ಬರೀ ಅನುಮಾನ ಮಾತ್ರ. ಹುಡುಗಿಯರೊಂದಿಗೆ ಮಾತನಾಡಿದ್ದನ್ನು ನೋಡಿರುತ್ತೇವೆ; ಹೋಟ್ಳಲ್ಲೋ, ಮದುವೆ ಮನೆಯಲ್ಲೋ, ಪೇಟೆಯಲ್ಲೋ ಒಟ್ಟಿಗೆ ನಿಂತಿದ್ದನ್ನು ಕಂಡಿರುತ್ತೇವೆ. ಕಾಣದಿರುವುದೆಲ್ಲ ನಮ್ಮ ಕವಿತ್ವದ ಸಾಮರ್ಥ್ಯ ಅಷ್ಟೇ.

ಇತ್ತೀಚೆಗೆ ನನಗೆ ಗೊತ್ತಾದ ಒಂದು ಘಟನೆ. ಒಬ್ಬರ ಬಗ್ಗೆ ಅವರ ಹತ್ತಿರದವರು ನೈತಿಕತೆಯ ಕುರಿತು ಅವರ ಹತ್ತಿರದ ಇನ್ನೂ ಕೆಲವರಲ್ಲಿ ಮಾತನಾಡುತ್ತಾರೆ. ಅವರು ಬೇರೆಯವರಲ್ಲಿ ಹೇಳುತ್ತಾರೆ. ಅವರು ಮತ್ತೊಬ್ಬರಲ್ಲಿ.........
ವಾಸ್ತವವೆಂದರೆ ಇಡೀ ಪ್ರಕರಣದದಲ್ಲಿ ಮಾತನಾಡಿದ್ದು ಕಿವಿಯೇ ಹೊರತು ಕಣ್ಣಲ್ಲ.

ಹೀಗೆ ತನ್ನದೇ ವೃತ್ತದಲ್ಲಿ ತನ್ನ ಬಗ್ಗೆ ಇಂತಹ ಮಾತುಗಳು ಪ್ರಸಾರಗೊಳ್ಳತೊಡಗಿದರೆ - ಅದು ಆ ವ್ಯಕ್ತಿಗೆ ಗೊತ್ತಾದರೆ, ಅವರಿಗೆಷ್ಟು "ಶಾಕ್" ಆಗಬಹುದು? ಅವರಿಗೆ ಜೀವನದಲ್ಲಿ ಲವಲವಿಕೆ ಎಷ್ಟು ಉಳಿಯಬಹುದು? ತನ್ನ ವೃತ್ತದ ವ್ಯಕ್ತಿಗಳ ಕುರಿತು ಅವರಲ್ಲಿ ಎಂತಹ ಭಾವನೆ ರೂಪುಗೊಳ್ಳಬಹುದು? ಯಾಕೆಂದರೆ ದೋಷ - ದೌರ್ಬಲ್ಯಗಳನ್ನು ಪ್ರಸಾರ ಮಾಡದಿರುವವರಿಗೆ ತಾನೇ ಆತ್ಮೀಯರೆನ್ನುವುದು? ಹಾಗಿರುವಾಗ ಸುಳ್ಳು ಸುದ್ದಿಗೆ ಕೈ ಕಾಲು ಜೋಡಿಸುವವರಿಗೆ ಆತ್ಮೀಯರೆನ್ನಲಾದೀತೇ?ಅವರೊಂದಿಗೆ ಮುಂದೆ ಬದುಕಲಾದೀತೇ?

ಮತ್ತೆ "ಪದ್ಮಪ್ರಿಯಾ" ಪ್ರಕರಣಕ್ಕೆ ಬಂದರೆ-
ಪದ್ಮಪ್ರಿಯಾ ಪತಿಯೊಂದಿಗೆ ಬದುಕಲಾರದ ಹಂತಕ್ಕೆ ಬಂದಿದ್ದರೆ ಅದಕ್ಕೆ ಅವರ ಕಾಮತೃಷೆಯೇ ಕಾರಣವಾಗಬೇಕೇ? ಗಂಡ - ಹೆಂಡಿರ ನಡುವೆ ಇರುವುದು ಕಾಮವೊಂದೆಯೇ? ಭಾವನಾತ್ಮಕವಾಗಿ ತುಂಬಬೇಕಾದ್ದನ್ನು ಭಟ್ಟರು ಒಂದೊಮ್ಮೆ ತುಂಬಿಕೊಡದಿದ್ದರೆ, ಆಗ ಬದುಕು ಅಸಹನೀಯವೆನಿಸಿರಬಹುದು. ತುಂಬಿಕೊಡುವ ಸ್ವಭಾವ ಅತುಲ್ ರಾವ್ ರಲ್ಲಿ ಕಂಡಿರಬಹುದು. ಇದನ್ನು ನೈತಿಕ ಅಧಃಪತನ ಎನ್ನುವಂತಿಲ್ಲ. { ಭಾರತೀಯ ಸಂಸ್ಕೃತಿಯ ನೇರದಲ್ಲಿ ಇದು ಸರಿಯೇ? ಎನ್ನುವುದು ಬೇರೆ ಚರ್ಚೆಯ ವಿಷಯ.} ಹಾಗಾಗಿ "ಅತುಲ್ ರೊಂದಿಗೆ ಸಂಬಂಧವಿತ್ತು" ಎನ್ನುವ ಕೊಳಕು ಮಾತನ್ನು ಆಡುವಂತಿಲ್ಲ.
ಪದ್ಮಪ್ರಿಯಾ ಸತ್ತರು. ಅದಕ್ಕೆ ರಘುಪತಿಭಟ್ಟರ "ಕಚ್ಚೆ ಹರುಕುತನ" ಕಾರಣ ಅಂತ ಸಾರಾಸಗಾಟಾಗಿ ಉದ್ಘೋಷಿಸಲು ಹೇಗೆ ಸಾಧ್ಯ? ನಮ್ಮೂರ ಭಾಷೆಯಲ್ಲಿ ಹೇಳುವುದಾದರೆ - ಮಾತನಾಡುವವರು "ಬ್ಯಾಟರಿ" ಬಿಟ್ಟಿದ್ದರೇ?
ಅವರ ದಾಂಪತ್ಯ ವಿರಸಕ್ಕೆ ಸಾವಿರ ಕಾರಣಗಳಿರಬಹುದು. ಅದು ಭಟ್ಟರದ್ದೂ ಆಗಿರಬಹುದು; ಪದ್ಮಪ್ರಿಯಾರದ್ದು ಆಗಿರಬಹುದು; ಇಬ್ಬರದ್ದೂ ಆಗಿರಬಹುದು; ಇಬ್ಬರದ್ದೂ ಅಲ್ಲದಿರಬಹುದು. ಮಾತನಾಡುತ್ತಿರುವ ಎಲ್ಲರ ಮುಂದೆ ಭಟ್ಟರು ಮತ್ತು ಪದ್ಮಪ್ರಿಯಾರ ಹುಟ್ಟಿದಂದಿನಿಂದ ಇಂದಿವರೆಗಿನ ಪ್ರತಿಕ್ಷಣದ ಘಟನೆಗಳು ರಜತಪರದೆಯಲ್ಲಿ ಬಿತ್ತರಗೊಂಡಿದೆಯೇ? ಹಾಗಿಲ್ಲದಿದ್ದ ಮೇಲೆ ಯಾರದೋ ಮಾತುಗಳನ್ನು ಕೇಳಿ "ಭಟ್ಟರು ಸರಿಯಿರಲಿಲ್ಲ, ಅದಕ್ಕೆ ಹೀಗಾಯಿತು" ಎನ್ನುವುದು ಹೇಗೆ ಸರಿ?

"ಪದ್ಮಪ್ರಿಯಾ ತಾವೇ ಸತ್ತರು.
ಭಟ್ಟರನ್ನು ನಾವು ಸಾಯಿಸುತ್ತಿದ್ದೇವೆ.
ಅಷ್ಟೇ ಅಲ್ಲ, ತಮ್ಮ ಹೆತ್ತವರ ಬಗ್ಗೆ ಹೀನಾತಿಹೀನ ಮಾತುಗಳನ್ನು ಕೇಳುತ್ತಿರುವ ಅವರ ಇಬ್ಬರು ಮಕ್ಕಳನ್ನು ಚಿತ್ರಹಿಂಸೆ ಕೊಟ್ಟು ಕೊಟ್ಟು ಸಾಯಿಸುತ್ತಿದ್ದೇವೆ"
ಅಂತ ಅನ್ನಿಸುವುದಿಲ್ಲವೇ?






Monday 23 June, 2008

ಓದಲೊಂದು ಪುಸ್ತಕ

ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಸಾಹಿತಿಗಳ ಸ್ಮೃತಿ" ಓದುತ್ತಿದ್ದೆ. ಚೇತೋಹಾರಿ ಅನುಭವ. ಓದಹೊರಡುವ ಮುನ್ನ ಇಂತದ್ದೊಂದು ಮಧುರಾನುಭವದ ನಿರೀಕ್ಷೆಯೇ ಇರಲಿಲ್ಲ
ಕಿಡ್ನಿಸ್ಟೋನಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಸೇರಿದ ಸಂಧರ್ಭ. ಹೊತ್ತುಕಳೆಯಲು ಹೊತ್ತಿಗೆ ಬೇಕೆನಿಸಿದಾಗ ಡಾ.ಚಿತ್ರಲೇಖ ತಂದುಕೊಟ್ಟ ಪುಸ್ತಕಗಳಲ್ಲಿ ಒಂದು ಪುಸ್ತಕ ಗಮನ ಸೆಳೆಯಿತು. ಅದು ಬೆಳೆಗೆರೆ ಕೃಷ್ಣಶಾಸ್ತ್ರಿಗಳ "ಯೇಗ್ದಾಗೆಲ್ಲಾ ಐತೆ" ಗ್ರಂಥ ಅಲ್ಲಲ್ಲಿ ಶಾಸ್ತ್ರಿಗಳ ಹೆಸರು ಕೇಳಿದ್ದನೆ ಹೊರತು ಅವರನ್ನು ಓದಿರಲಿಲ್ಲ. ಸರಿ, ನೋಡೋಣ ಎಂದು ಕೊಂಡು ಓದತೊಡಗಿದೆ.
ಚಿಕಿತ್ಸೆ ಮುಗಿಯಿತು, ವಿಚಿಕಿತ್ಸೆ ಹಾಗೇ ಉಳಿಯಿತು. ಶಾಸ್ತ್ರಿಗಳು ಮನದಲ್ಲಿ ಪ್ರಶ್ನೆಯಾಗಿಯೇ ಉಳಿದರು.

ಗುರುಕುಲದ ಗ್ರಂಥಧಾಮಕ್ಕೆ ಹೊಸರೂಪ ಕೊಡುವ ಪ್ರಯತ್ನದಲ್ಲಿದ್ದಾಗ "ಸಾಹಿತಿಗಳ ಸ್ಮೃತಿ" ಗಮನ ಸೆಳೆಯಿತು. ಓದು ಸಾಗಿತು..................

ಮಾಸ್ತಿ - ಡಿ.ವಿ.ಜಿ - ಬೇಂದ್ರೆ - ರಾಜರತ್ನಂ - ವಿ.ಸಿ. - ದೇವುಡು ಹೀಗೆ ಆ ಕಾಲದ ಸಾಹಿತಿಗಳ ಸಂಗದ ಸವಿನೆನಪು ಪುಸ್ತಕದಲ್ಲಿ ಬಿತ್ತರಗೊಂಡಿದೆ. ಪುಸ್ತಕ ಕಿರಿದು. ಒಳಗೂ ಅಷ್ಟೇ. ದೀರ್ಘ ಲೇಖನಗಳಿಲ್ಲ, ಒಂದೂವರೆಯಿಂದ ಎರಡೂವರೆ ಪುಟದ ಪುಟ್ಟಲೇಖನದ ಗುಚ್ಛ. ಶೈಲಿಯೂ ಹಾಗೆಯೇ. ಅನುಭವಿಸಿದ್ದನ್ನು ನೇರವಾಗಿ ಹೇಳಿದ್ದು.

ಆ ಮಹನೀಯರುಗಳ ಸರಳ, ಆದರೆ ಉದಾತ್ತ ಜೀವನವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ ಈ ಗ್ರಂಥ. ಅವರ ಜೀವನದ ಸಣ್ಣ ಸಣ್ಣ ಘಟನೆಗಳು ಬದುಕಿಗೆ ದೊಡ್ಡ ಪಾಠ ನೀಡುತ್ತವೆ.

ಬೇಂದ್ರೆ ಆಡುವ ಈ ಮಾತೊಂದು ಸಾಕು, ಪುಸ್ತಕದ ಉಪಯುಕ್ತತೆಯನ್ನರುಹಲು-
"ಸುಖ ಅಂದರೆ ಹಿತ. ಅದು ನಮ್ಗು ಹಿತ, ಪಕ್ಕದಲ್ಲಿದ್ದವರಿಗೂ ಹಿತ, ಸರ್ವರಿಗೂ ಹಿತ ಆದಾಗ ಸುಖ ಆಗ್ತದ".
ಓದ್ತೀರಲ್ಲಾ ಗೆಳೆಯರೇ!